031 ದ್ರೌಪದೀಪರಿತಾಪವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 31

ಸಾರ

ಯುಧಿಷ್ಠಿರನು ತನ್ನ ಪಿತೃಪಿತಾಮಹರ ಕ್ಷತ್ರಿಯ ಧರ್ಮವನ್ನು ಪಾಲಿಸುತ್ತಿಲ್ಲವೆಂದೂ, ಧರ್ಮವು ಅವನನ್ನು ರಕ್ಷಿಸುವುದಿಲ್ಲವೆಂದೂ ದ್ರೌಪದಿಯು ಹೇಳುವುದು (1-19). ಲೋಕವು ವ್ಯಕ್ತಿಯಲ್ಲ ಈಶ್ವರನ ವಶದಲ್ಲಿದೆ ಎಂದು ನಿದರ್ಶನಗಳನ್ನಿತ್ತು ಪ್ರತಿಪಾದಿಸುವುದು (20-40). “ಕರ್ಮವು ಅದನ್ನು ಎಸಗಿದ ಕರ್ತಾರನಲ್ಲದೇ ಬೇರೆ ಯಾರನ್ನೂ ಕಾಡಿಸುವುದಿಲ್ಲ ಎಂದಾಗ ಅಂಥಹ ಕರ್ಮಗಳ ಪಾಪವು ಈಶ್ವರನಿಗೆ ತಾಗಬೇಕು ತಾನೇ?” ಎಂದು ಪ್ರಶ್ನಿಸುವುದು (41-42).

03031001 ದ್ರೌಪದ್ಯುವಾಚ।
03031001a ನಮೋ ಧಾತ್ರೇ ವಿಧಾತ್ರೇ ಚ ಯೌ ಮೋಹಂ ಚಕ್ರತುಸ್ತವ।
03031001c ಪಿತೃಪೈತಾಮಹೇ ವೃತ್ತೇ ವೋಢವ್ಯೇ ತೇಽನ್ಯಥಾ ಮತಿಃ।।

ದ್ರೌಪದಿಯು ಹೇಳಿದಳು: “ನಿನ್ನ ತಂದೆ ಪಿತಾಮಹರಂತೆ ನಡೆದುಕೊಳ್ಳಬೇಕಾಗಿರುವ ನೀನು ಬೇರೆಯೇ ರೀತಿಯಲ್ಲಿ ಯೋಚಿಸುತ್ತಿರುವೆ. ನಿನ್ನಲ್ಲಿ ಈ ಗೊಂದಲವನ್ನುಂಟುಮಾಡಿರುವ ಧಾತ್ರ ವಿಧಾತ್ರರಿಗೆ ವಂದನೆಗಳು!

03031002a ನೇಹ ಧರ್ಮಾನೃಶಂಸ್ಯಾಭ್ಯಾಂ ನ ಕ್ಷಾಂತ್ಯಾ ನಾರ್ಜವೇನ ಚ।
03031002c ಪುರುಷಃ ಶ್ರಿಯಮಾಪ್ನೋತಿ ನ ಘೃಣಿತ್ವೇನ ಕರ್ಹಿ ಚಿತ್।।
03031003a ತ್ವಾಂ ಚೇದ್ವ್ಯಸನಮಭ್ಯಾಗಾದಿದಂ ಭಾರತ ದುಃಸ್ಸಹಂ।
03031003c ಯತ್ತ್ವಂ ನಾರ್ಹಸಿ ನಾಪೀಮೇ ಭ್ರಾತರಸ್ತೇ ಮಹೌಜಸಃ।।

ಧರ್ಮ, ಮೃದುತ್ವ, ಕ್ಷಮೆ, ದಿಟ್ಟತನ, ಮತ್ತು ಕೋಮಲತೆಗಳಿಂದ ಯಾವ ಪುರುಷನೂ ಶ್ರೇಯಸ್ಸನ್ನು ಹೊಂದುವುದಿಲ್ಲ. ಭಾರತ! ಇಂದು ನಿನಗೆ ಬಂದೊದಗಿರುವ ಕಷ್ಟಕ್ಕೆ ನೀನೂ ಅರ್ಹನಲ್ಲ ಮತ್ತು ನಿನ್ನ ಈ ಮಹೌಜಸ ತಮ್ಮಂದಿರೂ ಅರ್ಹರಲ್ಲ.

03031004a ನ ಹಿ ತೇಽಧ್ಯಗಮಜ್ಜಾತು ತದಾನೀಂ ನಾದ್ಯ ಭಾರತ।
03031004c ಧರ್ಮಾತ್ ಪ್ರಿಯತರಂ ಕಿಂ ಚಿದಪಿ ಚೇಜ್ಜೀವಿತಾದಿಹ।।
03031005a ಧರ್ಮಾರ್ಥಮೇವ ತೇ ರಾಜ್ಯಂ ಧರ್ಮಾರ್ಥಂ ಜೀವಿತಂ ಚ ತೇ।
03031005c ಬ್ರಾಹ್ಮಣಾ ಗುರವಶ್ಚೈವ ಜಾನಂತ್ಯಪಿ ಚ ದೇವತಾಃ।।

ಭಾರತ! ಇಂದು ಅವರಿಗೆ ತಿಳಿದಿದೆ - ನಿನಗೆ ಧರ್ಮಕ್ಕಿಂತಲೂ ಹೆಚ್ಚಿಗೆ ಪ್ರಿಯವಾದದ್ದು ಏನೂ ಇಲ್ಲ - ಜೀವವೂ ಅಷ್ಟೊಂದು ಪ್ರಿಯವಲ್ಲ! ನಿನ್ನ ರಾಜ್ಯವೂ ಧರ್ಮಕ್ಕಾಗಿಯೇ, ಜೀವಿತವೂ ಧರ್ಮಕ್ಕಾಗಿಯೇ ಎನ್ನುವುದನ್ನು ಬ್ರಾಹ್ಮಣರೂ, ಹಿರಿಯರೂ, ದೇವತೆಗಳೂ ತಿಳಿದಿದ್ದಾರೆ.

