ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕೈರಾತ ಪರ್ವ
ಅಧ್ಯಾಯ 22
ಸಾರ
ಕೃಷ್ಣ-ಶಾಲ್ವರ ಮಾಯಾ ಯುದ್ಧವು ಮುಂದುವರೆದುದು (1-30).
03022001 ವಾಸುದೇವ ಉವಾಚ।
03022001a ಏವಂ ಸ ಪುರುಷವ್ಯಾಘ್ರ ಶಾಲ್ವೋ ರಾಜ್ಞಾಂ ಮಹಾರಿಪುಃ।
03022001c ಯುಧ್ಯಮಾನೋ ಮಯಾ ಸಂಖ್ಯೇ ವಿಯದಭ್ಯಾಗಮತ್ಪುನಃ।।
ವಾಸುದೇವನು ಹೇಳಿದನು: “ಪುರುಷವ್ಯಾಘ್ರ! ಹೀಗೆ ಆ ಮಹಾರಿಪು ಶಾಲ್ವರಾಜನು ನನ್ನೊಡನೆ ಯುದ್ಧಮಾಡುತ್ತಿರಲು ಅವನು ಪುನಃ ಆಕಾಶವನ್ನೇರಿದನು.
03022002a ತತಃ ಶತಘ್ನೀಶ್ಚ ಮಹಾಗದಾಶ್ಚ। ದೀಪ್ತಾಂಶ್ಚ ಶೂಲಾನ್ಮುಸಲಾನಸೀಂಶ್ಚ।।
03022002c ಚಿಕ್ಷೇಪ ರೋಷಾನ್ಮಯಿ ಮಂದಬುದ್ಧಿಃ। ಶಾಲ್ವೋ ಮಹಾರಾಜ ಜಯಾಭಿಕಾಂಕ್ಷೀ।।
ಮಹಾರಾಜ! ಆಗ ವಿಜಯವನ್ನು ಬಯಸುತ್ತಿದ್ದ ಆ ಮಂದಬುದ್ಧಿ ಶಾಲ್ವನು ರೋಷದಿಂದ ನನ್ನ ಮೇಲೆ ಕೊಲ್ಲುವ ನೂರು ಮಹಾ ಗದೆಗಳನ್ನೂ, ಉರಿಯುತ್ತಿರುವ ಶೂಲ-ಮುಸಲ-ಖಡ್ಗಗಳನ್ನು ಎಸೆದನು.
03022003a ತಾನಾಶುಗೈರಾಪತತೋಽಹಮಾಶು। ನಿವಾರ್ಯ ತೂರ್ಣಂ ಖಗಮಾನ್ಖ ಏವ।।
03022003c ದ್ವಿಧಾ ತ್ರಿಧಾ ಚಾಚ್ಚಿನಮಾಶು ಮುಕ್ತೈಸ್। ತತೋಽಂತರಿಕ್ಷೇ ನಿನದೋ ಬಭೂವ।।
ಆಕಾಶದಲ್ಲಿ ಮಿಂಚಿ ಹಾರಿ ನನ್ನ ಕಡೆ ಬಂದು ಬೀಳುತ್ತಿದ್ದ ಅವುಗಳನ್ನು ವೇಗವಾಗಿ ಹೋಗುತ್ತಿದ್ದ ಶರಗಳಿಂದ ತಡೆಹಿಡಿದು ಅಂತರಿಕ್ಷದಲ್ಲಿಯೇ ಎರಡು ಮೂರು ತುಂಡುಗಳನ್ನಾಗಿ ಕತ್ತರಿಸಿದಾಗ ಆಕಾಶದಲ್ಲಿ ದೊಡ್ಡ ತುಮುಲವುಂಟಾಯಿತು.
03022004a ತತಃ ಶತಸಹಸ್ರೇಣ ಶರಾಣಾಂ ನತಪರ್ವಣಾಂ।
03022004c ದಾರುಕಂ ವಾಜಿನಶ್ಚೈವ ರಥಂ ಚ ಸಮವಾಕಿರತ್।।
ಅವನು ನನ್ನ ಮೇಲೆ, ದಾರುಕ-ಕುದುರೆ-ರಥಗಳ ಮೇಲೆ ನೂರಾರು ಸಹಸ್ರಾರು ನುಣುಪಾದ ಬಾಣಗಳನ್ನು ಸುರಿಸಿ ಮುಚ್ಚಿದನು.
