003 ಕಾಮ್ಯಕವನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಅರಣ್ಯಕ ಪರ್ವ

ಅಧ್ಯಾಯ 3

ಸಾರ

ವಿಪ್ರರನ್ನು ಪೊರೆಯಲು ಏನುಮಾಡಲೆಂದು ಪುರೋಹಿತನನ್ನು ಕೇಳಲು ಧೌಮ್ಯನ ಸಲಹೆಯಂತೆ ಯುಧಿಷ್ಠಿರನು ಸೂರ್ಯನ ಕುರಿತು ತಪವನ್ನಾಚರಿಸಿದುದು (1-17). ಸೂರ್ಯಾಷ್ಟೋತ್ತರಶತನಾಮಾವಳಿ (18-33).

03003001 ವೈಶಂಪಾಯನ ಉವಾಚ।
03003001a ಶೌನಕೇನೈವಮುಕ್ತಸ್ತು ಕುಂತೀಪುತ್ರೋ ಯುಧಿಷ್ಠಿರಃ।
03003001c ಪುರೋಹಿತಮುಪಾಗಮ್ಯ ಭ್ರಾತೃಮಧ್ಯೇಽಬ್ರವೀದಿದಂ।।

ವೈಶಂಪಾಯನನು ಹೇಳಿದನು: “ಶೌನಕನು ಈ ರೀತಿ ಹೇಳಲು ಕುಂತೀಪುತ್ರ ಯುಧಿಷ್ಠಿರನು ಪುರೋಹಿತನ ಬಳಿ ಹೋಗಿ ಸಹೋದರರ ಮಧ್ಯೆ ಈ ರೀತಿ ಹೇಳಿದನು:

03003002a ಪ್ರಸ್ಥಿತಂ ಮಾನುಯಾಂತೀಮೇ ಬ್ರಾಹ್ಮಣಾ ವೇದಪಾರಗಾಃ।
03003002c ನ ಚಾಸ್ಮಿ ಪಾಲನೇ ಶಕ್ತೋ ಬಹುದುಃಖಸಮನ್ವಿತಃ।।

“ವೇದಪಾರಂಗತರಾದ ಈ ಬ್ರಾಹ್ಮಣರು ಹೊರಡುವಾಗ ನನ್ನನ್ನು ಅನುಸರಿಸಿ ಬಂದಿದ್ದಾರೆ. ಆದರೆ ನಾನು ಅವರನ್ನು ಪಾಲಿಸಲು ಶಕ್ತನಾಗಿಲ್ಲ ಎಂದು ಬಹಳ ದುಃಖ ಸಮನ್ವಿತನಾಗಿದ್ದೇನೆ.

03003003a ಪರಿತ್ಯಕ್ತುಂ ನ ಶಕ್ನೋಮಿ ದಾನಶಕ್ತಿಶ್ಚ ನಾಸ್ತಿ ಮೇ।
03003003c ಕಥಮತ್ರ ಮಯಾ ಕಾರ್ಯಂ ಭಗವಾಂಸ್ತದ್ಬ್ರವೀತು ಮೇ।।

ಅವರನ್ನು ತ್ಯಜಿಸಲೂ ಶಕ್ತನಿಲ್ಲ ಮತ್ತು ಅವರಿಗೆ ಕೊಡಲೂ ಶಕ್ತನಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು? ಭಗವನ್! ಅದನ್ನು ನನಗೆ ಹೇಳು.”

03003004a ಮುಹೂರ್ತಮಿವ ಸ ಧ್ಯಾತ್ವಾ ಧರ್ಮೇಣಾನ್ವಿಷ್ಯ ತಾಂ ಗತಿಂ।
03003004c ಯುಧಿಷ್ಠಿರಮುವಾಚೇದಂ ಧೌಮ್ಯೋ ಧರ್ಮಭೃತಾಂ ವರಃ।।

ಧರ್ಮಭೃತರಲ್ಲಿ ಶ್ರೇಷ್ಠ ಧೌಮ್ಯನು ಧರ್ಮಮಾರ್ಗವನ್ನು ಹುಡುಕುತ್ತಾ ಒಂದು ಕ್ಷಣ ಯೋಚಿಸಿ ಯುಧಿಷ್ಠಿರನಿಗೆ ಹೇಳಿದನು:

