ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಅರಣ್ಯಕ ಪರ್ವ
ಅಧ್ಯಾಯ 6
ಸಾರ
ಕಾಮ್ಯಕದಲ್ಲಿ ಆಗಮಿಸಿದ ವಿದುರನನ್ನು ಸಂಶಯಿಸಿದ ಪಾಂಡವರು ಬರಮಾಡಿಕೊಳ್ಳುವುದು (1-11). ಧೃತರಾಷ್ಟ್ರನಿಂದ ತ್ಯಕ್ತನಾಗಿ ನಿನ್ನ ಬಳಿ ಬಂದಿದ್ದೇನೆಂದು ವಿದುರನು ಯುಧಿಷ್ಠಿರನಿಗೆ ಹೇಳುವುದು (12-22).
03006001 ವೈಶಂಪಾಯನ ಉವಾಚ।
03006001a ಪಾಂಡವಾಸ್ತು ವನೇ ವಾಸಮುದ್ದಿಶ್ಯ ಭರತರ್ಷಭಾಃ।
03006001c ಪ್ರಯಯುರ್ಜಾಹ್ನವೀಕೂಲಾತ್ಕುರುಕ್ಷೇತ್ರಂ ಸಹಾನುಗಾಃ।।
ವೈಶಂಪಾಯನನು ಹೇಳಿದನು: “ಭರತರ್ಷಭ ಪಾಂಡವರಾದರೋ ವನದಲ್ಲಿ ವಾಸಿಸುವ ಉದ್ದೇಶದಿಂದ ಜಾಹ್ನವೀ ತಟದಿಂದ ತಮ್ಮ ಅನುಯಾಯಿಗಳ ಸಹಿತ ಕುರುಕ್ಷೇತ್ರದ ಕಡೆ ಪ್ರಯಾಣಿಸಿದರು.
03006002a ಸರಸ್ವತೀದೃಷದ್ವತ್ಯೌ ಯಮುನಾಂ ಚ ನಿಷೇವ್ಯ ತೇ।
03006002c ಯಯುರ್ವನೇನೈವ ವನಂ ಸತತಂ ಪಶ್ಚಿಮಾಂ ದಿಶಂ।।
ಸರಸ್ವತೀ, ದೃಷದ್ವತಿ ಮತ್ತು ಯಮುನೆಯನ್ನು ದಾಟಿ ವನದಿಂದ ವನಕ್ಕೆ ಹೋಗುತ್ತಾ ಸತತವಾಗಿ ಪಶ್ಚಿಮದಿಕ್ಕಿನಲ್ಲಿ ಪ್ರಯಾಣಮಾಡಿದರು.
03006003a ತತಃ ಸರಸ್ವತೀಕೂಲೇ ಸಮೇಷು ಮರುಧನ್ವಸು।
03006003c ಕಾಮ್ಯಕಂ ನಾಮ ದದೃಶುರ್ವನಂ ಮುನಿಜನಪ್ರಿಯಂ।।
ಆಗ ಸರಸ್ವತೀ ದಡದಲ್ಲಿ ಮರುಭೂಮಿಯ ಮಧ್ಯದಲ್ಲಿ ಕಾಮ್ಯಕ ಎಂಬ ಹೆಸರಿನ ಮುನಿಜನರಿಗೆ ಪ್ರಿಯವಾದ ವನವನ್ನು ನೋಡಿದರು.
03006004a ತತ್ರ ತೇ ನ್ಯವಸನ್ವೀರಾ ವನೇ ಬಹುಮೃಗದ್ವಿಜೇ।
03006004c ಅನ್ವಾಸ್ಯಮಾನಾ ಮುನಿಭಿಃ ಸಾಂತ್ವ್ಯಮಾನಾಶ್ಚ ಭಾರತ।।
ಭಾರತ! ಬಹಳಷ್ಟು ಮೃಗಗಳು ಮತ್ತು ದ್ವಿಜರು ವಾಸಿಸುತ್ತಿದ್ದ ಆ ವನದಲ್ಲಿ ಮುನಿಗಳಿಂದ ಸಾಂತ್ವನವನ್ನು ಪಡೆಯುತ್ತಾ ವೀರರು ನೆಲೆಸಿದರು.
