016 ಸೌಭವಧೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 16

ಸಾರ

ಸೌಭವಧೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಕೇಳಲು ಕೃಷ್ಣನು ಸೌಭನು ದ್ವಾರಕೆಯನ್ನು ಆಕ್ರಮಣ ಮಾಡಿದುದರ ಕುರಿತು ಹೇಳುವುದು (1-4). ದ್ವಾರಕೆಯ ಸುರಕ್ಷತೆಯ ವರ್ಣನೆ (5-23).

03016001 ಯುಧಿಷ್ಠಿರ ಉವಾಚ।
03016001a ವಾಸುದೇವ ಮಹಾಬಾಹೋ ವಿಸ್ತರೇಣ ಮಹಾಮತೇ।
03016001c ಸೌಭಸ್ಯ ವಧಮಾಚಕ್ಷ್ವ ನ ಹಿ ತೃಪ್ಯಾಮಿ ಕಥ್ಯತಃ।।

ಯುಧಿಷ್ಠಿರನು ಹೇಳಿದನು: “ವಾಸುದೇವ! ಮಹಾಬಾಹೋ! ಮಹಾಮತೇ! ನೀನು ಹೇಳಿದುದರಿಂದ ತೃಪ್ತನಾಗಿಲ್ಲ. ಸೌಭನ ವಧೆಯನ್ನು ವಿಸ್ತಾರವಾಗಿ ಹೇಳು!”

03016002 ವಾಸುದೇವ ಉವಾಚ।
03016002a ಹತಂ ಶ್ರುತ್ವಾ ಮಹಾಬಾಹೋ ಮಯಾ ಶ್ರೌತಶ್ರವಂ ನೃಪಂ।
03016002c ಉಪಾಯಾದ್ಭರತಶ್ರೇಷ್ಠ ಶಾಲ್ವೋ ದ್ವಾರವತೀಂ ಪುರೀಂ।।

ವಾಸುದೇವನು ಹೇಳಿದನು: “ಭರತಶ್ರೇಷ್ಠ! ಮಹಾಬಾಹು ನೃಪ ಶ್ರೌತಶ್ರವನು ನನ್ನಿಂದ ಹತನಾದನು ಎಂದು ಕೇಳಿ ಶಾಲ್ವನು ಉಪಾಯದಿಂದ ದ್ವಾರವತೀ ಪುರಕ್ಕೆ ಧಾಳಿಯಿಟ್ಟನು.

03016003a ಅರುಂಧತ್ತಾಂ ಸುದುಷ್ಟಾತ್ಮಾ ಸರ್ವತಃ ಪಾಂಡುನಂದನ।
03016003c ಶಾಲ್ವೋ ವೈಹಾಯಸಂ ಚಾಪಿ ತತ್ಪುರಂ ವ್ಯೂಹ್ಯ ವಿಷ್ಠಿತಃ।।

ಪಾಂಡುನಂದನ! ಆ ಸುದುಷ್ಟಾತ್ಮ ಶಾಲ್ವನು ಎಲ್ಲ ಕಡೆಯಿಂದಲೂ ಮತ್ತು ಆಕಾಶದಿಂದಲೂ ತನ್ನ ಸೇನೆಯೊಂದಿಗೆ ಪುರವನ್ನು ಮುತ್ತಿಗೆ ಹಾಕಿದನು.

03016004a ತತ್ರಸ್ಥೋಽಥ ಮಹೀಪಾಲೋ ಯೋಧಯಾಮಾಸ ತಾಂ ಪುರೀಂ।
03016004c ಅಭಿಸಾರೇಣ ಸರ್ವೇಣ ತತ್ರ ಯುದ್ಧಮವರ್ತತ।।

ಪುರವನ್ನು ಹಿಡಿದಿಟ್ಟು ನಿಂತ ಆ ಮಹೀಪಾಲನು ಯುದ್ಧಮಾಡಿದನು. ಅಲ್ಲಿ ಎಲ್ಲಕಡೆಯಲ್ಲಿಯೂ ಎಲ್ಲರ ನಡುವೆಯೂ ಯುದ್ಧವು ನಡೆಯಿತು.