03031006a ಭೀಮಸೇನಾರ್ಜುನೌ ಚೈವ ಮಾದ್ರೇಯೌ ಚ ಮಯಾ ಸಹ।
03031006c ತ್ಯಜೇಸ್ತ್ವಮಿತಿ ಮೇ ಬುದ್ಧಿರ್ನ ತು ಧರ್ಮಂ ಪರಿತ್ಯಜೇಃ।।

ಧರ್ಮವನ್ನು ಪರಿತ್ಯಜಿಸುವ ಮೊದಲು ನೀನು ಭೀಮಾರ್ಜುನರನ್ನೂ, ಮಾದ್ರೇಯರನ್ನೂ ಮತ್ತು ನನ್ನನ್ನೂ ಸಹ ತೊರೆಯುತ್ತೀಯೆ ಎಂದು ನನಗನ್ನಿಸುತ್ತದೆ.

03031007a ರಾಜಾನಂ ಧರ್ಮಗೋಪ್ತಾರಂ ಧರ್ಮೋ ರಕ್ಷತಿ ರಕ್ಷಿತಃ।
03031007c ಇತಿ ಮೇ ಶ್ರುತಮಾರ್ಯಾಣಾಂ ತ್ವಾಂ ತು ಮನ್ಯೇ ನ ರಕ್ಷತಿ।।

ಧರ್ಮವನ್ನು ಪರಿಪಾಲಿಸಿ ರಕ್ಷಿಸುವ ರಾಜರನ್ನು ಧರ್ಮವೇ ರಕ್ಷಿಸುತ್ತದೆ ಎಂದು ಆರ್ಯರಿಂದ ಕೇಳಿದ್ದೇನೆ. ಆದರೆ ಅದು ನಿನ್ನನು ರಕ್ಷಿಸುವುದಿಲ್ಲ ಎಂದು ನನ್ನ ಅಭಿಪ್ರಾಯ.

03031008a ಅನನ್ಯಾ ಹಿ ನರವ್ಯಾಘ್ರ ನಿತ್ಯದಾ ಧರ್ಮಮೇವ ತೇ।
03031008c ಬುದ್ಧಿಃ ಸತತಮನ್ವೇತಿ ಚಾಯೇವ ಪುರುಷಂ ನಿಜಾ।।

ನರವ್ಯಾಘ್ರ! ನೆರಳು ಹೇಗೆ ಪುರುಷನನ್ನು ಸತತವೂ ಅನುಸರಿಸುತ್ತಿರುತ್ತದೆಯೋ ಹಾಗೆ ನಿನ್ನ ಬುದ್ಧಿಯೂ ಕೂಡ ನಿತ್ಯವೂ ಆಚೆ ಈಚೆ ಹೋಗದೆ ಧರ್ಮವನ್ನೇ ಅನುಸರಿಸುತ್ತದೆ.

03031009a ನಾವಮಂಸ್ಥಾ ಹಿ ಸದೃಶಾನ್ನಾವರಾಂ ಶ್ರೇಯಸಃ ಕುತಃ।
03031009c ಅವಾಪ್ಯ ಪೃಥಿವೀಂ ಕೃತ್ಸ್ನಾಂ ನ ತೇ ಶೃಂಗಮವರ್ಧತ।।

ನಿನ್ನ ಸರಿಸಮರನ್ನು ಅಥವಾ ನಿನಗಿಂಥ ಕೀಳುಮಟ್ಟದಲ್ಲಿರುವವರನ್ನು, ಮತ್ತು ನಿನಗಿಂಥ ಒಳ್ಳೆಯರಾಗಿರುವವರನ್ನು ನೀನು ಎಂದೂ ಹೀಯಾಳಿಸಿಲ್ಲ. ಇಡೀ ಪೃಥ್ವಿಯನ್ನು ಪಡೆದ ಮೇಲೂ ನಿನ್ನ ತಲೆಯು ಬೆಳೆಯಲಿಲ್ಲ!

03031010a ಸ್ವಾಹಾಕಾರೈಃ ಸ್ವಧಾಭಿಶ್ಚ ಪೂಜಾಭಿರಪಿ ಚ ದ್ವಿಜಾನ್।
03031010c ದೈವತಾನಿ ಪಿತೄಂಶ್ಚೈವ ಸತತಂ ಪಾರ್ಥ ಸೇವಸೇ।।

ಪಾರ್ಥ! ಸ್ವಾಹಾಕಾರ ಮತ್ತು ಸ್ವಧರ್ಮದಿಂದ ನೀನು ದ್ವಿಜರನ್ನೂ, ದೇವತೆಗಳನ್ನೂ, ಮತ್ತು ಪಿತೃಗಳನ್ನೂ ಸತತವೂ ಪೂಜಿಸುತ್ತೀಯೆ ಮತ್ತು ಸೇವಿಸುತ್ತೀಯೆ.

