015 ಸೌಭವಧೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 15

ಸಾರ

ಆ ಸಮಯದಲ್ಲಿ ಅವನು ಎಲ್ಲಿದ್ದ ಎನ್ನುವುದನ್ನು ಯುಧಿಷ್ಠಿರನು ಕೇಳಲು ಕೃಷ್ಣನು ಶಿಶುಪಾಲನ ವಧೆಯ ಸೇಡು ತೀರಿಸಿಕೊಳ್ಳಲು ತನ್ನ ದ್ವಾರಕೆಗೆ ಆಕ್ರಮಣ ಮಾಡಿದ ಸೌಭಪತಿ ಶಾಲ್ವನೊಂದಿಗೆ ಹೋರಾಡುತ್ತಿದ್ದನೆಂದು ಹೇಳುವುದು (1-22).

03015001 1ಯುಧಿಷ್ಠಿರ ಉವಾಚ। 03015001a ಅಸಾನ್ನಿಧ್ಯಂ ಕಥಂ ಕೃಷ್ಣ ತವಾಸೀದ್ವೃಷ್ಣಿನಂದನ।
03015001c ಕ್ವ ಚಾಸೀದ್ವಿಪ್ರವಾಸಸ್ತೇ ಕಿಂ ವಾಕಾರ್ಷೀಃ ಪ್ರವಾಸಕಃ।।

ಯುಧಿಷ್ಠಿರನು ಹೇಳಿದನು: “ಕೃಷ್ಣ! ವೃಷ್ಣಿನಂದನ! ನಿನಗೆ ಏಕೆ ಅಲ್ಲಿ ಇರಲಿಕ್ಕಾಗಲಿಲ್ಲ? ನೀನು ಎಲ್ಲಿ ಪ್ರಯಾಣ ಮಾಡುತ್ತಿದ್ದೆ ಮತ್ತು ಏಕೆ ಅಲ್ಲಿಗೆ ಹೋಗಿದ್ದೆ?”

03015002 ಕೃಷ್ಣ ಉವಾಚ।
03015002a ಶಾಲ್ವಸ್ಯ ನಗರಂ ಸೌಭಂ ಗತೋಽಹಂ ಭರತರ್ಷಭ।
03015002c ವಿನಿಹಂತುಂ ನರಶ್ರೇಷ್ಠ ತತ್ರ ಮೇ ಶೃಣು ಕಾರಣಂ।।

ಕೃಷ್ಣನು ಹೇಳಿದನು: “ಭರತರ್ಷಭ! ನಾನು ಶಾಲ್ವನ ನಗರ ಸೌಭವನ್ನು ನಾಶಗೊಳಿಸಲು ಹೋಗಿದ್ದೆ. ನರಶ್ರೇಷ್ಠ! ಅದರ ಕಾರಣವನ್ನು ನನ್ನಿಂದ ಕೇಳು.

03015003a ಮಹಾತೇಜಾ ಮಹಾಬಾಹುರ್ಯಃ ಸ ರಾಜಾ ಮಹಾಯಶಾಃ।
03015003c ದಮಘೋಷಾತ್ಮಜೋ ವೀರಃ ಶಿಶುಪಾಲೋ ಮಯಾ ಹತಃ।।
03015004a ಯಜ್ಞೇ ತೇ ಭರತಶ್ರೇಷ್ಠ ರಾಜಸೂಯೇಽರ್ಹಣಾಂ ಪ್ರತಿ।
03015004c ಸ ರೋಷವಶಸಂಪ್ರಾಪ್ತೋ ನಾಮೃಷ್ಯತ ದುರಾತ್ಮವಾನ್।।

ಭರತಶ್ರೇಷ್ಠ! ನಿನ್ನ ರಾಜಸೂಯ ಯಾಗದಲ್ಲಿ ನಾನು ಆ ವೀರ ದಮಘೋಷನ ಮಗ ಮಹಾತೇಜಸ್ವಿ ಮಹಾಬಾಹು ಮಹಾಯಶ ರಾಜ ದುರಾತ್ಮ ಶಿಶುಪಾಲನು ರೋಷವಶನಾಗಿ ನನಗೆ ಗೌರವ ಪೂಜೆಯನ್ನು ನಿಲ್ಲಿಸಲು ಪ್ರಯತ್ನಿಸಿದಾಗ ನಾನು ಅವನನ್ನು ಸಂಹರಿಸಿದೆ.

