021 ಸೌಭವಧೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 21

ಸಾರ

ಹಸ್ತಿನಾಪುರದಿಂದ ಮರಳಿದ ಕೃಷ್ಣನು ಶಾಲ್ವನನ್ನು ವಧಿಸಲು ಹೊರಟಿದುದು (1-13). ಕೃಷ್ಣ-ಶಾಲ್ವರ ಮಾಯಾ ಯುದ್ಧ (14-38).

03021001 ವಾಸುದೇವ ಉವಾಚ।
03021001a ಆನರ್ತನಗರಂ ಮುಕ್ತಂ ತತೋಽಹಮಗಮಂ ತದಾ।
03021001c ಮಹಾಕ್ರತೌ ರಾಜಸೂಯೇ ನಿವೃತ್ತೇ ನೃಪತೇ ತವ।।
03021002a ಅಪಶ್ಯಂ ದ್ವಾರಕಾಂ ಚಾಹಂ ಮಹಾರಾಜ ಹತತ್ವಿಷಂ।
03021002c ನಿಃಸ್ವಾಧ್ಯಾಯವಷಟ್ಕಾರಾಂ ನಿರ್ಭೂಷಣವರಸ್ತ್ರಿಯಂ।।

ವಾಸುದೇವನು ಹೇಳಿದನು: “ನೃಪತೇ! ಅನಾರ್ತನಗರವು ಮುಕ್ತವಾದ ನಂತರ, ನಿನ್ನ ಮಹಾಕ್ರತು ರಾಜಸೂಯದಿಂದ ನಾನು ಅಲ್ಲಿಗೆ ಹಿಂದಿರುಗಿ ಬಂದೆ. ಮಹಾರಾಜ! ಆಗ ನಾನು ಸತ್ವವನ್ನು ಕಳೆದುಕೊಂಡಿದ್ದ ದ್ವಾರಕೆಯನ್ನು, ಅದರ ಸ್ವಾಧ್ಯಾಯ ವಷಟ್ಕಾರಗಳು ನಿಂತಿರುವುದನ್ನೂ, ಆಭರಣಗಳನ್ನು ಧರಿಸದೇ ಇದ್ದ ವರಸ್ತ್ರೀಯರನ್ನೂ ನೋಡಿದೆ.

03021003a ಅನಭಿಜ್ಞೇಯರೂಪಾಣಿ ದ್ವಾರಕೋಪವನಾನಿ ಚ।
03021003c ದೃಷ್ಟ್ವಾ ಶಂಕೋಪಪನ್ನೋಽಹಮಪೃಚ್ಚಂ ಹೃದಿಕಾತ್ಮಜಂ।।

ದ್ವಾರಕೆಯ ಉಪವನಗಳು ಗುರುತಿಸಲಾಗದಂತಿರುವುದನ್ನು ನೋಡಿ ಶಂಕೆಗೊಳಗಾಗಿ ನಾನು ಹೃದಿಕಾತ್ಮಜನನ್ನು (ಕೃತವರ್ಮನನ್ನು) ಕೇಳಿದೆನು:

03021004a ಅಸ್ವಸ್ಥನರನಾರೀಕಮಿದಂ ವೃಷ್ಣಿಪುರಂ ಭೃಷಂ।
03021004c ಕಿಮಿದಂ ನರಶಾರ್ದೂಲ ಶ್ರೋತುಮಿಚ್ಚಾಮಹೇ ವಯಂ।।

“ವೃಷ್ಣಿಪುರದ ನರನಾರಿಯರು ತುಂಬಾ ಅಸ್ವಸ್ಥರಾಗಿರುವರಂತೆ ತೋರುತ್ತಿದ್ದಾರೆ! ನರಶಾರ್ದೂಲ! ಇದು ಏಕೆ ಎಂದು ಕೇಳಲು ಬಯಸುತ್ತೇನೆ.”

