018 ಸೌಭವಧೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 18

ಸಾರ

ಪ್ರದ್ಯುಮ್ನನ ಬಾಣಪ್ರಯೋಗಕ್ಕೆ ಸಿಲುಕಿ ಶಾಲ್ವನು ಮೂರ್ಛೆಗೊಂಡಿದುದು (1-17). ಎಚ್ಚೆತ್ತ ಶಾಲ್ವನು ಪ್ರದ್ಯುಮ್ನನನ್ನು ಮೂರ್ಛೆಗೊಳಿಸಿದ್ದುದು (18-24).

03018001 ವಾಸುದೇವ ಉವಾಚ।
03018001a ಏವಮುಕ್ತ್ವಾ ರೌಕ್ಮಿಣೇಯೋ ಯಾದವಾನ್ಭರತರ್ಷಭ।
03018001c ದಂಶಿತೈರ್ಹರಿಭಿರ್ಯುಕ್ತಂ ರಥಮಾಸ್ಥಾಯ ಕಾಂಚನಂ।।
03018002a ಉಚ್ಚ್ರಿತ್ಯ ಮಕರಂ ಕೇತುಂ ವ್ಯಾತ್ತಾನನಮಲಂಕೃತಂ।
03018002c ಉತ್ಪತದ್ಭಿರಿವಾಕಾಶಂ ತೈರ್ಹಯೈರನ್ವಯಾತ್ಪರಾನ್।।

ವಾಸುದೇವನು ಹೇಳಿದನು: “ಭರತರ್ಷಭ! ರೌಕ್ಮಿಣೇಯನು ಯಾದವರಿಗೆ ಈ ರೀತಿ ಹೇಳಿ, ಮೊನಚಾದ ಬಾಣಗಳನ್ನು ತೆಗೆದುಕೊಂಡು, ವೇಗವಾಗಿ ಹೋಗಬಲ್ಲ ಶ್ರೇಷ್ಠ ಕುದುರೆಗಳನ್ನು ಕಟ್ಟಿದ, ಬಾಯಿತೆರದ ಮೊಸಳೆಯ ಅಲಂಕೃತ ಧ್ವಜವು ಮೇಲೆ ಹಾರಾಡುತ್ತಿದ್ದ, ಕಾಂಚನ ರಥವನ್ನೇರಿದನು.

03018003a ವಿಕ್ಷಿಪನ್ನಾದಯಂಶ್ಚಾಪಿ ಧನುಃಶ್ರೇಷ್ಠಂ ಮಹಾಬಲಃ।
03018003c ತೂಣಖಡ್ಗಧರಃ ಶೂರೋ ಬದ್ಧಗೋಧಾಂಗುಲಿತ್ರವಾನ್।।

ಗಾಳಿಯಲ್ಲಿ ಹಾರಿಹೋಗುತ್ತಿವೆಯೋ ಎಂದು ಅವನ ಕುದುರೆಗಳು ತೋರುತ್ತಿರಲು ತೂರಣಖಡ್ಗಗಳನ್ನು ಧರಿಸಿ, ಕೈ ಮತ್ತು ಬೆರಳುಗಳಿಗೆ ಕಟ್ಟಿಕೊಂಡು ಆ ಧನುಃಶ್ರೇಷ್ಠ, ಮಹಾಬಲ ಶೂರನು ಧಾಳಿಯಿಟ್ಟನು.

03018004a ಸ ವಿದ್ಯುಚ್ಚಲಿತಂ ಚಾಪಂ ವಿಹರನ್ವೈ ತಲಾತ್ತಲಂ।
03018004c ಮೋಹಯಾಮಾಸ ದೈತೇಯಾನ್ಸರ್ವಾನ್ಸೌಭನಿವಾಸಿನಃ।।

ಅವನು ಮಿಂಚಿನಿಂದ ಧನುಸ್ಸನ್ನು ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾಯಿಸುತ್ತಾ ಸೌಭದಲ್ಲಿದ್ದ ದೈತ್ಯರೆಲ್ಲರನ್ನೂ ಕಂಗಾಲುಗೊಳಿಸಿದನು.

