002 ಪಾಂಡವಾನಾಂ ಪ್ರವ್ರಜನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಅರಣ್ಯಕ ಪರ್ವ

ಅಧ್ಯಾಯ 1

ಸಾರ

ಯುಧಿಷ್ಠಿರನು ತಮ್ಮನ್ನು ಅನುಸರಿಸಿ ಬಂದ ವಿಪ್ರರಿಗೆ ಹಿಂದಿರುಗಲು ಕೇಳಿಕೊಳ್ಳುವುದು; ವಿಪ್ರರು ಬರುವುದಾಗಿ ಹಠಮಾಡುವುದು; ಯುಧಿಷ್ಠಿರನು ಅವರನ್ನು ಪೋಷಿಸಲು ಅಸಮರ್ಥನೆಂದು ದುಃಖಿಸುವುದು (1-14). ಆಗ ಬ್ರಾಹ್ಮಣ ಶೌನಕನು ಯುಧಿಷ್ಠಿರನಿಗೆ ಧರ್ಮದಿಂದ ನಡೆಯಬೇಕಾದರೆ ಸಂಪತ್ತನ್ನು ಬಯಸಬಾರದೆಂದು ಹೇಳುವುದು (15-48). ಗ್ರಹಸ್ಥಾಶ್ರಮ ಧರ್ಮದ ಕುರಿತು ಯುಧಿಷ್ಠಿರನು ಹೇಳಿಕೊಳ್ಳುವುದು (49-59). “ಕರ್ಮವನ್ನು ಮಾಡು ಮತ್ತು ತ್ಯಜಿಸು ಎನ್ನುವುದೇ ವೇದವಾಕ್ಯ. ಅಭಿಮಾನದಿಂದ ಯಾವ ಧರ್ಮವನ್ನೂ ಆಚರಿಸಬಾರದು” ಎಂದು ವಿಪ್ರ ಶೌನಕನು ಉತ್ತರಿಸುವುದು (60-79).

03002001 ವೈಶಂಪಾಯನ ಉವಾಚ।
03002001a ಪ್ರಭಾತಾಯಾಂ ತು ಶರ್ವರ್ಯಾಂ ತೇಷಾಮಕ್ಲಿಷ್ಟಕರ್ಮಣಾಂ।
03002001c ವನಂ ಯಿಯಾಸತಾಂ ವಿಪ್ರಾಸ್ತಸ್ಥುರ್ಭಿಕ್ಷಾಭುಜೋಽಗ್ರತಃ।
03002001e ತಾನುವಾಚ ತತೋ ರಾಜಾ ಕುಂತೀಪುತ್ರೋ ಯುಧಿಷ್ಠಿರಃ।।

ವೈಶಂಪಾಯನನು ಹೇಳಿದನು: “ನಕ್ಷತ್ರಗಳಿಂದೊಡಗೂಡಿದ ರಾತ್ರಿ ಕಳೆದು ಪ್ರಭಾತವಾದಾಗ ಭಿಕ್ಷವನ್ನೇ ಉಂಡು ಜೀವಿಸುವ ವಿಪ್ರರು ವನಕ್ಕೆ ಹೊರಡಲು ತಯಾರಾಗಿದ್ದ ಆ ಅಕ್ಲಿಷ್ಟಕರ್ಮಿಗಳ ಎದಿರು ನಿಂತರು. ಆಗ ಕುಂತೀಪುತ್ರ ರಾಜ ಯುಧಿಷ್ಠಿರನು ಅವರನ್ನುದ್ದೇಶಿಸಿ ಹೇಳಿದನು:

03002002a ವಯಂ ಹಿ ಹೃತಸರ್ವಸ್ವಾ ಹೃತರಾಜ್ಯಾ ಹೃತಶ್ರಿಯಃ।
03002002c ಫಲಮೂಲಾಮಿಷಾಹಾರಾ ವನಂ ಯಾಸ್ಯಾಮ ದುಃಖಿತಾಃ।।

“ರಾಜ್ಯ, ಸಂಪತ್ತು ಮತ್ತು ಎಲ್ಲವನ್ನೂ ಕಳೆದುಕೊಂಡು ದುಃಖಿತರಾದ ನಾವು ವನಕ್ಕೆ ತೆರಳಿ ಫಲಮೂಲಗಳನ್ನು ಸೇವಿಸಿ ಜೀವಿಸುತ್ತೇವೆ.

03002003a ವನಂ ಚ ದೋಷಬಹುಲಂ ಬಹುವ್ಯಾಲಸರೀಸೃಪಂ।
03002003c ಪರಿಕ್ಲೇಶಶ್ಚ ವೋ ಮನ್ಯೇ ಧ್ರುವಂ ತತ್ರ ಭವಿಷ್ಯತಿ।।

ವನವು ಹಲವಾರು ಆಪತ್ತುಗಳು, ಹಲವಾರು ಕ್ರೂರಪ್ರಾಣಿಗಳು ಮತ್ತು ಸರ್ಪಗಳಿಂದ ತುಂಬಿದೆ. ಅಲ್ಲಿ ನಿಮಗೆ ನಿಜವಾಗಿಯೂ ಅತ್ಯಂತ ಕಷ್ಟಗಳಾಗುತ್ತವೆ ಎನ್ನುವುದು ನನ್ನ ಯೋಚನೆ.

03002004a ಬ್ರಾಹ್ಮಣಾನಾಂ ಪರಿಕ್ಲೇಶೋ ದೈವತಾನ್ಯಪಿ ಸಾದಯೇತ್।
03002004c ಕಿಂ ಪುನರ್ಮಾಮಿತೋ ವಿಪ್ರಾ ನಿವರ್ತಧ್ವಂ ಯಥೇಷ್ಟತಃ।।

ಬ್ರಾಹ್ಮಣರ ಪರಿಕ್ಲೇಷವು ದೇವತೆಗಳನ್ನೂ ಹಿಡಿಯುತ್ತದೆ. ಇನ್ನು ನನ್ನಂಥವರೇನು? ವಿಪ್ರರೇ, ನಿಮಗೆ ಇಷ್ಟವಾದರೆ ಹಿಂದಿರುಗಿರಿ.”

03002005 ಬ್ರಾಹ್ಮಣಾ ಊಚುಃ।
03002005a ಗತಿರ್ಯಾ ಭವತಾಂ ರಾಜನ್ಸ್ತಾಂ ವಯಂ ಗಂತುಮುದ್ಯತಾಃ।
03002005c ನಾರ್ಹಥಾಸ್ಮಾನ್ಪರಿತ್ಯಕ್ತುಂ ಭಕ್ತಾನ್ಸದ್ಧರ್ಮದರ್ಶಿನಃ।।

ಬ್ರಾಹ್ಮಣರು ಹೇಳಿದರು: “ರಾಜ! ನೀವು ಹೋಗುತ್ತಿರುವಲ್ಲಿಗೇ ನಾವೂ ಹೋಗಲು ತಯಾರಿದ್ದೇವೆ. ನಿನ್ನ ಭಕ್ತರಾದ, ನಿನ್ನಲ್ಲಿ ಧರ್ಮವನ್ನು ಕಾಣುವ ನಮ್ಮನ್ನು ಪರಿತ್ಯಜಿಸಬೇಡ.

03002006a ಅನುಕಂಪಾಂ ಹಿ ಭಕ್ತೇಷು ದೈವತಾನ್ಯಪಿ ಕುರ್ವತೇ।
03002006c ವಿಶೇಷತೋ ಬ್ರಾಹ್ಮಣೇಷು ಸದಾಚಾರಾವಲಂಬಿಷು।।

ಭಕ್ತರ ಮೇಲೆ ಅನುಕಂಪವನ್ನು ದೇವತೆಗಳೂ ಮಾಡುತ್ತಾರೆ, ವಿಶೇಷವಾಗಿ ಸದಾಚಾರವನ್ನೇ ಅವಲಂಬಿಸುರುವ ಬ್ರಾಹ್ಮಣರ ಮೇಲೆ.”

03002007 ಯುಧಿಷ್ಠಿರ ಉವಾಚ।
03002007a ಮಮಾಪಿ ಪರಮಾ ಭಕ್ತಿರ್ಬ್ರಾಹ್ಮಣೇಷು ಸದಾ ದ್ವಿಜಾಃ।
03002007c ಸಹಾಯವಿಪರಿಭ್ರಂಶಸ್ತ್ವಯಂ ಸಾದಯತೀವ ಮಾಂ।।

ಯುಧಿಷ್ಠಿರನು ಹೇಳಿದನು: “ದ್ವಿಜರೇ! ನನಗೂ ಕೂಡ ಬ್ರಾಹ್ಮಣರಲ್ಲಿ ಪರಮ ಭಕ್ತಿಯಿದೆ. ಆದರೆ, ನಮ್ಮ ಒಟ್ಟಿಗೆ ಬರುವ ನಿಮ್ಮ ಕಷ್ಟಗಳನ್ನು ನನಗೆ ಸಹಿಸಲಾಗುತ್ತಿಲ್ಲ.

03002008a ಆಹರೇಯುರ್ಹಿ ಮೇ ಯೇಽಪಿ ಫಲಮೂಲಮೃಗಾಂಸ್ತಥಾ।
03002008c ತ ಇಮೇ ಶೋಕಜೈರ್ದುಃಖೈರ್ಭ್ರಾತರೋ ಮೇ ವಿಮೋಹಿತಾಃ।।
03002009a ದ್ರೌಪದ್ಯಾ ವಿಪ್ರಕರ್ಷೇಣ ರಾಜ್ಯಾಪಹರಣೇನ ಚ।
03002009c ದುಃಖಾನ್ವಿತಾನಿಮಾನ್ಕ್ಲೇಶೈರ್ನಾಹಂ ಯೋಕ್ತುಮಿಹೋತ್ಸಹೇ।।

ಫಲ, ಮೂಲ, ಮೃಗ ಮುಂತಾದವುಗಳನ್ನೇ ಸೇವಿಸಲಿರುವ ನನ್ನ ಈ ತಮ್ಮಂದಿರು ದ್ರೌಪದಿಗೆ ಮಾಡಲಾದ ಅಪಮಾನ ಮತ್ತು ರಾಜ್ಯಾಪಹರಣದ ಶೋಕದಿಂದ ವಿಮೋಹಿತರಾಗಿದ್ದಾರೆ. ಇನ್ನೂ ಹೆಚ್ಚಿನ ಕಷ್ಟಗಳನ್ನು ಅವರಿಗೆ ಕೊಡಲು ಸಾದ್ಯವಿಲ್ಲ. ಅವರು ಸಾಕಷ್ಟು ದುಃಖಿತರಾಗಿದ್ದಾರೆ.”