03021005a ಏವಮುಕ್ತಸ್ತು ಸ ಮಯಾ ವಿಸ್ತರೇಣೇದಮಬ್ರವೀತ್।
03021005c ರೋಧಂ ಮೋಕ್ಷಂ ಚ ಶಾಲ್ವೇನ ಹಾರ್ದಿಕ್ಯೋ ರಾಜಸತ್ತಮ।।

ರಾಜಸತ್ತಮ! ನಾನು ಹೀಗೆ ಕೇಳಲು ಆ ಹಾರ್ದಿಕ್ಯನು ಶಾಲ್ವನು ಪುರವನ್ನು ಮುತ್ತಿಗೆ ಹಾಕಿದುದರ ಮತ್ತು ಅವನಿಂದ ಬಿಡುಗಡೆಹೊಂದಿದುದರ ಕುರಿತು ವಿಸ್ತಾರವಾಗಿ ಹೇಳಿದನು.

03021006a ತತೋಽಹಂ ಕೌರವಶ್ರೇಷ್ಠ ಶ್ರುತ್ವಾ ಸರ್ವಮಶೇಷತಃ।
03021006c ವಿನಾಶೇ ಶಾಲ್ವರಾಜಸ್ಯ ತದೈವಾಕರವಂ ಮತಿಂ।।

ಕೌರವಶ್ರೇಷ್ಠ! ಅದೆಲ್ಲವನ್ನೂ ನಾನು ಸಂಪೂರ್ಣವಾಗಿ ಕೇಳಿ, ಶಾಲ್ವರಾಜನ ವಿನಾಶದ ಕುರಿತು ಮನಸ್ಸು ಮಾಡಿದೆನು.

03021007a ತತೋಽಹಂ ಭರತಶ್ರೇಷ್ಠ ಸಮಾಶ್ವಾಸ್ಯ ಪುರೇ ಜನಂ।
03021007c ರಾಜಾನಮಾಹುಕಂ ಚೈವ ತಥೈವಾನಕದುಂದುಭಿಂ।।
03021007e ಸರ್ವವೃಷ್ಣಿಪ್ರವೀರಾಂಶ್ಚ ಹರ್ಷಯನ್ನಬ್ರುವಂ ತದಾ।

ಭರತಶ್ರೇಷ್ಠ! ಅನಂತರ ನಾನು ಪುರಜನರನ್ನು ಮತ್ತು ರಾಜ ಆಹುಕನನ್ನು, ಹಾಗೆಯೇ ಅನಕದುಂದುಭಿಯನ್ನು, ಸರ್ವ ವೃಷ್ಣಿಪ್ರವೀರರನ್ನು ಸಮಾಧಾನಪಡಿಸಿ ಸಂತೋಷದಿಂದ ಹೇಳಿದೆನು:

03021008a ಅಪ್ರಮಾದಃ ಸದಾ ಕಾರ್ಯೋ ನಗರೇ ಯಾದವರ್ಷಭಾಃ।।
03021008c ಶಾಲ್ವರಾಜವಿನಾಶಾಯ ಪ್ರಯಾತಂ ಮಾಂ ನಿಬೋಧತ।
03021009a ನಾಹತ್ವಾ ತಂ ನಿವರ್ತಿಷ್ಯೇ ಪುರೀಂ ದ್ವಾರವತೀಂ ಪ್ರತಿ।।

“ಯಾದವರ್ಷಭರೇ! ಸದಾ ನಗರದ ರಕ್ಷಣೆಯಲ್ಲಿಯೇ ನಿರತರಾಗಿರಿ. ಶಾಲ್ವರಾಜನ ವಿನಾಶಕ್ಕಾಗಿ ನಾನು ಹೊರಡುತ್ತಿದ್ದೇನೆ. ಅವನನ್ನು ಕೊಲ್ಲದೆಯೇ ನಾನು ದ್ವಾರವತೀ ನಗರಕ್ಕೆ ಹಿಂದಿರುಗುವುದಿಲ್ಲ ಎಂದು ತಿಳಿಯಿರಿ.

03021009c ಸಶಾಲ್ವಂ ಸೌಭನಗರಂ ಹತ್ವಾ ದ್ರಷ್ಟಾಸ್ಮಿ ವಃ ಪುನಃ।
03021009e ತ್ರಿಸಾಮಾ ಹನ್ಯತಾಮೇಷಾ ದುಂದುಭಿಃ ಶತ್ರುಭೀಷಣೀ।।

ಶಾಲ್ವನೊಂದಿಗೆ ಸೌಭನಗರವನ್ನೂ ನಾಶಪಡಿಸಿಯೇ ನಾನು ನಿಮ್ಮನ್ನು ಪುನಃ ನೋಡುತ್ತೇನೆ. ಮೂರೂ ಸಾಮಗಳಲ್ಲಿ ಶತ್ರುಭೀಷಣ ದುಂದುಭಿಯನ್ನು ಮೊಳಗಿಸಿ.”