03022005a ತತೋ ಮಾಮಬ್ರವೀದ್ವೀರ ದಾರುಕೋ ವಿಹ್ವಲನ್ನಿವ।
03022005c ಸ್ಥಾತವ್ಯಮಿತಿ ತಿಷ್ಠಾಮಿ ಶಾಲ್ವಬಾಣಪ್ರಪೀಡಿತಃ।।
ವೀರ ದಾರುಕನು ವಿಹ್ವಲನಾಗಿ ನನಗೆ ಹೇಳಿದನು: “ಶಾಲ್ವಬಾಣಗಳಿಂದ ಪೀಡಿತನಾಗಿ ನನಗೆ ಸುಧಾರಿಸಿಕೊಳ್ಳಬೇಕಾಗಿದೆ. ಸುಧಾರಿಸಿಕೊಳ್ಳುತ್ತೇನೆ.”
03022006a ಇತಿ ತಸ್ಯ ನಿಶಮ್ಯಾಹಂ ಸಾರಥೇಃ ಕರುಣಂ ವಚಃ।
03022006c ಅವೇಕ್ಷಮಾಣೋ ಯಂತಾರಮಪಶ್ಯಂ ಶರಪೀಡಿತಂ।।
03022007a ನ ತಸ್ಯೋರಸಿ ನೋ ಮೂರ್ಧ್ನಿ ನ ಕಾಯೇ ನ ಭುಜದ್ವಯೇ।
03022007c ಅಂತರಂ ಪಾಂಡವಶ್ರೇಷ್ಠ ಪಶ್ಯಾಮಿ ನಹತಂ ಶರೈಃ।।
ಸಾರಥಿಯ ಈ ಕರುಣಾಜನಕ ಮಾತುಗಳನ್ನು ಕೇಳಿ ನಾನು ಅವನ ಕಡೆ ನೋಡಿದೆ. ಅವನು ಶರಗಳಿಂದ ಹೊಡೆತತಿಂದುದನ್ನು ನೋಡಿದೆ. ಭರತಶ್ರೇಷ್ಠ! ಅವನ ತಲೆಯ ಮೇಲೆ, ದೇಹದ ಮೇಲೆ, ಎರಡೂ ಭುಜಗಳ ಮೇಲೆ ಶರಗಳಿಂದ ಚುಚ್ಚಲ್ಪಡದ ಭಾಗವನ್ನೇ ನಾನು ನೋಡಲಿಲ್ಲ!
03022008a ಸ ತು ಬಾಣವರೋತ್ಪೀಡಾದ್ವಿಸ್ರವತ್ಯಸೃಗುಲ್ಬಣಂ।
03022008c ಅಭಿವೃಷ್ಟೋ ಯಥಾ ಮೇಘೈರ್ಗಿರಿರ್ಗೈರಿಕಧಾತುಮಾನ್।।
ಆ ಬಾಣದ ಮಳೆಯ ಆಘಾತಕ್ಕೆ ಸಿಲುಕಿದ ಅವನ ರಕ್ತವು ಧಾರಾಕಾರವಾಗಿ ಸುರಿಯುತ್ತಿರಲು ಅವನು ಮಳೆಸುರಿಯುತ್ತಿದ್ದ ಕೆಂಪು ಧಾತುವಿನ ಗುಡ್ದದಂತೆ ತೋರಿದನು.
03022009a ಅಭೀಷುಹಸ್ತಂ ತಂ ದೃಷ್ಟ್ವಾ ಸೀದಂತಂ ಸಾರಥಿಂ ರಣೇ।
03022009c ಅಸ್ತಂಭಯಂ ಮಹಾಬಾಹೋ ಶಾಲ್ವಬಾಣಪ್ರಪೀಡಿತಂ।।
ನನ್ನ ಸಾರಥಿಯು ರಥದ ಗಾಳಗಳನ್ನು ಹಿಡಿದುಕೊಂಡಿದ್ದರೂ, ಎಚ್ಚರತಪ್ಪಿ ಬೀಳುವುದರಲ್ಲಿದ್ದನು. ಮಹಾಬಾಹೋ! ಆಗ ನಾನು ಶಾಲ್ವನ ಬಾಣಗಳಿಂದ ಪೀಡಿತನಾದ ಅವನನ್ನು ಹಿಡಿದು ನಿಲ್ಲಲು ಸಹಾಯಮಾಡಿದೆನು.