03031011a ಬ್ರಾಹ್ಮಣಾಃ ಸರ್ವಕಾಮೈಸ್ತೇ ಸತತಂ ಪಾರ್ಥ ತರ್ಪಿತಾಃ।
03031011c ಯತಯೋ ಮೋಕ್ಷಿಣಶ್ಚೈವ ಗೃಹಸ್ಥಾಶ್ಚೈವ ಭಾರತ।।

ಭಾರತ! ಪಾರ್ಥ! ನೀನು ಸತತವೂ ಬ್ರಾಹ್ಮಣರ, ಯತಿಗಳ, ಮೋಕ್ಷಿಣಿಗಳ ಮತ್ತು ಗೃಹಸ್ಥರ ಎಲ್ಲ ಆಸೆಗಳನ್ನೂ ಪೂರೈಸುತ್ತೀಯೆ.

03031012a ಆರಣ್ಯಕೇಭ್ಯೋ ಲೌಹಾನಿ ಭಾಜನಾನಿ ಪ್ರಯಚ್ಚಸಿ।
03031012c ನಾದೇಯಂ ಬ್ರಾಹ್ಮಣೇಭ್ಯಸ್ತೇ ಗೃಹೇ ಕಿಂ ಚನ ವಿದ್ಯತೇ।।

ಆರಣ್ಯಕರಿಗೆ ನೀನು ಲೋಹದ ಪಾತ್ರೆಗಳನ್ನು ಕೊಡುತ್ತೀಯೆ. ಬ್ರಾಹ್ಮಣರಿಗೆ ಕೊಡಲಾಗದೇ ಇರುವಂಥಹುದು ಏನೂ ನಿನ್ನ ಮನೆಯಲ್ಲಿ ಇಲ್ಲ.

03031013a ಯದಿದಂ ವೈಶ್ವದೇವಾಂತೇ ಸಾಯಂಪ್ರಾತಃ ಪ್ರದೀಯತೇ।
03031013c ತದ್ದತ್ತ್ವಾತಿಥಿಭೃತ್ಯೇಭ್ಯೋ ರಾಜಂ ಶೇಷೇಣ ಜೀವಸಿ।।

ರಾಜನ್! ಪ್ರತಿ ಮುಂಜಾನೆ ಮತ್ತು ಸಾಯಂಕಾಲ ವೈಶ್ವದೇವವನ್ನು ಪೂರೈಸಿದ ನಂತರ ಮೊದಲು ಅತಿಥಿಗಳಿಗೆ ಮತ್ತು ಅವಲಂಬಿತರಿಗೆ ಊಟವನ್ನಿತ್ತು ಉಳಿದುದನ್ನು ನೀನು ಸೇವಿಸುತ್ತೀಯೆ.

03031014a ಇಷ್ಟಯಃ ಪಶುಬಂಧಾಶ್ಚ ಕಾಮ್ಯನೈಮಿತ್ತಿಕಾಶ್ಚ ಯೇ।
03031014c ವರ್ತಂತೇ ಪಾಕಯಜ್ಞಾಶ್ಚ ಯಜ್ಞಕರ್ಮ ಚ ನಿತ್ಯದಾ।।

ಇಷ್ಟಿಗಳು, ಪಶುಬಂಧಗಳು, ಕಾಮ್ಯನಿಮಿತ್ತಗಳು, ಪಾಕಯಜ್ಞಗಳು ಮತ್ತು ಯಜ್ಞಕರ್ಮಗಳು ನಿತ್ಯವೂ ನಡೆಯುತ್ತಲೇ ಬಂದಿವೆ.

03031015a ಅಸ್ಮಿನ್ನಪಿ ಮಹಾರಣ್ಯೇ ವಿಜನೇ ದಸ್ಯುಸೇವಿತೇ।
03031015c ರಾಷ್ಟ್ರಾದಪೇತ್ಯ ವಸತೋ ಧಾರ್ಮಸ್ತೇ ನಾವಸೀದತಿ।।

ರಾಷ್ಟ್ರದಿಂದ ಹೊರಹಾಕಲ್ಪಟ್ಟು ವಾಸಿಸುತ್ತಿರುವ ಈ ವಿಜನ, ದಸ್ಯುಗಳಿಂದ ಕೂಡಿರುವ ಮಹಾರಣ್ಯದಲ್ಲಿಯೂ ಕೂಡ ನಿನ್ನ ಧರ್ಮವು ತಪ್ಪದೇ ನಡೆಯುತ್ತಿದೆ.

03031016a ಅಶ್ವಮೇಧೋ ರಾಜಸೂಯಃ ಪುಂಡರೀಕೋಽಥ ಗೋಸವಃ।
03031016c ಏತೈರಪಿ ಮಹಾಯಜ್ಞೈರಿಷ್ಟಂ ತೇ ಭೂರಿದಕ್ಷಿಣೈಃ।।

ನೀನು ಅಶ್ವಮೇಧ1, ರಾಜಸೂಯ, ಪುಂಡರೀಕ ಮತ್ತು ಗೋಸವ2 ಇವೆಲ್ಲ ಮಹಾಯಜ್ಞಗಳನ್ನೂ ಇಷ್ಟಿಗಳನ್ನೂ ಭೂರಿದಕ್ಷಿಣೆಗಳನ್ನಿತ್ತು ನೆರವೇರಿಸಿದ್ದೀಯೆ.

