ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕೈರಾತ ಪರ್ವ
ಅಧ್ಯಾಯ 14
ಸಾರ
ದ್ಯೂತದ ವೇಳೆಯಲ್ಲಿ ತಾನು ದ್ವಾರಕೆಯಲ್ಲಿದ್ದಿದ್ದರೆ ಯುಧಿಷ್ಠಿರನು ಈ ಕಷ್ಟಕ್ಕೊಳಗಾಗುತ್ತಿರಲಿಲ್ಲ ಎಂದು ಕೃಷ್ಣನು ಹೇಳುವುದು (1-17).
03014001 ವಾಸುದೇವ ಉವಾಚ।
03014001a ನೇದಂ ಕೃಚ್ಚ್ರಮನುಪ್ರಾಪ್ತೋ ಭವಾನ್ಸ್ಯಾದ್ವಸುಧಾಧಿಪ।
03014001c ಯದ್ಯಹಂ ದ್ವಾರಕಾಯಾಂ ಸ್ಯಾಂ ರಾಜನ್ಸನ್ನಿಹಿತಃ ಪುರಾ।।
ವಾಸುದೇವನು ಹೇಳಿದನು: “ವಸುಧಾಧಿಪ! ರಾಜನ್! ಆಗ ನಾನು ದ್ವಾರಕೆಯಲ್ಲಿ ಇದ್ದಿದ್ದರೆ ನೀನು ಈ ಕಷ್ಟಕ್ಕೆ ಒಳಗಾಗುತ್ತಿರಲಿಲ್ಲ.
03014002a ಆಗಚ್ಚೇಯಮಹಂ ದ್ಯೂತಮನಾಹೂತೋಽಪಿ ಕೌರವೈಃ।
03014002c ಆಂಬಿಕೇಯೇನ ದುರ್ಧರ್ಷ ರಾಜ್ಞಾ ದುರ್ಯೋಧನೇನ ಚ।।
ಕೌರವರು, ರಾಜ ಅಂಬಿಕೇಯ ಮತ್ತು ದುರ್ಯೋಧನನು ನನ್ನನ್ನು ಕರೆಯದೇ ಇದ್ದರೂ ದ್ಯೂತಕ್ಕೆ ಬರುತ್ತಿದ್ದೆ1.
03014003a ವಾರಯೇಯಮಹಂ ದ್ಯೂತಂ ಬಹೂನ್ದೋಷಾನ್ಪ್ರದರ್ಶಯನ್।
03014003c ಭೀಷ್ಮದ್ರೋಣೌ ಸಮಾನಾಯ್ಯ ಕೃಪಂ ಬಾಹ್ಲೀಕಮೇವ ಚ।।
ಭೀಷ್ಮ, ದ್ರೋಣ, ಕೃಪ, ಮತ್ತು ಬಾಹ್ಲೀಕರನ್ನೂ ಸೇರಿ ಎಲ್ಲರಿಗೂ ದ್ಯೂತದ ಹಲವಾರು ದೋಷಗಳನ್ನು ತೋರಿಸಿಕೊಟ್ಟು ಅದನ್ನು ನಿಲ್ಲಿಸುತ್ತಿದ್ದೆ.