03022010a ಅಥ ಮಾಂ ಪುರುಷಃ ಕಶ್ಚಿದ್ದ್ವಾರಕಾನಿಲಯೋಽಬ್ರವೀತ್।
03022010c ತ್ವರಿತೋ ರಥಮಭ್ಯೇತ್ಯ ಸೌಹೃದಾದಿವ ಭಾರತ।।
03022011a ಆಹುಕಸ್ಯ ವಚೋ ವೀರ ತಸ್ಯೈವ ಪರಿಚಾರಕಃ।
03022011c ವಿಷಣ್ಣಃ ಸನ್ನಕಂಠೋ ವೈ ತನ್ನಿಬೋಧ ಯುಧಿಷ್ಠಿರ।।
ಭಾರತ! ಆಗ ದ್ವಾರಕೆಯಿಂದ ಬಂದಿದ್ದ ಆಹುಕನ ಗೆಳೆಯನಾಗಿದ್ದ, ವಿಷಣ್ಣನೂ ಸಂಕಟದಲ್ಲಿದ್ದವನೂ ಆದ ಒಬ್ಬ ಪುರುಷನು ಅವಸರದಲ್ಲಿ ನನ್ನ ರಥದ ಬಳಿ ಬಂದು ನನಗೆ ಅವನ ಸಂದೇಶವನ್ನು ಹೇಳಿದನು. ಯುಧಿಷ್ಠಿರ! ಅವನು ನನಗೆ ಏನು ಹೇಳಿದನೆಂದು ಕೇಳು.
03022012a ದ್ವಾರಕಾಧಿಪತಿರ್ವೀರ ಆಹ ತ್ವಾಮಾಹುಕೋ ವಚಃ।
03022012c ಕೇಶವೇಹ ವಿಜಾನೀಷ್ವ ಯತ್ತ್ವಾಂ ಪಿತೃಸಖೋಽಬ್ರವೀತ್।।
“ವೀರ! ಕೇಶವ! ನಾನು ದ್ವಾರಕಾಧಿಪತಿ ಆಹುಕ ನಿನಗೆ ಈ ಮಾತನ್ನು ಹೇಳುತ್ತಿದ್ದೇನೆ. ನಿನ್ನ ತಂದೆಯ ಸಖನೆಂದು ನನ್ನನ್ನು ತಿಳಿ.
03022013a ಉಪಯಾತ್ವಾದ್ಯ ಶಾಲ್ವೇನ ದ್ವಾರಕಾಂ ವೃಷ್ಣಿನಂದನ।
03022013c ವಿಷಕ್ತೇ ತ್ವಯಿ ದುರ್ಧರ್ಷ ಹತಃ ಶೂರಸುತೋ ಬಲಾತ್।।
ವೃಷ್ಣಿನಂದನ! ಇಂದು ಶಾಲ್ವನು ದ್ವಾರಕೆಯನ್ನು ಮುತ್ತಿಗೆಹಾಕಿದ್ದಾನೆ ಮತ್ತು ನಿನ್ನನ್ನು ಎದುರಿಸಿ ತಡೆಯುತ್ತಿದ್ದಾನೆ. ಅವನು ಶೂರನ ಮಗನನ್ನು ಬಲದಿಂದ ಸಂಹರಿಸಿದ್ದಾನೆ.
03022014a ತದಲಂ ಸಾಧು ಯುದ್ಧೇನ ನಿವರ್ತಸ್ವ ಜನಾರ್ದನ।
03022014c ದ್ವಾರಕಾಮೇವ ರಕ್ಷಸ್ವ ಕಾರ್ಯಮೇತನ್ಮಹತ್ತವ।।
ಜನಾರ್ದನ! ನಿನ್ನ ಯುದ್ಧವು ಸಾಕು. ಹಿಂದಿರುಗು. ದ್ವಾರಕೆಯನ್ನೇ ರಕ್ಷಿಸುವುದು ನಿನ್ನ ಮಹತ್ವದ ಕರ್ತವ್ಯವಾಗಿದೆ.”
03022015a ಇತ್ಯಹಂ ತಸ್ಯ ವಚನಂ ಶ್ರುತ್ವಾ ಪರಮದುರ್ಮನಾಃ।
03022015c ನಿಶ್ಚಯಂ ನಾಧಿಗಚ್ಚಾಮಿ ಕರ್ತವ್ಯಸ್ಯೇತರಸ್ಯ ವಾ।।
ಈ ಸಂದೇಶವನ್ನು ಕೇಳಿ ನಾನು ಪರಮ ದುಃಖಿತನಾದೆನು. ನನ್ನ ಕರ್ತವ್ಯವು ಏನು ಎನ್ನುವುದನ್ನು ನಿಶ್ಚಯಿಸಲು ಅಸಮರ್ಥನಾದೆನು.
