ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಅರಣ್ಯಕ ಪರ್ವ
ಅಧ್ಯಾಯ 8
ಸಾರ
ವಿದುರನು ಹಿಂದಿರುಗಿ ಬಂದಿದ್ದಾನೆ ಎಂದು ತಿಳಿದ ದುರ್ಯೋಧನನು ಅವನು ಪಾಂಡವರನ್ನು ಹಿಂದೆ ಕರೆಸಿಯಾನು ಎಂದು ಹೆದರಿ ತನ್ನ ಮಿತ್ರರೊಂದಿಗೆ ಮಂತ್ರಾಲೋಚನೆ ಮಾಡುವುದು (1-14). ಪಾಂಡವರನ್ನು ಕೊಲ್ಲಲು ನಿರ್ಧರಿಸಿ ದುರ್ಯೋಧನ, ದುಃಶಾಸನ, ಕರ್ಣ ಮತ್ತು ಶಕುನಿಯರು ಹೊರಡುವಷ್ಟರಲ್ಲಿ ವ್ಯಾಸನ ಆಗಮನ (15-23).
03008001 ವೈಶಂಪಾಯನ ಉವಾಚ।
03008001a ಶ್ರುತ್ವಾ ಚ ವಿದುರಂ ಪ್ರಾಪ್ತಂ ರಾಜ್ಞಾ ಚ ಪರಿಸಾಂತ್ವಿತಂ।
03008001c ಧೃತರಾಷ್ಟ್ರಾತ್ಮಜೋ ರಾಜಾ ಪರ್ಯತಪ್ಯತ ದುರ್ಮತಿಃ।।
ವೈಶಂಪಾಯನನು ಹೇಳಿದನು: “ವಿದುರನು ಹಿಂದಿರುಗಿ ಬಂದಿದ್ದಾನೆ ಮತ್ತು ರಾಜನು ಅವನನ್ನು ಸಂತವಿಸಿದ್ದಾನೆ ಎಂದು ಕೇಳಿದ ಧೃತರಾಷ್ಟ್ರಾತ್ಮಜ ದುರ್ಮತಿ ರಾಜನು ಪರಿತಪಿಸಿದನು.
03008002a ಸ ಸೌಬಲಂ ಸಮಾನಾಯ್ಯ ಕರ್ಣದುಃಶಾಸನಾವಪಿ।
03008002c ಅಬ್ರವೀದ್ವಚನಂ ರಾಜಾ ಪ್ರವಿಶ್ಯಾಬುದ್ಧಿಜಂ ತಮಃ।।
ಅವನು ಸೌಬಲ, ಕರ್ಣ ಮತ್ತು ದುಃಶಾಸರನ್ನು ಕರೆಯಿಸಿ ತನ್ನ ಬುದ್ಧಿಯಿಂದ ಹುಟ್ಟಿದ ಕತ್ತಲೆಯನ್ನು ಪ್ರವೇಶಿಸುತ್ತಾ ಈ ಮಾತುಗಳನ್ನಾಡಿದನು:
03008003a ಏಷ ಪ್ರತ್ಯಾಗತೋ ಮಂತ್ರೀ ಧೃತರಾಷ್ಟ್ರಸ್ಯ ಸಮ್ಮತಃ।
03008003c ವಿದುರಃ ಪಾಂಡುಪುತ್ರಾಣಾಂ ಸುಹೃದ್ವಿದ್ವಾನ್ ಹಿತೇ ರತಃ।।
“ಪಾಂಡುಪುತ್ರರ ಹಿತರತನಾಗಿರುವ ಮತ್ತು ಅವರ ಬುದ್ಧಿವಂತ ಮಿತ್ರನಾಗಿರುವ ಮಂತ್ರಿ ವಿದುರನು ಧೃತರಾಷ್ಟ್ರನ ಸಮ್ಮತಿಯಂತೆ ಹಿಂದಿರುಗಿ ಬಂದಿದ್ದಾನೆ.
03008004a ಯಾವದಸ್ಯ ಪುನರ್ಬುದ್ಧಿಂ ವಿದುರೋ ನಾಪಕರ್ಷತಿ।
03008004c ಪಾಂಡವಾನಯನೇ ತಾವನ್ಮಂತ್ರಯಧ್ವಂ ಹಿತಂ ಮಮ।।
ವಿದುರನು ಪಾಂಡವರನ್ನು ಹಿಂದೆ ಕರೆಯಿಸಲು ರಾಜನ ಮನಸ್ಸನ್ನು ಪುನಃ ಬದಲಾಯಿಸದೇ ಇರುವಂತೆ ನನ್ನ ಹಿತದಲ್ಲಿ ಏನಾದರೂ ಸಲಹೆ ಮಾಡಿರಿ.
