027 ದ್ವೈತವನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 27

ಸಾರ

ಬಕ ದಾಲ್ಭ್ಯನು ಯುಧಿಷ್ಠಿರನಿಗೆ ಬ್ರಾಹ್ಮಣತ್ವ ಮತ್ತು ಕ್ಷತ್ರಿಯತ್ವಗಳ ಮಿಲನದ ಕುರಿತು ಉಪದೇಶಿಸುವುದು (1-25).

03027001 ವೈಶಂಪಾಯನ ಉವಾಚ।
03027001a ವಸತ್ಸ್ವಥ ದ್ವೈತವನೇ ಪಾಂಡವೇಷು ಮಹಾತ್ಮಸು।
03027001c ಅನುಕೀರ್ಣಂ ಮಹಾರಣ್ಯಂ ಬ್ರಾಹ್ಮಣೈಃ ಸಮಪದ್ಯತ।।

ವೈಶಂಪಾಯನನು ಹೇಳಿದನು: “ಮಹಾತ್ಮ ಪಾಂಡವರು ದ್ವೈತವನದಲ್ಲಿ ವಾಸಿಸುತ್ತಿರಲು ಆ ಮಹಾರಣ್ಯವು ಬ್ರಾಹ್ಮಣರ ಗುಂಪಿನಿಂದ ತುಂಬಿಕೊಂಡಿತು.

03027002a ಈರ್ಯಮಾಣೇನ ಸತತಂ ಬ್ರಹ್ಮಘೋಷೇಣ ಸರ್ವತಃ।
03027002c ಬ್ರಹ್ಮಲೋಕಸಮಂ ಪುಣ್ಯಮಾಸೀದ್ದ್ವೈತವನಂ ಸರಃ।।

ಬ್ರಹ್ಮಲೋಕದ ಸಮನಾಗಿದ್ದ ಆ ದ್ವೈತವನ ಸರೋವರವು ಸತತವೂ ಎಲ್ಲಕಡೆಯಿಂದಲೂ ಪುಣ್ಯ ಬ್ರಹ್ಮಘೋಷದ ಶಬ್ಧದ ಗುಂಗಿನಿಂದ ತುಂಬಿಕೊಂಡಿತ್ತು.

03027003a ಯಜುಷಾಮೃಚಾಂ ಚ ಸಾಮ್ನಾಂ ಚ ಗದ್ಯಾನಾಂ ಚೈವ ಸರ್ವಶಃ।
03027003c ಆಸೀದುಚ್ಚಾರ್ಯಮಾಣಾನಾಂ ನಿಸ್ವನೋ ಹೃದಯಂಗಮಃ।।

ಎಲ್ಲೆಡೆಯೂ ಯಜುಷ, ಸುಂದರ ಸಾಮ ಮತ್ತು ಗದ್ಯಗಳ ಉಚ್ಛಾರಣ ಗಾಯನಗಳ ಹೃದಯಂಗಮ ನಿಸ್ವನವು ಕೇಳಿಬರುತ್ತಿತ್ತು.

03027004a ಜ್ಯಾಘೋಷಃ ಪಾಂಡವೇಯಾನಾಂ ಬ್ರಹ್ಮಘೋಷಶ್ಚ ಧೀಮತಾಂ।
03027004c ಸಂಸೃಷ್ಟಂ ಬ್ರಹ್ಮಣಾ ಕ್ಷತ್ರಂ ಭೂಯ ಏವ ವ್ಯರೋಚತ।।

ಪಾಂಡವರ ಧನುಸ್ಸಿನ ಘೋಷ ಮತ್ತು ಧೀಮಂತ ಬ್ರಾಹ್ಮಣರ ಬ್ರಹ್ಮಘೋಷ ಇವೆರಡೂ ಬ್ರಾಹ್ಮಣ ಮತ್ತು ಕ್ಷತ್ರಿಯರ ಸಂಘಟನೆಯಂತೆ ತೋರುತ್ತಿತ್ತು.