03003005a ಪುರಾ ಸೃಷ್ಟಾನಿ ಭೂತಾನಿ ಪೀಡ್ಯಂತೇ ಕ್ಷುಧಯಾ ಭೃಶಂ।
03003005c ತತೋಽನುಕಂಪಯಾ ತೇಷಾಂ ಸವಿತಾ ಸ್ವಪಿತಾ ಇವ।।

“ಹಿಂದೆ ಸೃಷ್ಟಿಯ ಸಮಯದಲ್ಲಿ ಪ್ರಾಣಿಗಳು ಅತ್ಯಂತ ಹಸಿವೆಯಲ್ಲಿದ್ದಾಗ ಅವರ ಮೇಲಿನ ಅನುಕಂಪದಿಂದ ಸವಿತನು ಅವರನ್ನು ತಂದೆಯಂತೆ ಪಾಲಿಸಿದನು.

03003006a ಗತ್ವೋತ್ತರಾಯಣಂ ತೇಜೋರಸಾನುದ್ಧೃತ್ಯ ರಶ್ಮಿಭಿಃ।
03003006c ದಕ್ಷಿಣಾಯನಮಾವೃತ್ತೋ ಮಹೀಂ ನಿವಿಶತೇ ರವಿಃ।।

ರವಿಯು ಉತ್ತರಾಯಣದಲ್ಲಿ ಹೋಗಿ ತನ್ನ ಕಿರಣಗಳಿಂದ ತೇಜೋರಸವನ್ನು ತೆಗೆದು ದಕ್ಷಿಣಾಯನಕ್ಕೆ ಹಿಂದಿರುಗಿ ಭೂಮಿಯ ಮೇಲೆ ಬಿತ್ತಿದನು.

03003007a ಕ್ಷೇತ್ರಭೂತೇ ತತಸ್ತಸ್ಮಿನ್ನೋಷಧೀರೋಷಧೀಪತಿಃ।
03003007c ದಿವಸ್ತೇಜಃ ಸಮುದ್ಧೃತ್ಯ ಜನಯಾಮಾಸ ವಾರಿಣಾ।।

ಅವನು ಈ ರೀತಿ ಕ್ಷೇತ್ರನಾದಾಗ ಔಷಧಿಗಳ ಅಧಿಪತಿಯು ತನ್ನ ಶೀತಲ ಕಿರಣಗಳಿಂದ ಸೂರ್ಯನ ಕಿರಣಗಳಲ್ಲಿದ್ದ ರಸಗಳನ್ನು ಮೋಡಗಳನ್ನಾಗಿ ಪರಿವರ್ತಿಸಿ, ಭೂಮಿಯ ಮೇಲೆ ಮಳೆಗರೆದನು.

03003008a ನಿಷಿಕ್ತಶ್ಚಂದ್ರತೇಜೋಭಿಃ ಸೂಯತೇ ಭೂಗತೋ ರವಿಃ।
03003008c ಓಷಧ್ಯಃ ಷಡ್ರಸಾ ಮೇಧ್ಯಾಸ್ತದನ್ನಂ ಪ್ರಾಣಿನಾಂ ಭುವಿ।।

ಚಂದ್ರನ ತೇಜಸ್ಸಿನಿಂದ ಒದ್ದೆಯಾದ ಭೂಗತ ರವಿಯು ಷಡ್ರಸ ಔಷಧಿಗಳಾಗಿ ಮತ್ತು ಭೂಮಿಯಲ್ಲಿ ಪ್ರಾಣಿಗಳ ಆಹಾರವಾಗಿ ಬೆಳೆದನು.

03003009a ಏವಂ ಭಾನುಮಯಂ ಹ್ಯನ್ನಂ ಭೂತಾನಾಂ ಪ್ರಾಣಧಾರಣಂ।
03003009c ಪಿತೈಷ ಸರ್ವಭೂತಾನಾಂ ತಸ್ಮಾತ್ತಂ ಶರಣಂ ವ್ರಜ।।

ಈ ರೀತಿ ಭೂತಗಳ ಪ್ರಾಣಧಾರಕ ಈ ಅನ್ನವು ಭಾನುಮಯವು. ಅವನೇ ಸರ್ವಭೂತಗಳಿಗೆ ಪಿತ. ಆದುದರಿಂದ ಅವನಿಗೇ ಶರಣು ಹೋಗು.

