ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕೈರಾತ ಪರ್ವ
ಅಧ್ಯಾಯ 25
ಸಾರ
ಪಾಂಡವರು ದ್ವೈತವನವನ್ನು ಪ್ರವೇಶಿಸಿ ನೆಲೆಸಿದ್ದುದು (1-26).
03025001 ವೈಶಂಪಾಯನ ಉವಾಚ।
03025001a ತತಸ್ತೇಷು ಪ್ರಯಾತೇಷು ಕೌಂತೇಯಃ ಸತ್ಯಸಂಗರಃ।
03025001c ಅಭ್ಯಭಾಷತ ಧರ್ಮಾತ್ಮಾ ಭ್ರಾತೄನ್ಸರ್ವಾನ್ಯುಧಿಷ್ಠಿರಃ।।
ವೈಶಂಪಾಯನನು ಹೇಳಿದನು: “ಅವರು ಹೊರಟುಹೋದ ನಂತರ ಸತ್ಯಸಂಗರ, ಧರ್ಮಾತ್ಮ, ಕೌಂತೇಯ ಯುಧಿಷ್ಠಿರನು ತನ್ನ ತಮ್ಮಂದಿರೆಲ್ಲರಿಗೆ ಹೇಳಿದನು:
03025002a ದ್ವಾದಶೇಮಾಃ ಸಮಾಸ್ಮಾಭಿರ್ವಸ್ತವ್ಯಂ ನಿರ್ಜನೇ ವನೇ।
03025002c ಸಮೀಕ್ಷಧ್ವಂ ಮಹಾರಣ್ಯೇ ದೇಶಂ ಬಹುಮೃಗದ್ವಿಜಂ।।
03025003a ಬಹುಪುಷ್ಪಫಲಂ ರಮ್ಯಂ ಶಿವಂ ಪುಣ್ಯಜನೋಚಿತಂ।
03025003c ಯತ್ರೇಮಾಃ ಶರದಃ ಸರ್ವಾಃ ಸುಖಂ ಪ್ರತಿವಸೇಮಹಿ।।
“ಈ ಹನ್ನೆರಡು ವರ್ಷಗಳು ನಾವು ನಿರ್ಜನ ವನದಲ್ಲಿ ವಾಸಿಸಬೇಕು. ಆದುದರಿಂದ ಮಹಾರಣ್ಯದಲ್ಲಿ ಬಹಳಷ್ಟು ಮೃಗಜಿಂಕೆಗಳಿರುವ, ಬಹಳ ಪುಷ್ಪಫಲಗಳಿಂದ ರಮ್ಯವಾಗಿರುವ, ಮಂಗಳಕರ, ಪುಣ್ಯಜನರು ಬರಲು ಉಚಿತವಾದ, ಆರೋಗ್ಯಕರ, ಈ ಎಲ್ಲ ವರ್ಷಗಳೂ ಸುಖಕರವಾಗಿ ವಾಸಮಾಡಬಲ್ಲ ಪ್ರದೇಶವನ್ನು ನೋಡೋಣ.”
03025004a ಏವಮುಕ್ತೇ ಪ್ರತ್ಯುವಾಚ ಧರ್ಮರಾಜಂ ಧನಂಜಯಃ।
03025004c ಗುರುವನ್ಮಾನವಗುರುಂ ಮಾನಯಿತ್ವಾ ಮನಸ್ವಿನಂ।।
ಹೀಗೆ ಹೇಳಿದ ಧರ್ಮರಾಜನಿಗೆ ಧನಂಜಯನು, ಗುರುವಿಗೆ ಹೇಗೋ ಹಾಗೆ ಆ ಮನಸ್ವಿ, ಮಾನವಗುರುವನ್ನು ಗೌರವಿಸಿ ಉತ್ತರಿಸಿದನು.