03015005a ಶ್ರುತ್ವಾ ತಂ ನಿಹತಂ ಶಾಲ್ವಸ್ತೀವ್ರರೋಷಸಮನ್ವಿತಃ।
03015005c ಉಪಾಯಾದ್ದ್ವಾರಕಾಂ ಶೂನ್ಯಾಮಿಹಸ್ಥೇ ಮಯಿ ಭಾರತ।।

ಭಾರತ! ನನ್ನಿಂದ ಅವನು ಹತನಾದನೆಂದು ಕೇಳಿ ತೀವ್ರ ರೋಷಸಮನ್ವಿತನಾದ ಶಾಲ್ವನು, ನಾನು ನಿಮ್ಮೊಂದಿಗಿರುವಾಗ ನಾನಿಲ್ಲದ ದ್ವಾರಕೆಗೆ ಉಪಾಯದಿಂದ ಆಕ್ರಮಣ ಮಾಡಿದನು.

03015006a ಸ ತತ್ರ ಯೋಧಿತೋ ರಾಜನ್ಬಾಲಕೈರ್ವೃಷ್ಣಿಪುಂಗವೈಃ।

ರಾಜನ್! ಅಲ್ಲಿ ಬಾಲಕ ವೃಷ್ಣಿವೀರರು ಹೋರಾಡಿದರು.

03015006c ಆಗತಃ ಕಾಮಗಂ ಸೌಭಮಾರುಃಶೈವ ನೃಶಂಸಕೃತ್।।
03015007a ತತೋ ವೃಷ್ಣಿಪ್ರವೀರಾಂಸ್ತಾನ್ಬಾಲಾನ್ ಹತ್ವಾ ಬಹೂಂಸ್ತದಾ।
03015007c ಪುರೋದ್ಯಾನಾನಿ ಸರ್ವಾಣಿ ಭೇದಯಾಮಾಸ ದುರ್ಮತಿಃ।।

ಆ ಕ್ರೂರಿ ದುರ್ಮತಿಯು ಬೇಕಾದರಲ್ಲಿ ಹೋಗಬಲ್ಲ ಸೌಭವನ್ನೇರಿ ಬಂದು ಬಹಳಷ್ಟು ಬಾಲಕ ವೃಷ್ಣಿಪ್ರವೀರರನ್ನು ಸಂಹರಿಸಿ ಎಲ್ಲ ಪುರೋದ್ಯಾನಗಳನ್ನೂ ನಾಶಪಡಿಸಿದನು.

03015008a ಉಕ್ತವಾಂಶ್ಚ ಮಹಾಬಾಹೋ ಕ್ವಾಸೌ ವೃಷ್ಣಿಕುಲಾಧಮಃ।
03015008c ವಾಸುದೇವಃ ಸುಮಂದಾತ್ಮಾ ವಸುದೇವಸುತೋ ಗತಃ।।

ಮಹಾಬಾಹೋ! ಅವನು “ವೃಷ್ಣಿಕುಲಾಧಮ ಮೂಢ ವಸುದೇವಸುತ ವಾಸುದೇವನು ಎಲ್ಲಿದ್ದಾನೆ?” ಎಂದು ಕೂಗಿದನು.

03015009a ತಸ್ಯ ಯುದ್ಧಾರ್ಥಿನೋ ದರ್ಪಂ ಯುದ್ಧೇ ನಾಶಯಿತಾಸ್ಮ್ಯಹಂ।
03015009c ಆನರ್ತಾಃ ಸತ್ಯಮಾಖ್ಯಾತ ತತ್ರ ಗಂತಾಸ್ಮಿ ಯತ್ರ ಸಃ।।

“ಯುದ್ಧವನ್ನು ಬಯಸುವ ಅವನ ದರ್ಪವನ್ನು ನಾನು ಯುದ್ಧದಲ್ಲಿ ನಾಶಪಡಿಸುತ್ತೇನೆ. ಅನಾರ್ತರೇ! ಅವನೆಲ್ಲಿದ್ದಾನೆ ಹೇಳಿ! ಎಲ್ಲಿದ್ದರೂ ಅಲ್ಲಿಗೇ ಹೋಗುತ್ತೇನೆ.

