ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕಿರ್ಮೀರವಧ ಪರ್ವ
ಅಧ್ಯಾಯ 12: ವಿದುರವಾಕ್ಯಃ
ಸಾರ
ಧೃತರಾಷ್ಟ್ರನಿಗೆ ವಿದುರನು ಭೀಮನ ಅಮಾನುಷ ಕೃತ್ಯದ ಕುರಿತು ಹೇಳಲು ಪ್ರಾರಂಭಿಸಿದುದು (1-2). ಮೂರು ದಿನ-ರಾತ್ರಿಗಳು ನಡೆದು ಮಧ್ಯರಾತ್ರಿಯಲ್ಲಿ ಕಾಮ್ಯಕವನ್ನು ಪ್ರವೇಶಿಸುತ್ತಿರುವಾಗ ಪಾಂಡವರು ಮಾರ್ಗದಲ್ಲಿ ಅಡ್ಡವಾಗಿ ನಿಂತಿದ್ದ ರಾಕ್ಷಸ ಕಿರ್ಮೀರನನ್ನು ನೋಡಿದುದು (3-15). ಆ ಘೋರರೂಪಿಯನ್ನು ನೋಡಿ ದ್ರೌಪದಿಯು ಮೂರ್ಛಿತಳಾದುದು; ಧೌಮ್ಯನು ಮಂತ್ರಶಕ್ತಿಯಿಂದ ರಾಕ್ಷಸನ ಮಾಯೆಯನ್ನು ನಾಶಪಡಿಸಿದುದು (16-19). ಅವರ್ಯಾರೆಂದು ತಿಳಿದ ಬಕನ ಸಹೋದರ, ಹಿಡಿಂಬನ ಗೆಳೆಯ ಕಿರ್ಮೀರನು ಭೀಮನೊಂದಿಗೆ ಸೇಡುತೀರಿಸಿಕೊಳ್ಳಲು ಮುಂದೆ ಬರುವುದು (20-37). ಭೀಕರವಾಗಿ ಹೋರಾಡಿ ಕಿರ್ಮೀರನನ್ನು ಭೀಮನು ವಧಿಸಿದ್ದುದು (38-75).
03012001 ಧೃತರಾಷ್ಟ್ರ ಉವಾಚ।
03012001a ಕಿರ್ಮೀರಸ್ಯ ವಧಂ ಕ್ಷತ್ತಃ ಶ್ರೋತುಮಿಚ್ಚಾಮಿ ಕಥ್ಯತಾಂ।
03012001c ರಕ್ಷಸಾ ಭೀಮಸೇನಸ್ಯ ಕಥಮಾಸೀತ್ಸಮಾಗಮಃ।।
ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಕಿರ್ಮೀರನ ವಧೆಯ ಕುರಿತು ಕೇಳಲು ಬಯಸುತ್ತೇನೆ. ರಾಕ್ಷಸ ಮತ್ತು ಭೀಮಸೇನರ ನಡುವೆ ಸಮಾಗಮವು ಹೇಗೆ ಆಯಿತು ಎನ್ನುವುದನ್ನು ಹೇಳು.”
03012002 ವಿದುರ ಉವಾಚ।
03012002a ಶೃಣು ಭೀಮಸ್ಯ ಕರ್ಮೇದಮತಿಮಾನುಷಕರ್ಮಣಃ।
03012002c ಶ್ರುತಪೂರ್ವಂ ಮಯಾ ತೇಷಾಂ ಕಥಾಂತೇಷು ಪುನಃ ಪುನಃ।।
ವಿದುರನು ಹೇಳಿದನು: “ಅವರು ಪುನಃ ಪುನಃ ಹೇಳುತ್ತಿದ್ದುದನ್ನು ಇದಕ್ಕೆ ಮೊದಲೇ ಕೇಳಿದ ಅಮಾನುಷಕರ್ಮಿ ಭೀಮನ ಕೃತ್ಯವನ್ನು ಕೇಳು.
03012003a ಇತಃ ಪ್ರಯಾತಾ ರಾಜೇಂದ್ರ ಪಾಂಡವಾ ದ್ಯೂತನಿರ್ಜಿತಾಃ।
03012003c ಜಗ್ಮುಸ್ತ್ರಿಭಿರಹೋರಾತ್ರೈಃ ಕಾಮ್ಯಕಂ ನಾಮ ತದ್ವನಂ।।
ರಾಜೇಂದ್ರ! ದ್ಯೂತದಲ್ಲಿ ಸೋತ ಪಾಂಡವರು ಇಲ್ಲಿಂದ ಹೊರಟು ಮೂರು ಹಗಲು ರಾತ್ರಿ ನಡೆದು ಕಾಮ್ಯಕವೆಂಬ ಹೆಸರಿನ ಆ ವನವನ್ನು ಸೇರಿದರು.
03012004a ರಾತ್ರೌ ನಿಶೀಥೇ ಸ್ವಾಭೀಲೇ ಗತೇಽರ್ಧಸಮಯೇ ನೃಪ।
03012004c ಪ್ರಚಾರೇ ಪುರುಷಾದಾನಾಂ ರಕ್ಷಸಾಂ ಭೀಮಕರ್ಮಣಾಂ।।
03012005a ತದ್ವನಂ ತಾಪಸಾ ನಿತ್ಯಂ ಶೇಷಾಶ್ಚ ವನಚಾರಿಣಃ।
03012005c ದೂರಾತ್ಪರಿಹರಂತಿ ಸ್ಮ ಪುರುಷಾದಭಯಾತ್ಕಿಲ।।
ನೃಪ! ಢಕಾಯಿತರಿಗೆ ಸರಿಯಾದ ಸಮಯವೆನಿಸಿದ ಮಧ್ಯರಾತ್ರಿ ಕಳೆದ ರಾತ್ರಿಯಲ್ಲಿ, ಭೀಮಕರ್ಮಿಣಿ ನರಭಕ್ಷಕ ರಾಕ್ಷಸರು ತಿರುಗುತ್ತಿರುವ ಸಮಯದಲ್ಲಿ ತಾಪಸರೂ ಮತ್ತು ಉಳಿದ ವನಚಾರಿಣಿಗಳೂ ನಿತ್ಯವೂ ತಿರುಗಾಡುತ್ತಿರುವ ನರಭಕ್ಷಕರ ಭಯದಿಂದ ಆ ವನದಿಂದ ದೂರವಿರುತ್ತಾರೆ.
03012006a ತೇಷಾಂ ಪ್ರವಿಶತಾಂ ತತ್ರ ಮಾರ್ಗಮಾವೃತ್ಯ ಭಾರತ।
03012006c ದೀಪ್ತಾಕ್ಷಂ ಭೀಷಣಂ ರಕ್ಷಃ ಸೋಲ್ಮುಕಂ ಪ್ರತ್ಯದೃಶ್ಯತ।।
ಭಾರತ! ಅಂಥಹ ಸಮಯದಲ್ಲಿ ಅವರು ಅದನ್ನು ಪ್ರವೇಶಿಸುತ್ತಿರುವಾಗ ಉರಿಯುತ್ತಿರುವ ಕಣ್ಣುಗಳ ಭೀಷಣ ರಾಕ್ಷಸನು ದೊಂದಿಯನ್ನು ಹಿಡಿದು ಅವರನ್ನು ತಡೆಗಟ್ಟುತ್ತಿರುವುದನ್ನು ಕಂಡರು.
03012007a ಬಾಹೂ ಮಹಾಂತೌ ಕೃತ್ವಾ ತು ತಥಾಸ್ಯಂ ಚ ಭಯಾನಕಂ।
03012007c ಸ್ಥಿತಮಾವೃತ್ಯ ಪಂಥಾನಂ ಯೇನ ಯಾಂತಿ ಕುರೂದ್ವಹಾಃ।।
ತನ್ನ ಮಹಾಬಾಹುಗಳನ್ನು ವಿಸ್ತರಿಸಿ, ಮುಖವನ್ನು ಭಯಾನಕವಾಗಿ ಮಾಡಿಕೊಂಡು ಅವನು ಆ ಕುರೂದ್ವಹರು ಹೋಗುತ್ತಿದ್ದ ಮಾರ್ಗದಲ್ಲಿ ಅಡ್ಡವಾಗಿ ನಿಂತನು.