03022016a ಸಾತ್ಯಕಿಂ ಬಲದೇವಂ ಚ ಪ್ರದ್ಯುಮ್ನಂ ಚ ಮಹಾರಥಂ।
03022016c ಜಗರ್ಹೇ ಮನಸಾ ವೀರ ತಚ್ಶ್ರುತ್ವಾ ವಿಪ್ರಿಯಂ ವಚಃ।।
03022017a ಅಹಂ ಹಿ ದ್ವಾರಕಾಯಾಶ್ಚ ಪಿತುಶ್ಚ ಕುರುನಂದನ।
03022017c ತೇಷು ರಕ್ಷಾಂ ಸಮಾಧಾಯ ಪ್ರಯಾತಃ ಸೌಭಪಾತನೇ।।
ಆ ಅಪ್ರಿಯ ಮಾತನ್ನು ಕೇಳಿ ಮನದಲ್ಲಿಯೇ ಸಾತ್ಯಕಿ, ಬಲದೇವ, ಮಹಾರಥಿ ಪ್ರದ್ಯುಮ್ನರನ್ನು ದೂರಿದೆನು. ಯಾಕೆಂದರೆ ಕುರುನಂದನ! ಸೌಭನನ್ನು ಸೋಲಿಸಲು ಹೊರಡುವಾಗ ದ್ವಾರಕೆಯ ಮತ್ತು ತಂದೆಯ ರಕ್ಷಣೆಯನ್ನು ನಾನೇ ಅವರ ಮೇಲಿರಿಸಿದ್ದೆ.
03022018a ಬಲದೇವೋ ಮಹಾಬಾಹುಃ ಕಚ್ಚಿಜ್ಜೀವತಿ ಶತ್ರುಹಾ।
03022018c ಸಾತ್ಯಕೀ ರೌಕ್ಮಿಣೇಯಶ್ಚ ಚಾರುದೇಷ್ಣಶ್ಚ ವೀರ್ಯವಾನ್।
03022018e ಸಾಂಬಪ್ರಭೃತಯಶ್ಚೈವೇತ್ಯಹಮಾಸಂ ಸುದುರ್ಮನಾಃ।।
ಮಹಾಬಾಹು ಬಲದೇವ, ಶತ್ರುಹ ಸಾತ್ಯಕಿ, ರೌಕ್ಮಿಣೇಯ ವೀರವಾನ್ ಚಾರುದೇಷ್ಣ ಮತ್ತು ಸಾಂಬನ ನಾಯಕತ್ವದಲ್ಲಿರುವ ಇತರರು ಜೀವದಿಂದಿರಬಹುದೇ ಎನ್ನುವ ಕೆಟ್ಟ ಯೋಚನೆಯು ನನ್ನ ಮನಸ್ಸನ್ನು ಕಾಡಿತು.
03022019a ಏತೇಷು ಹಿ ನರವ್ಯಾಘ್ರ ಜೀವತ್ಸು ನ ಕಥಂ ಚನ।
03022019c ಶಕ್ಯಃ ಶೂರಸುತೋ ಹಂತುಮಪಿ ವಜ್ರಭೃತಾ ಸ್ವಯಂ।।
03022020a ಹತಃ ಶೂರಸುತೋ ವ್ಯಕ್ತಂ ವ್ಯಕ್ತಂ ತೇ ಚ ಪರಾಸವಃ।
03022020c ಬಲದೇವಮುಖಾಃ ಸರ್ವೇ ಇತಿ ಮೇ ನಿಶ್ಚಿತಾ ಮತಿಃ।।
ಯಾಕೆಂದರೆ ಈ ನರವ್ಯಾಘ್ರರು ಜೀವಂತವಿರುವಾಗಲೇ ಎಂದೂ ಶೂರಸುತನನ್ನು ಸಂಹರಿಸಲು ಸ್ವಯಂ ವಜ್ರಭೃತನಿಗೂ ಶಕ್ಯವಿಲ್ಲ. ಶೂರಸುತನು ಹತನಾದುದು ನಿಶ್ವಯವೆಂದರೆ ಬಲದೇವನ ನಾಯಕತ್ವದಲ್ಲಿದ್ದ ಅವರೂ ಕೂಡ ಪರಾಭವ ಹೊಂದಿದ್ದುದು ನಿಶ್ಚಯ ಎಂದು ನಾನು ನನ್ನ ಮನಸ್ಸಿನಲ್ಲಿಯೇ ನಿರ್ಧರಿಸಿದೆನು.