03021010a ತೇ ಮಯಾಶ್ವಾಸಿತಾ ವೀರಾ ಯಥಾವದ್ಭರತರ್ಷಭ।
03021010c ಸರ್ವೇ ಮಾಮಬ್ರುವನ್ ಹೃಷ್ಟಾಃ ಪ್ರಯಾಹಿ ಜಹಿ ಶಾತ್ರವಾನ್।।

ಭರತರ್ಷಭ! ನನ್ನಿಂದ ಯಥಾವತ್ತಾಗಿ ಆಶ್ವಾಸಿತರಾದ ಆ ವೀರರು ಎಲ್ಲರೂ ಸಂತೋಷದಿಂದ “ಹೊರಡು! ಶತ್ರುವನ್ನು ಕತ್ತರಿಸಿಹಾಕು!” ಎಂದು ನನಗೆ ಕೂಗಿ ಹೇಳಿದರು.

03021011a ತೈಃ ಪ್ರಹೃಷ್ಟಾತ್ಮಭಿರ್ವೀರೈರಾಶೀರ್ಭಿರಭಿನಂದಿತಃ।
03021011c ವಾಚಯಿತ್ವಾ ದ್ವಿಜಶ್ರೇಷ್ಠಾನ್ಪ್ರಣಮ್ಯ ಶಿರಸಾಹುಕಂ।।
03021012a ಸೈನ್ಯಸುಗ್ರೀವಯುಕ್ತೇನ ರಥೇನಾನಾದಯನ್ದಿಶಃ।
03021012c ಪ್ರಧ್ಮಾಪ್ಯ ಶಂಖಪ್ರವರಂ ಪಾಂಚಜನ್ಯಮಹಂ ನೃಪ।।
03021013a ಪ್ರಯಾತೋಽಸ್ಮಿ ನರವ್ಯಾಘ್ರ ಬಲೇನ ಮಹತಾ ವೃತಃ।
03021013c ಕ್ಲೈತ್ವೇನ ಚತುರಂಗೇಣ ಬಲೇನ ಜಿತಕಾಶಿನಾ।।

ನೃಪ! ನರವ್ಯಾಘ್ರ! ಆ ಪ್ರಹೃಷ್ಟ ವೀರರಿಂದ ಆಶೀರ್ವಾದ ಅಭಿನಂದನೆಗಳನ್ನು ಪಡೆದು, ದ್ವಿಜಶ್ರೇಷ್ಠರು ವಾಚನಮಾಡಿದ ನಂತರ, ಆಹುಕನಿಗೆ ಶಿರಸಾ ಪ್ರಣಮಿಸಿ, ಸೈನ್ಯ-ಸುಗ್ರೀವರಿಂದ ಕೂಡಿದ ರಥವನ್ನೇರಿ, ಅದರ ಶಬ್ಧವು ದಿಕ್ಕುಗಳಲ್ಲಿ ಮೊಳಗುತ್ತಿರಲು ನನ್ನ ಶ್ರೇಷ್ಠ ಶಂಖ ಪಾಂಚಜನ್ಯವನ್ನು ಮೊಳಗಿಸುತ್ತಾ, ವಿಜಯವನ್ನೇ ಗುರಿಯನ್ನಾಗಿಟ್ಟುಕೊಂಡ, ಚತುರಂಗ ಬಲದ ಮಹಾ ಸೇನೆಯಿಂದ ಸುತ್ತುವರೆಯಲ್ಪಟ್ಟು ಹೊರಟೆನು.

03021014a ಸಮತೀತ್ಯ ಬಹೂನ್ದೇಶಾನ್ಗಿರೀಂಶ್ಚ ಬಹುಪಾದಪಾನ್।
03021014c ಸರಾಂಸಿ ಸರಿತಶ್ಚೈವ ಮಾರ್ತ್ತಿಕಾವತಮಾಸದಂ।।

ಬಹಳಷ್ಟು ದೇಶಗಳನ್ನೂ, ಗಿರಿಗಳನ್ನೂ, ವನಗಳನ್ನೂ, ಸರೋವರಗಳನ್ನೂ, ಝರಿಗಳನ್ನೂ ದಾಟಿ ಮಾರ್ತ್ತಿಕಾವತವನ್ನು ತಲುಪಿದೆನು.

