ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ1
ಅರಣ್ಯಕ ಪರ್ವ2
ಅಧ್ಯಾಯ 1
ಸಾರ
ಜನಮೇಜಯನು ಪಾಂಡವರ ವನವಾಸದ ಕುರಿತು ಪ್ರಶ್ನಿಸುವುದು (1-7). ಪಾಂಡವರು ಹಸ್ತಿನಾಪುರದಿಂದ ನಿರ್ಗಮಿಸುವಾಗ ಪುರಜನರು ಹಿಂಬಾಲಿಸಿದುದು (8-30). ಯುಧಿಷ್ಠಿರನು ಅವರನ್ನು ಹಿಂದಿರುಗಲು ಕೇಳಿಕೊಂಡನಂತರ ಪುರಜನರು ಹಿಂದಿರುಗಿದುದು (31-38). ಪಾಂಡವರು ವನದಲ್ಲಿ ಮೊದಲನೆಯ ರಾತ್ರಿಯನ್ನು ಕಳೆದುದು (39-43).
03001001 ಜನಮೇಜಯ ಉವಾಚ।
03001001a ಏವಂ ದ್ಯೂತಜಿತಾಃ ಪಾರ್ಥಾಃ ಕೋಪಿತಾಶ್ಚ ದುರಾತ್ಮಭಿಃ।
03001001c ಧಾರ್ತರಾಷ್ಟ್ರೈಃ ಸಹಾಮಾತ್ಯೈರ್ನಿಕೃತ್ಯಾ ದ್ವಿಜಸತ್ತಮ।।
03001002a ಶ್ರಾವಿತಾಃ ಪರುಷಾ ವಾಚಃ ಸೃಜದ್ಭಿರ್ವೈರಮುತ್ತಮಂ।
03001002c ಕಿಮಕುರ್ವಂತ ಕೌರವ್ಯಾ ಮಮ ಪೂರ್ವಪಿತಾಮಹಾಃ।।
ಜನಮೇಜಯನು ಹೇಳಿದನು: “ದ್ವಿಜಸತ್ತಮ! ಈ ರೀತಿ ದ್ಯೂತದಲ್ಲಿ ಸೋತು, ಅಮಾತ್ಯರೊಂದಿಗೆ ದುರಾತ್ಮ ಧಾರ್ತರಾಷ್ಟ್ರರು ಮಾಡಿದ ಮೋಸಕ್ಕೆ ಮುನಿದು, ಸ್ವಜರರೊಂದಿಗೆ ಉತ್ತಮ ವೈರವನ್ನು ಹುಟ್ಟಿಸಿದವರ ಮೂದಲ ಮಾತುಗಳನ್ನು ಕೇಳಿಸಿಕೊಂಡು ನನ್ನ ಪೂರ್ವ ಪಿತಾಮಹ ಕೌರವ ಪಾರ್ಥರು ಏನುಮಾಡಿದರು?
03001003a ಕಥಂ ಚೈಶ್ವರ್ಯವಿಭ್ರಷ್ಟಾಃ ಸಹಸಾ ದುಃಖಮೇಯುಷಃ।
03001003c ವನೇ ವಿಜಹ್ರಿರೇ ಪಾರ್ಥಾಃ ಶಕ್ರಪ್ರತಿಮತೇಜಸಃ।।
ಐಶ್ವರ್ಯ ಭ್ರಷ್ಟರಾಗಿ ಒಮ್ಮಿಂದೊಮ್ಮೆಗೇ ಮಹತ್ತರ ದುಃಖವನ್ನು ಹೊಂದಿದ, ತೇಜಸ್ಸಿನಲ್ಲಿ ಶಕ್ರನನ್ನು ಹೋಲುವ ಪಾರ್ಥರು ವನದಲ್ಲಿ ಸಮಯವನ್ನು ಹೇಗೆ ಕಳೆದರು?
03001004a ಕೇ ಚೈನಾನನ್ವವರ್ತಂತ ಪ್ರಾಪ್ತಾನ್ವ್ಯಸನಮುತ್ತಮಂ।
03001004c ಕಿಮಾಹಾರಾಃ ಕಿಮಾಚಾರಾಃ ಕ್ವ ಚ ವಾಸೋ ಮಹಾತ್ಮನಾಂ।।
ಮತ್ತು ಆ ಮಹತ್ತರ ವ್ಯಸನವನ್ನು ಹೊಂದಿದ ಅವರನ್ನು ಯಾರು ಅನುಸರಿಸಿದರು? ಏನನ್ನು ಸೇವಿಸುತ್ತಿದ್ದರು? ಏನು ಮಾಡುತ್ತಿದ್ದರು? ಆ ಮಹಾತ್ಮರು ಎಲ್ಲಿ ವಾಸಿಸುತ್ತಿದ್ದರು?
