029 ದ್ರೌಪದೀಪರಿತಾಪವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 29

ಸಾರ

ವಿರೋಚನ ಮತ್ತು ಪ್ರಹ್ಲಾದರ ನಡುವೆ ಕ್ಷಮೆ ಮತ್ತು ಸಿಟ್ಟಿನ ಕುರಿತು ನಡೆದ ಧರ್ಮ ಜಿಜ್ಞಾಸೆಯನ್ನು ದ್ರೌಪದಿಯು ಉದಾರಿಸಿದುದು (1-32). ಧಾರ್ತರಾಷ್ಟ್ರರ ಕೋಪ ತೋರಿಸುವ ಸಂದರ್ಭವೇ ಇದೆಂದು ಹೇಳುವುದು (33-35).

03029001 ದ್ರೌಪದ್ಯುವಾಚ।
03029001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ।
03029001c ಪ್ರಹ್ಲಾದಸ್ಯ ಚ ಸಂವಾದಂ ಬಲೇರ್ವೈರೋಚನಸ್ಯ ಚ।।
03029002a ಅಸುರೇಂದ್ರಂ ಮಹಾಪ್ರಾಜ್ಞಂ ಧರ್ಮಾಣಾಮಾಗತಾಗಮಂ।
03029002c ಬಲಿಃ ಪಪ್ರಚ್ಚ ದೈತ್ಯೇಂದ್ರಂ ಪ್ರಹ್ಲಾದಂ ಪಿತರಂ ಪಿತುಃ।।

ದ್ರೌಪದಿಯು ಹೇಳಿದಳು: “ಈ ವಿಷಯದ ಕುರಿತು ಪುರಾತನ ಇತಿಹಾಸದಲ್ಲಿರುವಂತೆ ವಿರೋಚನನ ಪುತ್ರ ಬಲಿ ಮತ್ತು ಪ್ರಹ್ಲಾದರ ಸಂವಾದವನ್ನು ಉದಾಹರಿಸುತ್ತಾರೆ. ಅಸುರೇಂದ್ರ ಮಹಾಪ್ರಾಜ್ಞ ಬಲಿಯು ತನ್ನ ತಂದೆಯ ತಂದೆ ದೈತ್ಯೇಂದ್ರ ಪ್ರಹ್ಲಾದನನ್ನು ಧರ್ಮದ ಆಗುಹೋಗುಗಳ ಕುರಿತು ಕೇಳಿದನು.

03029003a ಕ್ಷಮಾ ಸ್ವಿಚ್ಛ್ರೇಯಸೀ ತಾತ ಉತಾಹೋ ತೇಜ ಇತ್ಯುತ।
03029003c ಏತನ್ಮೇ ಸಂಶಯಂ ತಾತ ಯಥಾವದ್ಬ್ರೂಹಿ ಪೃಚ್ಚತೇ।।

“ಅಜ್ಜಾ! ಯಾವುದು ಒಳ್ಳೆಯದು - ಕ್ಷಮಿಸುವುದೋ ಅಥವಾ ಸೇಡನ್ನು ತೀರಿಸುಕೊಳ್ಳುವುದೋ? ಅಜ್ಜಾ! ಇದರ ಕುರಿತು ನನಗೆ ಸಂಶಯವಿದೆ. ದಯವಿಟ್ಟು ನಾನು ಕೇಳಿದುದಕ್ಕೆ ಉತ್ತರಿಸು.

03029004a ಶ್ರೇಯೋ ಯದತ್ರ ಧರ್ಮಜ್ಞ ಬ್ರೂಹಿ ಮೇ ತದಸಂಶಯಂ।
03029004c ಕರಿಷ್ಯಾಮಿ ಹಿ ತತ್ಸರ್ವಂ ಯಥಾವದನುಶಾಸನಂ।।

ಧರ್ಮಜ್ಞ! ಇವೆರಡರಲ್ಲಿ ಯಾವುದು ಏನೂ ಸಂಶಯವಿಲ್ಲದೇ ಶ್ರೇಯಸ್ಕರವಾದುದು? ನೀನು ನನಗೆ ತಿಳಿಸಿದ ಎಲ್ಲದರಂತೆ ನಡೆದುಕೊಳ್ಳುತ್ತೇನೆ.”