03002010 ಬ್ರಾಹ್ಮಣಾ ಊಚುಃ।
03002010a ಅಸ್ಮತ್ಪೋಷಣಜಾ ಚಿಂತಾ ಮಾ ಭೂತ್ತೇ ಹೃದಿ ಪಾರ್ಥಿವ।
03002010c ಸ್ವಯಮಾಹೃತ್ಯ ವನ್ಯಾನಿ ಅನುಯಾಸ್ಯಾಮಹೇ ವಯಂ।।

ಬ್ರಾಹ್ಮಣರು ಹೇಳಿದರು: “ಪಾರ್ಥಿವ! ನಮ್ಮ ಆಹಾರದ ಕುರಿತು ನಿನ್ನ ಹೃದಯದಲ್ಲಿ ಚಿಂತೆ ಬೇಡ. ನಮ್ಮ ಅಹಾರವನ್ನು ವನದಿಂದ ನಾವೇ ಹುಡುಕಿ ತಂದುಕೊಳ್ಳುತ್ತೇವೆ.

03002011a ಅನುಧ್ಯಾನೇನ ಜಪ್ಯೇನ ವಿಧಾಸ್ಯಾಮಃ ಶಿವಂ ತವ।
03002011c ಕಥಾಭಿಶ್ಚಾನುಕೂಲಾಭಿಃ ಸಹ ರಂಸ್ಯಾಮಹೇ ವನೇ।।

ಅನುಧ್ಯಾನ, ತಪಗಳಿಂದ ನಾವು ನಿನಗೆ ಶುಭವನ್ನು ತರುತ್ತೇವೆ. ಅನುಕೂಲಕರ ಕಥೆ ಮುಂತಾದವುಗಳ ಮೂಲಕ ವನದಲ್ಲಿ ನಾವು ನಿಮ್ಮನ್ನು ರಮಿಸುತ್ತೇವೆ.”

03002012 ಯುಧಿಷ್ಠಿರ ಉವಾಚ।
03002012a ಏವಮೇತನ್ನ ಸಂದೇಹೋ ರಮೇಯಂ ಬ್ರಾಹ್ಮಣೈಃ ಸಹ।
03002012c ನ್ಯೂನಭಾವಾತ್ತು ಪಶ್ಯಾಮಿ ಪ್ರತ್ಯಾದೇಶಮಿವಾತ್ಮನಃ।।

ಯುಧಿಷ್ಠಿರನು ಹೇಳಿದನು: “ಹಾಗೆಯೇ ಆಗಲಿ! ಸಂದೇಹವಿಲ್ಲ. ನಾನೂ ಕೂಡ ಬ್ರಾಹ್ಮಣರ ಸಂಘದಲ್ಲಿ ರಮಿಸುತ್ತೇನೆ. ನಾನು ಇಂಥಹ ಸ್ಥಿತಿಗೆ ಇಳಿದಿದ್ದೇನೆಂದು ನನ್ನಲ್ಲಿ ನ್ಯೂನ ಭಾವವನ್ನು ಕಾಣುತ್ತಿದ್ದೇನೆ.

03002013a ಕಥಂ ದ್ರಕ್ಷ್ಯಾಮಿ ವಃ ಸರ್ವಾನ್ಸ್ವಯಮಾಹೃತಭೋಜನಾನ್।
03002013c ಮದ್ಭಕ್ತ್ಯಾ ಕ್ಲಿಶ್ಯತೋಽನರ್ಹಾನ್ಧಿಕ್ಪಾಪಾನ್ಧೃತರಾಷ್ಟ್ರಜಾನ್।।

ನನ್ನ ಮೇಲಿನ ಭಕ್ತಿಯಿಂದ, ಕಷ್ಟಗಳಿಗೆ ಅನರ್ಹರಾದ ನೀವೆಲ್ಲರೂ ಸ್ವಯಂ ಅಹಾರವನ್ನು ತರುವುದನ್ನು ನಾನು ಹೇಗೆ ನೋಡಲಿ? ಪಾಪಿ ಧಾರ್ತರಾಷ್ಟ್ರರಿಗೆ ಧಿಕ್ಕಾರ!””

03002014 ವೈಶಂಪಾಯನ ಉವಾಚ।
03002014a ಇತ್ಯುಕ್ತ್ವಾ ಸ ನೃಪಃ ಶೋಚನ್ನಿಷಸಾದ ಮಹೀತಲೇ।
03002014c ತಮಧ್ಯಾತ್ಮರತಿರ್ವಿದ್ವಾಂ ಶೌನಕೋ ನಾಮ ವೈ ದ್ವಿಜಃ।
03002014e ಯೋಗೇ ಸಾಂಖ್ಯೇ ಚ ಕುಶಲೋ ರಾಜಾನಮಿದಮಬ್ರವೀತ್।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ನೃಪನು ಚಿಂತಿಸುತ್ತಾ ನೆಲದಮೇಲೆಯೇ ಕುಳಿತುಕೊಂಡನು. ಅವರ ಮಧ್ಯದಿಂದ ಶೌನಕ ಎಂಬ ಹೆಸರಿನ ಒಬ್ಬ ಆತ್ಮರತಿ, ವಿದ್ವಾನ್, ಯೋಗ-ಸಾಂಖ್ಯಗಳಲ್ಲಿ ಕುಶಲ ದ್ವಿಜನು ರಾಜನಿಗೆ ಹೇಳಿದನು:

03002015a ಶೋಕಸ್ಥಾನಸಹಸ್ರಾಣಿ ಭಯಸ್ಥಾನಶತಾನಿ ಚ।
03002015c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಂ।।

“ಸಾವಿರಗಟ್ಟಲೆ ಶೋಕಗಳು ಮತ್ತು ನೂರಾರು ಭಯಗಳು ದಿನ ದಿನವೂ ಮೂಢರನ್ನು ಕಾಡುತ್ತವೆ. ಪಂಡಿತರನ್ನಲ್ಲ.

03002016a ನ ಹಿ ಜ್ಞಾನವಿರುದ್ಧೇಷು ಬಹುದೋಷೇಷು ಕರ್ಮಸು।
03002016c ಶ್ರೇಯೋಘಾತಿಷು ಸಜ್ಜಂತೇ ಬುದ್ಧಿಮಂತೋ ಭವದ್ವಿಧಾಃ।।

ನಿನ್ನಂಥಹ ಬುದ್ಧಿವಂತರು ಜ್ಞಾನಕ್ಕೆ ವಿರುದ್ಧವಾದ ಅನೇಕ ದೋಷಗಳನ್ನುಳ್ಳ, ಶ್ರೇಯಸ್ಸನ್ನು ನಾಶಪಡಿಸುವ ಕರ್ಮಗಳನ್ನು ಮಾಡುವುದಿಲ್ಲ.

03002017a ಅಷ್ಟಾಂಗಾಂ ಬುದ್ಧಿಮಾಹುರ್ಯಾಂ ಸರ್ವಾಶ್ರೇಯೋವಿಘಾತಿನೀಂ।
03002017c ಶ್ರುತಿಸ್ಮೃತಿಸಮಾಯುಕ್ತಾಂ ಸಾ ರಾಜನ್‌ ಸ್ತ್ವಯ್ಯವಸ್ಥಿತಾ।।

ರಾಜ! ನಿನ್ನಲ್ಲಿ ಅಷ್ಟಾಂಗಗಳನ್ನೊಡಗೂಡಿದ, ಸರ್ವ ಅಶ್ರೇಯಗಳನ್ನೂ ನಾಶಪಡಿಸುವ, ಶೃತಿಸ್ಮೃತಿಸಮಾಯುಕ್ತವೆನಿಸಿಕೊಂಡ ಬುದ್ಧಿಯು ಇದೆ.

03002018a ಅರ್ಥಕೃಚ್ಚ್ರೇಷು ದುರ್ಗೇಷು ವ್ಯಾಪತ್ಸು ಸ್ವಜನಸ್ಯ ಚ।
03002018c ಶಾರೀರಮಾನಸೈರ್ದುಃಖೈರ್ನ ಸೀದಂತಿ ಭವದ್ವಿಧಾಃ।।

ನಿನ್ನಂಥವರು ಕಷ್ಟ ಕಾರ್ಪಣ್ಯಗಳಿಂದ ಮತ್ತು ಸ್ವಜನರ ಕಷ್ಟಗಳಿಂದ ದುಃಖಪಟ್ಟು ಶರೀರ ಮತ್ತು ಮನಸ್ಸಿನಲ್ಲಿ ಕುಸಿಯುವುದಿಲ್ಲ.

03002019a ಶ್ರೂಯತಾಂ ಚಾಭಿಧಾಸ್ಯಾಮಿ ಜನಕೇನ ಯಥಾ ಪುರಾ।
03002019c ಆತ್ಮವ್ಯವಸ್ಥಾನಕರಾ ಗೀತಾಃ ಶ್ಲೋಕಾ ಮಹಾತ್ಮನಾ।।

ಹಿಂದೆ ಮಹಾತ್ಮ ಜನಕನು ನೀಡಿದ ಆತ್ಮವನ್ನು ಸ್ಥಿರಗೊಳಿಸುವಂತಹ ಶ್ಲೋಕಗಳ ಗೀತೆಯನ್ನು ಹೇಳುತ್ತೇನೆ. ಕೇಳು.