03012008a ದಷ್ಟೋಷ್ಠದಂಷ್ಟ್ರಂ ತಾಮ್ರಾಕ್ಷಂ ಪ್ರದೀಪ್ತೋರ್ಧ್ವಶಿರೋರುಹಂ।
03012008c ಸಾರ್ಕರಶ್ಮಿತಡಿಚ್ಚಕ್ರಂ ಸಬಲಾಕಮಿವಾಂಬುದಂ।।
ಅವನ ಎಂಟು ಕೋರೆದಾಡೆಗಳೂ ಬಾಯಿಯಿಂದ ಹೊರಕ್ಕೆ ಚಾಚಿದ್ದವು. ಕಣ್ಣುಗಳು ಕೆಂಪಾಗಿದ್ದವು. ಅವನ ತಲೆಗೂದಲುಗಳು ಪ್ರಕಾಶಮಾನವಾಗಿ ನೆಟ್ಟಗೆ ನಿಂತಿದ್ದವು. ಆ ಸಮಯದಲ್ಲಿ ಅವನು ಸೂರ್ಯನ ರಶ್ಮಿಗಳಿಂದ, ಮಿಂಚು ಮತ್ತು ಬೆಳ್ಳಕ್ಕಿಗಳಿಂದ ಕೂಡಿದ ಮೋಡದಂತೆ ಕಂಡನು.
03012009a ಸೃಜಂತಂ ರಾಕ್ಷಸೀಂ ಮಾಯಾಂ ಮಹಾರಾವವಿರಾವಿಣಂ।
03012009c ಮುಂಚಂತಂ ವಿಪುಲಂ ನಾದಂ ಸತೋಯಮಿವ ತೋಯದಂ।।
ಮಳೆಸುರಿಸುವ ಮೋಡಗಳು ಜೋರಾಗಿ ಗುಡುಗು ಸಿಡಿಲುಗಳಿಂದ ಆರ್ಭಟಿಸುತ್ತಾ ಪ್ರಾಣಿಗಳಿಗೆ ಭಯತರುವಂತೆ ಅವನು ರಾಕ್ಷಸೀ ಮಾಯೆಗಳನ್ನು ಬಳಸಿ ಮಹಾ ನಿನಾದವನ್ನು ಹುಟ್ಟಿಸಿದನು.
03012010a ತಸ್ಯ ನಾದೇನ ಸಂತ್ರಸ್ತಾಃ ಪಕ್ಷಿಣಃ ಸರ್ವತೋದಿಶಂ।
03012010c ವಿಮುಕ್ತನಾದಾಃ ಸಂಪೇತುಃ ಸ್ಥಲಜಾ ಜಲಜೈಃ ಸಹ।।
ಅವನ ಕೂಗಿನಿಂದ ಸಂತ್ರಸ್ತರಾದ ಪಕ್ಷಿಗಳು ಎಲ್ಲ ದಿಕ್ಕುಗಳಲ್ಲಿ ಚೀರುತ್ತಾ ಅಲ್ಲಿದ್ದ ಪ್ರಾಣಿಗಳು ಮತ್ತು ಜಲಪ್ರಾಣಿಗಳೊಂದಿಗೆ ಚಿಲ್ಲಾಪಿಲ್ಲೆಗಳಾಗಿ ಹಾರಿಹೋದವು.
03012011a ಸಂಪ್ರದ್ರುತಮೃಗದ್ವೀಪಿಮಹಿಷರ್ಕ್ಷಸಮಾಕುಲಂ।
03012011c ತದ್ವನಂ ತಸ್ಯ ನಾದೇನ ಸಂಪ್ರಸ್ಥಿತಮಿವಾಭವತ್।।
ಭೂಮಿಯ ಮೇಲಿದ್ದ ಜಿಂಕೆ, ಹುಲಿ, ಕಾಡು ಕೋಣ, ಕರಡಿ ಮುಂತಾದ ಪ್ರಾಣಿಗಳು ಅವನ ಆರ್ಭಟವನ್ನು ಕೇಳಿ ಭಯದಿಂದ ಓಡಲಾರಂಭಿಸಿದವು.
03012012a ತಸ್ಯೋರುವಾತಾಭಿಹತಾ ತಾಮ್ರಪಲ್ಲವಬಾಹವಃ।
03012012c ವಿದೂರಜಾತಾಶ್ಚ ಲತಾಃ ಸಮಾಶ್ಲಿಷ್ಯಂತ ಪಾದಪಾನ್।।
ಅವನ ತೊಡೆಗಳ ವೇಗದ ಹೊಡೆತಕ್ಕೆ ಸಿಕ್ಕ ಎತ್ತರವಾಗಿ ಬೆಳೆದ ಬಳ್ಳಿಗಳು ತಮ್ಮ ಕೆಂಪು ಪುಷ್ಪಗಳನ್ನು ಹೊತ್ತು ಮರಗಳನ್ನು ಅಪ್ಪಿಕೊಂಡವು.
03012013a ತಸ್ಮಿನ್ ಕ್ಷಣೇಽಥ ಪ್ರವವೌ ಮಾರುತೋ ಭೃಶದಾರುಣಃ।
03012013c ರಜಸಾ ಸಂವೃತಂ ತೇನ ನಷ್ಟರ್ಷ್ಕಮಭವನ್ನಭಃ।।
ಅದೇ ಕ್ಷಣದಲ್ಲಿ ಭಯಂಕರ ಭಿರುಗಾಳಿಯು ಬೀಸಿ ಆಕಾಶವನ್ನೆಲ್ಲ ಧೂಳಿನಿಂದ ಮುಚ್ಚಿ ನಕ್ಷತ್ರಗಳೇ ಕಾಣದ ಹಾಗೆ ಮಾಡಿತು.
03012014a ಪಂಚಾನಾಂ ಪಾಂಡುಪುತ್ರಾಣಾಮವಿಜ್ಞಾತೋ ಮಹಾರಿಪುಃ।
03012014c ಪಂಚಾನಾಮಿಂದ್ರಿಯಾಣಾಂ ತು ಶೋಕವೇಗ ಇವಾತುಲಃ।।
ಪಂಚೇಂದ್ರಿಯಗಳಿಗೆ ತಿಳಿಯದಂತೆ ಆಕ್ರಮಿಸಿದ ಅತೀವ ಶೋಕದಂತೆ ಆ ಮಹಾ ಶತ್ರುವು ಪಂಚಪಾಂಡವರ ಮೇಲೆ ಎರಗಿದನು.
03012015a ಸ ದೃಷ್ಟ್ವಾ ಪಾಂಡವಾನ್ದೂರಾತ್ ಕೃಷ್ಣಾಜಿನಸಮಾವೃತಾನ್।
03012015c ಆವೃಣೋತ್ತದ್ವನದ್ವಾರಂ ಮೈನಾಕ ಇವ ಪರ್ವತಃ।।
ದೂರದಿಂದಲೇ ಕೃಷ್ಣಾಜಿನಗಳನ್ನು ಧರಿಸಿದ್ದ ಪಾಂಡವರನ್ನು ಕಂಡ ಅವನು ಮೈನಾಕ ಪರ್ವತದಂತೆ ವನದ್ವಾರದಲ್ಲಿ ತಡೆಗಟ್ಟಿ ನಿಂತನು.
03012016a ತಂ ಸಮಾಸಾದ್ಯ ವಿತ್ರಸ್ತಾ ಕೃಷ್ಣಾ ಕಮಲಲೋಚನಾ।
03012016c ಅದೃಷ್ಟಪೂರ್ವಂ ಸಂತ್ರಾಸಾನ್ನ್ಯಮೀಲಯತ ಲೋಚನೇ।।
ಅವನು ಹತ್ತಿರಬರುತ್ತಿದ್ದಂತೆಯೇ ಕಮಲಲೋಚನೆ ಕೃಷ್ಣೆಯು ಭಯಭೀತಳಾಗಿ ನಡುಗುತ್ತಾ ತನ್ನ ಕಣ್ಣುಗಳನ್ನು ಮುಚ್ಚಿದಳು.