03029005a ತಸ್ಮೈ ಪ್ರೋವಾಚ ತತ್ಸರ್ವಮೇವಂ ಪೃಷ್ಟಃ ಪಿತಾಮಹಃ।
03029005c ಸರ್ವನಿಶ್ಚಯವಿತ್ಪ್ರಾಜ್ಞಃ ಸಂಶಯಂ ಪರಿಪೃಚ್ಚತೇ।।

ಈ ಪ್ರಶ್ನೆಗೆ ಸರ್ವ ನಿಶ್ಚಯಗಳನ್ನೂ ತಿಳಿದ ಅವನ ಅಜ್ಜನು ಅವನಿಗೆ ಎಲ್ಲವನ್ನೂ ಹೇಳಿದನು.

03029006 ಪ್ರಹ್ಲಾದ ಉವಾಚ।
03029006a ನ ಶ್ರೇಯಃ ಸತತಂ ತೇಜೋ ನ ನಿತ್ಯಂ ಶ್ರೇಯಸೀ ಕ್ಷಮಾ।
03029006c ಇತಿ ತಾತ ವಿಜಾನೀಹಿ ದ್ವಯಮೇತದಸಂಶಯಂ।।

ಪ್ರಹ್ಲಾದನು ಹೇಳಿದನು: “ಸೇಡು ಯಾವಾಗಲೂ ಒಳ್ಳೆಯದಲ್ಲ. ಹಾಗೆಯೇ ಕ್ಷಮೆಯೂ ಯಾವಾಗಲೂ ಒಳ್ಳೆಯದಲ್ಲ. ಮಗೂ! ಆದುದರಿಂದ ನಿಸ್ಸಂಶಯವಾಗಿ ಇವೆರಡನ್ನೂ ತಿಳಿದುಕೊಂಡಿರಬೇಕು!

03029007a ಯೋ ನಿತ್ಯಂ ಕ್ಷಮತೇ ತಾತ ಬಹೂನ್ದೋಷಾನ್ಸ ವಿಂದತಿ।
03029007c ಭೃತ್ಯಾಃ ಪರಿಭವಂತ್ಯೇನಮುದಾಸೀನಾಸ್ತಥೈವ ಚ।।

ಮಗೂ! ನಿತ್ಯವೂ ಕ್ಷಮಿಸುವುದರಲ್ಲಿ ಬಹಳಷ್ಟು ದೋಷಗಳಿವೆ: ಅಂಥವನ ಸೇವಕರು ಮತ್ತು ಇತರರು ಅವನೊಂದಿಗೆ ಉದಾಸೀನರಾಗಿ ನಡೆದುಕೊಳ್ಳುತ್ತಾರೆ

03029008a ಸರ್ವಭೂತಾನಿ ಚಾಪ್ಯಸ್ಯ ನ ನಮಂತೇ ಕದಾ ಚನ।
03029008c ತಸ್ಮಾನ್ನಿತ್ಯಂ ಕ್ಷಮಾ ತಾತ ಪಂಡಿತೈರಪವಾದಿತಾ।।

ಸರ್ವಭೂತಗಳಲ್ಲಿ ಯಾವುದೂ ಅವನನನ್ನು ಎಂದೂ ನಮಸ್ಕರಿಸುವುದಿಲ್ಲ. ಮಗೂ! ಆದುದರಿಂದಲೇ ಸದಾ ಕ್ಷಮಿಸುವವನನ್ನು ಪಂಡಿತರು ಟೀಕಿಸುತ್ತಾರೆ.

03029009a ಅವಜ್ಞಾಯ ಹಿ ತಂ ಭೃತ್ಯಾ ಭಜಂತೇ ಬಹುದೋಷತಾಂ।
03029009c ಆದಾತುಂ ಚಾಸ್ಯ ವಿತ್ತಾನಿ ಪ್ರಾರ್ಥಯಂತೇಽಲ್ಪಚೇತಸಃ।।
03029010a ಯಾನಂ ವಸ್ತ್ರಾಣ್ಯಲಂಕಾರಾಂ ಶಯನಾನ್ಯಾಸನಾನಿ ಚ।
03029010c ಭೋಜನಾನ್ಯಥ ಪಾನಾನಿ ಸರ್ವೋಪಕರಣಾನಿ ಚ।।