03002020a ಮನೋದೇಹಸಮುತ್ಥಾಭ್ಯಾಂ ದುಃಖಾಭ್ಯಾಮರ್ದಿತಂ ಜಗತ್।
03002020c ತಯೋರ್ವ್ಯಾಸಸಮಾಸಾಭ್ಯಾಂ ಶಮೋಪಾಯಮಿಮಂ ಶೃಣು।।

ಈ ಜಗತ್ತು ಮನಸ್ಸು ಮತ್ತು ದೇಹಗಳಲ್ಲಿ ಉದ್ಭವಿಸುವ ಎರಡು ದುಃಖಗಳಿಂದ ಕಾಡಿಸಲ್ಪಡುತ್ತಿದೆ. ಇವುಗಳನ್ನು ಪ್ರತ್ಯೇಕವಾಗಿ ಮತ್ತು ಒಟ್ಟಿಗೇ ಹೇಗೆ ಕಡಿಮೆಮಾಡಿಕೊಳ್ಳಬಹುದು ಎನ್ನುವುದನ್ನು ಕೇಳು.

03002021a ವ್ಯಾಧೇರನಿಷ್ಟಸಂಸ್ಪರ್ಶಾಚ್ಛಮಾದಿಷ್ಟವಿವರ್ಜನಾತ್।
03002021c ದುಃಖಂ ಚತುರ್ಭಿಃ ಶಾರೀರಂ ಕಾರಣೈಃ ಸಂಪ್ರವರ್ತತೇ।।

ವ್ಯಾಧಿ, ಶ್ರಮ, ಇಷ್ಟವಿಲ್ಲವನ್ನು ಹೊಂದುವುದು1 ಮತ್ತು ಇಷ್ಟವಿದ್ದವುಗಳನ್ನು ಕಳೆದುಕೊಳ್ಳುವುದು2 ಇವೇ ನಾಲ್ಕು ಶರೀರ ಜನ್ಯ ದುಃಖಕ್ಕೆ ಕಾರಣಗಳು.

03002022a ತದಾಶುಪ್ರತಿಕಾರಾಚ್ಚ ಸತತಂ ಚಾವಿಚಿಂತನಾತ್।
03002022c ಆಧಿವ್ಯಾಧಿಪ್ರಶಮನಂ ಕ್ರಿಯಾಯೋಗದ್ವಯೇನ ತು।।

ಈ ಆದಿವ್ಯಾಧಿಗಳೆರಡನ್ನೂ ಎರಡು ಕ್ರಿಯಾಯೋಗಗಳಿಂದ ನಿವಾರಿಸಬಹುದು: ಅವುಗಳಿಗೆ ಪ್ರತಿಕಾರಗಳನ್ನು ಮಾಡುವುದು ಮತ್ತು ಸತತವಾಗಿ ಅವುಗಳ ಕುರಿತು ಚಿಂತಿಸದೇ ಇರುವುದು.

03002023a ಮತಿಮಂತೋ ಹ್ಯತೋ ವೈದ್ಯಾಃ ಶಮಂ ಪ್ರಾಗೇವ ಕುರ್ವತೇ।
03002023c ಮಾನಸಸ್ಯ ಪ್ರಿಯಾಖ್ಯಾನೈಃ ಸಂಭೋಗೋಪನಯೈರ್ನೃಣಾಂ।।
03002024a ಮಾನಸೇನ ಹಿ ದುಃಖೇನ ಶರೀರಮುಪತಪ್ಯತೇ।
03002024c ಅಯಃಪಿಂಡೇನ ತಪ್ತೇನ ಕುಂಭಸಂಸ್ಥಮಿವೋದಕಂ।।

ಆದುದರಿಂದ ಬುದ್ಧಿವಂತ ವೈದ್ಯರು ಮೊದಲು ಪ್ರೀತಿಕರ ಮಾತುಗಳಿಂದಲೂ, ಭೋಗವಸ್ತುಗಳನ್ನು ಕೊಡುವುದರ ಮೂಲಕವೂ ಮನುಷ್ಯರ ದುಃಖವನ್ನು ಉಪಶಮನ ಮಾಡಲು ಪ್ರಯತ್ನಿಸುತ್ತಾರೆ. ಕಾದ ಕಬ್ಬಿಣದ ಗುಂಡನ್ನು ನೀರಿನ ಕುಂಡದಲ್ಲಿ ಅದ್ದಿದರೆ ನೀರೂ ಹೇಗೆ ಬಿಸಿಯಾಗಿ ಕುದಿಯುತ್ತದೆಯೋ ಹಾಗೆ ಮಾನಸಿಕ ದುಃಖದಿಂದ ಶರೀರವೂ ಪರಿತಪಿಸುತ್ತದೆ.

03002025a ಮಾನಸಂ ಶಮಯೇತ್ತಸ್ಮಾಜ್ಜ್ಞಾನೇನಾಗ್ನಿಮಿವಾಂಬುನಾ।
03002025c ಪ್ರಶಾಂತೇ ಮಾನಸೇ ದುಃಖೇ ಶಾರೀರಮುಪಶಾಂಯತಿ।।

ನೀರಿನಿಂದ ಅಗ್ನಿಯನ್ನು ಹೇಗೋ ಹಾಗೆ ಜ್ಞಾನದಿಂದ ಮನಸ್ಸನ್ನು ಆರಿಸಬೇಕು. ಮನಸ್ಸು ಪ್ರಶಾಂತವಾದಾಗ ಶರೀರ ದುಃಖವು ಆರಿಹೋಗುತ್ತದೆ.

03002026a ಮನಸೋ ದುಃಖಮೂಲಂ ತು ಸ್ನೇಹ ಇತ್ಯುಪಲಭ್ಯತೇ।
03002026c ಸ್ನೇಹಾತ್ತು ಸಜ್ಜತೇ ಜಂತುರ್ದುಃಖಯೋಗಮುಪೈತಿ ಚ।।

ಸ್ನೇಹ3ವೇ ಮಾನಸಿಕ ದುಃಖದ ಮೂಲ. ಸ್ನೇಹದಿಂದ ಮೋಹವುಂಟಾಗುತ್ತದೆ ಮತ್ತು ಮೋಹದಿಂದ ಜೀವಿಯು ದುಃಖವನ್ನು ಹೊಂದುತ್ತಾನೆ.

03002027a ಸ್ನೇಹಮೂಲಾನಿ ದುಃಖಾನಿ ಸ್ನೇಹಜಾನಿ ಭಯಾನಿ ಚ।
03002027c ಶೋಕಹರ್ಷೌ ತಥಾಯಾಸಃ ಸರ್ವಂ ಸ್ನೇಹಾತ್ಪ್ರವರ್ತತೇ।।

ಸ್ನೇಹವೇ ದುಃಖದ ಮೂಲ ಮತ್ತು ಸ್ನೇಹದಿಂದಲೇ ಭಯವು ಹುಟ್ಟುತ್ತವೆ. ಶೋಕ, ಹರ್ಷ, ಮತ್ತು ಆಯಾಸ ಸರ್ವವೂ ಸ್ನೇಹದಿಂದಲೇ ಹುಟ್ಟುತ್ತವೆ.

03002028a ಸ್ನೇಹಾತ್ಕರಣರಾಗಶ್ಚ ಪ್ರಜಜ್ಞೇ ವೈಷಯಸ್ತಥಾ।
03002028c ಅಶ್ರೇಯಸ್ಕಾವುಭಾವೇತೌ ಪೂರ್ವಸ್ತತ್ರ ಗುರುಃ ಸ್ಮೃತಃ।।

ಭಾವ4-ಅನುರಾಗಗಳೆರಡೂ ಸ್ನೇಹದಿಂದಲೇ ಹುಟ್ಟುತ್ತವೆ. ಇವೆರಡರಲ್ಲಿ ಮೊದಲನೆಯದಾದ ಭಾವವೇ ಹೆಚ್ಚು ಅಶ್ರೇಯಸ್ಕರ ಎಂದು ಹೇಳುತ್ತಾರೆ.

03002029a ಕೋಟರಾಗ್ನಿರ್ಯಥಾಶೇಷಂ ಸಮೂಲಂ ಪಾದಪಂ ದಹೇತ್।
03002029c ಧರ್ಮಾರ್ಥಿನಂ ತಥಾಲ್ಪೋಽಪಿ ರಾಗದೋಷೋ ವಿನಾಶಯೇತ್।।

ಪೊಟರಿನಲ್ಲಿ ಹತ್ತಿದ ಬೆಂಕಿಯು ಹೇಗೆ ಸಮೂಲವಾಗಿ ಆ ಮರವನ್ನು ಸುಟ್ಟುಬಿಡುತ್ತದೆಯೋ ಹಾಗೆ ಅಲ್ಪ ರಾಗದೋಷವೂ ಧರ್ಮಾರ್ಥಿಯನ್ನು ನಾಶಮಾಡುತ್ತದೆ.

03002030a ವಿಪ್ರಯೋಗೇ ನ ತು ತ್ಯಾಗೀ ದೋಷದರ್ಶೀ ಸಮಾಗಮಾತ್।
03002030c ವಿರಾಗಂ ಭಜತೇ ಜಂತುರ್ನಿರ್ವೈರೋ ನಿಷ್ಪರಿಗ್ರಹಃ।।

ಕೇವಲ ಪ್ರಾಪಂಚಿಕ ವಿಷಯಗಳನ್ನು ಅನುಭವಿಸುವುದಿಲ್ಲವೆಂದ ಮಾತ್ರಕ್ಕೆ ಅವನು ತ್ಯಾಗಿಯಾಗುವುದಿಲ್ಲ! ಪ್ರಾಪಂಚಿಕ ವಿಷಯಗಳಲ್ಲಿ ಮುಳುಗಿ ಅದರಿಂದಾಗುವ ದೋಷಗಳನ್ನು ಸಂಪೂರ್ಣವಾಗಿ ಅರಿತು ಅದರಿಂದ ನಿವೃತ್ತಿಯನ್ನು ಹೊಂದುವವನು ತ್ಯಾಗಿ ಎನಿಸಿಕೊಳ್ಳುತ್ತಾನೆ. ಅಂಥವನು ವಿರಾಗಿಯೂ, ಎಲ್ಲರ ಪ್ರೀತಿಪಾತ್ರನೂ, ಯಾರೊಂದಿಗೆ ವೈರತ್ವವಿಲ್ಲದವನೂ, ಸ್ವತಂತ್ರನೂ ಆಗಿರುತ್ತಾನೆ.