03021015a ತತ್ರಾಶ್ರೌಷಂ ನರವ್ಯಾಘ್ರ ಶಾಲ್ವಂ ನಗರಮಂತಿಕಾತ್।
03021015c ಪ್ರಯಾತಂ ಸೌಭಮಾಸ್ಥಾಯ ತಮಹಂ ಪೃಷ್ಠತೋಽನ್ವಯಾಂ।।

ನರವ್ಯಾಘ್ರ! ಅಲ್ಲಿ ನನಗೆ ಶಾಲ್ವನು ನಗರವನ್ನು ಬಿಟ್ಟು, ಸೌಭವನ್ನೇರಿ ಹತ್ತಿರದಲ್ಲಿಯೇ ಹೋಗಿದ್ದಾನೆ ಎಂದು ತಿಳಿಯಿತು ಮತ್ತು ನಾನು ಅವನನ್ನು ಹುಡುಕಿಕೊಂಡು ಹಿಂಬಾಲಿಸಿದೆ.

03021016a ತತಃ ಸಾಗರಮಾಸಾದ್ಯ ಕುಕ್ಷೌ ತಸ್ಯ ಮಹೋರ್ಮಿಣಃ।
03021016c ಸಮುದ್ರನಾಭ್ಯಾಂ ಶಾಲ್ವೋಽಭೂತ್ಸೌಭಮಾಸ್ಥಾಯ ಶತ್ರುಹನ್।।

ಶತ್ರುಹನ್! ಸಾಗರತೀರವನ್ನು ಸೇರಿ, ಸಮುದ್ರದ ಮಧ್ಯದಲ್ಲಿ ಮಹಾ ಅಲೆಗಳಿಂದ ಆವೃತ ದ್ವೀಪದಲ್ಲಿ ಸೌಭವನ್ನೇರಿ ಶಾಲ್ವನು ಇದ್ದಾನೆ ಎಂದು ತಿಳಿಯಿತು.

03021017a ಸ ಸಮಾಲೋಕ್ಯ ದೂರಾನ್ಮಾಂ ಸ್ಮಯನ್ನಿವ ಯುಧಿಷ್ಠಿರ।
03021017c ಆಹ್ವಯಾಮಾಸ ದುಷ್ಟಾತ್ಮಾ ಯುದ್ಧಾಯೈವ ಮುಹುರ್ಮುಹುಃ।।

ಯುಧಿಷ್ಠಿರ! ನಾನು ಬರುತ್ತಿರುವುದನ್ನು ದೂರದಿಂದಲೇ ನೋಡಿದ ಆ ದುಷ್ಟನು ಮುಗುಳ್ನಗುತ್ತಾ ಮತ್ತೆ ಮತ್ತೆ ಯುದ್ಧಕ್ಕೆ ಆಹ್ವಾನಿಸಿದನು.

03021018a ತಸ್ಯ ಶಾಙ್ರವಿನಿರ್ಮುಕ್ತೈರ್ಬಹುಭಿರ್ಮರ್ಮಭೇದಿಭಿಃ।
03021018c ಪುರಂ ನಾಸಾದ್ಯತ ಶರೈಸ್ತತೋ ಮಾಂ ರೋಷ ಆವಿಶತ್।।

ನನ್ನ ಶಾಂಙ್ರಧನುಸ್ಸಿನಿಂದ ಪ್ರಯೋಗಿಸಿದ ಬಾಣಗಳು ಅವನ ಪುರವನ್ನು ತಲುಪುವುದರೊಳಗೇ ಕತ್ತರಿಸಿ ಬೀಳಲು ನನಗೆ ಅತ್ಯಂತ ರೋಷವುಂಟಾಯಿತು.