03025005 ಅರ್ಜುನ ಉವಾಚ।
03025005a ಭವಾನೇವ ಮಹರ್ಷೀಣಾಂ ವೃದ್ಧಾನಾಂ ಪರ್ಯುಪಾಸಿತಾ।
03025005c ಅಜ್ಞಾತಂ ಮಾನುಷೇ ಲೋಕೇ ಭವತೋ ನಾಸ್ತಿ ಕಿಂ ಚನ।।
ಅರ್ಜುನನು ಹೇಳಿದನು: “ನೀನಾದರೋ ಮಹರ್ಷಿಗಳ, ವೃದ್ಧರ ಪಾದಗಳನ್ನು ಪೂಜಿಸಿ ಕಾಲಕಳೆದವನು. ಮಾನುಷ ಲೋಕದಲ್ಲಿ ನಿನಗೆ ತಿಳಿಯದೇ ಇರುವುದು ಏನೂ ಇಲ್ಲ.
03025006a ತ್ವಯಾ ಹ್ಯುಪಾಸಿತಾ ನಿತ್ಯಂ ಬ್ರಾಹ್ಮಣಾ ಭರತರ್ಷಭ।
03025006c ದ್ವೈಪಾಯನಪ್ರಭೃತಯೋ ನಾರದಶ್ಚ ಮಹಾತಪಾಃ।।
03025007a ಯಃ ಸರ್ವಲೋಕದ್ವಾರಾಣಿ ನಿತ್ಯಂ ಸಂಚರತೇ ವಶೀ।
03025007c ದೇವಲೋಕಾದ್ಬ್ರಹ್ಮಲೋಕಂ ಗಂಧರ್ವಾಪ್ಸರಸಾಮಪಿ।।
ಭರತರ್ಷಭ! ನೀನು ನಿತ್ಯವೂ ದ್ವೈಪಾಯನನೇ ಮೊದಲಾದ, ಸರ್ವಲೋಕದ್ವಾರಗಳಿಗೆ - ದೇವಲೋಕದಿಂದ ಬ್ರಹ್ಮಲೋಕ, ಮತ್ತು ಗಂಧರ್ವ-ಅಪ್ಸರ ಲೋಕಗಳಿಗೂ, ನಿತ್ಯವೂ ಸಂಚರಿಸುವ ನಾರದನನ್ನೂ ಸೇರಿ ಮಹಾತಪಸ್ವಿ ಬ್ರಾಹ್ಮಣರ ಉಪಾಸನೆಯನ್ನು ಮಾಡಿದ್ದೀಯೆ.
03025008a ಸರ್ವಾ ಗತೀರ್ವಿಜಾನಾಸಿ ಬ್ರಾಹ್ಮಣಾನಾಂ ನ ಸಂಶಯಃ।
03025008c ಪ್ರಭಾವಾಂಶ್ಚೈವ ವೇತ್ಥ ತ್ವಂ ಸರ್ವೇಷಾಮೇವ ಪಾರ್ಥಿವ।।
ಬ್ರಾಹ್ಮಣರ ಸರ್ವ ಗತಿಯನ್ನು ತಿಳಿದಿದ್ದೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪಾರ್ಥಿವ! ನೀನು ಅವರೆಲ್ಲರ ಪ್ರಭಾವಗಳನ್ನೂ ಕೂಡ ತಿಳಿದಿದ್ದೀಯೆ.
03025009a ತ್ವಮೇವ ರಾಜಂಜಾನಾಸಿ ಶ್ರೇಯಃಕಾರಣಮೇವ ಚ।
03025009c ಯತ್ರೇಚ್ಚಸಿ ಮಹಾರಾಜ ನಿವಾಸಂ ತತ್ರ ಕುರ್ಮಹೇ।।
ರಾಜನ್! ಶ್ರೇಯಕಾರಣವನ್ನು ನೀನೇ ತಿಳಿದಿದ್ದೀಯೆ. ಆದುದರಿಂದ ಮಹಾರಾಜ! ನೀನು ಎಲ್ಲಿ ಬಯಸುತ್ತೀಯೋ ಅಲ್ಲಿಯೇ ನಿವಾಸವನ್ನು ಮಾಡೋಣ.
