ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಅರಣ್ಯಕ ಪರ್ವ
ಅಧ್ಯಾಯ 9
ಸಾರ
ದುರ್ಯೋಧನನು ಒಬ್ಬಂಟಿಗನಾಗಿ ಪಾಂಡವರೊಂದಿಗೆ ವನದಲ್ಲಿ ವಾಸಿಸಬೇಕು; ಅದರಿಂದ ಅವನಿಗೆ ಅವರಲ್ಲಿ ಸ್ನೇಹವು ಬೆಳೆಯುತ್ತದೆ ಎಂದು ವ್ಯಾಸನು ಧೃತರಾಷ್ಟ್ರನಿಗೆ ಸಲಹೆ ನೀಡುವುದು (1-12).
03009001 ವ್ಯಾಸ ಉವಾಚ।
03009001a ಧೃತರಾಷ್ಟ್ರ ಮಹಾಪ್ರಾಜ್ಞ ನಿಬೋಧ ವಚನಂ ಮಮ।
03009001c ವಕ್ಷ್ಯಾಮಿ ತ್ವಾ ಕೌರವಾಣಾಂ ಸರ್ವೇಷಾಂ ಹಿತಮುತ್ತಮಂ।।
ವ್ಯಾಸನು ಹೇಳಿದನು: “ಧೃತರಾಷ್ಟ್ರ! ಮಹಾಪ್ರಾಜ್ಞ! ನನ್ನ ಮಾತನ್ನು ಅರ್ಥಮಾಡಿಕೋ. ಸರ್ವ ಕೌರವರ ಉತ್ತಮ ಹಿತಕ್ಕಾಗಿ ಮಾತನಾಡುತ್ತಿದ್ದೇನೆ.
03009002a ನ ಮೇ ಪ್ರಿಯಂ ಮಹಾಬಾಹೋ ಯದ್ಗತಾಃ ಪಾಂಡವಾ ವನಂ।
03009002c ನಿಕೃತ್ಯಾ ನಿರ್ಜಿತಾಶ್ಚೈವ ದುರ್ಯೋಧನವಶಾನುಗೈಃ।।
ಮಹಾಬಾಹೋ! ದುರ್ಯೋಧನ ಮತ್ತು ಅವನ ಅನುಯಾಯಿಗಳಿಂದ ಮೋಸದಲ್ಲಿ ಸೋತು ವನಕ್ಕೆ ಆ ಪಾಂಡವರು ಹೋದುದು ನನಗೆ ಇಷ್ಟವಾಗಲಿಲ್ಲ.
03009003a ತೇ ಸ್ಮರಂತಃ ಪರಿಕ್ಲೇಶಾನ್ವರ್ಷೇ ಪೂರ್ಣೇ ತ್ರಯೋದಶೇ।
03009003c ವಿಮೋಕ್ಷ್ಯಂತಿ ವಿಷಂ ಕ್ರುದ್ಧಾಃ ಕರವೇಯೇಷು ಭಾರತ।।
ಭಾರತ! ಹದಿಮೂರು ವರ್ಷಗಳು ಪೂರ್ಣವಾದನಂತರ ಅವರು ತಮ್ಮ ಕಷ್ಟಗಳನ್ನು ನೆನೆಸಿಕೊಂಡು ಕೌರವರ ಮೇಲೆ ಕ್ರೋಧದ ವಿಷವನ್ನು ಬಿಡುಗಡೆಮಾಡುತ್ತಾರೆ.
03009004a ತದಯಂ ಕಿಂ ನು ಪಾಪಾತ್ಮಾ ತವ ಪುತ್ರಃ ಸುಮಂದಧೀಃ।
03009004c ಪಾಂಡವಾನ್ನಿತ್ಯಸಂಕ್ರುದ್ಧೋ ರಾಜ್ಯಹೇತೋರ್ಜಿಘಾಂಸತಿ।।
ಏಕೆ ನಿನ್ನ ಈ ಪಾಪಾತ್ಮ, ಅತಿಮಂದಮತಿ ಪುತ್ರನು ಪಾಂಡವರ ಮೇಲೆ ಸದಾ ಸಿಟ್ಟುಮಾಡಿಕೊಂಡು, ಅವರನ್ನು ಸಂಹರಿಸಿ ರಾಜ್ಯವನ್ನು ಅಪಹರಿಸಲು ಬಯಸುತ್ತಾನೆ?
03009005a ವಾರ್ಯತಾಂ ಸಾಧ್ವಯಂ ಮೂಢಃ ಶಮಂ ಗಚ್ಚತು ತೇ ಸುತಃ।
03009005c ವನಸ್ಥಾಂಸ್ತಾನಯಂ ಹಂತುಮಿಚ್ಚನ್ಪ್ರಾಣೈರ್ವಿಮೋಕ್ಷ್ಯತೇ।।
ಆ ಮೂಢನನ್ನು ಈಗಲೇ ತಡೆಹಿಡಿಯಬೇಕು. ನಿನ್ನ ಮಗನು ಶಾಂತನಾಗಬೇಕು. ವನದಲ್ಲಿ ಅವರನ್ನು ಕೊಲ್ಲಲ್ಲು ಬಯಸಿದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ.