03012017a ದುಃಶಾಸನಕರೋತ್ಸೃಷ್ಟವಿಪ್ರಕೀರ್ಣಶಿರೋರುಹಾ।
03012017c ಪಂಚಪರ್ವತಮಧ್ಯಸ್ಥಾ ನದೀವಾಕುಲತಾಂ ಗತಾ।।
ದುಃಶಾಸನನ ಕೈಗಳಿಂದ ಎಳೆಯಲ್ಪಟ್ಟು ಕೆದರಿದ ಕೂದಲಿನ ಅವಳು ಐದು ಪರ್ವತಗಳ ಮಧ್ಯೆ ಪ್ರವಾಹವಾಗಿ ಹರಿಯುತ್ತಿದ್ದ ನದಿಯಂತೆ ಕಂಡಳು.
03012018a ಮೋಮುಹ್ಯಮಾನಾಂ ತಾಂ ತತ್ರ ಜಗೃಹುಃ ಪಂಚ ಪಾಂಡವಾಃ।
03012018c ಇಂದ್ರಿಯಾಣಿ ಪ್ರಸಕ್ತಾನಿ ವಿಷಯೇಷು ಯಥಾ ರತಿಂ।।
ಅವಳು ಮೂರ್ಛಿತಳಾಗಿ ಅಲ್ಲಿಯೇ ಬೀಳಲು ಪಂಚ ಪಾಂಡವರು ಇಂದ್ರಿಯಗಳು, ವಿಷಯಗಳಿಗೆ ಅಂಟಿಕೊಂಡು ಸುಖವನ್ನು ಹೇಗೋ ಹಾಗೆ ಅವಳನ್ನು ಹಿಡಿದುಕೊಂಡರು.
03012019a ಅಥ ತಾಂ ರಾಕ್ಷಸೀಂ ಮಾಯಾಮುತ್ಥಿತಾಂ ಘೋರದರ್ಶನಾಂ।
03012019c ರಕ್ಷೋಘ್ನೈರ್ವಿವಿಧೈರ್ಮಂತ್ರೈರ್ಧೌಮ್ಯಃ ಸಮ್ಯಕ್ಪ್ರಯೋಜಿತೈಃ।
03012019e ಪಶ್ಯತಾಂ ಪಾಂಡುಪುತ್ರಾಣಾಂ ನಾಶಯಾಮಾಸ ವೀರ್ಯವಾನ್।।
ಆಗ ವೀರ್ಯವಾನ್ ಧೌಮ್ಯನು ಪಾಂಡುಪುತ್ರರು ನೋಡುತ್ತಿದ್ದಂತೆಯೇ ರಾಕ್ಷಸನು ಮಾಯೆಯಿಂದ ಕಾಣಿಸಿದ ಘೋರರೂಪೀ ರಾಕ್ಷಸರನ್ನು ವಿವಿಧಮಂತ್ರಗಳನ್ನು ಸರಿಯಾಗಿ ಬಳಸಿ ನಾಶಪಡಿಸಿದನು.
03012020a ಸ ನಷ್ಟಮಾಯೋಽತಿಬಲಃ ಕ್ರೋಧವಿಸ್ಫಾರಿತೇಕ್ಷಣಃ।
03012020c ಕಾಮಮೂರ್ತಿಧರಃ ಕ್ಷುದ್ರಃ ಕಾಲಕಲ್ಪೋ ವ್ಯದೃಶ್ಯತ।।
ತನ್ನ ಮಾಯೆಯು ನಾಶವಾಗಲು ಇಷ್ಟವಾದ ರೂಪವನ್ನು ಧರಿಸಬಲ್ಲ ಆ ಅತಿಬಲನು ಕ್ರೋಧದಿಂದ ಕಣ್ಣುಗಳನ್ನು ತೆರೆದು ಕ್ಷುದ್ರನಾಗಿ ಕಲ್ಪಾಂತ್ಯದಲ್ಲಿದ್ದ ಕಾಲನಂತೆ ಅವರಿಗೆ ಕಾಣಿಸಿಕೊಂಡನು.
03012021a ತಮುವಾಚ ತತೋ ರಾಜಾ ದೀರ್ಘಪ್ರಜ್ಞೋ ಯುಧಿಷ್ಠಿರಃ।
03012021c ಕೋ ಭವಾನ್ಕಸ್ಯ ವಾ ಕಿಂ ತೇ ಕ್ರಿಯತಾಂ ಕಾರ್ಯಮುಚ್ಯತಾಂ।।
ಆಗ ದೀರ್ಘಪ್ರಜ್ಞ ರಾಜಾ ಯುಧಿಷ್ಠಿರನು ಅವನಿಗೆ ಹೇಳಿದನು: “ನೀನು ಯಾರು ಮತ್ತು ಯಾರವನು? ನಿನಗೆ ಏನು ಮಾಡಬೇಕು ಹೇಳು!”
03012022a ಪ್ರತ್ಯುವಾಚಾಥ ತದ್ರಕ್ಷೋ ಧರ್ಮರಾಜಂ ಯುಧಿಷ್ಠಿರಂ।
03012022c ಅಹಂ ಬಕಸ್ಯ ವೈ ಭ್ರಾತಾ ಕಿರ್ಮೀರ ಇತಿ ವಿಶ್ರುತಃ।।
ಆ ರಾಕ್ಷಸನು ಧರ್ಮರಾಜ ಯುಧಿಷ್ಠಿರನಿಗೆ ಉತ್ತರಿಸಿದನು: “ನಾನು ಕಿರ್ಮೀರ ಎಂದು ವಿಶ್ರುತನಾದ ಬಕನ ಸಹೋದರ.
03012023a ವನೇಽಸ್ಮಿನ್ಕಾಮ್ಯಕೇ ಶೂನ್ಯೇ ನಿವಸಾಮಿ ಗತಜ್ವರಃ।
03012023c ಯುಧಿ ನಿರ್ಜಿತ್ಯ ಪುರುಷಾನಾಹಾರಂ ನಿತ್ಯಮಾಚರನ್।।
ನಾನು ಈ ಶೂನ್ಯ ಕಾಮ್ಯಕ ವನದಲ್ಲಿ ನಿತ್ಯವೂ ಯುದ್ಧದಲ್ಲಿ ಮನುಷ್ಯರನ್ನು ಸೋಲಿಸಿ ತಿನ್ನುತ್ತಾ ನಿಶ್ಚಿಂತೆಯಾಗಿ ವಾಸಿಸುತ್ತಿದ್ದೇನೆ.
03012024a ಕೇ ಯೂಯಮಿಹ ಸಂಪ್ರಾಪ್ತಾ ಭಕ್ಷ್ಯಭೂತಾ ಮಮಾಂತಿಕಂ।
03012024c ಯುಧಿ ನಿರ್ಜಿತ್ಯ ವಃ ಸರ್ವಾನ್ಭಕ್ಷಯಿಷ್ಯೇ ಗತಜ್ವರಃ।।
ನನ್ನ ಆಹಾರವಾಗಿ ನನ್ನಲ್ಲಿಗೆ ಬಂದಿರುವ ನೀವು ಯಾರು? ನಿಮ್ಮೆಲ್ಲರನ್ನೂ ಯುದ್ಧದಲ್ಲಿ ಸೋಲಿಸಿ ನಿಶ್ಚಿಂತೆಯಾಗಿ ತಿನ್ನುತ್ತೇನೆ.”
03012025a ಯುಧಿಷ್ಠಿರಸ್ತು ತಚ್ಛೃತ್ವಾ ವಚಸ್ತಸ್ಯ ದುರಾತ್ಮನಃ।
03012025c ಆಚಚಕ್ಷೇ ತತಃ ಸರ್ವಂ ಗೋತ್ರನಾಮಾದಿ ಭಾರತ।।
ಭಾರತ! ಆ ದುರಾತ್ಮನ ಮಾತುಗಳನ್ನು ಕೇಳಿ ಯುಧಿಷ್ಠಿರನು ಅವನಿಗೆ ಎಲ್ಲರ ಹೆಸರು ಗೋತ್ರಗಳನ್ನು ಹೇಳಿದನು.