03031017a ರಾಜನ್ಪರೀತಯಾ ಬುದ್ಧ್ಯಾ ವಿಷಮೇಽಕ್ಷಪರಾಜಯೇ।
03031017c ರಾಜ್ಯಂ ವಸೂನ್ಯಾಯುಧಾನಿ ಭ್ರಾತೄನ್ಮಾಂ ಚಾಸಿ ನಿರ್ಜಿತಃ।।

ರಾಜನ್! ಜೂಜಿನಲ್ಲಿ ವಿಷಮ ಸೋಲಿನಿಂದ ಪರಿತಪಿಸಿದ ಬುದ್ಧಿಯಿಂದ ನೀನು ರಾಜ್ಯ, ಸಂಪತ್ತು, ಆಯುಧಗಳು, ತಮ್ಮಂದಿರನ್ನು ಮತ್ತು ನನ್ನನ್ನೂ ಕೂಡ ಸೋತೆ.

03031018a ಋಜೋರ್ಮೃದೋರ್ವದಾನ್ಯಸ್ಯ ಹ್ರೀಮತಃ ಸತ್ಯವಾದಿನಃ।
03031018c ಕಥಮಕ್ಷವ್ಯಸನಜಾ ಬುದ್ಧಿರಾಪತಿತಾ ತವ।।

ಆಗ ನೀನು ಧಿಟ್ಟನಾಗಿದ್ದೆ. ಮೃದುವಾಗಿದ್ದೆ, ಕೊಡುವವನಾಗಿದ್ದೆ, ವಿನೀತನಾಗಿದ್ದೆ, ಮತ್ತು ಸತ್ಯವಾದಿಯಾಗಿದ್ದೆ. ಆದರೂ ಜೂಜಿನ ವ್ಯಸನದಿಂದ ನಿನ್ನ ಬುದ್ಧಿಯು ಹೇಗೆ ತಾನೇ ಕೆಳಗುರುಳಿತು?

03031019a ಅತೀವ ಮೋಹಮಾಯಾತಿ ಮನಶ್ಚ ಪರಿದೂಯತೇ।
03031019c ನಿಶಾಮ್ಯ ತೇ ದುಃಖಮಿದಮಿಮಾಂ ಚಾಪದಮೀದೃಶೀಂ।।

ನಿನ್ನ ಈ ದುಃಖವನ್ನು ಮತ್ತು ಇಂಥಹ ಆಪತ್ತನ್ನು ನೋಡಿ ನನ್ನ ಬುದ್ದಿಯು ತುಂಬಾ ಗೊಂದಲದಲ್ಲಿದೆ ಮತ್ತು ಮನಸ್ಸು ದುಃಖದಿಂದ ಸುಡುತ್ತಿದೆ.

03031020a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ।
03031020c ಈಶ್ವರಸ್ಯ ವಶೇ ಲೋಕಸ್ತಿಷ್ಠತೇ ನಾತ್ಮನೋ ಯಥಾ।।

ಲೋಕವು ಈಶ್ವರನ ವಶದಲ್ಲಿದೆ ವ್ಯಕ್ತಿಯಿಂದ ಅಲ್ಲ ಎನ್ನುವುದರ ಕುರಿತಾಗಿ ಈ ಪುರಾತನ ಇತಿಹಾಸವೊಂದನ್ನು ಉದಾಹರಿಸಿ ಹೇಳುತ್ತಾರೆ.

03031021a ಧಾತೈವ ಖಲು ಭೂತಾನಾಂ ಸುಖದುಃಖೇ ಪ್ರಿಯಾಪ್ರಿಯೇ।
03031021c ದಧಾತಿ ಸರ್ವಮೀಶಾನಃ ಪುರಸ್ತಾಚ್ಶುಕ್ರಮುಚ್ಚರನ್।।

ವೀರ್ಯಸ್ಖಲನವಾಗುವ ಮೊದಲೇ ಮಾನವನ ಸುಖದುಃಖಗಳನ್ನೂ, ಪ್ರಿಯ ಅಪ್ರಿಯವಾದವುಗಳನ್ನೂ ಸರ್ವರ ಒಡೆಯ ಧಾತನೇ ಕೊಡುತ್ತಾನೆ3.

03031022a ಯಥಾ ದಾರುಮಯೀ ಯೋಷಾ ನರವೀರ ಸಮಾಹಿತಾ।
03031022c ಈರಯತ್ಯಂಗಮಂಗಾನಿ ತಥಾ ರಾಜನ್ನಿಮಾಃ ಪ್ರಜಾಃ।।

ನರವೀರ! ಜೀವಿಗಳು ಬೇರೆ ಯಾರೋ ಆಡಿಸುತ್ತಿರುವ ಮರದ ಗೊಂಬೆಗಳಂತೆ! ಆ ಬೇರೆಯವನೇ ಜೀವಿಗಳ ದೇಹ ಮತ್ತು ಕೈಕಾಲುಗಳನ್ನು ಚಲಿಸುವಂತೆ ಮಾಡುತ್ತಾನೆ4.

03031023a ಆಕಾಶ ಇವ ಭೂತಾನಿ ವ್ಯಾಪ್ಯ ಸರ್ವಾಣಿ ಭಾರತ।
03031023c ಈಶ್ವರೋ ವಿದಧಾತೀಹ ಕಲ್ಯಾಣಂ ಯಚ್ಚ ಪಾಪಕಂ।।

ಭಾರತ! ಈಶ್ವರನು ಆಕಾಶದಂತೆ ಸರ್ವಭೂತಗಳಲ್ಲಿಯೂ ವ್ಯಾಪ್ತನಾಗಿ, ಅವುಗಳಿಗೆ ಕಲ್ಯಾಣಕರ ಮತ್ತು ಪಾಪಕಾರಕಗಳನ್ನು ಕೊಡುತ್ತಾನೆ5.

