026 ದ್ವೈತವನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 26

ಸಾರ

ಸರಸ್ವತೀ ತೀರದ ಶಾಲವನದಲ್ಲಿ ವಾಸಿಸುತ್ತಿರುವಾಗ ಯಧಿಷ್ಠಿರನನ್ನು ಕಾಣಲು ಮುನಿ ಮಾರ್ಕಂಡೇಯನು ಆಗಮಿಸಿದ್ದುದು (1-4). ಮುನಿಯು ಪಾಂಡವರನ್ನು ನೋಡಿ ಮುನಿಯು ಮುಗುಳ್ನಕ್ಕಿದುದು (5); ಯುಧಿಷ್ಠಿರನು ಕಾರಣವನ್ನು ಕೇಳಿದುದು (6). ಶ್ರೀರಾಮನನ್ನು ನೆನಪಿಸಿಕೊಂಡು ಮುಗುಳ್ನಕ್ಕೆನೆಂದೂ, ಬಲವಿದೆಯೆಂದು ಅಧರ್ಮದಲ್ಲಿ ನಡೆದುಕೊಳ್ಳಬಾರದೆಂದೂ ಮಾರ್ಕಂಡೇಯನು ಹೇಳಿ ಹೊರಟುಹೋದುದು (7-19).

03026001 ವೈಶಂಪಾಯನ ಉವಾಚ।
03026001a ತತ್ಕಾನನಂ ಪ್ರಾಪ್ಯ ನರೇಂದ್ರಪುತ್ರಾಃ । ಸುಖೋಚಿತಾ ವಾಸಮುಪೇತ್ಯ ಕೃಚ್ಚ್ರಂ।।
03026001c ವಿಜಹ್ರುರಿಂದ್ರಪ್ರತಿಮಾಃ ಶಿವೇಷು । ಸರಸ್ವತೀಶಾಲವನೇಷು ತೇಷು।।

ವೈಶಂಪಾಯನನು ಹೇಳಿದನು: “ಹಿಂದೆ ಸುಖಜೀವನಕ್ಕೆ ಹೊಂದಿಕೊಂಡು ಈಗ ಕಷ್ಟಕ್ಕೊಳಗಾದ ಆ ಇಂದ್ರಪ್ರತಿಮ ನರೇಂದ್ರಪುತ್ರರು ಕಾನನವನ್ನು ಸೇರಿ ಮಂಗಳಕರ ಸರಸ್ವತೀ ತೀರದ ಶಾಲವನದಲ್ಲಿ ವಾಸಿಸತೊಡಗಿದರು.

03026002a ಯತೀಂಶ್ಚ ಸರ್ವಾನ್ಸ ಮುನೀಂಶ್ಚ ರಾಜಾ । ತಸ್ಮಿನ್ವನೇ ಮೂಲಫಲೈರುದಗ್ರೈಃ।।
03026002c ದ್ವಿಜಾತಿಮುಖ್ಯಾನೃಷಭಃ ಕುರೂಣಾಂ । ಸಂತರ್ಪಯಾಮಾಸ ಮಹಾನುಭಾವಃ।।

ಆ ವನದಲ್ಲಿ ಕುರುವೃಷಭ ಮಹಾನುಭಾವ ರಾಜನು ಆರಿಸಿದ ಫಲಮೂಲಗಳಿಂದ ಸರ್ವ ಯತಿಗಳನ್ನೂ, ಮುನಿಗಳನ್ನೂ, ದ್ವಿಜಾತಿಪ್ರಮುಖ್ಯರನ್ನೂ ಸತ್ಕರಿಸಿದನು.

03026003a ಇಷ್ಟೀಶ್ಚ ಪಿತ್ರ್ಯಾಣಿ ತಥಾಗ್ರಿಯಾಣಿ । ಮಹಾವನೇ ವಸತಾಂ ಪಾಂಡವಾನಾಂ।।
03026003c ಪುರೋಹಿತಃ ಸರ್ವಸಮೃದ್ಧತೇಜಾಶ್ । ಚಕಾರ ಧೌಮ್ಯಃ ಪಿತೃವತ್ಕುರೂಣಾಂ।।

ಆ ಮಹಾವನದಲ್ಲಿ ಪಾಂಡವರು ವಾಸಿಸುತ್ತಿರುವಾಗ ಸರ್ವಸಮೃದ್ಧ ತೇಜಸ್ವಿ, ಕುರುಗಳಿಗೆ ತಂದೆಯಂತಿದ್ದ ಪುರೋಹಿತ ಧೌಮ್ಯನು ಪಿತೃಕಾರ್ಯಗಳನ್ನೂ, ಹೋಮಗಳನ್ನೂ, ಅಗ್ರಿಯಾಣಿಗಳನ್ನೂ ಮಾಡಿಸಿದನು.