03012026a ಪಾಂಡವೋ ಧರ್ಮರಾಜೋಽಹಂ ಯದಿ ತೇ ಶ್ರೋತ್ರಮಾಗತಃ।
03012026c ಸಹಿತೋ ಭ್ರಾತೃಭಿಃ ಸರ್ವೈರ್ಭೀಮಸೇನಾರ್ಜುನಾದಿಭಿಃ।।
03012027a ಹೃತರಾಜ್ಯೋ ವನೇ ವಾಸಂ ವಸ್ತುಂ ಕೃತಮತಿಸ್ತತಃ।
03012027c ವನಮಭ್ಯಾಗತೋ ಘೋರಮಿದಂ ತವ ಪರಿಗ್ರಹಂ।।
“ನೀನು ಈಗಾಗಲೇ ಕೇಳಿರಬಹುದು, ನಾನು ಪಾಂಡವ ಧರ್ಮರಾಜ. ಭೀಮಸೇನ, ಅರ್ಜುನ ಮೊದಲಾದ ನನ್ನ ಸಹೋದರರೊಂದಿಗೆ ರಾಜ್ಯವನ್ನು ಕಳೆದುಕೊಂಡು ವನವಾಸದ ಮನಸ್ಸುಮಾಡಿ ನಿನ್ನ ಹತೋಟಿಯಲ್ಲಿರುವ ಈ ಘೋರ ವನಕ್ಕೆ ಬಂದಿದ್ದೇವೆ.”
03012028a ಕಿರ್ಮೀರಸ್ತ್ವಬ್ರವೀದೇನಂ ದಿಷ್ಟ್ಯಾ ದೇವೈರಿದಂ ಮಮ।
03012028c ಉಪಪಾದಿತಮದ್ಯೇಹ ಚಿರಕಾಲಾನ್ಮನೋಗತಂ।।
ಕಿರ್ಮೀರನು ಹೇಳಿದನು: “ಒಳ್ಳೆಯದಾಯಿತು! ತುಂಬಾಸಮಯದಿಂದ ನನಗಿದ್ದ ಆಸೆಯನ್ನು ದೈವವು ಇಂದು ನಡೆಸಿಕೊಟ್ಟಿದೆ!
03012029a ಭೀಮಸೇನವಧಾರ್ಥಂ ಹಿ ನಿತ್ಯಮಭ್ಯುದ್ಯತಾಯುಧಃ।
03012029c ಚರಾಮಿ ಪೃಥಿವೀಂ ಕೃತ್ಸ್ನಾಂ ನೈನಮಾಸಾದಯಾಮ್ಯಹಂ।।
ಭೀಮಸೇನನನ್ನು ಕೊಲ್ಲಬೇಕೆಂದು ನಾನು ನಿತ್ಯವೂ ಆಯುಧಗಳನ್ನು ಧರಿಸಿ ಇಡೀ ಪೃಥ್ವಿಯನ್ನೇ ತಿರುಗುತ್ತಿದ್ದೆ. ಆದರೂ ಅವನು ನನಗೆ ನೋಡಲೂ ಸಿಕ್ಕಿರಲಿಲ್ಲ.
03012030a ಸೋಽಯಮಾಸಾದಿತೋ ದಿಷ್ಟ್ಯಾ ಭ್ರಾತೃಹಾ ಕಾಂಕ್ಷಿತಶ್ಚಿರಂ।
03012030c ಅನೇನ ಹಿ ಮಮ ಭ್ರಾತಾ ಬಕೋ ವಿನಿಹತಃ ಪ್ರಿಯಃ।।
03012031a ವೇತ್ರಕೀಯಗೃಹೇ ರಾಜನ್ಬ್ರಾಹ್ಮಣಚ್ಚದ್ಮರೂಪಿಣಾ।
03012031c ವಿದ್ಯಾಬಲಮುಪಾಶ್ರಿತ್ಯ ನ ಹ್ಯಸ್ತ್ಯಸ್ಯೌರಸಂ ಬಲಂ।।
ರಾಜನ್! ತುಂಬಾ ಸಮಯದಿಂದ ಇದ್ದ ಆಸೆಯಂತೆ ಈಗ ಅವನೇ ಇಲ್ಲಿಗೆ ಬಂದಿದ್ದುದು ಒಳ್ಳೆಯದೇ ಆಯಿತು. ಇವನೇ ವೇತ್ರಕೀಯಗೃಹದಲ್ಲಿ, ಅಷ್ಟೊಂದು ಬಲಶಾಲಿಯಾಗಿಲ್ಲದಿದ್ದರೂ ಬ್ರಾಹ್ಮಣನಂತೆ ಸುಳ್ಳು ವೇಷಧರಿಸಿ, ವಿದ್ಯಾಬಲದಿಂದ ನನ್ನ ಪ್ರಿಯ ಭ್ರಾತಾ ಬಕನನ್ನು ಕೊಂದವನು.
03012032a ಹಿಡಿಂಬಶ್ಚ ಸಖಾ ಮಹ್ಯಂ ದಯಿತೋ ವನಗೋಚರಃ।
03012032c ಹತೋ ದುರಾತ್ಮನಾನೇನ ಸ್ವಸಾ ಚಾಸ್ಯ ಹೃತಾ ಪುರಾ।।
ಹಿಂದೆ ನನ್ನ ಪ್ರಿಯ ಸಖ ವನಗೋಚರ ಹಿಂಡಿಂಬನನ್ನೂ ಕೂಡ ಈ ದುರಾತ್ಮನೇ ಕೊಂದು ಅವನ ತಂಗಿಯನ್ನು ಅಪಹರಿಸಿದನು.
03012033a ಸೋಽಯಮಭ್ಯಾಗತೋ ಮೂಢೋ ಮಮೇದಂ ಗಹನಂ ವನಂ।
03012033c ಪ್ರಚಾರಸಮಯೇಽಸ್ಮಾಕಮರ್ಧರಾತ್ರೇ ಸಮಾಸ್ಥಿತೇ।।
ಈಗ ಆ ಮೂರ್ಖನು ತಾನಾಗಿಯೇ ನನ್ನ ಈ ದಟ್ಟ ಅರಣ್ಯಕ್ಕೆ ನಾವು ಸಂಚರಿಸುವ ಸಮಯ ಆರ್ಧರಾತ್ರಿಯಾಗಿರುವಾಗ ಬಂದಿದ್ದಾನೆ.
03012034a ಅದ್ಯಾಸ್ಯ ಯಾತಯಿಷ್ಯಾಮಿ ತದ್ವೈರಂ ಚಿರಸಂಭೃತಂ।
03012034c ತರ್ಪಯಿಷ್ಯಾಮಿ ಚ ಬಕಂ ರುಧಿರೇಣಾಸ್ಯ ಭೂರಿಣಾ।।
ಇಂದು ನಾನು ತುಂಬಾ ಸಮಯದಿಂದ ಇಟ್ಟುಕೊಂಡಿರುವ ದ್ವೇಷದಿಂದ ಅವನನ್ನು ಹೊಡೆದು ಅವನ ಬೊಗಸೆ ರಕ್ತದಿಂದ ಬಕನಿಗೆ ತರ್ಪಣವನ್ನು ನೀಡುತ್ತೇನೆ.
03012035a ಅದ್ಯಾಹಮನೃಣೋ ಭೂತ್ವಾ ಭ್ರಾತುಃ ಸಖ್ಯುಸ್ತಥೈವ ಚ।
03012035c ಶಾಂತಿಂ ಲಬ್ಧಾಸ್ಮಿ ಪರಮಾಂ ಹತ್ವ ರಾಕ್ಷಸಕಂಟಕಂ।।
ಇಂದು ನನ್ನ ಅಣ್ಣ ಮತ್ತು ಸಖರ ಋಣವನ್ನು ತೀರಿಸುತ್ತೇನೆ. ಈ ರಾಕ್ಷಸಕಂಟಕನನ್ನು ಕೊಂದು ಪರಮ ಶಾಂತಿಯನ್ನು ಹೊಂದುತ್ತೇನೆ.
03012036a ಯದಿ ತೇನ ಪುರಾ ಮುಕ್ತೋ ಭೀಮಸೇನೋ ಬಕೇನ ವೈ।
03012036c ಅದ್ಯೈನಂ ಭಕ್ಷಯಿಷ್ಯಾಮಿ ಪಶ್ಯತಸ್ತೇ ಯುಧಿಷ್ಠಿರ।।
ಯುಧಿಷ್ಠಿರ! ಹಿಂದೆ ಬಕನು ಅವನನ್ನು ಬಿಟ್ಟುಬಿಟ್ಟಿದ್ದರೂ ಇಂದು ನಾನು ನೀನು ನೋಡುತ್ತಿದ್ದಂತೆಯೇ ಭೀಮಸೇನನನ್ನು ಕಬಳಿಸುತ್ತೇನೆ.