03002031a ತಸ್ಮಾತ್ಸ್ನೇಹಂ ಸ್ವಪಕ್ಷೇಭ್ಯೋ ಮಿತ್ರೇಭ್ಯೋ ಧನಸಂಚಯಾತ್।
03002031c ಸ್ವಶರೀರಸಮುತ್ಥಂ ತು ಜ್ಞಾನೇನ ವಿನಿವರ್ತಯೇತ್।।

ಆದ್ದರಿಂದಲೇ ಸ್ವಶರೀರದಿಂದ ಉದ್ಭವವಾದ ತನ್ನವರು, ಮಿತ್ರರು ಮತ್ತು ಧನಸಂಚಯದ ಮೇಲಿರುವ ಸ್ನೇಹವನ್ನು ಜ್ಞಾನದಿಂದ ಕಡಿಮೆಮಾಡಿಕೊಳ್ಳಬೇಕು.

03002032a ಜ್ಞಾನಾನ್ವಿತೇಷು ಮುಖ್ಯೇಷು ಶಾಸ್ತ್ರಜ್ಞೇಷು ಕೃತಾತ್ಮಸು।
03002032c ನ ತೇಷು ಸಜ್ಜತೇ ಸ್ನೇಹಃ ಪದ್ಮಪತ್ರೇಷ್ವಿವೋದಕಂ।।

ಪದ್ಮ ಪತ್ರವು ನೀರಿನಿಂದ ಹೇಗೆ ಒದ್ದೆಯಾಗುವುದಿಲ್ಲವೋ ಹಾಗೆ ಜ್ಞಾನಾನ್ವಿತರನ್ನು, ಮುಖ್ಯರನ್ನು, ಶಾಸ್ತ್ರಜ್ಞರನ್ನು ಮತ್ತು ಕೃತಾತ್ಮರನ್ನು ಈ ಯಾವ ಸ್ನೇಹಗಳೂ ಹಿಡಿಯುವುದಿಲ್ಲ5.

03002033a ರಾಗಾಭಿಭೂತಃ ಪುರುಷಃ ಕಾಮೇನ ಪರಿಕೃಷ್ಯತೇ।
03002033c ಇಚ್ಚಾ ಸಂಜಾಯತೇ ತಸ್ಯ ತತಸ್ತೃಷ್ಣಾ ಪ್ರವರ್ತತೇ।।

ರಾಗಕ್ಕೆ ಅಧೀನನಾದ ಪುರುಷನನ್ನು ವಿಷಯ ವಸ್ತುಗಳು ಎಳೆಯುತ್ತವೆ. ಅವುಗಳ ಮೇಲೆ ಆಸೆಯುಂಟಾಗುತ್ತದೆ. ಆ ಅಸೆಗಳು ಮುಂದೆ ತೃಷ್ಣೆ6ಯಾಗಿ ಪರಿವರ್ತನೆಗೊಳ್ಳುತ್ತವೆ.

03002034a ತೃಷ್ಣಾ ಹಿ ಸರ್ವಪಾಪಿಷ್ಠಾ ನಿತ್ಯೋದ್ವೇಗಕರೀ ನೃಣಾಂ।
03002034c ಅಧರ್ಮಬಹುಲಾ ಚೈವ ಘೋರಾ ಪಾಪಾನುಬಂಧಿನೀ।।

ಈ ತೃಷ್ಣೆಯೇ ಸರ್ವ ಪಾಪಿಷ್ಟ. ಇದೇ ನಿತ್ಯವೂ ಮನುಷ್ಯನನ್ನು ಅಧರ್ಮ ಮಾರ್ಗಕ್ಕೆ ಪ್ರಚೋದಿಸುತ್ತಿರುತ್ತದೆ ಮತ್ತು ಘೋರ ಪಾಪಗಳಿಗೆ ಅವನನ್ನು ಬಂಧಿಸುತ್ತದೆ.

03002035a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ।
03002035c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಂ।।

ಇದನ್ನು7 ತ್ಯಜಿಸುವುದು ದುರ್ಮತಿಗಳಿಗೆ ಬಹಳ ಕಷ್ಟ. ದೇಹ ಜೀರ್ಣವಾದರೂ ಇದು ಜೀರ್ಣವಾಗುವುದಿಲ್ಲ. ಇದು ಪ್ರಾಣವನ್ನೇ ಅಂತ್ಯಮಾಡುವ ರೋಗ. ತೃಷ್ಣೆಯನ್ನು ತ್ಯಜಿಸುವುದೇ ಸುಖ8.

03002036a ಅನಾದ್ಯಂತಾ ತು ಸಾ ತೃಷ್ಣಾ ಅಂತರ್ದೇಹಗತಾ ನೃಣಾಂ।
03002036c ವಿನಾಶಯತಿ ಸಂಭೂತಾ ಅಯೋನಿಜ ಇವಾನಲಃ।।

ಈ ತೃಷ್ಣೆಗೆ ಮೊದಲಿಲ್ಲ ಕೊನೆಯಿಲ್ಲ. ಮನುಷ್ಯನ ಒಳದೇಹವನ್ನು ಸೇರಿ ಅಯೋನಿಜ9 ಅಗ್ನಿಯಂತೆ ಹುಟ್ಟಿ ನಾಶಪಡಿಸುತ್ತದೆ.

03002037a ಯಥೈಧಃ ಸ್ವಸಮುತ್ಥೇನ ವಹ್ನಿನಾ ನಾಶಮೃಚ್ಚತಿ।
03002037c ತಥಾಕೃತಾತ್ಮಾ ಲೋಭೇನ ಸಹಜೇನ ವಿನಶ್ಯತಿ।।

ಕಟ್ಟಿಗೆಯು ಹೇಗೆ ತನ್ನಿಂದ ಹುಟ್ಟಿದ ಬೆಂಕಿಯಿಂದಲೇ ನಾಶಹೊಂದುತ್ತದೆಯೋ ಹಾಗೆ ತಾನೇ ಹುಟ್ಟಿಸಿಕೊಂಡ ಲೋಭದಿಂದ ಮನುಷ್ಯನು ಸಹಜವಾಗಿ ನಾಶಹೊಂದುತ್ತಾನೆ.

03002038a ರಾಜತಃ ಸಲಿಲಾದಗ್ನೇಶ್ಚೋರತಃ ಸ್ವಜನಾದಪಿ।
03002038c ಭಯಮರ್ಥವತಾಂ ನಿತ್ಯಂ ಮೃತ್ಯೋಃ ಪ್ರಾಣಭೃತಾಮಿವ।।

ಮರ್ತ್ಯರು10 ನಿತ್ಯವೂ ಹೇಗೆ ಮೃತ್ಯುವಿನ ಭಯದಲ್ಲಿರುತ್ತಾರೆಯೋ ಹಾಗೆ ಸಂಪತ್ತುಳ್ಳವನು ಸದಾ ರಾಜ, ನೀರು, ಅಗ್ನಿ, ಕಳ್ಳರು ಮತ್ತು ಸ್ವಜನರ11 ಭಯದಿಂದ ಇರುತ್ತಾನೆ.

03002039a ಯಥಾ ಹ್ಯಾಮಿಷಮಾಕಾಶೇ ಪಕ್ಷಿಭಿಃ ಶ್ವಾಪದೈರ್ಭುವಿ।
03002039c ಭಕ್ಷ್ಯತೇ ಸಲಿಲೇ ಮತ್ಸ್ಯೈಸ್ತಥಾ ಸರ್ವೇಣ ವಿತ್ತವಾನ್।।

ಮಾಂಸದ ತುಂಡನ್ನು ಆಕಾಶದಲ್ಲೆಸೆದರೆ ಪಕ್ಷಿಗಳು, ಭೂಮಿಯಲಿಟ್ಟರೆ ಪಶುಗಳು, ನೀರಿನಲ್ಲಿಟ್ಟರೆ ಮೀನುಗಳು ಹೇಗೆ ತಿಂದುಬಿಡುವವೋ ಹಾಗೆ ಹಣವಿದ್ದವನಿಗೆ ಎಲ್ಲದರಿಂದಲೂ ಭಯ.

03002040a ಅರ್ಥ ಏವ ಹಿ ಕೇಷಾಂ ಚಿದನರ್ಥೋ ಭವಿತಾ ನೃಣಾಂ।
03002040c ಅರ್ಥಶ್ರೇಯಸಿ ಚಾಸಕ್ತೋ ನ ಶ್ರೇಯೋ ವಿಂದತೇ ನರಃ।
03002040e ತಸ್ಮಾದರ್ಥಾಗಮಾಃ ಸರ್ವೇ ಮನೋಮೋಹವಿವರ್ಧನಾಃ।।
03002041a ಕಾರ್ಪಣ್ಯಂ ದರ್ಪಮಾನೌ ಚ ಭಯಮುದ್ವೇಗ ಏವ ಚ।

ಕೆಲವು ಮನುಷ್ಯರಿಗೆ ಅರ್ಥವೇ12 ಅನರ್ಥವಾಗುತ್ತದೆ. ಐಶ್ವರ್ಯ ಮತ್ತು ಕೀರ್ತಿಗಳಲ್ಲಿಯೇ ಆಸಕ್ತನಾದ ಮನುಷ್ಯನಿಗೆ ಶ್ರೇಯಸ್ಸು ದೊರೆಯಲಾರದು. ಆದುದರಿಂದ ಹಣವು ಬರುತ್ತಿದ್ದಂತೆ ಮನಸ್ಸಿನ ಮೋಹವು ಹೆಚ್ಚಾಗುತ್ತದೆ, ಕಾರ್ಪಣ್ಯ ದರ್ಪ, ಮತ್ತು ಭಯ ಉದ್ವೇಗಗಳೂ ಹೆಚ್ಚಾಗುತ್ತವೆ.