03026004a ಅಪೇತ್ಯ ರಾಷ್ಟ್ರಾದ್ವಸತಾಂ ತು ತೇಷಾಂ । ಋಷಿಃ ಪುರಾಣೋಽತಿಥಿರಾಜಗಾಮ।।
03026004c ತಮಾಶ್ರಮಂ ತೀವ್ರಸಮೃದ್ಧತೇಜಾ । ಮಾರ್ಕಂಡೇಯಃ ಶ್ರೀಮತಾಂ ಪಾಂಡವಾನಾಂ।।

ಅವರು ಹೀಗೆ ರಾಷ್ಟ್ರದಿಂದ ಹೊರಗೆ ವಾಸಿಸುತ್ತಿರಲು ಶ್ರೀಮತ ಪಾಂಡವರಿಗೆ ಅತಿಥಿಯಾಗಿ ಆ ಆಶ್ರಮಕ್ಕೆ ತೀವ್ರ ಸಮೃದ್ಧ ತೇಜಸ್ವಿ ಪುರಾತನ ಋಷಿ ಮಾರ್ಕಂಡೇಯನು ಆಗಮಿಸಿದನು.

03026005a ಸ ಸರ್ವವಿದ್ದ್ರೌಪದೀಂ ಪ್ರೇಕ್ಷ್ಯ ಕೃಷ್ಣಾಂ । ಯುಧಿಷ್ಠಿರಂ ಭೀಮಸೇನಾರ್ಜುನೌ ಚ।।
03026005c ಸಂಸ್ಮೃತ್ಯ ರಾಮಂ ಮನಸಾ ಮಹಾತ್ಮಾ । ತಪಸ್ವಿಮಧ್ಯೇಽಸ್ಮಯತಾಮಿತೌಜಾಃ।।

ಆ ಸರ್ವವೇದವಿದುವು ದ್ರೌಪದಿ ಕೃಷ್ಣೆಯನ್ನು, ಯುಧಿಷ್ಠಿರ, ಭೀಮಸೇನ ಮತ್ತು ಅರ್ಜುನರನ್ನು ನೋಡಿ ಮಹಾತ್ಮ ರಾಮನನ್ನು ಮನಸ್ಸಿನಲ್ಲಿಯೇ ನೆನೆದುಕೊಂಡು ಆ ಅಮಿತೌಜಸ ತಪಸ್ವಿಗಳ ಮಧ್ಯೆ ಮುಗುಳ್ನಕ್ಕನು.

03026006a ತಂ ಧರ್ಮರಾಜೋ ವಿಮನಾ ಇವಾಬ್ರವೀತ್ । ಸರ್ವೇ ಹ್ರಿಯಾ ಸಂತಿ ತಪಸ್ವಿನೋಽಮೀ।।
03026006c ಭವಾನಿದಂ ಕಿಂ ಸ್ಮಯತೀವ ಹೃಷ್ಟಸ್ । ತಪಸ್ವಿನಾಂ ಪಶ್ಯತಾಂ ಮಾಮುದೀಕ್ಷ್ಯ।।

ಮನಸ್ಸು ಕುಂದಿದ ಧರ್ಮರಾಜನು ಹೇಳಿದನು: “ಇಲ್ಲಿರುವ ಎಲ್ಲ ತಪಸ್ವಿಗಳೂ ನಾಚಿಕೆಯಿಂದ ಇದ್ದಾರೆ. ಇತರರ ಎದುರಿನಲ್ಲಿ, ನನ್ನನ್ನು ನೋಡುವಾಗ ಸಂತೋಷಗೊಂಡವನಂತೆ ನೀನು ಏಕೆ ಮುಗುಳ್ನಗುತ್ತಿರುವೆ?”

