ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕೈರಾತ ಪರ್ವ
ಅಧ್ಯಾಯ 24
ಸಾರ
ಹಿಂಬಾಲಿಸಿ ಬಂದಿದ್ದ ಪುರಜನರು ದುಃಖದಿಂದ ಪಾಂಡವರನ್ನು ಬೀಳ್ಕೊಟ್ಟು ಹಿಂದಿರುಗಿದುದು (1-16).
03024001 ವೈಶಂಪಾಯನ ಉವಾಚ।
03024001a ತಸ್ಮಿನ್ದಶಾರ್ಹಾಧಿಪತೌ ಪ್ರಯಾತೇ । ಯುಧಿಷ್ಠಿರೋ ಭೀಮಸೇನಾರ್ಜುನೌ ಚ।।
03024001c ಯಮೌ ಚ ಕೃಷ್ಣಾ ಚ ಪುರೋಹಿತಶ್ಚ । ರಥಾನ್ಮಹಾರ್ಹಾನ್ಪರಮಾಶ್ವಯುಕ್ತಾನ್।।
03024002a ಆಸ್ಥಾಯ ವೀರಾಃ ಸಹಿತಾ ವನಾಯ । ಪ್ರತಸ್ಥಿರೇ ಭೂತಪತಿಪ್ರಕಾಶಾಃ।।
03024002c ಹಿರಣ್ಯನಿಷ್ಕಾನ್ವಸನಾನಿ ಗಾಶ್ಚ । ಪ್ರದಾಯ ಶಿಕ್ಷಾಕ್ಷರಮಂತ್ರವಿದ್ಭ್ಯಃ।।
ವೈಶಂಪಾಯನನು ಹೇಳಿದನು: “ದಶಾರ್ಹಾಧಿಪತಿಯು ಹೊರಟುಹೋದ ನಂತರ ಭೂತಪತಿ ಪ್ರಕಾಶ, ವೀರ ಯುಧಿಷ್ಠಿರ, ಭೀಮಸೇನಾರ್ಜುನರು ಮತ್ತು ಯಮಳರು ಕೃಷ್ಣೆ ಮತ್ತು ಪುರೋಹಿತನೊಡನೆ ಪರಮ ಅಶ್ವಗಳಿಂದೊಡಗೂಡಿದ, ಬೆಲೆಬಾಳುವ ರಥವನ್ನೇರಿ, ವನಕ್ಕೆ ಹೊರಟರು. ಹೊರಡುವಾಗ ಶಿಕ್ಷಾಕ್ಷರಮಂತ್ರವಿದ್ಯೆಗಳ ಬ್ರಾಹ್ಮಣರಿಗೆ ಚಿನ್ನದ ನಾಣ್ಯಗಳನ್ನೂ ವಸ್ತ್ರ- ಗೋವುಗಳನ್ನೂ ದಾನವನ್ನಾಗಿ ನೀಡಿದರು.
03024003a ಪ್ರೇಷ್ಯಾಃ ಪುರೋ ವಿಂಶತಿರಾತ್ತಶಸ್ತ್ರಾ । ಧನೂಂಷಿ ವರ್ಮಾಣಿ ಶರಾಂಶ್ಚ ಪೀತಾನ್।।
03024003c ಮೌರ್ವೀಶ್ಚ ಯಂತ್ರಾಣಿ ಚ ಸಾಯಕಾಂಶ್ಚ । ಸರ್ವೇ ಸಮಾದಾಯ ಜಘನ್ಯಮೀಯುಃ।।
ಇಪ್ಪತ್ತು ಶಸ್ತ್ರಧಾರಿಗಳು ಮುಂದೆ ನಡೆದರು ಮತ್ತು ಧನಸ್ಸು, ಕವಚಗಳು, ಲೋಹದ ಬಾಣಗಳು, ಉಪಕರಣಗಳು ಎಲ್ಲವನ್ನೂ ಎತ್ತಿಕೊಂಡು ಹಿಂದೆ ನಡೆದರು.
