013 ದ್ರೌಪದ್ಯಾಶ್ವಾಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 13

ಸಾರ

ಪಾಂಡವರನ್ನು ಕಾಣಲು ವೃಷ್ಣಿಗಳು, ಭೋಜರು, ಅಂಧಕರು, ಪಾಂಚಾಲರು, ಚೇದಿರಾಜ ಮತ್ತು ಕೇಕಯರು ಕಾಮ್ಯಕಕ್ಕೆ ಬಂದುದು; ಕೃಷ್ಣನು ಕುಪಿತನಾಗಿ “ಈ ಭೂಮಿಯು ದುರ್ಯೋಧನ, ಕರ್ಣ, ಶಕುನಿ ಮತ್ತು ದುರಾತ್ಮ ದುಃಶಾಸನ ಈ ನಾಲ್ವರ ರಕ್ತವನ್ನು ಕುಡಿಯುತ್ತದೆ!” ಎಂದು ಹೇಳುವುದು (1-6). ಕೇಶವನನ್ನು ಶಾಂತಗೊಳಿಸಲು ಅರ್ಜುನನು ಅವನ ಮಹಾತ್ಮೆಯನ್ನು ಸ್ತುತಿಸುವುದು (7-36). ಸಂತುಷ್ಟನಾದ ಹರಿಯು ಅರ್ಜುನನೊಡನಿರುವ ಮಿತ್ರತ್ವವನ್ನು ಹೇಳಿಕೊಂಡಿದುದು (37-40). ದ್ರೌಪದಿಯು ಕೃಷ್ಣನಲ್ಲಿ ತನ್ನ ದುಃಖವನ್ನು ಹೇಳಿಕೊಂಡು ರೋದಿಸುವುದು (41-113). ಕೃಷ್ಣ- ಧೃಷ್ಟದ್ಯುಮ್ನರು ದ್ರೌಪದಿಗೆ ಆಶ್ವಾಸನೆ ನೀಡುವುದು (114-120).

03013001 ವೈಶಂಪಾಯನ ಉವಾಚ।
03013001a ಭೋಜಾಃ ಪ್ರವ್ರಜಿತಾಂ ಶ್ರುತ್ವಾ ವೃಷ್ಣಯಶ್ಚಾಂಧಕೈಃ ಸಹ।
03013001c ಪಾಂಡವಾನ್ದುಃಖಸಂತಪ್ತಾನ್ಸಮಾಜಗ್ಮುರ್ಮಹಾವನೇ।।

ವೈಶಂಪಾಯನನು ಹೇಳಿದನು: “ಪಾಂಡವರು ಸೋತು ದುಃಖಸಂತಪ್ತರಾಗಿದ್ದಾರೆ ಎಂದು ಕೇಳಿ ಭೋಜರು ವೃಷ್ಣಿ ಮತ್ತು ಅಂಧಕರೊಡಗೂಡಿ ಆ ಮಹಾವನಕ್ಕೆ ಬಂದರು.

03013002a ಪಾಂಚಾಲಸ್ಯ ಚ ದಾಯಾದಾ ಧೃಷ್ಟಕೇತುಶ್ಚ ಚೇದಿಪಃ।
03013002c ಕೇಕಯಾಶ್ಚ ಮಹಾವೀರ್ಯಾ ಭ್ರಾತರೋ ಲೋಕವಿಶ್ರುತಾಃ।।
03013003a ವನೇ ತೇಽಭಿಯಯುಃ ಪಾರ್ಥಾನ್ಕ್ರೋಧಾಮರ್ಶಸಮನ್ವಿತಾಃ।
03013003c ಗರ್ಹಯಂತೋ ಧಾರ್ತರಾಷ್ಟ್ರಾನ್ಕಿಂ ಕುರ್ಮ ಇತಿ ಚಾಬ್ರುವನ್।।

ಪಾಂಚಾಲನ ಮಗ, ಚೇದಿರಾಜ ಧೃಷ್ಟಕೇತು1, ಮತ್ತು ಲೋಕವಿಶ್ರುತ ಮಹಾವೀರ್ಯ ಕೇಕಯ ಸಹೋದರರು ಕ್ರೋಧ ಮತ್ತು ಅಸಹನೆಗಳುಳ್ಳವರಾಗಿ ಧಾರ್ತರಾಷ್ಟ್ರರನ್ನು ನಿಂದಿಸುತ್ತಾ ವನದಲ್ಲಿದ್ದ ಪಾರ್ಥರಲ್ಲಿಗೆ ಬಂದು “ಈಗ ಏನು ಮಾಡೋಣ?” ಎಂದರು.

03013004a ವಾಸುದೇವಂ ಪುರಸ್ಕೃತ್ಯ ಸರ್ವೇ ತೇ ಕ್ಷತ್ರಿಯರ್ಷಭಾಃ।
03013004c ಪರಿವಾರ್ಯೋಪವಿವಿಶುರ್ಧರ್ಮರಾಜಂ ಯುಧಿಷ್ಠಿರಂ।।

ಆ ಎಲ್ಲ ಕ್ಷತ್ರಿಯರ್ಷಭರೂ ವಾಸುದೇವನನ್ನು ಮುಂದಿಟ್ಟುಕೊಂಡು ಧರ್ಮರಾಜ ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು.

03013005 ವಾಸುದೇವ ಉವಾಚ।
03013005a ದುರ್ಯೋಧನಸ್ಯ ಕರ್ಣಸ್ಯ ಶಕುನೇಶ್ಚ ದುರಾತ್ಮನಃ।
03013005c ದುಃಶಾಸನಚತುರ್ಥಾನಾಂ ಭೂಮಿಃ ಪಾಸ್ಯತಿ ಶೋಣಿತಂ।।

ವಾಸುದೇವನು ಹೇಳಿದನು: “ಭೂಮಿಯು ದುರ್ಯೋಧನ, ಕರ್ಣ, ಶಕುನಿ ಮತ್ತು ದುರಾತ್ಮ ದುಃಶಾಸನ ಈ ನಾಲ್ವರ ರಕ್ತವನ್ನು ಕುಡಿಯುತ್ತದೆ!

03013006a ತತಃ ಸರ್ವೇಽಭಿಷಿಂಚಾಮೋ ಧರ್ಮರಾಜಂ ಯುಧಿಷ್ಠಿರಂ।
03013006c ನಿಕೃತ್ಯೋಪಚರನ್ವಧ್ಯ ಏಷ ಧರ್ಮಃ ಸನಾತನಃ।।

ಅನಂತರ ಎಲ್ಲರೂ ಧರ್ಮರಾಜ ಯುಧಿಷ್ಠಿರನನ್ನು ಅಭಿಷೇಕಿಸೋಣ! ಮೋಸದಿಂದ ನಡೆದುಕೊಳ್ಳುವವರನ್ನು ಕೊಲ್ಲಬೇಕು ಎನ್ನುವುದೇ ಸನಾತನ ಧರ್ಮ!””

03013007 ವೈಶಂಪಾಯನ ಉವಾಚ।
03013007a ಪಾರ್ಥಾನಾಮಭಿಷಂಗೇಣ ತಥಾ ಕ್ರುದ್ಧಂ ಜನಾರ್ದನಂ।
03013007c ಅರ್ಜುನಃ ಶಮಯಾಮಾಸಾ ದಿಧಕ್ಷಂತಮಿವ ಪ್ರಜಾಃ।।

ವೈಶಂಪಾಯನನು ಹೇಳಿದನು: “ಪಾರ್ಥರ ಸಲುವಾಗಿ ಪ್ರಜೆಗಳನ್ನೆಲ್ಲಾ ಸುಟ್ಟುಹಾಕುವನೋ ಎಂಬಂತೆ ಕೃದ್ಧನಾದ ಜನಾರ್ದನನನ್ನು ಅರ್ಜುನನು ಶಾಂತಗೊಳಿಸತೊಡಗಿದನು.

03013008a ಸಂಕ್ರುದ್ಧಂ ಕೇಶವಂ ದೃಷ್ಟ್ವಾ ಪೂರ್ವದೇಹೇಷು ಫಲ್ಗುನಃ।
03013008c ಕೀರ್ತಯಾಮಾಸ ಕರ್ಮಾಣಿ ಸತ್ಯಕೀರ್ತೇರ್ಮಹಾತ್ಮನಃ।।
03013009a ಪುರುಷಸ್ಯಾಪ್ರಮೇಯಸ್ಯ ಸತ್ಯಸ್ಯಾಮಿತತೇಜಸಃ।
03013009c ಪ್ರಜಾಪತಿಪತೇರ್ವಿಷ್ಣೋರ್ಲೋಕನಾಥಸ್ಯ ಧೀಮತಃ।।

ಸಂಕ್ರುದ್ಧ ಕೇಶವನನ್ನು ನೋಡಿ ಧೀಮಂತ ಅಮಿತ ತೇಜಸ್ವಿ ಫಲ್ಗುನನು ಆ ಸತ್ಯಕೀರ್ತಿ, ಮಹಾತ್ಮ, ಪುರುಷ, ಅಪ್ರಮೇಯ, ಸತ್ಯ, ಪ್ರಜಾಪತಿಗಳ ಪತಿ, ಲೋಕನಾಥ, ವಿಷ್ಣುವಿನ ಪೂರ್ವದೇಹಗಳ ಕರ್ಮಗಳನ್ನು ಕೀರ್ತಿಸತೊಡಗಿದನು2.

03013010 ಅರ್ಜುನ ಉವಾಚ।
03013010a ದಶ ವರ್ಷಸಹಸ್ರಾಣಿ ಯತ್ರಸಾಯಂಗೃಹೋ ಮುನಿಃ।
03013010c ವ್ಯಚರಸ್ತ್ವಂ ಪುರಾ ಕೃಷ್ಣ ಪರ್ವತೇ ಗಂಧಮಾದನೇ।।

ಅರ್ಜುನನು ಹೇಳಿದನು: “ಕೃಷ್ಣ! ಹಿಂದೆ ನೀನು ಗಂಧಮಾದನ ಪರ್ವತದಲ್ಲಿ ಹತ್ತುಸಾವಿರ ವರ್ಷಗಳು ಸಾಯಂಗೃಹ ಮುನಿ3ಯಾಗಿ ಸಂಚರಿಸುತ್ತಿದ್ದೆ.

03013011a ದಶ ವರ್ಷಸಹಸ್ರಾಣಿ ದಶ ವರ್ಷಶತಾನಿ ಚ।
03013011c ಪುಷ್ಕರೇಷ್ವವಸಃ ಕೃಷ್ಣ ತ್ವಮಪೋ ಭಕ್ಷಯನ್ಪುರಾ।।

ಕೃಷ್ಣ! ಹಿಂದೆ ನೀನು ಪುಷ್ಕರದಲ್ಲಿ ಹನ್ನೊಂದು ಸಾವಿರ ವರ್ಷಗಳು ಕೇವಲ ನೀರನ್ನು ಸೇವಿಸುತ್ತಾ ವಾಸಿಸಿದೆ.

03013012a ಊರ್ಧ್ವಬಾಹುರ್ವಿಶಾಲಾಯಾಂ ಬದರ್ಯಾಂ ಮಧುಸೂದನ।
03013012c ಅತಿಷ್ಠ ಏಕಪಾದೇನ ವಾಯುಭಕ್ಷಃ ಶತಂ ಸಮಾಃ।।

ಮಧುಸೂದನ! ನೀನು ವಿಶಾಲ ಬದರಿಯಲ್ಲಿ ಕೇವಲ ಗಾಳಿಯನ್ನು ಸೇವಿಸುತ್ತಾ ಬಾಹುಗಳನ್ನು ಮೇಲೆತ್ತಿ ಒಂದೇ ಕಾಲಿನಮೇಲೆ ನೂರು ವರ್ಷಗಳು ನಿಂತಿದ್ದೆ.

03013013a ಅಪಕೃಷ್ಟೋತ್ತರಾಸಂಗಃ ಕೃಶೋ ಧಮನಿಸಂತತಃ।
03013013c ಆಸೀಃ ಕೃಷ್ಣ ಸರಸ್ವತ್ಯಾಂ ಸತ್ರೇ ದ್ವಾದಶವಾರ್ಷಿಕೇ।।

ಕೃಷ್ಣ! ಸರಸ್ವತೀ ತೀರದಲ್ಲಿ ಹನ್ನೆರಡು ವರ್ಷಗಳ ಸತ್ರದಲ್ಲಿ ನೀನು ನಿನ್ನ ಉತ್ತರೀಯವನ್ನು ತೆಗೆದುಹಾಕಿ ಕೇವಲ ರಕ್ತನಾಳಗಳೇ ಕಾಣಿಸುವಷ್ಟು ಕೃಶನಾಗಿ ವಾಸಿಸುತ್ತಿದ್ದೆ.

03013014a ಪ್ರಭಾಸಂ ಚಾಪ್ಯಥಾಸಾದ್ಯ ತೀರ್ಥಂ ಪುಣ್ಯಜನೋಚಿತಂ।
03013014c ತಥಾ ಕೃಷ್ಣ ಮಹಾತೇಜಾ ದಿವ್ಯಂ ವರ್ಷಸಹಸ್ರಕಂ।
03013014e ಆತಿಷ್ಠಸ್ತಪ ಏಕೇನ ಪಾದೇನ ನಿಯಮೇ ಸ್ಥಿತಃ।।

ಕೃಷ್ಣ! ಮಹಾತೇಜಸ್ವೀ! ಪುಣ್ಯಜನರಿಗೆ ಉಚಿತವಾದ ಪ್ರಭಾಸ ತೀರ್ಥವನ್ನು ಸೇರಿ ಅಲ್ಲಿ ದಿವ್ಯ ಸಹಸ್ರ ವರ್ಷಗಳು ಒಂದೇ ಕಾಲಿನ ಮೇಲೆ ನಿಯಮದಿಂದ ನಿಂತಿದ್ದೆ.