ಅವನ ಸೇವಕರು ಅವನನ್ನು ಕಡೆಗಾಣಿಸಿ ಬಹಳಷ್ಟು ದುಷ್ಟ ವ್ಯಸನಗಳಲ್ಲಿ ತೊಡಗುತ್ತಾರೆ - ಆ ಸಣ್ಣಬುದ್ಧಿಯವರು ಅವನ ಸಂಪತ್ತನ್ನು, ವಾಹನ, ವಸ್ತ್ರ, ಅಲಂಕಾರಗಳು, ಹಾಸಿಗೆ, ಆಸನಗಳು, ಭೋಜನ ಪದಾರ್ಥಗಳು, ಪಾನೀಯಗಳು, ಹೀಗೆ ಸರ್ವ ಉಪಕರಣಗಳನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ,

03029011a ಆದದೀರನ್ನಧಿಕೃತಾ ಯಥಾಕಾಮಮಚೇತಸಃ।
03029011c ಪ್ರದಿಷ್ಟಾನಿ ಚ ದೇಯಾನಿ ನ ದದ್ಯುರ್ಭರ್ತೃಶಾಸನಾತ್।।

ಇನ್ನೊಬ್ಬರಿಗೆ ಕೊಡಬೇಕು ಎಂದು ಆದೇಶವನ್ನಿತ್ತರೆ ಅವನ ಬುದ್ಧಿಯಿಲ್ಲದ ಸೇವಕರು ಇಂಥವರಿಗೇ ಕೊಡಬೇಕೆಂದು ತಮ್ಮ ಯಜಮಾನನ ಆಜ್ಞೆಯಾಗಿದ್ದರೂ, ತಮಗೆ ಬೇಕಾದಂತೆ ಕೊಟ್ಟು ಬಿಡುತ್ತಾರೆ.

03029012a ನ ಚೈನಂ ಭರ್ತೃಪೂಜಾಭಿಃ ಪೂಜಯಂತಿ ಕದಾ ಚನ।
03029012c ಅವಜ್ಞಾನಂ ಹಿ ಲೋಕೇಽಸ್ಮಿನ್ಮರಣಾದಪಿ ಗರ್ಹಿತಂ।।

ಅವರು ಯಜಮಾನನಿಗೆ ದೊರೆಯಬೇಕಾದ ಗೌರವವನ್ನು ಅವನಿಗೆ ನೀಡುವುದಿಲ್ಲ. ಇಂಥಹ ಅಗೌರವವು ಮರಣಕ್ಕಿಂತಲೂ ಕೆಟ್ಟದ್ದು ಎಂದು ಈ ಲೋಕದಲ್ಲಿ ತಿಳಿದಿದ್ದಾರೆ.

03029013a ಕ್ಷಮಿಣಂ ತಾದೃಶಂ ತಾತ ಬ್ರುವಂತಿ ಕಟುಕಾನ್ಯಪಿ।
03029013c ಪ್ರೇಷ್ಯಾಃ ಪುತ್ರಾಶ್ಚ ಭೃತ್ಯಾಶ್ಚ ತಥೋದಾಸೀನವೃತ್ತಯಃ।।

ಮಗೂ! ಯಾವಾಗಲೂ ಕ್ಷಮಿಸುವವನಿಗೆ ಅವನ ಕುಟುಂಬ, ಸೇವಕರು, ಮಕ್ಕಳು, ಅವಲಂಬಿಸಿರುವವರು, ಮತ್ತು ಇತರರೂ ಕೂಡ ಗಮನಕೊಡದೇ ನಡೆದುಕೊಳ್ಳುತ್ತಾರೆ.

03029014a ಅಪ್ಯಸ್ಯ ದಾರಾನಿಚ್ಚಂತಿ ಪರಿಭೂಯ ಕ್ಷಮಾವತಃ।
03029014c ದಾರಾಶ್ಚಾಸ್ಯ ಪ್ರವರ್ತಂತೇ ಯಥಾಕಾಮಮಚೇತಸಃ।।

ಕ್ಷಮಾವಂತನನ್ನು ಹೀಯಾಳಿಸಿ ಅವನ ಪತ್ನಿಯನ್ನೂ ಕೇಳುತ್ತಾರೆ ಮತ್ತು ಬುದ್ಧಿಯಿಲ್ಲದ ಹೆಂಡತಿಯೂ ಕೂಡ ತನಗಿಷ್ಟಬಂದಂತೆ ನಡೆದುಕೊಳ್ಳುತ್ತಾಳೆ.