03024004a ತತಸ್ತು ವಾಸಾಂಸಿ ಚ ರಾಜಪುತ್ರ್ಯಾ । ಧಾತ್ರ್ಯಶ್ಚ ದಾಸ್ಯಶ್ಚ ವಿಭೂಷಣಂ ಚ।।
03024004c ತದಿಂದ್ರಸೇನಸ್ತ್ವರಿತಂ ಪ್ರಗೃಹ್ಯ। ಜಘನ್ಯಮೇವೋಪಯಯೌ ರಥೇನ।।
ಅನಂತರ ಸಾರಥಿ ಇಂದ್ರಸೇನನು ಬೇಗನೇ ರಾಜಪುತ್ರಿಯ ವಸ್ತ್ರಗಳನ್ನು, ದಾಸಿಗಳನ್ನು, ವಿಭೂಷಣಗಳನ್ನು ಒಟ್ಟುಮಾಡಿ ರಥದ ಹಿಂದೆ ತೆಗೆದುಕೊಂಡು ಬಂದನು.
03024005a ತತಃ ಕುರುಶ್ರೇಷ್ಠಮುಪೇತ್ಯ ಪೌರಾಃ। ಪ್ರದಕ್ಷಿಣಂ ಚಕ್ರುರದೀನಸತ್ತ್ವಾಃ।।
03024005c ತಂ ಬ್ರಾಹ್ಮಣಾಶ್ಚಾಭ್ಯವದನ್ಪ್ರಸನ್ನಾ । ಮುಖ್ಯಾಶ್ಚ ಸರ್ವೇ ಕುರುಜಾಂಗಲಾನಾಂ।।
ಪೌರರು ಕುರುಶ್ರೇಷ್ಠನ ಬಳಿ ಹೋದರು ಮತ್ತು ದೀನಸತ್ವರಾಗಿ ಅವನನ್ನು ಪ್ರದಕ್ಷಿಣೆಮಾಡಿದರು. ಬ್ರಾಹ್ಮಣರು ಪ್ರಸನ್ನರಾಗಿ ಅವನನ್ನು ಮತ್ತು ಕುರುಜಂಗಲದ ಮುಖ್ಯರೆಲ್ಲರನ್ನೂ ಅಭಿವಂದಿಸಿದರು.
03024006a ಸ ಚಾಪಿ ತಾನಭ್ಯವದತ್ಪ್ರಸನ್ನಃ। ಸಹೈವ ತೈರ್ಭ್ರಾತೃಭಿರ್ಧರ್ಮರಾಜಃ।।
03024006c ತಸ್ಥೌ ಚ ತತ್ರಾಧಿಪತಿರ್ಮಹಾತ್ಮಾ । ದೃಷ್ಟ್ವಾ ಜನೌಘಂ ಕುರುಜಾಂಗಲಾನಾಂ।।
ಧರ್ಮರಾಜನೂ ಕೂಡ ಪ್ರಸನ್ನನಾಗಿ ತನ್ನ ಭ್ರಾತೃಗಳೊಂದಿಗೆ ಅವರಿಗೆ ಅಭಿವಂದಿಸಿದನು. ಅಲ್ಲಿಯೇ ನಿಂತು ಅಧಿಪತಿ ಮಹಾತ್ಮನು ಕುರುಜಂಗಲದ ಜನರಾಶಿಯನ್ನು ನೋಡಿದನು.