03013015a ಕ್ಷೇತ್ರಜ್ಞಃ ಸರ್ವಭೂತಾನಾಮಾದಿರಂತಶ್ಚ ಕೇಶವ।
03013015c ನಿಧಾನಂ ತಪಸಾಂ ಕೃಷ್ಣ ಯಜ್ಞಸ್ತ್ವಂ ಚ ಸನಾತನಃ।।

ಕೇಶವ! ನೀನು ಕ್ಷೇತ್ರಜ್ಞ. ಸರ್ವಭೂತಗಳ ಆದಿ ಮತ್ತು ಅಂತ್ಯ. ತಪಸ್ಸುಗಳ ಗುರಿ. ಕೃಷ್ಣ! ಮತ್ತು ನೀನು ಸನಾತನ ಯಜ್ಞ.

03013016a ನಿಹತ್ಯ ನರಕಂ ಭೌಮಮಾಹೃತ್ಯ ಮಣಿಕುಂಡಲೇ।
03013016c ಪ್ರಥಮೋತ್ಪಾದಿತಂ ಕೃಷ್ಣ ಮೇಧ್ಯಮಶ್ವಮವಾಸೃಜಃ।।

ಕೃಷ್ಣ! ಭೂಮಿಯ ಮಗ ನರಕನನ್ನು4 ಕೊಂದು ಮಣಿಕುಂಡಲಗಳನ್ನು ತೆಗೆದುಕೊಂಡು ನಿನ್ನ ಸೃಷ್ಟಿಗೆ ಅದಿಭೂತ ಅಶ್ವಮೇಧಯೋಗ್ಯ ಕುದುರೆಯನ್ನು ಸೃಷ್ಟಿಸಿದೆ5.

03013017a ಕೃತ್ವಾ ತತ್ಕರ್ಮ ಲೋಕಾನಾಮೃಷಭಃ ಸರ್ವಲೋಕಜಿತ್।
03013017c ಅವಧೀಸ್ತ್ವಂ ರಣೇ ಸರ್ವಾನ್ಸಮೇತಾನ್ದೈತ್ಯದಾನವಾನ್।।

ಲೋಕಗಳ ವೃಷಭ! ಸರ್ವಲೋಕಜಿತ್! ಇದನ್ನು ಮಾಡಿ ಅಲ್ಲಿ ನೆರೆದಿದ್ದ ಸರ್ವ ದೈತ್ಯದಾನವರನ್ನೂ ಸಂಹರಿಸಿದೆ6.

03013018a ತತಃ ಸರ್ವೇಶ್ವರತ್ವಂ ಚ ಸಂಪ್ರದಾಯ ಶಚೀಪತೇಃ।
03013018c ಮಾನುಷೇಷು ಮಹಾಬಾಹೋ ಪ್ರಾದುರ್ಭೂತೋಽಸಿ ಕೇಶವ।।

ಅನಂತರ ಶಚೀಪತಿಗೆ ಸರ್ವೇಶ್ವರತ್ವವನ್ನು ಒಪ್ಪಿಸಿ ಮಹಾಬಾಹು ಕೇಶವ! ನೀನು ಮನುಷ್ಯರೂಪವನ್ನು ತಾಳಿದೆ.

03013019a ಸ ತ್ವಂ ನಾರಾಯಣೋ ಭೂತ್ವಾ ಹರಿರಾಸೀಃ ಪರಂತಪ।
03013019c ಬ್ರಹ್ಮಾ ಸೋಮಶ್ಚ ಸೂರ್ಯಶ್ಚ ಧರ್ಮೋ ಧಾತಾ ಯಮೋಽನಲಃ।।
03013020a ವಾಯುರ್ವೈಶ್ರವಣೋ ರುದ್ರಃ ಕಾಲಃ ಖಂ ಪೃಥಿವೀ ದಿಶಃ।
03013020c ಅಜಶ್ಚರಾಚರಗುರುಃ ಸ್ರಷ್ಟಾ ತ್ವಂ ಪುರುಷೋತ್ತಮ।।

ಪರಂತಪ! ನೀನು ನಾರಾಯಣ, ಹರಿ, ಬ್ರಹ್ಮ, ಸೋಮ, ಸೂರ್ಯ, ಧರ್ಮ, ಧಾತ, ಯಮ, ಅನಲ, ವಾಯು, ವೈಶ್ರವಣ, ರುದ್ರ, ಕಾಲ, ಆಕಾಶ, ಪೃಥ್ವಿ, ದಿಕ್ಕುಗಳು, ಚರಾಚರರಿಗೆ ಹುಟ್ಟದೇ ಇರುವ ಗುರು, ಸೃಷ್ಟಕರ್ತ, ಮತ್ತು ಪುರುಷೋತ್ತಮ.

03013021a ತುರಾಯಣಾದಿಭಿರ್ದೇವ ಕ್ರತುಭಿರ್ಭೂರಿದಕ್ಷಿಣೈಃ।
03013021c ಅಯಜೋ ಭೂರಿತೇಜಾ ವೈ ಕೃಷ್ಣ ಚೈತ್ರರಥೇ ವನೇ।।

ದೇವ! ಕೃಷ್ಣ! ಭೂರಿತೇಜಸ! ಚೈತ್ರರಥ ವನದಲ್ಲಿ ನೀನು ತುರಾಯಣವೇ ಮೊದಲಾದ ಕ್ರತುಗಳನ್ನು ಭೂರಿದಕ್ಷಿಣೆಗಳಿಂದ ಯಾಜಿಸಿದೆ.

03013022a ಶತಂ ಶತಸಹಸ್ರಾಣಿ ಸುವರ್ಣಸ್ಯ ಜನಾರ್ದನ।
03013022c ಏಕೈಕಸ್ಮಿಂಸ್ತದಾ ಯಜ್ಞೇ ಪರಿಪೂರ್ಣಾನಿ ಭಾಗಶಃ।।

ಜನಾರ್ದನ! ನೂರರ ಒಂದೊಂದು ಯಜ್ಞದಲ್ಲಿಯೂ ಪ್ರತ್ಯೇಕವಾಗಿ ನೂರು ಸಾವಿರ ಸುವರ್ಣಗಳನ್ನು ಇತ್ತು ಪೂರ್ಣಗೊಳಿಸಿದೆ.

03013023a ಅದಿತೇರಪಿ ಪುತ್ರತ್ವಮೇತ್ಯ ಯಾದವನಂದನ।
03013023c ತ್ವಂ ವಿಷ್ಣುರಿತಿ ವಿಖ್ಯಾತ ಇಂದ್ರಾದವರಜೋ ಭುವಿ।।

ಯಾದವನಂದನ! ಅದಿತಿಯ ಪುತ್ರತ್ವವನ್ನು ಪಡೆದು ನೀನು ಇಂದ್ರನ ತಮ್ಮ ವಿಷ್ಣುವೆಂದು ವಿಶ್ವದಲ್ಲಿ ವಿಖ್ಯಾತನಾದೆ.

03013024a ಶಿಶುರ್ಭೂತ್ವಾ ದಿವಂ ಖಂ ಚ ಪೃಥಿವೀಂ ಚ ಪರಂತಪ।
03013024c ತ್ರಿಭಿರ್ವಿಕ್ರಮಣೈಃ ಕೃಷ್ಣ ಕ್ರಾಂತವಾನಸಿ ತೇಜಸಾ।।

ಪರಂತಪ! ಕೃಷ್ಣ! ಶಿಶುವಾಗಿ7 ನಿನ್ನ ತೇಜಸ್ಸಿನಿಂದ ಸ್ವರ್ಗ, ಆಕಾಶ ಮತ್ತು ಭೂಮಿಯನ್ನು ಮೂರು ಹೆಜ್ಜೆಗಳಲ್ಲಿ ಅಳೆದೆ.

03013025a ಸಂಪ್ರಾಪ್ಯ ದಿವಮಾಕಾಶಮಾದಿತ್ಯಸದನೇ ಸ್ಥಿತಃ।
03013025c ಅತ್ಯರೋಚಶ್ಚ ಭೂತಾತ್ಮನ್ಭಾಸ್ಕರಂ ಸ್ವೇನ ತೇಜಸಾ।।

ಭೂತಾತ್ಮನ್! ಸೂರ್ಯನ ರಥದಲ್ಲಿ ಕುಳಿತುಕೊಂಡು ದ್ಯುಲೋಕ ಮತ್ತು ಆಕಾಶಲೋಕಗಳನ್ನು ಆವರಿಸಿ, ನಿನ್ನ ತೇಜೋವಿಶೇಷದಿಂದ ಸೂರ್ಯನ ತೇಜಸ್ಸನ್ನೂ ಮೀರಿಸಿದೆ.

03013026a ಸಾದಿತಾ ಮೌರವಾಃ ಪಾಶಾ ನಿಸುಂದನರಕೌ ಹತೌ।
03013026c ಕೃತಃ ಕ್ಷೇಮಃ ಪುನಃ ಪಂಥಾಃ ಪುರಂ ಪ್ರಾಗ್ಜ್ಯೋತಿಷಂ ಪ್ರತಿ।।

ಮೌರವರನ್ನೂ ಪಾಶರನ್ನೂ ಸದೆಬಡಿದು, ನಿಸುಂದ ನರಕರೀರ್ವರನ್ನೂ8 ಸಂಹರಿಸಿ ನೀನು ಪುನಃ ಪ್ರಾಗ್ಜ್ಯೋತಿಷ ಪುರದ ದಾರಿಯನ್ನು ಕ್ಷೇಮಕರವನ್ನಾಗಿ ಮಾಡಿದೆ.

03013027a ಜಾರೂಥ್ಯಾಮಾಹುತಿಃ ಕ್ರಾಥಃ ಶಿಶುಪಾಲೋ ಜನೈಃ ಸಹ।
03013027c ಭೀಮಸೇನಶ್ಚ ಶೈಬ್ಯಶ್ಚ ಶತಧನ್ವಾ ಚ ನಿರ್ಜಿತಃ।।

ಜಾರುಥಿಯಲ್ಲಿ ಆಹುತಿಯನ್ನು, ಕ್ರಾಥ, ಜನರ ಸಹಿತ ಶಿಶುಪಾಲನನ್ನು, ಭೀಮಸೇನ9ನನ್ನು, ಶೈಭ್ಯ ಮತ್ತು ಶತಧನ್ವನನ್ನು ಸೋಲಿಸಿದೆ10.

03013028a ತಥಾ ಪರ್ಜನ್ಯಘೋಷೇಣ ರಥೇನಾದಿತ್ಯವರ್ಚಸಾ।
03013028c ಅವಾಕ್ಷೀರ್ಮಹಿಷೀಂ ಭೋಜ್ಯಾಂ ರಣೇ ನಿರ್ಜಿತ್ಯ ರುಕ್ಮಿಣಂ।।

ಕಪ್ಪುಮೋಡಗಳಂತೆ ಘರ್ಜಿಸುತ್ತಿರುವ ಆದಿತ್ಯವರ್ಚಸ ರಥದಿಂದ ರಣದಲ್ಲಿ ರುಕ್ಮಿಯನ್ನು ಸೋಲಿಸಿ ಭೋಜರ ರಾಣಿಯನ್ನು ಅಪಹರಿಸಿದೆ11.

03013029a ಇಂದ್ರದ್ಯುಮ್ನೋ ಹತಃ ಕೋಪಾದ್ಯವನಶ್ಚ ಕಶೇರುಮಾನ್।
03013029c ಹತಃ ಸೌಭಪತಿಃ ಶಾಲ್ವಸ್ತ್ವಯಾ ಸೌಭಂ ಚ ಪಾತಿತಂ।।

ಕೋಪದಲ್ಲಿ ಇಂದ್ರಧ್ಯುಮ್ನ ಮತ್ತು ಯವನ ಕಶೇರುಮರು ಹತರಾದರು. ಸೌಭಪತಿ ಶಾಲ್ವನನ್ನು ನೀನು ಸಂಹರಿಸಿದೆ ಮತ್ತು ಸೌಭವನ್ನು ಹೊಡೆದುರುಳಿಸಿದೆ12.

03013030a ಇರಾವತ್ಯಾಂ ತಥಾ ಭೋಜಃ ಕಾರ್ತವೀರ್ಯಸಮೋ ಯುಧಿ।
03013030c ಗೋಪತಿಸ್ತಾಲಕೇತುಶ್ಚ ತ್ವಯಾ ವಿನಿಹತಾವುಭೌ।।

ಐರಾವತೀ ತೀರದಲ್ಲಿ ಯುದ್ಧದಲ್ಲಿ ನೀನು ಕಾರ್ತವೀರ್ಯಸಮನಾದ ಭೋಜನನ್ನು ಮತ್ತು ಗೋಪತಿ-ತಾಲಕೇತುರೀರ್ವರನ್ನು13 ಸಂಹರಿಸಿದೆ.