03014004a ವೈಚಿತ್ರವೀರ್ಯಂ ರಾಜಾನಮಲಂ ದ್ಯೂತೇನ ಕೌರವ।
03014004c ಪುತ್ರಾಣಾಂ ತವ ರಾಜೇಂದ್ರ ತ್ವನ್ನಿಮಿತ್ತಮಿತಿ ಪ್ರಭೋ।।
03014005a ತತ್ರ ವಕ್ಷ್ಯಾಮ್ಯಹಂ ದೋಷಾನ್ಯೈರ್ಭವಾನವರೋಪಿತಃ।
03014005c ವೀರಸೇನಸುತೋ ಯೈಶ್ಚ ರಾಜ್ಯಾತ್ಪ್ರಭ್ರಂಶಿತಃ ಪುರಾ।।
ನಿಮ್ಮ ಪರವಾಗಿ ರಾಜ ವೈಚಿತ್ರವೀರ್ಯನಿಗೆ “ರಾಜೇಂದ್ರ! ಪ್ರಭೋ! ನಿನ್ನ ಮಕ್ಕಳು ಆಡುತ್ತಿರುವ ಈ ದ್ಯೂತವನ್ನು ನಿಲ್ಲಿಸು!” ಎಂದು ಹೇಳಿ ಹಿಂದೆ ವೀರಸೇನನ ಮಗ2ನನ್ನು ಹೇಗೆ ರಾಜ್ಯಭ್ರಷ್ಠನನ್ನಾಗಿ ಮಾಡಲಾಗಿತ್ತೋ ಅದೇ ಮೋಸದಿಂದ ನಿಮ್ಮನ್ನೂ ರಾಜ್ಯಭ್ರಷ್ಠರನ್ನಾಗಿ ಮಾಡುತ್ತಿದ್ದಾರೆ ಎನ್ನುವುದನ್ನು ನೆನಪಿಸಿಕೊಡುತ್ತಿದ್ದೆ.
03014006a ಅಭಕ್ಷಿತವಿನಾಶಂ ಚ ದೇವನೇನ ವಿಶಾಂ ಪತೇ।
03014006c ಸಾತತ್ಯಂ ಚ ಪ್ರಸಂಗಸ್ಯ ವರ್ಣಯೇಯಂ ಯಥಾತಥಂ।।
ವಿಶಾಂಪತೇ! ದ್ಯೂತವಾಡುವುದರಿಂದ ಇನ್ನೂ ಭಕ್ಷಿಸದೇ ಇರುವುದನ್ನು ಹೇಗೆ ಕಳೆದುಕೊಳ್ಳುತ್ತಾನೆ ಮತ್ತು ದ್ಯೂತದ ವ್ಯಸನವು ಹೇಗೆ ಮುಂದುವರೆಯುತ್ತದೆ ಎನ್ನುವ ಸತ್ಯವನ್ನು ತೋರಿಸಿಕೊಡುತ್ತಿದ್ದೆ.
03014007a ಸ್ತ್ರಿಯೋಽಕ್ಷಾ ಮೃಗಯಾ ಪಾನಮೇತತ್ಕಾಮಸಮುತ್ಥಿತಂ।
03014007c ವ್ಯಸನಂ ಚತುಷ್ಟಯಂ ಪ್ರೋಕ್ತಂ ಯೈ ರಾಜನ್ಭ್ರಶ್ಯತೇ ಶ್ರಿಯಃ।।
ರಾಜನ್! ಹೆಂಗಸರು, ಜೂಜು, ಬೇಟೆ ಮತ್ತು ಮದ್ಯಪಾನ ಇವು ನಾಲ್ಕೂ ವ್ಯಸನಗಳು ಕಾಮದಿಂದ ಹುಟ್ಟುತ್ತವೆ ಮತ್ತು ಮನುಷ್ಯನ ಭಾಗ್ಯವನ್ನು ಕಳೆಯುತ್ತವೆ.
03014008a ತತ್ರ ಸರ್ವತ್ರ ವಕ್ತವ್ಯಂ ಮನ್ಯಂತೇ ಶಾಸ್ತ್ರಕೋವಿದಾಃ।
03014008c ವಿಶೇಷತಶ್ಚ ವಕ್ತವ್ಯಂ ದ್ಯೂತೇ ಪಶ್ಯಂತಿ ತದ್ವಿದಃ।।
ಶಾಸ್ತ್ರಗಳನ್ನು ತಿಳಿದವರು ನಾನು ಹೇಳಿದುದೆಲ್ಲವನ್ನೂ ಒಪ್ಪಿಕೊಳ್ಳುತ್ತಾರೆ. ಆದರೆ ವಿಶೇಷವಾಗಿ ದ್ಯೂತದ ಕುರಿತು ಇದನ್ನು ಹೇಳಬಹುದು ಎಂದು ತಿಳಿದಿದ್ದಾರೆ.