03026007 ಮಾರ್ಕಂಡೇಯ ಉವಾಚ।
03026007a ನ ತಾತ ಹೃಷ್ಯಾಮಿ ನ ಚ ಸ್ಮಯಾಮಿ । ಪ್ರಹರ್ಷಜೋ ಮಾಂ ಭಜತೇ ನ ದರ್ಪಃ।।
03026007c ತವಾಪದಂ ತ್ವದ್ಯ ಸಮೀಕ್ಷ್ಯ ರಾಮಂ । ಸತ್ಯವ್ರತಂ ದಾಶರಥಿಂ ಸ್ಮರಾಮಿ।।

ಮಾರ್ಕಂಡೇಯನು ಹೇಳಿದನು: “ಮಗೂ! ನಾನು ಸಂತೋಷಗೊಳ್ಳಲೂ ಇಲ್ಲ, ನಾನು ನಗುತ್ತಲೂ ಇಲ್ಲ. ನನ್ನನ್ನು ಹೊಗಳಿಕೊಳ್ಳುವುದರಿಂದ ಅಥವಾ ದರ್ಪದಿಂದ ಈ ಹರ್ಷವು ಹುಟ್ಟಲಿಲ್ಲ. ಇಂದು ನಿನ್ನ ದುಃಖವನ್ನು ಕಂಡು ನನಗೆ ಸತ್ಯವತ ಧಾಶರಥಿ ರಾಮನ ನೆನಪಾಯಿತಷ್ಟೇ.

03026008a ಸ ಚಾಪಿ ರಾಜಾ ಸಹ ಲಕ್ಷ್ಮಣೇನ । ವನೇ ನಿವಾಸಂ ಪಿತುರೇವ ಶಾಸನಾತ್।।
03026008c ಧನ್ವೀ ಚರನ್ಪಾರ್ಥ ಪುರಾ ಮಯೈವ । ದೃಷ್ಟೋ ಗಿರೇರೃಷ್ಯಮೂಕಸ್ಯ ಸಾನೌ।।

ಪಾರ್ಥ! ಹಿಂದೆ ಆ ರಾಜನೂ ಕೂಡ ಲಕ್ಷ್ಮಣನೊಂದಿಗೆ ತಂದೆಯ ಆಜ್ಞೆಯಂತೆ ವನದಲ್ಲಿ ವಾಸಿಸಿ, ಧನ್ನುಸ್ಸನ್ನು ಹಿಡಿದು ಸಂಚರಿಸಿಸುತ್ತಿರುವಾಗ ನಾನು ಅವನನ್ನು ಗಿರಿ ಋಷ್ಯಮೂಕದಲ್ಲಿ ಕಂಡಿದ್ದೆ.

03026009a ಸಹಸ್ರನೇತ್ರಪ್ರತಿಮೋ ಮಹಾತ್ಮಾ । ಮಯಸ್ಯ ಜೇತ ನಮುಚೇಶ್ಚ ಹಂತಾ।।
03026009c ಪಿತುರ್ನಿದೇಶಾದನಘಃ ಸ್ವಧರ್ಮಂ । ವನೇ ವಾಸಂ ದಾಶರಥಿಶ್ಚಕಾರ।।

ಮಯನನ್ನು ಗೆದ್ದ ಮತ್ತು ನಮೂಚಿಯನ್ನು ಸಂಹರಿಸಿದ ಸಹಸ್ರನೇತ್ರನ ಸರಿಸಾಟಿಯಾದ ಆ ಮಹಾತ್ಮ ಅನಘ ದಾಶರಥಿಯು ತಂದೆಯ ನಿರ್ದೇಶನದಂತೆ ವನವಾಸವನ್ನು ಮಾಡಿ ಸ್ವಧರ್ಮದಂತೆ ನಡೆದುಕೊಂಡನು.

03026010a ಸ ಚಾಪಿ ಶಕ್ರಸ್ಯ ಸಮಪ್ರಭಾವೋ । ಮಹಾನುಭಾವಃ ಸಮರೇಷ್ವಜೇಯಃ।।
03026010c ವಿಹಾಯ ಭೋಗಾನಚರದ್ವನೇಷು । ನೇಶೇ ಬಲಸ್ಯೇತಿ ಚರೇದಧರ್ಮಂ।।

ಪ್ರಭಾವದಲ್ಲಿ ಶಕ್ರನಿಗೆ ಸರಿಸಮನಾದ, ಸಮರದಲ್ಲಿ ಅಜೇಯನಾದ ಆ ಮಹಾನುಭಾವನೂ ಕೂಡ ಭೋಗಗಳನ್ನು ತೊರೆದು ವನದಲ್ಲಿ ಸಂಚರಿಸಿದನು. ನನ್ನಲ್ಲಿ ಬಲವಿದೆಯೆಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.