03027005a ಅಥಾಬ್ರವೀದ್ಬಕೋ ದಾಲ್ಭ್ಯೋ ಧರ್ಮರಾಜಂ ಯುಧಿಷ್ಠಿರಂ।
03027005c ಸಂಧ್ಯಾಂ ಕೌಂತೇಯಮಾಸೀನಮೃಷಿಭಿಃ ಪರಿವಾರಿತಂ।।

ಆಗ ಸಂಧ್ಯಾಸಮಯದಲ್ಲಿ ಕೌಂತೇಯರನ್ನು ಸುತ್ತುವರೆದು ಋಷಿಗಳು ಕುಳಿತುಕೊಂಡಿರಲು ಬಕ ದಾಲ್ಭ್ಯನು1 ಧರ್ಮರಾಜ ಯುಧಿಷ್ಠಿರನನ್ನು ಉದ್ದೇಶಿಸಿ ಹೇಳಿದನು.

03027006a ಪಶ್ಯ ದ್ವೈತವನೇ ಪಾರ್ಥ ಬ್ರಾಹ್ಮಣಾನಾಂ ತಪಸ್ವಿನಾಂ।
03027006c ಹೋಮವೇಲಾಂ ಕುರುಶ್ರೇಷ್ಠ ಸಂಪ್ರಜ್ವಲಿತಪಾವಕಾಂ।।

“ಪಾರ್ಥ! ಕುರುಶ್ರೇಷ್ಠ! ತಪಸ್ವಿ ಬ್ರಾಹ್ಮಣರ ಉರಿಯುತ್ತಿರುವ ಅಗ್ನಿಯಲ್ಲಿ ಹೋಮಗಳನ್ನು ಮಾಡುವ ವೇಳೆಯು ಪ್ರಾಪ್ತಿಯಾಯಿತು ನೋಡು!

03027007a ಚರಂತಿ ಧರ್ಮಂ ಪುಣ್ಯೇಽಸ್ಮಿಂಸ್ತ್ವಯಾ ಗುಪ್ತಾ ಧೃತವ್ರತಾಃ।
03027007c ಭೃಗವೋಽಂಗಿರಸಶ್ಚೈವ ವಾಸಿಷ್ಠಾಃ ಕಾಶ್ಯಪೈಃ ಸಹ।।
03027008a ಆಗಸ್ತ್ಯಾಶ್ಚ ಮಹಾಭಾಗಾ ಆತ್ರೇಯಾಶ್ಚೋತ್ತಮವ್ರತಾಃ।
03027008c ಸರ್ವಸ್ಯ ಜಗತಃ ಶ್ರೇಷ್ಠಾ ಬ್ರಾಹ್ಮಣಾಃ ಸಂಗತಾಸ್ತ್ವಯಾ।।

ನಿನ್ನ ರಕ್ಷಣೆಗೆಂದು ಧೃತವ್ರತರಾಗಿರುವ ಈ ಭೃಗುಗಳು, ಅಂಗಿರಸರು, ವಾಸಿಷ್ಠರು, ಕಾಶ್ಯಪರು, ಆಗಸ್ತ್ಯರು, ಮಹಾಭಾಗ ಆತ್ರೇಯರು ಇವರೆಲ್ಲ ಉತ್ತಮವ್ರತರು ಜಗತ್ತಿನ ಶ್ರೇಷ್ಠ ಬ್ರಾಹ್ಮಣರು ನಿನ್ನೊಡನೆ ಸೇರಿ ಪುಣ್ಯ ಧರ್ಮಗಳಲ್ಲಿ ನಡೆಯುತ್ತಿದ್ದಾರೆ.

03027009a ಇದಂ ತು ವಚನಂ ಪಾರ್ಥ ಶೃಣ್ವೇಕಾಗ್ರಮನಾ ಮಮ।
03027009c ಭ್ರಾತೃಭಿಃ ಸಹ ಕೌಂತೇಯ ಯತ್ತ್ವಾಂ ವಕ್ಷ್ಯಾಮಿ ಕೌರವ।।

ಪಾರ್ಥ! ಕೌಂತೇಯ! ಕೌರವ! ಈಗ ನಾನು ನಿನಗೆ ಹೇಳುವ ಮಾತುಗಳನ್ನು ಏಕಾಗ್ರಚಿತ್ತನಾಗಿ ನಿನ್ನ ಸಹೋದರರೊಂದಿಗೆ ಕೇಳು.