03003010a ರಾಜಾನೋ ಹಿ ಮಹಾತ್ಮಾನೋ ಯೋನಿಕರ್ಮವಿಶೋಧಿತಾಃ।
03003010c ಉದ್ಧರಂತಿ ಪ್ರಜಾಃ ಸರ್ವಾಸ್ತಪ ಆಸ್ಥಾಯ ಪುಷ್ಕಲಂ।।

ಹುಟ್ಟು ಮತ್ತು ಕರ್ಮಗಳಿಂದ ಶುದ್ಧರಾದ ಮಹಾತ್ಮ ರಾಜರು ಪುಷ್ಕಲ ತಪಸ್ಸನ್ನು ಮಾಡಿಯೇ ಸರ್ವ ಪ್ರಜೆಗಳನ್ನೂ ಉದ್ಧರಿಸುತ್ತಾರೆ.

03003011a ಭೀಮೇನ ಕಾರ್ತವೀರ್ಯೇಣ ವೈನ್ಯೇನ ನಹುಷೇಣ ಚ।
03003011c ತಪೋಯೋಗಸಮಾಧಿಸ್ಥೈರುದ್ಧೃತಾ ಹ್ಯಾಪದಃ ಪ್ರಜಾಃ।।

ಭೀಮ, ಕಾರ್ತವೀರ್ಯ, ವೈನ್ಯ, ಮತ್ತು ನಹುಷರೂ ಕೂಡ ತಪಸ್ಸು, ಯೋಗ ಮತ್ತು ಸಮಾಧಿಗಳಲ್ಲಿದ್ದುಕೊಂಡು ಪ್ರಜೆಗಳಿಗೊದಗಿದ ಆಪತ್ತನ್ನು ನಿವಾರಿಸಿದರು.

03003012a ತಥಾ ತ್ವಮಪಿ ಧರ್ಮಾತ್ಮನ್ಕರ್ಮಣಾ ಚ ವಿಶೋಧಿತಃ।
03003012c ತಪ ಆಸ್ಥಾಯ ಧರ್ಮೇಣ ದ್ವಿಜಾತೀನ್ಭರ ಭಾರತ।।

ಧರ್ಮಾತ್ಮ! ಭಾರತ! ಅವರಂತೆ ಕರ್ಮಗಳಿಂದ ಶುದ್ಧನಾದ ನೀನೂ ಕೂಡ ತಪಸ್ಸನ್ನು ಮಾಡಿ ಈ ದ್ವಿಜರನ್ನು ಪರಿಪಾಲಿಸು.”

03003013a ಏವಮುಕ್ತಸ್ತು ಧೌಮ್ಯೇನ ತತ್ಕಾಲಸದೃಶಂ ವಚಃ।
03003013c ಧರ್ಮರಾಜೋ ವಿಶುದ್ಧಾತ್ಮಾ ತಪ ಆತಿಷ್ಠದುತ್ತಮಂ।।

ಧೌಮ್ಯನು ಹೀಗೆ ಸಮಯಕ್ಕೆ ಸರಿಯಾದ ಮಾತುಗಳನ್ನು ಹೇಳಲು ವಿಶುದ್ಧಾತ್ಮ ಧರ್ಮರಾಜನು ಉತ್ತಮ ತಪಸ್ಸಿನಲ್ಲಿ ನಿರತನಾದನು.

03003014a ಪುಷ್ಪೋಪಹಾರೈರ್ಬಲಿಭಿರರ್ಚಯಿತ್ವಾ ದಿವಾಕರಂ।
03003014c ಯೋಗಮಾಸ್ಥಾಯ ಧರ್ಮಾತ್ಮಾ ವಾಯುಭಕ್ಷೋ ಜಿತೇಂದ್ರಿಯಃ।
03003014e ಗಾಂಗೇಯಂ ವಾರ್ಯುಪಸ್ಪೃಷ್ಯ ಪ್ರಾಣಾಯಾಮೇನ ತಸ್ಥಿವಾನ್।।

ಆ ಧರ್ಮಾತ್ಮ ಜಿತೇಂದ್ರಿಯನು ಗಾಳಿಯನ್ನು ಮಾತ್ರ ಸೇವಿಸುತ್ತ ಯೋಗಸ್ಥನಾಗಿ ಪುಷ್ಪ, ಉಪಹಾರ ಮತ್ತು ಬಲಿಗಳಿಂದ ದಿವಾಕರನನ್ನು ಅರ್ಚಿಸಿ ಗಂಗಾನದಿಯ ನೀರನ್ನು ಮುಟ್ಟಿ ಪ್ರಾಣಾಯಾಮದಲ್ಲಿ ನಿರತನಾದನು1.”