03006005a ವಿದುರಸ್ತ್ವಪಿ ಪಾಂಡೂನಾಂ ತದಾ ದರ್ಶನಲಾಲಸಃ।
03006005c ಜಗಾಮೈಕರಥೇನೈವ ಕಾಮ್ಯಕಂ ವನಂ ಋದ್ಧಿಮತ್।।
ಆಗ ವಿದುರನೂ ಕೂಡ ಪಾಂಡವರನ್ನು ನೋಡುವ ಇಚ್ಛೆಯಿಂದ ಒಂಟಿ ರಥದಲ್ಲಿ ಸಮೃದ್ಧ ಕಾಮ್ಯಕ ವನಕ್ಕೆ ಆಗಮಿಸಿದನು.
03006006a ತತೋ ಯಾತ್ವಾ ವಿದುರಃ ಕಾನನಂ ತಚ್ ಚೀಘ್ರೈರಶ್ವೈರ್ವಾಹಿನಾ ಸ್ಯಂದನೇನ।
03006006c ದದರ್ಶಾಸೀನಂ ಧರ್ಮರಾಜಂ ವಿವಿಕ್ತೇ ಸಾರ್ಧಂ ದ್ರೌಪದ್ಯಾ ಭ್ರಾತೃಭಿರ್ಬ್ರಾಹ್ಮಣೈಶ್ಚ।।
ಶೀಘ್ರ ಅಶ್ವಗಳಿಂದ ಎಳೆಯಲ್ಪಟ್ಟ ವಾಹನದಿಂದ ವಿದುರನು ಆ ಕಾನನಕ್ಕೆ ಬಂದು ಏಕಾಂತ ಸ್ಥಳದಲ್ಲಿ ದ್ರೌಪದಿ, ಸಹೋದರರು ಮತ್ತು ಬ್ರಾಹ್ಮಣರೊಂದಿಗೆ ಕುಳಿತಿದ್ದ ಧರ್ಮರಾಜನನ್ನು ನೋಡಿದನು.
03006007a ತತೋಽಪಶ್ಯದ್ವಿದುರಂ ತೂರ್ಣಮಾರಾದ್ ಅಭ್ಯಾಯಾಂತಂ ಸತ್ಯಸಂಧಃ ಸ ರಾಜಾ।
03006007c ಅಥಾಬ್ರವೀದ್ಭ್ರಾತರಂ ಭೀಮಸೇನಂ ಕಿಂ ನು ಕ್ಷತ್ತಾ ವಕ್ಷ್ಯತಿ ನಃ ಸಮೇತ್ಯ।।
ದೂರದಿಂದಲೇ ವಿದುರನನ್ನು ನೋಡಿದ ಆ ಸತ್ಯಸಂಧ ರಾಜನು ಸಹೋದರ ಭೀಮಸೇನನನ್ನು ಹತ್ತಿರ ಕರೆದು ಕೇಳಿದನು: “ಭೇಟಿಯಾದಾಗ ಕ್ಷತ್ತನು ಏನು ಹೇಳಬಹುದು?
03006008a ಕಚ್ಚಿನ್ನಾಯಂ ವಚನಾತ್ಸೌಬಲಸ್ಯ ಸಮಾಹ್ವಾತಾ ದೇವನಾಯೋಪಯಾತಿ।
03006008c ಕಚ್ಚಿತ್ ಕ್ಷುದ್ರಃ ಶಕುನಿರ್ನಾಯುಧಾನಿ ಜೇಷ್ಯತ್ಯಸ್ಮಾನ್ಪುನರೇವಾಕ್ಷವತ್ಯಾಂ।।
ಸೌಬಲನು ಹೇಳಿಕಳುಹಿಸಿದಂತೆ ಇನ್ನೊಮ್ಮೆ ಜೂಜಿಗೆ ಕರೆಯಲು ಇಲ್ಲಿಗೆ ಬಂದಿರಬಹುದೇ? ದುಷ್ಟ ಶಕುನಿಯು ಇನ್ನೊಮ್ಮೆ ಜೂಜಿನಲ್ಲಿ ನಮ್ಮನ್ನು ಸೋಲಿಸಿ ನಮ್ಮ ಆಯುಧಗಳನ್ನು ಪಡೆಯಲು ಬಯಸಿರಬಹುದೇ?
