020 ಸೌಭವಧೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 20

ಸಾರ

ಪ್ರದ್ಯುಮ್ನನು ಪುನಃ ಶತ್ರುಸೇನೆಯನ್ನು ನುಗ್ಗಿದುದು (1-6). ಪ್ರದ್ಯುಮ್ನ-ಶಾಲ್ವರ ನಡುವಿನ ಘೋರ ಯುದ್ಧ, ಶಾಲ್ವನನ್ನು ಮೂರ್ಛೆಗೊಳಿಸಿದುದು (7-18). ಅಶರೀರವಾಣಿ, ಶಾಲ್ವನು ಹಿಂದೆಸರಿದುದು (19-27).

03020001 ವಾಸುದೇವ ಉವಾಚ।
03020001a ಏವಮುಕ್ತಸ್ತು ಕೌಂತೇಯ ಸೂತಪುತ್ರಸ್ತದಾ ಮೃಧೇ।
03020001c ಪ್ರದ್ಯುಮ್ನಮಬ್ರವೀಚ್ ಶ್ಲಕ್ಷ್ಣಂ ಮಧುರಂ ವಾಕ್ಯಮಂಜಸಾ।।

ವಾಸುದೇವನು ಹೇಳಿದನು: “ಕೌಂತೇಯ! ಈ ಮಾತುಗಳಿಗೆ ಸೂತಪುತ್ರನು ರಣರಂಗದಲ್ಲಿಯೇ ಪ್ರದ್ಯುಮ್ನನಿಗೆ ಶ್ಲಾಘನೀಯ ಮಧುರ ಮಾತುಗಳಿಂದ ಉತ್ತರಿಸಿದನು:

03020002a ನ ಮೇ ಭಯಂ ರೌಕ್ಮಿಣೇಯ ಸಂಗ್ರಾಮೇ ಯಚ್ಚತೋ ಹಯಾನ್।
03020002c ಯುದ್ಧಜ್ಞಶ್ಚಾಸ್ಮಿ ವೃಷ್ಣೀನಾಂ ನಾತ್ರ ಕಿಂ ಚಿದತೋಽನ್ಯಥಾ।।

“ರೌಕ್ಮಿಣೇಯ! ಕುದುರೆಗಳನ್ನು ಓಡಿಸುವ ನನಗೆ ಸಂಗ್ರಾಮದಲ್ಲಿ ಯಾವುದೇ ರೀತಿಯ ಭಯವಿಲ್ಲ. ವೃಷ್ಣಿಗಳು ಹೇಗೆ ಯುದ್ಧಮಾಡುತ್ತಾರೆಂದು ನನಗೆ ತಿಳಿದಿದೆ. ಈ ವಿಷಯದಲ್ಲಿ ನೀನು ಹೇಳಿದುದಕಿಂತ ಹೊರತಾಗಿ ಏನೂ ಇಲ್ಲ.

03020003a ಆಯುಷ್ಮನ್ನುಪದೇಶಸ್ತು ಸಾರಥ್ಯೇ ವರ್ತತಾಂ ಸ್ಮೃತಃ।
03020003c ಸರ್ವಾರ್ಥೇಷು ರಥೀ ರಕ್ಷ್ಯಸ್ತ್ವಂ ಚಾಪಿ ಭೃಶಪೀಡಿತಃ।।

ಆದರೆ ಸಾರಥ್ಯದಲ್ಲಿ ತೊಡಗಿರುವ ನಮಗೆ ಒಂದು ಉಪದೇಶವಿದೆ: ಎಲ್ಲ ಸಂದರ್ಭಗಳಲ್ಲಿಯೂ ಕಷ್ಟದಲ್ಲಿರುವ ರಥಿಯನ್ನು ರಕ್ಷಿಸಬೇಕು.