03031024a ಶಕುನಿಸ್ತಂತುಬದ್ಧೋ ವಾ ನಿಯತೋಽಯಮನೀಶ್ವರಃ।
03031024c ಈಶ್ವರಸ್ಯ ವಶೇ ತಿಷ್ಠನ್ನಾನ್ಯೇಷಾಂ ನಾತ್ಮನಃ ಪ್ರಭುಃ।।

ದಾರಕ್ಕೆ ಕಟ್ಟಲ್ಪಟ್ಟ ಪಕ್ಷಿಯಂತೆ ಮನುಷ್ಯನು ತನ್ನ ಸ್ವಾಮಿಯಲ್ಲ. ಈಶ್ವರನ ಅಧೀನದಲ್ಲಿರುವ ಅವನು ಸ್ವತಃ ತನ್ನ ಅಥವಾ ಬೇರೆ ಯಾರ ಸ್ವಾಮಿಯಾಗಿರಲೂ ಸಾಧ್ಯವಿಲ್ಲ6!

03031025a ಮಣಿಃ ಸೂತ್ರ ಇವ ಪ್ರೋತೋ ನಸ್ಯೋತ ಇವ ಗೋವೃಷಃ।
03031025c ಧಾತುರಾದೇಶಮನ್ವೇತಿ ತನ್ಮಯೋ ಹಿ ತದರ್ಪಣಃ।।

ದಾರಕ್ಕೆ ಪೋಣಿಸಿದ ಮಣಿಯಂತೆ, ಮೂಗುದಾಣದಿಂದ ಹಿಡಿಯಲ್ಪಟ್ಟ ಎತ್ತಿನಂತೆ ಮನುಷ್ಯನು ಧಾತುವಿನಲ್ಲಿಯೇ ತನ್ಮಯನಾಗಿ, ಅವನಿಗೆ ತನ್ನನ್ನು ಸಮರ್ಪಿಸಿಕೊಂಡು ಅವನ ಆದೇಶವನ್ನೇ ಅನುಸರಿಸುತ್ತಾನೆ.

03031026a ನಾತ್ಮಾಧೀನೋ ಮನುಷ್ಯೋಽಯಂ ಕಾಲಂ ಭವತಿ ಕಂ ಚನ।
03031026c ಸ್ರೋತಸೋ ಮಧ್ಯಮಾಪನ್ನಃ ಕೂಲಾದ್ವೃಕ್ಶ ಇವ ಚ್ಯುತಃ।।

ಪ್ರವಾಹದ ಮಧ್ಯದಲ್ಲಿ ಬಿದ್ದು ಸಿಕ್ಕುಹಾಕಿಕೊಂಡ ವೃಕ್ಷದಂತೆ ಪ್ರತಿಯೊಬ್ಬ ಮನುಷ್ಯನೂ ತನ್ನ ಅಧೀನದಲ್ಲಿರದೇ ಕಾಲದ ಅಧೀನದಲ್ಲಿರುತ್ತಾನೆ.

03031027a ಅಜ್ಞೋ ಜಂತುರನೀಶೋಽಯಮಾತ್ಮನಃ ಸುಖದುಃಖಯೋಃ।
03031027c ಈಶ್ವರಪ್ರೇರಿತೋ ಗಚ್ಚೇತ್ಸ್ವರ್ಗಂ ನರಕಮೇವ ಚ।।

ಮನುಷ್ಯನಿಗೆ ಏನೂ ತಿಳಿದಿರುವುದಿಲ್ಲ. ಅವನಿಗೆ ಅವನ ಸುಖದುಃಖಗಳ ಮೇಲೆ ನಿಯಂತ್ರಣವಿರುವುದಿಲ್ಲ. ಈಶ್ವರನಿಂದ ಪ್ರೇರಿತನಾಗಿ ಅವನು ಸ್ವರ್ಗಕ್ಕೂ ಹೋಗಬಹುದು ಅಥವಾ ನರಕಕ್ಕೂ ಹೋಗಬಹುದು.

03031028a ಯಥಾ ವಾಯೋಸ್ತೃಣಾಗ್ರಾಣಿ ವಶಂ ಯಾಂತಿ ಬಲೀಯಸಃ।
03031028c ಧಾತುರೇವಂ ವಶಂ ಯಾಂತಿ ಸರ್ವಭೂತಾನಿ ಭಾರತ।।

ಭಾರತ! ಭಿರುಗಾಳಿಯ ಹೊಡೆತಕ್ಕೆ ಸಿಕ್ಕಿದ ಸಣ್ಣ ಹುಲ್ಲುಕಡ್ಡಿಯು ಗಾಳಿಯು ಚಲಿಸಿದತ್ತ ಚಲಿಸುವಂತೆ, ಸರ್ವಭೂತಗಳೂ ಬಲಿಷ್ಠವಾದ ದೈವಪ್ರೇರಣೆಯ ಪ್ರಭಾವಕ್ಕೆ ಸಿಲುಕಿರುತ್ತಾರೆ.