03013031a ತಾಂ ಚ ಭೋಗವತೀಂ ಪುಣ್ಯಾಮೃಷಿಕಾಂತಾಂ ಜನಾರ್ದನ।
03013031c ದ್ವಾರಕಾಮಾತ್ಮಸಾತ್ಕೃತ್ವಾ ಸಮುದ್ರಂ ಗಮಯಿಷ್ಯಸಿ।।

ಜನಾರ್ದನ! ಋಷಿಗಳ ವಾಸಕ್ಕೂ ಯೋಗ್ಯವಾದ, ಸಕಲೈಶ್ವರ್ಯಭರಿತ, ದ್ವಾರಕೆಯನ್ನು ನಿನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಇದನ್ನು ಸಮುದ್ರದಲ್ಲಿ ಮುಳುಗಿಸುವೆ14.

03013032a ನ ಕ್ರೋಧೋ ನ ಚ ಮಾತ್ಸರ್ಯಂ ನಾನೃತಂ ಮಧುಸೂದನ।
03013032c ತ್ವಯಿ ತಿಷ್ಠತಿ ದಾಶಾರ್ಹ ನ ನೃಶಂಸ್ಯಂ ಕುತೋಽನೃಜು।।

ಮಧುಸೂದನ! ದಾಶಾರ್ಹ! ನಿನ್ನಲ್ಲಿ ಕ್ರೋಧವಿಲ್ಲ, ಮಾತ್ಸರ್ಯವಿಲ್ಲ, ಸುಳ್ಳಿಲ್ಲ, ಕ್ರೂರತೆಯಿಲ್ಲ, ಮತ್ತು ಅಪ್ರಮಾಣಿಕತೆ ಸ್ವಲ್ಪವೂ ಇಲ್ಲ.

03013033a ಆಸೀನಂ ಚಿತ್ತಮಧ್ಯೇ ತ್ವಾಂ ದೀಪ್ಯಮಾನಂ ಸ್ವತೇಜಸಾ।
03013033c ಆಗಮ್ಯ ಋಷಯಃ ಸರ್ವೇಽಯಾಚಂತಾಭಯಮಚ್ಯುತ।।

ಅಚ್ಯುತ! ನಿನ್ನದೇ ತೇಜಸ್ಸಿನಿಂದ ಬೆಳಗುತ್ತಾ ನೀನು ಅವರ ಚಿತ್ತಮಧ್ಯದಲ್ಲಿ ಕುಳಿತಿರುವಾಗ ಸರ್ವ ಋಷಿಗಳೂ ನಿನ್ನಲ್ಲಿಗೆ ಬಂದು ಅಭಯವನ್ನು ಯಾಚಿಸಿದರು.

03013034a ಯುಗಾಂತೇ ಸರ್ವಭೂತಾನಿ ಸಂಕ್ಷಿಪ್ಯ ಮಧುಸೂದನ।
03013034c ಆತ್ಮನ್ಯೇವಾತ್ಮಸಾತ್ಕೃತ್ವಾ ಜಗದಾಸ್ಸೇ ಪರಂತಪ।।

ಮಧುಸೂದನ! ಪರಂತಪ! ಯುಗಾಂತದಲ್ಲಿ ನೀನು ಇರುವವೆಲ್ಲವನ್ನೂ ಕುಗ್ಗಿಸಿ ಜಗತ್ತನ್ನೇ ನಿನ್ನಲ್ಲಿ ನೀನಾಗಿ ಮಾಡಿಕೊಂಡಿರುತ್ತೀಯೆ.

03013035a ನೈವಂ ಪೂರ್ವೇ ನಾಪರೇ ವಾ ಕರಿಷ್ಯಂತಿ ಕೃತಾನಿ ತೇ।
03013035c ಕರ್ಮಾಣಿ ಯಾನಿ ದೇವ ತ್ವಂ ಬಾಲ ಏವ ಮಹಾದ್ಯುತೇ।।

ದೇವ! ಮಹಾದ್ಯುತಿ! ನೀನು ಬಾಲಕನಾಗಿರುವಾಗಲೇ ಮಾಡಿದ ಕೃತ್ಯಗಳನ್ನು ಹಿಂದಿನ ಅಥವಾ ಮುಂದೆ ನಡೆಯುವ ಕೃತ್ಯಗಳ್ಯಾವುವೂ ಮೀರಿಸಲಾರವು.

03013036a ಕೃತವಾನ್ಪುಂಡರೀಕಾಕ್ಷ ಬಲದೇವಸಹಾಯವಾನ್।
03013036c ವೈರಾಜಭವನೇ ಚಾಪಿ ಬ್ರಹ್ಮಣಾ ನ್ಯವಸಃ ಸಹ।।

ಪುಂಡರೀಕಾಕ್ಷ! ಬಲದೇವನ ಸಹಾಯದಿಂದ ನೀನು ಈ ಕೆಲಸಗಳನ್ನು ಮಾಡಿ ವೈರಾಜಭವನದಲ್ಲಿ15 ಬ್ರಾಹ್ಮಣರ ಜೊತೆ ವಾಸಮಾಡಿದ್ದೆ.””

03013037 ವೈಶಂಪಾಯನ ಉವಾಚ।
03013037a ಏವಮುಕ್ತ್ವಾ ತದಾತ್ಮಾನಮಾತ್ಮಾ ಕೃಷ್ಣಸ್ಯ ಪಾಂಡವಃ।
03013037c ತೂಷ್ಣೀಮಾಸೀತ್ತತಃ ಪಾರ್ಥಮಿತ್ಯುವಾಚ ಜನಾರ್ದನಃ।।

ವೈಶಂಪಾಯನನು ಹೇಳಿದನು: “ಕೃಷ್ಣನ ಆತ್ಮವೇ ಆಗಿದ್ದ ಪಾಂಡವನು ತನ್ನಲ್ಲಿಯೇ ಈ ರೀತಿ ಹೇಳಿಕೊಳ್ಳಲು ಜನಾರ್ದನನು ಸಂತುಷ್ಟನಾಗಿ ಪಾರ್ಥನಿಗೆ ಹೇಳಿದನು:

03013038a ಮಮೈವ ತ್ವಂ ತವೈವಾಹಂ ಯೇ ಮದೀಯಾಸ್ತವೈವ ತೇ।
03013038c ಯಸ್ತ್ವಾಂ ದ್ವೇಷ್ಟಿ ಸ ಮಾಂ ದ್ವೇಷ್ಟಿ ಯಸ್ತ್ವಾಮನು ಸ ಮಾಮನು।।

“ನೀನು ನನ್ನವನು ಮತ್ತು ಹಾಗೆಯೇ ನಾನೂ ನಿನ್ನವನು. ನನ್ನವರೂ ನಿನ್ನವರೇ. ನಿನ್ನನ್ನು ದ್ವೇಶಿಸುವವರು ನನ್ನನ್ನೂ ದ್ವೇಶಿಸುತ್ತಾರೆ ಮತ್ತು ನಿನ್ನನ್ನು ಅನುಸರಿಸುವವರು ನನ್ನನ್ನೂ ಅನುಸರಿಸುತ್ತಾರೆ.

03013039a ನರಸ್ತ್ವಮಸಿ ದುರ್ಧರ್ಷ ಹರಿರ್ನಾರಾಯಣೋ ಹ್ಯಹಂ।
03013039c ಲೋಕಾಲ್ಲೋಕಮಿಮಂ ಪ್ರಾಪ್ತೌ ನರನಾರಾಯಣಾವೃಷೀ।।

ದುರ್ಧರ್ಷ! ನೀನು ನರ ಮತ್ತು ನಾನೇ ಹರಿ ನಾರಾಯಣ. ನರ-ನಾರಯಣ ಋಷಿಗಳು ತಮ್ಮ ಲೋಕದಿಂದ ಈ ಲೋಕಕ್ಕೆ ಬಂದಿದ್ದಾರೆ.

03013040a ಅನನ್ಯಃ ಪಾರ್ಥ ಮತ್ತಸ್ತ್ವಮಹಂ ತ್ವತ್ತಶ್ಚ ಭಾರತ।
03013040c ನಾವಯೋರಂತರಂ ಶಕ್ಯಂ ವೇದಿತುಂ ಭರತರ್ಷಭ।।

ಪಾರ್ಥ! ನೀನು ನನಗಿಂಥ ಬೇರೆಯವನಲ್ಲ ಮತ್ತು ನಾನು ನಿನಗಿಂತ ಬೇರೆಯವನಲ್ಲ. ಭಾರತ! ಭರತರ್ಷಭ! ನಮ್ಮಿಬ್ಬರಲ್ಲಿ ವ್ಯತ್ಯಾಸವಿರಲು ಸಾಧ್ಯವೇ ಇಲ್ಲ.”

03013041a ತಸ್ಮಿನ್ವೀರಸಮಾವಾಯೇ ಸಂರಬ್ಧೇಷ್ವಥ ರಾಜಸು।
03013041c ಧೃಷ್ಟದ್ಯುಮ್ನಮುಖೈರ್ವೀರೈರ್ಭ್ರಾತೃಭಿಃ ಪರಿವಾರಿತಾ।।
03013042a ಪಾಂಚಾಲೀ ಪುಂಡರೀಕಾಕ್ಷಮಾಸೀನಂ ಯಾದವೈಃ ಸಹ।
03013042c ಅಭಿಗಮ್ಯಾಬ್ರವೀತ್ಕೃಷ್ಣಾ ಶರಣ್ಯಂ ಶರಣೈಷಿಣೀ।।

ಆ ಸಂಬಂಧಿಕ ಮತ್ತು ರಾಜ ವೀರರ ಸಮಾವೇಶದಲ್ಲಿ, ಧೃಷ್ಟಧ್ಯುಮ್ನ ಮೊದಲಾದ ಭ್ರಾತೃಗಳಿಂದ ಸುತ್ತುವರೆಯಲ್ಪಟ್ಟ ಪಾಂಚಾಲಿ ಕೃಷ್ಣೆಯು ಯಾದವರೊಂದಿಗೆ ಕುಳಿತಿದ್ದ ಶರಣ್ಯರ ಶರಣು ಪುಂಡರೀಕಾಕ್ಷನ ಬಳಿಹೋಗಿ ಹೇಳಿದಳು:

03013043a ಪೂರ್ವೇ ಪ್ರಜಾನಿಸರ್ಗೇ ತ್ವಾಮಾಹುರೇಕಂ ಪ್ರಜಾಪತಿಂ।
03013043c ಸ್ರಷ್ಟಾರಂ ಸರ್ವಭೂತಾನಾಮಸಿತೋ ದೇವಲೋಽಬ್ರವೀತ್।।

“ಪ್ರಜೆಗಳ ಸೃಷ್ಟಿಯ ಮೊದಲು ನೀನೇ ಓರ್ವ ಪ್ರಜಾಪತಿಯಾಗಿದ್ದೆ, ಮತ್ತು ಸರ್ವಭೂತಗಳ ಸೃಷ್ಟಾರನು ನೀನಾಗಿದ್ದೆ ಎಂದು ಅಸಿತ-ದೇವಲರು ಹೇಳುತ್ತಾರೆ.

03013044a ವಿಷ್ಣುಸ್ತ್ವಮಸಿ ದುರ್ಧರ್ಷ ತ್ವಂ ಯಜ್ಞೋ ಮಧುಸೂದನ।
03013044c ಯಷ್ಟಾ ತ್ವಮಸಿ ಯಷ್ಟವ್ಯೋ ಜಾಮದಗ್ನ್ಯೋ ಯಥಾಬ್ರವೀತ್।।

ದುರ್ಧರ್ಷ! ನೀನು ವಿಷ್ಣು. ಮಧುಸೂದನ! ಯಾಗಮಾಡುವವನೂ ನೀನೇ ಮತ್ತು ಯಜ್ಞವನ್ನು ಮಾಡುವುದೂ ನಿನಗೇ ಎಂದು ಜಾಮದಗ್ನಿಯು ಹೇಳುತ್ತಾನೆ.

03013045a ಋಷಯಸ್ತ್ವಾಂ ಕ್ಷಮಾಮಾಹುಃ ಸತ್ಯಂ ಚ ಪುರುಷೋತ್ತಮ।
03013045c ಸತ್ಯಾದ್ಯಜ್ಞೋಽಸಿ ಸಂಭೂತಃ ಕಶ್ಯಪಸ್ತ್ವಾಂ ಯಥಾಬ್ರವೀತ್।।

ಪುರುಷೋತ್ತಮ! ನೀನು ಕ್ಷಮೆ ಮತ್ತು ಸತ್ಯವೆಂದು ಋಷಿಗಳು ಹೇಳುತ್ತಾರೆ. ಕಶ್ಯಪನು ಹೇಳಿದಂತೆ ಸತ್ಯದಿಂದ ಹುಟ್ಟಿದ ಯಜ್ಞ.

03013046a ಸಾಧ್ಯಾನಾಮಪಿ ದೇವಾನಾಂ ವಸೂನಾಮೀಶ್ವರೇಶ್ವರಃ। 03013046c ಲೋಕಭಾವನ ಲೋಕೇಶ ಯಥಾ ತ್ವಾಂ ನಾರದೋಽಬ್ರವೀತ್।।

ಲೋಕಭಾವನ ಲೋಕೇಶ! ನಾರದನು ಹೇಳುವಂತೆ ನೀನು ದೇವತೆ, ಸಾಧ್ಯರು ಮತ್ತು ವಸುಗಳ ಒಡೆಯನ ಒಡೆಯ.