03014009a ಏಕಾಹ್ನಾ ದ್ರವ್ಯನಾಶೋಽತ್ರ ಧ್ರುವಂ ವ್ಯಸನಮೇವ ಚ।
03014009c ಅಭುಕ್ತನಾಶಶ್ಚಾರ್ಥಾನಾಂ ವಾಕ್ಪಾರುಷ್ಯಂ ಚ ಕೇವಲಂ।।
ಒಬ್ಬನು ಒಂದೇ ದಿನದಲ್ಲಿ ಎಲ್ಲ ಸಂಪತ್ತನ್ನೂ ಕಳೆದುಕೊಳ್ಳುತ್ತಾನೆ ಮತ್ತು ಖಂಡಿತವಾಗಿಯೂ ದುಃಖವನ್ನು ಹೊಂದುತ್ತಾನೆ. ಇನ್ನೂ ಭೋಗಿಸದೇ ಇದ್ದ ಐಶ್ವರ್ಯವನ್ನು ಕಳೆದುಕೊಂಡು ಕೇವಲ ಪೌರುಷದ ಮಾತುಗಳು ಉಳಿದುಕೊಳ್ಳುತ್ತವೆ.
03014010a ಏತಚ್ಚಾನ್ಯಚ್ಚ ಕೌರವ್ಯ ಪ್ರಸಂಗಿ ಕಟುಕೋದಯಂ।
03014010c ದ್ಯೂತೇ ಬ್ರೂಯಾಂ ಮಹಾಬಾಹೋ ಸಮಾಸಾದ್ಯಾಂಬಿಕಾಸುತಂ।।
ಮಹಾಬಾಹೋ! ಇದು ಮತ್ತು ಇನ್ನೂ ಇತರ ವಿಷವನ್ನು ಹುಟ್ಟಿಸುವ ಪ್ರಸಂಗಗಳ ಕುರಿತು ಅಂಬಿಕಾಸುತನ ಎದುರಿಗೆ ಹೇಳುತ್ತಿದ್ದೆ.
03014011a ಏವಮುಕ್ತೋ ಯದಿ ಮಯಾ ಗೃಹ್ಣೀಯಾದ್ವಚನಂ ಮಮ।
03014011c ಅನಾಮಯಂ ಸ್ಯಾದ್ಧರ್ಮಸ್ಯ ಕುರೂಣಾಂ ಕುರುನಂದನ।।
ಕುರುನಂದನ! ನಾನು ಹೇಳಿದ ಈ ಮಾತುಗಳನ್ನು ಸ್ವೀಕರಿಸಿದ್ದರೆ ಕುರುಗಳ ಧರ್ಮವು ಕೆಡದೇ ಇರುತ್ತಿತ್ತು.
03014012a ನ ಚೇತ್ಸ ಮಮ ರಾಜೇಂದ್ರ ಗೃಹ್ಣೀಯಾನ್ಮಧುರಂ ವಚಃ।
03014012c ಪಥ್ಯಂ ಚ ಭರತಶ್ರೇಷ್ಠ ನಿಗೃಹ್ಣೀಯಾಂ ಬಲೇನ ತಂ।।
ರಾಜೇಂದ್ರ! ಭರತಶ್ರೇಷ್ಠ! ಒಂದು ವೇಳೆ ನನ್ನ ಈ ಸೌಮ್ಯ ಮತ್ತು ಸರಿಯಾದ ಮಾತುಗಳನ್ನು ಕೇಳದೇ ಇದ್ದಿದ್ದರೆ ಅವನನ್ನು ಬಲವನ್ನುಪಯೋಗಿಸಿ ಸರಿಯಾದ ದಾರಿಗೆ ತರುತ್ತಿದ್ದೆ.
03014013a ಅಥೈನಾನಭಿನೀಯೈವಂ ಸುಹೃದೋ ನಾಮ ದುರ್ಹೃದಃ।
03014013c ಸಭಾಸದಶ್ಚ ತಾನ್ಸರ್ವಾನ್ಭೇದಯೇಯಂ ದುರೋದರಾನ್।।
ಇದೇ ರೀತಿಯಲ್ಲಿ ಆ ಸಭೆಯಲ್ಲಿದ್ದ ಇತರ ಸ್ನೇಹಿತರೆಂದು ತೋರಿಸಿಕೊಳ್ಳುವ ಶತ್ರುಗಳಿಗೂ ತೋರಿಸಿಕೊಡುತ್ತಿದ್ದೆ ಮತ್ತು ಮೋಸದಿಂದ ಜೂಜಾಡುತ್ತಿದ್ದ ಎಲ್ಲರನ್ನೂ ಸಂಹರಿಸುತ್ತಿದ್ದೆ.
