011 ಮೈತ್ರೇಯಶಾಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಅರಣ್ಯಕ ಪರ್ವ

ಅಧ್ಯಾಯ 11

ಸಾರ

ನೀನೇ ಆ ದುರಾತ್ಮ ದುರ್ಯೋಧನನಿಗೆ ಭೋದಿಸಬೇಕೆಂದು ಧೃತರಾಷ್ಟ್ರನು ಕೇಳಿಕೊಳ್ಳಲು ವ್ಯಾಸನು ಋಷಿ ಮೈತ್ರೇಯನು ಬಂದು ಅವನಿಗೆ ಅನುಶಾಸನವನ್ನು ನೀಡುತ್ತಾನೆ ಮತ್ತು ಹೇಳಿದಂತೆ ನಡೆದುಕೊಳ್ಳದಿದ್ದರೆ ಶಪಿಸುತ್ತಾನೆ ಎಂದು ಹೇಳಿ ಹೋದುದು (1-6). ಧೃತರಾಷ್ಟ್ರನು ಆಗಮಿಸಿದ ಮೈತ್ರೇಯನನ್ನು ಸ್ವಾಗತಿಸಿ ಸತ್ಕರಿಸಿ ಪಾಂಡವರು ಒಪ್ಪಂದದಂತೆ ನಡೆದುಕೊಳ್ಳಲು ಬಯಸುತ್ತಾರೆ ತಾನೇ ಎಂದು ಕೇಳಿದುದು (7-10). ಮೈತ್ರೇಯನು ಧೃತರಾಷ್ಟ್ರನಿಗೆ ಏಕೆ ಈ ಘೋರ ಅನ್ಯಾಯವು ಆಗಲು ಬಿಟ್ಟೆ ಎಂದು ಕೇಳಿ, ದುರ್ಯೋಧನನು ಪಾಂಡವರೊಂದಿಗೆ ಶಾಂತಿಯಿಂದಿರಬೇಕೆಂದು ಹೇಳಿದುದು (11-27). ಮೈತ್ರೇಯನು ಮಾತನಾಡುತ್ತಿರುವಾಗ ದುರ್ಯೋಧನನು ತನ್ನ ತೊಡೆಯನ್ನು ತಟ್ಟಲು ಕ್ರೋಧಾವಿಷ್ಠನಾದ ಋಷಿಯು ಯುದ್ಧದಲ್ಲಿ ಭೀಮನು ಆ ತೊಡೆಯನ್ನು ಮುರಿಯುತ್ತಾನೆ ಎಂದು ಶಪಿಸುವುದು (28-34). ಹಾಗಾಗದಂತೆ ಮಾಡೆಂದು ಧೃತರಾಷ್ಟ್ರನು ಕೇಳಿಕೊಳ್ಳಲು ಪಾಂಡವರೊಂದಿಗೆ ಶಾಂತಿಯಿಂದಿದ್ದರೆ ಶಾಪದಂತೆ ನಡೆಯುವುದಿಲ್ಲವೆಂದು ಹೇಳುವುದು (35-36). ಭೀಮನು ರಾಕ್ಷಸ ಕಿರ್ಮೀರನನ್ನು ವಧಿಸಿದುದರ ಕುರಿತು ಧೃತರಾಷ್ಟ್ರನು ಕೇಳಲು “ಅಸೂಯೆಗೊಂಡಿರುವ ನಿನಗಾಗಲೀ ಅವಿಧೇಯನಾಗಿರುವ ನಿನ್ನ ಈ ಮಗನಿಗಾಗಲೀ ನಾನು ಇದನ್ನು ಹೇಳುವುದಿಲ್ಲ! ನಾನು ಹೋದ ನಂತರ ಎಲ್ಲವನ್ನೂ ವಿದುರನು ನಿನಗೆ ಹೇಳುತ್ತಾನೆ.” ಎಂದು ಹೇಳಿ ಮೈತ್ರೇಯನು ಹೊರಟು ಹೋದುದು (37-39).

03011001 ಧೃತರಾಷ್ಟ್ರ ಉವಾಚ।
03011001a ಏವಮೇತನ್ಮಹಾಪ್ರಾಜ್ಞ ಯಥಾ ವದಸಿ ನೋ ಮುನೇ।
03011001c ಅಹಂ ಚೈವ ವಿಜಾನಾಮಿ ಸರ್ವೇ ಚೇಮೇ ನರಾಧಿಪಾಃ।।

ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ಮುನೇ! ನೀನು ಹೇಳಿದುದನ್ನು ನಾನೂ ಮತ್ತು ಇಲ್ಲಿರುವ ಸರ್ವ ನರಾಧಿಪರೂ ತಿಳಿದಿದ್ದೇವೆ.