03027010a ಬ್ರಹ್ಮ ಕ್ಷತ್ರೇಣ ಸಂಸೃಷ್ಟಂ ಕ್ಷತ್ರಂ ಚ ಬ್ರಹ್ಮಣಾ ಸಹ।
03027010c ಉದೀರ್ಣೌ ದಹತಃ ಶತ್ರೂನ್ವನಾನೀವಾಗ್ನಿಮಾರುತೌ।।

ಬ್ರಹ್ಮವು ಕ್ಷಾತ್ರತ್ವವನ್ನು ಸೇರಿ ಕ್ಷಾತ್ರತ್ವ ಮತ್ತು ಬ್ರಾಹ್ಮಣತ್ವ ಎರಡೂ ಒಟ್ಟಿಗೇ ಬೆಂಕಿ ಮತ್ತು ಗಾಳಿ ವನವನ್ನು ಹೇಗೆ ಸುಡುತ್ತವೆಯೋ ಹಾಗೆ ಶತ್ರುಗಳನ್ನು ಸುಟ್ಟುಹಾಕುತ್ತವೆ.

03027011a ನಾಬ್ರಾಹ್ಮಣಸ್ತಾತ ಚಿರಂ ಬುಭೂಷೇದ್ । ಇಚ್ಚನ್ನಿಮಂ ಲೋಕಮಮುಂ ಚ ಜೇತುಂ।।
03027011c ವಿನೀತಧರ್ಮಾರ್ಥಮಪೇತಮೋಹಂ । ಲಬ್ಧ್ವಾ ದ್ವಿಜಂ ನುದತಿ ನೃಪಃ ಸಪತ್ನಾನ್।।

ಮಗೂ! ಈಗಿನ ಮತ್ತು ಮುಂದಿನ ಲೋಕಗಳನ್ನು ಗೆಲ್ಲಲು ಬಯಸುವೆಯಾದರೆ, ಬ್ರಾಹ್ಮಣರನ್ನು ಬಿಟ್ಟು ಇರಲು ಇಚ್ಛಿಸಬೇಡ. ಧರ್ಮಾರ್ಥಗಳನ್ನು ತಿಳಿದು ತನ್ನ ಗೊಂದಲವನ್ನು ತೊಡೆದುಹಾಕಿದ, ವಿನೀತ ದ್ವಿಜರನ್ನು ಪಡೆದು ನೃಪನು ತನ್ನ ಸ್ಪರ್ಧಿಗಳನ್ನು (ಎದುರಾಳಿಗಳನ್ನು) ತೆಗೆದುಹಾಕುತ್ತಾನೆ.

03027012a ಚರನ್ನೈಃಶ್ರೇಯಸಂ ಧರ್ಮಂ ಪ್ರಜಾಪಾಲನಕಾರಿತಂ।
03027012c ನಾಧ್ಯಗಚ್ಚದ್ಬಲಿರ್ಲೋಕೇ ತೀರ್ಥಮನ್ಯತ್ರ ವೈ ದ್ವಿಜಾತ್।।

ಪ್ರಜಾಪಾಲನೆಯಿಂದ ಸಂಪಾದಿಸಿದ ಅತಿ ಶ್ರೀಮಂತ ಮತ್ತು ಧಾರ್ಮಿಕ ಬಲಿಯು ಲೋಕದಲ್ಲಿ ದ್ವಿಜರಲ್ಲದೇ ಬೇರೆ ಯಾರದ್ದೂ ಮೊರೆ ಹೋಗಲಿಲ್ಲ.