03015010a ತಂ ಹತ್ವಾ ವಿನಿವರ್ತಿಷ್ಯೇ ಕಂಸಕೇಶಿನಿಷೂದನಂ।
03015010c ಅಹತ್ವಾ ನ ನಿವರ್ತಿಷ್ಯೇ ಸತ್ಯೇನಾಯುಧಮಾಲಭೇ।।

ಕಂಸ-ಕೇಶಿನಿಯರನ್ನು ಕೊಂದ ಅವನನ್ನು ಸಂಹರಿಸಿಯೇ ಹಿಂದಿರುಗುತ್ತೇನೆ. ಅವನನ್ನು ಕೊಲ್ಲದೇ ನಾನು ಹಿಂದಿರುಗುವುದಿಲ್ಲ. ಇದು ನನ್ನ ಈ ಖಡ್ಗದ ಮೇಲಿನ ಆಣೆ!

03015011a ಕ್ವಾಸೌ ಕ್ವಾಸಾವಿತಿ ಪುನಸ್ತತ್ರ ತತ್ರ ವಿಧಾವತಿ।
03015011c ಮಯಾ ಕಿಲ ರಣೇ ಯುದ್ಧಂ ಕಾಂಕ್ಷಮಾಣಃ ಸ ಸೌಭರಾಟ್।।

ಎಲ್ಲಿದ್ದಾನೆ? ಎಲ್ಲಿದ್ದಾನೆ?” ಎಂದು ಪುನಃ ಪುನಃ ಕೂಗಿ ಕೇಳುತ್ತಾ ನನ್ನೊಡನೆ ರಣದಲ್ಲಿ ಯುದ್ಧಮಾಡ ಬಯಸಿದ ಆ ಸೌಭರಾಜನು ಒಂದೆಡೆಯಿಂದ ಇನ್ನೊಂದೆಡೆಗೆ ಹಾರಿಹೋಗುತ್ತಿದ್ದನು.

03015012a ಅದ್ಯ ತಂ ಪಾಪಕರ್ಮಾಣಂ ಕ್ಷುದ್ರಂ ವಿಶ್ವಾಸಘಾತಿನಂ।
03015012c ಶಿಶುಪಾಲವಧಾಮರ್ಷಾದ್ಗಮಯಿಷ್ಯೇ ಯಮಕ್ಷಯಂ।।

“ಶಿಶುಪಾಲನನ್ನು ಸಂಹರಿಸಿದುದಕ್ಕಾಗಿ ಇಂದು ನಾನು ಆ ಪಾಪಕರ್ಮಿ, ಕ್ಷುದ್ರ, ವಿಶ್ವಾಸಘಾತಿಯನ್ನು ಸಿಟ್ಟಿನಿಂದ ಯಮಸದನಕ್ಕೆ ಕಳುಹಿಸುತ್ತೇನೆ!

03015013a ಮಮ ಪಾಪಸ್ವಭಾವೇನ ಭ್ರಾತಾ ಯೇನ ನಿಪಾತಿತಃ।
03015013c ಶಿಶುಪಾಲೋ ಮಹೀಪಾಲಸ್ತಂ ವಧಿಷ್ಯೇ ಮಹೀತಲೇ।।

ನನ್ನ ಭ್ರಾತಾ ಮಹೀಪಾಲ ಶಿಶುಪಾಲನನ್ನು ಪಾಪಸ್ವಭಾವದಿಂದ ಕೆಳಗುರುಳಿಸಿದವನನ್ನು ವಧಿಸಿ ನೆಲಕ್ಕುರಿಳಿಸುತ್ತೇನೆ.