03006009a ಸಮಾಹೂತಃ ಕೇನ ಚಿದಾದ್ರವೇತಿ ನಾಹಂ ಶಕ್ತೋ ಭೀಮಸೇನಾಪಯಾತುಂ।
03006009c ಗಾಂಡೀವೇ ವಾ ಸಂಶಯಿತೇ ಕಥಂ ಚಿದ್ ರಾಜ್ಯಪ್ರಾಪ್ತಿಃ ಸಂಶಯಿತಾ ಭವೇನ್ನಃ।।
ಯಾರಾದರೂ ಇಲ್ಲಿಗೆ ಬಾ ಎಂದು ಆಹ್ವಾನಿಸಿದರೆ ಇಲ್ಲ ಎಂದು ಹೇಳುವುದಕ್ಕೆ ನನಗಾಗುವುದಿಲ್ಲ ಭೀಮಸೇನ! ಆದರೂ ಹೇಗಾದರೂ ಯಾರಾದರೂ ಗಾಂಡೀವವನ್ನು ಪಣವಾಗಿ ಗೆದ್ದರೆ1 ನಮಗೆ ಪುನಃ ರಾಜ್ಯಪ್ರಾಪ್ತಿಯಾಗುವುದಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ.”
03006010a ತತ ಉತ್ಥಾಯ ವಿದುರಂ ಪಾಂಡವೇಯಾಃ ಪ್ರತ್ಯಗೃಹ್ಣನ್ನೃಪತೇ ಸರ್ವ ಏವ।
03006010c ತೈಃ ಸತ್ಕೃತಃ ಸ ಚ ತಾನಾಜಮೀಢೋ ಯಥೋಚಿತಂ ಪಾಂಡುಪುತ್ರಾನ್ಸಮೇಯಾತ್।।
ನೃಪತೇ! ಪಾಂಡವೇಯರೆಲ್ಲರೂ ಎದ್ದು ನಿಂತು ವಿದುರನನ್ನು ಬರಮಾಡಿಕೊಂಡರು. ಅವರಿಂದ ಸತ್ಕೃತನಾದ ಅಜಮೀಢ2ನು ಯಥೋಚಿತವಾಗಿ ಪಾಂಡುಪುತ್ರರೊಡನೆ ಕೂಡಿದನು.
03006011a ಸಮಾಶ್ವಸ್ತಂ ವಿದುರಂ ತೇ ನರರ್ಷಭಾಸ್ ತತೋಽಪೃಚ್ಚನ್ನಾಗಮನಾಯ ಹೇತುಂ।
03006011c ಸ ಚಾಪಿ ತೇಭ್ಯೋ ವಿಸ್ತರತಃ ಶಶಂಸ ಯಥಾವೃತ್ತೋ ಧೃತರಾಷ್ಟ್ರೋಽಂಬಿಕೇಯಃ।।
ವಿದುರನು ವಿಶ್ರಾಂತಿ ಪಡೆದ ನಂತರ ಆ ನರರ್ಷಭರು ಅವನು ಬಂದಿರುವ ಕಾರಣವನ್ನು ಕೇಳಿದರು. ಅವನಾದರೋ ಅವರಿಗೆ ಅಂಬಿಕೇಯ ಧೃತರಾಷ್ಟ್ರನು ನಡೆದುಕೊಂಡಿದುದರ ಕುರಿತು ವಿಸ್ತಾರವಾಗಿ ವಿವರಿಸಿದನು.
03006012 ವಿದುರ ಉವಾಚ।
03006012a ಅವೋಚನ್ಮಾಂ ಧೃತರಾಷ್ಟ್ರೋಽನುಗುಪ್ತಂ ಅಜಾತಶತ್ರೋ ಪರಿಗೃಹ್ಯಾಭಿಪೂಜ್ಯ।
03006012c ಏವಂ ಗತೇ ಸಮತಾಮಭ್ಯುಪೇತ್ಯ ಪಥ್ಯಂ ತೇಷಾಂ ಮಮ ಚೈವ ಬ್ರವೀಹಿ।।
ವಿದುರನು ಹೇಳಿದನು: “ಅಜಾತಶತ್ರು! ನನ್ನನ್ನು ಪರಿಪಾಲಿಸುವ ಧೃತರಾಷ್ಟ್ರನು ನನ್ನನ್ನು ಸ್ವಾಗತಿಸಿ ಗೌರವಿಸಿ ಹೇಳಿದನು: “ಹೀಗೆಲ್ಲ ನಡೆದುಹೋಗಿರಲು, ಇಬ್ಬರಿಗೂ ಸಮತೆಯನ್ನು ತೋರಿಸಿ, ಅವರಿಗೆ ಮತ್ತು ನಮಗೆ ಸರಿಯಾದುದು ಏನು ಹೇಳು!”