03027013a ಅನೂನಮಾಸೀದಸುರಸ್ಯ ಕಾಮೈರ್ । ವೈರೋಚನೇಃ ಶ್ರೀರಪಿ ಚಾಕ್ಷಯಾಸೀತ್।।
03027013c ಲಬ್ಧ್ವಾ ಮಹೀಂ ಬ್ರಾಹ್ಮಣಸಂಪ್ರಯೋಗಾತ್ । ತೇಷ್ವಾಚರನ್ದುಷ್ಟಮತೋ ವ್ಯನಶ್ಯತ್।।

ವಿರೋಚನನ ಅಸುರ ಮಗನಿಗೆ ಕಾಮ ಸುಖದ ಕೊರತೆಯಿರಲಿಲ್ಲ ಮತ್ತು ಸಂಪತ್ತು ಕಡಿಮೆಯಾಯಿತೆಂದಿರಲಿಲ್ಲ. ಬ್ರಾಹ್ಮಣರನ್ನು ಕೂಡಿಕೊಂಡು ಭೂಮಿಯನ್ನು ಪಡೆದುಕೊಂಡನು ಮತ್ತು ಅವರಿಗೆ ಕೆಟ್ಟದನ್ನು ಮಾಡಿದಾಗಲೆಲ್ಲಾ ದುಃಖಕ್ಕೊಳಗಾದನು.

03027014a ನಾಬ್ರಾಹ್ಮಣಂ ಭೂಮಿರಿಯಂ ಸಭೂತಿರ್ । ವರ್ಣಂ ದ್ವಿತೀಯಂ ಭಜತೇ ಚಿರಾಯ।।
03027014c ಸಮುದ್ರನೇಮಿರ್ನಮತೇ ತು ತಸ್ಮೈ । ಯಂ ಬ್ರಾಹ್ಮಣಃ ಶಾಸ್ತಿ ನಯೈರ್ವಿನೀತಃ।।

ಬ್ರಾಹ್ಮಣರನ್ನು ಸತ್ಕರಿಸದೇ ಇದ್ದರೆ ಈ ಭೂಮಿಯು ದ್ವಿತೀಯವರ್ಣದವರನ್ನು (ಕ್ಷತ್ರಿಯರನ್ನು) ಬಹಳ ಸಮಯದವರೆಗೆ ಪ್ರೀತಿಸುವುದಿಲ್ಲ. ಆದರೆ ನಯ-ವಿನೀತಿಯಿಂದ ಕೂಡಿದ ಬ್ರಾಹ್ಮಣನು ಯಾರಿಗೆ ಕಲಿಸುತ್ತಾನೋ ಅವನಿಗೆ ಸಮುದ್ರದಿಂದ ಸುತ್ತುವರೆದ ಈ ಭೂಮಿಯು ತಲೆಬಾಗುತ್ತದೆ.

03027015a ಕುಂಜರಸ್ಯೇವ ಸಂಗ್ರಾಮೇಽಪರಿಗೃಹ್ಯಾಂಕುಶಗ್ರಹಂ।
03027015c ಬ್ರಾಹ್ಮಣೈರ್ವಿಪ್ರಹೀಣಸ್ಯ ಕ್ಷತ್ರಸ್ಯ ಕ್ಷೀಯತೇ ಬಲಂ।।

ಸಂಗ್ರಾಮದಲ್ಲಿ ಮಾವುತನ ನಿಯಂತ್ರಣವನ್ನು ಕಳೆದುಕೊಂಡ ಆನೆಯ ಸಾಮರ್ಥ್ಯವು ಹೇಗೋ ಹಾಗೆ ಬ್ರಾಹ್ಮಣರನ್ನು ಕಳೆದುಕೊಂಡ ಕ್ಷತ್ರಿಯನ ಬಲವು ಕ್ಷೀಣಿಸುತ್ತದೆ.

03027016a ಬ್ರಹ್ಮಣ್ಯನುಪಮಾ ದೃಷ್ಟಿಃ ಕ್ಷಾತ್ರಮಪ್ರತಿಮಂ ಬಲಂ।
03027016c ತೌ ಯದಾ ಚರತಃ ಸಾರ್ಧಮಥಜ್ ಲೋಕಃ ಪ್ರಸೀದತಿ।।

ಬ್ರಾಹ್ಮಣರಲ್ಲಿ ಅನುಪಮ ದೃಷ್ಟಿಯಿದೆ ಮತ್ತು ಕ್ಷತ್ರಿಯರಲ್ಲಿ ಅಪ್ರತಿಮ ಬಲವಿದೆ. ಇವರಿಬ್ಬರೂ ಒಟ್ಟಿಗೇ ನಡೆದಾಗ ಲೋಕವು ಸಂತೋಷಗೊಳ್ಳುತ್ತದೆ.