03015014a ಭ್ರಾತಾ ಬಾಲಶ್ಚ ರಾಜಾ ಚ ನ ಚ ಸಂಗ್ರಾಮಮೂರ್ಧನಿ।
03015014c ಪ್ರಮತ್ತಶ್ಚ ಹತೋ ವೀರಸ್ತಂ ಹನಿಷ್ಯೇ ಜನಾರ್ದನಂ।।

ಆ ಭ್ರಾತ ಬಾಲಕ ರಾಜನು ಸಂಗ್ರಾಮದ ಮನಸ್ಸಿನಲ್ಲಿರದಿದ್ದಾಗ, ಬೇರೆಯ ವಿಷಯದ ಗುಂಗಿನಲ್ಲಿದ್ದಾಗ ಆ ವೀರನನ್ನು ಕೊಂದ ಜನಾರ್ದನನನ್ನು ಸಂಹರಿಸುತ್ತೇನೆ!”

03015015a ಏವಮಾದಿ ಮಹಾರಾಜ ವಿಲಪ್ಯ ದಿವಮಾಸ್ಥಿತಃ।
03015015c ಕಾಮಗೇನ ಸ ಸೌಭೇನ ಕ್ಷಿಪ್ತ್ವಾ ಮಾಂ ಕುರುನಂದನ।।

ಮಹಾರಾಜ! ಕುರುನಂದನ! ಹೀಗೆ ಕೂಗಾಡಿ ನನ್ನನ್ನು ಬೈದು ಅವನು ಕಾಮಗ ಸೌಭದಲ್ಲಿ ಆಕಾಶವನ್ನೇರಿದನು.

03015016a ತಮಶ್ರೌಷಮಹಂ ಗತ್ವಾ ಯಥಾ ವೃತ್ತಃ ಸುದುರ್ಮತಿಃ।
03015016c ಮಯಿ ಕೌರವ್ಯ ದುಷ್ಟಾತ್ಮಾ ಮಾರ್ತ್ತಿಕಾವತಕೋ ನೃಪಃ।।

ಕೌರವ್ಯ! ನಾನು ಹಿಂದಿರುಗಿ ಬಂದ ನಂತರ ಆ ಸುದುರ್ಮತಿ ದುಷ್ಟಾತ್ಮ ಮಾರ್ತ್ತಿಕಾವತಕ ನೃಪನು ನನ್ನ ವಿಷಯದಲ್ಲಿ ನಡೆದುಕೊಂಡ ಕುರಿತು ಕೇಳಿದೆನು.

03015017a ತತೋಽಹಮಪಿ ಕೌರವ್ಯ ರೋಷವ್ಯಾಕುಲಲೋಚನಃ।
03015017c ನಿಶ್ಚಿತ್ಯ ಮನಸಾ ರಾಜನ್ವಧಾಯಾಸ್ಯ ಮನೋ ದಧೇ।।
03015018a ಆನರ್ತೇಷು ವಿಮರ್ದಂ ಚ ಕ್ಷೇಪಂ ಚಾತ್ಮನಿ ಕೌರವ।
03015018c ಪ್ರವೃದ್ಧಮವಲೇಪಂ ಚ ತಸ್ಯ ದುಷ್ಕೃತಕರ್ಮಣಃ।।

ಕೌರವ್ಯ! ರಾಜನ್! ಅವನು ಆನರ್ತವನ್ನು ಧ್ವಂಸ ಮಾಡಿದುದನ್ನು, ನನ್ನ ಕುರಿತು ನಡೆದುಕೊಂಡಿದ್ದುದನ್ನು, ಮತ್ತು ಅವನ ದುಷ್ಕರ್ಮಗಳು ಹೆಚ್ಚಾಗುತ್ತಿರುವುದನ್ನು ಕೇಳಿದಾಗ ನನ್ನ ಕಣ್ಣುಗಳು ಕೆಂಪಾಗಿ ರೋಷಗೊಂಡು ಮನಸ್ಸಿನಲ್ಲಿಯೇ ಅವನನ್ನು ವಧಿಸುವ ನಿಶ್ಚಯ ಮಾಡಿದೆ.