03003015 ಜನಮೇಜಯ ಉವಾಚ।
03003015a ಕಥಂ ಕುರೂಣಾಮೃಷಭಃ ಸ ತು ರಾಜಾ ಯುಧಿಷ್ಠಿರಃ।
03003015c ವಿಪ್ರಾರ್ಥಮಾರಾಧಿತವಾನ್ಸೂರ್ಯಮದ್ಭುತವಿಕ್ರಮಂ।।

ಜನಮೇಜಯನು ಹೇಳಿದನು: “ಕುರುವೃಷಭ ರಾಜಾ ಯುಧಿಷ್ಠಿರನು ವಿಪ್ರರಿಗೋಸ್ಕರವಾಗಿ ಹೇಗೆ ಅದ್ಭುತವಿಕ್ರಮಿ ಸೂರ್ಯನನ್ನು ಆರಾಧಿಸಿದನು?”

03003016 ವೈಶಂಪಾಯನ ಉವಾಚ।
03003016a ಶೃಣುಷ್ವಾವಹಿತೋ ರಾಜಂ ಶುಚಿರ್ಭೂತ್ವಾ ಸಮಾಹಿತಃ।
03003016c ಕ್ಷಣಂ ಚ ಕುರು ರಾಜೇಂದ್ರ ಸರ್ವಂ ವಕ್ಷ್ಯಾಮ್ಯಶೇಷತಃ।।

ವೈಶಂಪಾಯನನು ಹೇಳಿದನು: “ರಾಜನ್! ರಾಜೇಂದ್ರ! ಮನಸ್ಸಿಟ್ಟು ಕೇಳು. ಶುಚಿಯಾಗಿ ಸಮಾಹಿತನಾಗಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಕೇಳು. ಎಲ್ಲವನ್ನೂ ಬಿಡದೇ ಹೇಳುತ್ತೇನೆ.

03003017a ಧೌಮ್ಯೇನ ತು ಯಥ ಪ್ರೋಕ್ತಂ ಪಾರ್ಥಾಯ ಸುಮಹಾತ್ಮನೇ।
03003017c ನಾಮ್ನಾಮಷ್ಟಶತಂ ಪುಣ್ಯಂ ತಚ್ಛೃಣುಷ್ವ ಮಹಾಮತೇ।।

ಮಹಾಮತೇ! ಸುಮಹಾತ್ಮ ಪಾರ್ಥನಿಗೆ ಧೌಮ್ಯನು ಹೇಳಿಕೊಟ್ಟ ಪುಣ್ಯಕರ ನೂರಾ‌ಎಂಟು ನಾಮಗಳನ್ನು ಕೇಳು.