03025010a ಇದಂ ದ್ವೈತವನಂ ನಾಮ ಸರಃ ಪುಣ್ಯಜನೋಚಿತಂ।
03025010c ಬಹುಪುಷ್ಪಫಲಂ ರಮ್ಯಂ ನಾನಾದ್ವಿಜನಿಷೇವಿತಂ।।
ಇದು ದ್ವೈತವನ ಎಂಬ ಹೆಸರಿನ ಪುಣ್ಯಜನರು ಬರುವ, ಬಹಳಷ್ಟು ಪುಷ್ಪಫಲಗಳಿಂದ ಕೂಡಿ ರಮ್ಯವಾದ, ನಾನಾ ಪಕ್ಷಿಗಣಗಳು ಬರುವ ಸರೋವರ.
03025011a ಅತ್ರೇಮಾ ದ್ವಾದಶ ಸಮಾ ವಿಹರೇಮೇತಿ ರೋಚಯೇ।
03025011c ಯದಿ ತೇಽನುಮತಂ ರಾಜನ್ಕಿಂ ವಾನ್ಯನ್ಮನ್ಯತೇ ಭವಾನ್।।
ರಾಜನ್! ಒಂದುವೇಳೆ ನಿನಗೆ ಅನುಮತಿಯಿದ್ದರೆ ಇಲ್ಲಿಯೇ ಹನ್ನೆರಡು ವರ್ಷಗಳನ್ನು ಕಳೆಯೋಣ ಎಂದು ನನಗನ್ನಿಸುತ್ತದೆ. ಅಥವಾ ನೀನು ಬೇರೆ ಸ್ಥಳವನ್ನು ಯೋಚಿಸಿದ್ದೀಯಾ?”
03025012 ಯುಧಿಷ್ಠಿರ ಉವಾಚ।
03025012a ಮಮಾಪ್ಯೇತನ್ಮತಂ ಪಾರ್ಥ ತ್ವಯಾ ಯತ್ಸಮುದಾಹೃತಂ।
03025012c ಗಚ್ಚಾಮ ಪುಣ್ಯಂ ವಿಖ್ಯಾತಂ ಮಹದ್ದ್ವೈತವನಂ ಸರಃ।।
ಯುಧಿಷ್ಠಿರನು ಹೇಳಿದನು: “ಪಾರ್ಥ! ನೀನು ಹೇಳಿದುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪುಣ್ಯವೂ ವಿಖ್ಯಾತವೂ ಆದ ಮಹಾ ದ್ವೈತವನ ಸರೋವರಕ್ಕೆ ಹೋಗೋಣ.””
03025013 ವೈಶಂಪಾಯನ ಉವಾಚ।
03025013a ತತಸ್ತೇ ಪ್ರಯಯುಃ ಸರ್ವೇ ಪಾಂಡವಾ ಧರ್ಮಚಾರಿಣಃ।
03025013c ಬ್ರಾಹ್ಮಣೈರ್ಬಹುಭಿಃ ಸಾರ್ಧಂ ಪುಣ್ಯಂ ದ್ವೈತವನಂ ಸರಃ।।
ವೈಶಂಪಾಯನನು ಹೇಳಿದನು: “ಅನಂತರ ಧರ್ಮಚಾರಿ ಸರ್ವ ಪಾಂಡವರು ಬಹಳಷ್ಟು ಬ್ರಾಹ್ಮಣರೊಡನೆ ಪುಣ್ಯ ದ್ವೈತವನಕ್ಕೆ ಹೊರಟರು.
03025014a ಬ್ರಾಹ್ಮಣಾಃ ಸಾಗ್ನಿಹೋತ್ರಾಶ್ಚ ತಥೈವ ಚ ನಿರಗ್ನಯಃ।
03025014c ಸ್ವಾಧ್ಯಾಯಿನೋ ಭಿಕ್ಷವಶ್ಚ ಸಜಪಾ ವನವಾಸಿನಃ।।
ಅಗ್ನಿಹೋತ್ರಗಳನ್ನು ಇಟ್ಟ ಬ್ರಾಹ್ಮಣರು, ಅಗ್ನಿಹೋತ್ರವಿಲ್ಲದವರು, ಸ್ವಾಧ್ಯಾಯಿಗಳು, ಭಿಕ್ಷುಗಳು, ಜಪಿಗಳು ಮತ್ತು ವನವಾಸಿಗಳು ಇದ್ದರು.