03013047a ದಿವಂ ತೇ ಶಿರಸಾ ವ್ಯಾಪ್ತಂ ಪದ್ಭ್ಯಾಂ ಚ ಪೃಥಿವೀ ವಿಭೋ।
03013047c ಜಠರಂ ತೇ ಇಮೇ ಲೋಕಾಃ ಪುರುಷೋಽಸಿ ಸನಾತನಃ।।

ವಿಭೋ! ನಿನ್ನ ಶಿರದಿಂದ ಸ್ವರ್ಗವನ್ನು ಮುಟ್ಟಿ ಪಾದದಿಂದ ಭೂಮಿಯನ್ನು ವ್ಯಾಪಿಸಿರುವೆ. ನಿನ್ನ ಜಠರದಲ್ಲಿ ಈ ಲೋಕಗಳಿವೆ. ನೀನು ಸನಾತನ ಪುರುಷ.

03013048a ವಿದ್ಯಾತಪೋಽಭಿತಪ್ತಾನಾಂ ತಪಸಾ ಭಾವಿತಾತ್ಮನಾಂ।
03013048c ಆತ್ಮದರ್ಶನಸಿದ್ಧಾನಾಮೃಷೀಣಾಮೃಷಿಸತ್ತಮ।।
03013049a ರಾಜರ್ಷೀಣಾಂ ಪುಣ್ಯಕೃತಾಮಾಹವೇಷ್ವನಿವರ್ತಿನಾಂ।
03013049c ಸರ್ವಧರ್ಮೋಪಪನ್ನಾನಾಂ ತ್ವಂ ಗತಿಃ ಪುರುಷೋತ್ತಮ।।

ಪುರುಷೋತ್ತಮ! ವಿದ್ಯಾತಪಸ್ಸಿನಿಂದ ಪರಿತಪ್ತರಾಗಿ ತಪಸ್ಸಿನಿಂದ ತಮ್ಮ ಆತ್ಮವನ್ನು ಕಂಡುಕೊಂಡ ಆತ್ಮದರ್ಶನ ಸಿದ್ಧಿಯನ್ನು ಪಡೆದ ಋಷಿಗಳಿಗೂ ಋಷಿಸತ್ತಮನು ನೀನು. ರಣರಂಗದಿಂದ ಹಿಂದೆಸರಿಯದೇ ಇದ್ದ ಪುಣ್ಯಕಾರ್ಯಗಳನ್ನು ಮಾಡಿದ, ಸರ್ವಧರ್ಮಗಳಿಂದಲೂ ನಡೆದುಕೊಂಡು ಬಂದ ರಾಜರ್ಷಿಗಳಿಗೂ ನೀನೇ ಗುರಿ.

03013050a ತ್ವಂ ಪ್ರಭುಸ್ತ್ವಂ ವಿಭುಸ್ತ್ವಂ ಭೂರಾತ್ಮಭೂಸ್ತ್ವಂ ಸನಾತನಃ।
03013050c ಲೋಕಪಾಲಾಶ್ಚ ಲೋಕಾಶ್ಚ ನಕ್ಷತ್ರಾಣಿ ದಿಶೋ ದಶ।
03013050e ನಭಶ್ಚಂದ್ರಶ್ಚ ಸೂರ್ಯಶ್ಚ ತ್ವಯಿ ಸರ್ವಂ ಪ್ರತಿಷ್ಠಿತಂ।।

ನೀನು ಪ್ರಭು. ನೀನು ವಿಭು. ನೀನು ಭೂಮಿ. ನೀನು ಆತ್ಮ. ನೀನು ಸನಾತನ. ಲೋಕಪಾಲಕರು, ಲೋಕಗಳು, ನಕ್ಷತ್ರಗಳು, ಹತ್ತು ದಿಕ್ಕುಗಳು, ಆಕಾಶ, ಚಂದ್ರ, ಸೂರ್ಯ ಎಲ್ಲವೂ ನಿನ್ನಲ್ಲಿಯೇ ಇವೆ.

03013051a ಮರ್ತ್ಯತಾ ಚೈವ ಭೂತಾನಾಮಮರತ್ವಂ ದಿವೌಕಸಾಂ।
03013051c ತ್ವಯಿ ಸರ್ವಂ ಮಹಾಬಾಹೋ ಲೋಕಕಾರ್ಯಂ ಪ್ರತಿಷ್ಠಿತಂ।।

ಮಹಾಬಾಹೋ! ಇರುವವುಗಳ ಮೃತ್ಯು ಮತ್ತು ದಿವೌಕಸರ ಅಮರತ್ವ ಮತ್ತು ಸರ್ವ ಲೋಕಕಾರ್ಯಗಳೂ ನಿನ್ನನ್ನೇ ಆಧರಿಸಿವೆ.

03013052a ಸಾ ತೇಽಹಂ ದುಃಖಮಾಖ್ಯಾಸ್ಯೇ ಪ್ರಣಯಾನ್ಮಧುಸೂದನ।
03013052c ಈಶಸ್ತ್ವಂ ಸರ್ವಭೂತಾನಾಂ ಯೇ ದಿವ್ಯಾ ಯೇ ಚ ಮಾನುಷಾಃ।।

ಮಧುಸೂದನ! ದಿವ್ಯ ಮತ್ತು ಮಾನುಷ ಸರ್ವ ಭೂತಗಳ ಈಶ್ವರನಾದ ನಿನ್ನಲ್ಲಿ ನಿನ್ನ ಮೇಲಿನ ಪ್ರೀತಿಯಿಂದ ನಾನು ನನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದೇನೆ.

03013053a ಕಥಂ ನು ಭಾರ್ಯಾ ಪಾರ್ಥಾನಾಂ ತವ ಕೃಷ್ಣ ಸಖೀ ವಿಭೋ।
03013053c ಧೃಷ್ಟದ್ಯುಮ್ನಸ್ಯ ಭಗಿನೀ ಸಭಾಂ ಕೃಷ್ಯೇತ ಮಾದೃಶೀ।।

ಕೃಷ್ಣ! ವಿಭೋ! ಪಾರ್ಥರ ಭಾರ್ಯೆ, ನಿನ್ನ ಸಖೀ, ಮತ್ತು ಧೃಷ್ಟಧ್ಯುಮ್ನನ ತಂಗಿ ನನ್ನಂಥವಳು ಹೇಗೆ ತಾನೇ ಸಭೆಗೆ ಎಳೆದೊಯ್ಯಲ್ಪಟ್ಟಳು?

03013054a ಸ್ತ್ರೀಧರ್ಮಿಣೀ ವೇಪಮಾನಾ ರುಧಿರೇಣ ಸಮುಕ್ಷಿತಾ।
03013054c ಏಕವಸ್ತ್ರಾ ವಿಕೃಷ್ಟಾಸ್ಮಿ ದುಃಖಿತಾ ಕುರುಸಂಸದಿ।।

ಸ್ತ್ರೀಧರ್ಮಕ್ಕೊಳಗಾಗಿ ರಕ್ತದ ಕಲೆಹೊಂದಿದ ಒಂದೇ ಒಂದು ವಸ್ತ್ರದಲ್ಲಿದ್ದು ದುಃಖಿತಳಾಗಿ ನಡುಗುತ್ತಿದ್ದ ನನ್ನನ್ನು ಕುರುಸಂಸದಿಯಲ್ಲಿ ಎಳೆದು ತರಲಾಯಿತು.

03013055a ರಾಜಮಧ್ಯೇ ಸಭಾಯಾಂ ತು ರಜಸಾಭಿಸಮೀರಿತಾಂ।
03013055c ದೃಷ್ಟ್ವಾ ಚ ಮಾಂ ಧಾರ್ತರಾಷ್ಟ್ರಾಃ ಪ್ರಾಹಸನ್ಪಾಪಚೇತಸಃ।।

ರಜಸ್ವಲೆಯಾಗಿದ್ದ ನನ್ನನ್ನು ನೋಡಿ ಸಭೆಯಲ್ಲಿ ರಾಜರ ಮಧ್ಯೆ ಪಾಪಚೇತಸ ಧಾರ್ತರಾಷ್ಟ್ರರು ಗಹಗಹಿಸಿ ನಕ್ಕರು.

03013056a ದಾಸೀಭಾವೇನ ಭೋಕ್ತುಂ ಮಾಮೀಷುಸ್ತೇ ಮಧುಸೂದನ।
03013056c ಜೀವತ್ಸು ಪಾಂಡುಪುತ್ರೇಷು ಪಾಂಚಾಲೇಷ್ವಥ ವೃಷ್ಣಿಷು।।

ಮಧುಸೂದನ! ಪಾಂಡುಪುತ್ರರು, ಪಾಂಚಾಲರು ಮತ್ತು ವೃಷ್ಣಿಗಳು ಜೀವಂತವಿರುವಾಗಲೇ ಅವರು ನನ್ನನ್ನು ದಾಸಿಯಂತೆ ಭೋಗಿಸಲು ಬಯಸಿದರು.

03013057a ನನ್ವಹಂ ಕೃಷ್ಣ ಭೀಷ್ಮಸ್ಯ ಧೃತರಾಷ್ಟ್ರಸ್ಯ ಚೋಭಯೋಃ।
03013057c ಸ್ನುಷಾ ಭವಾಮಿ ಧರ್ಮೇಣ ಸಾಹಂ ದಾಸೀಕೃತಾ ಬಲಾತ್।।

ಕೃಷ್ಣ! ಧರ್ಮದಂತೆ ನಾನು ಬೀಷ್ಮ ಮತ್ತು ಧೃತರಾಷ್ಟ್ರ ಇವರಿಬ್ಬರದ್ದೂ ಸೊಸೆಯಲ್ಲವೇ? ಹಾಗಿದ್ದರೂ ಬಲಾತ್ಕಾರವಾಗಿ ನನ್ನನ್ನು ದಾಸಿಯನ್ನಾಗಿ ಮಾಡಿದರು.

03013058a ಗರ್ಹಯೇ ಪಾಂಡವಾಂಸ್ತ್ವೇವ ಯುಧಿ ಶ್ರೇಷ್ಠಾನ್ಮಹಾಬಲಾನ್।
03013058c ಯೇ ಕ್ಲಿಶ್ಯಮಾನಾಂ ಪ್ರೇಕ್ಷಂತೇ ಧರ್ಮಪತ್ನೀಂ ಯಶಸ್ವಿನೀಂ।।

ತಮ್ಮ ಯಶಸ್ವಿನೀ ಧರ್ಮಪತ್ನಿಯು ಈ ರೀತಿ ಕಷ್ಟಕ್ಕೊಳಪಟ್ಟಿರುವುದನ್ನು ನೋಡಿಕೊಂಡಿದ್ದ, ಯುದ್ಧದಲ್ಲಿ ಶ್ರೇಷ್ಠ ಮಹಾಬಲಶಾಲಿ ಈ ಪಾಂಡವರನ್ನು ನಾನು ಧಿಕ್ಕರಿಸುತ್ತೇನೆ.

03013059a ಧಿಗ್ಬಲಂ ಭೀಮಸೇನಸ್ಯ ಧಿಕ್ಪಾರ್ಥಸ್ಯ ಧನುಷ್ಮತಾಂ।
03013059c ಯೌ ಮಾಂ ವಿಪ್ರಕೃತಾಂ ಕ್ಷುದ್ರೈರ್ಮರ್ಷಯೇತಾಂ ಜನಾರ್ದನ।।

ಭೀಮಸೇನನ ಬಲಕ್ಕೆ ಧಿಕ್ಕಾರ! ಪಾರ್ಥನ ಧನುರ್ವಿಧ್ಯೆಗೆ ಧಿಕ್ಕಾರ! ಜನಾರ್ದನ! ಆ ಪಾಪಿಯು ನನ್ನನ್ನು ಎಳೆದಾಡುತ್ತಿದ್ದಾಗ ಇವರಿಬ್ಬರೂ ಸುಮ್ಮನಿದ್ದರು.

03013060a ಶಾಶ್ವತೋಽಯಂ ಧರ್ಮಪಥಃ ಸದ್ಭಿರಾಚರಿತಃ ಸದಾ।
03013060c ಯದ್ಭಾರ್ಯಾಂ ಪರಿರಕ್ಷಂತಿ ಭರ್ತಾರೋಽಲ್ಪಬಲಾ ಅಪಿ।।

ಅಲ್ಪಬಲರಾಗಿದ್ದರೂ ಕೂಡ ಗಂಡಂದಿರು ಹೆಂಡತಿಯನ್ನು ರಕ್ಷಿಸಬೇಕು ಎನ್ನುವುದು ಸದಾ ಸತ್ಯವಂತರು ಆಚರಿಸುವ ಶಾಶ್ವತ ಧರ್ಮಮಾರ್ಗವಲ್ಲವೇ?

03013061a ಭಾರ್ಯಾಯಾಂ ರಕ್ಷ್ಯಮಾಣಾಯಾಂ ಪ್ರಜಾ ಭವತಿ ರಕ್ಷಿತಾ।
03013061c ಪ್ರಜಾಯಾಂ ರಕ್ಷ್ಯಮಾಣಾಯಾಮಾತ್ಮಾ ಭವತಿ ರಕ್ಷಿತಃ।।

ಹೆಂಡತಿಯನ್ನು ರಕ್ಷಿಸುವುದರಿಂದ ಮಕ್ಕಳು ರಕ್ಷಿತರಾಗುತ್ತಾರೆ. ಮಕ್ಕಳ ರಕ್ಷಣೆಯಿಂದ ಆತ್ಮವೇ ರಕ್ಷಿತಗೊಳ್ಳುತ್ತದೆ.

