007 ವಿದುರಪ್ರತ್ಯಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಅರಣ್ಯಕ ಪರ್ವ

ಅಧ್ಯಾಯ 7

ಸಾರ

ಪರಿತಪಿಸಿದ ಧೃತರಾಷ್ಟ್ರನು ವಿದುರನನ್ನು ಹಿಂದೆ ಕರೆದುಕೊಂಡು ಬರಲು ಸಂಜಯನನ್ನು ಕಳುಹಿಸುವುದು (1-10). ವಿದುರನು ಹಿಂದಿರುಗಿ ಧೃತರಾಷ್ಟ್ರನನ್ನು ಸೇರುವುದು (11-24).

03007001 ವೈಶಂಪಾಯನ ಉವಾಚ।
03007001a ಗತೇ ತು ವಿದುರೇ ರಾಜನ್ನಾಶ್ರಮಂ ಪಾಂಡವಾನ್ಪ್ರತಿ।
03007001c ಧೃತರಾಷ್ಟ್ರೋ ಮಹಾಪ್ರಾಜ್ಞಃ ಪರ್ಯತಪ್ಯತ ಭಾರತ।।

ವೈಶಂಪಾಯನನು ಹೇಳಿದನು: “ರಾಜನ್! ಭಾರತ! ವಿದುರನು ಪಾಂಡವರ ಆಶ್ರಮದ ಬಳಿ ಹೋದನಂತರ ಮಹಾಪ್ರಾಜ್ಞ ಧೃತರಾಷ್ಟ್ರನು ಪರಿತಪಿಸಿದನು.

03007002a ಸ ಸಭಾದ್ವಾರಮಾಗಮ್ಯ ವಿದುರಸ್ಮಾರಮೋಹಿತಃ।
03007002c ಸಮಕ್ಷಂ ಪಾರ್ಥಿವೇಂದ್ರಾಣಾಂ ಪಪಾತಾವಿಷ್ಟಚೇತನಃ।।

ಅವನು ಸಭಾದ್ವಾರದ ಕಡೆ ಹೋಗಿ ವಿದುರನ ನೆನಪು ಬಂದು ಮೋಹಿತನಾಗಿ ಪಾರ್ಥಿವೇಂದ್ರರ ಸಮಕ್ಷಮದಲ್ಲಿಯೇ ಮೂರ್ಛೆತಪ್ಪಿ ಬಿದ್ದನು.

03007003a ಸ ತು ಲಬ್ಧ್ವಾ ಪುನಃ ಸಂಜ್ಞಾಂ ಸಮುತ್ಥಾಯ ಮಹೀತಲಾತ್।
03007003c ಸಮೀಪೋಪಸ್ಥಿತಂ ರಾಜಾ ಸಂಜಯಂ ವಾಕ್ಯಮಬ್ರವೀತ್।।

ಪುನಃ ಎಚ್ಚೆತ್ತು ನೆಲದಿಂದ ಮೇಲೆದ್ದು ಆ ರಾಜನು ಹತ್ತಿರದಲ್ಲಿ ನಿಂತಿದ್ದ ಸಂಜಯನಿಗೆ ಹೇಳಿದನು:

03007004a ಭ್ರಾತಾ ಮಮ ಸುಹೃಚ್ಚೈವ ಸಾಕ್ಷಾದ್ಧರ್ಮ ಇವಾಪರಃ।
03007004c ತಸ್ಯ ಸ್ಮೃತ್ವಾದ್ಯ ಸುಭೃಶಂ ಹೃದಯಂ ದೀರ್ಯತೀವ ಮೇ।।

“ನನ್ನ ತಮ್ಮ ಮಿತ್ರನು ಸಾಕ್ಷಾತ್ ಧರ್ಮನಂತಿದ್ದಾನೆ. ಅವನನ್ನು ನೆನಪಿಸಿಕೊಂಡರೆ ನನ್ನ ಹೃದಯವು ಹರಿದುಹೋಗುತ್ತಿದೆ.