03020004a ತ್ವಂ ಹಿ ಶಾಲ್ವಪ್ರಯುಕ್ತೇನ ಪತ್ರಿಣಾಭಿಹತೋ ಭೃಶಂ।
03020004c ಕಶ್ಮಲಾಭಿಹತೋ ವೀರ ತತೋಽಹಮಪಯಾತವಾನ್।।

ನೀನಾದರೋ ಶಾಲ್ವನು ಪ್ರಯೋಗಿಸಿದ ಬಾಣಗಳಿಂದ ಚೆನ್ನಾಗಿ ಹೊಡೆತ ತಿಂದು ಮೂರ್ಛಿತನಾಗಿದ್ದೆ. ವೀರ! ಆದುದರಿಂದಲೇ ನಾನು ಹಿಂದೆ ಸರಿದೆ.

03020005a ಸ ತ್ವಂ ಸಾತ್ವತಮುಖ್ಯಾದ್ಯ ಲಬ್ಧಸಂಜ್ಞೋ ಯದೃಚ್ಚಯಾ।
03020005c ಪಶ್ಯ ಮೇ ಹಯಸಂಯಾನೇ ಶಿಕ್ಷಾಂ ಕೇಶವನಂದನ।।

ಕೇಶವನಂದನ! ಸಾತ್ವತಮುಖ್ಯ! ಈಗ ನೀನು ನಿನ್ನ ಎಚ್ಚರವನ್ನು ಪುನಃ ಪಡೆದುಕೊಂಡಿರುವೆಯಾದುದರಿಂದ ಕುದುರೆಗಳನ್ನು ಓಡಿಸುವುದರಲ್ಲಿ ನನ್ನಲ್ಲಿದ್ದ ಕುಶಲತೆಯನ್ನು ನೋಡು!

03020006a ದಾರುಕೇಣಾಹಮುತ್ಪನ್ನೋ ಯಥಾವಚ್ಚೈವ ಶಿಕ್ಷಿತಃ।
03020006c ವೀತಭೀಃ ಪ್ರವಿಶಾಮ್ಯೇತಾಂ ಶಾಲ್ವಸ್ಯ ಮಹತೀಂ ಚಮೂಂ।।

ದಾರುಕನಿಂದ ಉತ್ಪನ್ನನಾದ ನಾನು ಅವನಿಂದ ಯಥಾವತ್ತಾಗಿ ತರಬೇತಿಯನ್ನು ಪಡೆದಿದ್ದೇನೆ. ಏನೂ ಭಯವಿಲ್ಲದೇ ಶಾಲ್ವನ ಮಹಾಸೇನೆಯನ್ನು ಪ್ರವೇಶಿಸುತ್ತೇನೆ.”

03020007a ಏವಮುಕ್ತ್ವಾ ತತೋ ವೀರ ಹಯಾನ್ಸಂಚೋದ್ಯ ಸಂಗರೇ।
03020007c ರಶ್ಮಿಭಿಶ್ಚ ಸಮುದ್ಯಮ್ಯ ಜವೇನಾಭ್ಯಪತತ್ತದಾ।।

ವೀರ! ಹೀಗೆ ಹೇಳಿ ಅವನು ಕುದುರೆಗಳನ್ನು ರಣರಂಗದಲ್ಲಿ ಮುಂದೆಹೋಗುವಂತೆ ಗಾಳದಿಂದ ಚೋದಿಸಿ, ವೇಗವಾಗಿ ಮುನ್ನುಗ್ಗಿದನು.

03020008a ಮಂಡಲಾನಿ ವಿಚಿತ್ರಾಣಿ ಯಮಕಾನೀತರಾಣಿ ಚ।
03020008c ಸವ್ಯಾನಿ ಚ ವಿಚಿತ್ರಾಣಿ ದಕ್ಷಿಣಾನಿ ಚ ಸರ್ವಶಃ।।
03020009a ಪ್ರತೋದೇನಾಹತಾ ರಾಜನ್ರಶ್ಮಿಭಿಶ್ಚ ಸಮುದ್ಯತಾಃ।
03020009c ಉತ್ಪತಂತ ಇವಾಕಾಶಂ ವಿಬಭುಸ್ತೇ ಹಯೋತ್ತಮಾಃ।।