03025015a ಬಹವೋ ಬ್ರಾಹ್ಮಣಾಸ್ತತ್ರ ಪರಿವವ್ರುರ್ಯುಧಿಷ್ಠಿರಂ।
03025015c ತಪಸ್ವಿನಃ ಸತ್ಯಶೀಲಾಃ ಶತಶಃ ಸಂಶಿತವ್ರತಾಃ।।
ಯುಧಿಷ್ಠಿರನ ಜೊತೆ ಹೋಗುತ್ತಿದ್ದವರಲ್ಲಿ ಬಹಳಷ್ಟು ನೂರು ಬ್ರಾಹ್ಮಣರು, ತಪಸ್ವಿಗಳು, ಸತ್ಯಶೀಲರು ಸಂಶಿತವ್ರತರು ಇದ್ದರು.
03025016a ತೇ ಯಾತ್ವಾ ಪಾಂಡವಾಸ್ತತ್ರ ಬಹುಭಿರ್ಬ್ರಾಹ್ಮಣೈಃ ಸಹ।
03025016c ಪುಣ್ಯಂ ದ್ವೈತವನಂ ರಮ್ಯಂ ವಿವಿಶುರ್ಭರತರ್ಷಭಾಃ।।
ಹೀಗೆ ಬಹಳಷ್ಟು ಬ್ರಾಹ್ಮಣರೊಂದಿಗೆ ಪ್ರಯಾಣಮಾಡಿ ಭರತರ್ಷಭ ಪಾಂಡವರು ಪುಣ್ಯವೂ ರಮ್ಯವೂ ಆದ ದ್ವೈತವನವನ್ನು ಪ್ರವೇಶಿಸಿದರು.
03025017a ತಚ್ಶಾಲತಾಲಾಂರಮಧೂಕನೀಪ । ಕದಂಬಸರ್ಜಾರ್ಜುನಕರ್ಣಿಕಾರೈಃ।।
03025017c ತಪಾತ್ಯಯೇ ಪುಷ್ಪಧರೈರುಪೇತಂ । ಮಹಾವನಂ ರಾಷ್ಟ್ರಪತಿರ್ದದರ್ಶ।।
ಬೇಸಗೆಯ ಕೊನೆಯಾಗಿದ್ದುದರಿಂದ ರಾಷ್ಟ್ರಪತಿಯು ಆ ಮಹಾವನದಲ್ಲಿ ಹೂಗಳನ್ನು ಸುರಿಸುತ್ತಿದ್ದ ಶಾಲ, ಮಾವು, ತಾಳೆ, ಮಧೂಕ, ಕದಂಬ, ಸರ್ಜ, ಅರ್ಜುನ ಮತ್ತು ಮಲ್ಲಿಗೆಯ ಮರಗಳನ್ನು ನೋಡಿದನು.
03025018a ಮಹಾದ್ರುಮಾಣಾಂ ಶಿಖರೇಷು ತಸ್ಥುರ್ । ಮನೋರಮಾಂ ವಾಚಮುದೀರಯಂತಃ।।
03025018c ಮಯೂರದಾತ್ಯೂಹಚಕೋರಸಂಘಾಸ್ । ತಸ್ಮಿನ್ವನೇ ಕಾನನಕೋಕಿಲಾಶ್ಚ।।
ಆ ವನದ ಮಹಾದ್ರುಮಗಳ ತುದಿಯಲ್ಲಿ ಮನೋರಮ ಗಾಯನವನ್ನು ಹಾಡುತ್ತಿದ್ದ ನವಿಲುಗಳು, ಚಕೋರ ಗಣಗಳು, ಕಾನನಕೋಕಿಲಗಳು ಇದ್ದವು.
03025019a ಕರೇಣುಯೂಥೈಃ ಸಹ ಯೂಥಪಾನಾಂ । ಮದೋತ್ಕಟಾನಾಮಚಲಪ್ರಭಾಣಾಂ।।
03025019c ಮಹಾಂತಿ ಯೂಥಾನಿ ಮಹಾದ್ವಿಪಾನಾಂ । ತಸ್ಮಿನ್ವನೇ ರಾಷ್ಟ್ರಪತಿರ್ದದರ್ಶ।।
ಆ ವನದಲ್ಲಿ ರಾಷ್ಟ್ರಪತಿಯು, ಪರ್ವತಗಳಂತೆ ತೋರುತ್ತಿದ್ದ ಮದೋತ್ಕಟ ಸಲಗಗಳನ್ನೊಡಗೂಡಿದ ಅತಿ ದೊಡ್ಡ ಆನೆಯ ಹಿಂಡುಗಳನ್ನು ನೋಡಿದನು.