03018005a ನಾಸ್ಯ ವಿಕ್ಷಿಪತಶ್ಚಾಪಂ ಸಂದಧಾನಸ್ಯ ಚಾಸಕೃತ್।
03018005c ಅಂತರಂ ದದೃಶೇ ಕಶ್ಚಿನ್ನಿಘ್ನತಃ ಶಾತ್ರವಾನ್ರಣೇ।।

ಯಾರೂ ಕೂಡ ಅವನು ಬಾಣವನ್ನು ಹೂಡುವ ಮತ್ತು ಬಿಡುವುದರ ನಡುವಿನ ಅಂತರವನ್ನು ನೋಡಲಾಗುತ್ತಿರಲಿಲ್ಲ. ಹಾಗೆ ಅವನು ಶತ್ರುಗಳನ್ನು ರಣದಲ್ಲಿ ಒಂದೇ ಸಮನೆ ಕೊಲ್ಲುತ್ತಾ ಹೋದನು.

03018006a ಮುಖಸ್ಯ ವರ್ಣೋ ನ ವಿಕಲ್ಪತೇಽಸ್ಯ ।

ಚೇಲುಶ್ಚ ಗಾತ್ರಾಣಿ ನ ಚಾಪಿ ತಸ್ಯ।।  

03018006c ಸಿಂಹೋನ್ನತಂ ಚಾಪ್ಯಭಿಗರ್ಜತೋಽಸ್ಯ ।

ಶುಶ್ರಾವ ಲೋಕೋಽದ್ಭುತರೂಪಮಗ್ರ್ಯಂ।।  

ಅವನ ಮುಖದ ಬಣ್ಣವು ಬದಲಾಗಲಿಲ್ಲ. ಅವನ ದೇಹದಲ್ಲಿ ಕೂಡ ಏನೊಂದು ಕಂಪನವೂ ಕಂಡುಬರಲಿಲ್ಲ. ಆ ಅದ್ಭುತ ರೂಪಿ ನಾಯಕನು ಜೋರಾಗಿ ಗರ್ಜಿಸಿ ಸಿಂಹನಾದ ಮಾಡಿದ್ದುದನ್ನು ಲೋಕವೇ ಕೇಳಿಸಿಕೊಂಡಿತು.

03018007a ಜಲೇಚರಃ ಕಾಂಚನಯಷ್ಟಿಸಂಸ್ಥೋ ।

ವ್ಯಾತ್ತಾನನಃ ಸರ್ವತಿಮಿಪ್ರಮಾಥೀ।।  

03018007c ವಿತ್ರಾಸಯನ್ರಾಜತಿ ವಾಹಮುಖ್ಯೇ ।

ಶಾಲ್ವಸ್ಯ ಸೇನಾಪ್ರಮುಖೇ ಧ್ವಜಾಗ್ರ್ಯಃ।।  

ಕಾಂಚನದ ಧ್ವಜಸ್ಥಂಭದಮೇಲಿದ್ದ ದೊಡ್ಡದಾಗಿ ಬಾಯಿತೆರೆದಿದ್ದ ಜಲಚರ ಮೊಸಳೆಯು ರಥದ ಮೇಲೆ ಹಾರಾಡುತ್ತಾ ಶಾಲ್ವನ ಸೇನೆಯಲ್ಲಿ ಭಯದ ಬೀಜವನ್ನು ಬಿತ್ತಿತು.

03018008a ತತಃ ಸ ತೂರ್ಣಂ ನಿಷ್ಪತ್ಯ ಪ್ರದ್ಯುಮ್ನಃ ಶತ್ರುಕರ್ಶನಃ।
03018008c ಶಾಲ್ವಮೇವಾಭಿದುದ್ರಾವ ವಿಧಾಸ್ಯನ್ಕಲಹಂ ನೃಪ।।

ನೃಪ! ಆಗ ಆ ಶತ್ರುಕರ್ಶನ ಪ್ರದ್ಯುಮ್ನನು ವೇಗದಿಂದ ಮುನ್ನುಗ್ಗಿ ಹೋರಾಟಕ್ಕೆ ತಯಾರಾಗಿ ಶಾಲ್ವನ ಮೇಲೆ ಎರಗಿದನು.