03009006a ಯಥಾಹ ವಿದುರಃ ಪ್ರಾಜ್ಞೋ ಯಥಾ ಭೀಷ್ಮೋ ಯಥಾ ವಯಂ।
03009006c ಯಥಾ ಕೃಪಶ್ಚ ದ್ರೋಣಶ್ಚ ತಥಾ ಸಾಧು ವಿಧೀಯತಾಂ।।
ಪ್ರಾಜ್ಞ ವಿದುರನು ಏನು ಹೇಳಿದ್ದಾನೋ, ಭೀಷ್ಮ, ನಾನು, ಕೃಪ ಮತ್ತು ದ್ರೋಣರು ಏನು ಹೇಳುತ್ತಿದ್ದೇವೋ ಅದನ್ನು ಒಳ್ಳೆಯದೆಂದೇ ತಿಳಿ.
03009007a ವಿಗ್ರಹೋ ಹಿ ಮಹಾಪ್ರಾಜ್ಞ ಸ್ವಜನೇನ ವಿಗರ್ಹಿತಃ।
03009007c ಅಧರ್ಮ್ಯಮಯಶಸ್ಯಂ ಚ ಮಾ ರಾಜನ್ಪ್ರತಿಪದ್ಯಥಾಃ।।
03009008a ಸಮೀಕ್ಷಾ ಯಾದೃಶೀ ಹ್ಯಸ್ಯ ಪಾಂಡವಾನ್ಪ್ರತಿ ಭಾರತ।
03009008c ಉಪೇಕ್ಷ್ಯಮಾಣಾ ಸಾ ರಾಜನ್ಮಹಾಂತಮನಯಂ ಸ್ಪೃಶೇತ್।।
ಮಹಾಪ್ರಾಜ್ಞ! ಸ್ವಜನರೊಂದಿಗೆ ಯುದ್ಧಮಾಡುವುದು ಖಂಡನಾರ್ಹ. ಯಶಸ್ಸನ್ನು ತರದ ಅಧರ್ಮವನ್ನು ಪ್ರತಿಪಾದಿಸಬೇಡ ರಾಜನ್! ಪಾಂಡವರ ಕುರಿತು ಈ ರೀತಿಯ ಸಮೀಕ್ಷೆಯಿದೆ ಭಾರತ! ಅವರನ್ನು ಉಪೇಕ್ಷೆಮಾಡುವುದರಿಂದ ಅನ್ಯಾಯವಾಗಿ ಮಹಾ ಅಂತ್ಯವನ್ನು ತಲುಪಿದ ಹಾಗೆ ರಾಜನ್!
03009009a ಅಥ ವಾಯಂ ಸುಮಂದಾತ್ಮಾ ವನಂ ಗಚ್ಚತು ತೇ ಸುತಃ।
03009009c ಪಾಂಡವೈಃ ಸಹಿತೋ ರಾಜನ್ನೇಕ ಏವಾಸಹಾಯವಾನ್।।
ರಾಜನ್! ಈಗ ನಿನ್ನ ಮಂದಾತ್ಮ ಸುತನು ತನ್ನ ಸಹಾಯಕರಿಲ್ಲದೇ ಒಬ್ಬಂಟಿಗನಾಗಿ ವನಕ್ಕೆ ಹೋಗಿ ಪಾಂಡವರ ಸಹಿತ ವಾಸಿಸಲಿ.
03009010a ತತಃ ಸಂಸರ್ಗಜಃ ಸ್ನೇಹಃ ಪುತ್ರಸ್ಯ ತವ ಪಾಂಡವೈಃ।
03009010c ಯದಿ ಸ್ಯಾತ್ಕೃತಕಾರ್ಯೋಽದ್ಯ ಭವೇಸ್ತ್ವಂ ಮನುಜೇಶ್ವರ।।
ಮನುಜೇಶ್ವರ! ಈ ಸಂಸರ್ಗದಿಂದ ನಿನ್ನ ಪುತ್ರನಿಗೆ ಪಾಂಡವರೊಡನೆ ಸ್ನೇಹವುಂಟಾದರೆ ನೀನು ಕಾರ್ಯಸಿದ್ಧಿಯನ್ನು ಹೊಂದಿದಂತೆ!
03009011a ಅಥ ವಾ ಜಾಯಮಾನಸ್ಯ ಯಚ್ಶೀಲಮನುಜಾಯತೇ।
03009011c ಶ್ರೂಯತೇ ತನ್ಮಹಾರಾಜ ನಾಮೃತಸ್ಯಾಪಸರ್ಪತಿ।।
ಮಹಾರಾಜ! ಆದರೂ ಹುಟ್ಟುವಾಗಲೇ ಇದ್ದ ಶೀಲವು ಅವನು ಮೃತನಾಗುವವರೆಗೆ ಅವನನ್ನು ಬಿಡುವುದಿಲ್ಲ ಎಂದು ಕೇಳಿದ್ದೇವೆ.
03009012a ಕಥಂ ವಾ ಮನ್ಯತೇ ಭೀಷ್ಮೋ ದ್ರೋಣೋ ವಾ ವಿದುರೋಽಪಿ ವಾ।
03009012c ಭವಾನ್ವಾತ್ರ ಕ್ಷಮಂ ಕಾರ್ಯಂ ಪುರಾ ಚಾರ್ಥೋಽತಿವರ್ತತೇ।।
ಇದರ ಕುರಿತು ಭೀಷ್ಮ, ದ್ರೋಣ, ವಿದುರ ಮತ್ತು ನಿನ್ನ ವಿಚಾರವೇನು? ವಿಷಯವು ಕೈ ತಪ್ಪಿ ಹೋಗುವುದರ ಮೊದಲೇ ಯಾವುದು ಸರಿಯೋ ಅದನ್ನು ಮಾಡಬೇಕು!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ವ್ಯಾಸವಾಕ್ಯೇ ನವವೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಒಂಭತ್ತನೆಯ ಅಧ್ಯಾಯವು.