03024007a ಪಿತೇವ ಪುತ್ರೇಷು ಸ ತೇಷು ಭಾವಂ । ಚಕ್ರೇ ಕುರೂಣಾಮೃಷಭೋ ಮಹಾತ್ಮಾ।।
03024007c ತೇ ಚಾಪಿ ತಸ್ಮಿನ್ಭರತಪ್ರಬರ್ಹೇ । ತದಾ ಬಭೂವುಃ ಪಿತರೀವ ಪುತ್ರಾಃ।।
ಆ ಮಹಾತ್ಮ ಕುರುವೃಷಭನು ಒಬ್ಬ ತಂದೆಯು ತನ್ನ ಮಕ್ಕಳಲ್ಲಿ ತೋರಿಸುವ ಭಾವವನ್ನು ತೋರಿಸಿದನು. ಅವರೂ ಕೂಡ ಆ ಭರತಪ್ರಮುಖನಿಗೆ ಪುತ್ರರು ತಂದೆಗೆ ಹೇಗೋ ಹಾಗೆ ಇದ್ದರು.
03024008a ತತಃ ಸಮಾಸಾದ್ಯ ಮಹಾಜನೌಘಾಃ । ಕುರುಪ್ರವೀರಂ ಪರಿವಾರ್ಯ ತಸ್ಥುಃ।।
03024008c ಹಾ ನಾಥ ಹಾ ಧರ್ಮ ಇತಿ ಬ್ರುವಂತೋ। ಹ್ರಿಯಾ ಚ ಸರ್ವೇಽಶ್ರುಮುಖಾ ಬಭೂವುಃ।।
ಅಲ್ಲಿ ಕುರುಪ್ರವೀರನನ್ನು ಸುತ್ತುವರೆದು “ಹಾ ನಾಥ! ಹಾ ಧರ್ಮ!” ಎಂದು ಹೇಳುತ್ತಾ ಅತಿ ದೊಡ್ಡ ಜನಸಂದಣಿಯೇ ಸೇರಿ ನಿಂತಿದ್ದವರ ಎಲ್ಲರ ಮುಖದಲ್ಲಿ ನಾಚಿಕೆ ಮತ್ತು ಕಣ್ಣೀರಿತ್ತು.
03024009a ವರಃ ಕುರೂಣಾಮಧಿಪಃ ಪ್ರಜಾನಾಂ । ಪಿತೇವ ಪುತ್ರಾನಪಹಾಯ ಚಾಸ್ಮಾನ್।।
03024009c ಪೌರಾನಿಮಾಂಜಾನಪದಾಂಶ್ಚ ಸರ್ವಾನ್ । ಹಿತ್ವಾ ಪ್ರಯಾತಃ ಕ್ವ ನು ಧರ್ಮರಾಜಃ।।
“ಕುರುಗಳ ಶ್ರೇಷ್ಠ ಅಧಿಪತಿ! ಪುತ್ರರನ್ನು ತೊರೆದು ಹೋಗುವ ತಂದೆಯಂತೆ ನೀನು ನಮ್ಮನ್ನು ಬಿಟ್ಟು ಹೊರಟು ಹೋಗುತ್ತಿದ್ದೀಯೆ! ನಗರ ಮತ್ತು ಗ್ರಾಮೀಣ ಪ್ರಜೆಗಳನ್ನು ಎಲ್ಲರನ್ನೂ ತೊರೆದು ಧರ್ಮರಾಜ ನೀನು ಎಲ್ಲಿಗೆ ಹೋಗುತ್ತೀಯೆ?
03024010a ಧಿಗ್ಧಾರ್ತರಾಷ್ಟ್ರಂ ಸುನೃಶಂಸಬುದ್ಧಿಂ । ಸಸೌಬಲಂ ಪಾಪಮತಿಂ ಚ ಕರ್ಣಂ।।
03024010c ಅನರ್ಥಮಿಚ್ಚಂತಿ ನರೇಂದ್ರ ಪಾಪಾ । ಯೇ ಧರ್ಮನಿತ್ಯಸ್ಯ ಸತಸ್ತವೋಗ್ರಾಃ।।
ಅತ್ಯಂತ ಕೆಟ್ಟ ಬುದ್ಧಿಯ ಧಾರ್ತರಾಷ್ಟ್ರ, ಜೊತೆಗೆ ಸೌಬಲ, ಮತ್ತು ಪಾಪಮತಿ ಕರ್ಣನಿಗೆ ಧಿಕ್ಕಾರ! ನರೇಂದ್ರ! ಧರ್ಮನಿತ್ಯನಾದ ನಿನಗೆ ಪಾಪವೆಸಗಿದವರು ಅನರ್ಥವನ್ನು ಬಯಸುತ್ತಿದ್ದಾರೆ.