03029015a ತಥಾ ಚ ನಿತ್ಯಮುದಿತಾ ಯದಿ ಸ್ವಲ್ಪಮಪೀಶ್ವರಾತ್।
03029015c ದಂಡಮರ್ಹಂತಿ ದುಷ್ಯಂತಿ ದುಷ್ಟಾಶ್ಚಾಪ್ಯಪಕುರ್ವತೇ।।

ಯಾವಾಗಲೂ ಸುಖಿಗಳಾಗಿರುವ ಆ ಅವಲಂಬಿತ ಜನರು ತಕ್ಕುದಾದ ಸ್ವಲ್ಪ ಶಿಕ್ಷೆಯನ್ನು ವಿಧಿಸಿದರೂ ದಂಗೆಯೇಳುತ್ತಾರೆ ಮತ್ತು ಯಜಮಾನನೇ ತಪ್ಪಿತಸ್ಥನೆಂದು ಸಾಧಿಸುತ್ತಾರೆ.

03029016a ಏತೇ ಚಾನ್ಯೇ ಚ ಬಹವೋ ನಿತ್ಯಂ ದೋಷಾಃ ಕ್ಷಮಾವತಾಂ।
03029016c ಅಥ ವೈರೋಚನೇ ದೋಷಾನಿಮಾನ್ವಿದ್ಧ್ಯಕ್ಷಮಾವತಾಂ।।

ಇವು ಮತ್ತು ಇನ್ನೂ ಇತರ ದೋಷಗಳು ಸದಾ ಕ್ಷಮಾವಂತನಾಗಿರುವವನಲ್ಲಿ ಇರುತ್ತವೆ. ವೈರೋಚನ! ಈಗ ನಿತ್ಯವೂ ಅಕ್ಷಮಾವಂತನಾಗಿರುವವನಲ್ಲಿ ಇರುವ ದೋಷಗಳ ಕುರಿತು ಕೇಳು!

03029017a ಅಸ್ಥಾನೇ ಯದಿ ವಾ ಸ್ಥಾನೇ ಸತತಂ ರಜಸಾವೃತಃ।
03029017c ಕ್ರುದ್ಧೋ ದಂಡಾನ್ಪ್ರಣಯತಿ ವಿವಿಧಾನ್ಸ್ವೇನ ತೇಜಸಾ।।
03029018a ಮಿತ್ರೈಃ ಸಹ ವಿರೋಧಂ ಚ ಪ್ರಾಪ್ನುತೇ ತೇಜಸಾವೃತಃ।
03029018c ಪ್ರಾಪ್ನೋತಿ ದ್ವೇಷ್ಯತಾಂ ಚೈವ ಲೋಕಾತ್ಸ್ವಜನತಸ್ತಥಾ।।

ಕಾರಣವಿದ್ದೋ ಅಥವಾ ಕಾರಣವಿಲ್ಲದೆಯೋ ಯಾವಾಗಲೂ ಸಿಟ್ಟಿನಿಂದ ಇದ್ದು, ತನ್ನ ಅಧಿಕಾರದಿಂದ ಸಿಟ್ಟಾಗಿ ವಿವಿಧ ಶಿಕ್ಷೆಗಳನ್ನು ವಿಧಿಸುವ ಸಿಟ್ಟಿನವನನ್ನು ಮಿತ್ರರೂ ಕೂಡ ವಿರೋಧಿಸುತ್ತಾರೆ. ಅಂಥವನನ್ನು ಸ್ವಜನರನ್ನೂ ಕೂಡಿ ಇಡೀ ಲೋಕದವರು ದ್ವೇಷಿಸುತ್ತಾರೆ.