03014014a ಅಸಾನ್ನಿಧ್ಯಂ ತು ಕೌರವ್ಯ ಮಮಾನರ್ತೇಷ್ವಭೂತ್ತದಾ।
03014014c ಯೇನೇದಂ ವ್ಯಸನಂ ಪ್ರಾಪ್ತಾ ಭವಂತೋ ದ್ಯೂತಕಾರಿತಂ।।
ಕೌರವ್ಯ! ಅನಾರ್ತದಿಂದ ನಾನು ದೂರವಿದ್ದೆನಾದುದರಿಂದಲೇ ನೀವು ದ್ಯೂತದಿಂದ ಉಂಟಾದ ಈ ಎಲ್ಲ ಕಷ್ಟಗಳನ್ನು ಅನುಭವಿಸಬೇಕಾಗಿದೆ.
03014015a ಸೋಽಹಮೇತ್ಯ ಕುರುಶ್ರೇಷ್ಠ ದ್ವಾರಕಾಂ ಪಾಂಡುನಂದನ।
03014015c ಅಶ್ರೌಷಂ ತ್ವಾಂ ವ್ಯಸನಿನಂ ಯುಯುಧಾನಾದ್ಯಥಾತಥಂ।।
ಕುರುಶ್ರೇಷ್ಠ! ಪಾಂಡುನಂದನ! ನಾನು ದ್ವಾರಕೆಗೆ ಮರಳಿ ಬಂದ ನಂತರವೇ ನನಗೆ ಯುಯುಧಾನನಿಂದ ನಿಮಗಾದ ಕಷ್ಟದ ಕುರಿತು ಯಥಾವತ್ತಾಗಿ ತಿಳಿಯಿತು.
03014016a ಶ್ರುತ್ವೈವ ಚಾಹಂ ರಾಜೇಂದ್ರ ಪರಮೋದ್ವಿಗ್ನಮಾನಸಃ।
03014016c ತೂರ್ಣಮಭ್ಯಾಗತೋಽಸ್ಮಿ ತ್ವಾಂ ದ್ರಷ್ಟುಕಾಮೋ ವಿಶಾಂ ಪತೇ।।
ರಾಜೇಂದ್ರ! ವಿಶಾಂಪತೇ! ಇದನ್ನು ಕೇಳಿದ ಕೂಡಲೇ ಮನಸ್ಸಿನಲ್ಲಿ ತುಂಬಾ ಬೇಸರಪಟ್ಟು ತ್ವರೆಮಾಡಿ ನಿನ್ನನ್ನು ನೋಡಲು ಇಲ್ಲಿಗೆ ಬಂದಿದ್ದೇನೆ.
03014017a ಅಹೋ ಕೃಚ್ಚ್ರಮನುಪ್ರಾಪ್ತಾಃ ಸರ್ವೇ ಸ್ಮ ಭರತರ್ಷಭ।
03014017c ಯೇ ವಯಂ ತ್ವಾಂ ವ್ಯಸನಿನಂ ಪಶ್ಯಾಮಃ ಸಹ ಸೋದರೈಃ।।
ಭರತರ್ಷಭ! ಸಹೋದರರ ಸಹಿತ ಕಷ್ಟದಲ್ಲಿರುವ ನಿನ್ನನ್ನು ನೋಡಿ ನಾವೆಲ್ಲರೂ ತುಂಬಾ ದುಃಖದಲ್ಲಿದ್ದೇವೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ವಾಸುದೇವವಾಕ್ಯೇ ಚತುರ್ದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ವಾಸುದೇವನ ಮಾತು ಎನ್ನುವ ಹದಿನಾಲ್ಕನೆಯ ಅಧ್ಯಾಯವು.