03002041c ಅರ್ಥಜಾನಿ ವಿದುಃ ಪ್ರಾಜ್ಞಾ ದುಃಖಾನ್ಯೇತಾನಿ ದೇಹಿನಾಂ।।
03002042a ಅರ್ಥಸ್ಯೋಪಾರ್ಜನೇ ದುಃಖಂ ಪಾಲನೇ ಚ ಕ್ಷಯೇ ತಥಾ।
03002042c ನಾಶೇ ದುಃಖಂ ವ್ಯಯೇ ದುಃಖಂ ಘ್ನಂತಿ ಚೈವಾರ್ಥಕಾರಣಾತ್।।

ಅರ್ಥಸಂಚಯದಿಂದ ಮನುಷ್ಯರಿಗೆ ಹುಟ್ಟುವ ದುಃಖಗಳನ್ನು ಪ್ರಾಜ್ಞರು ಅರಿತುಕೊಂಡಿದ್ದಾರೆ. ಹಣವನ್ನು ಗಳಿಸುವಾಗ ದುಃಖ, ಅದನ್ನು ಇಟ್ಟುಕೊಳ್ಳುವುದರಲ್ಲಿ ಮತ್ತು ಖರ್ಚುಮಾಡುವುದರಲ್ಲಿ ಕಷ್ಟ, ನಾಶವಾದರೆ ದುಃಖ, ವ್ಯಯವಾದರೆ ದುಃಖ. ಕೆಲವರು ಹಣಕ್ಕಾಗಿ ಕೊಲೆಯನ್ನೂ ಮಾಡುತ್ತಾರೆ!

03002043a ಅರ್ಥಾ ದುಃಖಂ ಪರಿತ್ಯಕ್ತುಂ ಪಾಲಿತಾಶ್ಚಾಪಿ ತೇಽಸುಖಾಃ।
03002043c ದುಃಖೇನ ಚಾಧಿಗಮ್ಯಂತೇ ತೇಷಾಂ ನಾಶಂ ನ ಚಿಂತಯೇತ್।।
03002044a ಅಸಂತೋಷಪರಾ ಮೂಢಾಃ ಸಂತೋಷಂ ಯಾಂತಿ ಪಂಡಿತಾಃ।
03002044c ಅಂತೋ ನಾಸ್ತಿ ಪಿಪಾಸಾಯಾಃ ಸಂತೋಷಃ ಪರಮಂ ಸುಖಂ।।

ಸಂಪತ್ತನ್ನು ತ್ಯಜಿಸುವುದು ಕಷ್ಟ. ಪಾಲಿಸುವುದು ಅದಕ್ಕಿಂತಲೂ ಕಷ್ಟ. ಗಳಿಸುವುದೇ ಅತಿ ಕಷ್ಟವಾದ ಸಂಪತ್ತು ನಾಶವಾದರೆ ಚಿಂತಿಸಬಾರದು. ಮೂಢರು ಅಸಂತೋಷಪರರು. ಪಂಡಿತರು ಸಂತೋಷವನ್ನು ಹೊಂದುತ್ತಾರೆ. ಬಾಯಾರಿಕೆಗೆ ಕೊನೆಯೇ ಇಲ್ಲ. ಸಂತೋಷವೇ ಪರಮ ಸುಖ.

03002045a ತಸ್ಮಾತ್ಸಂತೋಷಮೇವೇಹ ಧನಂ ಪಶ್ಯಂತಿ ಪಂಡಿತಾಃ।
03002045c ಅನಿತ್ಯಂ ಯೌವನಂ ರೂಪಂ ಜೀವಿತಂ ದ್ರವ್ಯಸಂಚಯಃ।
03002045e ಐಶ್ವರ್ಯಂ ಪ್ರಿಯಸಂವಾಸೋ ಗೃಧ್ಯೇದೇಷು ನ ಪಂಡಿತಃ।।

ಆದುದರಿಂದ ಸಂತೋಷವೇ ಪರಮ ಧನವೆಂದು ಪಂಡಿತರು ಕಂಡುಕೊಂಡಿದ್ದಾರೆ. ಯೌವನ, ರೂಪ, ಜೀವಿತ, ದ್ರವ್ಯಸಂಚಯ, ಐಶ್ವರ್ಯ, ಪ್ರಿಯರ ಸಹವಾಸ ಎಲ್ಲವೂ ಅನಿತ್ಯ. ಪಂಡಿತರು ಇವುಗಳ ಮೇಲೆ ಆಸೆಪಡುವುದಿಲ್ಲ.

03002046a ತ್ಯಜೇತ ಸಂಚಯಾಂಸ್ತಸ್ಮಾತ್ತಜ್ಜಂ ಕ್ಲೇಶಂ ಸಹೇತ ಕಃ।
03002046c ನ ಹಿ ಸಂಚಯವಾನ್ಕಶ್ಚಿದ್ದೃಶ್ಯತೇ ನಿರುಪದ್ರವಃ।।

ಕೂಡಿಡುವುದನ್ನು ಬಿಟ್ಟುಬಿಡು! ಅದರಿಂದಾಗುವ ಕಷ್ಟಗಳನ್ನು ಯಾರು ತಾನೇ ಸಹಿಸಿಯಾರು? ಉಪದ್ರವಗಳಿಲ್ಲದೇ ಒಟ್ಟುಗೂಡಿಸುವವನನ್ನು ಕಾಣುವುದೇ ಇಲ್ಲ.

03002047a ಅತಶ್ಚ ಧರ್ಮಿಭಿಃ ಪುಂಭಿರನೀಹಾರ್ಥಃ ಪ್ರಶಸ್ಯತೇ।
03002047c ಪ್ರಕ್ಷಾಲನಾದ್ಧಿ ಪಂಕಸ್ಯ ದೂರಾದಸ್ಪರ್ಶನಂ ವರಂ।।

ಆದುದರಿಂದಲೇ ಧಾರ್ಮಿಕರು ಸಂಪತ್ತಿನ ಅನಾಸಕ್ತರನ್ನು ಪ್ರಶಂಸಿಸುತ್ತಾರೆ. ಕೆಸರನ್ನು ನಂತರ ಒರೆಸಿಕೊಳ್ಳುವುದಕ್ಕಿಂತ ಅದನ್ನು ಮುಟ್ಟದೇ ಇರುವುದು ಒಳ್ಳೆಯದು!

03002048a ಯುಧಿಷ್ಠಿರೈವಮರ್ಥೇಷು ನ ಸ್ಪೃಹಾಂ ಕರ್ತುಮರ್ಹಸಿ।
03002048c ಧರ್ಮೇಣ ಯದಿ ತೇ ಕಾರ್ಯಂ ವಿಮುಕ್ತೇಚ್ಚೋ ಭವಾರ್ಥತಃ।।

ಯುಧಿಷ್ಠಿರ! ಸಂಪತ್ತನ್ನು ಬಯಸಬಾರದು. ಧರ್ಮದ ಪ್ರಕಾರ ನಡೆಯಬೇಕೆಂದರೆ ನೀನು ಸಂಪತ್ತನ್ನು ಬಯಸುವುದನ್ನು ಬಿಟ್ಟುಬಿಡು!”

03002049 ಯುಧಿಷ್ಠಿರ ಉವಾಚ।
03002049a ನಾರ್ಥೋಪಭೋಗಲಿಪ್ಸಾರ್ಥಮಿಯಮರ್ಥೇಪ್ಸುತಾ ಮಮ।
03002049c ಭರಣಾರ್ಥಂ ತು ವಿಪ್ರಾಣಾಂ ಬ್ರಹ್ಮನ್ಕಾಂಕ್ಷೇ ನ ಲೋಭತಃ।।

ಯುಧಿಷ್ಠಿರನು ಹೇಳಿದನು: “ಭೋಗಿಸುವ ಇಚ್ಛೆಯಿಂದ ನಾನು ಸಂಪತ್ತನ್ನು ಬಯಸುತ್ತಿಲ್ಲ. ಬ್ರಹ್ಮನ್! ವಿಪ್ರರನ್ನು ಪೊರೆಯಲು ಬಯಸುತ್ತೇನೆಯೇ ಹೊರತು ಲೋಭದಿಂದಲ್ಲ.

03002050a ಕಥಂ ಹ್ಯಸ್ಮದ್ವಿಧೋ ಬ್ರಹ್ಮನ್ವರ್ತಮಾನೋ ಗೃಹಾಶ್ರಮೇ।
03002050c ಭರಣಂ ಪಾಲನಂ ಚಾಪಿ ನ ಕುರ್ಯಾದನುಯಾಯಿನಾಂ।।

ಬ್ರಹ್ಮನ್! ಈಗ ಗೃಹಸ್ಥಾಶ್ರಮದಲ್ಲಿರುವ ನನ್ನಂಥವನು ಅನುಸರಿಸಿ ಬಂದಿರುವವರ ಪಾಲನೆ ಪೋಷಣೆಯನ್ನು ಹೇಗೆ ಮಾಡಬಲ್ಲ?

03002051a ಸಂವಿಭಾಗೋ ಹಿ ಭೂತಾನಾಂ ಸರ್ವೇಷಾಮೇವ ಶಿಷ್ಯತೇ।
03002051c ತಥೈವಾಪಚಮಾನೇಭ್ಯಃ ಪ್ರದೇಯಂ ಗೃಹಮೇಧಿನಾ।।

ಎಲ್ಲವನ್ನೂ ಎಲ್ಲರೊಂದಿಗೂ ಹಂಚಿಕೊಳ್ಳಬೇಕು ಎಂದು ಕಲಿಸಿಕೊಡುತ್ತಾರೆ. ಅದರಂತೆ ಗೃಹಸ್ಥನಾದವನು ಯಾರು ಅಡುಗೆ ಮಾಡಿಕೊಳ್ಳುವುದಿಲ್ಲವೋ ಅವರಿಗೆ ಕೊಡಬೇಕು13.