03029019a ಸೋಽವಮಾನಾದರ್ಥಹಾನಿಮುಪಾಲಂಭಮನಾದರಂ।
03029019c ಸಂತಾಪದ್ವೇಷಲೋಭಾಂಶ್ಚ ಶತ್ರೂಂಶ್ಚ ಲಭತೇ ನರಃ।।

ಇನ್ನೊಬ್ಬರನ್ನು ಅಪಮಾನಿಸುವ ಅಂಥಹ ಮನುಷ್ಯನು ತನ್ನ ಸಂಪತ್ತನ್ನು ಕಳೆದುಕೊಂಡು, ಜನರ ಅನಾದರಣೀಯನಾಗುತ್ತಾನೆ. ಅಂಥವನು ಸಂತಾಪ, ದ್ವೇಷ, ಲೋಭ, ಮತ್ತು ಶತ್ರುಗಳನ್ನೂ ಪಡೆಯುತ್ತಾನೆ.

03029020a ಕ್ರೋಧಾದ್ದಂಡಾನ್ಮನುಷ್ಯೇಷು ವಿವಿಧಾನ್ಪುರುಷೋ ನಯನ್।
03029020c ಭ್ರಶ್ಯತೇ ಶೀಘ್ರಮೈಶ್ವರ್ಯಾತ್ಪ್ರಾಣೇಭ್ಯಃ ಸ್ವಜನಾದಪಿ।।

ಸಿಟ್ಟಿನಿಂದ ವಿವಿಧ ಕ್ರೂರ ಶಿಕ್ಷೆಗಳನ್ನು ವಿಧಿಸುವ ಪುರುಷನು ಬೇಗನೇ ತನ್ನ ಅಧಿಕಾರ, ಐಶ್ವರ್ಯ, ಪ್ರಾಣ ಮತ್ತು ಸ್ವಜರನನ್ನೂ ಕಳೆದುಕೊಳ್ಳುತ್ತಾನೆ.

03029021a ಯೋಽಪಕರ್ತೄಂಶ್ಚ ಕರ್ತೄಂಶ್ಚ ತೇಜಸೈವೋಪಗಚ್ಚತಿ।
03029021c ತಸ್ಮಾದುದ್ವಿಜತೇ ಲೋಕಃ ಸರ್ಪಾದ್ವೇಶ್ಮಗತಾದಿವ।।
03029022a ಯಸ್ಮಾದುದ್ವಿಜತೇ ಲೋಕಃ ಕಥಂ ತಸ್ಯ ಭವೋ ಭವೇತ್।

ತನಗೆ ಒಳ್ಳೆಯದನ್ನು ಅಥವಾ ಕೆಟ್ಟದನ್ನು ಮಾಡುವವರನ್ನು ಏನೂ ವ್ಯತ್ಯಾಸವಿಲ್ಲದೇ ಸಿಟ್ಟಿನಿಂದ ಶಿಕ್ಷಿಸುವವನಿಂದ ಜನರು ಬಿಲದೊಳಗೆ ಹೊಕ್ಕ ಸರ್ಪದಂತೆ ಹಿಂದೆಸರಿಯುತ್ತಾರೆ. ಜನರಿಂದ ದೂರಮಾಡಲ್ಪಟ್ಟ ಅವನಿಗೆ ಲೋಕದಲ್ಲಿ ಹೇಗೆ ತಾನೇ ಯಶಸ್ಸು ದೊರಕೀತು?

03029022c ಅಂತರಂ ಹ್ಯಸ್ಯ ದೃಷ್ಟ್ವೈವ ಲೋಕೋ ವಿಕುರುತೇ ಧ್ರುವಂ।।
03029022e ತಸ್ಮಾನ್ನಾತ್ಯುತ್ಸೃಜೇತ್ತೇಜೋ ನ ಚ ನಿತ್ಯಂ ಮೃದುರ್ಭವೇತ್।

ಒಂದು ಸಣ್ಣ ಅವಕಾಶ ಸಿಕ್ಕಿದರೂ ಕೂಡ ಜನರು ಅವನಿಗೆ ಕೆಟ್ಟದನ್ನು ಮಾಡಲು ಕಾಯುತ್ತಿರುತ್ತಾರೆ. ಆದುದರಿಂದ ಯಾರೂ ನಿತ್ಯವೂ ಸಿಟ್ಟಿನಿಂದ ಇರಬಾರದು ಅಥವಾ ಮೃದುವಾಗಿಯೂ ಇರಬಾರದು.