03018009a ಅಭಿಯಾನಂ ತು ವೀರೇಣ ಪ್ರದ್ಯುಮ್ನೇನ ಮಹಾಹವೇ।
03018009c ನಾಮರ್ಷಯತ ಸಂಕ್ರುದ್ಧಃ ಶಾಲ್ವಃ ಕುರುಕುಲೋದ್ವಹ।।

ಕುರುಕುಲೋದ್ದಹ! ಆದರೆ ಮಹಾಹವ ಸಂಕೃದ್ಧ ಶಾಲ್ವನು ವೀರ ಪ್ರದ್ಯುಮ್ನನ ಆಕ್ರಮಣದಿಂದ ಕಷ್ಟಪಡಲಿಲ್ಲ.

03018010a ಸ ರೋಷಮದಮತ್ತೋ ವೈ ಕಾಮಗಾದವರುಹ್ಯ ಚ।
03018010c ಪ್ರದ್ಯುಮ್ನಂ ಯೋಧಯಾಮಾಸ ಶಾಲ್ವಃ ಪರಪುರಂಜಯಃ।।

ರೋಷಮದಮತ್ತನಾದ ಆ ಪರಪುರಂಜಯ ಶಾಲ್ವನು ಕಾಮಗವನ್ನು ಏರಿ ಪ್ರದ್ಯುಮ್ನನೊಡನೆ ಯುದ್ಧಮಾಡಲು ತೊಡಗಿದನು.

03018011a ತಯೋಃ ಸುತುಮುಲಂ ಯುದ್ಧಂ ಶಾಲ್ವವೃಷ್ಣಿಪ್ರವೀರಯೋಃ।
03018011c ಸಮೇತಾ ದದೃಶುರ್ಲೋಕಾ ಬಲಿವಾಸವಯೋರಿವ।।

ಬಲಿ ಮತ್ತು ವಾಸವರೊಡನೆ ನಡೆದ ಯುದ್ಧದಂತಿದ್ದ ಶಾಲ್ವ ಮತ್ತು ವೃಷ್ಣಿಪ್ರವೀರನ ನಡುವಿನ ತುಮುಲ ಯುದ್ಧವನ್ನು ನೋಡಲು ಜನರು ಒಟ್ಟು ಸೇರಿದರು.

03018012a ತಸ್ಯ ಮಾಯಾಮಯೋ ವೀರ ರಥೋ ಹೇಮಪರಿಷ್ಕೃತಃ।
03018012c ಸಧ್ವಜಃ ಸಪತಾಕಶ್ಚ ಸಾನುಕರ್ಷಃ ಸತೂಣವಾನ್।।

ಆ ವೀರನ ಧ್ವಜಯುಕ್ತ, ಪತಾಕಯುಕ್ತ, ಗಾಲಿಗಳನ್ನು ಹೊಂದಿದ, ಭತ್ತಳಿಕೆಗಳನ್ನು ಹೊಂದಿದ ರಥವು ಮಾಯೆಯಿಂದ ಕೂಡಿದ್ದು ಚಿನ್ನದಿಂದ ಮಾಡಲ್ಪಟ್ಟಿತ್ತು.

03018013a ಸ ತಂ ರಥವರಂ ಶ್ರೀಮಾನ್ಸಮಾರುಹ್ಯ ಕಿಲ ಪ್ರಭೋ।
03018013c ಮುಮೋಚ ಬಾಣಾನ್ಕೌರವ್ಯ ಪ್ರದ್ಯುಮ್ನಾಯ ಮಹಾಬಲಃ।।

ಕೌರವ್ಯ! ಪ್ರಭೋ! ಶ್ರೀಮಾನನು ಆ ಶ್ರೇಷ್ಠ ರಥವನ್ನು ಏರಿ ಮಹಾಬಲ ಪ್ರದ್ಯುಮ್ನನ ಮೇಲೆ ಬಾಣಗಳನ್ನು ಪ್ರಯೋಗಿಸಿದನು.

03018014a ತತೋ ಬಾಣಮಯಂ ವರ್ಷಂ ವ್ಯಸೃಜತ್ತರಸಾ ರಣೇ।
03018014c ಪ್ರದ್ಯುಮ್ನೋ ಭುಜವೇಗೇನ ಶಾಲ್ವಂ ಸಮ್ಮೋಹಯನ್ನಿವ।।

ಆ ಯುದ್ಧದಲ್ಲಿ ಪ್ರದ್ಯುಮ್ನನು ತನ್ನ ಭುಜವೇಗದಿಂದ ಶಾಲ್ವನನ್ನು ಮೋಹಗೊಳಿಸುವಂತೆ ವೇಗವಾಗಿ ಬಾಣಗಳ ಮಳೆಯನ್ನೇ ಸುರಿಸಿದನು.