03024011a ಸ್ವಯಂ ನಿವೇಶ್ಯಾಪ್ರತಿಮಂ ಮಹಾತ್ಮಾ । ಪುರಂ ಮಹದ್ದೇವಪುರಪ್ರಕಾಶಂ।।
03024011c ಶತಕ್ರತುಪ್ರಸ್ಥಮಮೋಘಕರ್ಮಾ । ಹಿತ್ವಾ ಪ್ರಯಾತಃ ಕ್ವ ನು ಧರ್ಮರಾಜಃ।।
ಮಹಾತ್ಮ! ಸ್ವಯಂ ನೀನೇ ಈ ಅಪ್ರತಿಮ ನಿವೇಶನವನ್ನು, ದೇವಪುರದಂತೆ ಪ್ರಕಾಶಿತ ಮಹಾ ಪುರವನ್ನು ನಿರ್ಮಿಸಿರುವೆ. ಅಮೋಘವಾಗಿ ನಿರ್ಮಿಸಿರುವ ಈ ಶತಕ್ರತುಪ್ರಸ್ಥವನ್ನು ಬಿಟ್ಟು ಧರ್ಮರಾಜ! ಎಲ್ಲಿಗೆ ಹೋಗುತ್ತಿರುವೆ?
03024012a ಚಕಾರ ಯಾಮಪ್ರತಿಮಾಂ ಮಹಾತ್ಮಾ । ಸಭಾಂ ಮಯೋ ದೇವಸಭಾಪ್ರಕಾಶಾಂ।।
03024012c ತಾಂ ದೇವಗುಪ್ತಾಮಿವ ದೇವಮಾಯಾಂ । ಹಿತ್ವಾ ಪ್ರಯಾತಃ ಕ್ವ ನು ಧರ್ಮರಾಜಃ।।
ದೇವಸಭೆಯ ಪ್ರಕಾಶವನ್ನು ಹೊಂದಿರುವ ಈ ಅಪ್ರತಿಮ ಸಭೆಯನ್ನು ಮಹಾತ್ಮ ಮಯನು ನಿರ್ಮಿಸಿದನು. ಧರ್ಮರಾಜ! ದೇವರಹಸ್ಯದಂತಿರುವ, ದೇವಮಾಯೆಯಂತಿರುವ ಇದನ್ನು ಬಿಟ್ಟು ಎಲ್ಲಿಗೆ ಹೊರಟಿರುವೆ?”
03024013a ತಾನ್ಧರ್ಮಕಾಮಾರ್ಥವಿದುತ್ತಮೌಜಾ । ಬೀಭತ್ಸುರುಚ್ಚೈಃ ಸಹಿತಾನುವಾಚ।।
03024013c ಆದಾಸ್ಯತೇ ವಾಸಮಿಮಂ ನಿರುಷ್ಯ। ವನೇಷು ರಾಜಾ ದ್ವಿಷತಾಂ ಯಶಾಂಸಿ।।
ಧರ್ಮ-ಕಾಮ-ಅರ್ಥಗಳನ್ನು ತಿಳಿದುಕೊಂಡಿದ್ದ, ತೇಜಸ್ವಿ ಬೀಭತ್ಸುವು ಅಲ್ಲಿ ಸೇರಿದ ಅವರಿಗೆ ಉಚ್ಛ ಸ್ವರದಲ್ಲಿ ಹೇಳಿದನು: “ವನದಲ್ಲಿ ವಾಸಮಾಡಿ ರಾಜನು ದ್ವೇಷಿಗಳ ಯಶಸ್ಸನ್ನು ಹಿಂದೆ ತೆಗೆದುಕೊಳ್ಳುತ್ತಾನೆ!