03029023a ಕಾಲೇ ಮೃದುರ್ಯೋ ಭವತಿ ಕಾಲೇ ಭವತಿ ದಾರುಣಃ।।
03029023c ಸ ವೈ ಸುಖಮವಾಪ್ನೋತಿ ಲೋಕೇಽಮುಷ್ಮಿನ್ನಿಹೈವ ಚ।

ಸಮಯಕ್ಕೆ ತಕ್ಕಂತೆ ಮೃದುವಾಗುವವನು ಮತ್ತು ಸಮಯಕ್ಕೆ ತಕ್ಕಂತೆ ಸಿಟ್ಟಾಗುವನು ಈ ಲೋಕದಲ್ಲಿ ಮತ್ತು ಇದರ ನಂತರದ ಲೋಕಗಳಲ್ಲಿ ಸುಖವನ್ನು ಪಡೆಯುತ್ತಾನೆ.

03029024a ಕ್ಷಮಾಕಾಲಾಂಸ್ತು ವಕ್ಷ್ಯಾಮಿ ಶೃಣು ಮೇ ವಿಸ್ತರೇಣ ತಾನ್।।
03029024c ಯೇ ತೇ ನಿತ್ಯಮಸಂತ್ಯಾಜ್ಯಾ ಯಥಾ ಪ್ರಾಹುರ್ಮನೀಷಿಣಃ।

ಈಗ ಕೇಳು. ಯಾವ ಯಾವ ಸಂದರ್ಭಗಳಲ್ಲಿ ಕ್ಷಮಾವಂತನಾಗಿರಬೇಕು ಎನ್ನುವುದನ್ನು ವಿಸ್ತಾರವಾಗಿ ಹೇಳುತ್ತೇನೆ. ತಿಳಿದವರು ಹೇಳಿದ ಈ ರೀತಿಯಂತೆ ನಿತ್ಯವೂ ನಡೆದುಕೊಳ್ಳಬೇಕು.

03029025a ಪೂರ್ವೋಪಕಾರೀ ಯಸ್ತು ಸ್ಯಾದಪರಾಧೇಽಗರೀಯಸಿ।।
03029025c ಉಪಕಾರೇಣ ತತ್ತಸ್ಯ ಕ್ಷಂತವ್ಯಮಪರಾಧಿನಃ।

ಹಿಂದೆ ಉಪಕಾರ ಮಾಡಿದವನನ್ನು ಮುಂದೆ ಎಷ್ಟೇ ದೊಡ್ಡ ಅಪರಾಧವನ್ನೆಸಗಿರಲಿ, ಅವನು ಮಾಡಿದ ಉಪಕಾರಕ್ಕಾಗಿ ಆ ಅಪರಾಧಿಯನ್ನು ಕ್ಷಮಿಸಬೇಕು.

03029026a ಅಬುದ್ಧಿಮಾಶ್ರಿತಾನಾಂ ಚ ಕ್ಷಂತವ್ಯಮಪರಾಧಿನಾಂ।।
03029026c ನ ಹಿ ಸರ್ವತ್ರ ಪಾಂಡಿತ್ಯಂ ಸುಲಭಂ ಪುರುಷೇಣ ವೈ।

ತನ್ನ ಆಶ್ರಯದಲ್ಲಿರುವರು ತಿಳುವಳಿಕೆಯಿಲ್ಲದೇ ಅಪರಾಧವನ್ನೆಸಗಿದರೆ ಅವರನ್ನು ಕ್ಷಮಿಸಬೇಕು. ಏಕೆಂದರೆ ಎಲ್ಲ ಪುರುಷರಿಗೂ ಸುಲಭವಾಗಿ ಪಾಂಡಿತ್ಯವು ದೊರೆಯುವುದಿಲ್ಲ.

03029027a ಅಥ ಚೇದ್ಬುದ್ಧಿಜಂ ಕೃತ್ವಾ ಬ್ರೂಯುಸ್ತೇ ತದಬುದ್ಧಿಜಂ।।
03029027c ಪಾಪಾನ್ಸ್ವಲ್ಪೇಽಪಿ ತಾನ್ ಹನ್ಯಾದಪರಾಧೇ ತಥಾನೃಜೂನ್।

ತಿಳಿದು ಮಾಡಿ ತಿಳಿಯದೇ ಮಾಡಿದೆವೆಂದು ಅಪ್ರಮಾಣಿಕವಾಗಿರವವರನ್ನು, ಪಾಪವು ಎಷ್ಟೇ ಸಣ್ಣದಾಗಿರಲಿ, ಶಿಕ್ಷಿಸಬೇಕು.

