010 ಸುರಭ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಅರಣ್ಯಕ ಪರ್ವ

ಅಧ್ಯಾಯ 10

ಸಾರ

ತಾನು ದುರ್ಯೋಧನನನ್ನು ಪರಿತ್ಯಜಿಸಲು ಶಕ್ತನಿಲ್ಲವೆಂದು ಹೇಳಿದ ಧೃತರಾಷ್ಟ್ರನಿಗೆ ವ್ಯಾಸನು ಪುತ್ರವಾತ್ಸಲ್ಯದ ಕುರಿತು ಇಂದ್ರ ಮತ್ತು ಸುರಭಿಯರ ನಡುವೆ ನಡೆದ ಸಂವಾದವನ್ನು ಉದಾಹರಿಸುವುದು (1-18). “ನಿನ್ನ ಮಕ್ಕಳಲ್ಲಿ ಎಲ್ಲರೂ ಸಮನಾಗಿದ್ದರೂ ದೀನರ ಮೇಲೆ ಅಧಿಕ ಕೃಪೆಯಿರಲಿ” ಎಂದೂ, ದುರ್ಯೋಧನನು ಪಾಂಡವರೊಂದಿಗೆ ಸಂಧಿಮಾಡಿಕೊಳ್ಳಲೆಂದೂ ವ್ಯಾಸನು ಧೃತರಾಷ್ಟ್ರನಿಗೆ ಸಲಹೆ ನೀಡುವುದು (19-23).

03010001 ಧೃತರಾಷ್ಟ್ರ ಉವಾಚ।
03010001a ಭಗವನ್ನಾಹಮಪ್ಯೇತದ್ರೋಚಯೇ ದ್ಯೂತಸಂಸ್ತವಂ।
03010001c ಮನ್ಯೇ ತದ್ವಿಧಿನಾಕ್ರಮ್ಯ ಕಾರಿತೋಽಸ್ಮೀತಿ ವೈ ಮುನೇ।।

ಧೃತರಾಷ್ಟ್ರನು ಹೇಳಿದನು: “ಭಗವನ್! ಈ ದ್ಯೂತದ ಮಾತು ನನಗೂ ಇಷ್ಟವಾಗಲಿಲ್ಲ. ಮುನೇ! ಆದರೆ ವಿಧಿಯು ನನ್ನನ್ನೂ ಮೀರಿ ನನ್ನಿಂದ ಇದು ನಡೆಯುವ ಹಾಗೆ ಮಾಡಿತು ಎಂದು ನನಗನ್ನಿಸುತ್ತದೆ.

03010002a ನೈತದ್ರೋಚಯತೇ ಭೀಷ್ಮೋ ನ ದ್ರೋಣೋ ವಿದುರೋ ನ ಚ।
03010002c ಗಾಂಧಾರೀ ನೇಚ್ಚತಿ ದ್ಯೂತಂ ತಚ್ಚ ಮೋಹಾತ್ಪ್ರವರ್ತಿತಂ।।

ಇದು ಭೀಷ್ಮನಿಗೂ, ದ್ರೋಣ ಮತ್ತು ವಿದುರರಿಗೂ ಇಷ್ಟವಾಗಿರಲಿಲ್ಲ. ಗಾಂಧಾರಿಯೂ ಇದನ್ನು ಬಯಸಿರಲಿಲ್ಲ. ಆದರೂ ಮೋಹದಿಂದ ದ್ಯೂತವು ನಡೆದುಹೋಯಿತು!

03010003a ಪರಿತ್ಯಕ್ತುಂ ನ ಶಕ್ನೋಮಿ ದುರ್ಯೋಧನಮಚೇತನಂ।
03010003c ಪುತ್ರಸ್ನೇಹೇನ ಭಗವನ್ಜಾನನ್ನಪಿ ಯತವ್ರತ।।

ಭಗವನ್! ಯತವ್ರತ! ತಿಳಿದಿದ್ದರೂ ಕೂಡ ಪುತ್ರಸ್ನೇಹದಿಂದಾಗಿ ನಾನು ಆ ಅಚೇತನ ದುರ್ಯೋಧನನನ್ನು ಪರಿತ್ಯಜಿಸಲು ಶಕ್ತನಾಗಿಲ್ಲ!”