03007005a ತಮಾನಯಸ್ವ ಧರ್ಮಜ್ಞಂ ಮಮ ಭ್ರಾತರಮಾಶು ವೈ।
03007005c ಇತಿ ಬ್ರುವನ್ಸ ನೃಪತಿಃ ಕರುಣಂ ಪರ್ಯದೇವಯತ್।।

ಆದಷ್ಟು ಬೇಗನೇ ನನ್ನ ಧರ್ಮಜ್ಞ ತಮ್ಮನನ್ನು ಹಿಂದೆ ಕರೆದು ತಾ!” ಇದನ್ನು ಹೇಳಿದ ಆ ನೃಪತಿಯು ಕರುಣೆಯಿಂದ ಪರಿವೇದಿಸಿದನು.

03007006a ಪಶ್ಚಾತ್ತಾಪಾಭಿಸಂತಪ್ತೋ ವಿದುರಸ್ಮಾರಕರ್ಶಿತಃ।
03007006c ಭ್ರಾತೃಸ್ನೇಹಾದಿದಂ ರಾಜನ್ಸಂಜಯಂ ವಾಕ್ಯಮಬ್ರವೀತ್।।

ರಾಜನ್! ಅನಂತರ, ಪಾಶ್ಚಾತ್ತಾಪದಿಂದ ಬೆಂದು ವಿದುರನ ನೆನಪಿನಿಂದ ಸೆಳೆಯಲ್ಪಟ್ಟು ಭ್ರಾತೃಸ್ನೇಹದಿಂದ ಸಂಜಯನಿಗೆ ಈ ಮಾತುಗಳನ್ನಾಡಿದನು:

03007007a ಗಚ್ಚ ಸಂಜಯ ಜಾನೀಹಿ ಭ್ರಾತರಂ ವಿದುರಂ ಮಮ।
03007007c ಯದಿ ಜೀವತಿ ರೋಷೇಣ ಮಯಾ ಪಾಪೇನ ನಿರ್ಧುತಃ।।

“ಹೋಗು ಸಂಜಯ! ನನ್ನ ತಮ್ಮ ವಿದುರನನ್ನು ತಿಳಿದಿದ್ದೇನೆ. ಕೋಪದಿಂದ ಹೊಡೆದ ನನ್ನ ಪಾಪಿಷ್ಟ ಪ್ರಹಾರದ ನಂತರವೂ ವಿದುರನು ಜೀವಂತವಿದ್ದಾನೆ!

03007008a ನ ಹಿ ತೇನ ಮಮ ಭ್ರಾತ್ರಾ ಸುಸೂಕ್ಷ್ಮಮಪಿ ಕಿಂ ಚನ।
03007008c ವ್ಯಲೀಕಂ ಕೃತಪೂರ್ವಂ ಮೇ ಪ್ರಾಜ್ಞೇನಾಮಿತಬುದ್ಧಿನಾ।।

ನನ್ನ ತಮ್ಮನು ಎಂದೂ ಯಾವುದೇ ಸೂಕ್ಷ್ಮವಾದ ತಪ್ಪು-ಸುಳ್ಳುಗಳನ್ನೂ ಆಚರಿಸಿದವನಲ್ಲ!

03007009a ಸ ವ್ಯಲೀಕಂ ಕಥಂ ಪ್ರಾಪ್ತೋ ಮತ್ತಃ ಪರಮಬುದ್ಧಿಮಾನ್।
03007009c ನ ಜಹ್ಯಾಜ್ಜೀವಿತಂ ಪ್ರಾಜ್ಞಸ್ತಂ ಗಚ್ಚಾನಯ ಸಂಜಯ।।

ಆ ಪರಮಬುದ್ಧಿವಂತನು ಈಗ ಏಕೆ ನನ್ನ ಕಾರಣದಿಂದ ತಪ್ಪುಕೆಲಸ ಮಾಡಿದವನೆಂದಾಗಬೇಕು? ಸಂಜಯ! ಆ ಪ್ರಾಜ್ಞನು ತನ್ನ ಜೀವವನ್ನು ತೆಗೆದುಕೊಳ್ಳಬಾರದು. ಹೋಗಿ ಕರೆದುಕೊಂಡು ಬಾ!”