ರಾಜನ್! ಆಗ ಬಾರಿಕೋಲಿನಿಂದ ಪ್ರಚೋದಿಸಲ್ಪಟ್ಟ, ಗಾಳಗಳಿಂದ ನಿಯಂತ್ರಿಸಲ್ಪಟ್ಟ ಆ ಉತ್ತಮ ಕುದುರೆಗಳು ವಿಚಿತ್ರ ವೃತ್ತಾಕಾರದಲ್ಲಿ, ಬಲ ಮತ್ತು ಎಡದಿಕ್ಕುಗಳಲ್ಲಿ ಎಲ್ಲೆಲ್ಲೂ ವಿಚಿತ್ರವಾಗಿ ಓಡುತ್ತಾ ಅವು ಆಕಾಶದಲ್ಲಿ ಹಾರುತ್ತಿವೆಯೋ ಎಂಬಂತೆ ತೋರಿದವು.

03020010a ತೇ ಹಸ್ತಲಾಘವೋಪೇತಂ ವಿಜ್ಞಾಯ ನೃಪ ದಾರುಕಿಂ।
03020010c ದಹ್ಯಮಾನಾ ಇವ ತದಾ ಪಸ್ಪೃಶುಶ್ಚರಣೈರ್ಮಹೀಂ।।

ನೃಪ! ದಾರುಕನ ಹಸ್ತಕೌಶಲವನ್ನು ತಿಳಿದ ಆ ಕುದುರೆಗಳ ಹೆಜ್ಜೆಗಳು ಭೂಮಿಯನ್ನು ಮುಟ್ಟುತ್ತಿರುವಾಗಲೆಲ್ಲ ಬೆಂಕಿಯ ಕಿಡಿಗಳನ್ನು ಹಾರಿಸುತ್ತಾ ಓಡಿದವು.

03020011a ಸೋಽಪಸವ್ಯಾಂ ಚಮೂಂ ತಸ್ಯ ಶಾಲ್ವಸ್ಯ ಭರತರ್ಷಭ।
03020011c ಚಕಾರ ನಾತಿಯತ್ನೇನ ತದದ್ಭುತಮಿವಾಭವತ್।।

ಭರತರ್ಷಭ! ಏನೂ ಕಷ್ಟವಿಲ್ಲದೇ ಅವನು ಶಾಲ್ವನ ಸೇನೆಯನ್ನು ಎಡಬದಿಯಿಂದ ಬಂದು ಸುತ್ತುಹಾಕಿದನು. ಇದೊಂದು ಅದ್ಭುತವೇ ಆಗಿತ್ತು!

03020012a ಅಮೃಷ್ಯಮಾಣೋಽಪಸವ್ಯಂ ಪ್ರದ್ಯುಮ್ನೇನ ಸ ಸೌಭರಾಟ್।
03020012c ಯಂತಾರಮಸ್ಯ ಸಹಸಾ ತ್ರಿಭಿರ್ಬಾಣೈಃ ಸಮರ್ಪಯತ್।।
03020013a ದಾರುಕಸ್ಯ ಸುತಸ್ತಂ ತು ಬಾಣವೇಗಮಚಿಂತಯನ್।
03020013c ಭೂಯ ಏವ ಮಹಾಬಾಹೋ ಪ್ರಯಯೌ ಹಯಸಮ್ಮತಃ।।

ಮಹಾಬಾಹೋ! ಪ್ರದ್ಯುಮ್ನನ ಕಿರುಕುಳಕ್ಕೊಳಗಾದ ಆ ಸೌಭರಾಜನು ತಕ್ಷಣವೇ ತನ್ನ ಬಲಗಡೆಯಲ್ಲಿದ್ದ ಸಾರಥಿಯ ಮೇಲೆ ಮೂರು ತೀಕ್ಷ್ಣ ಬಾಣಗಳನ್ನು ಪ್ರಯೋಗಿಸಿದನು. ಆದರೆ ದಾರಕನ ಮಗನು ಆ ಬಾಣಗಳಿಗೆ ಲಕ್ಷ್ಯಕೊಡದೇ ತನ್ನ ಮಾತನ್ನು ಕೇಳುತ್ತಿದ್ದ ಕುದುರೆಗಳನ್ನು ಇನ್ನೂ ಮುಂದುವರೆಸಿದನು.