03010004 ವ್ಯಾಸ ಉವಾಚ।
03010004a ವೈಚಿತ್ರವೀರ್ಯ ನೃಪತೇ ಸತ್ಯಮಾಹ ಯಥಾ ಭವಾನ್।
03010004c ದೃಢಂ ವೇದ್ಮಿ ಪರಂ ಪುತ್ರಂ ಪರಂ ಪುತ್ರಾನ್ನ ವಿದ್ಯತೇ।।

ವ್ಯಾಸನು ಹೇಳಿದನು: “ನೃಪತೇ ವೈಚಿತ್ರವೀರ್ಯ! ನೀನು ಹೇಳುತ್ತಿರುವುದು ಸತ್ಯ. ಮಗನೇ ಶ್ರೇಷ್ಠ. ಮಗನನ್ನು ಮೀರಿ ಇನ್ನೊಂದಿಲ್ಲ ಎನ್ನುವುದನ್ನು ನಾನೂ ಕೂಡ ಧೃಢವಾಗಿ ತಿಳಿದುಕೊಂಡಿದ್ದೇನೆ.

03010005a ಇಂದ್ರೋಽಪ್ಯಶ್ರುನಿಪಾತೇನ ಸುರಭ್ಯಾ ಪ್ರತಿಬೋಧಿತಃ।
03010005c ಅನ್ಯೈಃ ಸಮೃದ್ಧೈರಪ್ಯರ್ಥೈರ್ನ ಸುತಾದ್ವಿದ್ಯತೇ ಪರಂ।।

ಇಂದ್ರನೂ ಕೂಡ, ಎಷ್ಟೇ ಬೆಲೆಬಾಳುವಂಥಹದಾಗಿದ್ದರೂ ಮಗನಿಂತ ಶ್ರೇಷ್ಠವಾದ ಸಂಪತ್ತು ಬೇರೊಂದಿಲ್ಲ ಎನ್ನುವ ಸತ್ಯವನ್ನು ಸುರಭಿಯ ಕಣ್ಣೀರಿನಿಂದ ಕಂಡುಕೊಂಡಿದ್ದನು.

03010006a ಅತ್ರ ತೇ ವರ್ತಯಿಷ್ಯಾಮಿ ಮಹದಾಖ್ಯಾನಮುತ್ತಮಂ।
03010006c ಸುರಭ್ಯಾಶ್ಚೈವ ಸಂವಾದಮಿಂದ್ರಸ್ಯ ಚ ವಿಶಾಂ ಪತೇ।।

ವಿಶಾಂಪತೇ! ಇದಕ್ಕೆ ಸಂಬಂಧಿಸಿದ ಸುರಭಿ ಮತ್ತು ಇಂದ್ರರ ನಡುವೆ ನಡೆದ ಸಂವಾದದ ಒಂದು ಉತ್ತಮ ಮಹದಾಖ್ಯಾನವನ್ನು ಹೇಳುತ್ತೇನೆ.

03010007a ತ್ರಿವಿಷ್ಟಪಗತಾ ರಾಜನ್ಸುರಭಿಃ ಪ್ರಾರುದತ್ಕಿಲ।
03010007c ಗವಾಂ ಮಾತ ಪುರಾ ತಾತ ತಾಮಿಂದ್ರೋಽನ್ವಕೃಪಾಯತ।।

ರಾಜನ್! ಮಗೂ! ಹಿಂದೆ ಗೋವುಗಳ ಮಾತೆ ಸುರಭಿಯು ಸ್ವರ್ಗಕ್ಕೆ ಹೋಗಿ ತುಂಬಾ ರೋದಿಸಿದಳು. ಅದನ್ನು ನೋಡಿದ ಇಂದ್ರನಿಗೆ ಅನುಕಂಪವುಂಟಾಯಿತು.

03010008 ಇಂದ್ರ ಉವಾಚ।
03010008a ಕಿಮಿದಂ ರೋದಿಷಿ ಶುಭೇ ಕಚ್ಚಿತ್ ಕ್ಷೇಮಂ ದಿವೌಕಸಾಂ।
03010008c ಮಾನುಷೇಷ್ವಥ ವಾ ಗೋಷು ನೈತದಲ್ಪಂ ಭವಿಷ್ಯತಿ।।

ಇಂದ್ರನು ಹೇಳಿದನು: “ಶುಭೇ! ಯಾವ ಕಾರಣಕ್ಕಾಗಿ ನೀನು ಈ ರೀತಿ ರೋದಿಸುತ್ತಿರುವೆ? ದಿವೌಕಸರು, ಮನುಷ್ಯರು ಮತ್ತು ಗೋವುಗಳು ಕ್ಷೇಮದಿಂದಿದ್ದಾರೆ ತಾನೆ? ಇದು ಸಣ್ಣ ವಿಷಯವಾಗಿರಲಿಕ್ಕಿಲ್ಲ!”