03007010a ತಸ್ಯ ತದ್ವಚನಂ ಶ್ರುತ್ವಾ ರಾಜ್ಞಸ್ತಮನುಮಾನ್ಯ ಚ।
03007010c ಸಂಜಯೋ ಬಾಢಮಿತ್ಯುಕ್ತ್ವಾ ಪ್ರಾದ್ರವತ್ಕಾಮ್ಯಕಂ ವನಂ।।

ರಾಜನ ಆ ಮಾತುಗಳನ್ನು ಕೇಳಿ, ಅವುಗಳನ್ನು ಅನುಮೋದಿಸುತ್ತಾ, ಸಂಜಯನು ಸರಿ ಎಂದು ಹೇಳಿ ಕಾಮ್ಯಕವನದ ಕಡೆ ತ್ವರೆಮಾಡಿದನು.

03007011a ಸೋಽಚಿರೇಣ ಸಮಾಸಾದ್ಯ ತದ್ವನಂ ಯತ್ರ ಪಾಂಡವಾಃ।
03007011c ರೌರವಾಜಿನಸಂವೀತಂ ದದರ್ಶಾಥ ಯುಧಿಷ್ಠಿರಂ।।
03007012a ವಿದುರೇಣ ಸಹಾಸೀನಂ ಬ್ರಾಹ್ಮಣೈಶ್ಚ ಸಹಸ್ರಶಃ।
03007012c ಭ್ರಾತೃಭಿಶ್ಚಾಭಿಸಂಗುಪ್ತಂ ದೇವೈರಿವ ಶತಕ್ರತುಂ।।

ಸ್ವಲ್ಪವೇ ಸಮಯದಲ್ಲಿ ಅವನು ಪಾಂಡವರಿರುವ ಆ ವನವನ್ನು ಸೇರಿ ಅಲ್ಲಿ ರುರುಜಿನಗಳನ್ನು ಧರಿಸಿ, ಸಹಸ್ರಾರು ಬ್ರಾಹ್ಮಣರು, ವಿದುರ ಮತ್ತು ಸಹೋದರರೊಂದಿಗೆ, ದೇವತೆಗಳಿಂದ ಸುತ್ತುವರೆಯಲ್ಪಟ್ಟ ಶತಕ್ರತುವಿನಂತೆ, ಕುಳಿತಿದ್ದ ಯುಧಿಷ್ಠಿರನನ್ನು ಕಂಡನು.

03007013a ಯುಧಿಷ್ಠಿರಮಥಾಭ್ಯೇತ್ಯ ಪೂಜಯಾಮಾಸ ಸಂಜಯಃ।
03007013c ಭೀಮಾರ್ಜುನಯಮಾಂಶ್ಚಾಪಿ ತದರ್ಹಂ ಪ್ರತ್ಯಪದ್ಯತ।।

ಯುಧಿಷ್ಠಿರನನ್ನು ತಲುಪಿ ಸಂಜಯನು ಅವನನ್ನು ಗೌರವಿಸಿದನು. ಮತ್ತು ಭೀಮಾರ್ಜುನರನ್ನೂ ಯಮಳರನ್ನೂ ಅವರಿಗೆ ತಕ್ಕಂತೆ ಅಭಿನಂದಿಸಿದನು.

03007014a ರಾಜ್ಞಾ ಪೃಷ್ಟಃ ಸ ಕುಶಲಂ ಸುಖಾಸೀನಶ್ಚ ಸಂಜಯಃ।
03007014c ಶಶಂಸಾಗಮನೇ ಹೇತುಮಿದಂ ಚೈವಾಬ್ರವೀದ್ವಚಃ।।

ರಾಜನು ಕುಶಲವನ್ನು ಕೇಳಿದನು ಮತ್ತು ಸಂಜಯನು ಸುಖಾಸೀನನಾಗಲು ತಾನು ಬಂದಿರುವ ಕಾರಣವೇನೆಂದು ಹೇಳಿದನು:

03007015a ರಾಜಾ ಸ್ಮರತಿ ತೇ ಕ್ಷತ್ತರ್ಧೃತರಾಷ್ಟ್ರೋಽಂಬಿಕಾಸುತಃ।
03007015c ತಂ ಪಶ್ಯ ಗತ್ವಾ ತ್ವಂ ಕ್ಷಿಪ್ರಂ ಸಂಜೀವಯ ಚ ಪಾರ್ಥಿವಂ।।

“ಕ್ಷತ್ತ! ಅಂಬಿಕಾಸುತ ರಾಜ ಧೃತರಾಷ್ಟ್ರನು ನಿನ್ನನ್ನು ನೆನಪಿಸಿಕೊಂಡಿದ್ದಾನೆ. ಬೇಗನೇ ಹೋಗಿ ಅವನನ್ನು ಕಂಡು ಆ ಪಾರ್ಥಿವನನ್ನು ಪುನರ್ಜೀವಗೊಳಿಸು!