03011002a ಭವಾಂಸ್ತು ಮನ್ಯತೇ ಸಾಧು ಯತ್ಕುರೂಣಾಂ ಸುಖೋದಯಂ।
03011002c ತದೇವ ವಿದುರೋಽಪ್ಯಾಹ ಭೀಷ್ಮೋ ದ್ರೋಣಶ್ಚ ಮಾಂ ಮುನೇ।।

ಮುನೇ! ನೀನು ಕುರುಗಳ ಸುಖೋದಯಕ್ಕೆ ಯಾವುದು ಒಳ್ಳೆಯದು ಎಂದು ಹೇಳಿದೆಯೋ ಅದನ್ನೇ ನನಗೆ ವಿದುರ, ಭೀಷ್ಮ ಮತ್ತು ದ್ರೋಣರೂ ಹೇಳಿದ್ದಾರೆ.

03011003a ಯದಿ ತ್ವಹಮನುಗ್ರಾಹ್ಯಃ ಕೌರವೇಷು ದಯಾ ಯದಿ।
03011003c ಅನುಶಾಧಿ ದುರಾತ್ಮಾನಂ ಪುತ್ರಂ ದುರ್ಯೋಧನಂ ಮಮ।।

ಒಂದುವೇಳೆ ನಾನು ನಿನ್ನ ಅನುಗ್ರಹಕ್ಕೆ ಅರ್ಹನೆಂದಾದರೆ ಮತ್ತು ನಿನಗೆ ಕೌರವರ ಮೇಲೆ ದಯೆಯಿದ್ದರೆ ನನ್ನ ಪುತ್ರ ದುರಾತ್ಮ ದುರ್ಯೋಧನನಿಗೆ ಬೋಧಿಸಬೇಕು!”

03011004 ವ್ಯಾಸ ಉವಾಚ।
03011004a ಅಯಮಾಯಾತಿ ವೈ ರಾಜನ್ಮೈತ್ರೇಯೋ ಭಗವಾನೃಷಿಃ।
03011004c ಅನ್ವೀಯ ಪಾಂಡವಾನ್ಭ್ರಾತೄನಿಹೈವಾಸ್ಮದ್ದಿದೃಕ್ಷಯಾ।।

ವ್ಯಾಸನು ಹೇಳಿದನು: “ರಾಜನ್! ಈಗ ಇಲ್ಲಿಗೆ ಭಗವಾನ್ ಋಷಿ ಮೈತ್ರೇಯ1ನು, ಪಾಂಡವ ಸಹೋದರರನ್ನು ಭೇಟಿಯಾದ ನಂತರ ನಿನ್ನನ್ನು ಕಾಣಲು ಬರುತ್ತಿದ್ದಾನೆ.

03011005a ಏಷ ದುರ್ಯೋಧನಂ ಪುತ್ರಂ ತವ ರಾಜನ್ಮಹಾನೃಷಿಃ।
03011005c ಅನುಶಾಸ್ತಾ ಯಥಾನ್ಯಾಯಂ ಶಮಾಯಾಸ್ಯ ಕುಲಸ್ಯ ತೇ।।

ರಾಜನ್! ಈ ಮಹಾನೃಷಿಯು ನಿನ್ನ ಕುಲಕ್ಕೆ ಶಾಂತಿಯನ್ನು ತರುವುದಕ್ಕೆ ಯಾವುದು ನ್ಯಾಯವೋ ಅದರ ಅನುಶಾಸನವನ್ನು ನಿನ್ನ ಪುತ್ರ ದುರ್ಯೋಧನನಿಗೆ ನೀಡುತ್ತಾನೆ.

03011006a ಬ್ರೂಯಾದ್ಯದೇಷ ರಾಜೇಂದ್ರ ತತ್ಕಾರ್ಯಮವಿಶಂಕಯಾ।
03011006c ಅಕ್ರಿಯಾಯಾಂ ಹಿ ಕಾರ್ಯಸ್ಯ ಪುತ್ರಂ ತೇ ಶಪ್ಸ್ಯತೇ ರುಷಾ।।

ರಾಜೇಂದ್ರ! ಅವನು ಏನೇ ಹೇಳಿದರೂ ಅದನ್ನು ಶಂಕಿಸದೇ ಕಾರ್ಯಗತಗೊಳಿಸು. ಅದನ್ನು ಕಾರ್ಯಗತಗೊಳಿಸದಿದ್ದರೆ ಅವನು ರೋಷಗೊಂಡು ನಿನ್ನ ಮಗನಿಗೆ ಶಾಪವನ್ನು ನೀಡಬಲ್ಲರು!””