03025020a ಮನೋರಮಾಂ ಭೋಗವತೀಮುಪೇತ್ಯ । ಧೃತಾತ್ಮನಾಂ ಚೀರಜಟಾಧರಾಣಾಂ।।
03025020c ತಸ್ಮಿನ್ವನೇ ಧರ್ಮಭೃತಾಂ ನಿವಾಸೇ । ದದರ್ಶ ಸಿದ್ಧರ್ಷಿಗಣಾನನೇಕಾನ್।।
ಮನೋರಮೆ ಭೋಗವತಿಯನ್ನು ಸಮೀಪಿಸಿ ಆ ವನದಲ್ಲಿ ವಾಸಿಸುತ್ತಿದ್ದ ಧೃತಾತ್ಮರನ್ನೂ, ಚೀರಜಟಾಧಾರಣಿಗಳನ್ನೂ, ಅನೇಕ ಸಿದ್ಧರ್ಷಿಗಣಗಳನ್ನೂ ನೋಡಿದನು.
03025021a ತತಃ ಸ ಯಾನಾದವರುಹ್ಯ ರಾಜಾ । ಸಭ್ರಾತೃಕಃ ಸಜನಃ ಕಾನನಂ ತತ್।।
03025021c ವಿವೇಶ ಧರ್ಮಾತ್ಮವತಾಂ ವರಿಷ್ಠಸ್ । ತ್ರಿವಿಷ್ಟಪಂ ಶಕ್ರ ಇವಾಮಿತೌಜಾಃ।।
ಯಾನದಿಂದಿಳಿದು ಆ ಧರ್ಮಾತ್ಮವಂತರಲ್ಲಿಯೇ ಶ್ರೇಷ್ಠ ರಾಜನು, ಅಮಿತೌಜಸ ತ್ರಿವಿಷ್ಟಪರೊಂದಿಗೆ ಶಕ್ರನು ಹೇಗೋ ಹಾಗೆ ತಮ್ಮಂದಿರು ಮತ್ತು ತನ್ನ ಜನರ ಜೊತೆ ಆ ಕಾನನವನ್ನು ಪ್ರವೇಶಿಸಿದನು.
03025022a ತಂ ಸತ್ಯಸಂಧಂ ಸಹಿತಾಭಿಪೇತುರ್ । ದಿದೃಕ್ಷವಶ್ಚಾರಣಸಿದ್ಧಸಂಘಾಃ।।
03025022c ವನೌಕಸಶ್ಚಾಪಿ ನರೇಂದ್ರಸಿಂಹಂ । ಮನಸ್ವಿನಂ ಸಂಪರಿವಾರ್ಯ ತಸ್ಥುಃ।।
ಆ ಸತ್ಯಸಂಧ ನರೇಂದ್ರಸಿಂಹನನ್ನು ನೋಡಲು ಕುತೂಹಲದಿಂದ ಚಾರಣ ಸಿದ್ಧರ ಗಣಗಳೂ, ಇತರ ವನವಾಸಿಗಳೂ ಕೆಳಗಿಳಿದು ಆ ಮನಸ್ವಿನಿಯನ್ನು ಸುತ್ತುವರೆದು ನಿಂತರು.
03025023a ಸ ತತ್ರ ಸಿದ್ಧಾನಭಿವಾದ್ಯ ಸರ್ವಾನ್ । ಪ್ರತ್ಯರ್ಚಿತೋ ರಾಜವದ್ದೇವವಚ್ಚ।।
03025023c ವಿವೇಶ ಸರ್ವೈಃ ಸಹಿತೋ ದ್ವಿಜಾಗ್ರ್ಯೈಃ । ಕೃತಾಂಜಲಿರ್ಧರ್ಮಭೃತಾಂ ವರಿಷ್ಠಃ।।
ಅವನು ಅಲ್ಲಿ ಎಲ್ಲ ಸಿದ್ಧರಿಗೂ ಅಭಿವಂದಿಸಿದನು ಮತ್ತು ರಾಜ ಅಥವಾ ದೇವತೆಯಂತೆ ಅವರಿಂದ ಗೌರವಿಸಲ್ಪಟ್ಟನು. ಆ ಧರ್ಮಭೃತರಲ್ಲಿ ವರಿಷ್ಠನು ಸರ್ವ ದ್ವಿಜಾಗ್ರರೊಡನೆ ಅಂಜಲೀ ಬದ್ಧನಾಗಿ ಪ್ರವೇಶಿಸಿದನು.