03007016a ಸೋಽನುಮಾನ್ಯ ನರಶ್ರೇಷ್ಠಾನ್ಪಾಂಡವಾನ್ಕುರುನಂದನಾನ್।
03007016c ನಿಯೋಗಾದ್ರಾಜಸಿಂಹಸ್ಯ ಗಂತುಮರ್ಹಸಿ ಮಾನದ।।

ಮಾನದ! ನರಶ್ರೇಷ್ಠ ಕುರುನಂದನ ಪಾಂಡವರಿಂದ ಬೀಳ್ಕೊಂಡು ತಕ್ಷಣವೇ ರಾಜಸಿಂಹನ ಬಳಿ ಹೋಗಬೇಕು.”

03007017a ಏವಮುಕ್ತಸ್ತು ವಿದುರೋ ಧೀಮಾನ್ಸ್ವಜನವತ್ಸಲಃ।
03007017c ಯುಧಿಷ್ಠಿರಸ್ಯಾನುಮತೇ ಪುನರಾಯಾದ್ಗಜಾಹ್ವಯಂ।।

ಇದನ್ನು ಕೇಳಿ ಧೀಮಂತ, ಸ್ವಜನವತ್ಸಲ ವಿದುರನು ಯುಧಿಷ್ಠಿರನಿಂದ ಬೀಳ್ಕೊಂಡು ಪುನಃ ಗಜಾಹ್ವಯಕ್ಕೆ ಹಿಂದಿರುಗಿದನು.

03007018a ತಮಬ್ರವೀನ್ಮಹಾಪ್ರಾಜ್ಞಂ ಧೃತರಾಷ್ಟ್ರಃ ಪ್ರತಾಪವಾನ್।
03007018c ದಿಷ್ಟ್ಯಾ ಪ್ರಾಪ್ತೋಽಸಿ ಧರ್ಮಜ್ಞ ದಿಷ್ಟ್ಯಾ ಸ್ಮರಸಿ ಮೇಽನಘ।।

ಮಹಾಪ್ರಾಜ್ಞ ಪ್ರತಾಪವಾನ್ ಧೃತರಾಷ್ಟ್ರನು ಅವನಿಗೆ ಹೇಳಿದನು: “ಧರ್ಮಜ್ಞ! ಆನಘ! ಒಳ್ಳೆಯದಾಯಿತು ನೀನು ಹಿಂದಿರುಗಿ ಬಂದೆ! ಒಳ್ಳೆಯದಾಯಿತು ನೀನು ನನ್ನನ್ನು ನೆನಪಿಸಿಕೊಂಡೆ!

03007019a ಅದ್ಯ ರಾತ್ರೌ ದಿವಾ ಚಾಹಂ ತ್ವತ್ಕೃತೇ ಭರತರ್ಷಭ।
03007019c ಪ್ರಜಾಗರೇ ಪಪಶ್ಯಾಮಿ ವಿಚಿತ್ರಂ ದೇಹಮಾತ್ಮನಃ।।

ಭರತರ್ಷಭ! ನಿನ್ನಿಂದಾಗಿ ಇತ್ತೀಚೆಗೆ ದಿನ ರಾತ್ರಿಗಳಲ್ಲಿ ನಿದ್ದೆಯಿಲ್ಲದೇ ನನ್ನ ದೇಹದ ವಿಚಿತ್ರ ರೂಪವನ್ನು ಕಾಣುತ್ತಿದ್ದೇನೆ.”

03007020a ಸೋಽಂಕಮಾದಾಯ ವಿದುರಂ ಮೂರ್ಧ್ನ್ಯುಪಾಘ್ರಾಯ ಚೈವ ಹ।
03007020c ಕ್ಷಮ್ಯತಾಮಿತಿ ಚೋವಾಚ ಯದುಕ್ತೋಽಸಿ ಮಯಾ ರುಷಾ।।

ಅವನು ವಿದುರರನ್ನು ತನ್ನ ತೋಳುಗಳಿಂದ ಬಿಗಿದಪ್ಪಿ, ನೆತ್ತಿಯನ್ನು ಆಘ್ರಾಣಿಸಿ, “ರೋಷದಲ್ಲಿ ನಾನು ನಿನಗೆ ಹೇಳಿದುದನ್ನು ಕ್ಷಮಿಸು!” ಎಂದು ಕೇಳಿಕೊಂಡನು.