03011007 ವೈಶಂಪಾಯನ ಉವಾಚ।
03011007a ಏವಮುಕ್ತ್ವಾ ಯಯೌ ವ್ಯಾಸೋ ಮೈತ್ರೇಯಃ ಪ್ರತ್ಯದೃಶ್ಯತ।
03011007c ಪೂಜಯಾ ಪ್ರತಿಜಗ್ರಾಹ ಸಪುತ್ರಸ್ತಂ ನರಾಧಿಪಃ।।

ವೈಶಂಪಾಯನನು ಹೇಳಿದನು: “ಇದನ್ನು ಹೇಳಿದ ವ್ಯಾಸನು ಹೋಗುತ್ತಿದ್ದಂತೆ ಮೈತ್ರೇಯನು ಕಾಣಿಸಿಕೊಂಡನು ಮತ್ತು ನರಾಧಿಪನು ಪುತ್ರರೊಂದಿಗೆ ಅವನನ್ನು ಪೂಜಿಸಿ ಬರಮಾಡಿಕೊಂಡನು.

03011008a ದತ್ತ್ವಾರ್ಘ್ಯಾದ್ಯಾಃ ಕ್ರಿಯಾಃ ಸರ್ವಾ ವಿಶ್ರಾಂತಂ ಮುನಿಪುಂಗವಂ।
03011008c ಪ್ರಶ್ರಯೇಣಾಬ್ರವೀದ್ರಾಜಾ ಧೃತರಾಷ್ಟ್ರೋಽಂಬಿಕಾಸುತಃ।।

ಅಂಬಿಕಾಸುತ ರಾಜ ಧೃತರಾಷ್ಟ್ರನು ಆ ಮುನಿಪುಂಗವನಿಗೆ ಅರ್ಘ್ಯಾದಿ ಎಲ್ಲ ಸತ್ಕಾರಕ್ರಿಯೆಗಳನ್ನು ಪೂರೈಸಿ, ಅವನು ವಿಶ್ರಾಂತಗೊಳ್ಳಲು ವಿನಯದಿಂದ ಕೇಳಿದನು:

03011009a ಸುಖೇನಾಗಮನಂ ಕಚ್ಚಿದ್ಭಗವನ್ಕುರುಜಾಂಗಲೇ।
03011009c ಕಚ್ಚಿತ್ಕುಶಲಿನೋ ವೀರಾ ಭ್ರಾತರಃ ಪಂಚ ಪಾಂಡವಾಃ।।

“ಭಗವನ್! ಕುರುಜಂಗಲಕ್ಕೆ ನಿಮ್ಮ ಆಗಮನವು ಸುಖಕರವಾಗಿತ್ತೇ? ಐವರು ವೀರ ಪಾಂಡವ ಸಹೋದರರು ಕುಶಲರಾಗಿರುವರಷ್ಟೇ?

03011010a ಸಮಯೇ ಸ್ಥಾತುಮಿಚ್ಚಂತಿ ಕಚ್ಚಿಚ್ಚ ಪುರುಷರ್ಷಭಾಃ।
03011010c ಕಚ್ಚಿತ್ಕುರೂಣಾಂ ಸೌಭ್ರಾತ್ರಮವ್ಯುಚ್ಚಿನ್ನಂ ಭವಿಷ್ಯತಿ।।

ಆ ಪುರುಷರ್ಷಭರು ಒಪ್ಪಂದದಂತೆ ಇರಲು ಬಯಸುತ್ತಾರೆ ತಾನೇ? ಕುರುಗಳ ಒಳ್ಳೆಯ ಭ್ರಾತೃತ್ವವು ಅವಿಚ್ಛಿನ್ನವಾಗಿ ಉಳಿದುಕೊಳ್ಳುತ್ತದೆ ತಾನೇ?”

03011011 ಮೈತ್ರೇಯ ಉವಾಚ।
03011011a ತೀರ್ಥಯಾತ್ರಾಮನುಕ್ರಾಮನ್ಪ್ರಾಪ್ತೋಽಸ್ಮಿ ಕುರುಜಾಂಗಲಂ।
03011011c ಯದೃಚ್ಚಯಾ ಧರ್ಮರಾಜಂ ದೃಷ್ಟವಾನ್ಕಾಮ್ಯಕೇ ವನೇ।।

ಮೈತ್ರೇಯನು ಹೇಳಿದನು: “ತೀರ್ಥಯಾತ್ರೆಯನ್ನು ಮಾಡುತ್ತಾ ಅನುಕ್ರಮವಾಗಿ ಕುರುಜಂಗಲವನ್ನು ಸೇರಿದೆನು. ಅಲ್ಲಿ ಕಾಮ್ಯಕವನದಲ್ಲಿ ಧರ್ಮರಾಜನನ್ನು ನೋಡಿದೆನು.

03011012a ತಂ ಜಟಾಜಿನಸಂವೀತಂ ತಪೋವನನಿವಾಸಿನಂ।
03011012c ಸಮಾಜಗ್ಮುರ್ಮಹಾತ್ಮಾನಂ ದ್ರಷ್ಟುಂ ಮುನಿಗಣಾಃ ಪ್ರಭೋ।।

ಪ್ರಭೋ! ಜಟಾಜಿನ ಧಾರಿಣಿ ತಪೋವನ ವಾಸಿನಿ ಆ ಮಹಾತ್ಮನನ್ನು ನೋಡಲು ಮುನಿಗಣಗಳು ಒಟ್ಟಾಗಿ ಬಂದು ಸೇರಿದ್ದವು.