03002052a ತೃಣಾನಿ ಭೂಮಿರುದಕಂ ವಾಕ್ಚತುರ್ಥೀ ಚ ಸೂನೃತಾ।
03002052c ಸತಾಮೇತಾನಿ ಗೇಹೇಷು ನೋಚ್ಚಿದ್ಯಂತೇ ಕದಾ ಚನ।।

ಒಳ್ಳೆಯವರ ಮನೆಯಲ್ಲಿ ಈ ನಾಲ್ಕಕ್ಕೆ ಎಂದೂ ಕೊರತೆಯಿರಬಾರದು: ಆಹಾರ, ನೆಲ, ನೀರು ಮತ್ತು ಸ್ವಾಗತದ ಮಾತುಗಳು.

03002053a ದೇಯಮಾರ್ತಸ್ಯ ಶಯನಂ ಸ್ಥಿತಶ್ರಾಂತಸ್ಯ ಚಾಸನಂ।
03002053c ತೃಷಿತಸ್ಯ ಚ ಪಾನೀಯಂ ಕ್ಷುಧಿತಸ್ಯ ಚ ಭೋಜನಂ।

ಆರ್ತನಾದವನಿಗೆ ಹಾಸಿಗೆಯನ್ನು ಕೊಡಬೇಕು, ನಿಂತು ಆಯಾಸಗೊಂಡವನಿಗೆ ಆಸನವನ್ನು ಕೊಡಬೇಕು, ಬಾಯಾರಿದವನಿಗೆ ನೀರನ್ನು ಕೊಡಬೇಕು, ಮತ್ತು ಹಸಿದವನಿಗೆ ಊಟವನ್ನು ನೀಡಬೇಕು.

03002054a ಚಕ್ಷುರ್ದದ್ಯಾನ್ಮನೋ ದದ್ಯಾದ್ವಾಚಂ ದದ್ಯಾಚ್ಚ ಸೂನೃತಾಂ।
03002054c ಪ್ರತ್ಯುದ್ಗಮ್ಯಾಭಿಗಮನಂ ಕುರ್ಯಾನ್ನ್ಯಾಯೇನ ಚಾರ್ಚನಂ।।

ಒಳ್ಳೆಯ ನೋಟದಲ್ಲಿ ನೋಡಬೇಕು, ಒಳ್ಳೆಯ ಮನಸ್ಸನ್ನು ತೋರಿಸಬೇಕು, ಒಳ್ಳೆಯ ಮಾತನ್ನು ಆಡಬೇಕು, ಮತ್ತು ಮೇಲೆದ್ದು ಬಂದವನನ್ನು ಸ್ವಾಗತಿಸಿ ನ್ಯಾಯೋಚಿತವಾಗಿ ಸತ್ಕರಿಸಬೇಕು.

03002055a ಅಘಿಹೋತ್ರಮನಡ್ವಾಂಶ್ಚ ಜ್ಞಾತಯೋಽತಿಥಿಬಾಂಧವಾಃ।
03002055c ಪುತ್ರದಾರಭೃತಾಶ್ಚೈವ ನಿರ್ದಹೇಯುರಪೂಜಿತಾಃ।।

ಸರಿಯಾದ ಗೌರವವನ್ನು ನೀಡದಿದ್ದರೆ ಅಗ್ನಿಹೋತ್ರ, ಸಾಕಿದ ಪ್ರಾಣಿಗಳು, ದಾಯಾದಿಗಳು, ಅತಿಥಿ-ಬಾಂಧವರು, ಸೊಸೆ, ಸೇವಕರೂ ಎಲ್ಲವನ್ನೂ ಅದು ಸುಟ್ಟುಬಿಡುತ್ತದೆ.

03002056a ನಾತ್ಮಾರ್ಥಂ ಪಾಚಯೇದನ್ನಂ ನ ವೃಥಾ ಘಾತಯೇತ್ಪಶೂನ್।
03002056c ನ ಚ ತತ್ಸ್ವಯಮಶ್ನೀಯಾದ್ವಿಧಿವದ್ಯನ್ನ ನಿರ್ವಪೇತ್।।

ಕೇವಲ ತನಗೋಸ್ಕರ ಮಾತ್ರ ಅನ್ನವನ್ನು ಮಾಡಬಾರದು ಮತ್ತು ವೃಥಾ ಪಶುವನ್ನು ಕೊಲ್ಲಬಾರದು. ಹಾಗೆಯೇ ಅಡುಗೆಯನ್ನು ವಿಧಿವತ್ತಾಗಿ ನೈವೇದ್ಯ ಮಾಡದೇ ತಾನೊಬ್ಬನೇ ಊಟಮಾಡಬಾರದು.

03002057a ಶ್ವಭ್ಯಶ್ಚ ಶ್ವಪಚೇಭ್ಯಶ್ಚ ವಯೋಭ್ಯಶ್ಚಾವಪೇದ್ಭುವಿ।
03002057c ವೈಶ್ವದೇವಂ ಹಿ ನಾಮೈತತ್ಸಾಯಂಪ್ರಾತರ್ವಿಧೀಯತೇ।।

ನಾಯಿಗಳು ಮತ್ತು ಪಕ್ಷಿಗಳಿಗೆಂದು ನೆಲದ ಮೇಲೆ ಸ್ವಲ್ಪ ಆಹಾರವನ್ನು ಹಾಕಬೇಕು. ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ವಿಧಿವತ್ತಾಗಿ ವೈಶ್ವದೇವವನ್ನು ಮಾಡಬೇಕು14.

03002058a ವಿಘಸಾಶೀ ಭವೇತ್ತಸ್ಮಾನ್ನಿತ್ಯಂ ಚಾಮೃತಭೋಜನಃ।
03002058c ವಿಘಸಂ ಭೃತ್ಯಶೇಷಂ ತು ಯಜ್ಞಶೇಷಂ ತಥಾಮೃತಂ।।

ಆದುದರಿಂದ ನಿತ್ಯವೂ ವಿಘಸ ಮತ್ತು ಅಮೃತವನ್ನು ಊಟಮಾಡಬೇಕು. ಅವಲಂಬಿಸಿರುವವರು15 ತಿಂದು ಉಳಿದಿದ್ದುದು ವಿಘಸ ಮತ್ತು ಯಜ್ಞದಿಂದ ಉಳಿದ ಆಹಾರವು ಅಮೃತ.

03002059a ಏತಾಂ ಯೋ ವರ್ತತೇ ವೃತ್ತಿಂ ವರ್ತಮಾನೋ ಗೃಹಾಶ್ರಮೇ।
03002059c ತಸ್ಯ ಧರ್ಮಂ ಪರಂ ಪ್ರಾಹುಃ ಕಥಂ ವಾ ವಿಪ್ರ ಮನ್ಯಸೇ।।

ಗೃಹಸ್ಥಾಶ್ರಮದಲ್ಲಿರುವ ಯಾರು ಈ ರೀತಿ ವರ್ತಿಸುತ್ತಾರೆಯೋ ಅವನ ಧರ್ಮವು ಶ್ರೇಷ್ಠವಾದುದು ಎಂದು ಹೇಳುತ್ತಾರೆ. ವಿಪ್ರ! ನಿನ್ನ ಅಭಿಪ್ರಾಯವೇನು?”

03002060 ಶೌನಕ ಉವಾಚ।
03002060a ಅಹೋ ಬತ ಮಹತ್ಕಷ್ಟಂ ವಿಪರೀತಮಿದಂ ಜಗತ್।
03002060c ಯೇನಾಪತ್ರಪತೇ ಸಾಧುರಸಾಧುಸ್ತೇನ ತುಷ್ಯತಿ।।

ಶೌನಕನು ಹೇಳಿದನು: “ಅಯ್ಯೋ! ಈ ಜಗತ್ತಿನಲ್ಲಿ ಬಹಳಷ್ಟು ರೀತಿಯ ವಿಪರೀತ ಅರ್ಥಕೊಡುವ ಸಿಂದ್ಧಾಂತಗಳಿವೆ! ಯಾವುದು ಒಳ್ಳೆಯದು ಎಂದೆನಿಸುತ್ತದೆಯೋ ಅದು ಕೆಟ್ಟದು ಎನ್ನೂ ಅನ್ನಿಸಿಕೊಳ್ಳುತ್ತದೆ.

03002061a ಶಿಶ್ನೋದರಕೃತೇಽಪ್ರಾಜ್ಞಃ ಕರೋತಿ ವಿಘಸಂ ಬಹು।
03002061c ಮೋಹರಾಗಸಮಾಕ್ರಾಂತ ಇಂದ್ರಿಯಾರ್ಥವಶಾನುಗಃ।।

ತಿಳುವಳಿಕೆಯಿಲ್ಲದವನು ಶಿಶ್ನ ಮತ್ತು ಹೊಟ್ಟೆಗಾಗಿ ಬಹಳಷ್ಟು ಸಂಪಾದನೆಯನ್ನು ಮಾಡುತ್ತಾನೆ. ಮೋಹ-ರಾಗಗಳಿಂದ ಪೀಡಿತನಾಗಿ ಇಂದ್ರಿಯಗಳ ಮತ್ತು ಸಂಪತ್ತಿನ ವಶದಲ್ಲಿ ಬರುತ್ತಾನೆ.

03002062a ಹ್ರಿಯತೇ ಬುಧ್ಯಮಾನೋಽಪಿ ನರೋ ಹಾರಿಭಿರಿಂದ್ರಿಯೈಃ।
03002062c ವಿಮೂಢಸಂಜ್ಞೋ ದುಷ್ಟಾಶ್ವೈರುದ್ಭ್ರಾಂತೈರಿವ ಸಾರಥಿಃ।।

ಎಷ್ಟೇ ಬುದ್ಧಿವಂತನಾಗಿದ್ದರೂ ಮನುಷ್ಯನನ್ನು ಇಂದ್ರಿಯಗಳೆಂಬ ಕುದುರೆಗಳು ಮೂಢಾತ್ಮ ಭ್ರಾಂತ ಸಾರಥಿಯನ್ನು ದುಷ್ಟ ಕುದುರೆಗಳು ಕೊಂಡೊಯ್ಯುವಂತೆ ಕೊಂಡೊಯ್ಯುತ್ತವೆ.