03007021 ವಿದುರ ಉವಾಚ।
03007021a ಕ್ಷಾಂತಮೇವ ಮಯಾ ರಾಜನ್ಗುರುರ್ನಃ ಪರಮೋ ಭವಾನ್।
03007021c ತಥಾ ಹ್ಯಸ್ಮ್ಯಾಗತಃ ಕ್ಷಿಪ್ರಂ ತ್ವದ್ದರ್ಶನಪರಾಯಣಃ।।

ವಿದುರನು ಹೇಳಿದನು: “ರಾಜನ್! ಅದನ್ನು ನಾನು ಕ್ಷಮಿಸಿಯಾಗಿದೆ. ನೀನೇ ನಮ್ಮ ಪರಮ ಗುರು. ನಿನ್ನನ್ನು ನೋಡಲೆಂದೇ ನಾನು ಕ್ಷಿಪ್ರವಾಗಿ ಇಲ್ಲಿಗೆ ಬಂದೆ.

03007022a ಭವಂತಿ ಹಿ ನರವ್ಯಾಘ್ರ ಪುರುಷಾ ಧರ್ಮಚೇತಸಃ।
03007022c ದೀನಾಭಿಪಾತಿನೋ ರಾಜನ್ನಾತ್ರ ಕಾರ್ಯಾ ವಿಚಾರಣಾ।।

ನರವ್ಯಾಘ್ರ! ರಾಜನ್! ಧರ್ಮಚೇತಸ ಪುರುಷರು ದೀನರು ಮತ್ತು ಕೆಳಗೆ ಬಿದ್ದವರ ಸಹಾಯಕ್ಕೆಂದು ಏನೂ ವಿಚಾರಮಾಡದೇ ಹೋಗುತ್ತಾರೆ.

03007023a ಪಾಂಡೋಃ ಸುತಾ ಯಾದೃಶಾ ಮೇ ತಾದೃಶಾ ಮೇ ಸುತಾಸ್ತವ।
03007023c ದೀನಾ ಇತಿ ಹಿ ಮೇ ಬುದ್ಧಿರಭಿಪನ್ನಾದ್ಯ ತಾನ್ಪ್ರತಿ।।

ಪಾಂಡುವಿನ ಮಕ್ಕಳು ನನಗೆ ಹೇಗೋ ಹಾಗೆ ನಿನ್ನ ಮಕ್ಕಳೂ ಕೂಡ. ಅವರು ಕಷ್ಟದಲ್ಲಿದ್ದಾರೆ ಎಂದು ನನ್ನ ಮನಸ್ಸು ಇಂದು ಅವರ ಜೊತೆಯಲ್ಲಿದೆ.””

03007024 ವೈಶಂಪಾಯನ ಉವಾಚ।
03007024a ಅನ್ಯೋನ್ಯಮನುನೀಯೈವಂ ಭ್ರಾತರೌ ತೌ ಮಹಾದ್ಯುತೀ।
03007024c ವಿದುರೋ ಧೃತರಾಷ್ಟ್ರಶ್ಚ ಲೇಭಾತೇ ಪರಮಾಂ ಮುದಂ।।

ವೈಶಂಪಾಯನನು ಹೇಳಿದನು: “ಈ ರೀತಿ ಅನ್ಯೋನ್ಯರ ಹತ್ತಿರ ಬಂದು ಆ ಇಬ್ಬರು ಮಹಾದ್ಯುತಿ ಸಹೋದರ ವಿದುರ-ಧೃತರಾಷ್ಟ್ರರು ಪರಮ ಸಂತೋಷವನ್ನು ಹೊಂದಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ವಿದುರಪ್ರತ್ಯಾಗಮನೇ ಸಪ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ವಿದುರಪ್ರತ್ಯಾಗಮನ ಎನ್ನುವ ಏಳನೆಯ ಅಧ್ಯಾಯವು.