03011013a ತತ್ರಾಶ್ರೌಷಂ ಮಹಾರಾಜ ಪುತ್ರಾಣಾಂ ತವ ವಿಭ್ರಮಂ।
03011013c ಅನಯಂ ದ್ಯೂತರೂಪೇಣ ಮಹಾಪಾಯಮುಪಸ್ಥಿತಂ।।

ಮಹಾರಾಜ! ಅಲ್ಲಿ ನಿನ್ನ ಪುತ್ರರ ಕಪಟತನ, ಮತ್ತು ಅನ್ಯಾಯವಾಗಿ ದ್ಯೂತರೂಪದಲ್ಲಿ ಬಂದೊದಗಿದ ಮಹಾ ಅಪಾಯದ ಕುರಿತು ಕೇಳಿದೆನು.

03011014a ತತೋಽಹಂ ತ್ವಾಮನುಪ್ರಾಪ್ತಃ ಕೌರವಾಣಾಮವೇಕ್ಷಯಾ।
03011014c ಸದಾ ಹ್ಯಭ್ಯಧಿಕಃ ಸ್ನೇಹಃ ಪ್ರೀತಿಶ್ಚ ತ್ವಯಿ ಮೇ ಪ್ರಭೋ।।

ಪ್ರಭೋ! ಆಗ ಕೌರವರ ಕುರಿತು ಯೋಚಿಸಿದ ನಾನು ನಿನ್ನಲ್ಲಿಗೆ ಬಂದೆ. ನಿನ್ನ ಮೇಲೆ ನನಗೆ ಸದಾ ಅಧಿಕ ಸ್ನೇಹ ಮತ್ತು ಪ್ರೀತಿಯಿದೆ.

03011015a ನೈತದೌಪಯಿಕಂ ರಾಜಂಸ್ತ್ವಯಿ ಭೀಷ್ಮೇ ಚ ಜೀವತಿ।
03011015c ಯದನ್ಯೋನ್ಯೇನ ತೇ ಪುತ್ರಾ ವಿರುಧ್ಯಂತೇ ನರಾಧಿಪ।।

ರಾಜನ್! ನರಾಧಿಪ! ನೀನು ಮತ್ತು ಭೀಷ್ಮರು ಜೀವಂತವಾಗಿರುವಾಗಲೇ ನಿನ್ನ ಪುತ್ರರು ಅನ್ಯೋನ್ಯರನ್ನು ವಿರೋಧಿಸುವುದು ಸರಿಯಲ್ಲ.

03011016a ಮೇಢೀಭೂತಃ ಸ್ವಯಂ ರಾಜನ್ನಿಗ್ರಹೇ ಪ್ರಗ್ರಹೇ ಭವಾನ್।
03011016c ಕಿಮರ್ಥಮನಯಂ ಘೋರಮುತ್ಪತಂತಮುಪೇಕ್ಷಸೇ।।

ರಾಜನ್! ಸ್ವಯಂ ನೀನೇ ಪ್ರಗ್ರಹ ನಿಗ್ರಹಗಳ ಮಧ್ಯದಲ್ಲಿದ್ದೀಯೆ. ಆದರೂ ನೀನು ಏಕೆ ಬೆಳೆದಿರುವ ಈ ಘೋರ ಅನ್ಯಾಯವನ್ನು ಉಪೇಕ್ಷಿಸುತ್ತಿದ್ದೀಯೆ?

03011017a ದಸ್ಯೂನಾಮಿವ ಯದ್ವೃತ್ತಂ ಸಭಾಯಾಂ ಕುರುನಂದನ।
03011017c ತೇನ ನ ಭ್ರಾಜಸೇ ರಾಜಂಸ್ತಾಪಸಾನಾಂ ಸಮಾಗಮೇ।।

ಕುರುನಂದನ! ನಿನ್ನ ಸಭೆಯಲ್ಲಿ ನಡೆದುದು ದಸ್ಯುಗಳ ವರ್ತನೆಯಂತಿತ್ತು! ರಾಜನ್! ತಾಪಸಿಗಳ ಸಮಾಗಮದಲ್ಲಿ ಅದು ನಿನ್ನ ಕೀರ್ತಿಯನ್ನು ಹೆಚ್ಚಿಸುವುದಿಲ್ಲ!””