03029028a ಸರ್ವಸ್ಯೈಕೋಽಪರಾಧಸ್ತೇ ಕ್ಷಂತವ್ಯಃ ಪ್ರಾಣಿನೋ ಭವೇತ್।।
03029028c ದ್ವಿತೀಯೇ ಸತಿ ವಧ್ಯಸ್ತು ಸ್ವಲ್ಪೇಽಪ್ಯಪಕೃತೇ ಭವೇತ್।

ಮೊದಲನೆಯ ಅಪರಾಧ, ಅದು ಯಾವ ಪ್ರಾಣಿಯದ್ದೇ ಆಗಿರಲಿ, ಅದನ್ನು ಕ್ಷಮಿಸಬೇಕು. ಆದರೆ, ಎರಡನೆಯದನ್ನು, ಎಷ್ಟೇ ಸಣ್ಣದಾಗಿದ್ದರೂ, ಶಿಕ್ಷಿಸಬೇಕು.

03029029a ಅಜಾನತಾ ಭವೇತ್ಕಶ್ಚಿದಪರಾಧಃ ಕೃತೋ ಯದಿ।।
03029029c ಕ್ಷಂತವ್ಯಮೇವ ತಸ್ಯಾಹುಃ ಸುಪರೀಕ್ಷ್ಯ ಪರೀಕ್ಷಯಾ।

ಒಂದುವೇಳೆ ತಿಳಿಯದೇ ಅಪರಾಧವನ್ನು ಮಾಡಿದ್ದರೆ, ಅದನ್ನು ಸರಿಯಾಗಿ ಪರೀಕ್ಷೆಮಾಡಿ, ಅನಂತರವೇ ಕ್ಷಮಿಸಬೇಕು.

03029030a ಮೃದುನಾ ಮಾರ್ದವಂ ಹಂತಿ ಮೃದುನಾ ಹಂತಿ ದಾರುಣಂ।।
03029030c ನಾಸಾಧ್ಯಂ ಮೃದುನಾ ಕಿಂ ಚಿತ್ತಸ್ಮಾತ್ತೀಕ್ಷ್ಣತರೋ ಮೃದುಃ।

ಮೃದುತ್ವದಿಂದ ಮೃದುವಾಗಿರುವವರನ್ನೂ ದಾರುಣವಾಗಿರುವವರನ್ನೂ ಸೋಲಿಸಬಹುದು. ಮೃದುವಾಗಿರುವವರಿಗೆ ಯಾವುದೂ ಅಸಾಧ್ಯವಿಲ್ಲ. ಆದುದರಿಂದ ಮೃದುವಾದ ಮನಸ್ಸು ಅತ್ಯಂತ ತೀಕ್ಷ್ಣವಾದುದು.

03029031a ದೇಶಕಾಲೌ ತು ಸಂಪ್ರೇಕ್ಷ್ಯ ಬಲಾಬಲಮಥಾತ್ಮನಃ।।
03029031c ನಾದೇಶಕಾಲೇ ಕಿಂ ಚಿತ್ಸ್ಯಾದ್ದೇಶಃ ಕಾಲಃ ಪ್ರತೀಕ್ಷ್ಯತೇ।
03029031e ತಥಾ ಲೋಕಭಯಾಚ್ಚೈವ ಕ್ಷಂತವ್ಯಮಪರಾಧಿನಃ।।

ದೇಶ ಮತ್ತು ಕಾಲಗಳೆರಡನ್ನೂ ಮತ್ತು ತನ್ನ ಬಲಾಬಲಗಳನ್ನೂ ನೋಡಿ ನಡೆದುಕೊಳ್ಳಬೇಕು. ದೇಶ ಮತ್ತು ಕಾಲಕ್ಕೆ ಸರಿಯಾಗಿರದ ನಡತೆಯು ಸೋಲುತ್ತದೆ. ಆದುದರಿಂದ ಸರಿಯಾದ ದೇಶ ಮತ್ತು ಸಮಯಕ್ಕೆ ಕಾಯಬೇಕಾಗುತ್ತದೆ. ಹಾಗೆಯೇ ಜನರ ಭಯದಿಂದಾಗಿಯೂ ಓರ್ವ ಅಪರಾಧಿಯನ್ನು ಕ್ಷಮಿಸಬಹುದು.