03012037a ಏನಂ ಹಿ ವಿಪುಲಪ್ರಾಣಮದ್ಯ ಹತ್ವಾ ವೃಕೋದರಂ।
03012037c ಸಂಭಕ್ಷ್ಯ ಜರಯಿಷ್ಯಾಮಿ ಯಥಾಗಸ್ತ್ಯೋ ಮಹಾಸುರಂ।।
ತುಂಬಾ ಪ್ರಾಣವನ್ನು ಹೊಂದಿರುವ ಈ ವೃಕೋದರನನ್ನು ಅಗಸ್ತ್ಯನು ಮಹಾಸುರನನ್ನು ಹೇಗೋ ಹಾಗೆ1 ಕೊಂದು, ತಿಂದು, ಜೀರ್ಣಿಸಿಕೊಳ್ಳುತ್ತೇನೆ.”
03012038a ಏವಮುಕ್ತಸ್ತು ಧರ್ಮಾತ್ಮಾ ಸತ್ಯಸಂಧೋ ಯುಧಿಷ್ಠಿರಃ।
03012038c ನೈತದಸ್ತೀತಿ ಸಕ್ರೋಧೋ ಭರ್ತ್ಸಯಾಮಾಸ ರಾಕ್ಷಸಂ।।
ಅವನ ಈ ಮಾತುಗಳಿಗೆ ಧರ್ಮಾತ್ಮ ಸತ್ಯಸಂಧ ಯುಧಿಷ್ಠಿರನು ಸಿಟ್ಟಿನಿಂದ “ಹೀಗೆಂದಿಗೂ ಆಗುವುದಿಲ್ಲ!” ಎಂದು ರಾಕ್ಷಸನಿಗೆ ಹೇಳಿದನು.
03012039a ತತೋ ಭೀಮೋ ಮಹಾಬಾಹುರಾರುಜ್ಯ ತರಸಾ ದ್ರುಮ।
03012039c ದಶವ್ಯಾಮಮಿವೋದ್ವಿದ್ಧಂ ನಿಷ್ಪತ್ರಮಕರೋತ್ತದಾ।।
ಆಗ ಮಹಾಬಾಹು ಭೀಮನು ತಕ್ಷಣವೇ ಹತ್ತುವ್ಯಾಮ2 ಎತ್ತರವಿರುವ ಮರವೊಂದನ್ನು ಕಿತ್ತು ಅದರ ಎಲೆಗಳನ್ನೆಲ್ಲಾ ಹರಿದನು.
03012040a ಚಕಾರ ಸಜ್ಯಂ ಗಾಂಡೀವಂ ವಜ್ರನಿಷ್ಪೇಷಗೌರವಂ।
03012040c ನಿಮೇಷಾಂತರಮಾತ್ರೇಣ ತಥೈವ ವಿಜಯೋಽರ್ಜುನಃ।।
ಕಣ್ಣು ಮುಚ್ಚಿ ತೆರೆಯುವುದರೊಳಗೆ ವಿಜಯ ಅರ್ಜುನನೂ ಕೂಡ ವಜ್ರದಷ್ಟೇ ಘಾತಿಯನ್ನುಂಟುಮಾಡಬಲ್ಲ ತನ್ನ ಗಾಂಡೀವವನ್ನು ಅಣಿಮಾಡಿ ಠೇಂಕರಿಸಿದನು.
03012041a ನಿವಾರ್ಯ ಭೀಮೋ ಜಿಷ್ಣುಂ ತು ತದ್ರಕ್ಷೋ ಘೋರದರ್ಶನಂ।
03012041c ಅಭಿದ್ರುತ್ಯಾಬ್ರವೀದ್ವಾಕ್ಯಂ ತಿಷ್ಠ ತಿಷ್ಠೇತಿ ಭಾರತ।।
ಭಾರತ! ಅರ್ಜುನನನ್ನು ತಡೆದು ಭೀಮನು ಆ ಘೋರದರ್ಶನ ರಾಕ್ಷಸನೆಡೆಗೆ ನುಗ್ಗಿ “ನಿಲ್ಲು! ನಿಲ್ಲು!” ಎಂದು ಘರ್ಜಿಸಿದನು.
03012042a ಇತ್ಯುಕ್ತ್ವೈನಮಭಿಕ್ರುದ್ಧಃ ಕಕ್ಷ್ಯಾಮುತ್ಪೀಡ್ಯ ಪಾಂಡವಃ।
03012042c ನಿಷ್ಪಿಷ್ಯ ಪಾಣಿನಾ ಪಾಣಿಂ ಸಂದಷ್ಟೋಷ್ಠಪುಟೋ ಬಲೀ।
ಹೀಗೆ ಹೇಳಿ ಸಿಟ್ಟಿಗೆದ್ದ ಬಲಶಾಲಿ ಪಾಂಡವನು ಸೊಂಟವನ್ನು ಬಿಗಿದು, ಕೈಗಳನ್ನು ಮುಷ್ಠಿಮಾಡಿ ತಿರುಗಿಸುತ್ತಾ ಹಲ್ಲು ಬಿಗಿದು ತುಟಿಕಚ್ಚಿದನು.
03012042e ತಮಭ್ಯಧಾವದ್ವೇಗೇನ ಭೀಮೋ ವೃಕ್ಷಾಯುಧಸ್ತದಾ।।
03012043a ಯಮದಂಡಪ್ರತೀಕಾಶಂ ತತಸ್ತಂ ತಸ್ಯ ಮೂರ್ಧನಿ।
03012043c ಪಾತಯಾಮಾಸ ವೇಗೇನ ಕುಲಿಶಂ ಮಘವಾನಿವ।।
ಮರವನ್ನೇ ಆಯುಧವಾಗಿ ಎತ್ತಿಕೊಂಡು ಭೀಮನು ವೇಗದಿಂದ ಅವನ ಕಡೆ ಮುನ್ನುಗ್ಗಿ ಯಮದಂಡದಂತೆ ಅವನ ನೆತ್ತಿಯಮೇಲೆ ಜೋರಾಗಿ ಹೊಡೆದನು.
03012044a ಅಸಂಭ್ರಾಂತಂ ತು ತದ್ರಕ್ಷಃ ಸಮರೇ ಪ್ರತ್ಯದೃಶ್ಯತ।
03012044c ಚಿಕ್ಷೇಪ ಚೋಲ್ಮುಕಂ ದೀಪ್ತಮಶನಿಂ ಜ್ವಲಿತಾಮಿವ।।
03012045a ತದುದಸ್ತಮಲಾತಂ ತು ಭೀಮಃ ಪ್ರಹರತಾಂ ವರಃ।
03012045c ಪದಾ ಸವ್ಯೇನ ಚಿಕ್ಷೇಪ ತದ್ರಕ್ಷಃ ಪುನರಾವ್ರಜತ್।।
ಆದರೂ ಆ ರಾಕ್ಷಸನು ಹೊಡೆತದಿಂದ ಒಂದು ಸ್ವಲ್ಪವೂ ಜರುಗಾಡಲಿಲ್ಲ. ಆಗ ಅವನು ಮಿಂಚಿನಂತೆ ಉರಿಯುತ್ತಿರುವ ತನ್ನ ದೊಂದಿಯನ್ನು ಎಸೆಯಲು, ಪ್ರಹಾರಿಗಳಲ್ಲಿ ಶ್ರೇಷ್ಠ ಭೀಮನು ತನ್ನ ಎಡಗಾಲಿನಿಂದ ಒದೆದು ಅದನ್ನು ಪುನಃ ರಾಕ್ಷಸನ ಕಡೆಗೆ ಎಸೆದನು.