03021019a ಸ ಚಾಪಿ ಪಾಪಪ್ರಕೃತಿರ್ದೈತೇಯಾಪಸದೋ ನೃಪ।
03021019c ಮಯ್ಯವರ್ಷತ ದುರ್ಧರ್ಷಃ ಶರಧಾರಾಃ ಸಹಸ್ರಶಃ।।
03021020a ಸೈನಿಕಾನ್ಮಮ ಸೂತಂ ಚ ಹಯಾಂಶ್ಚ ಸಮವಾಕಿರತ್।
03021020c ಅಚಿಂತಯಂತಸ್ತು ಶರಾನ್ವಯಂ ಯುಧ್ಯಾಮ ಭಾರತ।।

ಭಾರತ! ನೃಪ! ಆ ಪಾಪಪ್ರಕೃತಿಯ ದೈತ್ಯನು ಒಂದೇ ಸಮನೆ ನನ್ನ ಮೇಲೆ, ನನ್ನ ಸೈನಿಕರ ಮೇಲೆ, ಸೂತ ಮತ್ತು ಕುದುರೆಗಳ ಮೇಲೆ ಸಹಸ್ರಾರು ದುರ್ಧರ್ಷ ಶರಗಳ ಮಳೆಯನ್ನೇ ಸುರಿಸಿದನು. ಆ ಶರಗಳ ಕುರಿತು ಯೋಚನೆ ಮಾಡದೇ ನಾನು ಯುದ್ಧದಲ್ಲಿ ಮುಂದುವರಿದೆನು.

03021021a ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಂ।
03021021c ಚಿಕ್ಷಿಪುಃ ಸಮರೇ ವೀರಾ ಮಯಿ ಶಾಲ್ವಪದಾನುಗಾಃ।।
03021022a ತೇ ಹಯಾನ್ಮೇ ರಥಂ ಚೈವ ತದಾ ದಾರುಕಮೇವ ಚ।
03021022c ಚಾದಯಾಮಾಸುರಸುರಾ ಬಾಣೈರ್ಮರ್ಮವಿಭೇದಿಭಿಃ।।
03021023a ನ ಹಯಾ ನ ರಥೋ ವೀರ ನ ಯಂತಾ ಮಮ ದಾರುಕಃ।
03021023c ಅದೃಶ್ಯಂತ ಶರೈಶ್ಚನ್ನಾಸ್ತಥಾಹಂ ಸೈನಿಕಾಶ್ಚ ಮೇ।।
03021024a ತತೋಽಹಮಪಿ ಕೌರವ್ಯ ಶರಾಣಾಮಯುತಾನ್ಬಹೂನ್।
03021024c ಅಭಿಮಂತ್ರಿತಾನಾಂ ಧನುಷಾ ದಿವ್ಯೇನ ವಿಧಿನಾಕ್ಷಿಪಂ।।

ಶಾಲ್ವನನ್ನು ಅನುಸರಿಸಿ ಹೋರಾಡುತ್ತಿದ್ದ ವೀರ ಅಸುರರು ನೂರಾರು ಸಾವಿರಾರು ನುಣುಪಾದ, ಮರ್ಮಭೇದಿ ಬಾಣಗಳನ್ನು ನನ್ನ ಮೇಲೆ, ನನ್ನ ಕುದುರೆಗಳ ಮೇಲೆ, ರಥದ ಮೇಲೆ ಮತ್ತು ದಾರುಕನ ಮೇಲೆ ಪ್ರಯೋಗಿಸಿದರು. ವೀರ! ನನ್ನ ಕುದುರೆಗಳಾಗಲೀ, ರಥವಾಗಲೀ, ದಾರುಕನಾಗಲೀ ಅಥವಾ ಸೈನಿಕರಾಗಲೀ ಆ ಶರಗಳ ದಟ್ಟ ಮುಸುಕಿನಲ್ಲಿ ನನಗೆ ಕಾಣುತ್ತಿರಲಿಲ್ಲ. ಕೌರವ್ಯ! ನಾನೂ ಕೂಡ ನನ್ನ ದಿವ್ಯ ಧನುಸ್ಸಿನಿಂದ ಬಹಳಷ್ಟು ರೀತಿಯ ಬಾಣಗಳನ್ನು ಅಭಿಮಂತ್ರಿಸಿ ಪ್ರಯೋಗಿಸಿದೆನು.