03003018a ಸೂರ್ಯೋಽರ್ಯಮಾ ಭಗಸ್ತ್ವಷ್ಟಾ ಪೂಷಾರ್ಕಃ ಸವಿತಾ ರವಿಃ।
03003018c ಗಭಸ್ತಿಮಾನಜಃ ಕಾಲೋ ಮೃತ್ಯುರ್ಧಾತಾ ಪ್ರಭಾಕರಃ।।
03003019a ಪೃಥಿವ್ಯಾಪಶ್ಚ ತೇಜಶ್ಚ ಖಂ ವಾಯುಶ್ಚ ಪರಾಯಣಂ।
03003019c ಸೆಮೋ ಬೃಹಸ್ಪತಿಃ ಶುಕ್ರೋ ಬುಧೋಽಂಗಾರಕ ಏವ ಚ।।
03003020a ಇಂದ್ರೋ ವಿವಸ್ವಾನ್ದೀಪ್ತಾಂಶುಃ ಶುಚಿಃ ಶೌರಿಃ ಶನೈಶ್ಚರಃ।
03003020c ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಸ್ಕಂದೋ ವೈಶ್ರವಣೋ ಯಮಃ।।
03003021a ವೈದ್ಯುತೋ ಜಾಠರಶ್ಚಾಗ್ನಿರೈಂಧನಸ್ತೇಜಸಾಂ ಪತಿಃ।
03003021c ಧರ್ಮಧ್ವಜೋ ವೇದಕರ್ತಾ ವೇದಾಂಗೋ ವೇದವಾಹನಃ।।
03003022a ಕೃತಂ ತ್ರೇತಾ ದ್ವಾಪರಶ್ಚ ಕಲಿಃ ಸರ್ವಾಮರಾಶ್ರಯಃ।
03003022c ಕಲಾ ಕಾಷ್ಠಾ ಮುಹೂರ್ತಾಶ್ಚ ಪಕ್ಷಾ ಮಾಸಾ ಋತುಸ್ತಥಾ।।
03003023a ಸಂವತ್ಸರಕರೋಽಶ್ವತ್ಥಃ ಕಾಲಚಕ್ರೋ ವಿಭಾವಸುಃ।
03003023c ಪುರುಷಃ ಶಾಶ್ವತೋ ಯೋಗೀ ವ್ಯಕ್ತಾವ್ಯಕ್ತಃ ಸನಾತನಃ।।
03003024a ಲೋಕಾಧ್ಯಕ್ಷಃ ಪ್ರಜಾಧ್ಯಕ್ಷೋ ವಿಶ್ವಕರ್ಮಾ ತಮೋನುದಃ।
03003024c ವರುಣಃ ಸಾಗರೋಽಂಶುಶ್ಚ ಜೀಮೂತೋ ಜೀವನೋಽರಿಹಾ।।
03003025a ಭೂತಾಶ್ರಯೋ ಭೂತಪತಿಃ ಸರ್ವಭೂತನಿಷೇವಿತಃ।
03003025c ಮಣಿಃ ಸುವರ್ಣೋ ಭೂತಾದಿಃ ಕಾಮದಃ ಸರ್ವತೋಮುಖಃ।।
03003026a ಜಯೋ ವಿಶಾಲೋ ವರದಃ ಶೀಘ್ರಗಃ ಪ್ರಾಣಧಾರಣಃ।
03003026c ಧನ್ವಂತರಿರ್ಧೂಮಕೇತುರಾದಿದೇವೋಽದಿತೇಃ ಸುತಃ।।
03003027a ದ್ವಾದಶಾತ್ಮಾರವಿಂದಾಕ್ಷಃ ಪಿತಾ ಮಾತಾ ಪಿತಾಮಹಃ।
03003027c ಸ್ವರ್ಗದ್ವಾರಂ ಪ್ರಜಾದ್ವಾರಂ ಮೋಕ್ಷದ್ವಾರಂ ತ್ರಿವಿಷ್ಟಪಂ।।
03003028a ದೇಹಕರ್ತಾ ಪ್ರಶಾಂತಾತ್ಮಾ ವಿಶ್ವಾತ್ಮಾ ವಿಶ್ವತೋಮುಖಃ।
03003028c ಚರಾಚರಾತ್ಮಾ ಸೂಕ್ಷ್ಮಾತ್ಮಾ ಮೈತ್ರೇಣ ವಪುಷಾನ್ವಿತಃ।।