03006013a ಮಯಾಪ್ಯುಕ್ತಂ ಯತ್ ಕ್ಷಮಂ ಕೌರವಾಣಾಂ ಹಿತಂ ಪಥ್ಯಂ ಧೃತರಾಷ್ಟ್ರಸ್ಯ ಚೈವ।
03006013c ತದ್ವೈ ಪಥ್ಯಂ ತನ್ಮನೋ ನಾಭ್ಯುಪೈತಿ ತತಶ್ಚಾಹಂ ಕ್ಷಮಮನ್ಯನ್ನ ಮನ್ಯೇ।।
ನಾನು ಕೌರವರಿಗೆ ಏನು ತಕ್ಕುದಾದುದೋ ಮತ್ತು ಯಾವುದು ಧೃತರಾಷ್ಟ್ರನಿಗೂ ಹಿತವೂ ಸರಿಯೂ ಆದುದೋ ಅದನ್ನು ಹೇಳಿದೆನು. ಆದರೆ ನನ್ನ ಸಲಹೆಯು ಅವನ ಮನಸ್ಸನ್ನು ತಲುಪಲಿಲ್ಲ, ಮತ್ತು ಬೇರೆ ಏನನ್ನು ಹೇಳಲೂ ನನಗೆ ಮನಸ್ಸಾಗಲಿಲ್ಲ.
03006014a ಪರಂ ಶ್ರೇಯಃ ಪಾಂಡವೇಯಾ ಮಯೋಕ್ತಂ ನ ಮೇ ತಚ್ಚ ಶ್ರುತವಾನಾಂಬಿಕೇಯಃ।
03006014c ಯಥಾತುರಸ್ಯೇವ ಹಿ ಪಥ್ಯಮನ್ನಂ ನ ರೋಚತೇ ಸ್ಮಾಸ್ಯ ತದುಚ್ಯಮಾನಂ।।
ಪಾಂಡವೇಯ! ಯಾವುದು ಪರಮ ಶ್ರೇಯವೋ ಅದನ್ನೇ ನಾನು ಹೇಳಿದೆ. ಆದರೆ ಅಂಬಿಕೇಯನು ಅದನ್ನು ಕೇಳಲಿಲ್ಲ. ರೋಗಿಗೆ ಪಥ್ಯ ಆಹಾರವು ರುಚಿಕರವೆನಿಸುವುದಿಲ್ಲದಂತೆ ನನ್ನ ಮಾತುಗಳು ಅವನಿಗೆ ಹಿಡಿಸಲಿಲ್ಲ.
03006015a ನ ಶ್ರೇಯಸೇ ನೀಯತೇಽಜಾತಶತ್ರೋ ಸ್ತ್ರೀ ಶ್ರೋತ್ರಿಯಸ್ಯೇವ ಗೃಹೇ ಪ್ರದುಷ್ಟಾ।
03006015c ಬ್ರುವನ್ನ ರುಚ್ಯೈ ಭರತರ್ಷಭಸ್ಯ ಪತಿಃ ಕುಮಾರ್ಯಾ ಇವ ಷಷ್ಟಿವರ್ಷಃ।।
ಅಜಾತಶತ್ರು! ಪ್ರದುಷ್ಟ ಸ್ತ್ರೀಯೋರ್ವಳನ್ನು ಶ್ರೋತ್ರಿಯ ಕಡೆ ಹೇಗೋ ಹಾಗೆ ಅವನನ್ನು ಶ್ರೇಯಸ್ಸಿನ ಕಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಅರವತ್ತು ವರ್ಷದವನು ಕುಮಾರಿಗೆ ಪತಿಯಾಗಿ ಹೇಗೆ ಇಷ್ಟವಾಗುವುದಿಲ್ಲವೋ ಹಾಗೆ ನನ್ನ ಮಾತುಗಳು ಭರತರ್ಷಭನಿಗೆ ಇಷ್ಟವಾಗಲಿಲ್ಲ!
03006016a ಧ್ರುವಂ ವಿನಾಶೋ ನೃಪ ಕೌರವಾಣಾಂ ನ ವೈ ಶ್ರೇಯೋ ಧೃತರಾಷ್ಟ್ರಃ ಪರೈತಿ।
03006016c ಯಥಾ ಪರ್ಣೇ ಪುಷ್ಕರಸ್ಯೇವ ಸಿಕ್ತಂ ಜಲಂ ನ ತಿಷ್ಠೇತ್ಪಥ್ಯಮುಕ್ತಂ ತಥಾಸ್ಮಿನ್।।
ನೃಪ! ಕೌರವರ ವಿನಾಶವು ನಿರ್ಧರಿತವಾಗಿದೆ ಮತ್ತು ಧೃತರಾಷ್ಟ್ರನು ಶ್ರೇಯಸ್ಸನ್ನು ಕಾಣುವುದಿಲ್ಲ. ಕಮಲದ ಡಂಟಿಗೆ ನೀರು ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ ಒಳ್ಳೆಯ ಸಲಹೆಯ ಮಾತುಗಳು ಅವನಿಗೆ ತಾಗುವುದಿಲ್ಲ.