03010009 ಸುರಭಿರುವಾಚ।
03010009a ವಿನಿಪಾತೋ ನ ವಃ ಕಶ್ಚಿದ್ದೃಶ್ಯತೇ ತ್ರಿದಶಾಧಿಪ।
03010009c ಅಹಂ ತು ಪುತ್ರಂ ಶೋಚಾಮಿ ತೇನ ರೋದಿಮಿ ಕೌಶಿಕ।।

ಸುರಭಿಯು ಹೇಳಿದಳು: “ತ್ರಿದಶಾಧಿಪ! ನಿಮಗೆಲ್ಲರಿಗೂ ಯಾವುದೇ ರೀತಿಯ ಆಪತ್ತೂ ಬಂದೊದಗಿಲ್ಲ! ಕೌಶಿಕ! ನಾನು ನನ್ನ ಪುತ್ರನಿಗೋಸ್ಕರ ಶೋಕಿಸಿ ಅಳುತ್ತಿದ್ದೇನೆ.

03010010a ಪಶ್ಯೈನಂ ಕರ್ಷಕಂ ರೌದ್ರಂ ದುರ್ಬಲಂ ಮಮ ಪುತ್ರಕಂ।
03010010c ಪ್ರತೋದೇನಾಭಿನಿಘ್ನಂತಂ ಲಾಂಗಲೇನ ನಿಪೀಡಿತಂ।।

ನೇಗಿಲ ಭಾರದಡಿಯಲ್ಲಿ ನನ್ನ ದುರ್ಬಲ ಪುತ್ರನನ್ನು ಭಯಂಕರ ಬಾರಿಕೋಲಿನಿಂದ ಆ ರೈತನು ಹೊಡೆಯುತ್ತಿರುವುದನ್ನು ನೋಡು!

03010011a ಏತಂ ದೃಷ್ಟ್ವಾ ಭೃಶಂ ಶ್ರಂತಂ ವಧ್ಯಮಾನಂ ಸುರಾಧಿಪ।
03010011c ಕೃಪಾವಿಷ್ಟಾಸ್ಮಿ ದೇವೇಂದ್ರ ಮನಶ್ಚೋದ್ವಿಜತೇ ಮಮ।।

ಸುರಾಧಿಪ! ಬಹಳಷ್ಟು ಆಯಾಸಗೊಂಡಿರುವವನನ್ನು ಚೆನ್ನಾಗಿ ಹೊಡೆಯುತ್ತಿರುವುದನ್ನು ನೋಡಿ ಕೃಪಾವಿಷ್ಟಳಾಗಿದ್ದೇನೆ. ದೇವೇಂದ್ರ! ನನ್ನ ಮನಸ್ಸಿನಲ್ಲಿ ಶೋಕವು ಹುಟ್ಟಿದೆ.

03010012a ಏಕಸ್ತತ್ರ ಬಲೋಪೇತೋ ಧುರಮುದ್ವಹತೇಽಧಿಕಾಂ।
03010012c ಅಪರೋಽಲ್ಪಬಲಪ್ರಾಣಃ ಕೃಶೋ ಧಮನಿಸಂತತಃ।
03010012e ಕೃಚ್ಚ್ರಾದುದ್ವಹತೇ ಭಾರಂ ತಂ ವೈ ಶೋಚಾಮಿ ವಾಸವ।।

ಅಲ್ಲಿ ಒಬ್ಬ ಬಲವಂತನು ಅಧಿಕ ಭಾರವನ್ನು ಹೊತ್ತಿದ್ದಾನೆ. ಇನ್ನೊಬ್ಬನು ಕಡಿಮೆ ಬಲವುಳ್ಳವನು ಕೃಶನಾದವನು ಕಡಿವಾಣದ ನಿಯಂತ್ರಣದಲ್ಲಿದ್ದಾನೆ. ವಾಸವ! ಅವನು ಹೇಗೆ ಭಾರವನ್ನು ಹೊರಬಲ್ಲ ಎನ್ನುವುದರ ಕುರಿತೇ ಚಿಂತಿಸುತ್ತಿದ್ದೇನೆ.

03010013a ವಧ್ಯಮಾನಃ ಪ್ರತೋದೇನ ತುದ್ಯಮಾನಃ ಪುನಃ ಪುನಃ।
03010013c ನೈವ ಶಕ್ನೋತಿ ತಂ ಭಾರಮುದ್ವೋಢುಂ ಪಶ್ಯ ವಾಸವ।।

ವಾಸವ! ಒಂದೇ ಸಮನೆ ಅವನನ್ನು ಹೊಡೆಯುತ್ತಿದ್ದರೂ, ತಿವಿಯುತ್ತಿದ್ದರೂ ಅವನು ಆ ಭಾರವನ್ನು ಎಳೆಯಲು ಶಕ್ಯನಿಲ್ಲ. ನೋಡು!