03011018 ವೈಶಂಪಾಯನ ಉವಾಚ।
03011018a ತತೋ ವ್ಯಾವೃತ್ಯ ರಾಜಾನಂ ದುರ್ಯೋಧನಮಮರ್ಷಣಂ।
03011018c ಉವಾಚ ಶ್ಲಕ್ಷ್ಣಯಾ ವಾಚಾ ಮೈತ್ರೇಯೋ ಭಗವಾನೃಷಿಃ।।

ವೈಶಂಪಾಯನನು ಹೇಳಿದನು: “ಆಗ ಭಗವಾನ್ ಋಷಿ ಮೈತ್ರೇಯನು ರಾಜ ಅಮರ್ಷಣ ದುರ್ಯೋಧನನ ಕಡೆ ತಿರುಗಿ ಈ ಮೃದು ಮಾತುಗಳನ್ನಾಡಿದನು:

03011019a ದುರ್ಯೋಧನ ಮಹಾಬಾಹೋ ನಿಬೋಧ ವದತಾಂ ವರ।
03011019c ವಚನಂ ಮೇ ಮಹಾಪ್ರಾಜ್ಞ ಬ್ರುವತೋ ಯದ್ಧಿತಂ ತವ।।

“ಮಾತನಾಡುವವರಲ್ಲಿ ಶ್ರೇಷ್ಠ! ಮಹಾಬಾಹು ದುರ್ಯೋಧನ! ನಿನ್ನದೇ ಒಳಿತಾಗಿ ಹೇಳುವ ನನ್ನ ಈ ತಿಳುವಳಿಕೆಯ ಮಾತುಗಳನ್ನು ಕೇಳು.

03011020a ಮಾ ದ್ರುಹಃ ಪಾಂಡವಾನ್ರಾಜನ್ಕುರುಷ್ವ ಹಿತಮಾತ್ಮನಃ।
03011020c ಪಾಂಡವಾನಾಂ ಕುರೂಣಾಂ ಚ ಲೋಕಸ್ಯ ಚ ನರರ್ಷಭ।।

ರಾಜನ್! ಪಾಂಡವರನ್ನು ದ್ವೇಷಿಸಬೇಡ. ನರರ್ಷಭ! ನಿನ್ನ, ಪಾಂಡವರ, ಕೌರವರ ಮತ್ತು ಲೋಕಕ್ಕೇ ಏನು ಹಿತವೋ ಅದನ್ನು ಮಾಡು!

03011021a ತೇ ಹಿ ಸರ್ವೇ ನರವ್ಯಾಘ್ರಾಃ ಶೂರಾ ವಿಕ್ರಾಂತಯೋಧಿನಃ।
03011021c ಸರ್ವೇ ನಾಗಾಯುತಪ್ರಾಣಾ ವಜ್ರಸಂಹನನಾ ದೃಢಾಃ।।

ಅವರೆಲ್ಲ ನರವ್ಯಾಘ್ರರೂ ಶೂರರು, ವಿಕ್ರಾಂತ ಯೋದ್ಧರು. ಎಲ್ಲರೂ ಆನೆಗಳ ಬಲವುಳ್ಳವರು ಮತ್ತು ವಜ್ರದಂತೆ ದೃಢರು.

03011022a ಸತ್ಯವ್ರತಪರಾಃ ಸರ್ವೇ ಸರ್ವೇ ಪುರುಷಮಾನಿನಃ।
03011022c ಹಂತಾರೋ ದೇವಶತ್ರೂಣಾಂ ರಕ್ಷಸಾಂ ಕಾಮರೂಪಿಣಾಂ।
03011022e ಹಿಡಿಂಬಬಕಮುಖ್ಯಾನಾಂ ಕಿರ್ಮೀರಸ್ಯ ಚ ರಕ್ಷಸಃ।।
03011023a ಇತಃ ಪ್ರಚ್ಯವತಾಂ ರಾತ್ರೌ ಯಃ ಸ ತೇಷಾಂ ಮಹಾತ್ಮನಾಂ।
03011023c ಆವೃತ್ಯ ಮಾರ್ಗಂ ರೌದ್ರಾತ್ಮಾ ತಸ್ಥೌ ಗಿರಿರಿವಾಚಲಃ।।
03011024a ತಂ ಭೀಮಃ ಸಮರಶ್ಲಾಘೀ ಬಲೇನ ಬಲಿನಾಂ ವರಃ।
03011024c ಜಘಾನ ಪಶುಮಾರೇಣ ವ್ಯಾಘ್ರಃ ಕ್ಷುದ್ರಮೃಗಂ ಯಥಾ।।