03008005a ಅಥ ಪಶ್ಯಾಮ್ಯಹಂ ಪಾರ್ಥಾನ್ಪ್ರಾಪ್ತಾನಿಹ ಕಥಂ ಚನ।
03008005c ಪುನಃ ಶೋಷಂ ಗಮಿಷ್ಯಾಮಿ ನಿರಾಸುರ್ನಿರವಗ್ರಹಃ।।
ಪಾರ್ಥರು ಎಂದಾದರೂ ಇಲ್ಲಿಗೆ ಹಿಂದಿರುಗುವುದನ್ನು ನೋಡಿದರೆ ನಾನು ಪುನಃ ಜೀವವಿಲ್ಲದವನಂತೆ, ಸಾರವಿಲ್ಲದವನಂತೆ ಒಣಗಿ ಹೋಗುತ್ತೇನೆ.
03008006a ವಿಷಮುದ್ಬಂಧನಂ ವಾಪಿ ಶಸ್ತ್ರಮಗ್ನಿಪ್ರವೇಶನಂ।
03008006c ಕರಿಷ್ಯೇ ನ ಹಿ ತಾನೃದ್ಧಾನ್ಪುನರ್ದ್ರಷ್ಟುಮಿಹೋತ್ಸಹೇ।।
ಅವರು ಇಲ್ಲಿಗೆ ಪುನಃ ಬಂದು ಅಭಿವೃದ್ಧಿ ಹೊಂದುತ್ತಾರಾದರೆ, ಅದನ್ನು ಸಹಿಸಿಕೊಳ್ಳಲಾರದೇ ನಾನು ವಿಷವನ್ನು ಸೇವಿಸುತ್ತೇನೆ ಅಥವಾ ನೇಣು ಹಾಕಿಕೊಳ್ಳುತ್ತೇನೆ ಅಥವಾ ಬೆಂಕಿಯಲ್ಲಿ ಬೀಳುತ್ತೇನೆ.”
03008007 ಶಕುನಿರುವಾಚ।
03008007a ಕಿಂ ಬಾಲಿಷಾಂ ಮತಿಂ ರಾಜನ್ನಾಸ್ಥಿತೋಽಸಿ ವಿಶಾಂ ಪತೇ।
03008007c ಗತಾಸ್ತೇ ಸಮಯಂ ಕೃತ್ವಾ ನೈತದೇವಂ ಭವಿಷ್ಯತಿ।।
ಶಕುನಿಯು ಹೇಳಿದನು: “ವಿಶಾಂಪತೇ! ರಾಜನ್! ಏಕೆ ಹೀಗೆ ಬಾಲಿಷವಾಗಿ ಯೋಚಿಸುತ್ತಿರುವೆ? ಒಪ್ಪಂದವನ್ನು ಮಾಡಿಕೊಂಡು ಹೊರಟು ಹೋದ ಅವರು ಎಂದೂ ಹಿಂದಿರುಗುವುದಿಲ್ಲ.
03008008a ಸತ್ಯವಾಕ್ಯೇ ಸ್ಥಿತಾಃ ಸರ್ವೇ ಪಾಂಡವಾ ಭರತರ್ಷಭ।
03008008c ಪಿತುಸ್ತೇ ವಚನಂ ತಾತ ನ ಗ್ರಹೀಷ್ಯಂತಿ ಕರ್ಹಿ ಚಿತ್।।
ಭರತರ್ಷಭ! ಪಾಂಡವರೆಲ್ಲರೂ ಸತ್ಯವಾಕ್ಯದಲ್ಲಿ ನಿಂತವರು. ತಾತ! ನಿನ್ನ ತಂದೆಯ ಮಾತನ್ನು ಯಾವ ಕಾರಣಕ್ಕೂ ಅವರು ಸ್ವೀಕರಿಸುವುದಿಲ್ಲ.