03013062a ಆತ್ಮಾ ಹಿ ಜಾಯತೇ ತಸ್ಯಾಂ ತಸ್ಮಾಜ್ಜಾಯಾ ಭವತ್ಯುತ।
03013062c ಭರ್ತಾ ಚ ಭಾರ್ಯಯಾ ರಕ್ಷ್ಯಃ ಕಥಂ ಜಾಯಾನ್ಮಮೋದರೇ।।

ಅವಳಿಂದ ತಾನೇ ಹುಟ್ಟುವುದರಿಂದ ಅವಳನ್ನು ಜಾಯಾ ಎಂದು ಕರೆಯುತ್ತಾರೆ. ಹೆಂಡತಿಯಿಂದ ರಕ್ಷಿಸಲ್ಪಟ್ಟ ಗಂಡಂದಿರು ನನ್ನ ಹೊಟ್ಟೆಯಲ್ಲಿ ಹೇಗೆ ಹುಟ್ಟುತ್ತಾರೆ?

03013063a ನನ್ವಿಮೇ ಶರಣಂ ಪ್ರಾಪ್ತಾನ್ನ ತ್ಯಜಂತಿ ಕದಾ ಚನ।
03013063c ತೇ ಮಾಂ ಶರಣಮಾಪನ್ನಾಂ ನಾನ್ವಪದ್ಯಂತ ಪಾಂಡವಾಃ।।
03013064a ಪಂಚೇಮೇ ಪಂಚಭಿರ್ಜಾತಾಃ ಕುಮಾರಾಶ್ಚಾಮಿತೌಜಸಃ।
03013064c ಏತೇಷಾಮಪ್ಯವೇಕ್ಷಾರ್ಥಂ ತ್ರಾತವ್ಯಾಸ್ಮಿ ಜನಾರ್ದನ।।

ಶರಣು ಬಂದವರನ್ನು ಇವರು ಎಂದಾದರೂ ರಕ್ಷಿಸದೇ ಬಿಟ್ಟಿದ್ದಾರೆಯೇ? ನಾನು ಅವರ ಶರಣು ಹೋದಾಗ ಈ ಪಾಂಡವರು ನನ್ನನ್ನು ರಕ್ಷಿಸಿದರೇ? ಜನಾರ್ದನ! ಈ ಐವರಿಂದ ನನ್ನಲ್ಲಿ ಹುಟ್ಟಿದ ಐವರು ಅಮಿತೌಜಸ ಕುಮಾರರ ನೆಪದಲ್ಲಿಯಾದರೂ ಇವರು ನನಗೆ ನೆರವಾಗಬೇಕಿತ್ತು!

03013065a ಪ್ರತಿವಿಂಧ್ಯೋ ಯುಧಿಷ್ಠಿರಾತ್ಸುತಸೋಮೋ ವೃಕೋದರಾತ್।
03013065c ಅರ್ಜುನಾಚ್ಛ್ರುತಕೀರ್ತಿಸ್ತು ಶತಾನೀಕಸ್ತು ನಾಕುಲಿಃ।।
03013066a ಕನಿಷ್ಠಾಚ್ಛ್ರುತಕರ್ಮಾ ತು ಸರ್ವೇ ಸತ್ಯಪರಾಕ್ರಮಾಃ।
03013066c ಪ್ರದ್ಯುಮ್ನೋ ಯಾದೃಶಃ ಕೃಷ್ಣ ತಾದೃಶಾಸ್ತೇ ಮಹಾರಥಾಃ।।

ಯುಧಿಷ್ಠಿರನಿಂದ ಪ್ರತಿವಿಂಧ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಶ್ರುತಕೀರ್ತಿ, ನಕುಲನಿಂದ ಶತಾನೀಕ, ಮತ್ತು ಕಿರಿಯವನಿಂದ ಶ್ರುತಕರ್ಮ – ಇವರೆಲ್ಲರೂ ಸತ್ಯಪರಾಕ್ರಮಿಗಳು. ಕೃಷ್ಣ! ಪ್ರದ್ಯುಮ್ನನಂತೆ ಮಹಾರಥಿಗಳು.

03013067a ನನ್ವಿಮೇ ಧನುಷಿ ಶ್ರೇಷ್ಠಾ ಅಜೇಯಾ ಯುಧಿ ಶಾತ್ರವೈಃ।
03013067c ಕಿಮರ್ಥಂ ಧಾರ್ತರಾಷ್ಟ್ರಾಣಾಂ ಸಹಂತೇ ದುರ್ಬಲೀಯಸಾಂ।।

ಇವರು ಧನ್ವಿಗಳಲ್ಲಿ ಶ್ರೇಷ್ಠರೂ ಯುದ್ಧದಲ್ಲಿ ಶತ್ರುಗಳಿಂದ ಅಜೇಯರೂ ಆಗಿಲ್ಲವೇ? ಹಾಗಿದ್ದರೂ ಇವರು ದುರ್ಬಲರಂತೆ ಏಕೆ ಧಾರ್ತರಾಷ್ಟ್ರರನ್ನು ಸಹಿಸಿಕೊಂಡರು?

03013068a ಅಧರ್ಮೇಣ ಹೃತಂ ರಾಜ್ಯಂ ಸರ್ವೇ ದಾಸಾಃ ಕೃತಾಸ್ತಥಾ।
03013068c ಸಭಾಯಾಂ ಪರಿಕೃಷ್ಟಾಹಮೇಕವಸ್ತ್ರಾ ರಜಸ್ವಲಾ।।

ಅವರು ಅಧರ್ಮದಿಂದ ರಾಜ್ಯವನ್ನು ಅಪಹರಿಸಿ ಸರ್ವರನ್ನೂ ದಾಸರನ್ನಾಗಿ ಮಾಡಿದರು ಮತ್ತು ರಜಸ್ವಲೆಯಾಗಿ ಒಂದೇ ಒಂದು ವಸ್ತ್ರದಲ್ಲಿದ್ದ ನನ್ನನ್ನು ಸಭೆಗೆ ಎಳೆದು ತಂದರು.

03013069a ನಾಧಿಜ್ಯಮಪಿ ಯಚ್ಶಕ್ಯಂ ಕರ್ತುಮನ್ಯೇನ ಗಾಂಡಿವಂ।
03013069c ಅನ್ಯತ್ರಾರ್ಜುನಭೀಮಾಭ್ಯಾಂ ತ್ವಯಾ ವಾ ಮಧುಸೂದನ।।

ಅರ್ಜುನ, ಭೀಮ ಅಥವಾ ಮಧುಸೂದನ ನಿನ್ನನ್ನು ಬಿಟ್ಟು ಬೇರೆ ಯಾರೂ ಬಿಗಿದಿದ್ದ ಗಾಂಡೀವವನ್ನು ಉಪಯೋಗಿಸಲು ಶಕ್ಯರಿಲ್ಲ.

03013070a ಧಿಗ್ಭೀಮಸೇನಸ್ಯ ಬಲಂ ಧಿಕ್ಪಾರ್ಥಸ್ಯ ಚ ಗಾಂಡಿವಂ।
03013070c ಯತ್ರ ದುರ್ಯೋಧನಃ ಕೃಷ್ಣ ಮುಹೂರ್ತಮಪಿ ಜೀವತಿ।।

ಕೃಷ್ಣ! ದುರ್ಯೋಧನನು ಇನ್ನೊಂದು ಕ್ಷಣವೂ ಜೀವಿಸಿರುತ್ತಾನೆಂದರೆ ಭೀಮಸೇನನ ಬಲಕ್ಕೆ ಧಿಕ್ಕಾರ! ಅರ್ಜುನನ ಗಾಂಡೀವಕ್ಕೆ ಧಿಕ್ಕಾರ!

03013071a ಯ ಏತಾನಾಕ್ಷಿಪದ್ರಾಷ್ಟ್ರಾತ್ಸಹ ಮಾತ್ರಾವಿಹಿಂಸಕಾನ್।
03013071c ಅಧೀಯಾನಾನ್ಪುರಾ ಬಾಲಾನ್ವ್ರತಸ್ಥಾನ್ಮಧುಸೂದನ।।

ಮಧುಸೂದನ! ಹಿಂದೆ ಇವನೇ, ಇವರು ವ್ರತನಿರತ ಬಾಲಕರಾಗಿದ್ದ ಏನು ತಪ್ಪನ್ನೂ ಮಾಡದೇ ಇದ್ದಿದ್ದರೂ ತಾಯಿಯೊಂದಿಗೆ ರಾಜ್ಯದಿಂದ ಹೊರಗೆ ಹಾಕಿದನು.

03013072a ಭೋಜನೇ ಭೀಮಸೇನಸ್ಯ ಪಾಪಃ ಪ್ರಾಕ್ಷೇಪಯದ್ವಿಷಂ।
03013072c ಕಾಲಕೂಟಂ ನವಂ ತೀಕ್ಷ್ಣಂ ಸಂಭೃತಂ ಲೋಮಹರ್ಷಣಂ।।

ಆ ಪಾಪಿಯು ಭೀಮಸೇನನ ಭೋಜನದಲ್ಲಿ, ಆಗತಾನೇ ಸಂಗ್ರಹಿಸಿದ, ಮೈನವಿರೇಳಿಸುವ, ಮೂರ್ಛೆಗೊಳಿಸುವ, ತೀಕ್ಷ್ಣ ಕಾಲಕೂಟ16 ವಿಷವನ್ನು ಬೆರೆಸಿದ್ದನು.

03013073a ತಜ್ಜೀರ್ಣಮವಿಕಾರೇಣ ಸಹಾನ್ನೇನ ಜನಾರ್ದನ।
03013073c ಸಶೇಷತ್ವಾನ್ಮಹಾಬಾಹೋ ಭೀಮಸ್ಯ ಪುರುಷೋತ್ತಮ।।

ಜನಾರ್ದನ! ಮಹಾಬಾಹು! ಪುರುಷೋತ್ತಮ! ಇನ್ನೂ ಸಮಯ ಬಂದಿರದೇ ಇದ್ದ ಭೀಮನು ಆ ವಿಷವನ್ನು ತನ್ನ ಆಹಾರದೊಂದಿಗೇ ಜೀರ್ಣಿಸಿಕೊಂಡನು.

03013074a ಪ್ರಮಾಣಕೋಟ್ಯಾಂ ವಿಶ್ವಸ್ತಂ ತಥಾ ಸುಪ್ತಂ ವೃಕೋದರಂ।
03013074c ಬದ್ಧ್ವೈನಂ ಕೃಷ್ಣ ಗಂಗಾಯಾಂ ಪ್ರಕ್ಷಿಪ್ಯ ಪುನರಾವ್ರಜತ್।।

ಕೃಷ್ಣ! ಪ್ರಮಾಣಕೋಟಿಯಲ್ಲಿ ವಿಶ್ವಾಸದಿಂದ ನಿದ್ದೆಮಾಡುತ್ತಿದ್ದ ವೃಕೋದರನನ್ನು ಕಟ್ಟಿ ಗಂಗೆಯಲ್ಲಿ ಒಗೆದು ಹೊರಟು ಹೋದನು.

03013075a ಯದಾ ವಿಬುದ್ಧಃ ಕೌಂತೇಯಸ್ತದಾ ಸಂಚಿದ್ಯ ಬಂಧನಂ।
03013075c ಉದತಿಷ್ಠನ್ಮಹಾಬಾಹುರ್ಭೀಮಸೇನೋ ಮಹಾಬಲಃ।।

ಎಚ್ಚೆತ್ತಾಗ ಮಹಾಬಾಹು ಮಹಾಬಲಿ ಕೌಂತೇಯ ಬೀಮಸೇನನು ಕಟ್ಟುಗಳನ್ನು ಹರಿದೆಸೆದು ಮೇಲಕ್ಕೆದ್ದನು.

03013076a ಆಶೀವಿಷೈಃ ಕೃಷ್ಣಸರ್ಪೈಃ ಸುಪ್ತಂ ಚೈನಮದಂಶಯತ್।
03013076c ಸರ್ವೇಷ್ವೇವಾಂಗದೇಶೇಷು ನ ಮಮಾರ ಚ ಶತ್ರುಹಾ।।

ಇವನು ಮಲಗಿದ್ದಾಗ ತೀಕ್ಷ್ಣ ವಿಷಭರಿತ ಕೃಷ್ಣಸರ್ಪಗಳಿಂದ ಇವನ ಎಲ್ಲ ಅಂಗಾಗ ಪ್ರದೇಶಗಳಲ್ಲಿ ಕಚ್ಚಿಸಲಾಗಿತ್ತು. ಆದರೂ ಈ ಶತ್ರುಹನು ಸಾಯಲಿಲ್ಲ!

03013077a ಪ್ರತಿಬುದ್ಧಸ್ತು ಕೌಂತೇಯಃ ಸರ್ವಾನ್ಸರ್ಪಾನಪೋಥಯತ್।
03013077c ಸಾರಥಿಂ ಚಾಸ್ಯ ದಯಿತಮಪಹಸ್ತೇನ ಜಘ್ನಿವಾನ್।।

ಎಚ್ಚೆತ್ತಾಗ ಕೌಂತೇಯನು ಎಲ್ಲ ಸರ್ಪಗಳನ್ನೂ ಜಜ್ಜಿ ಕೊಂದು ತನ್ನ ಎಡಗೈಯಿಂದ ಸಾರಥಿಗೂ ಪೆಟ್ಟನ್ನು ಕೊಟ್ಟಿದ್ದನು.