03031029a ಆರ್ಯಕರ್ಮಣಿ ಯುಂಜಾನಃ ಪಾಪೇ ವಾ ಪುನರೀಶ್ವರಃ।
03031029c ವ್ಯಾಪ್ಯ ಭೂತಾನಿ ಚರತೇ ನ ಚಾಯಮಿತಿ ಲಕ್ಷ್ಯತೇ।।

ಈಶ್ವರನು ಪಾಪ ಅಥವಾ ಪುಣ್ಯಕರ್ಮಗಳನ್ನು ಕಟ್ಟಿಕೊಂಡು ಭೂತಗಳಲ್ಲಿ ವ್ಯಾಪ್ತನಾಗಿ ತಿರುಗುತ್ತಿರುತ್ತಾನಾದರೂ ಗಮನಕ್ಕೆ ಬರುವುದಿಲ್ಲ7.

03031030a ಹೇತುಮಾತ್ರಮಿದಂ ಧಾತುಃ ಶರೀರಂ ಕ್ಷೇತ್ರಸಂಜ್ಞಿತಂ।
03031030c ಯೇನ ಕಾರಯತೇ ಕರ್ಮ ಶುಭಾಶುಭಫಲಂ ವಿಭುಃ।।

ಯಾವುದರ ಮೂಲಕ ವಿಭುವು ಶುಭಾಶುಭ ಕರ್ಮಗಳನ್ನು ಮಾಡಿಸುತ್ತಾನೋ ಆ ಕ್ಷೇತ್ರವೆಂದು ಕರೆಯಲ್ಪಡುವ ಶರೀರವು ಧಾತು ವಿಭುವಿನ ಉಪಕರಣ ಮಾತ್ರ.

03031031a ಪಶ್ಯ ಮಾಯಾಪ್ರಭಾವೋಽಯಮೀಶ್ವರೇಣ ಯಥಾ ಕೃತಃ।
03031031c ಯೋ ಹಂತಿ ಭೂತೈರ್ಭೂತಾನಿ ಮೋಹಯಿತ್ವಾತ್ಮಮಾಯಯಾ।।

ಈಶ್ವರನಿಂದ ಮಾಡಲ್ಪಟ್ಟ ಈ ಮಾಯೆಯ ಪ್ರಭಾವವನ್ನು ನೋಡು. ತನ್ನ ಮಾಯೆಯಿಂದ ಮೋಹಿಸಿ ಭೂತಗಳನ್ನು ಭೂತಗಳೇ ಕೊಲ್ಲುವಂತೆ ಮಾಡುತ್ತಾನೆ.

03031032a ಅನ್ಯಥಾ ಪರಿದೃಷ್ಟಾನಿ ಮುನಿಭಿರ್ವೇದದರ್ಶಿಭಿಃ।
03031032c ಅನ್ಯಥಾ ಪರಿವರ್ತಂತೇ ವೇಗಾ ಇವ ನಭಸ್ವತಃ।।

ವೇದದರ್ಶಿ ಮುನಿಗಳು ಇದನ್ನು ಕಂಡು ಬೇರೆಯೇ ದಾರಿಯನ್ನು ಹಿಡಿಯುತ್ತಾರೆ. ಆಕಾಶದಲ್ಲಿರುವವು ಬೇಗ ಬೇಗನೆ ಪರಿವರ್ತನಗೊಳ್ಳುತ್ತವೆ.

03031033a ಅನ್ಯಥೈವ ಹಿ ಮನ್ಯಂತೇ ಪುರುಷಾಸ್ತಾನಿ ತಾನಿ ಚ।
03031033c ಅನ್ಯಥೈವ ಪ್ರಭುಸ್ತಾನಿ ಕರೋತಿ ವಿಕರೋತಿ ಚ।।
03031034a ಯಥಾ ಕಾಷ್ಠೇನ ವಾ ಕಾಷ್ಠಮಶ್ಮಾನಂ ಚಾಶ್ಮನಾ ಪುನಃ।
03031034c ಅಯಸಾ ಚಾಪ್ಯಯಶ್ಚಿಂದ್ಯಾನ್ನಿರ್ವಿಚೇಷ್ಟಮಚೇತನಂ।।
03031035a ಏವಂ ಸ ಭಗವಾನ್ದೇವಃ ಸ್ವಯಂಭೂಃ ಪ್ರಪಿತಾಮಹಃ।
03031035c ಹಿನಸ್ತಿ ಭೂತೈರ್ಭೂತಾನಿ ಚದ್ಮ ಕೃತ್ವಾ ಯುಧಿಷ್ಠಿರ।।

ಯುಧಿಷ್ಠಿರ! ಪುರುಷರಿಗೆ ಒಂದು ರೀತಿ ಕಂಡರೆ ಪ್ರಭುವು ಅದನ್ನು ಬದಲಾಯಿಸುತ್ತಾನೆ. ಕಟ್ಟಿಗೆಯನ್ನು ಕಟ್ಟಿಗೆಯಿಂದ ಹೇಗೋ ಹಾಗೆ, ಕಲ್ಲನ್ನು ಕಲ್ಲಿನಿಂದ ಹೇಗೋ ಹಾಗೆ, ಜಡವಸ್ತುವನ್ನು ಜಡವಸ್ತುವಿನಿಂದ ಹೇಗೋ ಹಾಗೆ ಸ್ವಯಂಭೂ, ಪ್ರಪಿತಾಮಹ ಭಗವಾನ್ ದೇವನು ಭೂತಗಳಿಂದಲೇ ಭೂತಗಳನ್ನು ಮರೆಸಿ ಕೊಲ್ಲಿಸುತ್ತಾನೆ.