03016005a ಪುರೀ ಸಮಂತಾದ್ವಿಹಿತಾ ಸಪತಾಕಾ ಸತೋರಣಾ।
03016005c ಸಚಕ್ರಾ ಸಹುಡಾ ಚೈವ ಸಯಂತ್ರಖನಕಾ ತಥಾ।।
03016006a ಸೋಪತಲ್ಪಪ್ರತೋಲೀಕಾ ಸಾಟ್ಟಾಟ್ಟಾಲಕಗೋಪುರಾ।
03016006c ಸಕಚಗ್ರಹಣೀ ಚೈವ ಸೋಲ್ಕಾಲಾತಾವಪೋಥಿಕಾ।।
03016007a ಸೋಷ್ಟ್ರಿಕಾ ಭರತಶ್ರೇಷ್ಠ ಸಭೇರೀಪಣವಾನಕಾ।
03016007c ಸಮಿತ್ತೃಣಕುಶಾ ರಾಜನ್ಸಶತಘ್ನೀಕಲಾಂಗಲಾ।।
03016008a ಸಭುಶುಂಡ್ಯಶ್ಮಲಗುಡಾ ಸಾಯುಧಾ ಸಪರಶ್ವಧಾ।
03016008c ಲೋಹಚರ್ಮವತೀ ಚಾಪಿ ಸಾಗ್ನಿಃ ಸಹುಡಶೃಂಗಿಕಾ।।
03016009a ಶಾಸ್ತ್ರದೃಷ್ಟೇನ ವಿಧಿನಾ ಸಂಯುಕ್ತಾ ಭರತರ್ಷಭ।

ರಾಜನ್! ಭರತಶ್ರೇಷ್ಠ! ಭರತರ್ಷಭ! ಆ ಪುರಿಯು ಎಲ್ಲೆಲ್ಲಿಯೂ ಸುರಕ್ಷತೆಯ ತಯಾರಿ ನಡೆಸಿತ್ತು - ಎಲ್ಲೆಡೆಯೂ ಪತಾಕೆಗಳು, ತೋರಣಗಳು, ಚಕ್ರಗಳು, ಪಹರೆಗಳು, ಶೌಚಾಲಯಗಳು, ಯಂತ್ರಗಳು, ಕಂದಕಗಳು, ಬೇಕಾದಲ್ಲಿ ಸಾಗಿಸಬಲ್ಲ ಮಂಚಗಳು, ಅಟ್ಟಗಳು, ಏಣಿಗಳು, ಗೋಪುರಗಳು, ಕೂದಲು ಎಳೆಯುವ ಸಾಧನಗಳು, ದೀವಟಿಗೆ ಮತ್ತು ಬೆಂಕಿಯ ಚಂಡುಗಳನ್ನು ಹಾರಿಸಬಲ್ಲ ಚಾಟಿಬಿಲ್ಲುಗಳು, ಒಂಟೆಗಳು, ಭೇರಿ-ನಗಾರಿಗಳು, ಉರಿಸಲು ಕಟ್ಟಿಗೆ ಮತ್ತು ಹುಲ್ಲು, ನೂರಾರು ಕೊಲ್ಲುವ ಆಯುಧಗಳು - ಕಲ್ಲುಗಳು, ಬೆಂಕಿಚಂಡುಗಳು, ಕಬ್ಬಿಣದ ಮತ್ತು ಚರ್ಮದ ಆಯುಧಗಳು, ಕೊಡಲಿಗಳು, ಮಲವನ್ನು ಎಸೆಯುವವರು ಹೀಗೆ ಶಾಸ್ತ್ರದಲ್ಲಿ ತೋರಿಸಿದ ವಿಧದಲ್ಲಿಯೇ ತಯಾರಿಗೊಂಡಿತ್ತು.