03013078a ಪುನಃ ಸುಪ್ತಾನುಪಾಧಾಕ್ಷೀದ್ಬಾಲಕಾನ್ವಾರಣಾವತೇ।
03013078c ಶಯಾನಾನಾರ್ಯಯಾ ಸಾರ್ಧಂ ಕೋ ನು ತತ್ಕರ್ತುಮರ್ಹತಿ।।

ಇನ್ನೊಮ್ಮೆ ವಾರಣಾವತದಲ್ಲಿ ಆರ್ಯೆಯ ಜೊತೆ ಈ ಬಾಲಕರು ಮಲಗಿದ್ದಾಗ ಇವರನ್ನು ಸುಟ್ಟುಹಾಕಲು ಪ್ರಯತ್ನಿಸಿದನು. ಇಂಥಹುದನ್ನು ಯಾರು ತಾನೇ ಮಾಡಿಯಾರು?

03013079a ಯತ್ರಾರ್ಯಾ ರುದತೀ ಭೀತಾ ಪಾಂಡವಾನಿದಮಬ್ರವೀತ್।
03013079c ಮಹದ್ವ್ಯಸನಮಾಪನ್ನಾ ಶಿಖಿನಾ ಪರಿವಾರಿತಾ।।

ಬೆಂಕಿಯಿಂದ ಸುತ್ತುವರೆಯಲ್ಪಟ್ಟ ಅವಳು ತುಂಬಾ ಚಿಂತೆಗೊಳಗಾಗಿ ಆ ಆರ್ಯೆಯು ಭೀತಿಯಿಂದ ಅಳುತ್ತಾ ಪಾಂಡವರಿಗೆ ಕೂಗಿ ಹೇಳಿದಳು:

03013080a ಹಾ ಹತಾಸ್ಮಿ ಕುತೋ ನ್ವದ್ಯ ಭವೇಚ್ಛಾಂತಿರಿಹಾನಲಾತ್।
03013080c ಅನಾಥಾ ವಿನಶಿಷ್ಯಾಮಿ ಬಾಲಕೈಃ ಪುತ್ರಕೈಃ ಸಹ।।

“ಹಾ! ಹಾ! ಇಂದು ಈ ಬೆಂಕಿಯಿಂದ ಹೇಗೆ ಬಿಡುಗಡೆಯನ್ನು ಹೊಂದುತ್ತೇನೆ? ಅನಾಥಳಾದ ನಾನು ನನ್ನ ಬಾಲಕ ಪುತ್ರರೊಂದಿಗೆ ನಾಶಹೊಂದುತ್ತೇನೆ!”

03013081a ತತ್ರ ಭೀಮೋ ಮಹಾಬಾಹುರ್ವಾಯುವೇಗಪರಾಕ್ರಮಃ।
03013081c ಆರ್ಯಾಮಾಶ್ವಾಸಯಾಮಾಸ ಭ್ರಾತೄಂಶ್ಚಾಪಿ ವೃಕೋದರಃ।।

ಆಗ ವಾಯುವೇಗ ಪರಾಕ್ರಮಿ ಮಹಾಬಾಹು ವೃಕೋದರ ಭೀಮನು ಆರ್ಯೆ ಮತ್ತು ಸಹೋದರರಿಗೆ ಆಶ್ವಾಸನೆಯನ್ನಿತ್ತನು.

03013082a ವೈನತೇಯೋ ಯಥಾ ಪಕ್ಷೀ ಗರುಡಃ ಪತತಾಂ ವರಃ।
03013082c ತಥೈವಾಭಿಪತಿಷ್ಯಾಮಿ ಭಯಂ ವೋ ನೇಹ ವಿದ್ಯತೇ।।

“ರೆಕ್ಕೆವುಳ್ಳವುಗಳಲ್ಲೆಲ್ಲಾ ಶ್ರೇಷ್ಠ ವೈನತೇಯ ಪಕ್ಷಿ ಗರುಡನು ಹೇಗೋ ಹಾಗೆ ಹಾರುತ್ತೇನೆ ಮತ್ತು ಭಯದಿಂದ ಬಿಡುಗಡೆ ಹೊಂದುತ್ತೀರಿ.”

03013083a ಆರ್ಯಾಮಂಕೇನ ವಾಮೇನ ರಾಜಾನಂ ದಕ್ಷಿಣೇನ ಚ।
03013083c ಅಂಸಯೋಶ್ಚ ಯಮೌ ಕೃತ್ವಾ ಪೃಷ್ಠೇ ಬೀಭತ್ಸುಮೇವ ಚ।।
03013084a ಸಹಸೋತ್ಪತ್ಯ ವೇಗೇನ ಸರ್ವಾನಾದಾಯ ವೀರ್ಯವಾನ್।
03013084c ಭ್ರಾತೄನಾರ್ಯಾಂ ಚ ಬಲವಾನ್ಮೋಕ್ಷಯಾಮಾಸ ಪಾವಕಾತ್।।

ತಕ್ಷಣವೇ ಆ ವೀರ್ಯವಂತನು ಆರ್ಯೆಯನ್ನು ಎಡ ಸೊಂಟದ ಮೇಲೆ, ರಾಜನನ್ನು ಬಲಸೊಂಟದ ಮೇಲೆ, ಅವಳಿಗಳನ್ನು ಭುಜಗಳ ಮೇಲೆ ಮತ್ತು ಬೀಭತ್ಸುವನ್ನು ಬೆನ್ನಮೇಲೆ ಕೂರಿಸಿಕೊಂಡು, ಎಲ್ಲರನ್ನೂ ಎತ್ತಿಕೊಂಡು ಶಕ್ತಿಯಿಂದ ಮೇಲೆ ಹಾರಿ ಆರ್ಯೆ ಮತ್ತು ಸಹೋದರರನ್ನು ಬೆಂಕಿಯಿಂದ ತಪ್ಪಿಸಿದನು.

03013085a ತೇ ರಾತ್ರೌ ಪ್ರಸ್ಥಿತಾಃ ಸರ್ವೇ ಮಾತ್ರಾ ಸಹ ಯಶಸ್ವಿನಃ।
03013085c ಅಭ್ಯಗಚ್ಚನ್ಮಹಾರಣ್ಯಂ ಹಿಡಿಂಬವನಮಂತಿಕಾತ್।।

ತಾಯಿಯೊಂದಿಗೆ ಆ ಯಶಸ್ವಿಗಳೆಲ್ಲರೂ ರಾತ್ರಿಯಲ್ಲಿ ಹೊರಟು ಹಿಡಿಂಬವನದ ಸಮೀಪದ ಮಹಾರಣ್ಯವನ್ನು ತಲುಪಿದರು.

03013086a ಶ್ರಾಂತಾಃ ಪ್ರಸುಪ್ತಾಸ್ತತ್ರೇಮೇ ಮಾತ್ರಾ ಸಹ ಸುದುಃಖಿತಾಃ।
03013086c ಸುಪ್ತಾಂಶ್ಚೈನಾನಭ್ಯಗಚ್ಚದ್ ಹಿಡಿಂಬಾ ನಾಮ ರಾಕ್ಷಸೀ।।

ಆಯಾಸಗೊಂಡ ಮತ್ತು ತುಂಬಾ ದುಃಖಿತರಾದ ಅವರು ತಾಯಿಯೊಂದಿಗೆ ಅಲ್ಲಿಯೇ ಮಲಗಿಕೊಂಡರು. ಅವರು ಮಲಗಿದ್ದಾಗ ಅಲ್ಲಿಗೆ ಹಿಡಿಂಬಾ ಎಂಬ ಹೆಸರಿನ ರಾಕ್ಷಸಿಯು ಬಂದಳು.

03013087a ಭೀಮಸ್ಯ ಪಾದೌ ಕೃತ್ವಾ ತು ಸ್ವ ಉತ್ಸಂಗೇ ತತೋ ಬಲಾತ್।
03013087c ಪರ್ಯಮರ್ದತ ಸಂಹೃಷ್ಟಾ ಕಲ್ಯಾಣೀ ಮೃದುಪಾಣಿನಾ।।

ಆ ಕಲ್ಯಾಣಿಯು ಭೀಮನ ಪಾದಗಳನ್ನು ತನ್ನ ತೊಡೆಯಮೇಲೆ ಗಟ್ಟಿಯಾಗಿರಿಸಿ ಸಂತೋಷದಿಂದ ತನ್ನ ಮೃದು ಕೈಗಳಿಂದ ಒತ್ತುತ್ತಿದ್ದಳು.

03013088a ತಾಮಬುಧ್ಯದಮೇಯಾತ್ಮಾ ಬಲವಾನ್ಸತ್ಯವಿಕ್ರಮಃ।
03013088c ಪರ್ಯಪೃಚ್ಚಚ್ಚ ತಾಂ ಭೀಮಃ ಕಿಮಿಹೇಚ್ಚಸ್ಯನಿಂದಿತೇ।।

ಅಮೇಯಾತ್ಮ, ಬಲವಾನ್, ಸತ್ಯವಿಕ್ರಮ ಭೀಮನು ಎಚ್ಚೆತ್ತು ಅವಳನ್ನು ಕೇಳಿದನು: “ಅನಿಂದಿತೇ! ಇಲ್ಲಿ ಏನನ್ನು ಬಯಸಿ ಬಂದೆ?”

03013089a ತಯೋಃ ಶ್ರುತ್ವಾ ತು ಕಥಿತಮಾಗಚ್ಚದ್ರಾಕ್ಷಸಾಧಮಃ।
03013089c ಭೀಮರೂಪೋ ಮಹಾನಾದಾನ್ವಿಸೃಜನ್ಭೀಮದರ್ಶನಃ।।

ಅವರಿಬ್ಬರು ಮಾತನಾಡುತ್ತಿರುವುದನ್ನು ಕೇಳಿ ರಾಕ್ಷಸಾಧಮ, ಭೀಮರೂಪ, ಭೀಮದರ್ಶನನು ಜೋರಾಗಿ ಗರ್ಜಿಸುತ್ತಾ ಅಲ್ಲಿಗೆ ಬಂದನು.

03013090a ಕೇನ ಸಾರ್ಧಂ ಕಥಯಸಿ ಆನಯೈನಂ ಮಮಾಂತಿಕಂ।
03013090c ಹಿಡಿಂಬೇ ಭಕ್ಷಯಿಷ್ಯಾವೋ ನ ಚಿರಂ ಕರ್ತುಮರ್ಹಸಿ।।

“ಹಿಡಿಂಬೆ! ಯಾರೊಂದಿಗೆ ಮಾತನಾಡುತ್ತಿರುವೆ? ಅವನನ್ನು ತಡಮಾಡದೇ ನನ್ನ ಹತ್ತಿರ ಕರೆದುಕೊಂಡು ಬಾ. ಇಬ್ಬರೂ ಅವನನ್ನು ಭಕ್ಷಿಸೋಣ!”

03013091a ಸಾ ಕೃಪಾಸಂಗೃಹೀತೇನ ಹೃದಯೇನ ಮನಸ್ವಿನೀ।
03013091c ನೈನಮೈಚ್ಚತ್ತದಾಖ್ಯಾತುಮನುಕ್ರೋಶಾದನಿಂದಿತಾ।।

ಆದರೆ ಆ ಮನಸ್ವಿನೀ ಅನಿಂದಿತೆಯ ಹೃದಯವು ಕೃಪೆಯಿಂದ ಪೀಡಿತವಾಗಿತ್ತು ಮತ್ತು ಅನುಕಂಪದಿಂದ ಅವನನ್ನು ದೂರಮಾಡಲು ಬಯಸಲಿಲ್ಲ.

03013092a ಸ ನಾದಾನ್ವಿನದನ್ಘೋರಾನ್ರಾಕ್ಷಸಃ ಪುರುಷಾದಕಃ।
03013092c ಅಭ್ಯದ್ರವತ ವೇಗೇನ ಭೀಮಸೇನಂ ತದಾ ಕಿಲ।।

ಆಗ ಜೋರಾಗಿ ಕೂಗುತ್ತಾ ಆ ಘೋರರಾಕ್ಷಸ ಪುರುಷಾದಕನು ವೇಗದಿಂದ ಭೀಮಸೇನನ ಹತ್ತಿರವೇ ಓಡಿ ಬಂದನು.

03013093a ತಮಭಿದ್ರುತ್ಯ ಸಂಕ್ರುದ್ಧೋ ವೇಗೇನ ಮಹತಾ ಬಲೀ।
03013093c ಅಗೃಹ್ಣಾತ್ಪಾಣಿನಾ ಪಾಣಿಂ ಭೀಮಸೇನಸ್ಯ ರಾಕ್ಷಸಃ।।
03013094a ಇಂದ್ರಾಶನಿಸಮಸ್ಪರ್ಶಂ ವಜ್ರಸಂಹನನಂ ದೃಢಂ।
03013094c ಸಂಹತ್ಯ ಭೀಮಸೇನಾಯ ವ್ಯಾಕ್ಷಿಪತ್ಸಹಸಾ ಕರಂ।।

ಆ ಸಂಕೃದ್ಧ ಮಹಾಬಲಿ ರಾಕ್ಷಸನು ವೇಗದಿಂದ ಓಡಿಬಂದು ತನ್ನ ಕೈಗಳಿಂದ ಭೀಮಸೇನನ ಕೈಗಳನ್ನು ಇಂದ್ರನ ವಜ್ರದಂತೆ ಗಟ್ಟಿಯಾದ ಹಿಡಿತದಲ್ಲಿ ಹಿಡಿದನು.