03031036a ಸಂಪ್ರಯೋಜ್ಯ ವಿಯೋಜ್ಯಾಯಂ ಕಾಮಕಾರಕರಃ ಪ್ರಭುಃ।
03031036c ಕ್ರೀಡತೇ ಭಗವನ್ಭೂತೈರ್ಬಾಲಃ ಕ್ರೀಡನಕೈರಿವ।।

ಉಟ್ಟು ಸೇರಿಸಿ, ಬಿಟ್ಟುಹೋಗುವಂತೆ ಮಾಡಿ, ಆ ಕುಶಲ ಕಾರ್ಯಕರ್ಮಿ ಭಗವಾನ್ ಪ್ರಭುವು ಮಕ್ಕಳು ಗೊಂಬೆಗಳೊಂದಿಗೆ ಆಡುವಂತೆ ಭೂತಗಳೊಂದಿಗೆ ಆಡುತ್ತಾನೆ.

03031037a ನ ಮಾತೃಪಿತೃವದ್ರಾಜನ್ಧಾತಾ ಭೂತೇಷು ವರ್ತತೇ।
03031037c ರೋಷಾದಿವ ಪ್ರವೃತ್ತೋಽಯಂ ಯಥಾಯಮಿತರೋ ಜನಃ।।

ರಾಜನ್! ಧಾತನು ಭೂತಗಳೊಡನೆ ತಂದೆ ಅಥವಾ ತಾಯಿಯಂತೆ ವರ್ತಿಸುವುದಿಲ್ಲ. ಇತರ ಜನರು ಹೇಗೆ ವರ್ತಿಸುತ್ತಾರೋ ಹಾಗೆ ಇವನೂ ಕೂಡ ರೋಷದಿಂದಲೋ ಎನ್ನುವಂತೆ ವರ್ತಿಸುತ್ತಾನೆ.

03031038a ಆರ್ಯಾಂ ಶೀಲವತೋ ದೃಷ್ಟ್ವಾ ಹ್ರೀಮತೋ ವೃತ್ತಿಕರ್ಶಿತಾನ್।
03031038c ಅನಾರ್ಯಾನ್ಸುಖಿನಶ್ಚೈವ ವಿಹ್ವಲಾಮೀವ ಚಿಂತಯಾ।।

ಆರ್ಯರು, ಶೀಲವಂತರು, ವಿನೀತರು ತಮ್ಮ ತಮ್ಮ ಪ್ರವೃತ್ತಿಗಳಲ್ಲಿ ಬಳಲಿರುವುದನ್ನು ಮತ್ತು ಅನಾರ್ಯರು ಸುಖದಿಂದಿರುವುದನ್ನು ನೋಡಿ ನನ್ನ ಮನಸ್ಸು ಚಿಂತೆಯಿಂದ ವಿಹ್ವಲವಾಗಿದೆ.

03031039a ತವೇಮಾಮಾಪದಂ ದೃಷ್ಟ್ವಾ ಸಮೃದ್ಧಿಂ ಚ ಸುಯೋಧನೇ।
03031039c ಧಾತಾರಂ ಗರ್ಹಯೇ ಪಾರ್ಥ ವಿಷಮಂ ಯೋಽನುಪಶ್ಯತಿ।।

ಪಾರ್ಥ! ನಿನ್ನ ಕಷ್ಟಗಳು ಮತ್ತು ಸುಯೋಧನನ ಸಮೃದ್ಧಿ ಈ ವಿಷಮತೆಯನ್ನು ನೋಡಿ ಇದಕ್ಕೆ ಎಡೆಮಾಡಿಕೊಟ್ಟ ಧಾತಾರನನ್ನು ಧಿಕ್ಕರಿಸುತ್ತೇನೆ.

03031040a ಆರ್ಯಶಾಸ್ತ್ರಾತಿಗೇ ಕ್ರೂರೇ ಲುಬ್ಧೇ ಧರ್ಮಾಪಚಾಯಿನಿ।
03031040c ಧಾರ್ತರಾಷ್ಟ್ರೇ ಶ್ರಿಯಂ ದತ್ತ್ವಾ ಧಾತಾ ಕಿಂ ಫಲಮಶ್ನುತೇ।।

ಆರ್ಯಶಾಸ್ತ್ರಗಳನ್ನು ಉಲ್ಲಂಘಿಸಿ, ಕ್ರೂರ, ಲುಬ್ಧ, ಅಧರ್ಮಚಾರಿ ಧಾರ್ತರಾಷ್ಟ್ರರಿಗೆ ಸಂಪತ್ತನ್ನು ಕೊಟ್ಟು ಧಾತನಿಗೆ ಏನು ಫಲದೊರೆಯುತ್ತದೆ?

03031041a ಕರ್ಮ ಚೇತ್ಕೃತಮನ್ವೇತಿ ಕರ್ತಾರಂ ನಾನ್ಯಮೃಚ್ಚತಿ।
03031041c ಕರ್ಮಣಾ ತೇನ ಪಾಪೇನ ಲಿಪ್ಯತೇ ನೂನಮೀಶ್ವರಃ।।

ಕರ್ಮವು ಅದನ್ನು ಎಸಗಿದ ಕರ್ತಾರನಲ್ಲದೇ ಬೇರೆ ಯಾರನ್ನೂ ಕಾಡಿಸುವುದಿಲ್ಲ ಎಂದಾಗ ಅಂಥಹ ಕರ್ಮಗಳ ಪಾಪವು ಈಶ್ವರನಿಗೆ ತಾಗಬೇಕು ತಾನೇ?