03029032a ಏತ ಏವಂವಿಧಾಃ ಕಾಲಾಃ ಕ್ಷಮಾಯಾಃ ಪರಿಕೀರ್ತಿತಾಃ।
03029032c ಅತೋಽನ್ಯಥಾನುವರ್ತತ್ಸು ತೇಜಸಃ ಕಾಲ ಉಚ್ಯತೇ।।

ಈ ವಿಧದ ಸಂದರ್ಭಗಳಲ್ಲಿ ಕ್ಷಮಿಸುವುದೇ ಒಳ್ಳೆಯದು ಎಂದು ಹೇಳಿದ್ದಾರೆ. ಇವುಗಳನ್ನು ಬಿಟ್ಟು ಇತರ ಸಂದರ್ಭಗಳಲ್ಲಿ ಸಿಟ್ಟಿನಿಂದ ವರ್ತಿಸಬಹುದು ಎಂದು ಹೇಳಿದ್ದಾರೆ.””

03029033 ದ್ರೌಪದ್ಯುವಾಚ।
03029033a ತದಹಂ ತೇಜಸಃ ಕಾಲಂ ತವ ಮನ್ಯೇ ನರಾಧಿಪ।
03029033c ಧಾರ್ತರಾಷ್ಟ್ರೇಷು ಲುಬ್ಧೇಷು ಸತತಂ ಚಾಪಕಾರಿಷು।।

ದ್ರೌಪದಿಯು ಹೇಳಿದಳು: “ನರಾಧಿಪ! ಆದುದರಿಂದ ಸತತವೂ ಅಪಕಾರಗಳನ್ನೆಸಗುತ್ತಾ ಬಂದಿರುವ ಲುಬ್ಧ ಧಾರ್ತರಾಷ್ಟ್ರರ ಮೇಲೆ ನಿನಗೆ ಸಿಟ್ಟು ಬರುವ ಸಂದರ್ಭವೇ ಬಂದಿದೆ.

03029034a ನ ಹಿ ಕಶ್ಚಿತ್ ಕ್ಷಮಾಕಾಲೋ ವಿದ್ಯತೇಽದ್ಯ ಕುರೂನ್ಪ್ರತಿ।
03029034c ತೇಜಸಶ್ಚಾಗತೇ ಕಾಲೇ ತೇಜ ಉತ್ಸ್ರಷ್ಟುಮರ್ಹಸಿ।।

ಕುರುಗಳ ಕುರಿತು ಕ್ಷಮಾಭಾವದಿಂದಿರುವ ಕಾಲವಿನ್ನು ಎನೂ ಉಳಿದಿಲ್ಲ. ತೇಜಸ್ಸಿನಿಂದ ನಡೆದುಕೊಳ್ಳುವ ಕಾಲವು ಬಂದಾಗ ತೇಜಸ್ಸನ್ನೇ ಬಳಸಬೇಕಾಗುತ್ತದೆ.

03029035a ಮೃದುರ್ಭವತ್ಯವಜ್ಞಾತಸ್ತೀಕ್ಷ್ಣಾದುದ್ವಿಜತೇ ಜನಃ।
03029035c ಕಾಲೇ ಪ್ರಾಪ್ತೇ ದ್ವಯಂ ಹ್ಯೇತದ್ಯೋ ವೇದ ಸ ಮಹೀಪತಿಃ।।

ಮೃದುಸ್ವಭಾವದವರನ್ನು ಗಮನಿಸುವುದಿಲ್ಲ ಮತ್ತು ತೀಕ್ಷ್ಣಬುದ್ಧಿಯವರಿಂದ ಜನರು ದೂರವಿರುತ್ತಾರೆ. ಸಮಯ ಬಂದಾಗ ಎರಡನ್ನೂ ತಿಳಿದವನೇ ಮಹೀಪತಿ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ರೌಪದೀಪರಿತಾಪವಾಕ್ಯೇ ಏಕೋನತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ರೌಪದೀಪರಿತಾಪವಾಕ್ಯದಲ್ಲಿ ಇಪ್ಪತ್ತೊಂಭತ್ತನೆಯ ಅಧ್ಯಾಯವು.