03008009a ಅಥ ವಾ ತೇ ಗ್ರಹೀಷ್ಯಂತಿ ಪುನರೇಷ್ಯಂತಿ ವಾ ಪುರಂ।
03008009c ನಿರಸ್ಯ ಸಮಯಂ ಭೂಯಃ ಪಣೋಽಸ್ಮಾಕಂ ಭವಿಷ್ಯತಿ।।
ಅಥವಾ ಒಂದು ವೇಳೆ ಅವರು ಅವನ ಮಾತನ್ನು ಸ್ವೀಕರಿಸಿ ಪುನಃ ಪುರಕ್ಕೆ ಮರಳಿದರೆ ಅವರು ಒಪ್ಪಂದವನ್ನು ಮುರಿದುದಕ್ಕಾಗಿ ಅವರೊಂದಿಗೆ ಇನ್ನೊಮ್ಮೆ ಪಣವನ್ನಿಟ್ಟು ಜೂಜಾಡಬಹುದು.
03008010a ಸರ್ವೇ ಭವಾಮೋ ಮಧ್ಯಸ್ಥಾ ರಾಜ್ಞಶ್ಚಂದಾನುವರ್ತಿನಃ।
03008010c ಚಿದ್ರಂ ಬಹು ಪ್ರಪಶ್ಯಂತಃ ಪಾಂಡವಾನಾಂ ಸುಸಂವೃತಾಃ।।
ನಾವೆಲ್ಲರೂ ರಾಜನ ಅನುವರ್ತಿಗಳಂತಿದ್ದು ತಟಸ್ಥರಾಗಿರೋಣ ಮತ್ತು ಪಾಂಡವರನ್ನು ಸುತ್ತುವರೆದು ಅವರನ್ನು ಕಾಯುತ್ತಿರೋಣ.”
03008011 ದುಃಶಾಸನ ಉವಾಚ।
03008011a ಏವಮೇತನ್ಮಹಾಪ್ರಾಜ್ಞ ಯಥಾ ವದಸಿ ಮಾತುಲ।
03008011c ನಿತ್ಯಂ ಹಿ ಮೇ ಕಥಯತಸ್ತವ ಬುದ್ಧಿರ್ಹಿ ರೋಚತೇ।।
ದುಃಶಾಸನನು ಹೇಳಿದನು: “ಮಾವ! ಮಹಾಪ್ರಾಜ್ಞ! ನೀನು ಹೇಳಿದ್ದುದು ಸರಿಯಾಗಿಯೇ ಇದೆ. ನಿನ್ನ ಮನಸ್ಸಿನಲ್ಲಿರುವುದನ್ನು ನೀನು ಹೇಳಿದಾಗಲೆಲ್ಲ ನನಗೆ ಹಿತವೆನಿಸುತ್ತದೆ.”
03008012 ಕರ್ಣ ಉವಾಚ।
03008012a ಕಾಮಮೀಕ್ಷಾಮಹೇ ಸರ್ವೇ ದುರ್ಯೋಧನ ತವೇಪ್ಸಿತಂ।
03008012c ಐಕಮತ್ಯಂ ಹಿ ನೋ ರಾಜನ್ಸರ್ವೇಷಾಮೇವ ಲಕ್ಷ್ಯತೇ।।
ಕರ್ಣನು ಹೇಳಿದನು: “ದುರ್ಯೋಧನ! ನೀನು ಬಯಸಿದ್ದುದನ್ನೇ ನಾವೆಲ್ಲರೂ ಬಯಸುತ್ತೇವೆ. ರಾಜನ್! ನಮ್ಮಲ್ಲಿ ಎಲ್ಲರಲ್ಲಿಯೂ ಒಂದೇ ಮತವಿರುವಂತೆ ತೋರುತ್ತದೆ.””
03008013 ವೈಶಂಪಾಯನ ಉವಾಚ।
03008013a ಏವಮುಕ್ತಸ್ತು ಕರ್ಣೇನ ರಾಜಾ ದುರ್ಯೋಧನಸ್ತದಾ।
03008013c ನಾತಿಹೃಷ್ಟಮನಾಃ ಕ್ಷಿಪ್ರಮಭವತ್ಸ ಪರಾಙ್ಮುಖಃ।।
ವೈಶಂಪಾಯನನು ಹೇಳಿದನು: “ಕರ್ಣನು ಹೀಗೆ ಹೇಳಲು ರಾಜ ದುರ್ಯೋಧನನು ಸಂತೋಷಗೊಳ್ಳದೇ ತಕ್ಷಣವೇ ತನ್ನ ಮುಖವನ್ನು ತಿರುಗಿಸಿದನು.