03020014a ತತೋ ಬಾಣಾನ್ಬಹುವಿಧಾನ್ಪುನರೇವ ಸ ಸೌಭರಾಟ್।
03020014c ಮುಮೋಚ ತನಯೇ ವೀರೇ ಮಮ ರುಕ್ಮಿಣಿನಂದನೇ।।

ಆಗ ಪುನಃ ಸೌಭರಾಜನು ಬಹುವಿಧದ ಬಾಣಗಳನ್ನು ನನ್ನ ಮಗ ವೀರ ರುಕ್ಮಿಣೀನಂದನನ ಮೇಲೆ ಪ್ರಯೋಗಿಸಿದನು.

03020015a ತಾನಪ್ರಾಪ್ತಾಂ ಶಿತೈರ್ಬಾಣೈಶ್ಚಿಚ್ಚೇದ ಪರವೀರಹಾ।
03020015c ರೌಕ್ಮಿಣೇಯಃ ಸ್ಮಿತಂ ಕೃತ್ವಾ ದರ್ಶಯನ್ ಹಸ್ತಲಾಘವಂ।।

ಅವು ತಲುಪುವುದರೊಳಗೇ ಆ ಪರವೀರಹನು ತನ್ನ ತೀಕ್ಷ್ಣ ಬಾಣಗಳಿಂದ ಅವುಗಳನ್ನು ತುಂಡರಿಸಿದನು ಮತ್ತು ತನ್ನ ಹಸ್ತಲಾಘವವನ್ನು ತೋರಿಸಿ ರೌಕ್ಮಿಣೇಯನು ಮುಗುಳ್ನಕ್ಕನು.

03020016a ಚಿನ್ನಾಂದೃಷ್ಟ್ವಾ ತು ತಾನ್ಬಾಣಾನ್ಪ್ರದ್ಯುಮ್ನೇನ ಸ ಸೌಭರಾಟ್।
03020016c ಆಸುರೀಂ ದಾರುಣೀಂ ಮಾಯಾಮಾಸ್ಥಾಯ ವ್ಯಸೃಜಚ್ಶರಾನ್।।
03020017a ಪ್ರಯುಜ್ಯಮಾನಮಾಜ್ಞಾಯ ದೈತೇಯಾಸ್ತ್ರಂ ಮಹಾಬಲಃ।
03020017c ಬ್ರಹ್ಮಾಸ್ತ್ರೇಣಾಂತರಾ ಚಿತ್ತ್ವಾ ಮುಮೋಚಾನ್ಯಾನ್ಪತತ್ರಿಣಃ।।

ಅವನ ಬಾಣಗಳನ್ನು ಪ್ರದ್ಯುಮ್ನನು ತುಂಡರಿಸಿದುದನ್ನು ನೋಡಿದ ಸೌಭರಾಜನು ದಾರುಣ ಅಸುರೀ ಮಾಯೆಯನ್ನುಪಯೋಗಿಸಿ ಬಾಣಗಳನ್ನು ಬಿಟ್ಟನು. ಆದರೆ ದೈತೇಯಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾನೆ ಎಂದು ತಿಳಿದ ಮಹಾಬಲನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಅವುಗಳನ್ನು ಮಧ್ಯದಲ್ಲಿಯೇ ತುಂಡರಿಸಿದನು.

03020018a ತೇ ತದಸ್ತ್ರಂ ವಿಧೂಯಾಶು ವಿವ್ಯಧೂ ರುಧಿರಾಶನಾಃ।
03020018c ಶಿರಸ್ಯುರಸಿ ವಕ್ತ್ರೇ ಚ ಸ ಮುಮೋಹ ಪಪಾತ ಚ।।

ರಕ್ತವನ್ನು ಕುಡಿಯುವ ಆ ಅಸ್ತ್ರವು ಅವನ ಬಾಣಗಳನ್ನು ದಾಟಿ ಮುಂದೆ ಹೋಗಿ ಅವನ ತಲೆ, ಎದೆ ಮತ್ತು ಮುಖಗಳನ್ನು ಹೊಡೆಯಲು ಅವನು ಮೂರ್ಛಿತನಾಗಿ ಕೆಳಗೆ ಬಿದ್ದನು.