03026011a ನೃಪಾಶ್ಚ ನಾಭಾಗಭಗೀರಥಾದಯೋ । ಮಹೀಮಿಮಾಂ ಸಾಗರಾಂತಾಂ ವಿಜಿತ್ಯ।।
03026011c ಸತ್ಯೇನ ತೇಽಪ್ಯಜಯಂಸ್ತಾತ ಲೋಕಾನ್ । ನೇಶೇ ಬಲಸ್ಯೇತಿ ಚರೇದಧರ್ಮಂ।।

ಮಗೂ! ನಾಭಾಗ, ಭಗೀರಥ ಮೊದಲಾದ ನೃಪರೂ ಕೂಡ ಸಾಗರಾಂತದವರೆಗಿನ ಈ ಭೂಮಿಯನ್ನು ಮತ್ತು ನಂತರ ಲೋಕಗಳನ್ನು ಸತ್ಯದಿಂದಲೇ ಗೆದ್ದರು. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.

03026012a ಅಲರ್ಕಮಾಹುರ್ನರವರ್ಯ ಸಂತಂ । ಸತ್ಯವ್ರತಂ ಕಾಶಿಕರೂಷರಾಜಂ।।
03026012c ವಿಹಾಯ ರಾಷ್ಟ್ರಾಣಿ ವಸೂನಿ ಚೈವ । ನೇಶೇ ಬಲಸ್ಯೇತಿ ಚರೇದಧರ್ಮಂ।।

ನರವರ್ಯ! ಸಂತ ಸತ್ಯವ್ರತ ಕಾಶಿಕರೂಷಗಳ ರಾಜನು ರಾಷ್ಟ್ರ ಮತ್ತು ಸಂಪತ್ತನ್ನು ತೊರೆದುದಕ್ಕೆ ಅಲರ್ಕನೆಂದು ಕರೆಯಲ್ಪಡುತ್ತಾನೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.

03026013a ಧಾತ್ರಾ ವಿಧಿರ್ಯೋ ವಿಹಿತಃ ಪುರಾಣಸ್ । ತಂ ಪೂಜಯಂತೋ ನರವರ್ಯ ಸಂತಃ।।
03026013c ಸಪ್ತರ್ಷಯಃ ಪಾರ್ಥ ದಿವಿ ಪ್ರಭಾಂತಿ । ನೇಶೇ ಬಲಸ್ಯೇತಿ ಚರೇದಧರ್ಮಂ।।

ಪಾರ್ಥ! ನರವರ್ಯ! ಹಿಂದೆ ಧಾತ್ರನು ನಿಶ್ಚಯಿಸಿದ್ದ ವಿಧಿಯನ್ನು ಗೌರವಿಸಿದ ಸಂತ ಸಪ್ತ ಋಷಿಗಳು ಆಕಾಶದಲ್ಲಿ ಹೊಳೆಯುತ್ತಾರೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.

03026014a ಮಹಾಬಲಾನ್ಪರ್ವತಕೂಟಮಾತ್ರಾನ್ । ವಿಷಾಣಿನಃ ಪಶ್ಯ ಗಜಾನ್ನರೇಂದ್ರ।।
03026014c ಸ್ಥಿತಾನ್ನಿದೇಶೇ ನರವರ್ಯ ಧಾತುರ್ । ನೇಶೇ ಬಲಸ್ಯೇತಿ ಚರೇದಧರ್ಮಂ।।

ರಾಜನ್! ಪರ್ವತ ಶಿಖರಗಳಂತೆ ಇರುವ, ಮಹಾಬಲಶಾಲಿಗಳಾಗಿದ್ದರೂ, ಧಾತ್ರುವಿನ ನಿಯಮಗಳನ್ನು ಪಾಲಿಸುವ ಆನೆಗಳನ್ನು ನೋಡು. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.

03026015a ಸರ್ವಾಣಿ ಭೂತಾನಿ ನರೇಂದ್ರ ಪಶ್ಯ । ಯಥಾ ಯಥಾವದ್ವಿಹಿತಂ ವಿಧಾತ್ರಾ।।
03026015c ಸ್ವಯೋನಿತಸ್ತತ್ಕುರುತೇ ಪ್ರಭಾವಾನ್ । ನೇಶೇ ಬಲಸ್ಯೇತಿ ಚರೇದಧರ್ಮಂ।।

ನರೇಂದ್ರ! ಸರ್ವ ಭೂತಗಳನ್ನೂ ನೋಡು. ವಿಧಾತ್ರನು ಮಾಡಿಟ್ಟ ನಿಯಮಗಳಂತೆ ಪ್ರಭಾವಶಾಲಿಗಳಾಗಿದ್ದರೂ ಸ್ವಯಂ ನಿಯಂತ್ರಣದಿಂದ ನಡೆಯುತ್ತಿವೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.