03006017a ತತಃ ಕ್ರುದ್ಧೋ ಧೃತರಾಷ್ಟ್ರೋಽಬ್ರವೀನ್ಮಾಂ ಯತ್ರ ಶ್ರದ್ಧಾ ಭಾರತ ತತ್ರ ಯಾಹಿ।
03006017c ನಾಹಂ ಭೂಯಃ ಕಾಮಯೇ ತ್ವಾಂ ಸಹಾಯಂ ಮಹೀಂ ಇಮಾಂ ಪಾಲಯಿತುಂ ಪುರಂ ವಾ।।
ಕೃದ್ಧನಾದ ಧೃತರಾಷ್ಟ್ರನು ನನಗೆ ಹೇಳಿದನು: “ಭಾರತ! ನಿನಗೆ ಎಲ್ಲಿ ಶ್ರದ್ಧೆಯಿದೆಯೋ ಅಲ್ಲಿಗೆ ಹೋಗು. ಈ ಭೂಮಿ ಮತ್ತು ಪುರವನ್ನು ಪಾಲಿಸಲು ಇನ್ನು ನನಗೆ ನಿನ್ನ ಸಹಾಯವು ಅಗತ್ಯವಿಲ್ಲ.”
03006018a ಸೋಽಹಂ ತ್ಯಕ್ತೋ ಧೃತರಾಷ್ಟ್ರೇಣ ರಾಜಂಸ್ ತ್ವಾಂ ಶಾಸಿತುಮುಪಯಾತಸ್ತ್ವರಾವಾನ್।
03006018c ತದ್ವೈ ಸರ್ವಂ ಯನ್ಮಯೋಕ್ತಂ ಸಭಾಯಾಂ ತದ್ಧಾರ್ಯತಾಂ ಯತ್ಪ್ರವಕ್ಷ್ಯಾಮಿ ಭೂಯಃ।।
ರಾಜನ್! ಧೃತರಾಷ್ಟ್ರನಿಂದ ತ್ಯಕ್ತನಾದ ನಾನು ತ್ವರೆಮಾಡಿ ಸಮಾಲೋಚನೆ ಮಾಡಲು ನಿನ್ನಲ್ಲಿಗೆ ಬಂದಿದ್ದೇನೆ. ಸಭೆಯಲ್ಲಿ ನಾನು ಹೇಳಿದ ಸರ್ವವನ್ನೂ ಮನಸ್ಸಿನಲ್ಲಿಟ್ಟುಕೋ. ಅವನ್ನೇ ಪುನಃ ಹೇಳುತ್ತೇನೆ.
03006019a ಕ್ಲೇಶೈಸ್ತೀವ್ರೈರ್ಯುಜ್ಯಮಾನಃ ಸಪತ್ನೈಃ ಕ್ಷಮಾಂ ಕುರ್ವನ್ಕಾಲಮುಪಾಸತೇ ಯಃ।
03006019c ಸಂ ವರ್ಧಯನ್ಸ್ತೋಕಮಿವಾಗ್ನಿಮಾತ್ಮವಾನ್ ಸ ವೈ ಭುಂಕ್ತೇ ಪೃಥಿವೀಮೇಕ ಏವ।।
ತನ್ನ ಪ್ರತಿಸ್ಪರ್ಧಿಗಳಿಂದ ಸಂಪೂರ್ಣವಾಗಿ ಸೋತವನು ಕ್ಷಮಿಸಿ ಕಾಲವನ್ನು ಉಪಾಸಿಸುತ್ತಾನೆ. ಅಗ್ನಿಯನ್ನು ಹೇಗೆ ವೃದ್ಧಿಸುತ್ತೀವೋ ಹಾಗೆ, ನಿಧಾನವಾಗಿ ತನ್ನನ್ನು ತಾನೇ ವೃದ್ಧಿಗೊಳಿಸಿಕೊಂಡು ಏಕೈಕನಾಗಿ ಪೃಥ್ವಿಯನ್ನು ಅನುಭವಿಸುತ್ತಾನೆ.