ಅವರೆಲ್ಲರೂ ಸತ್ಯವ್ರತ ಪರಾಯಣರು. ಎಲ್ಲರೂ ಅಭಿಮಾನಿ ಪುರುಷರು. ದೇವಶತ್ರುಗಳಾದ ಕಾಮರೂಪಿಣಿ ರಾಕ್ಷರನ್ನು -ಮುಖ್ಯವಾಗಿ ಹಿಡಿಂಬ, ಬಕ ಮತ್ತು ರಾಕ್ಷಸ ಕಿರ್ಮೀರರನ್ನು ಸಂಹರಿಸಿದವರು. ಇವರಲ್ಲಿ ಕೊನೆಯ ರೌದ್ರಾತ್ಮನು ಆ ಮಹಾತ್ಮರನ್ನು ರಾತ್ರಿಯಲ್ಲಿ ಮಾರ್ಗದಲ್ಲಿ ಸುತ್ತುವರೆದು ಪರ್ವತದಂತೆ ಅಚಲವಾಗಿ ನಿಂತಿರಲು ಸಮರಶ್ಲಾಘೀ ಬಲಿಗಳಲ್ಲಿಯೇ ಶ್ರೇಷ್ಠ ಭೀಮನು ಕ್ಷುದ್ರಮೃಗವನ್ನು ವ್ಯಾಘ್ರವೊಂದು ಕೊಲ್ಲುವಂತೆ ಬಲದಿಂದ ಸಂಹರಿಸಿದನು.

03011025a ಪಶ್ಯ ದಿಗ್ವಿಜಯೇ ರಾಜನ್ಯಥಾ ಭೀಮೇನ ಪಾತಿತಃ।
03011025c ಜರಾಸಂಧೋ ಮಹೇಷ್ವಾಸೋ ನಾಗಾಯುತಬಲೋ ಯುಧಿ।।

ರಾಜನ್! ನೋಡು! ದಿಗ್ವಿಜಯದಲ್ಲಿ ಭೀಮನು ಹೇಗೆ ಜರಾಸಂಧನನ್ನು ಉರುಳಿಸಿದನು. ಆ ಮಹೇಷ್ವಾಸ ಜರಾಸಂಧನು ಯುದ್ಧದಲ್ಲಿ ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದನು.

03011026a ಸಂಬಂಧೀ ವಾಸುದೇವಶ್ಚ ಯೇಷಾಂ ಶ್ಯಾಲಶ್ಚ ಪಾರ್ಷತಃ।
03011026c ಕಸ್ತಾನ್ಯುಧಿ ಸಮಾಸೀತ ಜರಾಮರಣವಾನ್ನರಃ।।

ಯಾರ ಸಂಬಂಧಿಯು ವಾಸುದೇವನೋ ಮತ್ತು ಬಾವನು ಪಾರ್ಷತನೋ ಅವರನ್ನು ಮುಪ್ಪು ಮತ್ತು ಸಾವಿಗೆ ಅಧೀನನಾದ ಯಾವ ನರನು ತಾನೇ ಯುದ್ಧದಲ್ಲಿ ಎದುರಿಸಿಯಾನು?

03011027a ತಸ್ಯ ತೇ ಶಮ ಏವಾಸ್ತು ಪಾಂಡವೈರ್ಭರತರ್ಷಭ।
03011027c ಕುರು ಮೇ ವಚನಂ ರಾಜನ್ಮಾ ಮೃತ್ಯುವಶಮನ್ವಗಾಃ।।

ಭರತರ್ಷಭ! ನಿನ್ನ ಮತ್ತು ಪಾಂಡವರ ಮಧ್ಯೆ ಶಾಂತಿಯಿರಬೇಕು. ರಾಜನ್! ನಾನು ಹೇಳಿದಂತೆ ಮಾಡು. ಇಲ್ಲದಿದ್ದರೆ ಮೃತ್ಯುವಶನಾಗುತ್ತೀಯೆ.”

03011028a ಏವಂ ತು ಬ್ರುವತಸ್ತಸ್ಯ ಮೈತ್ರೇಯಸ್ಯ ವಿಶಾಂ ಪತೇ।
03011028c ಊರುಂ ಗಜಕರಾಕಾರಂ ಕರೇಣಾಭಿಜಘಾನ ಸಃ।।

ವಿಶಾಂಪತೇ! ಹೀಗೆ ಮೈತ್ರೇಯನು ಹೇಳುತ್ತಿರಲು ಅವನು ಆನೆಯ ಸೊಂಡಿಲಿನಂತಿದ್ದ ತನ್ನ ತೊಡೆಯನ್ನು ತಟ್ಟಿದನು.

03011029a ದುರ್ಯೋಧನಃ ಸ್ಮಿತಂ ಕೃತ್ವಾ ಚರಣೇನಾಲಿಖನ್ಮಹೀಂ।
03011029c ನ ಕಿಂ ಚಿದುಕ್ತ್ವಾ ದುರ್ಮೇಧಾಸ್ತಸ್ಥೌ ಕಿಂ ಚಿದವಾಙ್ಮುಖಃ।।

ನಗುವಂತೆ ಮಾಡಿ ಆ ದುರ್ಮತಿ ದುರ್ಯೋಧನನು ಏನನ್ನೂ ಹೇಳದೇ ತಲೆಯನ್ನು ತಗ್ಗಿಸಿ ತನ್ನ ಕಾಲ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು.