03008014a ಉಪಲಭ್ಯ ತತಃ ಕರ್ಣೋ ವಿವೃತ್ಯ ನಯನೇ ಶುಭೇ।
03008014c ರೋಷಾದ್ದುಃಶಾಸನಂ ಚೈವ ಸೌಬಲೇಯಂ ಚ ತಾವುಭೌ।।
03008015a ಉವಾಚ ಪರಮಕ್ರುದ್ಧ ಉದ್ಯಮ್ಯಾತ್ಮಾನಮಾತ್ಮನಾ।
03008015c ಅಹೋ ಮಮ ಮತಂ ಯತ್ತನ್ನಿಬೋಧತ ನರಾಧಿಪಾಃ।।
ಇದನ್ನು ನೋಡಿದ ಕರ್ಣನು ತನ್ನ ಶುಭಕಣ್ಣುಗಳನ್ನು ದೊಡ್ಡದು ಮಾಡಿ ಪರಮ ಕೃದ್ಧನಾಗಿ ರೋಷದಿಂದ ತನ್ನನ್ನು ತಾನೇ ಉದ್ರೇಕಿಸಿಕೊಂಡು ದುಃಶಾಸನ ಮತ್ತು ಸೌಬಲರಿಬ್ಬರನ್ನೂ ಉದ್ದೇಶಿಸಿ ಹೇಳಿದನು: “ಅಹೋ! ನರಾಧಿಪರೇ! ಇದರ ಕುರಿತು ನನ್ನ ವಿಚಾರವೇನು ಎನ್ನುವುದನ್ನು ಕೇಳಿ!
03008016a ಪ್ರಿಯಂ ಸರ್ವೇ ಚಿಕೀರ್ಷಾಮೋ ರಾಜ್ಞಃ ಕಿಂಕರಪಾಣಯಃ।
03008016c ನ ಚಾಸ್ಯ ಶಕ್ನುಮಃ ಸರ್ವೇ ಪ್ರಿಯೇ ಸ್ಥಾತುಮತಂದ್ರಿತಾಃ।।
03008017a ವಯಂ ತು ಶಸ್ತ್ರಾಣ್ಯಾದಾಯ ರಥಾನಾಸ್ಥಾಯ ದಂಶಿತಾಃ।
03008017c ಗಚ್ಚಾಮಃ ಸಹಿತಾ ಹಂತುಂ ಪಾಂಡವಾನ್ವನಗೋಚರಾನ್।।
ಒಟ್ಟಿಗೇ ನಾವು ಶಸ್ತ್ರಗಳನ್ನು ತೆಗೆದುಕೊಂಡು ಕವಚಗಳನ್ನು ಧರಿಸಿ ರಥಗಳನ್ನೇರಿ ವನದಲ್ಲಿ ತಿರುಗುತ್ತಿರುವ ಪಾಂಡವರನ್ನು ಕೊಲ್ಲಲು ಹೋಗೋಣ!
03008018a ತೇಷು ಸರ್ವೇಷು ಶಾಂತೇಷು ಗತೇಷ್ವವಿದಿತಾಂ ಗತಿಂ।
03008018c ನಿರ್ವಿವಾದಾ ಭವಿಷ್ಯಂತಿ ಧಾರ್ತರಾಷ್ಟ್ರಾಸ್ತಥಾ ವಯಂ।।
ಅವರೆಲ್ಲರೂ ಯಾರಿಗೂ ತಿಳಿಯದ ಮಾರ್ಗದಲ್ಲಿ ಹೋಗಿ ಶಾಂತರಾದ ನಂತರ ಧೃತರಾಷ್ಟ್ರ ಮತ್ತು ನಾವು ಪ್ರತಿಸ್ಪರ್ಧಿಗಳಿಲ್ಲದೇ ಇರಬಹುದು.