03013095a ಗೃಹೀತಂ ಪಾಣಿನಾ ಪಾಣಿಂ ಭೀಮಸೇನೋಽಥ ರಕ್ಷಸಾ।
03013095c ನಾಮೃಷ್ಯತ ಮಹಾಬಾಹುಸ್ತತ್ರಾಕ್ರುಧ್ಯದ್ವೃಕೋದರಃ।।
03013096a ತತ್ರಾಸೀತ್ತುಮುಲಂ ಯುದ್ಧಂ ಭೀಮಸೇನಹಿಡಿಂಬಯೋಃ।
03013096c ಸರ್ವಾಸ್ತ್ರವಿದುಷೋರ್ಘೋರಂ ವೃತ್ರವಾಸವಯೋರಿವ।।

ರಾಕ್ಷಸನು ಅವನ ಕೈಯನ್ನು ಹಿಡಿದುಕೊಂಡಾಗ ಮಹಾಬಾಹು ಭೀಮಸೇನನು ತಡೆಯಲಾಗದೆ ಸಿಟ್ಟಿಗೆದ್ದನು ಮತ್ತು ಅಲ್ಲಿ ಸರ್ವ ಅಸ್ತ್ರವಿದುಷ ಭೀಮಸೇನ ಮತ್ತು ಹಿಂಡಿಂಬರ ಮಧ್ಯೆ ವೃತ್ರ ಮತ್ತು ವಾಸವರ ನಡುವೆ ಹೇಗೋ ಹಾಗೆ ತುಮುಲ ಯುದ್ಧವು ನಡೆಯಿತು.

03013097a ಹತ್ವಾ ಹಿಡಿಂಬಂ ಭೀಮೋಽಥ ಪ್ರಸ್ಥಿತೋ ಭ್ರಾತೃಭಿಃ ಸಹ।
03013097c ಹಿಡಿಂಬಾಮಗ್ರತಃ ಕೃತ್ವಾ ಯಸ್ಯಾಂ ಜಾತೋ ಘಟೋತ್ಕಚಃ।।

ಭೀಮನು ಹಿಡಿಂಬನನ್ನು ಕೊಂದು, ಘಟೋತ್ಕಚನನು ಹೆತ್ತ ಹಿಡಿಂಬೆಯನ್ನು ಮುಂದಿಟ್ಟುಕೊಂಡು ಸಹೋದರರೊಂದಿಗೆ ಮುಂದುವರೆದನು.

03013098a ತತಶ್ಚ ಪ್ರಾದ್ರವನ್ಸರ್ವೇ ಸಹ ಮಾತ್ರಾ ಯಶಸ್ವಿನಃ।
03013098c ಏಕಚಕ್ರಾಮಭಿಮುಖಾಃ ಸಂವೃತಾ ಬ್ರಾಹ್ಮಣವ್ರಜೈಃ।।

ಅಲ್ಲಿಂದ ತಾಯಿಯೊಂದಿಗೆ ಆ ಯಶಸ್ವಿಗಳೆಲ್ಲರೂ ಬ್ರಾಹ್ಮಣರ ಗುಂಪುಗಳೊಂದಿಗೆ ಏಕಚಕ್ರದ ಕಡೆ ಹೊರಟರು.

03013099a ಪ್ರಸ್ಥಾನೇ ವ್ಯಾಸ ಏಷಾಂ ಚ ಮಂತ್ರೀ ಪ್ರಿಯಹಿತೋಽಭವತ್।
03013099c ತತೋಽಗಚ್ಚನ್ನೇಕಚಕ್ರಾಂ ಪಾಂಡವಾಃ ಸಂಶಿತವ್ರತಾಃ।।

ಅವರು ಹೊರಡುವಾಗ ವ್ಯಾಸನು ಅವರ ಪ್ರಿಯಹಿತಕಾರಿ ಮಂತ್ರಿಯಾಗಿದ್ದನು. ಅದರಂತೆ ಸಂಶಿತವ್ರತ ಪಾಂಡವರು ಏಕಚಕ್ರವನ್ನು ಸೇರಿದರು.

03013100a ತತ್ರಾಪ್ಯಾಸಾದಯಾಮಾಸುರ್ಬಕಂ ನಾಮ ಮಹಾಬಲಂ।
03013100c ಪುರುಷಾದಂ ಪ್ರತಿಭಯಂ ಹಿಡಿಂಬೇನೈವ ಸಮ್ಮಿತಂ।।
03013101a ತಂ ಚಾಪಿ ವಿನಿಹತ್ಯೋಗ್ರಂ ಭೀಮಃ ಪ್ರಹರತಾಂ ವರಃ।
03013101c ಸಹಿತೋ ಭ್ರಾತೃಭಿಃ ಸರ್ವೈರ್ದ್ರುಪದಸ್ಯ ಪುರಂ ಯಯೌ।।

ಅಲ್ಲಿ ಕೂಡ ಅವರು ಬಕ ಎಂಬ ಹೆಸರಿನ ಮಹಾಬಲ, ಪುರುಷಾದ, ಹಿಡಿಂಬನಷ್ಟೇ ಭಯಂಕರನಾಗಿರುವನನ್ನು ಎದುರಿಸಿದರು. ಪ್ರಹಾರಿಗಳಲ್ಲಿ ಶ್ರೇಷ್ಠ ಭೀಮನು ಆ ಉಗ್ರನನ್ನೂ ಕೊಂದನು ಮತ್ತು ಸಹೋದರರೊಂದಿಗೆ ಎಲ್ಲರೂ ದ್ರುಪದನ ಪುರಕ್ಕೆ ಹೋದರು.

03013102a ಲಬ್ಧಾಹಮಪಿ ತತ್ರೈವ ವಸತಾ ಸವ್ಯಸಾಚಿನಾ।
03013102c ಯಥಾ ತ್ವಯಾ ಜಿತಾ ಕೃಷ್ಣ ರುಕ್ಮಿಣೀ ಭೀಷ್ಮಕಾತ್ಮಜಾ।।
03013103a ಏವಂ ಸುಯುದ್ಧೇ ಪಾರ್ಥೇನ ಜಿತಾಹಂ ಮಧುಸೂದನ।
03013103c ಸ್ವಯಂವರೇ ಮಹತ್ಕರ್ಮ ಕೃತ್ವಾ ನಸುಕರಂ ಪರೈಃ।।

ಕೃಷ್ಣ! ಮಧುಸೂದನ! ಅಲ್ಲಿಯೇ ವಾಸಿಸುತ್ತಿದ್ದ ಸವ್ಯಸಾಚಿ ಪಾರ್ಥನು ನೀನು ಹೇಗೆ ಭೀಷ್ಮಕಾತ್ಮಜೆ ರುಕ್ಮಿಣಿಯನ್ನು ಗೆದ್ದೆಯೋ ಹಾಗೆ ಸ್ವಯಂವರದಲ್ಲಿ ಇತರರು ಮಾಡಲಿಕ್ಕೆ ಸಾಧ್ಯವಾಗದಿದ್ದ ಮಹಾ ಕಾರ್ಯವನ್ನು ಮಾಡಿ ನನ್ನನ್ನೂ ಕೂಡ ಗೆದ್ದು ಪಡೆದನು.

03013104a ಏವಂ ಕ್ಲೇಶೈಃ ಸುಬಹುಭಿಃ ಕ್ಲಿಶ್ಯಮಾನಾಃ ಸುದುಃಖಿತಾಃ।
03013104c ನಿವಸಾಮಾರ್ಯಯಾ ಹೀನಾಃ ಕೃಷ್ಣ ಧೌಮ್ಯಪುರಃಸ್ಸರಾಃ।।

ಕೃಷ್ಣ! ಇಷ್ಟೊಂದು ಬಗೆಯ ಕಷ್ಟಗಳನ್ನು ಅನುಭವಿಸಿ ದುಃಖಿತರಾದ ನಾವು ಆರ್ಯೆಯಿಲ್ಲದೇ ಧೌಮ್ಯನ ನೇತೃತ್ವದಲ್ಲಿ ವಾಸಿಸುತ್ತಿದ್ದೇವೆ.

03013105a ತ ಇಮೇ ಸಿಂಹವಿಕ್ರಾಂತಾ ವೀರ್ಯೇಣಾಭ್ಯಧಿಕಾಃ ಪರೈಃ।
03013105c ವಿಹೀನೈಃ ಪರಿಕ್ಲಿಶ್ಯಂತೀಂ ಸಮುಪೇಕ್ಷಂತ ಮಾಂ ಕಥಂ।।

ಕೃಷ್ಣ! ಸಿಂಹವಿಕ್ರಾಂತ ಇತರರಿಗಿಂತಲೂ ಅಧಿಕ ವೀರ್ಯವಂತರಾದ ಇವರು ಹೀನರಿಂದ ಪೀಡಿಸಲ್ಪಡುವಾಗ ನನ್ನನ್ನು ಏಕೆ ತಿರಸ್ಕರಿಸಿದರು?

03013106a ಏತಾದೃಶಾನಿ ದುಃಖಾನಿ ಸಹಂತೇ ದುರ್ಬಲೀಯಸಾಂ।
03013106c ದೀರ್ಘಕಾಲಂ ಪ್ರದೀಪ್ತಾನಿ ಪಾಪಾನಾಂ ಕ್ಷುದ್ರಕರ್ಮಣಾಂ।।

ದುರ್ಬಲರಿಂದ ಇವರು ಇಂತಹ ಬಹಳಷ್ಟು ದುಃಖಗಳನ್ನು ಸಹಿಸಿಕೊಂಡು ಬಂದಿದ್ದಾರೆ. ದೀರ್ಘಕಾಲದಿಂದ ಕ್ಷುದ್ರಕರ್ಮಿಗಳ ಪಾಪಗಳು ಉರಿಯುತ್ತಿವೆ.

03013107a ಕುಲೇ ಮಹತಿ ಜಾತಾಸ್ಮಿ ದಿವ್ಯೇನ ವಿಧಿನಾ ಕಿಲ।
03013107c ಪಾಂಡವಾನಾಂ ಪ್ರಿಯಾ ಭಾರ್ಯಾ ಸ್ನುಷಾ ಪಾಂಡೋರ್ಮಹಾತ್ಮನಃ।।

ನಾನು ದೊಡ್ಡ ಕುಲದಲ್ಲಿ, ದಿವ್ಯ ವಿಧಿಯಲ್ಲಿಯೇ ಹುಟ್ಟಿದ್ದೇನೆ17. ಪಾಂಡವರ ಪ್ರಿಯ ಭಾರ್ಯೆ ಮತ್ತು ಮಹಾತ್ಮ ಪಾಂಡುವಿನ ಸೊಸೆಯಾಗಿದ್ದೇನೆ.

03013108a ಕಚಗ್ರಹಮನುಪ್ರಾಪ್ತಾ ಸಾಸ್ಮಿ ಕೃಷ್ಣ ವರಾ ಸತೀ।
03013108c ಪಂಚಾನಾಮಿಂದ್ರಕಲ್ಪಾನಾಂ ಪ್ರೇಕ್ಷತಾಂ ಮಧುಸೂದನ।।

ಕೃಷ್ಣ! ಮಧುಸೂದನ! ಇಂದ್ರರ ಸಮನಾಗಿದ್ದ ಈ ಐವರೂ ನೋಡುತ್ತಿದ್ದಂತೆಯೇ ವರಸತಿಯಾದ ನನ್ನ ಮುಡಿಯನ್ನು ಹಿಡಿದು ಎಳೆದು ತರಲ್ಪಟ್ಟೆ!”

03013109a ಇತ್ಯುಕ್ತ್ವಾ ಪ್ರಾರುದತ್ಕೃಷ್ಣಾ ಮುಖಂ ಪ್ರಚ್ಚಾದ್ಯ ಪಾಣಿನಾ।
03013109c ಪದ್ಮಕೋಶಪ್ರಕಾಶೇನ ಮೃದುನಾ ಮೃದುಭಾಷಿಣೀ।।

ಹೀಗೆ ಹೇಳಿ ಮೃದುಭಾಷಿಣಿ ಕೃಷ್ಣೆಯು ಕಮಲದ ಒಳಮೈಯಷ್ಟೆ ಮೃದುವಾದ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಜೋರಾಗಿ ಅತ್ತಳು.

03013110a ಸ್ತನಾವಪತಿತೌ ಪೀನೌ ಸುಜಾತೌ ಶುಭಲಕ್ಷಣೌ।
03013110c ಅಭ್ಯವರ್ಷತ ಪಾಂಚಾಲೀ ದುಃಖಜೈರಶ್ರುಬಿಂದುಭಿಃ।।

ಪಾಂಚಾಲಿಯ ದುಃಖದಿಂದ ಹರಿದ ಕಣ್ಣೀರ ಹನಿಗಳು ಜೋಲುಬೀಳದಿದ್ದ, ಚೆನ್ನಾಗಿ ತುಂಬಿ ಬೆಳೆದಿದ್ದ ಸುಂದರ ಮೊಲೆಗಳ ಮೇಲೆ ಸುರಿದು ತೋಯಿಸಿದವು.