03012046a ಕಿರ್ಮೀರಶ್ಚಾಪಿ ಸಹಸಾ ವೃಕ್ಷಮುತ್ಪಾಟ್ಯ ಪಾಂಡವಂ।
03012046c ದಂಡಪಾಣಿರಿವ ಕ್ರುದ್ಧಃ ಸಮರೇ ಪ್ರತ್ಯಯುಧ್ಯತ।।
03012047a ತದ್ವೃಕ್ಷಯುದ್ಧಮಭವನ್ಮಹೀರುಹವಿನಾಶನಂ।
03012047c ವಾಲಿಸುಗ್ರೀವಯೋರ್ಭ್ರಾತ್ರೋರ್ಯಥಾ ಶ್ರೀಕಾಂಕ್ಷಿಣೋಃ ಪುರಾ।।
ಆಗ ಕಿರ್ಮೀರನು ಬೇಗನೆ ಒಂದು ಮರವನ್ನು ಕಿತ್ತು ಸಮರದಲ್ಲಿ ಕೃದ್ಧ ದಂಡಪಾಣಿಯಂತೆ ಪಾಂಡವನೆಡೆಗೆ ಎಸೆದನು. ಹೀಗೆ ಹಿಂದೆ ರಾಜ್ಯವನ್ನು ಬಯಸಿದ ಸಹೋದರರಾದ ವಾಲಿ-ಸುಗ್ರೀವರ3 ನಡುವೆ ನಡೆದ ಹಾಗೆ ಎಲ್ಲ ಮರಗಳನ್ನೂ ನಾಶಪಡೆಸಿದ ಮರಗಳ ಮಹಾಯುದ್ಧವೇ ಪ್ರಾರಂಭವಾಯಿತು.
03012048a ಶೀರ್ಷಯೋಃ ಪತಿತಾ ವೃಕ್ಷಾ ಬಿಭಿದುರ್ನೈಕಧಾ ತಯೋಃ।
03012048c ಯಥೈವೋತ್ಪಲಪದ್ಮಾನಿ ಮತ್ತಯೋರ್ದ್ವಿಪಯೋಸ್ತಥಾ।।
ಆನೆಗಳ ತಲೆಯ ಮೇಲೆ ಎಸೆದ ಕಮಲದ ಹೂವಿನ ಎಸಳುಗಳಂತೆ ಅವರಿಬ್ಬರ ತಲೆಗಳ ಮೇಲೆ ಬಿದ್ದ ಮರಗಳು ಒಡೆದು ಚೂರು ಚೂರಾದವು.
03012049a ಮುಂಜವಜ್ಜರ್ಜರೀಭೂತಾ ಬಹವಸ್ತತ್ರ ಪಾದಪಾಃ।
03012049c ಚೀರಾಣೀವ ವ್ಯುದಸ್ತಾನಿ ರೇಜುಸ್ತತ್ರ ಮಹಾವನೇ।।
ಆ ಮಹಾವನದಲ್ಲಿದ್ದ ಬಹಳಷ್ಟು ಮರಗಳು ಮುರಿದು ತುಂಡಾಗಿ ಚಿಂದಿಮಾಡಿ ಬಿಸಾಡಿದ ಬಟ್ಟೆಗಳಂತೆ ಕಂಡುಬಂದವು.
03012050a ತದ್ವೃಕ್ಷಯುದ್ಧಮಭವತ್ಸುಮುಹೂರ್ತಂ ವಿಶಾಂ ಪತೇ।
03012050c ರಾಕ್ಷಸಾನಾಂ ಚ ಮುಖ್ಯಸ್ಯ ನರಾಣಾಮುತ್ತಮಸ್ಯ ಚ।।
ವಿಶಾಂಪತೇ! ರಾಕ್ಷಸ ಮುಖ್ಯ ಮತ್ತು ನರೋತ್ತಮನ ನಡುವೆ ಆ ಮರಗಳ ಯುದ್ಧವು ಬಹಳಷ್ಟು ಸಮಯದ ವರೆಗೆ ನಡೆಯಿತು.
03012051a ತತಃ ಶಿಲಾಂ ಸಮುತ್ಕ್ಷಿಪ್ಯ ಭೀಮಸ್ಯ ಯುಧಿ ತಿಷ್ಠತಃ।
03012051c ಪ್ರಾಹಿಣೋದ್ರಾಕ್ಷಸಃ ಕ್ರುದ್ಧೋ ಭೀಮಸೇನಶ್ಚಚಾಲ ಹ।।
ಆಗ ಕೃದ್ಧ ರಾಕ್ಷಸನು ಒಂದು ಬಂಡೆಗಲ್ಲನ್ನು ಎತ್ತಿ ಹೋರಾಟದಲ್ಲಿ ನಿಂತಿದ್ದ ಭೀಮನೆಡೆಗೆ ಎಸೆಯಲು ಭೀಮನು ತತ್ತರಿಸಿದನು.
03012052a ತಂ ಶಿಲಾತಾಡನಜಡಂ ಪರ್ಯಧಾವತ್ಸ ರಾಕ್ಷಸಃ।
03012052c ಬಾಹುವಿಕ್ಷಿಪ್ತಕಿರಣಃ ಸ್ವರ್ಭಾನುರಿವ ಭಾಸ್ಕರಂ।।
ಅವನು ಶಿಲೆಯ ಹೊಡೆತದಿಂದ ಜಡನಾಗಲು ಆ ರಾಕ್ಷಸನು ಸ್ವರ್ಭಾನುವು ತನ್ನ ಹೊರಬೀಳುವ ಕಿರಣಗಳಿಂದ ಭಾಸ್ಕರನನ್ನು ಮುತ್ತುವ ಹಾಗೆ ತನ್ನ ಬಾಹುಗಳನ್ನು ಬೀಸಿ ಓಡಿಬಂದು ಆಕ್ರಮಿಸಿದನು.
03012053a ತಾವನ್ಯೋನ್ಯಂ ಸಮಾಶ್ಲಿಷ್ಯ ಪ್ರಕರ್ಷಂತೌ ಪರಸ್ಪರಂ।
03012053c ಉಭಾವಪಿ ಚಕಾಶೇತೇ ಪ್ರಯುದ್ಧೌ ವೃಷಭಾವಿವ।।
ಅವರು ಒಬ್ಬರನ್ನೊಬ್ಬರು ಹಿಡಿದು, ಪರಸ್ಪರರನ್ನು ಎಳೆಯುತ್ತಾ ಇಬ್ಬರೂ ಪ್ರಾಯಕ್ಕೆ ಬಂದ ಘೂಳಿಗಳು ಹೊಡೆದಾಡುವಂತೆ ಕಂಡರು.
03012054a ತಯೋರಾಸೀತ್ಸುತುಮುಲಃ ಸಂಪ್ರಹಾರಃ ಸುದಾರುಣಃ।
03012054c ನಖದಂಷ್ಟ್ರಾಯುಧವತೋರ್ವ್ಯಾಘ್ರಯೋರಿವ ದೃಪ್ತಯೋಃ।।
ಉಗುರು ದಾಡೆಗಳಿಂದ ಹೊಡೆದಾಡುವ ಎರಡು ಹುಲಿಗಳಂತೆ ಅವರಿಬ್ಬರ ನಡುವೆ ಬಹಳ ಹೊಡೆತದ ಆ ಸುದಾರುಣ ಯುದ್ಧವು ನಡೆಯಿತು.
03012055a ದುರ್ಯೋಧನನಿಕಾರಾಚ್ಚ ಬಾಹುವೀರ್ಯಾಚ್ಚ ದರ್ಪಿತಃ।
03012055c ಕೃಷ್ಣಾನಯನದೃಷ್ಟಶ್ಚ ವ್ಯವರ್ಧತ ವೃಕೋದರಃ।।
ದುರ್ಯೋಧನನ ಮೇಲಿನ ರೋಷದಿಂದ ರೊಚ್ಚಿಗೆದ್ದಿದ್ದ ವೃಕೋದರನ ಬಾಹುಬಲವು ದ್ರೌಪದಿಯ ಕಣ್ಣೆದುರಿಗೆ ಇನ್ನೂ ಹೆಚ್ಚಾಯಿತು.
03012056a ಅಭಿಪತ್ಯಾಥ ಬಾಹುಭ್ಯಾಂ ಪ್ರತ್ಯಗೃಹ್ಣಾದಮರ್ಷಿತಃ।
03012056c ಮಾತಂಗ ಇವ ಮಾತಂಗಂ ಪ್ರಭಿನ್ನಕರಟಾಮುಖಃ।।
ಮುಖದ ಕರಟೆಯೊಡೆದು ಸೋರುತ್ತಿದ್ದ ಸೊಕ್ಕೆದ್ದ ಆನೆಯು ಇನ್ನೊಂದು ಆನೆಯ ಮೇಲೆ ಎರಗಿ ಬೀಳುವಂತೆ ಅವನ ಮೇಲೆ ಬಿದ್ದು ರೋಷದಿಂದ ತನ್ನ ಬಾಹುಗಳಿಂದ ಅವನನ್ನು ಬಿಗಿಯಾಗಿ ಹಿಡಿದನು.