03016009c ದ್ರವ್ಯೈರನೇಕೈರ್ವಿವಿಧೈರ್ಗದಸಾಂಬೋದ್ಧವಾದಿಭಿಃ।।
03016010a ಪುರುಷೈಃ ಕುರುಶಾರ್ದೂಲ ಸಮರ್ಥೈಃ ಪ್ರತಿಬಾಧನೇ।
03016010c ಅಭಿಖ್ಯಾತಕುಲೈರ್ವೀರೈರ್ದೃಷ್ಟವೀರ್ಯೈಶ್ಚ ಸಂಯುಗೇ।।

ಕುರುಶಾರ್ದೂಲ! ಅನೇಕ ವಿಧದ ದ್ರವ್ಯಗಳಿಂದ ತುಂಬಿದ್ದ ಪುರಿಯನ್ನು ಹಿಂದಿರುಗಿ ಆಕ್ರಮಿಸಬಲ್ಲ, ಯುದ್ಧದಲ್ಲಿ ತಮ್ಮ ವೀರತ್ವವನ್ನು ಹಿಂದೆ ತೋರಿಸಿದ್ದ, ಅಭಿಖ್ಯಾತ ಕುಲಗಳಲ್ಲಿ ಹುಟ್ಟಿದ್ದ ಗದ, ಸಾಂಬ ಮತ್ತು ಉದ್ಧವ ಮೊದಲಾದ ಸಮರ್ಥ ಪುರುಷರು ಕಾಯುತ್ತಿದ್ದರು.

03016011a ಮಧ್ಯಮೇನ ಚ ಗುಲ್ಮೇನ ರಕ್ಷಿತಾ ಸಾರಸಂಜ್ಞಿತಾ।
03016011c ಉತ್ಕ್ಷಿಪ್ತಗುಲ್ಮೈಶ್ಚ ತಥಾ ಹಯೈಶ್ಚೈವ ಪದಾತಿಭಿಃ।।

ಅದರ ಸಾರಕ್ಕೆ ಹೆಸರಾದ ಸೇನೆಯು ಮಧ್ಯದಲ್ಲಿ ಉತ್ತಮ ಸೇನೆಯಿಂದಲೂ ಕುದುರೆಗಳಿಂದಲೂ ಪದಾತಿಗಳಿಂದಲೂ ರಕ್ಷಿತಗೊಂಡಿತ್ತು.

03016012a ಆಘೋಷಿತಂ ಚ ನಗರೇ ನ ಪಾತವ್ಯಾ ಸುರೇತಿ ಹ।
03016012c ಪ್ರಮಾದಂ ಪರಿರಕ್ಷದ್ಭಿರುಗ್ರಸೇನೋದ್ಧವಾದಿಭಿಃ।।

ಉಗ್ರಸೇನ, ಉದ್ಧವ ಮೊದಲಾದ ಅಧಿಕಾರಿಗಳು, ಪ್ರಮಾದವಾಗಬಾರದೆಂದು ನಗರದಲ್ಲಿ ಯಾರೂ ಮದ್ಯಸೇವನೆ ಮಾಡಬಾರದು ಎಂದು ಆದೇಶವನ್ನು ಘೋಷಿಸಿದರು.

03016013a ಪ್ರಮತ್ತೇಷ್ವಭಿಘಾತಂ ಹಿ ಕುರ್ಯಾಚ್ಶಾಲ್ವೋ ನರಾಧಿಪಃ।
03016013c ಇತಿ ಕೃತ್ವಾಪ್ರಮತ್ತಾಸ್ತೇ ಸರ್ವೇ ವೃಷ್ಣ್ಯಂಧಕಾಃ ಸ್ಥಿತಾಃ।।

ಕುಡಿದ ಅಮಲಿನಲ್ಲಿದ್ದರೆ ನರಾಧಿಪ ಶಾಲ್ವನು ನಮ್ಮನ್ನು ಸುಲಭವಾಗಿ ನಾಶಪಡಿಸಬಲ್ಲನು ಎಂದು ಎಲ್ಲ ವೃಷ್ಣಿ ಅಂಧಕರೂ ಕುಡಿಯದೇ ಇದ್ದರು.

03016014a ಆನರ್ತಾಶ್ಚ ತಥಾ ಸರ್ವೇ ನಟನರ್ತಕಗಾಯನಾಃ।
03016014c ಬಹಿರ್ವಿವಾಸಿತಾಃ ಸರ್ವೇ ರಕ್ಷದ್ಭಿರ್ವಿತ್ತಸಂಚಯಾನ್।।

ಆನರ್ತದ ಎಲ್ಲ ನಟ, ನರ್ತಕ, ಗಾಯಕರನ್ನು ಪುರದ ಹೊರಗೆ ವಾಸಿಸುವಂತೆ ಎಲ್ಲ ವಿತ್ತಸಂಚಯದ ರಕ್ಷಕರು ಏರ್ಪಡಿಸಿದರು.