ಸೂರ್ಯ, ಆರ್ಯಮಾ, ಭಗ, ತ್ವಷ್ಠಾ, ಪೂಷ, ಅರ್ಕ, ಸವಿತಾ, ರವಿ, ಗಭಸ್ತಿಮಾನ್, ಅಜ, ಕಾಲ, ಮೃತ್ಯು, ಧಾತಾ, ಪ್ರಭಾಕರ, ಪೃಥ್ವಿ, ಆಪಸ್, ತೇಜಸ್, ಖಂ, ವಾಯು, ಪರಾಯಣ, ಸೋಮ, ಬೃಹಸ್ಪತಿ, ಶುಕ್ರ, ಬುಧ, ಅಂಗಾರಕ, ಇಂದ್ರ, ವಿವಸ್ವಾನ್, ದೀಪ್ತಾಂಶು, ಶುಚಿ, ಶೌರಿ, ಶನೈಶ್ಚರ, ಬ್ರಹ್ಮ, ವಿಷ್ಣು, ರುದ್ರ, ಸ್ಕಂದ, ವೈಶ್ರವಣ, ಯಮ, ವೈದ್ಯುತ, ಜಠರ, ಅಗ್ನಿ, ಇಂಧನ, ತೇಜಸಾಂಪತಿ, ಧರ್ಮಧ್ವಜ, ವೇದಕರ್ತಾ, ವೇದಾಂಗ, ವೇದವಾಹನ, ಕೃತ, ತ್ರೇತ, ದ್ವಾಪರ, ಕಲಿ, ಸರ್ವಾಮರಾಶ್ರಯ, ಕಲಾ, ಕಾಷ್ಠ, ಮುಹೂರ್ತ, ಪಕ್ಷ, ಮಾಸ, ಋತು, ಸಂವತ್ಸರಕಾರ, ಅಶ್ವತ್ಥ, ಕಾಲಚಕ್ರ, ವಿಭಾವಸು, ಪುರುಷ, ಶಾಶ್ವತ, ಯೋಗಿ, ವ್ಯಕ್ತಾವ್ಯಕ್ತ, ಸನಾತನ, ಲೋಕಾಧ್ಯಕ್ಷ, ಪ್ರಜಾಧ್ಯಕ್ಷ, ವಿಶ್ವಕರ್ಮ, ತಮೋನುದ, ವರುಣ, ಸಾಗರ, ಅಂಶು, ಜೀಮೂತ, ಜೀವನ, ಅರಿಹ, ಭೂತಾಶ್ರಯ, ಭೂತಪತಿ, ಸರ್ವಭೂತನಿಷೇವಿತ, ಮಣಿ, ಸುವರ್ಣ, ಭೂತಾದಿ, ಕಾಮದ, ಸರ್ವತೋಮುಖ, ಜಯ, ವಿಶಾಲ, ವರದ, ಶೀಘ್ರಗ, ಪ್ರಾಣಧಾರಣ, ಧನ್ವಂತರಿ, ಧೂಮಕೇತು, ಆದಿದೇವ, ಆದಿತ್ಯ, ದ್ವಾದಶಾತ್ಮ, ಅರವಿಂದಾಕ್ಷ, ಪಿತ, ಮಾತಾ, ಪಿತಾಮಹ, ಸ್ವರ್ಗದ್ವಾರ, ಪ್ರಜಾದ್ವಾರ, ಮೋಕ್ಷದ್ವಾರ, ತ್ರಿವಿಷ್ಠಪ, ದೇಹಕರ್ತಾರ, ಪ್ರಶಾಂತಾತ್ಮ, ವಿಶ್ವಾತ್ಮ, ವಿಶ್ವತೋಮುಖ, ಚರಾಚರಾತ್ಮ, ಸೂಕ್ಷಾತ್ಮ, ಮೈತ್ರಿ, ವಪುಶಾನ್ವಿತ.

03003029a ಏತದ್ವೈ ಕೀರ್ತನೀಯಸ್ಯ ಸೂರ್ಯಸ್ಯೈವ ಮಹಾತ್ಮನಃ।
03003029c ನಾಮ್ನಾಮಷ್ಟಶತಂ ಪುಣ್ಯಂ ಶಕ್ರೇಣೋಕ್ತಂ ಮಹಾತ್ಮನಾ।।

ಇವು ಮಹಾತ್ಮ ಶಕ್ರನು ಮಹಾತ್ಮ ಸೂರ್ಯನ ಕೀರ್ತನೆ ಮಾಡಿದ ಪುಣ್ಯಕರ ನೂರಾ‌ಎಂಟು ನಾಮಾವಳಿಯು.

03003030a ಶಕ್ರಾಚ್ಚ ನಾರದಃ ಪ್ರಾಪ್ತೋ ಧೌಮ್ಯಶ್ಚ ತದನಂತರಂ।
03003030c ಧೌಮ್ಯಾದ್ಯುಧಿಷ್ಠಿರಃ ಪ್ರಾಪ್ಯ ಸರ್ವಾನ್ಕಾಮಾನವಾಪ್ತವಾನ್।।

ಶಕ್ರನಿಂದ ಇದನ್ನು ನಾರದನು ಪಡೆದನು ಮತ್ತು ನಂತರ ಧೌಮ್ಯನು ಪಡೆದನು. ಧೌಮ್ಯನಿಂದ ಪಡೆದ ಯುಧಿಷ್ಠಿರನು ಸರ್ವ ಕಾಮಗಳನ್ನೂ ಹೊಂದಿದನು.