03031042a ಅಥ ಕರ್ಮ ಕೃತಂ ಪಾಪಂ ನ ಚೇತ್ಕರ್ತಾರಮೃಚ್ಚತಿ।
03031042c ಕಾರಣಂ ಬಲಮೇವೇಹ ಜನಾಂ ಶೋಚಾಮಿ ದುರ್ಬಲಾನ್।।

ಕರ್ತಾರನಿಗೆ ಅಂಥಹ ಕರ್ಮದ ಪಾಪವು ತಗಲುವುದಿಲ್ಲವೆಂದಾದರೆ ಬಲವೇ ಎಲ್ಲವಕ್ಕೂ ಕಾರಣವೆಂದಾದರೆ ದುರ್ಬಲ ಜನರ ಕುರಿತು ನಾನು ಶೋಕಿಸುತ್ತೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ರೌಪದೀಪರಿತಾಪವಾಕ್ಯೇ ಏಕತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ರೌಪದೀಪರಿತಾಪವಾಕ್ಯದಲ್ಲಿ ಮೂವತ್ತೊಂದನೆಯ ಅಧ್ಯಾಯವು.


  1. ಧರ್ಮರಾಜನು ವನವಾಸಕ್ಕೆ ಮೊದಲು ಅಶ್ವಮೇಧ ಯಾಗವನ್ನು ಮಾಡಿದ್ದನೇ? ↩︎

  2. ಪುಂಡರೀಕ ಮತ್ತು ಗೋಸವ ಯಜ್ಞಗಳು ಎಂದರೇನು? ↩︎

  3. ಒಂದು ಸಣ್ಣ ಬೀಜದಲ್ಲಿ ವೃಕ್ಷ-ಫಲಗಳನ್ನು ನಿಕ್ಷೇಪಿಸಿರುವಂತೆ ಮಾನವನು ಜೀವಿತಕಾಲದಲ್ಲಿ ಅನುಭವಿಸಬೇಕಾದ ಕಷ್ಟ-ಸುಖಗಳು, ಪ್ರಿಯವಾದ ಮತ್ತು ಅಪ್ರಿಯವಾದ ಘಟನೆಗಳು ಎಲ್ಲವನ್ನೂ ಹುಟ್ಟುವ ಮೊದಲೇ ಪರಮಾತ್ಮನು ಸಿದ್ಧಮಾಡಿರುತ್ತಾನೆ. ↩︎

  4. ಸೂತ್ರಧಾರನು ಮರದ ಗೊಂಬೆಯ ಕೈಕಾಲುಗಳನ್ನು ತನ್ನ ಕೈಚಳಕದಿಂದ ಹೇಗೆ ಆಡಿಸುವನೋ ಅದೇರೀತಿ ಪರಮಾತ್ಮನು ಸಕಲ ಜೀವಕೋಟಿಯ ಜೀವಸೂತ್ರಗಳನ್ನೂ ತನ್ನ ಕೈಯಲ್ಲಿ ಹಿಡಿದು ತನಗಿಚ್ಛೆಬಂದಂತೆ ಆಡಿಸುತ್ತಿರುತ್ತಾನೆ! ↩︎

  5. ಆಕಾಶವು ಹೇಗೆ ಸರ್ವವ್ಯಾಪ್ತಿಯಾಗಿರುವುದೋ ಹಾಗೆ ಪರಮಾತ್ಮನೂ ಸರ್ವವ್ಯಾಪಿಯಾಗಿದ್ದುಕೊಂಡು ಜೀವಿಗಳ ಸುಖದುಃಖಗಳ ನಿರ್ದೇಶನ ಮಾಡುತ್ತಾನೆ. ↩︎

  6. ದಾರದಿಂದ ಕಟ್ಟಿದ ಪಕ್ಷಿಯಂತೆ ಜೀವಕೋಟಿಯು ಈಶ್ವರನ ಅದೀನವಾಗಿದೆ. ಈಶ್ವರನಿಗಿಂತಲೂ ಬೇರೆ ಪ್ರಭುವಿಲ್ಲ. ಜೀವನು ತನಗೂ ಪ್ರಭುವಲ್ಲ, ಬೇರೆಯವರಿಗೂ ಪ್ರಭುವಲ್ಲ. ↩︎

  7. ಪರಮಾತ್ಮನೇ ತನ್ನ ಪಾಪ ಮತ್ತು ಪುಣ್ಯಕರ್ಮಗಳಿಗೆ ಬದ್ಧನಾಗಿ ತಾನೇ ಸರ್ವಜೀವಿಗಳಲ್ಲಿಯೂ ವ್ಯಾಪ್ತನಾಗಿ ಸಂಚರಿಸಿರುತ್ತಾನೆ. ಆದರೆ ಜೀವಿಯು ಮಾಡುತ್ತಿರುವುದೆಲ್ಲವೂ ಅವನೇ ಮಾಡುತ್ತಿರುವ ಕೆಲಸಗಳು ಎನ್ನುವುದು ಮಾತ್ರ ಗಮನಕ್ಕೇ ಬರುವುದಿಲ್ಲ. ಜೀವಿಯು ತಿಳಿದುಕೊಳ್ಳುವುದು ಎಲ್ಲವನ್ನೂ ನಾನೇ ಮಾಡುತ್ತಿದ್ದೇನೆ ಎಂದು! ↩︎