03013111a ಚಕ್ಷುಷೀ ಪರಿಮಾರ್ಜಂತೀ ನಿಃಶ್ವಸಂತೀ ಪುನಃ ಪುನಃ।
03013111c ಬಾಷ್ಪಪೂರ್ಣೇನ ಕಂಠೇನ ಕ್ರುದ್ಧಾ ವಚನಮಬ್ರವೀತ್।।

ಅವಳು ಪುನಃ ಪುನಃ ಕಣ್ಣನ್ನು ಒರೆಸಿಕೊಳ್ಳುತ್ತಾ ನಿಟ್ಟುಸಿರು ಬಿಡುತ್ತಾ ಕಣ್ಣೀರಿನಿಂದ ಕಟ್ಟಿದ ಕಂಠದಲ್ಲಿ ಕ್ರೋಧದಿಂದ ಈ ಮಾತುಗಳನ್ನಾಡಿದಳು.

03013112a ನೈವ ಮೇ ಪತಯಃ ಸಂತಿ ನ ಪುತ್ರಾ ಮಧುಸೂದನ।
03013112c ನ ಭ್ರಾತರೋ ನ ಚ ಪಿತಾ ನೈವ ತ್ವಂ ನ ಚ ಬಾಂಧವಾಃ।।
03013113a ಯೇ ಮಾಂ ವಿಪ್ರಕೃತಾಂ ಕ್ಷುದ್ರೈರುಪೇಕ್ಷಧ್ವಂ ವಿಶೋಕವತ್।
03013113c ನ ಹಿ ಮೇ ಶಾಮ್ಯತೇ ದುಃಖಂ ಕರ್ಣೋ ಯತ್ಪ್ರಾಹಸತ್ತದಾ।।

“ಮಧುಸೂದನ! ನನಗೆ ಪತಿಗಳೂ ಇಲ್ಲ. ಮಕ್ಕಳೂ ಇಲ್ಲ. ಅಣ್ಣ ತಮ್ಮಂದಿರೂ ಇಲ್ಲ. ತಂದೆಯೂ ಇಲ್ಲ ಮತ್ತು ಬಾಂಧವರು ಯಾರೂ ಇಲ್ಲ! ಕ್ಷುದ್ರರು ನನ್ನನ್ನು ಕಾಡಿಸಿ ಅಳಿಸುತ್ತಿರುವಾಗ ಇವರು ನನ್ನನ್ನು ನಿರ್ಲಕ್ಷಿಸಿದರು. ಕರ್ಣನು ನೋಡಿ ನಗುತ್ತಿರುವಾಗ ನನ್ನ ದುಃಖವು ಕಡಿಮೆಯಾಗುವುದಿಲ್ಲ.”

03013114a ಅಥೈನಾಮಬ್ರವೀತ್ಕೃಷ್ಣಸ್ತಸ್ಮಿನ್ವೀರಸಮಾಗಮೇ।
03013114c ರೋದಿಷ್ಯಂತಿ ಸ್ತ್ರಿಯೋ ಹ್ಯೇವಂ ಯೇಷಾಂ ಕ್ರುದ್ಧಾಸಿ ಭಾಮಿನಿ।।
03013115a ಬೀಭತ್ಸುಶರಸಂಚನ್ನಾಂ ಶೋಣಿತೌಘಪರಿಪ್ಲುತಾನ್।
03013115c ನಿಹತಾಂಜೀವಿತಂ ತ್ಯಕ್ತ್ವಾ ಶಯಾನಾನ್ವಸುಧಾತಲೇ।।

ಆಗ ಕೃಷ್ಣನು ಅವಳಿಗೆ ಹೇಳಿದನು: “ಭಾಮಿನಿ! ನಿನ್ನನ್ನು ಕೆರಳಿಸಿದವರ ಪತ್ನಿಯರು ಬೀಭತ್ಸುವು ಬಿಟ್ಟ ಶರಗಳಿಂದ ಮುಚ್ಚಲ್ಪಟ್ಟು ರಕ್ತದ ಮಳೆಯಲ್ಲಿ ತೋಯ್ದು ಹೊಡೆತಕ್ಕೆ ಸಿಲುಕಿ ಜೀವ ತೊರೆದು ವಸುಧಾತಲೆಯಲ್ಲಿ ಮಲಗಿರಲು ರೋದಿಸುತ್ತಾರೆ!

03013116a ಯತ್ಸಮರ್ಥಂ ಪಾಂಡವಾನಾಂ ತತ್ಕರಿಷ್ಯಾಮಿ ಮಾ ಶುಚಃ।
03013116c ಸತ್ಯಂ ತೇ ಪ್ರತಿಜಾನಾಮಿ ರಾಜ್ಞಾಂ ರಾಜ್ಞೀ ಭವಿಷ್ಯಸಿ।।

ಶೋಕಿಸಬೇಡ! ಪಾಂಡವರು ಏನನ್ನು ಮಾಡಲು ಸಮರ್ಥರಿದ್ದಾರೋ ಅದನ್ನು ಮಾಡುತ್ತೇನೆ. ನೀನು ರಾಜರ ರಾಣಿಯಾಗುತ್ತೀಯೆ ಎನ್ನುವ ಸತ್ಯವನ್ನು ತಿಳಿದಿದ್ದೇನೆ.

03013117a ಪತೇದ್ದ್ಯೌರ್ಹಿಮವಾಂ ಶೀರ್ಯೇತ್ಪೃಥಿವೀ ಶಕಲೀಭವೇತ್।
03013117c ಶುಷ್ಯೇತ್ತೋಯನಿಧಿಃ ಕೃಷ್ಣೇ ನ ಮೇ ಮೋಘಂ ವಚೋ ಭವೇತ್।।

ಆಕಾಶವೇ ಕೆಳಗುರುಳಿ ಬೀಳಲಿ, ಹಿಮಾಲಯವು ತುಂಡಾಗಲಿ, ಭೂಮಿಯು ಸೀಳಿಹೋಗಲಿ, ಸಾಗರವು ಬತ್ತಿಹೋಗಲಿ, ಕೃಷ್ಣೆ! ನನ್ನ ಮಾತು ಹುಸಿಯಾಗುವುದಿಲ್ಲ!”

03013118 ಧೃಷ್ಟದ್ಯುಮ್ನ ಉವಾಚ।
03013118a ಅಹಂ ದ್ರೋಣಂ ಹನಿಷ್ಯಾಮಿ ಶಿಖಂಡೀ ತು ಪಿತಾಮಹಂ।
03013118c ದುರ್ಯೋಧನಂ ಭೀಮಸೇನಃ ಕರ್ಣಂ ಹಂತಾ ಧನಂಜಯಃ।।

ಧೃಷ್ಟದ್ಯುಮ್ನನು ಹೇಳಿದನು: “ನಾನು ದ್ರೋಣನನ್ನು ಕೊಲ್ಲುತ್ತೇನೆ. ಶಿಖಂಡಿಯು ಪಿತಾಮಹನನ್ನು, ಭೀಮಸೇನನು ದುರ್ಯೋಧನನನ್ನು, ಮತ್ತು ಕರ್ಣನನ್ನು ಧನಂಜಯನು ಕೊಲ್ಲುತ್ತಾರೆ!

03013119a ರಾಮಕೃಷ್ಣೌ ವ್ಯಪಾಶ್ರಿತ್ಯ ಅಜೇಯಾಃ ಸ್ಮ ಶುಚಿಸ್ಮಿತೇ।
03013119c ಅಪಿ ವೃತ್ರಹಣಾ ಯುದ್ಧೇ ಕಿಂ ಪುನರ್ಧೃತರಾಷ್ಟ್ರಜೈಃ।।

ಶುಚಿಸ್ಮಿತೇ! ಬಲರಾಮ-ಕೃಷ್ಣರನ್ನು ಅವಲಂಬಿಕೊಂಡಿದ್ದರೆ ನಾವು ವೃತ್ರಹರನೇ ಬಂದರೂ ಅಜೇಯರಾಗಿರುತ್ತೇವೆ. ಇನ್ನು ಧೃತರಾಷ್ಟ್ರನ ಮಕ್ಕಳು ಯಾವ ಲೆಕ್ಖಕ್ಕೆ?””

03013120 ವೈಶಂಪಾಯನ ಉವಾಚ।
03013120a ಇತ್ಯುಕ್ತೇಽಭಿಮುಖಾ ವೀರಾ ವಾಸುದೇವಮುಪಸ್ಥಿತಾ।
03013120c ತೇಷಾಂ ಮಧ್ಯೇ ಮಹಾಬಾಹುಃ ಕೇಶವೋ ವಾಕ್ಯಮಬ್ರವೀತ್।।

ವೈಶಂಪಾಯನನು ಹೇಳಿದನು: “ಇದನ್ನು ಹೇಳಿ ವೀರರು ಎದುರು ಕುಳಿತಿದ್ದ ವಾಸುದೇವನನ್ನು ನೋಡಲು, ಅವರ ಮಧ್ಯದಲ್ಲಿದ್ದ ಮಹಾಬಾಹು ಕೇಶವನು ಈ ಮಾತುಗಳನ್ನು ಹೇಳಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ರೌಪದ್ಯಾಶ್ವಾಸನೇ ತ್ರಯೋದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ರೌಪದಿಗೆ ಆಶ್ವಾಸನೆ ಎನ್ನುವ ಹದಿಮೂರನೆಯ ಅಧ್ಯಾಯವು.


  1. ಶಿಶುಪಾಲನ ಮಗ ↩︎

  2. ಮುಂದಿನ ಶ್ಲೋಕಗಳಲ್ಲಿ ಅರ್ಜುನನು ಮಾಡಿದ ಕೃಷ್ಣ ಸ್ತುತಿಯಿದೆ. ಈ ಸ್ತುತಿಯಲ್ಲಿ ಅರ್ಜುನನು ತಾನು ನರನಾಗಿದ್ದಾಗ ನಾರಾಯಣನಾಗಿದ್ದ ಶ್ರೀ ಕೃಷ್ಣನ ದೈವತ್ವವನ್ನು ಸ್ಮರಿಸಿ ಹೇಳಿಕೊಳ್ಳುವುದಿದೆ. ಇತರ ಶ್ರೀಕೃಷ್ಣ ಸ್ತುತಿಗಳಿಗಿಂಥ ಭಿನ್ನವಾಗಿದೆ, ಗೂಢಾರ್ಥಗಳನ್ನು ಹೊಂದಿದೆ. ↩︎

  3. ಸಾಯಂಗೃಹ ಮುನಿ ಅಂದರೆ ಸದಾ ಸಂಚಾರ ಮಾಡುತ್ತಾ, ಸಾಯಂಕಾಲದ ವೇಳೆಗೆ ಊರಾದರೂ ಸಿಗಬಹುದು ಕಾಡಾದರೂ ಸಿಗಬಹುದು ಅಲ್ಲಿಯೇ ತಂಗುವವನು. ↩︎

  4. ನರಕಾಸುರನ ವಧೆ ↩︎

  5. ಇಂದ್ರನ ಅಶ್ವಮೇಧದ ಕುದುರೆಯನ್ನು ಮೊಟ್ಟಮೊದಲ ಬಾರಿ ಕಟ್ಟಿಹಾಕಿದಾಗ ಅದನ್ನು ಬಿಡುಗಡೆ ಮಾಡಿಸಿದೆ. ↩︎

  6. ಯಜ್ಞ ಕುದುರೆಯನ್ನು ಲೋಕಸಂಚಾರಕ್ಕೆ ಬಿಟ್ಟಾಗ ಅದನ್ನು ಕಟ್ಟಿಹಾಕಿದ ದೈತ್ಯ-ದಾನವರನ್ನು ಯುದ್ಧದಲ್ಲಿ ಸಂಹರಿಸಿದೆ. ↩︎

  7. ವಾಮನನಾಗಿ ? ↩︎

  8. ಮೌರವ, ಪಾಶ, ಮತ್ತು ನಿಸುಂದರು ಯಾರು? ↩︎

  9. ಜರಾಸಂಧ ? ↩︎

  10. ಜಾರುಥಿಯಲ್ಲಿ ಎಂದರೇನು? ಆಹುತಿ, ಕ್ರಾಥ, ಭೀಮಸೇನ, ಶೈಭ್ಯ, ಮತ್ತು ಶತಧನ್ವರು ಯಾರು? ಇವರನ್ನು ಕೃಷ್ಣನು ಸೋಲಿಸಿದ್ದು ಯಾವಾಗ? ↩︎

  11. ರುಕ್ಮಿಣೀ ಅಪಹರಣದ ಕಥೆ ↩︎

  12. ಶಾಲ್ವವಧೆಯ ಕುರಿತು ಶ್ರೀಕೃಷ್ಣನೇ ಮುಂದೆ ಹೇಳುವವನಿದ್ದಾನೆ! ↩︎

  13. ಇವರು ಯಾರು? ↩︎

  14. ಮುಂದೆ ಶ್ರೀಕೃಷ್ಣನು ದ್ವಾರಕೆಯನ್ನು ಮುಳುಗಿಸಲಿರುವನು ಎಂದು ಅರ್ಜುನನಿಗೆ ಮೊದಲೇ ತಿಳಿದಿತ್ತೇ? ಅಥವಾ ಈ ಸ್ತುತಿಯನ್ನು ಅರ್ಜುನನು ಯೋಗಾವಸ್ಥೆಯಲ್ಲಿ ಮಾಡಿದನೇ? ↩︎

  15. ಕೈಲಾಸಭವನದಲ್ಲಿ . ↩︎

  16. ಸರ್ಪವಿಷ . ↩︎

  17. ಮನುಷ್ಯರು ಹುಟ್ಟುವಂತೆ ಹುಟ್ಟಿಲ್ಲ. ↩︎