03018015a ಸ ತೈರಭಿಹತಃ ಸಂಖ್ಯೇ ನಾಮರ್ಷಯತ ಸೌಭರಾಟ್।
03018015c ಶರಾನ್ದೀಪ್ತಾಗ್ನಿಸಂಕಾಶಾನ್ಮುಮೋಚ ತನಯೇ ಮಮ।।

ಈ ರೀತಿಯ ಅಸಂಖ್ಯ ಬಾಣಗಳನ್ನು ತಡೆಯಲಾಗದೇ ಸೌಭರಾಜನು ನನ್ನ ಮಗನ ಮೇಲೆ ಉರಿಯುತ್ತಿರುವ ಬೆಂಕಿಯಂತಿರುವ ಬಾಣಗಳನ್ನು ಪ್ರಯೋಗಿಸಿದನು.

03018016a ಸ ಶಾಲ್ವಬಾಣೈ ರಾಜೇಂದ್ರ ವಿದ್ಧೋ ರುಕ್ಮಿಣಿನಂದನಃ।
03018016c ಮುಮೋಚ ಬಾಣಂ ತ್ವರಿತೋ ಮರ್ಮಭೇದಿನಮಾಹವೇ।।
03018017a ತಸ್ಯ ವರ್ಮ ವಿಭಿದ್ಯಾಶು ಸ ಬಾಣೋ ಮತ್ಸುತೇರಿತಃ।
03018017c ಬಿಭೇದ ಹೃದಯಂ ಪತ್ರೀ ಸ ಪಪಾತ ಮುಮೋಹ ಚ।।

ರಾಜೇಂದ್ರ! ಶಾಲ್ವನ ಬಾಣಗಳ ಹೊಡೆತಕ್ಕೆ ಸಿಲುಕಿದ ರುಕ್ಮಿಣಿನಂದನನು ತಕ್ಷಣವೇ ಶತ್ರುವಿನ ದುರ್ಬಲ ಸ್ಥಾನವನ್ನು ಹುಡುಕಿಕೊಂಡು ಹೋಗುವ ಮರ್ಮಭೇದಿನಿ ಬಾಣವನ್ನು ಪ್ರಯೋಗಿಸಿದನು. ನನ್ನ ಮಗನು ಬಿಟ್ಟ ಆ ಬಾಣವು ಅವನ ಕವಚವನ್ನು ಬೇಧಿಸಿ ಹೃದಯವನ್ನು ಚುಚ್ಚಲು, ಅವನು ಮೂರ್ಛೆತಪ್ಪಿ ಬಿದ್ದನು.

03018018a ತಸ್ಮಿನ್ನಿಪತಿತೇ ವೀರೇ ಶಾಲ್ವರಾಜೇ ವಿಚೇತಸಿ।
03018018c ಸಂಪ್ರಾದ್ರವನ್ದಾನವೇಂದ್ರಾ ದಾರಯಂತೋ ವಸುಂಧರಾಂ।।

ವೀರ ಶಾಲ್ವರಾಜನು ವಿಚೇತಸನಾಗಿ ಬೀಳಲು ದಾನವೇಂದ್ರರು ಭೂಮಿಯನ್ನೇ ಸೀಳಿಬಿಡುವರೋ ಎನ್ನುವಂತೆ ಮುನ್ನುಗ್ಗಿದರು.

03018019a ಹಾಹಾಕೃತಮಭೂತ್ಸೈನ್ಯಂ ಶಾಲ್ವಸ್ಯ ಪೃಥಿವೀಪತೇ।
03018019c ನಷ್ಟಸಂಜ್ಞೇ ನಿಪತಿತೇ ತದಾ ಸೌಭಪತೌ ನೃಪ।।

ಪೃಥಿವೀಪತೇ! ನೃಪ! ಸೌಭಪತಿಯು ಮೂರ್ಛೆ ತಪ್ಪಿ ಕೆಳಗೆ ಬೀಳಲು ಶಾಲ್ವನ ಸೈನ್ಯವು ಹಾಹಾಕಾರವನ್ನು ಮಾಡಿತು.