03012057a ತಂ ಚಾಪ್ಯಾಥ ತತೋ ರಕ್ಷಃ ಪ್ರತಿಜಗ್ರಾಹ ವೀರ್ಯವಾನ್।
03012057c ತಮಾಕ್ಷಿಪದ್ಭೀಮಸೇನೋ ಬಲೇನ ಬಲಿನಾಂ ವರಃ।।
ಅಷ್ಟರಲ್ಲೇ ಆ ವೀರ್ಯವಾನ್ ರಾಕ್ಷಸನು ಬಲಶಾಲಿಗಳಲ್ಲಿ ಶ್ರೇಷ್ಠ ಭೀಮಸೇನನನ್ನು ಬಲವನ್ನುಪಯೋಗಿಸಿ ಹಿಡಿದು ಕೆಳಗುರುಳಿಸಿದನು.
03012058a ತಯೋರ್ಭುಜವಿನಿಷ್ಪೇಷಾದುಭಯೋರ್ಬಲಿನೋಸ್ತದಾ।
03012058c ಶಬ್ಧಃ ಸಮಭವದ್ಘೋರೋ ವೇಣುಸ್ಫೋಟಸಮೋ ಯುಧಿ।।
ಆ ಇಬ್ಬರು ಬಲಶಾಲಿಗಳು ಭುಜಗಳಿಂದ ಹೊಡೆದಾಡುತ್ತಿರುವಾಗ ಬಿದಿರು ಮೆಳೆಗಳ ಘರ್ಷಣೆಯಿಂದ ಬರುವಂತೆ ಘೋರ ಶಬ್ಧವು ಕೇಳಿಬಂದಿತು.
03012059a ಅಥೈನಮಾಕ್ಷಿಪ್ಯ ಬಲಾದ್ಗೃಹ್ಯ ಮಧ್ಯೇ ವೃಕೋದರಃ।
03012059c ಧೂನಯಾಮಾಸ ವೇಗೇನ ವಾಯುಶ್ಚಂಡ ಇವ ದ್ರುಮಂ।।
ಆಗ ವೃಕೋದರನು ಅವನ ಸೊಂಟವನ್ನು ಹಿಡಿದು ಚಂಡಮಾರುತವು ಮರವನ್ನು ಅಲುಗಾಡಿಸುವ ಹಾಗೆ ಜೋರಾಗಿ ಅಲುಗಾಡಿಸಿದನು.
03012060a ಸ ಭೀಮೇನ ಪರಾಮೃಷ್ಟೋ ದುರ್ಬಲೋ ಬಲಿನಾ ರಣೇ।
03012060c ವ್ಯಸ್ಪಂದತ ಯಥಾಪ್ರಾಣಂ ವಿಚಕರ್ಷ ಚ ಪಾಂಡವಂ।।
ಭೀಮನ ಬಿಗಿಯಾದ ಹಿಡಿತದಲ್ಲಿ ಸಿಕ್ಕಿದ್ದ ಅವನು ರಣದಲ್ಲಿ ಭುಸುಗುಟ್ಟುತ್ತಾ ದುರ್ಬಲನಾದರೂ ಶಕ್ತಿಯಿದ್ದಷ್ಟೂ ಪಾಂಡವನನ್ನು ಎಳೆದಾಡಿದನು.
03012061a ತತ ಏನಂ ಪರಿಶ್ರಾಂತಮುಪಲಭ್ಯ ವೃಕೋದರಃ।
03012061c ಯೋಕ್ತ್ರಯಾಮಾಸ ಬಾಹುಭ್ಯಾಂ ಪಶುಂ ರಶನಯಾ ಯಥಾ।।
ಅವನು ಈ ರೀತಿ ಆಯಾಸಗೊಂಡಿದ್ದುದನ್ನು ನೋಡಿ ವೃಕೋದರನು ಅವನನ್ನು ಮೂಗುದಾಣವನ್ನು ಹಾಕಿ ಎತ್ತನ್ನು ನಿಯಂತ್ರಿಸುವಂತೆ ತನ್ನ ಬಾಹುಗಳಿಂದ ಬಿಗಿಮಾಡಿದನು.
03012062a ವಿನದಂತಂ ಮಹಾನಾದಂ ಭಿನ್ನಭೇರೀಸಮಸ್ವನಂ।
03012062c ಭ್ರಾಮಯಾಮಾಸ ಸುಚಿರಂ ವಿಸ್ಫುರಂತಮಚೇತಸಂ।।
ಭೇರಿಯು (ನಗಾರಿಯು) ಒಡೆದು ಹೋದಂತೆ ಜೋರಾಗಿ ಕೂಗಿ ಅವನನ್ನು ತುಂಬಾ ಹೊತ್ತು ಹೊರಳಾಡಿ ಮೂರ್ಛೆಯಾಗುವವರೆಗೆ ತಿರುಗಿಸಿದನು.
03012063a ತಂ ವಿಷೀದಂತಮಾಜ್ಞಾಯ ರಾಕ್ಷಸಂ ಪಾಂಡುನಂದನಃ।
03012063c ಪ್ರಗೃಹ್ಯ ತರಸಾ ದೋರ್ಭ್ಯಾಂ ಪಶುಮಾರಮಮಾರಯತ್।।
ಅವನು ಕುಸಿಯುತ್ತಿದ್ದಾನೆ ಎಂದು ತಿಳಿದ ಪಾಂಡುನಂದನನು ಆ ರಾಕ್ಷಸನನ್ನು ಹಿಡಿದು ತಕ್ಷಣವೇ ಪಶುವನ್ನು ಕೊಲ್ಲುವ ಹಾಗೆ ಅವನ ಕುತ್ತಿಗೆಯನ್ನು ಹಿಸುಕಿ ಕೊಂದನು.
03012064a ಆಕ್ರಮ್ಯ ಸ ಕಟೀದೇಶೇ ಜಾನುನಾ ರಾಕ್ಷಸಾಧಮಂ।
03012064c ಅಪೀಡಯತ ಬಾಹುಭ್ಯಾಂ ಕಂಠಂ ತಸ್ಯ ವೃಕೋದರಃ।।
03012065a ಅಥ ತಂ ಜಡಸರ್ವಾಂಗಂ ವ್ಯಾವೃತ್ತನಯನೋಲ್ಬಣಂ।
03012065c ಭೂತಲೇ ಪಾತಯಾಮಾಸ ವಾಕ್ಯಂ ಚೇದಮುವಾಚ ಹ।।
ಆ ಅಧಮ ರಾಕ್ಷಸನ ಸೊಂಟವನ್ನು ತನ್ನ ತೊಡೆಯಿಂದ ಹಿಡಿದಿಟ್ಟು ವೃಕೋದರನು ತನ್ನ ಬಾಹುಗಳಿಂದ ಅವನ ಕುತ್ತಿಗೆಯನ್ನು ಹಿಸುಕಿದನು. ಅವನ ಎಲ್ಲ ಅಂಗಗಳೂ ಜಡವಾಗಲು ಮತ್ತು ತೆರೆದ ಕಣ್ಣುಗಳು ತೇಲಿಬರಲು, ಅವನನ್ನು ನೆಲದ ಮೇಲೆ ಬಿಸಾಡಿ ಈ ಮಾತುಗಳನ್ನಾಡಿದನು:
03012066a ಹಿಡಿಂಬಬಕಯೋಃ ಪಾಪ ನ ತ್ವಮಶ್ರುಪ್ರಮಾರ್ಜನಂ।
03012066c ಕರಿಷ್ಯಸಿ ಗತಶ್ಚಾಸಿ ಯಮಸ್ಯ ಸದನಂ ಪ್ರತಿ।।
“ಪಾಪಿ! ಹಿಡಿಂಬ ಮತ್ತು ಬಕರ ಮೇಲೆ ನೀನು ಇನ್ನು ಕಣ್ಣೀರಿಡುವುದಿಲ್ಲ. ನೀನು ಈಗ ಯಮನ ಸದನಕ್ಕೆ ಹೋಗಿಯಾಯಿತು!”