03016015a ಸಂಕ್ರಮಾ ಭೇದಿತಾಃ ಸರ್ವೇ ನಾವಶ್ಚ ಪ್ರತಿಷೇಧಿತಾಃ।
03016015c ಪರಿಖಾಶ್ಚಾಪಿ ಕೌರವ್ಯ ಕೀಲೈಃ ಸುನಿಚಿತಾಃ ಕೃತಾಃ।।
03016016a ಉದಪಾನಾಃ ಕುರುಶ್ರೇಷ್ಠ ತಥೈವಾಪ್ಯಂಬರೀಷಕಾಃ।
03016016c ಸಮಂತಾತ್ಕ್ರೋಶಮಾತ್ರಂ ಚ ಕಾರಿತಾ ವಿಷಮಾ ಚ ಭೂಃ।।

ಸೇತುವೆಗಳನ್ನು ಒಡೆಯಲಾಯಿತು ಮತ್ತು ಎಲ್ಲ ನೌಕೆಗಳ ಪ್ರಯಾಣವನ್ನೂ ಪ್ರತಿಬಂಧಿಸಲಾಯಿತು. ಕೌರವ್ಯ! ಎಲ್ಲ ಗೋಡೆಗಳನ್ನೂ ಮೊಳೆಗಳನ್ನಿರಿಸಿ ಸುರಕ್ಷಿತಗೊಳಿಸಲಾಯಿತು ಮತ್ತು ಕಣಿವೆ ಕಂದರಗಳನ್ನು ಮುಚ್ಚಿಸಲಾಯಿತು. ಕುರುಶ್ರೇಷ್ಠ! ಎರಡು ಯೋಜನೆಯ ದೂರದವರೆಗೆ ಪುರದ ಸುತ್ತಲೂ ಭೂಮಿಯನ್ನು ವಿಷಮವನ್ನಾಗಿ ಮಾಡಲಾಯಿತು.

03016017a ಪ್ರಕೃತ್ಯಾ ವಿಷಮಂ ದುರ್ಗಂ ಪ್ರಕೃತ್ಯಾ ಚ ಸುರಕ್ಷಿತಂ।
03016017c ಪ್ರಕೃತ್ಯಾ ಚಾಯುಧೋಪೇತಂ ವಿಶೇಷೇಣ ತದಾನಘ।।

ಅನಘ! ಪ್ರಾಕೃತಿಕವಾಗಿ ನಮ್ಮ ದುರ್ಗವು ವಿಷಮವಾದುದು, ಮತ್ತು ಪ್ರಾಕೃತಿಕವಾಗಿ ಸುರಕ್ಷಿತವಾಗಿದೆ, ಮತ್ತು ವಿಶೇಷವಾಗಿ ಪ್ರಾಕೃತಿಕವಾಗಿ ಆಯುಧಗಳಿಂದ ತುಂಬಿದೆ.

03016018a ಸುರಕ್ಷಿತಂ ಸುಗುಪ್ತಂ ಚ ಸರ್ವಾಯುಧಸಮನ್ವಿತಂ।
03016018c ತತ್ಪುರಂ ಭರತಶ್ರೇಷ್ಠ ಯಥೇಂದ್ರಭವನಂ ತಥಾ।।

ಭರತಶ್ರೇಷ್ಠ! ಸುರಕ್ಷಿತವೂ, ಗುಪ್ತವೂ, ಸರ್ವಾಯುಧಗಳಿಂದ ಕೂಡಿದ ಆ ಪುರವು ಇಂದ್ರನ ಪುರದಂತೆ ತೋರುತ್ತಿತ್ತು.