03027017a ಯಥಾ ಹಿ ಸುಮಹಾನಗ್ನಿಃ ಕಕ್ಷಂ ದಹತಿ ಸಾನಿಲಃ।
03027017c ತಥಾ ದಹತಿ ರಾಜನ್ಯೋ ಬ್ರಾಹ್ಮಣೇನ ಸಮಂ ರಿಪೂನ್।।

ಮಹಾ ಅಗ್ನಿಯು ಗಾಳಿಯು ಬೀಸುವುದರಿಂದ ಹೇಗೆ ವನವನ್ನು ಸುಟ್ಟುಹಾಕುತ್ತದೆಯೋ ಹಾಗೆ ಬ್ರಾಹ್ಮಣರು ಜೊತೆಗಿರುವ ರಾಜನು ರಿಪುಗಳನ್ನು ಸುಟ್ಟುಹಾಕುತ್ತಾನೆ.

03027018a ಬ್ರಾಹ್ಮಣೇಭ್ಯೋಽಥ ಮೇಧಾವೀ ಬುದ್ಧಿಪರ್ಯೇಷಣಂ ಚರೇತ್।
03027018c ಅಲಬ್ಧಸ್ಯ ಚ ಲಾಭಾಯ ಲಬ್ಧಸ್ಯ ಚ ವಿವೃದ್ಧಯೇ।।

ಇಲ್ಲದಿರುವುದನ್ನು ಪಡೆಯಲು ಮತ್ತು ಇದ್ದುದನ್ನು ಹೆಚ್ಚಿಸಿಕೊಳ್ಳಲು ಬುದ್ಧಿವಂತನು ಬ್ರಾಹ್ಮಣರ ಸಲಹೆಯನ್ನು ಪಡೆದು ಅದರಂತೆ ನಡೆಯಬೇಕು.

03027019a ಅಲಬ್ಧಲಾಭಾಯ ಚ ಲಬ್ಧವೃದ್ಧಯೇ । ಯಥಾರ್ಹತೀರ್ಥಪ್ರತಿಪಾದನಾಯ।।
03027019c ಯಶಸ್ವಿನಂ ವೇದವಿದಂ ವಿಪಶ್ಚಿತಂ । ಬಹುಶ್ರುತಂ ಬ್ರಾಹ್ಮಣಮೇವ ವಾಸಯ।।

ದೊರೆಯದಿರುವುದನ್ನು ಪಡೆಯಲು, ಪಡೆದುದನ್ನು ವೃದ್ಧಿಗೊಳಿಸಲು, ಮತ್ತು ಸರಿಯಾದ ದಾರಿಯನ್ನು ಹಿಡಿಯಲು ಯಶಸ್ವಿನಿಯೂ, ವೇದವಿದನೂ, ಬಹುಶ್ರುತನೂ, ವಿಪಶ್ಚಿತನೂ ಆದ ಬ್ರಾಹ್ಮಣನೊಂದಿಗೆ ಜೀವಿಸಿಬೇಕು.

03027020a ಬ್ರಾಹ್ಮಣೇಷೂತ್ತಮಾ ವೃತ್ತಿಸ್ತವ ನಿತ್ಯಂ ಯುಧಿಷ್ಠಿರ।
03027020c ತೇನ ತೇ ಸರ್ವಲೋಕೇಷು ದೀಪ್ಯತೇ ಪ್ರಥಿತಂ ಯಶಃ।।

ಯುಧಿಷ್ಠಿರ! ಬ್ರಾಹ್ಮಣರೊಂದಿಗೆ ನಿನ್ನ ನಡತೆಯು ಯಾವಾಗಲೂ ಉತ್ತಮವಾಗಿಯೇ ಇದೆ. ಆದುದರಿಂದ ನಿನ್ನ ಯಶಸ್ಸು ಸರ್ವಲೋಕಗಳಲ್ಲಿಯೂ ಬೆಳಗುತ್ತದೆ.”