03020019a ತಸ್ಮಿನ್ನಿಪತಿತೇ ಕ್ಷುದ್ರೇ ಶಾಲ್ವೇ ಬಾಣಪ್ರಪೀಡಿತೇ।
03020019c ರೌಕ್ಮಿಣೇಯೋಽಪರಂ ಬಾಣಂ ಸಂದಧೇ ಶತ್ರುನಾಶನಂ।।

ಬಾಣದ ಹೊಡೆತದಿಂದ ಪೀಡಿತನಾದ ಆ ಕ್ಷುದ್ರ ಶಾಲ್ವನು ಕೆಳಗುರುಳಲು ರೌಕ್ಮಿಣೇಯನು ಇನ್ನೊಂದು ಶತ್ರುನಾಶಕ ಬಾಣವನ್ನು ಹೂಡಿದನು.

03020020a ತಮರ್ಚಿತಂ ಸರ್ವದಾಶಾರ್ಹಪೂಗೈರ್।

ಆಶೀರ್ಭಿರರ್ಕಜ್ವಲನಪ್ರಕಾಶಂ।।   

03020020c ದೃಷ್ಟ್ವಾ ಶರಂ ಜ್ಯಾಮಭಿನೀಯಮಾನಂ।

ಬಭೂವ ಹಾಹಾಕೃತಮಂತರಿಕ್ಷಂ।।  

ಬಿಲ್ಲಿನ ಹೆದೆಗೇರಿಸಿದ ಸರ್ವ ದಾಶಾರ್ಹರೂ ಪೂಜಿಸುವ, ಸೂರ್ಯನ ತಾಪದಂತೆ ಬೆಳಗುತ್ತಿದ್ದ ಆ ಶರವನ್ನು ನೋಡಿ ಅಂತರಿಕ್ಷದಲ್ಲಿ ಹಾಹಾಕಾರವುಂಟಾಯಿತು.

03020021a ತತೋ ದೇವಗಣಾಃ ಸರ್ವೇ ಸೇಂದ್ರಾಃ ಸಹ ಧನೇಶ್ವರಾಃ।
03020021c ನಾರದಂ ಪ್ರೇಷಯಾಮಾಸುಃ ಶ್ವಸನಂ ಚ ಮಹಾಬಲಂ।।
03020022a ತೌ ರೌಕ್ಮಿಣೇಯಮಾಗಮ್ಯ ವಚೋಽಬ್ರೂತಾಂ ದಿವೌಕಸಾಂ।
03020022c ನೈಷ ವಧ್ಯಸ್ತ್ವಯಾ ವೀರ ಶಾಲ್ವರಾಜಃ ಕಥಂ ಚನ।।

ಆಗ ಇಂದ್ರ ಮತ್ತು ಧನೇಶ್ವರನೂ ಸೇರಿ ಎಲ್ಲ ದೇವಗಣಗಳೂ ನಾರದ ಮತ್ತು ಮಹಾಬಲ ವಾಯುವನ್ನು ಕಳುಹಿಸಿದರು. ಅವರಿಬ್ಬರೂ ರೌಕ್ಮಿಣೇಯನಲ್ಲಿಗೆ ಬಂದು ದಿವೌಕಸರ ಸಂದೇಶವನ್ನು ಕೊಟ್ಟರು: “ವೀರ! ಶಾಲ್ವರಾಜನು ಎಂದೂ ನಿನ್ನಿಂದ ವಧೆಗೊಳ್ಳಲು ಸಾಧ್ಯವಿಲ್ಲ!