03010014a ತತೋಽಹಂ ತಸ್ಯ ದುಃಖಾರ್ತಾ ವಿರೌಮಿ ಭೃಶದುಃಖಿತಾ।
03010014c ಅಶ್ರೂಣ್ಯಾವರ್ತಯಂತೀ ಚ ನೇತ್ರಾಭ್ಯಾಂ ಕರುಣಾಯತೀ।।

ಆದುದರಿಂದಲೇ ಅವನಿಗಾಗಿ ದುಃಖಾರ್ತಳಾಗಿ ದುಃಖದಿಂದ ತುಂಬಾ ರೋದಿಸುತ್ತಿದ್ದೇನೆ. ಕರುಣೆಯಿಂದ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿದೆ.”

03010015 ಇಂದ್ರ ಉವಾಚ।
03010015a ತವ ಪುತ್ರಸಹಸ್ರೇಷು ಪೀಡ್ಯಮಾನೇಷು ಶೋಭನೇ।
03010015c ಕಿಂ ಕೃಪಾಯಿತಮಸ್ತ್ಯತ್ರ ಪುತ್ರ ಏಕೋಽತ್ರ ಪೀಡ್ಯತೇ।।

ಇಂದ್ರನು ಹೇಳಿದನು: “ಶೋಭನೇ! ನಿನ್ನ ಸಹಸ್ರಾರು ಪುತ್ರರು ಪೀಡನೆಗೊಳಗಾಗುತ್ತಿದ್ದಾರೆ. ಈ ಒಬ್ಬನೇ ಪುತ್ರನ ಪೀಡನೆಯಿಂದ ನೀನು ಏಕೆ ಕೃಪಾವಿಷ್ಟಳಾಗಿದ್ದೀಯೆ?”

03010016 ಸುರಭಿರುವಾಚ।
03010016a ಯದಿ ಪುತ್ರಸಹಸ್ರಂ ಮೇ ಸರ್ವತ್ರ ಸಮಮೇವ ಮೇ।
03010016c ದೀನಸ್ಯ ತು ಸತಃ ಶಕ್ರ ಪುತ್ರಸ್ಯಾಭ್ಯಧಿಕಾ ಕೃಪಾ।।

ಸುರಭಿಯು ಹೇಳಿದಳು: “ಶಕ್ರ! ನನಗೆ ಸಹಸ್ರಾರು ಪುತ್ರರಿದ್ದರೂ ಸರ್ವರೂ ನನಗೆ ಸಮನಾಗಿದ್ದಾರೆ. ಆದರೆ ದೀನನಾದ ಸುತನ ಮೇಲೆ ಕೃಪೆಯು ಅಧಿಕ!””

03010017 ವ್ಯಾಸ ಉವಾಚ।
03010017a ತದಿಂದ್ರಃ ಸುರಭೀವಾಕ್ಯಂ ನಿಶಮ್ಯ ಭೃಶವಿಸ್ಮಿತಃ।
03010017c ಜೀವಿತೇನಾಪಿ ಕೌರವ್ಯ ಮೇನೇಽಭ್ಯಧಿಕಮಾತ್ಮಜಂ।।

ವ್ಯಾಸನು ಹೇಳಿದನು: “ಕೌರವ್ಯ! ಸುರಭಿಯ ಮಾತುಗಳನ್ನು ಕೇಳಿದ ಇಂದ್ರನು ಅತ್ಯಂತ ವಿಸ್ಮಿತನಾದನು ಮತ್ತು ಆತ್ಮಜನು ಜೀವಕ್ಕಿಂತಲೂ ಅಧಿಕವೆಂದು ತನ್ನಲ್ಲಿಯೇ ಯೋಚಿಸಿದನು.

03010018a ಪ್ರವವರ್ಷ ಚ ತತ್ರೈವ ಸಹಸಾ ತೋಯಮುಲ್ಬಣಂ।
03010018c ಕರ್ಷಕಸ್ಯಾಚರನ್ವಿಘ್ನಂ ಭಗವಾನ್ಪಾಕಶಾಸನಃ।।

ಆಗ ಭಗವಾನ್ ಪಾಕಶಾಸನನು ಅಲ್ಲಿ ತಕ್ಷಣವೇ ಅತಿ ಮಳೆಯನ್ನು ಸುರಿಸಿ ಕೃಷಿಕನ ಹೂಳುವಿಕೆಗೆ ವಿಘ್ನವನ್ನುಂಟುಮಾಡಿದನು.