03012067a ಇತ್ಯೇವಮುಕ್ತ್ವಾ ಪುರುಷಪ್ರವೀರಸ್। ತಂ ರಾಕ್ಷಸಂ ಕ್ರೋಧವಿವೃತ್ತನೇತ್ರಃ।।
03012067c ಪ್ರಸ್ರಸ್ತವಸ್ತ್ರಾಭರಣಂ ಸ್ಫುರಂತಂ। ಉದ್ಭ್ರಾಂತಚಿತ್ತಂ ವ್ಯಸುಮುತ್ಸಸರ್ಜ।।
ಕ್ರೋಧದಿಂದ ಕಣ್ಣುಗಳನ್ನರಳಿಸಿ ವಸ್ತ್ರ ಆಭರಣಗಳನ್ನು ಕಳೆದುಕೊಂಡ, ನರಳಾಡುತ್ತಿದ್ದ ಬುದ್ಧಿಯನ್ನೇ ಕಳೆದುಕೊಂಡ ಆ ರಾಕ್ಷಸನಿಗೆ ಹೀಗೆ ಹೇಳಿ ಆ ಪುರುಷಪ್ರವೀರನು ಜೀವವಿಲ್ಲದ ಹೆಣವನ್ನು ಬಿಟ್ಟನು.
03012068a ತಸ್ಮಿನ್ ಹತೇ ತೋಯದತುಲ್ಯರೂಪೇ। ಕೃಷ್ಣಾಂ ಪುರಸ್ಕೃತ್ಯ ನರೇಂದ್ರಪುತ್ರಾಃ।।
03012068c ಭೀಮಂ ಪ್ರಶಸ್ಯಾಥ ಗುಣೈರನೇಕೈರ್। ಹೃಷ್ಟಾಸ್ತತೋ ದ್ವೈತವನಾಯ ಜಗ್ಮುಃ।।
ಕಪ್ಪು ಮೋಡದಂತಿದ್ದ ಅವನು ಹತನಾಗಲು ಆ ರಾಜಪುತ್ರರು ಕೃಷ್ಣೆಯನ್ನು ಮುಂದಿಟ್ಟುಕೊಂಡು, ಭೀಮನ ಅನೇಕ ಗುಣಗಳನ್ನು ಪ್ರಶಂಸಿಸುತ್ತಾ ಸಂತೋಷದಿಂದ ದ್ವೈತವನದೆಡೆಗೆ ನಡೆದರು.
03012069a ಏವಂ ವಿನಿಹತಃ ಸಂಖ್ಯೇ ಕಿರ್ಮೀರೋ ಮನುಜಾಧಿಪ।
03012069c ಭೀಮೇನ ವಚನಾತ್ತಸ್ಯ ಧರ್ಮರಾಜಸ್ಯ ಕೌರವ।।
ಮನುಜಾಧಿಪ! ಹೀಗೆ ಕೌರವ ಧರ್ಮರಾಜನ ವಚನದಂತೆ ಆ ಕಿರ್ಮೀರನು ಹತನಾದನು.
03012070a ತತೋ ನಿಷ್ಕಂಟಕಂ ಕೃತ್ವಾ ವನಂ ತದಪರಾಜಿತಃ।
03012070c ದ್ರೌಪದ್ಯಾ ಸಹ ಧರ್ಮಜ್ಞೋ ವಸತಿಂ ತಾಮುವಾಸ ಹ।।
ಆ ವನವನ್ನು ನಿಷ್ಕಂಟಕವನ್ನಾಗಿ ಮಾಡಿ ಅಪರಾಜಿತ ಧರ್ಮಜ್ಞನು ದ್ರೌಪದಿಯೊಡನೆ ಅಲ್ಲಿ ವಸತಿಯನ್ನು ಮಾಡಿದನು.
03012071a ಸಮಾಶ್ವಾಸ್ಯ ಚ ತೇ ಸರ್ವೇ ದ್ರೌಪದೀಂ ಭರತರ್ಷಭಾಃ।
03012071c ಪ್ರಹೃಷ್ಟಮನಸಃ ಪ್ರೀತ್ಯಾ ಪ್ರಶಶಂಸುರ್ವೃಕೋದರಂ।।
03012072a ಭೀಮಬಾಹುಬಲೋತ್ಪಿಷ್ಟೇ ವಿನಷ್ಟೇ ರಾಕ್ಷಸೇ ತತಃ।
03012072c ವಿವಿಶುಸ್ತದ್ವನಂ ವೀರಾಃ ಕ್ಷೇಮಂ ನಿಹತಕಂಟಕಂ।।
ಆ ಎಲ್ಲ ಭರತರ್ಷಭರೂ ದ್ರೌಪದಿಯನ್ನು ಸಮಾಧಾನಪಡಿಸಿ ಸಂತೋಷ-ಪ್ರೀತಿಗಳಿಂದ ವೃಕೋದರನನ್ನು ಪ್ರಶಂಸಿಸಿದರು. ಭೀಮನ ಬಾಹುಬಲದಿಂದ ರಾಕ್ಷಸನು ಕೆಳಗುರುಳಿಸಲ್ಪಟ್ಟು ನಾಶಗೊಂಡ ನಂತರ ಆ ವೀರರು ಕಂಟಕವಿಲ್ಲದೇ ಕ್ಷೇಮದಿಂದ ವನವನ್ನು ಪ್ರವೇಶಿಸಿದರು.
03012073a ಸ ಮಯಾ ಗಚ್ಚತಾ ಮಾರ್ಗೇ ವಿನಿಕೀರ್ಣೋ ಭಯಾವಹಃ।
03012073c ವನೇ ಮಹತಿ ದುಷ್ಟಾತ್ಮಾ ದೃಷ್ಟೋ ಭೀಮಬಲಾದ್ಧತಃ।।
ಅದೇ ಮಾರ್ಗದಲ್ಲಿ ಹೋಗುತ್ತಿರುವಾಗ ನಾನು ಭೀಮನ ಬಲದಿಂದ ಹತನಾದ ಆ ಮಹಾ ಭಯಾನಕ ದುಷ್ಟಾತ್ಮನನ್ನು ಹರಡಿ ಬಿದ್ದಿರುವುದನ್ನು ನೋಡಿದೆ.
03012074a ತತ್ರಾಶ್ರೌಷಮಹಂ ಚೈತತ್ಕರ್ಮ ಭೀಮಸ್ಯ ಭಾರತ।
03012074c ಬ್ರಾಹ್ಮಣಾನಾಂ ಕಥಯತಾಂ ಯೇ ತತ್ರಾಸನ್ಸಮಾಗತಾಃ।।
ಭಾರತ! ಅಲ್ಲಿ ಸೇರಿದ್ದ ಬ್ರಾಹ್ಮಣರು ಹೇಳಿದಾಗಲೇ ನಾನು ಭೀಮನ ಈ ಕೃತ್ಯದ ಕುರಿತು ಕೇಳಿದೆ.””
03012075 ವೈಶಂಪಾಯನ ಉವಾಚ।
03012075a ಏವಂ ವಿನಿಹತಂ ಸಂಖ್ಯೇ ಕಿರ್ಮೀರಂ ರಾಕ್ಷಸೋತ್ತಮಂ।
03012075c ಶ್ರುತ್ವಾ ಧ್ಯಾನಪರೋ ರಾಜಾ ನಿಶಶ್ವಾಸಾರ್ತವತ್ತದಾ।।
ವೈಶಂಪಾಯನನು ಹೇಳಿದನು: “ರಾಕ್ಷಸೋತ್ತಮ ಕಿರ್ಮೀರನು ಈ ರೀತಿ ಹತನಾದುದನ್ನು ಕೇಳಿದ ರಾಜನು ನಿಟ್ಟುಸಿರು ಬಿಡುತ್ತಾ ಚಿಂತಾಮಗ್ನನಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕಿರ್ಮೀರವಧಪರ್ವಣಿ ವಿದುರವಾಕ್ಯೇ ದ್ವಾದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕಿರ್ಮೀರವಧಪರ್ವದಲ್ಲಿ ವಿದುರವಾಕ್ಯ ಎನ್ನುವ ಹನ್ನೆರಡನೆಯು ಅಧ್ಯಾಯವು.ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕಿರ್ಮೀರವಧಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕಿರ್ಮೀರವಧಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-30/100, ಅಧ್ಯಾಯಗಳು-309/1995, ಶ್ಲೋಕಗಳು-9983/73484.