03022021a ಸೋಽಹಂ ಸರ್ವವಿನಾಶಂ ತಂ ಚಿಂತಯಾನೋ ಮುಹುರ್ಮುಹುಃ।
03022021c ಸುವಿಹ್ವಲೋ ಮಹಾರಾಜ ಪುನಃ ಶಾಲ್ವಮಯೋಧಯಂ।।
ಮಹಾರಾಜ! ಪುನಃ ಪುನಃ ಅವರ ಸರ್ವವಿನಾಶವಾದುದರ ಕುರಿತು ಚಿಂತಿಸಿದೆನು. ಆಗ ತುಂಬಾ ವಿಹ್ವಲನಾಗಿ ಪುನಃ ಶಾಲ್ವನೊಂದಿಗೆ ಯುದ್ಧಮಾಡಿದೆನು.
03022022a ತತೋಽಪಶ್ಯಂ ಮಹಾರಾಜ ಪ್ರಪತಂತಮಹಂ ತದಾ।
03022022c ಸೌಭಾಚ್ಛೂರಸುತಂ ವೀರ ತತೋ ಮಾಂ ಮೋಹ ಆವಿಶತ್।।
03022023a ತಸ್ಯ ರೂಪಂ ಪ್ರಪತತಃ ಪಿತುರ್ಮಮ ನರಾಧಿಪ।
03022023c ಯಯಾತೇಃ ಕ್ಷೀಣಪುಣ್ಯಸ್ಯ ಸ್ವರ್ಗಾದಿವ ಮಹೀತಲಂ।।
ಮಹಾರಾಜ! ಆಗ ನಾನು ಸೌಭದಿಂದ ವೀರ ಶೂರಸುತನು (ವಸುದೇವನು) ಬೀಳುತ್ತಿರುವುದನ್ನು ನೋಡಿದೆನು. ನರಾಧಿಪ! ತನ್ನ ಪುಣ್ಯವನ್ನು ಕಳೆದುಕೊಂಡು ಸ್ವರ್ಗದಿಂದ ಭೂಮಿಯ ಕಡೆಗೆ ಬೀಳುತ್ತಿದ್ದ ಯಯಾತಿಯಂತೆ ನನ್ನ ತಂದೆಯು ಬೀಳುತ್ತಿರುವ ದೃಶ್ಯವನ್ನು ನೋಡಿ ನನಗೆ ಮೂರ್ಛೆ ಆವರಿಸಿತು.
03022024a ವಿಶೀರ್ಣಗಲಿತೋಷ್ಣೀಷಃ ಪ್ರಕೀರ್ಣಾಂಬರಮೂರ್ಧಜಃ।
03022024c ಪ್ರಪತಂದೃಶ್ಯತೇ ಹ ಸ್ಮ ಕ್ಷೀಣಪುಣ್ಯ ಇವ ಗ್ರಹಃ।।
ಅವನ ಮುಂಡಾಸು ಹೊರಬಿದ್ದಿತ್ತು, ಅವನ ವಸ್ತ್ರಗಳು ಚೆಲ್ಲಪಿಲ್ಲಿಯಾಗಿದ್ದವು, ಮತ್ತು ಅವನ ತಲೆಕೂದಲು ಕೆದರಿತ್ತು. ಪುಣ್ಯವನ್ನು ಕಳೆದುಕೊಂಡ ಗ್ರಹವು ಬೀಳುತ್ತಿರುವಂತೆ ಅವನು ಕಂಡನು.
03022025a ತತಃ ಶಾಙ್ರಂ ಧನುಃಶ್ರೇಷ್ಠಂ ಕರಾತ್ಪ್ರಪತಿತಂ ಮಮ।
03022025c ಮೋಹಾತ್ಸನ್ನಶ್ಚ ಕೌಂತೇಯ ರಥೋಪಸ್ಥ ಉಪಾವಿಶಂ।।
ಕೌಂತೇಯ! ಆಗ ನನ್ನ ಶ್ರೇಷ್ಠ ಧನುಸ್ಸು ಶಾಙ್ರವು ಕೈಯಿಂದ ಬಿದ್ದಿತು ಮತ್ತು ದುಃಖ ಉಕ್ಕಿಬಂದು ನಾನು ರಥದಲ್ಲಿಯೇ ಕುಸಿದು ಬಿದ್ದೆನು.