03015019a ತತಃ ಸೌಭವಧಾಯಾಹಂ ಪ್ರತಸ್ಥೇ ಪೃಥಿವೀಪತೇ।
03015019c ಸ ಮಯಾ ಸಾಗರಾವರ್ತೇ ದೃಷ್ಟ ಆಸೀತ್ಪರೀಪ್ಸತಾ।।

ಪೃಥಿವೀಪತೇ! ಆಗ ಸೌಭನನ್ನು ಸಂಹರಿಸಲು ಹೊರಟೆ ಮತ್ತು ಅವನನ್ನು ಹುಡುಕುತ್ತಿರಲು ನನಗೆ ಅವನು ಸಾಗರದ ತೀರದಲ್ಲಿ ಇದ್ದುದನ್ನು ನೋಡಿದೆನು.

03015020a ತತಃ ಪ್ರಧ್ಮಾಪ್ಯ ಜಲಜಂ ಪಾಂಚಜನ್ಯಮಹಂ ನೃಪ।
03015020c ಆಹೂಯ ಶಾಲ್ವಂ ಸಮರೇ ಯುದ್ಧಾಯ ಸಮವಸ್ಥಿತಃ।।

ನೃಪ! ಆಗ ನಾನು ಸಾಗರದಿಂದ ಹುಟ್ಟಿದ ಪಾಂಚಜನ್ಯವನ್ನು ಊದಿ ಶಾಲ್ವನನ್ನು ಸಮರಕ್ಕೆ ಆಹ್ವಾನಿಸಿದೆ.

03015021a ಸುಮುಹೂರ್ತಮಭೂದ್ಯುದ್ಧಂ ತತ್ರ ಮೇ ದಾನವೈಃ ಸಹ।
03015021c ವಶೀಭೂತಾಶ್ಚ ಮೇ ಸರ್ವೇ ಭೂತಲೇ ಚ ನಿಪಾತಿತಾಃ।।

ಅಲ್ಲಿ ನಾನು ಮತ್ತು ದಾನವರೊಡನೆ ತುಂಬಾ ಸಮಯದ ವರೆಗೆ ನಡೆದ ಯುದ್ಧದಲ್ಲಿ ಅವರೆಲ್ಲರನ್ನೂ ಗೆದ್ದು ಭೂಮಿಗುರುಳಿಸಿದೆನು.

03015022a ಏತತ್ಕಾರ್ಯಂ ಮಹಾಬಾಹೋ ಯೇನಾಹಂ ನಾಗಮಂ ತದಾ।
03015022c ಶ್ರುತ್ವೈವ ಹಾಸ್ತಿನಪುರಂ ದ್ಯೂತಂ ಚಾವಿನಯೋತ್ಥಿತಂ।।

ಮಹಾಬಾಹೋ! ಇದೇ ಕೆಲಸವು ನನ್ನನ್ನು ಹಸ್ತಿನಾಪುರದಲ್ಲಿ ನಡೆದ ಅವಿನಯದ ದ್ಯೂತದ ಕುರಿತು ಕೇಳಿದ ಕೂಡಲೇ ನನಗೆ ಬರಲಿಕ್ಕಾಗದ ಹಾಗೆ ತಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಪಂಚದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಹದಿನೈದನೆಯ ಅಧ್ಯಾಯವು.


  1. ಶ್ರೀಮದ್ಭಾಗವತ ಮಹಾಪುರಾಣದ ದಶಮ ಸ್ಕಂಧದ ಉತ್ತರಾರ್ಧದ ೭೬ನೆ ಮತ್ತು ೭೭ ಅಧ್ಯಾಯಗಳಲ್ಲಿ ಶಾಲ್ವನೊಡನೆ ಯಾದವರ ಯುದ್ಧ ಮತ್ತು ಶಾಲ್ವನ ಸಂಹಾರದ ಕುರಿತಿದೆ. ಇದನ್ನು ಪರಿಶಿಷ್ಠದಲ್ಲಿ ನೀಡಲಾಗಿದೆ. ↩︎