03021025a ನ ತತ್ರ ವಿಷಯಸ್ತ್ವಾಸೀನ್ಮಮ ಸೈನ್ಯಸ್ಯ ಭಾರತ।
03021025c ಖೇ ವಿಷಕ್ತಂ ಹಿ ತತ್ಸೌಭಂ ಕ್ರೋಶಮಾತ್ರ ಇವಾಭವತ್।।

ಭಾರತ! ಆದರೆ ನನಗಾಗಲೀ ನನ್ನ ಸೈನ್ಯಕ್ಕಾಗಲೀ ಗುರಿಯೇ ಇರಲಿಲ್ಲ. ಯಾಕೆಂದರೆ ಅವನು ಕ್ರೋಶಮಾತ್ರದಲ್ಲಿ ಸೌಭದಲ್ಲಿ ಆಕಾಶದಲ್ಲಿ ತಿರುಗಾಡುತ್ತಿದ್ದನು.

03021026a ತತಸ್ತೇ ಪ್ರೇಕ್ಷಕಾಃ ಸರ್ವೇ ರಂಗವಾಟ ಇವ ಸ್ಥಿತಾಃ।
03021026c ಹರ್ಷಯಾಮಾಸುರುಚ್ಚೈರ್ಮಾಂ ಸಿಂಹನಾದತಲಸ್ವನೈಃ।।

ಆಗ ಅಲ್ಲಿ ಸುತ್ತುವರೆದು ನಿಂತಿದ್ದ ಪ್ರೇಕ್ಷಕರೆಲ್ಲರೂ ಹರ್ಷಿತರಾಗಿ ಸಿಂಹನಾದ ಮತ್ತು ಚಪ್ಪಾಳೆಗಳಿಂದ ನನ್ನನ್ನು ಹುರಿದುಂಬಿಸಿದರು.

03021027a ಮತ್ಕಾರ್ಮುಕವಿನಿರ್ಮುಕ್ತಾ ದಾನವಾನಾಂ ಮಹಾರಣೇ।
03021027c ಅಂಗೇಷು ರುಧಿರಾಕ್ತಾಸ್ತೇ ವಿವಿಶುಃ ಶಲಭಾ ಇವ।।

ಆ ಮಹಾರಣದಲ್ಲಿ ನನ್ನ ಧನುಸ್ಸಿನಿಂದ ಹೊರಟ ಬಾಣಗಳು ರಕ್ತದಾಹಿಗಳಾದ ಕೀಟಗಳಂತೆ ಹಾರಿ ದಾನವರ ಅಂಗಗಳನ್ನು ಚುಚ್ಚಿದವು.

03021028a ತತೋ ಹಲಹಲಾಶಬ್ದಃ ಸೌಭಮಧ್ಯೇ ವ್ಯವರ್ಧತ।
03021028c ವಧ್ಯತಾಂ ವಿಶಿಖೈಸ್ತೀಕ್ಷ್ಣೈಃ ಪತತಾಂ ಚ ಮಹಾರ್ಣವೇ।।

ಸೌಭದ ಮಧ್ಯದಲ್ಲಿ ಹಾಹಾಕಾರ ಶಬ್ಧವು ಹೆಚ್ಚಾಯಿತು ಮತ್ತು ತೀಕ್ಷ್ಣ ಬಾಣಗಳಿಂದ ಸತ್ತವರು ಮಹಾಸಾಗರದಲ್ಲಿ ಬಿದ್ದರು.

03021029a ತೇ ನಿಕೃತ್ತಭುಜಸ್ಕಂಧಾಃ ಕಬಂಧಾಕೃತಿದರ್ಶನಾಃ।
03021029c ನದಂತೋ ಭೈರವಾನ್ನಾದನ್ನಿಪತಂತಿ ಸ್ಮ ದಾನವಾಃ।।

ಭುಜಗಳಿಂದ ಕತ್ತರಿಸಲ್ಪಟ್ಟ ಬಾಹುಗಳ ಕದಂಬಾಕೃತಿಯಲ್ಲಿ ಕಾಣುತ್ತಿದ್ದ ದಾನವರು ಭೈರವ ಕೂಗನ್ನು ಕೂಗುತ್ತಾ ಒಂದೇ ಸಮನೆ ಬೀಳುತ್ತಿದ್ದರು.