03024014a ದ್ವಿಜಾತಿಮುಖ್ಯಾಃ ಸಹಿತಾಃ ಪೃಥಕ್ಚ । ಭವದ್ಭಿರಾಸಾದ್ಯ ತಪಸ್ವಿನಶ್ಚ।।
03024014c ಪ್ರಸಾದ್ಯ ಧರ್ಮಾರ್ಥವಿದಶ್ಚ ವಾಚ್ಯಾ । ಯಥಾರ್ಥಸಿದ್ಧಿಃ ಪರಮಾ ಭವೇನ್ನಃ।।
ದ್ವಿಜಮುಖ್ಯರೇ! ತಪಸ್ವಿಗಳೇ! ನೀವು ಒಬ್ಬೊಬ್ಬರಾಗಿ ಅಥವಾ ಒಟ್ಟಿಗೇ ನಮ್ಮ ಜೊತೆ ಬಂದು ಧರ್ಮಾರ್ಥಗಳನ್ನು ಹೇಳುವ ಮಾತುಗಳಿಂದ ನಮ್ಮ ಪರಮ ಸಿದ್ಧಿಯು ಹೇಗೆ ಎನ್ನುವುದನ್ನು ಹೇಳಿಕೊಡಿ!”
03024015a ಇತ್ಯೇವಮುಕ್ತೇ ವಚನೇಽರ್ಜುನೇನ । ತೇ ಬ್ರಾಹ್ಮಣಾಃ ಸರ್ವವರ್ಣಾಶ್ಚ ರಾಜನ್।।
03024015c ಮುದಾಭ್ಯನಂದನ್ಸಹಿತಾಶ್ಚ ಚಕ್ರುಃ। ಪ್ರದಕ್ಷಿಣಂ ಧರ್ಮಭೃತಾಂ ವರಿಷ್ಠಂ।।
ರಾಜನ್! ಅರ್ಜುನನು ಈ ಮಾತುಗಳನ್ನು ಹೇಳಲು ಆ ಬ್ರಾಹ್ಮಣರು ಮತ್ತು ಸರ್ವವರ್ಣದವರು ಸಂತೋಷಗೊಂಡರು ಮತ್ತು ಒಟ್ಟಿಗೇ ಆ ಧರ್ಮಭೃತ ವರಿಷ್ಠರನ್ನು ಪ್ರದಕ್ಷಿಣೆ ಮಾಡಿದರು.
03024016a ಆಮಂತ್ರ್ಯ ಪಾರ್ಥಂ ಚ ವೃಕೋದರಂ ಚ । ಧನಂಜಯಂ ಯಾಜ್ಞಸೇನೀಂ ಯಮೌ ಚ।।
03024016c ಪ್ರತಸ್ಥಿರೇ ರಾಷ್ಟ್ರಮಪೇತಹರ್ಷಾ । ಯುಧಿಷ್ಠಿರೇಣಾನುಮತಾ ಯಥಾಸ್ವಂ।।
ಪಾರ್ಥ ವೃಕೋದರ, ಧನಂಜಯ, ಯಾಜ್ಞಸೇನಿ, ಮತ್ತು ಯಮಳರನ್ನು ಬೀಳ್ಕೊಟ್ಟು ಯುಧಿಷ್ಠಿರನಿಂದ ಅನುಮತಿಯನ್ನು ಪಡೆದು, ಸಂತೋಷವನ್ನು ಕಳೆದುಕೊಂಡು ತಮ್ಮ ತಮ್ಮ ಮನೆಗಳಿಗೆ ರಾಷ್ಟ್ರಕ್ಕೆ ತೆರಳಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ವೈತವನಪ್ರವೇಶೇ ಚತುರ್ವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ವೈತವನಪ್ರವೇಶದಲ್ಲಿ ಇಪ್ಪತ್ತ್ನಾಲ್ಕನೆಯ ಅಧ್ಯಾಯವು.