03022026a ತತೋ ಹಾಹಾಕೃತಂ ಸರ್ವಂ ಸೈನ್ಯಂ ಮೇ ಗತಚೇತನಂ।
03022026c ಮಾಂ ದೃಷ್ಟ್ವಾ ರಥನೀಡಸ್ಥಂ ಗತಾಸುಮಿವ ಭಾರತ।।
ಭಾರತ! ನಾನು ಎಚ್ಚರ ತಪ್ಪಿ ಜೀವಕಳೆದುಕೊಂಡವನಂತೆ ರಥದಲ್ಲಿ ಕುಸಿದುದನ್ನು ನೋಡಿ ನನ್ನ ಸರ್ವ ಸೈನ್ಯವೂ ಹಾಹಾಕಾರಮಾಡಿತು.
03022027a ಪ್ರಸಾರ್ಯ ಬಾಹೂ ಪತತಃ ಪ್ರಸಾರ್ಯ ಚರಣಾವಪಿ।
03022027c ರೂಪಂ ಪಿತುರಪಶ್ಯಂ ತಚ್ಛಕುನೇಃ ಪತತೋ ಯಥಾ।।
03022028a ತಂ ಪತಂತಂ ಮಹಾಬಾಹೋ ಶೂಲಪಟ್ಟಿಶಪಾಣಯಃ।
03022028c ಅಭಿಘ್ನಂತೋ ಭೃಶಂ ವೀರಾ ಮಮ ಚೇತೋ ವ್ಯಕಂಪಯನ್।।
ಪಕ್ಷಿಯು ಬೀಳುವಂತೆ ಕೈಕಾಲುಗಳನ್ನು ಬೀಸಿ ನನ್ನ ತಂದೆಯು ಬೀಳುತ್ತಿರುವ ದೃಶ್ಯವನ್ನು ನೋಡಿದೆ. ಮಹಾಬಾಹೋ! ವೀರ! ಅವನು ಬೀಳುತ್ತಿರುವಾಗ ಶೂಲ-ಪಟ್ಟಿಶಗಳನ್ನು ಹಿಡಿದು ಚೆನ್ನಾಗಿ ಹೊಡೆಯುತ್ತಿರುವುದನ್ನು ನೋಡಿ ನನ್ನ ಚೇತನವು ಕಂಪಿಸಿತು.
03022029a ತತೋ ಮುಹೂರ್ತಾತ್ಪ್ರತಿಲಭ್ಯ ಸಂಜ್ಞಾಂ। ಅಹಂ ತದಾ ವೀರ ಮಹಾವಿಮರ್ದೇ।।
03022029c ನ ತತ್ರ ಸೌಭಂ ನ ರಿಪುಂ ನ ಶಾಲ್ವಂ। ಪಶ್ಯಾಮಿ ವೃದ್ಧಂ ಪಿತರಂ ನ ಚಾಪಿ।।
ಒಂದು ಕ್ಷಣ ನನ್ನ ಚೇತನವು ಗರಗರನೆ ತಿರುಗಿತು. ಆದರೆ ವೀರ! ಅದೇ ಕ್ಷಣದಲ್ಲಿ ನಾನು ಚೇತರಿಸಿಕೊಂಡೆನು. ಆಗ ನಾನು ಸೌಭವನ್ನೂ ನೋಡಲಿಲ್ಲ, ಶತ್ರುವನ್ನೂ ಕಾಣಲಿಲ್ಲ, ಶಾಲ್ವನನ್ನೂ ಕಾಣಲಿಲ್ಲ ಮತ್ತು ನನ್ನ ವೃದ್ಧ ತಂದೆಯನ್ನೂ ಕಾಣಲಿಲ್ಲ.
03022030a ತತೋ ಮಮಾಸೀನ್ಮನಸಿ ಮಾಯೇಯಮಿತಿ ನಿಶ್ಚಿತಂ।
03022030c ಪ್ರಬುದ್ಧೋಽಸ್ಮಿ ತತೋ ಭೂಯಃ ಶತಶೋ ವಿಕಿರಂ ಶರಾನ್।।
ಆಗ ನನ್ನ ಮನಸ್ಸಿನಲ್ಲಿ ಇದು ಮಾಯೆ ಎಂದು ತಿಳಿದು ನಿಶ್ಚಯ ಮಾಡಿದೆನು. ಪುನಃ ಎಚ್ಚೆತ್ತು ನೂರಾರು ಶರಗಳನ್ನು ಹರಡಿಸಿದೆನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ದ್ವಾವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಇಪ್ಪತ್ತೆರಡನೆಯ ಅಧ್ಯಾಯವು.