03016019a ನ ಚಾಮುದ್ರೋಽಭಿನಿರ್ಯಾತಿ ನ ಚಾಮುದ್ರಃ ಪ್ರವೇಶ್ಯತೇ।
03016019c ವೃಷ್ಣ್ಯಂಧಕಪುರೇ ರಾಜಂಸ್ತದಾ ಸೌಭಸಮಾಗಮೇ।।

ರಾಜನ್! ಸೌಭನು ಆಕ್ರಮಣ ಮಾಡಿದ ಸಮಯದಲ್ಲಿ ವೃಷ್ಣಿ-ಅಂಧಕರ ಪುರದಿಂದ ಮುದ್ರೆಯಿಲ್ಲದೇ ಯಾರೂ ಹೊರಹೋಗಲು ಸಾಧ್ಯವಿರಲಿಲ್ಲ ಮತ್ತು ಮುದ್ರೆಯಿಲ್ಲದೇ ಒಳಬರಲೂ ಸಾಧ್ಯವಿರಲಿಲ್ಲ.

03016020a ಅನು ರಥ್ಯಾಸು ಸರ್ವಾಸು ಚತ್ವರೇಷು ಚ ಕೌರವ।
03016020c ಬಲಂ ಬಭೂವ ರಾಜೇಂದ್ರ ಪ್ರಭೂತಗಜವಾಜಿಮತ್।।

ರಾಜೇಂದ್ರ! ಕೌರವ! ಪ್ರತಿಯೊಂದು ರಥದಾರಿಗಳಲ್ಲೂ ಮತ್ತು ಎಲ್ಲ ಚೌಕಗಳಲ್ಲಿಯೂ ಕುದುರೆ ಮತ್ತು ಆನೆಗಳನ್ನೇರಿದ ಸೈನಿಕರು ಇರುತ್ತಿದ್ದರು.

03016021a ದತ್ತವೇತನಭಕ್ತಂ ಚ ದತ್ತಾಯುಧಪರಿಚ್ಚದಂ।
03016021c ಕೃತಾಪದಾನಂ ಚ ತದಾ ಬಲಮಾಸೀನ್ಮಹಾಭುಜ।।

ಮಹಾಭುಜ! ಸೇನೆಗೆ ವೇತನಭತ್ತೆಗಳನ್ನು ಕೊಡಲಾಗಿತ್ತು. ಆಯುಧ-ಕವಚಗಳನ್ನು ಕೊಡಲಾಗಿತ್ತು ಮತ್ತು ಅಲ್ಲಿಯವರೆಗೆ ಸೇನೆಗೆ ಕೊಡಬೇಕಾದ ಎಲ್ಲವನ್ನೂ ಕೊಡಲಾಗಿತ್ತು.

03016022a ನ ಕುಪ್ಯವೇತನೀ ಕಶ್ಚಿನ್ನ ಚಾತಿಕ್ರಾಂತವೇತನೀ।
03016022c ನಾನುಗ್ರಹಭೃತಃ ಕಶ್ಚಿನ್ನ ಚಾದೃಷ್ಟಪರಾಕ್ರಮಃ।।

ಯಾರೂ ತನ್ನ ವೇತನದ ಕುರಿತು ಸಿಟ್ಟುಮಾಡಿರಲಿಲ್ಲ. ಯಾರಿಗೂ ಅಧಿಕ ವೇತನವನ್ನು ನೀಡಿರಲಿಲ್ಲ. ಯಾರಿಗೂ ವಿಶೇಷ ಅನುಗ್ರಹವಿರಲಿಲ್ಲ ಮತ್ತು ಯಾರ ಪರಾಕ್ರಮವನ್ನೂ ನೋಡದೇ ಇರಲಿಲ್ಲ.

03016023a ಏವಂ ಸುವಿಹಿತಾ ರಾಜನ್ದ್ವಾರಕಾ ಭೂರಿದಕ್ಷಿಣೈಃ।
03016023c ಆಹುಕೇನ ಸುಗುಪ್ತಾ ಚ ರಾಜ್ಞಾ ರಾಜೀವಲೋಚನ।।

ರಾಜನ್! ರಾಜೀವಲೋಚನ! ಹೀಗೆ ದ್ವಾರಕೆಯು ಚೆನ್ನಾದ ವೇತನವನ್ನು ಹೊಂದಿದ್ದ ಸೇನೆಯೊಂದಿಗೆ ಆಹುಕನಿಂದ ರಕ್ಷಿತಗೊಂಡಿತ್ತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಷೋಡಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಹದಿನಾರನೆಯ ಅಧ್ಯಾಯವು.