03002063a ಷಡಿಂದ್ರಿಯಾಣಿ ವಿಷಯಂ ಸಮಾಗಚ್ಚಂತಿ ವೈ ಯದಾ।
03002063c ತದಾ ಪ್ರಾದುರ್ಭವತ್ಯೇಷಾಂ ಪೂರ್ವಸಂಕಲ್ಪಜಂ ಮನಃ।।

ಆರು ಇಂದ್ರಿಯಗಳು16 ತಮ್ಮ ತಮ್ಮ ವಿಷಯಗಳನ್ನು ಹಿಂಬಾಲಿಸುತ್ತಿರುತ್ತವೆ. ಅದರಿಂದಾಗಿ ಮನಸ್ಸಿನಲ್ಲಿ ಅವುಗಳನ್ನು ಪಡೆಯಲೇ ಬೇಕೆಂಬ ಸಂಕಲ್ಪವು ಮೂಡುತ್ತದೆ.

03002064a ಮನೋ ಯಸ್ಯೇಂದ್ರಿಯಗ್ರಾಮವಿಷಯಂ ಪ್ರತಿ ಚೋದಿತಂ।
03002064c ತಸ್ಯೌತ್ಸುಕ್ಯಂ ಸಂಭವತಿ ಪ್ರವೃತ್ತಿಶ್ಚೋಪಜಾಯತೇ।।

ಇಂದ್ರಿಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮನಸ್ಸು ಪ್ರಚೋದಿತವಾದಾಗ ಅವನಲ್ಲಿ ಆಸೆಯು ಹುಟ್ಟುತ್ತದೆ ಮತ್ತು ಅವುಗಳನ್ನು ಪಡೆಯುವ ಅಭ್ಯಾಸವು ಉಂಟಾಗುತ್ತದೆ.

03002065a ತತಃ ಸಂಕಲ್ಪವೀರ್ಯೇಣ ಕಾಮೇನ ವಿಷಯೇಷುಭಿಃ।
03002065c ವಿದ್ಧಃ ಪತತಿ ಲೋಭಾಗ್ನೌ ಜ್ಯೋತಿರ್ಲೋಭಾತ್ಪತಂಗವತ್।।

ಅನಂತರ ಪತಂಗವು ಬೆಳಕೆಂಬ ಭ್ರಾಂತಿಯಿಂದ ಬೆಂಕಿಯಲ್ಲಿ ಬಿದ್ದು ಭಸ್ಮವಾಗಿ ಹೋಗುವಂತೆ ಮಾನವನು ಸಂಕಲ್ಪದಿಂದ ಹುಟ್ಟುವ ಕಾಮನ ವಿಷಯಗಳೆಂಬ ಬಾಣಗಳಿಗೆ ತುತ್ತಾಗಿ ಲೋಭವೆಂಬ ಮಹಾಗ್ನಿಯಲ್ಲಿ ಬೀಳುತ್ತಾನೆ.

03002066a ತತೋ ವಿಹಾರೈರಾಹಾರೈರ್ಮೋಹಿತಶ್ಚ ವಿಶಾಂ ಪತೇ।
03002066c ಮಹಾಮೋಹಮುಖೇ ಮಗ್ನೋ ನಾತ್ಮಾನಮವಬುಧ್ಯತೇ।।

ವಿಶಾಂಪತೇ! ಆಹಾರ-ವಿಹಾರಗಳಲ್ಲಿ ಮೋಹಿತನಾಗಿ ಅದೇ ಮಹಾಮೋಹಕ ಸುಖದಲ್ಲಿ ಮಗ್ನನಾದವನಿಗೆ ತಾನು ಯಾರು ಎನ್ನುವುದರ ಅರಿವೇ ಇರುವುದಿಲ್ಲ.

03002067a ಏವಂ ಪತತಿ ಸಂಸಾರೇ ತಾಸು ತಾಸ್ವಿಹ ಯೋನಿಷು।
03002067c ಅವಿದ್ಯಾಕರ್ಮತೃಷ್ಣಾಭಿರ್ಭ್ರಾಮ್ಯಮಾಣೋಽಥ ಚಕ್ರವತ್।।

ಹೀಗೆ ಅವನು ಅವಿದ್ಯ, ಕರ್ಮ ಮತ್ತು ತೃಷ್ಣೆಯಿಂದ ತಿರುಗಿಸಲ್ಪಟ್ಟ ಚಕ್ರದಂತೆ ಒಂದು ಯೋನಿಯಿಂದ ಇನ್ನೊಂದು ಯೋನಿಗೆ ಸೇರುತ್ತಾ ಈ ಸಂಸಾರದಲ್ಲಿ ಬೀಳುತ್ತಾನೆ.

03002068a ಬ್ರಹ್ಮಾದಿಷು ತೃಣಾಂತೇಷು ಹೂತೇಷು ಪರಿವರ್ತತೇ।
03002068c ಜಲೇ ಭುವಿ ತಥಾಕಾಶೇ ಜಾಯಮಾನಃ ಪುನಃ ಪುನಃ।।

ಹುಲ್ಲಿನ ಕಡ್ಡಿಯಂತೆ ನೀರಿನಲ್ಲಿ, ಭೂಮಿಯಲ್ಲಿ ಮತ್ತು ಆಕಾಶದಲ್ಲಿ ಬ್ರಹ್ಮನಿಂದ ಪುನಃ ಪುನಃ ಹುಟ್ಟುತ್ತಾನೆ.

03002069a ಅಬುಧಾನಾಂ ಗತಿಸ್ತ್ವೇಷಾ ಬುಧಾನಾಮಪಿ ಮೇ ಶೃಣು।
03002069c ಯೇ ಧರ್ಮೇ ಶ್ರೇಯಸಿ ರತಾ ವಿಮೋಕ್ಷರತಯೋ ಜನಾಃ।।

ಇದು ತಿಳಿಯದೇ ಇದ್ದವರು ಹೋಗುವ ಮಾರ್ಗ. ಈಗ ಧರ್ಮದಲ್ಲಿರಲು ಬಯಸುವ, ಮೋಕ್ಷವನ್ನು ಬಯಸುವ, ತಿಳಿದವರ ಕುರಿತು ನನ್ನಿಂದ ಕೇಳು.

03002070a ಯದಿದಂ ವೇದವಚನಂ ಕುರು ಕರ್ಮ ತ್ಯಜೇತಿ ಚ।
03002070c ತಸ್ಮಾದ್ಧರ್ಮಾನಿಮಾನ್ಸರ್ವಾನ್ನಾಭಿಮಾನಾತ್ಸಮಾಚರೇತ್।।

ಕರ್ಮವನ್ನು ಮಾಡು ಮತ್ತು ತ್ಯಜಿಸು ಎನ್ನುವುದೇ ವೇದವಾಕ್ಯ. ಇದರಂತೆ ಅಭಿಮಾನದಿಂದ ಯಾವ ಧರ್ಮವನ್ನೂ ಆಚರಿಸಬಾರದು.

03002071a ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಕ್ಷಮಾ ದಮಃ।
03002071c ಅಲೋಭ ಇತಿ ಮಾರ್ಗೋಽಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ।।

ಸ್ಮೃತಿಗಳ ಪ್ರಕಾರ ಎಂಟು ವಿಧದ ಧರ್ಮ ಮಾರ್ಗಗಳಿವೆ: ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಕ್ಷಮೆ, ದಮ ಮತ್ತು ಅಲೋಭ.

03002072a ತತ್ರ ಪೂರ್ವಶ್ಚತುರ್ವರ್ಗಃ ಪಿತೃಯಾನಪಥೇ ಸ್ಥಿತಃ।
03002072c ಕರ್ತವ್ಯಮಿತಿ ಯತ್ಕಾರ್ಯಂ ನಾಭಿಮಾನಾತ್ಸಮಾಚರೇತ್।।

ಇವುಗಳಲ್ಲಿ ಮೊದಲ ನಾಲ್ಕು ಪಿತೃಗಳು ಹೋಗುವ ಮಾರ್ಗದಲ್ಲಿರುವವು ಎಂದು ವರ್ಗೀಕೃತವಾಗಿವೆ. ಇವುಗಳನ್ನು ಅಭಿಮಾನದಿಂದ ಮಾಡಬಾರದು. ಕೇವಲ ಕರ್ತವ್ಯವೆಂದು ಮಾತ್ರ ಮಾಡಬೇಕು.

03002073a ಉತ್ತರೋ ದೇವಯಾನಸ್ತು ಸದ್ಭಿರಾಚರಿತಃ ಸದಾ।
03002073c ಅಷ್ಟಾಂಗೇನೈವ ಮಾರ್ಗೇಣ ವಿಶುದ್ಧಾತ್ಮಾ ಸಮಾಚರೇತ್।।

ಇತರ ನಾಲ್ಕು ಸದಾ ಒಳ್ಳೆಯ ನಡತೆಯುಳ್ಳವರ ದೇವತೆಗಳ ಮಾರ್ಗಗಳು. ಈ ಎಂಟು ಮಾರ್ಗಗಳ ಆಚರಣೆಯಿಂದಲೇ ವಿಶುದ್ಧಾತ್ಮನಾಗುತ್ತಾನೆ.