03021030a ತತೋ ಗೋಕ್ಷೀರಕುಂದೇಂದುಮೃಣಾಲರಜತಪ್ರಭಂ।
03021030c ಜಲಜಂ ಪಾಂಚಜನ್ಯಂ ವೈ ಪ್ರಾಣೇನಾಹಮಪೂರಯಂ।।

ಆಗ ಗೋವಿನ ಹಾಲಿನ, ಮಲ್ಲಿಗೆಯ, ಚಂದ್ರನ, ತಾವರೆಯ ಮತ್ತು ಬೆಳ್ಳಿಯ ಪ್ರಭೆಯುಳ್ಳ ಜಲಜ ಪಾಂಚಜನ್ಯಕ್ಕೆ ನನ್ನ ಉಸಿರನ್ನು ತುಂಬಿಸಿ ಮೊಳಗಿಸಿದೆನು.

03021031a ತಾನ್ದೃಷ್ಟ್ವಾ ಪತಿತಾಂಸ್ತತ್ರ ಶಾಲ್ವಃ ಸೌಭಪತಿಸ್ತದಾ।
03021031c ಮಾಯಾಯುದ್ಧೇನ ಮಹತಾ ಯೋಧಯಾಮಾಸ ಮಾಂ ಯುಧಿ।।

ರಣರಂಗದಲ್ಲಿ ಅವರು ಬೀಳುತ್ತಿರುವುದನ್ನು ನೋಡಿದ ಸೌಭಪತಿ ಶಾಲ್ವನು ನನ್ನೊಂದಿಗೆ ಮಹಾ ಮಾಯಾಯುದ್ಧವನ್ನು ಪ್ರಾರಂಭಿಸಿದನು.

03021032a ತತೋ ಹುಡಹುಡಾಃ ಪ್ರಾಸಾಃ ಶಕ್ತಿಶೂಲಪರಶ್ವಧಾಃ।
03021032c ಪಟ್ಟಿಶಾಶ್ಚ ಭುಶುಂಡ್ಯಶ್ಚ ಪ್ರಾಪತನ್ನನಿಶಂ ಮಯಿ।।

ಅವನು ಒಂದೇ ಸಮನೆ ನನ್ನ ಮೇಲೆ ಹುಡಹುಡಾ, ಪ್ರಾಸ, ಶಕ್ತಿ, ಶೂಲ, ಪರಶು, ಪಟ್ಟಿಷ, ಮತ್ತು ಭುಶುಂಡಗಳನ್ನು ಎಸೆಯತೊಡಗಿದನು.

03021033a ತಾನಹಂ ಮಾಯಯೈವಾಶು ಪ್ರತಿಗೃಹ್ಯ ವ್ಯನಾಶಯಂ।
03021033c ತಸ್ಯಾಂ ಹತಾಯಾಂ ಮಾಯಾಯಾಂ ಗಿರಿಶೃಂಗೈರಯೋಧಯತ್।।

ಅವುಗಳನ್ನು ನಾನು ನನ್ನದೇ ಮಾಯೆಯಿಂದ ಹಿಡಿದು ನಾಶಪಡಿಸಿದೆನು. ಅವನ ಮಾಯೆಯನ್ನು ನಾಶಪಡಿಸಿದ ನಂತರ ಅವನು ನನ್ನೊಡನೆ ಗಿರಿಶೃಂಗಗಳಿಂದ ಯುದ್ಧ ಮಾಡತೊಡಗಿದನು.

03021034a ತತೋಽಭವತ್ತಮ ಇವ ಪ್ರಭಾತಮಿವ ಚಾಭವತ್।
03021034c ದುರ್ದಿನಂ ಸುದಿನಂ ಚೈವ ಶೀತಮುಷ್ಣಂ ಚ ಭಾರತ।।

ಭಾರತ! ಒಂದು ಕ್ಷಣದಲ್ಲಿ ರಾತ್ರಿಯಾಗುತ್ತಿತ್ತು, ಇನ್ನೊಂದು ಕ್ಷಣದಲ್ಲಿ ಬೆಳಗಾಗುತ್ತಿತ್ತು. ದುರ್ದಿನವಾಗುತ್ತಿತ್ತು, ಸುದಿನವೆನಿಸುತ್ತಿತ್ತು, ಛಳಿಯಾಗುತ್ತಿತ್ತು, ಮತ್ತು ಸೆಖೆಯಾಗುತ್ತಿತ್ತು.