03027021a ತತಸ್ತೇ ಬ್ರಾಹ್ಮಣಾಃ ಸರ್ವೇ ಬಕಂ ದಾಲ್ಭ್ಯಮಪೂಜಯನ್।
03027021c ಯುಧಿಷ್ಠಿರೇ ಸ್ತೂಯಮಾನೇ ಭೂಯಃ ಸುಮನಸೋಽಭವನ್।।

ಅವನು ಈ ರೀತಿ ಯುಧಿಷ್ಠಿರನನ್ನು ಹೊಗಳಲು ಸಂತೋಷಗೊಂಡ ಬ್ರಾಹ್ಮಣರೆಲ್ಲರೂ ಬಕ ದಾಲ್ಭ್ಯನನ್ನು ಹೊಗಳಿದರು.

03027022a ದ್ವೈಪಾಯನೋ ನಾರದಶ್ಚ ಜಾಮದಗ್ನ್ಯಃ ಪೃಥುಶ್ರವಾಃ।
03027022c ಇಂದ್ರದ್ಯುಮ್ನೋ ಭಾಲುಕಿಶ್ಚ ಕೃತಚೇತಾಃ ಸಹಸ್ರಪಾತ್।।
03027023a ಕರ್ಣಶ್ರವಾಶ್ಚ ಮುಂಜಶ್ಚ ಲವಣಾಶ್ವಶ್ಚ ಕಾಶ್ಯಪಃ।
03027023c ಹಾರೀತಃ ಸ್ಥೂಣಕರ್ಣಶ್ಚ ಅಗ್ನಿವೇಶ್ಯೋಽಥ ಶೌನಕಃ।।
03027024a ಋತವಾಕ್ ಚ ಸುವಾಕ್ ಚೈವ ಬೃಹದಶ್ವ ಋತಾವಸುಃ।
03027024c ಊರ್ಧ್ವರೇತಾ ವೃಷಾಮಿತ್ರಃ ಸುಹೋತ್ರೋ ಹೋತ್ರವಾಹನಃ।।
03027025a ಏತೇ ಚಾನ್ಯೇ ಚ ಬಹವೋ ಬ್ರಾಹ್ಮಣಾಃ ಸಂಶಿತವ್ರತಾಃ।
03027025c ಅಜಾತಶತ್ರುಮಾನರ್ಚುಃ ಪುರಂದರಮಿವರ್ಷಯಃ।।

ದ್ವೈಪಾಯನ, ನಾರದ, ಜಾಮದಗ್ನ್ಯ, ಪೃಥುಶ್ರವ, ಇಂದ್ರದ್ಯುಮ್ನ, ಭಾಲುಕಿ, ಕೃತಚೇತ, ಸಹಸ್ರಪಾದ, ಕರ್ಣಶ್ರವ, ಮುಂಜ, ಅಗ್ನಿವೇಶ, ಶೌನಕ, ಋತ್ವಿಕ, ಸುವಾಕ್, ಬೃಹದಶ್ವ, ಋತಾವಸು, ಊರ್ಧ್ವರೇತ, ವೃಷಾಮಿತ್ರ, ಸುಹೋತ್ರ, ಹೋತ್ರವಾಹನ, ಇವರು ಮತ್ತು ಇತರ ಬಹಳಷ್ಟು ಸಂಶಿತವ್ರತ ಬ್ರಾಹ್ಮಣ ಋಷಿಗಳು ಪುರಂದರನನ್ನು ಹೇಗೋ ಹಾಗೆ ಆಜಾತಶತ್ರುವನ್ನು ಸತ್ಕರಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ವೈತವನಪ್ರವೇಶೇ ಸಪ್ತವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ವೈತವನಪ್ರವೇಶದಲ್ಲಿ ಇಪ್ಪತ್ತೇಳನೆಯ ಅಧ್ಯಾಯವು.


  1. ಬಕ ದಾಲ್ಭ್ಯನ ಚರಿತ್ರೆಯು ಮುಂದೆ ಶಲ್ಯಪರ್ವದ ಅಧ್ಯಾಯ 40 ರಲ್ಲಿ ಬರುತ್ತದೆ. ↩︎