03026016a ಸತ್ಯೇನ ಧರ್ಮೇಣ ಯಥಾರ್ಹವೃತ್ತ್ಯಾ । ಹ್ರಿಯಾ ತಥಾ ಸರ್ವಭೂತಾನ್ಯತೀತ್ಯ।।
03026016c ಯಶಶ್ಚ ತೇಜಶ್ಚ ತವಾಪಿ ದೀಪ್ತಂ । ವಿಭಾವಸೋರ್ಭಾಸ್ಕರಸ್ಯೇವ ಪಾರ್ಥ।।

ಪಾರ್ಥ! ಸತ್ಯದಿಂದ, ಧರ್ಮದಿಂದ, ಯಥಾರ್ಹವಾಗಿ ನಡೆದುಕೊಳ್ಳುತ್ತಾ, ವಿನಯತೆಯಿಂದ ನೀನೂ ಕೂಡ ಸರ್ವಭೂತಗಳನ್ನೂ ಮೀರಿಸಿ ಯಶದಲ್ಲಿ, ತೇಜಸ್ಸಿನಲ್ಲಿ ವಿಭಾವಸು ಭಾಸ್ಕರನಂತೆ ಬೆಳಗಬಲ್ಲೆ.

03026017a ಯಥಾಪ್ರತಿಜ್ಞಂ ಚ ಮಹಾನುಭಾವ । ಕೃಚ್ಚ್ರಂ ವನೇ ವಾಸಮಿಮಂ ನಿರುಷ್ಯ।।
03026017c ತತಃ ಶ್ರಿಯಂ ತೇಜಸಾ ಸ್ವೇನ ದೀಪ್ತಾಂ । ಆದಾಸ್ಯಸೇ ಪಾರ್ಥಿವ ಕೌರವೇಭ್ಯಃ।।

ಮಹಾನುಭಾವ! ಪ್ರತಿಜ್ಞೆ ಮಾಡಿದ್ದಂತೆ ಈ ಕಷ್ಟಕರ ವನವಾಸವನ್ನು ಸಂಪೂರ್ಣವಾಗಿ ಪೂರೈಸು. ಪಾರ್ಥಿವ! ನಿನ್ನದೇ ತೇಜಸ್ಸಿನಿಂದ ನಂತರ ನೀನು ಕೌರವರಿಂದ ಸಂಪತ್ತನ್ನು ಪಡೆಯುತ್ತೀಯೆ.””

03026018 ವೈಶಂಪಾಯನ ಉವಾಚ।
03026018a ತಮೇವಮುಕ್ತ್ವಾ ವಚನಂ ಮಹರ್ಷಿಸ್ । ತಪಸ್ವಿಮಧ್ಯೇ ಸಹಿತಂ ಸುಹೃದ್ಭಿಃ।।
03026018c ಆಮಂತ್ರ್ಯ ಧೌಮ್ಯಂ ಸಹಿತಾಂಶ್ಚ ಪಾರ್ಥಾಂಸ್ । ತತಃ ಪ್ರತಸ್ಥೇ ದಿಶಮುತ್ತರಾಂ ಸಃ।।

ವೈಶಂಪಾಯನನು ಹೇಳಿದನು: “ತಪಸ್ವಿಗಳ ಮಧ್ಯದಲ್ಲಿ ಸ್ನೇಹಿತರೊಂದಿಗಿದ್ದ ಅವನಿಗೆ ಈ ಮಾತುಗಳನ್ನು ಹೇಳಿದ ಮಹರ್ಷಿಯು ಧೌಮ್ಯ ಮತ್ತು ಪಾರ್ಥರನ್ನು ಬೀಳ್ಕೊಂಡು ಉತ್ತರ ದಿಕ್ಕಿನೆಡೆಗೆ ಹೊರಟುಹೋದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ವೈತವನಪ್ರವೇಶೇ ಷಡ್‌ವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ವೈತವನಪ್ರವೇಶದಲ್ಲಿ ಇಪ್ಪತ್ತಾರನೆಯ ಅಧ್ಯಾಯವು.