03025024a ಸ ಪುಣ್ಯಶೀಲಃ ಪಿತೃವನ್ಮಹಾತ್ಮಾ । ತಪಸ್ವಿಭಿರ್ಧರ್ಮಪರೈರುಪೇತ್ಯ।।
03025024c ಪ್ರತ್ಯರ್ಚಿತಃ ಪುಷ್ಪಧರಸ್ಯ ಮೂಲೇ । ಮಹಾದ್ರುಮಸ್ಯೋಪವಿವೇಶ ರಾಜಾ।।
ಆ ಪುಣ್ಯಶೀಲ ಮಹಾತ್ಮನು ತಂದೆಯಂತೆ ಧರ್ಮಪರ ತಪಸ್ವಿಗಳಿಂದ ಸ್ವಾಗತಗೊಂಡನು. ನಂತರ ರಾಜನು ಹೂಗಳಿಂದ ತುಂಬಿದ್ದ ಒಂದು ಮಹಾವೃಕ್ಷದ ಬುಡದಲ್ಲಿ ಕುಳಿತುಕೊಂಡನು.
03025025a ಭೀಮಶ್ಚ ಕೃಷ್ಣಾ ಚ ಧನಂಜಯಶ್ಚ । ಯಮೌ ಚ ತೇ ಚಾನುಚರಾ ನರೇಂದ್ರಂ।।
03025025c ವಿಮುಚ್ಯ ವಾಹಾನವರುಹ್ಯ ಸರ್ವೇ । ತತ್ರೋಪತಸ್ಥುರ್ಭರತಪ್ರಬರ್ಹಾಃ।।
ಭರತಪ್ರಬರ್ಹರಾದ ಭೀಮ, ಕೃಷ್ಣಾ, ಧನಂಜಯ, ಯಮಳರು ಮತ್ತು ಆ ನರೇಂದ್ರನ ಅನುಚರರೆಲ್ಲರೂ ವಾಹನಗಳನ್ನು ಬಿಟ್ಟು ಕೆಳಗಿಳಿದು ಬಂದು ಅಲ್ಲಿ ಕುಳಿತುಕೊಂಡರು.
03025026a ಲತಾವತಾನಾವನತಃ ಸ ಪಾಂಡವೈರ್ । ಮಹಾದ್ರುಮಃ ಪಂಚಭಿರುಗ್ರಧನ್ವಿಭಿಃ।।
03025026c ಬಭೌ ನಿವಾಸೋಪಗತೈರ್ಮಹಾತ್ಮಭಿರ್ । ಮಹಾಗಿರಿರ್ವಾರಣಯೂಥಪೈರಿವ।।
ಕೆಳಗೆ ಇಳಿದಿದ್ದ ಬಳ್ಳಿಗಳನ್ನು ಹೊಂದಿದ್ದ ಆ ಮಹಾಮರವು ಅಲ್ಲಿಗೆ ವಾಸಿಸಲು ಬಂದಿರುವ ಆ ಐವರು ಮಹಾತ್ಮ ಪಾಂಡವ ಉಗ್ರಧನ್ವಿಗಳಿಂದ ಆನೆಗಳ ಹಿಂಡುಗಳನ್ನು ಹೊಂದಿದ್ದ ಮಹಾಗಿರಿಯಂತೆ ತೋರಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ವೈತವನಪ್ರವೇಶೇ ಪಂಚವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ವೈತವನಪ್ರವೇಶದಲ್ಲಿ ಇಪ್ಪತ್ತೈದನೆಯ ಅಧ್ಯಾಯವು.