03008019a ಯಾವದೇವ ಪರಿದ್ಯೂನಾ ಯಾವಚ್ಶೋಕಪರಾಯಣಾಃ।
03008019c ಯಾವನ್ಮಿತ್ರವಿಹೀನಾಶ್ಚ ತಾವಚ್ಶಕ್ಯಾ ಮತಂ ಮಮ।।
ಎಲ್ಲಿಯವರೆಗೆ ಅವರು ದೀನರಾಗಿರುತ್ತಾರೋ, ಎಲ್ಲಿಯವರೆಗೆ ಅವರು ದುಃಖಿತರಾಗಿರುತ್ತಾರೋ, ಮತ್ತು ಎಲ್ಲಿಯವರೆಗೆ ಅವರು ಮಿತ್ರವಿಹೀನರಾಗಿರುತ್ತಾರೋ ಅಲ್ಲಿಯವರೆಗೆ ನಾವು ಅವರನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ನನ್ನ ಅಭಿಪ್ರಾಯ.”
03008020a ತಸ್ಯ ತದ್ವಚನಂ ಶ್ರುತ್ವಾ ಪೂಜಯಂತಃ ಪುನಃ ಪುನಃ।
03008020c ಬಾಢಮಿತ್ಯೇವ ತೇ ಸರ್ವೇ ಪ್ರತ್ಯೂಚುಃ ಸೂತಜಂ ತದಾ।।
ಅವನ ಈ ಮಾತುಗಳನ್ನು ಕೇಳಿ ಅವನನ್ನು ಪುನಃ ಪುನಃ “ಅದು ಹೌದು!” ಎಂದು ಹೇಳುತ್ತಾ ಎಲ್ಲರೂ ಆ ಸೂತಪುತ್ರನನ್ನು ಗೌರವಿಸಿದರು.
03008021a ಏವಮುಕ್ತ್ವಾ ತು ಸಂಕ್ರುದ್ಧಾ ರಥೈಃ ಸರ್ವೇ ಪೃಥಕ್ ಪೃಥಕ್।
03008021c ನಿರ್ಯಯುಃ ಪಾಂಡವಾನ್ ಹಂತುಂ ಸಂಘಶಃ ಕೃತನಿಶ್ಚಯಾಃ।।
ಹೀಗೆ ಹೇಳಿ ಸಂಕೃದ್ಧರಾದ ಅವರೆಲ್ಲರೂ ತಮ್ಮ ತಮ್ಮ ರಥಗಳನ್ನೇರಿ ಪಾಂಡವರನ್ನು ಕೊಲ್ಲುವುದಕ್ಕೆ ನಿರ್ಧರಿಸಿ ಒಟ್ಟಿಗೆ ಹೊರಟರು.
03008022a ತಾನ್ಪ್ರಸ್ಥಿತಾನ್ಪರಿಜ್ಞಾಯ ಕೃಷ್ಣದ್ವೈಪಾಯನಸ್ತದಾ।
03008022c ಆಜಗಾಮ ವಿಶುದ್ಧಾತ್ಮಾ ದೃಷ್ಟ್ವಾ ದಿವ್ಯೇನ ಚಕ್ಷುಷಾ।।
ಅವರು ಹೊರಟಿದ್ದುದನ್ನು ತನ್ನ ದಿವ್ಯ ದೃಷ್ಟಿಯಿಂದ ಕಂಡು ತಿಳಿದ ವಿಶುದ್ಧಾತ್ಮ ಕೃಷ್ಣ ದ್ವೈಪಾಯನನು ಅಲ್ಲಿಗೆ ಬಂದನು.
03008023a ಪ್ರತಿಷಿಧ್ಯಾಥ ತಾನ್ಸರ್ವಾನ್ಭಗವಾಽಲ್ಲೋಕಪೂಜಿತಃ।
03008023c ಪ್ರಜ್ಞಾಚಕ್ಷುಷಮಾಸೀನಮುವಾಚಾಭ್ಯೇತ್ಯ ಸತ್ವರಃ।।
ಲೋಕ ಪೂಜಿತ ಆ ಭಗವಾನನು ಅವರೆಲ್ಲರನ್ನೂ ತಡೆಹಿಡಿದು ನಿಲ್ಲಿಸಿ, ಅವಸರ ಮಾಡಿ ಕುಳಿತಿದ್ದ ಪ್ರಜ್ಞಾಚಕ್ಷುವಿನಲ್ಲಿಗೆ ಬಂದು ಹೇಳಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ವ್ಯಾಸಾಗಮನೇ ಅಷ್ಠಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ವ್ಯಾಸಾಗಮನ ಎನ್ನುವ ಎಂಟನೆಯ ಅಧ್ಯಾಯವು.