03006020a ಯಸ್ಯಾವಿಭಕ್ತಂ ವಸು ರಾಜನ್ಸಹಾಯೈಸ್ ತಸ್ಯ ದುಃಖೇಽಪ್ಯಂಶಭಾಜಃ ಸಹಾಯಾಃ।
03006020c ಸಹಾಯಾನಾಮೇಷ ಸಂಗ್ರಹಣೇಽಭ್ಯುಪಾಯಃ ಸಹಾಯಾಪ್ತೌ ಪೃಥಿವೀಪ್ರಾಪ್ತಿಮಾಹುಃ।।
ರಾಜನ್! ತನ್ನ ಸಹಾಯಕರೊಂದಿಗೆ ಸಂಪತ್ತನ್ನು ಹಂಚಿಕೊಂಡವನಿಗೆ ಅವನು ದುಃಖದಲ್ಲಿರುವಾಗ ಸಹಾಯಕರಿರುತ್ತಾರೆ. ಇದೊಂದು ಸಹಾಯಕರನ್ನು ಒಟ್ಟುಮಾಡಿಕೊಳ್ಳುವ ಉಪಾಯ. ಸಹಾಯಕರಿಂದ ಪೃಥ್ವಿಯನ್ನೇ ಗೆಲ್ಲಬಹುದು.
03006021a ಸತ್ಯಂ ಶ್ರೇಷ್ಠಂ ಪಾಂಡವ ನಿಷ್ಪ್ರಲಾಪಂ ತುಲ್ಯಂ ಚಾನ್ನಂ ಸಹ ಭೋಜ್ಯಂ ಸಹಾಯೈಃ।
03006021c ಆತ್ಮಾ ಚೈಷಾಮಗ್ರತೋ ನಾತಿವರ್ತೇದ್ ಏವಂವೃತ್ತಿರ್ವರ್ಧತೇ ಭೂಮಿಪಾಲಃ।।
ಪಾಂಡವ! ಪ್ರಲಾಪವಿಲ್ಲದೇ ಸತ್ಯವನ್ನು ಹೇಳುವುದು ಶ್ರೇಷ್ಠ. ಭೋಜನವನ್ನು ಸಹಾಯಕರೊಂದಿಗೆ ಸಮನಾಗಿ ಹಂಚಿಕೊಳ್ಳುವುದು ಶ್ರೇಷ್ಠ. ಇನ್ನೊಬ್ಬರ ಮೊದಲೇ ಸ್ವಾರ್ಥವು ಬರಬಾರದು. ಅಂಥಹ ನಡತೆಯು ಭೂಮಿಪಾಲನನ್ನು ವೃದ್ಧಿಗೊಳಿಸುತ್ತದೆ.”
03006022 ಯುಧಿಷ್ಠಿರ ಉವಾಚ।
03006022a ಏವಂ ಕರಿಷ್ಯಾಮಿ ಯಥಾ ಬ್ರವೀಷಿ ಪರಾಂ ಬುದ್ಧಿಮುಪಗಮ್ಯಾಪ್ರಮತ್ತಃ।
03006022c ಯಚ್ಚಾಪ್ಯನ್ಯದ್ದೇಶಕಾಲೋಪಪನ್ನಂ ತದ್ವೈ ವಾಚ್ಯಂ ತತ್ಕರಿಷ್ಯಾಮಿ ಕೃತ್ಸ್ನಂ।।
ಯುಧಿಷ್ಠಿರನು ಹೇಳಿದನು: “ವಿದುರ! ನೀನು ಹೇಳಿದಹಾಗೆಯೇ ಮಾಡುತ್ತೇನೆ ಮತ್ತು ನಿನ್ನ ಮಹಾ ವಿವೇಕವನ್ನು ಮನಃಪೂರ್ವಕವಾಗಿ ಮಾಡುತ್ತೇನೆ. ಈ ಕಾಲದೇಶಗಳಿಗೆ ಹೊಂದುವಂಥಹ ಮತ್ತೇನನ್ನಾದರೂ ಹೇಳಬಯಸಿದರೆ ಅದರಂತೆಯೂ ಎಲ್ಲವನ್ನು ಮಾಡುತ್ತೇನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ವಿದುರನಿರ್ವಾಸೇ ಷಷ್ಠೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ವಿದುರನಿರ್ವಾಸ ಎನ್ನುವ ಆರನೆಯ ಅಧ್ಯಾಯವು.