03021035a ಏವಂ ಮಾಯಾಂ ವಿಕುರ್ವಾಣೋ ಯೋಧಯಾಮಾಸ ಮಾಂ ರಿಪುಃ।
03021035c ವಿಜ್ಞಾಯ ತದಹಂ ಸರ್ವಂ ಮಾಯಯೈವ ವ್ಯನಾಶಯಂ।।
03021035e ಯಥಾಕಾಲಂ ತು ಯುದ್ಧೇನ ವ್ಯಧಮಂ ಸರ್ವತಃ ಶರೈಃ।

ಈ ರೀತಿ ಆ ಶತ್ರುವು ನನ್ನೊಡನೆ ಮಾಯೆಯಿಂದ ಮೋಸಗೊಳಿಸಿ ಯುದ್ಧಮಾಡಿದನು. ಅದನ್ನು ತಿಳಿದ ನಾನು ಸ್ವಲ್ಪ ಸಮಯದಲ್ಲಿಯೇ ಮಾಯಾಯುದ್ಧದ ಬಾಣಗಳಿಂದ ಎಲ್ಲವನ್ನೂ ಎಲ್ಲಕಡೆಯೂ ನಾಶಪಡಿಸಿದೆನು.

03021036a ತತೋ ವ್ಯೋಮ ಮಹಾರಾಜ ಶತಸೂರ್ಯಮಿವಾಭವತ್।।
03021036c ಶತಚಂದ್ರಂ ಚ ಕೌಂತೇಯ ಸಹಸ್ರಾಯುತತಾರಕಂ।

ಮಹಾರಾಜ! ಕೌಂತೇಯ! ಆಕಾಶದಲ್ಲಿ ಶತಸೂರ್ಯಗಳಿರುವಂತೆ, ಶತಚಂದ್ರಗಳಿರುವಂತೆ ಮತ್ತು ಸಹಸ್ರ ನಕ್ಷತ್ರಗಳಿರುವಂತೆ ತೋರಿತು.

03021037a ತತೋ ನಾಜ್ಞಾಯತ ತದಾ ದಿವಾರಾತ್ರಂ ತಥಾ ದಿಶಃ।।
03021037c ತತೋಽಹಂ ಮೋಹಮಾಪನ್ನಃ ಪ್ರಜ್ಞಾಸ್ತ್ರಂ ಸಮಯೋಜಯಂ।
03021037e ತತಸ್ತದಸ್ತ್ರಮಸ್ತ್ರೇಣ ವಿಧೂತಂ ಶರತೂಲವತ್।।

ಆಗ ಹಗಲಾಗಲೀ, ರಾತ್ರಿಯಾಗಲೀ, ದಿಕ್ಕುಗಳಾಗಲೀ ಗೊತ್ತಾಗುತ್ತಿರಲಿಲ್ಲ. ಮೋಹವಾಚ್ಛಾದಿಸಿದ ನಾನು ಆಗ ಪ್ರಜ್ಞಾಸ್ತ್ರವನ್ನು ಹೂಡಿದೆನು ಮತ್ತು ಅದು ಅವನ ಅಸ್ತ್ರಗಳನ್ನು ಹತ್ತಿಯ ಎಸಳುಗಳಂತೆ ಹಾರಿಸಿತು.

03021038a ತಥಾ ತದಭವದ್ಯುದ್ಧಂ ತುಮುಲಂ ಲೋಮಹರ್ಷಣಂ।
03021038c ಲಬ್ಧಾಲೋಕಶ್ಚ ರಾಜೇಂದ್ರ ಪುನಃ ಶತ್ರುಮಯೋಧಯಂ।।

ರಾಜೇಂದ್ರ! ಶತ್ರುವನ್ನೂ ಮತ್ತು ಇತರ ದೃಶ್ಯಗಳನ್ನೂ ಕಾಣಲು ಶಕ್ತನಾದ ನಂತರ ಪುನಃ ಮೈನವಿರೇಳಿಸುವ ತುಮುಲ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಏಕವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಇಪ್ಪತ್ತೊಂದನೆಯ ಅಧ್ಯಾಯವು.