03002074a ಸಮ್ಯಕ್ಸಂಕಲ್ಪಸಂಬನ್ಧಾತ್ಸಮ್ಯಕ್ಚೇಂದ್ರಿಯನಿಗ್ರಹಾತ್।
03002074c ಸಮ್ಯಗ್ವ್ರತವಿಶೇಷಾಚ್ಚ ಸಮ್ಯಕ್ಚ ಗುರುಸೇವನಾತ್।।
03002075a ಸಮ್ಯಗಾಹಾರಯೋಗಾಚ್ಚ ಸಮ್ಯಕ್ಚಾಧ್ಯಯನಾಗಮಾತ್।
03002075c ಸಮ್ಯಕ್ಕರ್ಮೋಪಸಂನ್ಯಾಸಾತ್ಸಮ್ಯಕ್ಚಿತ್ತನಿರೋಧನಾತ್।
03002075e ಏವಂ ಕರ್ಮಾಣಿ ಕುರ್ವಂತಿ ಸಂಸಾರವಿಜಿಗೀಷವಃ।।

ಸರಿಯಾದ ಸಂಕಲ್ಪ-ಸಂಬಂಧಗಳಿಂದ, ಸರಿಯಾದ ಇಂದ್ರಯನಿಗ್ರಹದಿಂದ, ಸರಿಯಾದ ವಿಶೇಷವ್ರತಗಳಿಂದ, ಸರಿಯಾದ ಗುರುಸೇವನೆಯಿಂದ, ಸರಿಯಾದ ಆಹಾರ-ಯೋಗಗಳಿಂದ, ಸರಿಯಾದ ಆಗಮ-ಅಧ್ಯಯನಗಳಿಂದ, ಸರಿಯಾದ ಕರ್ಮ ಮತ್ತು ಸನ್ಯಾಸಗಳಿಂದ, ಸರಿಯಾದ ಚಿತ್ತನಿರೋಧದಿಂದ ಸಂಸಾರವನ್ನು ಗೆಲ್ಲಲಿಚ್ಛಿಸುವವರು ಕರ್ಮಗಳನ್ನು ಮಾಡುತ್ತಾರೆ.

03002076a ರಾಗದ್ವೇಷವಿನಿರ್ಮುಕ್ತಾ ಐಶ್ವರ್ಯಂ ದೇವತಾ ಗತಾಃ।
03002076c ರುದ್ರಾಃ ಸಾಧ್ಯಾಸ್ತಥಾದಿತ್ಯಾ ವಸವೋಽಥಾಶ್ವಿನಾವಪಿ।
03002076e ಯೋಗೈಶ್ವರ್ಯೇಣ ಸಂಯುಕ್ತಾ ಧಾರಯಂತಿ ಪ್ರಜಾ ಇಮಾಃ।।

ರುದ್ರರು, ಸಾಧ್ಯರು, ಆದಿತ್ಯರು, ವಸವರು ಮತ್ತು ಅಶ್ವಿನರು ರಾಗದ್ವೇಷಗಳಿಂದ ವಿಮುಕ್ತರಾದುದರಿಂದಲೇ ದೈವತ್ವ ಐಶ್ವರ್ಯವನ್ನು ಪಡೆದಿದ್ದಾರೆ. ಯೋಗೈಶ್ವರ್ಯದಿಂದ ಕೂಡಿದವರಾಗಿ ಎಲ್ಲ ಪ್ರಜೆಗಳನ್ನು ಪಾಲಿಸುತ್ತಾರೆ.

03002077a ತಥಾ ತ್ವಮಪಿ ಕೌಂತೇಯ ಶಮಮಾಸ್ಥಾಯ ಪುಷ್ಕಲಂ।
03002077c ತಪಸಾ ಸಿದ್ಧಿಮನ್ವಿಚ್ಚ ಯೋಗಸಿದ್ಧಿಂ ಚ ಭಾರತ।।

ಕೌಂತೇಯ! ಭಾರತ! ನೀನೂ ಕೂಡ ಅತೀವ ಶಾಂತತೆಯನ್ನು ಸಾಧಿಸಬೇಕು. ತಪಸ್ಸಿನಿಂದ ಮನೋ ಸಿದ್ಧಿಯನ್ನೂ ಯೋಗಸಿದ್ಧಿಯನ್ನೂ ಪಡೆ.

03002078a ಪಿತೃಮಾತೃಮಯೀ ಸಿದ್ಧಿಃ ಪ್ರಾಪ್ತಾ ಕರ್ಮಮಯೀ ಚ ತೇ।
03002078c ತಪಸಾ ಸಿದ್ಧಿಮನ್ವಿಚ್ಚ ದ್ವಿಜಾನಾಂ ಭರಣಾಯ ವೈ।।

ಕರ್ಮಮಯಿಯಾದ ನೀನು ತಂದೆ ತಾಯಿಗಳಿಂದ ಪಡೆಯುವ ಸಿದ್ಧಿಯನ್ನು ಪಡೆದಿದ್ದೀಯೆ. ದ್ವಿಜರನ್ನು ಪಾಲಿಸುವುದರಿಂದ ಮತ್ತು ತಪಸ್ಸಿನಿಂದ ಸಿದ್ಧಿಯನ್ನು ಪಡೆದುಕೋ.

03002079a ಸಿದ್ಧಾ ಹಿ ಯದ್ಯದಿಚ್ಚಂತಿ ಕುರ್ವತೇ ತದನುಗ್ರಹಾತ್।
03002079c ತಸ್ಮಾತ್ತಪಃ ಸಮಾಸ್ಥಾಯ ಕುರುಷ್ವಾತ್ಮಮನೋರಥಂ।।

ಸಿದ್ಧಿಯನ್ನು ಪಡೆದವರೇ ಅದರ ಸಹಾಯದಿಂದ ಬೇಕಾದುದನ್ನೆಲ್ಲ ಮಾಡಬಲ್ಲವರಾಗುತ್ತಾರೆ. ಆದುದರಿಂದ ತಪಸ್ಸಿನಲ್ಲಿ ನಿರತನಾಗಿ ನಿನ್ನ ಮನೋರಥವನ್ನು ಈಡೇರಿಸಿಕೋ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ಪಾಂಡವಾನಾಂ ಪ್ರವ್ರಜನೇ ದ್ವಿತೀಯೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ಪಾಂಡವರ ಪ್ರವ್ರಜನ ಎನ್ನುವ ಎರಡನೆಯ ಅಧ್ಯಾಯವು.


  1. ಅನಿಷ್ಟಪ್ರಾಪ್ತಿ . ↩︎

  2. ಇಷ್ಟ ವಿಯೋಗ ↩︎

  3. ಹಚ್ಚಿ ಕೊಳ್ಳುವುದು ↩︎

  4. ಭಾವ ಎಂದರೆ ವಿಷಯಗಳಲ್ಲಿ ತನ್ಮಯತೆ. ಅನುರಾಗವೆಂದರೆ ಪ್ರೀತಿ. ತನ್ಮಯತೆಯಿಂದ ಹೊರಬರುವುದು ಕೇವಲ ಪ್ರಿತಿಯಿಂದ ಹೊರಬರುವುದಕ್ಕಿಂತ ಕಷ್ಟ. ↩︎

  5. ಜ್ಞಾನಿಗಳ ಸ್ನೇಹವು ತಾವರೆ ಎಲೆ ಮತ್ತು ನೀರಿಗೆ ಇರುವ ಸಂಬಂಧದಂತೆ ಸಂಬಂಧಿಸಿಯೂ ಸಂಬಂಧವಿಲ್ಲದಂತೆ ಇರುತ್ತದೆ. ↩︎

  6. ಸತತಂ ಚ ಪಿಬೇತ್ತೋಯಂ ನ ತೃಪ್ತಿಮಧಿಗಚ್ಛತಿ। ಮುಹುಃ ಕಾಂಕ್ಷತಿ ತೋಯಂ ತು ತಂ ತೃಷ್ಣಾರ್ದಿತಮಾದಿಶೇತ್।। ಅರ್ಥಾತ್ ಸತತವಾಗಿ ನೀರನ್ನು ಕುಡಿಯುತ್ತಿದ್ದರೂ ತೃಪ್ತಿ ಹೊಂದದೆ ಮತ್ತೆ ಮತ್ತೆ ನೀರನ್ನು ಅಪೇಕ್ಷಿಸುವುದು ತೃಷ್ಣ ಎಂಬ ರೋಗದ ಲಕ್ಷಣ. ಸದಾ ವಿಷಯಸುಖದಲ್ಲಿ ಮುಳುಗಿದ್ದರೂ ಇನ್ನೂ ಬೇಕು ಇನ್ನೂ ಬೇಕು ಎಂದು ಬಯಸುವ ರೋಗವೇ ತೃಷ್ಣ. ↩︎

  7. ಪ್ರಾಪಂಚಿಕ ವ್ಯಾಮೋಹ ↩︎

  8. ಆನಂದಮಯ ಜೀವನವನ್ನು ಅಭಿಲಾಷಿಸುವವನು ಪ್ರಾಪಂಚಿಕ ವಾಮೋಹವನ್ನು ತೊರೆಯಬೇಕು. ↩︎

  9. ಅಯಃ ತಪ್ತಾಯಃ ಪಿಂಡಂ ನಿಜಃ ಸ್ವರೂಪಸ್ಥಃ ಅನಲಃ ವಹ್ನಿಃ ಎಂದು ಕಾದ ಕಬ್ಬಿಣದ ಉಂಡೆಯ ರೂಪದಲ್ಲಿರುವ ಅಗ್ನಿ ಎಂದು ಅಯೋನಿಜಃ ಶಬ್ಧಕ್ಕೆ ಅರ್ಥಮಾಡಿದ್ದಾರೆ. ↩︎

  10. ಮನುಷ್ಯರು . ↩︎

  11. ರಾಜ, ಕಳ್ಳ, ಅಗ್ನಿ, ನೀರು ಮತ್ತು ಬಂಧು-ಬಾಂಧವರು ಧನಾಪಹಾರಿಗಳೆಂದು ಕರೆಯಲ್ಪಡುತ್ತಾರೆ. ↩︎

  12. ಸಂಪತ್ತೇ . ↩︎

  13. ಆಹಾರವನ್ನು . ↩︎

  14. ವೈಶ್ವದೇವ ಅಗ್ನಿಯಲ್ಲಿ ಅನ್ನದ ಆಹುತಿಯನ್ನು ನೀಡಬೇಕು. ↩︎

  15. ಕುಟುಂಬದ ಮಕ್ಕಳು ಮತ್ತು ವೃದ್ಧರು ↩︎

  16. ಮಾತು, ಮನಸ್ಸು, ಕಣ್ಣು, ಕಿವಿ, ನಾಲಿಗೆ ಮತ್ತು ಮೂಗು (ವಾಙ್ಮನಶ್ಚಕ್ಷುಃಶ್ರೋತ್ರಜಿಹ್ವಾಘ್ರಾಣ) ಇವೇ ಷಡಿಂದ್ರಿಯಗಳು. ↩︎