03020023a ಸಂಹರಸ್ವ ಪುನರ್ಬಾಣಮವಧ್ಯೋಽಯಂ ತ್ವಯಾ ರಣೇ।
03020023c ಏತಸ್ಯ ಹಿ ಶರಸ್ಯಾಜೌ ನಾವಧ್ಯೋಽಸ್ತಿ ಪುಮಾನ್ಕ್ವ ಚಿತ್।।
03020024a ಮೃತ್ಯುರಸ್ಯ ಮಹಾಬಾಹೋ ರಣೇ ದೇವಕಿನಂದನಃ।
03020024c ಕೃಷ್ಣಃ ಸಂಕಲ್ಪಿತೋ ಧಾತ್ರಾ ತನ್ನ ಮಿಥ್ಯಾ ಭವೇದಿತಿ।।

ಎಷ್ಟೇ ಬಾರಿ ಬಾಣಗಳನ್ನು ಪ್ರಯೋಗಿಸಿದರೂ ರಣದಲ್ಲಿ ಇವನು ನಿನ್ನಿಂದ ಮರಣಹೊಂದುವುದಿಲ್ಲ. ನೀನು ಬಿಲ್ಲಿಗೇರಿಸಿದ ಈ ಶ್ರೇಷ್ಠ ಬಾಣವು ಎಂದೂ ಇವನನ್ನು ಕೊಲ್ಲುವುದಿಲ್ಲ. ರಣದಲ್ಲಿ ಇವನ ಮೃತ್ಯುವು ದೇವಕಿನಂದನ ಕೃಷ್ಣನಿಂದ ಎಂದು ಧಾತ್ರನ ಸಂಕಲ್ಪವಾಗಿದೆ. ಅದು ಸುಳ್ಳಾಗುವುದಿಲ್ಲ!”

03020025a ತತಃ ಪರಮಸಂಹೃಷ್ಟಃ ಪ್ರದ್ಯುಮ್ನಃ ಶರಮುತ್ತಮಂ।
03020025c ಸಂಜಹಾರ ಧನುಃಶ್ರೇಷ್ಠಾತ್ತೂಣೇ ಚೈವ ನ್ಯವೇಶಯತ್।।

ಆಗ ಪರಮಸಂಹೃಷ್ಟ ಪ್ರದ್ಯುಮ್ನನು ಆ ಉತ್ತಮ ಶರವನ್ನು ತನ್ನ ಆ ಶ್ರೇಷ್ಠ ಧನುಸ್ಸಿನಿಂದ ಹಿಂದೆ ತೆಗೆದುಕೊಂಡು ಭತ್ತಳಿಕೆಯಲ್ಲಿ ಇರಿಸಿದನು.

03020026a ತತ ಉತ್ಥಾಯ ರಾಜೇಂದ್ರ ಶಾಲ್ವಃ ಪರಮದುರ್ಮನಾಃ।
03020026c ವ್ಯಪಾಯಾತ್ಸಬಲಸ್ತೂರ್ಣಂ ಪ್ರದ್ಯುಮ್ನಶರಪೀಡಿತಃ।।

ರಾಜೇಂದ್ರ! ಆಗ ಶಾಲ್ವನು ಪರಮ ದುರ್ಬಲನಾಗಿ ಮೇಲೆದ್ದು, ಪ್ರದ್ಯುಮ್ನನ ಶರಗಳಿಂದ ಪೀಡಿತನಾಗಿ ತನ್ನ ಸೇನೆಯೊಂದಿಗೆ ಹಿಂದೆ ಸರಿದನು.

03020027a ಸ ದ್ವಾರಕಾಂ ಪರಿತ್ಯಜ್ಯ ಕ್ರೂರೋ ವೃಷ್ಣಿಭಿರರ್ದಿತಃ।
03020027c ಸೌಭಮಾಸ್ಥಾಯ ರಾಜೇಂದ್ರ ದಿವಮಾಚಕ್ರಮೇ ತದಾ।।

ರಾಜೇಂದ್ರ! ವೃಷ್ಣಿಗಳಿಂದ ಪೆಟ್ಟುತಿಂದ ಆ ಕ್ರೂರನು ದ್ವಾರಕೆಯನ್ನು ಬಿಟ್ಟು ಸೌಭವನ್ನೇರಿ ಆಕಾಶದ ಕಡೆ ಪ್ರಯಾಣಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಇಪ್ಪತ್ತನೆಯ ಅಧ್ಯಾಯವು.