03003031a ಸುರಪಿತೃಗಣಯಕ್ಷಸೇವಿತಂ ಹ್ಯಸುರನಿಶಾಚರಸಿದ್ಧವಂದಿತಂ।
03003031c ವರಕನಕಹುತಾಶನಪ್ರಭಂ ತ್ವಮಪಿ ಮನಸ್ಯಭಿಧೇಹಿ ಭಾಸ್ಕರಂ।।

ಸುರ, ಪಿತೃಗಣ ಮತ್ತು ಯಕ್ಷರಿಂದ ಸೇವಿತ, ಅಸುರ, ನಿಶಾಚರ, ಸಿದ್ಧರಿಂದ ವಂದಿತ, ಶ್ರೇಷ್ಠ ಕನಕ ಮತ್ತು ಹುತಾಶನನ ಪ್ರಭೆಯುಳ್ಳ ಭಾಸ್ಕರನನ್ನು ನೀನೂ ಕೂಡ ಮನಸ್ಸಿನಲ್ಲಿಯೇ ಪ್ರಾರ್ಥಿಸು.

03003032a ಸೂರ್ಯೋದಯೇ ಯಸ್ತು ಸಮಾಹಿತಃ ಪಠೇತ್ ಸ ಪುತ್ರಲಾಭಂ ಧನರತ್ನಸಂಚಯಾನ್।
03003032c ಲಭೇತ ಜಾತಿಸ್ಮರತಾಂ ಸದಾ ನರಃ ಸ್ಮೃತಿಂ ಚ ಮೇಧಾಂ ಚ ಸ ವಿಂದತೇ ಪರಾಂ।।

ಸೂರ್ಯೋದಯದಲ್ಲಿ ಏಕಾಗ್ರಸ್ಥನಾಗಿ ಯಾರು ಇದನ್ನು ಪಠಿಸುತ್ತಾರೋ ಅವರು ಪುತ್ರಲಾಭವನ್ನೂ, ಧನರತ್ನಸಂಚಯವನ್ನೂ ಪಡೆಯುತ್ತಾರೆ. ಅಂಥಹ ನರನು ಸದಾ ಹಿಂದಿನ ಜನ್ಮದ ಜ್ಞಾನವನ್ನೂ, ಸ್ಮೃತಿಯನ್ನೂ, ಬುದ್ಧಿಯನ್ನೂ, ಮತ್ತು ಶ್ರೇಷ್ಠ ಜ್ಞಾನವನ್ನೂ ಪಡೆಯುತ್ತಾನೆ.

03003033a ಇಮಂ ಸ್ತವಂ ದೇವವರಸ್ಯ ಯೋ ನರಃ ಪ್ರಕೀರ್ತಯೇಚ್ಛುಚಿಸುಮನಾಃ ಸಮಾಹಿತಃ।
03003033c ಸ ಮುಚ್ಯತೇ ಶೋಕದವಾಗ್ನಿಸಾಗರಾಲ್ ಲಭೇತ ಕಾಮಾನ್ಮನಸಾ ಯಥೇಪ್ಸಿತಾನ್।।

ಯಾವ ನರನು ಈ ದೇವವರನ ಸ್ತುತಿಯನ್ನು ಶುಚಿಮನಸ್ಕನಾಗಿ ಏಕಾಗ್ರಚಿತ್ತನಾಗಿ ಹಾಡುತ್ತಾನೋ ಅವನು ಶೋಕದವಾಗ್ನಿಸಾಗರವನ್ನು ದಾಟಿ ಮನಸ್ಸಿನಲ್ಲಿ ಬಯಸಿದ ಇಚ್ಛೆಯನ್ನು ಪಡೆಯುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ಕಾಮ್ಯಕವನಪ್ರವೇಶೇ ತೃತೀಯೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ಕಾಮ್ಯಕವನಪ್ರವೇಶ ಎನ್ನುವ ಮೂರನೆಯ ಅಧ್ಯಾಯವು.


  1. ಕುಂಭಕೋಣದ ಪ್ರತಿಯಲ್ಲಿ ಇಲ್ಲಿ ಯುಧಿಷ್ಠಿರನು ಸೂರ್ಯದೇವನನ್ನು ಆರಾಧಿಸಿದ ಸ್ತೋತ್ರವಿದೆ. ಸಾಧಾರಣ ಅದೇ ಶ್ಲೋಕಗಳು ನೀಲಕಂಠೀಯ ಪಾಠದಲ್ಲಿ ಈ ಅಧ್ಯಾಯದ ಕೊನೆಯಲ್ಲಿ ಬರುತ್ತದೆ. ↩︎