03018020a ತತ ಉತ್ಥಾಯ ಕೌರವ್ಯ ಪ್ರತಿಲಭ್ಯ ಚ ಚೇತನಾಂ।
03018020c ಮುಮೋಚ ಬಾಣಂ ತರಸಾ ಪ್ರದ್ಯುಮ್ನಾಯ ಮಹಾಬಲಃ।।

ಕೌರವ್ಯ! ಅನಂತರ ಪುನಃ ಚೇತರಿಸಿಕೊಂಡು ಎದ್ದು ತಕ್ಷಣವೇ ಮಹಾಬಲ ಪ್ರದ್ಯುಮ್ನನ ಮೇಲೆ ಬಾಣವನ್ನು ಪ್ರಯೋಗಿಸಿದನು.

03018021a ತೇನ ವಿದ್ಧೋ ಮಹಾಬಾಹುಃ ಪ್ರದ್ಯುಮ್ನಃ ಸಮರೇ ಸ್ಥಿತಃ।
03018021c ಜತ್ರುದೇಶೇ ಭೃಶಂ ವೀರೋ ವ್ಯವಾಸೀದದ್ರಥೇ ತದಾ।।

ಸಮರದಲ್ಲಿ ಎದುರಿಸಿ ನಿಂತಿದ್ದ ಮಹಾಬಾಹು ವೀರ ಪ್ರದ್ಯುಮ್ನನು ಅವನಿಂದ ಜತ್ರುಪ್ರದೇಶದಲ್ಲಿ ಹೊಡೆತ ತಿಂದು ರಥದಲ್ಲಿಯೇ ಕುಸಿದು ಬಿದ್ದನು.

03018022a ತಂ ಸ ವಿದ್ಧ್ವಾ ಮಹಾರಾಜ ಶಾಲ್ವೋ ರುಕ್ಮಿಣಿನಂದನಂ।
03018022c ನನಾದ ಸಿಂಹನಾದಂ ವೈ ನಾದೇನಾಪೂರಯನ್ಮಹೀಂ।।
03018023a ತತೋ ಮೋಹಂ ಸಮಾಪನ್ನೇ ತನಯೇ ಮಮ ಭಾರತ।
03018023c ಮುಮೋಚ ಬಾಣಾಂಸ್ತ್ವರಿತಃ ಪುನರನ್ಯಾನ್ದುರಾಸದಾನ್।।

ಮಹಾರಾಜ! ರುಕ್ಮಿಣೀನಂದನನನ್ನು ಈ ರೀತಿ ಹೊಡೆದು ಶಾಲ್ವನು ಸಿಂದನಾದವನ್ನು ಗೈದು ತನ್ನ ನಿನಾದದಿಂದ ಇಡೀ ಭೂಮಿಯನ್ನೇ ತುಂಬಿಸಿದನು. ಭಾರತ! ನನ್ನ ಮಗನು ಮೂರ್ಛೆ ಹೊಂದಿರಲು ಅವನು ಪುನಃ ಇನ್ನೂ ತಡೆಯಲಸಾದ್ಯ ಬಾಣಗಳನ್ನು ಪ್ರಯೋಗಿಸಿದನು.

03018024a ಸ ತೈರಭಿಹತೋ ಬಾಣೈರ್ಬಹುಭಿಸ್ತೇನ ಮೋಹಿತಃ।
03018024c ನಿಶ್ಚೇಷ್ಟಃ ಕೌರವಶ್ರೇಷ್ಠ ಪ್ರದ್ಯುಮ್ನೋಽಭೂದ್ರಣಾಜಿರೇ।।

ಕೌರವಶ್ರೇಷ್ಠ! ಆ ರಣರಂಗದಲ್ಲಿ ಪ್ರದ್ಯುಮ್ನನು ಬಹಳ ಬಾಣಗಳಿಂದ ಚುಚ್ಚಲ್ಪಟ್ಟು ಮೂರ್ಛಿತನಾಗಿ ನಿಶ್ಚೇಷ್ಟನಾಗಿದ್ದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಅಷ್ಟಾದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಹದಿನೆಂಟನೆಯ ಅಧ್ಯಾಯವು.