03011030a ತಮಶುಶ್ರೂಷಮಾಣಂ ತು ವಿಲಿಖಂತಂ ವಸುಂಧರಾಂ।
03011030c ದೃಷ್ಟ್ವಾ ದುರ್ಯೋಧನಂ ರಾಜನ್ಮೈತ್ರೇಯಂ ಕೋಪ ಆವಿಶತ್।।

ರಾಜನ್! ಹೇಳಿದ್ದುದನ್ನು ಕೇಳದೇ ದುರ್ಯೋಧನನು ನೆಲದ ಮೇಲೆ ಬರೆಯುತ್ತಿರುವುದನ್ನು ನೋಡಿ ಮೈತ್ರೇಯನು ಕೋಪಾವಿಷ್ಟನಾದನು.

03011031a ಸ ಕೋಪವಶಮಾಪನ್ನೋ ಮೈತ್ರೇಯೋ ಮುನಿಸತ್ತಮಃ।
03011031c ವಿಧಿನಾ ಸಂಪ್ರಯುಕ್ತಶ್ಚ ಶಾಪಾಯಾಸ್ಯ ಮನೋ ದಧೇ।।

ಕೋಪಾವಿಷ್ಟನಾದ ಆ ಮುನಿಸತ್ತಮ ಮೈತ್ರೇಯನು ವಿಧಿಯ ಸೆಳೆತಕ್ಕೆ ಸಿಕ್ಕಿ ಅವನನ್ನು ಶಪಿಸಲು ನಿರ್ಧರಿಸಿದನು.

03011032a ತತಃ ಸ ವಾರ್ಯುಪಸ್ಪೃಶ್ಯ ಕೋಪಸಂರಕ್ತಲೋಚನಃ।
03011032c ಮೈತ್ರೇಯೋ ಧಾರ್ತರಾಷ್ಟ್ರಂ ತಮಶಪದ್ದುಷ್ಟಚೇತಸಂ।।

ಆಗ ಕೋಪದಿಂದ ಅವನ ಕಣ್ಣುಗಳು ಕೆಂಪಾಗಲು, ನೀರನ್ನು ಮುಟ್ಟಿ ಮೈತ್ರೇಯನು ಆ ದುಷ್ಟಚೇತಸ ಧಾರ್ತರಾಷ್ಟ್ರನನ್ನು ಶಪಿಸಿದನು:

03011033a ಯಸ್ಮಾತ್ತ್ವಂ ಮಾಮನಾದೃತ್ಯ ನೇಮಾಂ ವಾಚಂ ಚಿಕೀರ್ಷಸಿ।
03011033c ತಸ್ಮಾದಸ್ಯಾಭಿಮಾನಸ್ಯ ಸದ್ಯಃ ಫಲಮವಾಪ್ನುಹಿ।।

“ನನ್ನನ್ನು ಅನಾದರಿಸಿ ನನ್ನ ಮಾತುಗಳಂತೆ ನಡೆದುಕೊಳ್ಳದೇ ಇದ್ದುದಕ್ಕೆ ನೀನು ಸದ್ಯವೇ ನಿನ್ನ ಅಭಿಮಾನದ ಫಲವನ್ನು ಹೊಂದುತ್ತೀಯೆ!

03011034a ತ್ವದಭಿದ್ರೋಹಸಂಯುಕ್ತಂ ಯುದ್ಧಮುತ್ಪತ್ಸ್ಯತೇ ಮಹತ್।
03011034c ಯತ್ರ ಭೀಮೋ ಗದಾಪಾತೈಸ್ತವೋರುಂ ಭೇತ್ಸ್ಯತೇ ಬಲೀ।।

ನಿನ್ನ ವಿದ್ರೋಹದಿಂದ ನಡೆಯುವ ಮಹಾ ಯುದ್ಧದಲ್ಲಿ ಬಲಿ ಭೀಮನು ತನ್ನ ಗದಾಪ್ರಹಾರದಿಂದ ನಿನ್ನ ತೊಡೆಯನ್ನು ಒಡೆಯುತ್ತಾನೆ!”

03011035a ಇತ್ಯೇವಮುಕ್ತೇ ವಚನೇ ಧೃತರಾಷ್ಟ್ರೋ ಮಹೀಪತಿಃ।
03011035c ಪ್ರಸಾದಯಾಮಾಸ ಮುನಿಂ ನೈತದೇವಂ ಭವೇದಿತಿ।।

ಈ ಮಾತನ್ನು ಆಡುತ್ತಿದ್ದಂತೆಯೇ ಮಹೀಪತಿ ಧೃತರಾಷ್ಟ್ರನು “ಈ ರೀತಿ ಆಗದಂತೆ ಮಾಡು!” ಇಂದು ಆ ಮುನಿಯನ್ನು ಬೇಡಿಕೊಂಡನು.