03010019a ತದ್ಯಥಾ ಸುರಭಿಃ ಪ್ರಾಹ ಸಮಮೇವಾಸ್ತು ತೇ ತಥಾ।
03010019c ಸುತೇಷು ರಾಜನ್ಸರ್ವೇಷು ದೀನೇಷ್ವಭ್ಯಧಿಕಾ ಕೃಪಾ।।

ರಾಜನ್! ಸುರಭಿಯು ಹೇಳಿದಂತೆ ನಿನ್ನ ಮಕ್ಕಳಲ್ಲಿ ಎಲ್ಲರೂ ಸಮನಾಗಿದ್ದರೂ ದೀನರ ಮೇಲೆ ಅಧಿಕ ಕೃಪೆಯಿರಲಿ.

03010020a ಯಾದೃಶೋ ಮೇ ಸುತಃ ಪಂಡುಸ್ತಾದೃಶೋ ಮೇಽಸಿ ಪುತ್ರಕ।
03010020c ವಿದುರಶ್ಚ ಮಹಾಪ್ರಾಜ್ಞಃ ಸ್ನೇಹಾದೇತದ್ಬ್ರವೀಮ್ಯಹಂ।।

ನೀನು ಹೇಗೆ ನನ್ನ ಮಗನೋ ಹಾಗೆಯೇ ಪಾಂಡುವೂ ನನ್ನದೇ ಮಗ. ಮಹಾಪ್ರಾಜ್ಞ ವಿದುರನೂ ಕೂಡ. ಸ್ನೇಹದಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ.

03010021a ಚಿರಾಯ ತವ ಪುತ್ರಾಣಾಂ ಶತಮೇಕಶ್ಚ ಪಾರ್ಥಿವ।
03010021c ಪಾಂಡೋಃ ಪಂಚೈವ ಲಕ್ಷ್ಯಂತೇ ತೇಽಪಿ ಮಂದಾಃ ಸುದುಃಖಿತಾಃ।।

ಪಾರ್ಥಿವ! ನಿನಗೆ ನೂರಾ‌ಒಂದು ಮಕ್ಕಳಿದ್ದಾರೆ. ಆದರೆ ಪಾಂಡುವಿಗೆ ಐವರೇ ಇದ್ದರೂ ಅವರು ಸರಳರಾಗಿದ್ದು ತುಂಬಾ ದುಃಖಿತರಾಗಿರುವಂತೆ ಕಾಣುತ್ತಿದ್ದಾರೆ.

03010022a ಕಥಂ ಜೀವೇಯುರತ್ಯಂತಂ ಕಥಂ ವರ್ಧೇಯುರಿತ್ಯಪಿ।
03010022c ಇತಿ ದೀನೇಷು ಪಾರ್ಥೇಷು ಮನೋ ಮೇ ಪರಿತಪ್ಯತೇ।।

ಅವರು ಹೇಗೆ ಕೊನೆಯವರೆಗೆ ಉಳಿಯುತ್ತಾರೆ ಮತ್ತು ಹೇಗೆ ವೃದ್ಧಿಸುತ್ತಾರೆ ಎಂದು ಆ ದೀನ ಪಾರ್ಥರ ಕುರಿತು ನನ್ನ ಮನಸ್ಸು ಪರಿತಪಿಸುತ್ತಿದೆ.

03010023a ಯದಿ ಪಾರ್ಥಿವ ಕೌರವ್ಯಾಂ ಜೀವಮಾನಾನಿಹೇಚ್ಚಸಿ।
03010023c ದುರ್ಯೋಧನಸ್ತವ ಸುತಃ ಶಮಂ ಗಚ್ಚತು ಪಾಂಡವೈಃ।।

ಪಾರ್ಥಿವ! ಕೌರವ್ಯರು ಜೀವಂತರಾಗಿರಬೇಕೆಂದು ಬಯಸುವೆಯಾದರೆ ನಿನ್ನ ಸುತ ದುರ್ಯೋಧನನು ಪಾಂಡವರಲ್ಲಿ ಹೋಗಿ ಸಂಧಿಮಾಡಿಕೊಳ್ಳಲಿ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ಸುರಭ್ಯುಪಾಖ್ಯಾನೇ ದಶಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ಸುರಭಿಯ ಕಥೆ ಎನ್ನುವ ಹತ್ತನೆಯು ಅಧ್ಯಾಯವು.