03011036 ಮೈತ್ರೇಯ ಉವಾಚ।
03011036a ಶಮಂ ಯಾಸ್ಯತಿ ಚೇತ್ಪುತ್ರಸ್ತವ ರಾಜನ್ಯಥಾ ತಥಾ।
03011036c ಶಾಪೋ ನ ಭವಿತಾ ತಾತ ವಿಪರೀತೇ ಭವಿಷ್ಯತಿ।।

ಮೈತ್ರೇಯನು ಹೇಳಿದನು: “ರಾಜನ್! ನಿನ್ನ ಮಗನು ಶಾಂತಿಯನ್ನು ಕೇಳಿಕೊಂಡರೆ ಶಾಪದಂತೆ ನಡೆಯುವುದಿಲ್ಲ. ಮಗೂ! ಇದಕ್ಕೆ ವಿಪರೀತವಾಗಿ ನಡೆದುಕೊಂಡರೆ ಶಾಪದಂತೆಯೇ ನಡೆಯುತ್ತದೆ!””

03011037 ವೈಶಂಪಾಯನ ಉವಾಚ।
03011037a ಸ ವಿಲಕ್ಷಸ್ತು ರಾಜೇಂದ್ರ ದುರ್ಯೋಧನಪಿತಾ ತದಾ।
03011037c ಮೈತ್ರೇಯಂ ಪ್ರಾಹ ಕಿರ್ಮೀರಃ ಕಥಂ ಭೀಮೇನ ಪಾತಿತಃ।।

ವೈಶಂಪಾಯನನು ಹೇಳಿದನು: “ರಾಜೇಂದ್ರ! ಅದನ್ನು ವಿಲಕ್ಷಣೆ ಮಾಡಿ ದುರ್ಯೋಧನನ ತಂದೆಯು ಮೈತ್ರೇಯನನ್ನು ಕೇಳಿದನು: “ಭೀಮಸೇನನು ಕಿರ್ಮೀರನನ್ನು ಹೇಗೆ ಉರುಳಿಸಿದನು?”

03011038 ಮೈತ್ರೇಯ ಉವಾಚ।
03011038a ನಾಹಂ ವಕ್ಷ್ಯಾಮ್ಯಸೂಯಾ ತೇ ನ ತೇ ಶುಶ್ರೂಷತೇ ಸುತಃ।
03011038c ಏಷ ತೇ ವಿದುರಃ ಸರ್ವಮಾಖ್ಯಾಸ್ಯತಿ ಗತೇ ಮಯಿ।।

ಮೈತ್ರೇಯನು ಹೇಳಿದನು: “ಅಸೂಯೆಗೊಂಡಿರುವ ನಿನಗಾಗಲೀ ಅವಿಧೇಯನಾಗಿರುವ ನಿನ್ನ ಈ ಮಗನಿಗಾಗಲೀ ನಾನು ಇದನ್ನು ಹೇಳುವುದಿಲ್ಲ! ನಾನು ಹೊರಟು ಹೋದ ನಂತರ ಎಲ್ಲವನ್ನೂ ವಿದುರನು ನಿನಗೆ ಹೇಳುತ್ತಾನೆ.””

03011039 ವೈಶಂಪಾಯನ ಉವಾಚ।
03011039a ಇತ್ಯೇವಮುಕ್ತ್ವಾ ಮೈತ್ರೇಯಃ ಪ್ರಾತಿಷ್ಠತ ಯಥಾಗತಂ।
03011039c ಕಿರ್ಮೀರವಧಸಂವಿಗ್ನೋ ಬಹಿರ್ದುರ್ಯೋಧನೋಽಗಮತ್।।

ವೈಶಂಪಾಯನನು ಹೇಳಿದನು: “ಇದನ್ನು ಹೇಳಿ ಮೈತ್ರೇಯನು ಎದ್ದುಕೊಂಡು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ಹೊರಟುಹೋದನು. ಕಿರ್ಮೀರನ ವಧೆಯಿಂದ ಚಿಂತಿತನಾದ ದುರ್ಯೋಧನನು ಹೊರಗೆ ಹೊರಟುಹೋದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ಮೈತ್ರೇಯಶಾಪೇ ಏಕಾದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವನಪರ್ವದಲ್ಲಿ ಅರಣ್ಯಕಪರ್ವದಲ್ಲಿ ಮೈತ್ರೇಯಶಾಪ ಎನ್ನುವ ಹನ್ನೊಂದನೆಯು ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕ ಪರ್ವದಲ್ಲಿ ಅರಣ್ಯಕಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-29/100, ಅಧ್ಯಾಯಗಳು-308/1995, ಶ್ಲೋಕಗಳು-9908/73784.


  1. ಮೈತ್ರೇಯನು ವ್ಯಾಸಮಹರ್ಷಿಯ ತಂದೆ ಪರಾಶರ ಮುನಿಯ ಶಿಷ್ಯ. ಪರಾಶರನು ಮೈತ್ರೇಯನಿಗೆ ವಿಷ್ಣುಪುರಾಣವನ್ನು ಹೇಳಿದ್ದನು. ↩︎