03001005a ಕಥಂ ದ್ವಾದಶ ವರ್ಷಾಣಿ ವನೇ ತೇಷಾಂ ಮಹಾತ್ಮನಾಂ।
03001005c ವ್ಯತೀಯುರ್ಬ್ರಾಹ್ಮಣಶ್ರೇಷ್ಠ ಶೂರಾಣಾಮರಿಘಾತಿನಾಂ।।
ಬ್ರಾಹ್ಮಣಶ್ರೇಷ್ಠ! ಆ ಮಹಾತ್ಮ, ಅರಿಘಾತಿ ಶೂರರಿಗೆ ವನದಲ್ಲಿ ಹನ್ನೆರಡು ವರುಷಗಳು ಹೇಗೆ ಕಳೆದವು?
03001006a ಕಥಂ ಚ ರಾಜಪುತ್ರೀ ಸಾ ಪ್ರವರಾ ಸರ್ವಯೋಷಿತಾಂ।
03001006c ಪತಿವ್ರತಾ ಮಹಾಭಾಗಾ ಸತತಂ ಸತ್ಯವಾದಿನೀ।
03001006e ವನವಾಸಮದುಃಖಾರ್ಹಾ ದಾರುಣಂ ಪ್ರತ್ಯಪದ್ಯತ।।
ಮತ್ತು ಸರ್ವ ಸ್ತ್ರೀಯರಲ್ಲಿ ಶ್ರೇಷ್ಠಳಾದ ಪತಿವ್ರತೆ, ಮಹಾಭಾಗೆ, ಸತತವೂ ಸತ್ಯವಾದಿನಿ, ದುಃಖಕ್ಕೆ ಅನರ್ಹ ಆ ರಾಜಪುತ್ರಿಯು ಈ ದಾರುಣ ವನವಾಸವನ್ನು ಹೇಗೆ ಕಳೆದಳು?
03001007a ಏತದಾಚಕ್ಷ್ವ ಮೇ ಸರ್ವಂ ವಿಸ್ತರೇಣ ತಪೋಧನ।
03001007c ಶ್ರೋತುಮಿಚ್ಚಾಮಿ ಚರಿತಂ ಭೂರಿದ್ರವಿಣತೇಜಸಾಂ।
03001007e ಕಥ್ಯಮಾನಂ ತ್ವಯಾ ವಿಪ್ರ ಪರಂ ಕೌತೂಹಲಂ ಹಿ ಮೇ।।
ತಪೋಧನ! ಈ ಎಲ್ಲವನ್ನೂ ವಿಸ್ತಾರವಾಗಿ ಹೇಳು. ವಿಪ್ರ! ಭೂರಿದ್ರವಿಣತೇಜಸರ ಚರಿತ್ರೆಯನ್ನು ನಿನ್ನಿಂದ ಕೇಳಲು ಬಯಸುತ್ತೇನೆ. ನನಗೆ ಇದರಲ್ಲಿ ಬಹಳ ಕುತೂಹಲವಿದೆ.”
03001008 ವೈಶಂಪಾಯನ ಉವಾಚ।
03001008a ಏವಂ ದ್ಯೂತಜಿತಾಃ ಪಾರ್ಥಾಃ ಕೋಪಿತಾಶ್ಚ ದುರಾತ್ಮಭಿಃ।
03001008c ಧಾರ್ತರಾಷ್ಟ್ರೈಃ ಸಹಾಮಾತ್ಯೈರ್ನಿರ್ಯಯುರ್ಗಜಸಾಹ್ವಯಾತ್।।
ವೈಶಂಪಾಯನನು ಹೇಳಿದನು: “ಈ ರೀತಿ ದ್ಯೂತದಲ್ಲಿ ಸೋತ ಪಾರ್ಥರು ದುರಾತ್ಮ ಧಾರ್ತರಾಷ್ಟ್ರರು ಮತ್ತು ಅವರ ಅಮಾತ್ಯರೊಂದಿಗೆ ಕುಪಿತಗೊಂಡು ಗಜಸಾಹ್ವಯದಿಂದ ನಿರ್ಗಮಿಸಿದರು.
03001009a ವರ್ಧಮಾನಪುರದ್ವಾರೇಣಾಭಿನಿಷ್ಕ್ರಮ್ಯ ತೇ ತದಾ।
03001009c ಉದಙ್ಮುಖಾಃ ಶಸ್ತ್ರಭೃತಃ ಪ್ರಯಯುಃ ಸಹ ಕೃಷ್ಣಯಾ।।
ಅವರು ವರ್ಧಮಾನ ದ್ವಾರದಿಂದ ಹೊರಬಂದು ಕೃಷ್ಣೆಯನ್ನೊಡಗೊಂಡು ಶಸ್ತ್ರಧಾರಿಗಳಾಗಿ ಉತ್ತಾರಾಭಿಮುಖವಾಗಿ ಹೊರಟರು.
03001010a ಇಂದ್ರಸೇನಾದಯಶ್ಚೈನಾನ್ಭೃತ್ಯಾಃ ಪರಿಚತುರ್ದಶ।
03001010c ರಥೈರನುಯಯುಃ ಶೀಘ್ರೈಃ ಸ್ತ್ರಿಯ ಆದಾಯ ಸರ್ವಶಃ।।
ಇಂದ್ರಸೇನಾದಿ ಅವರ ಸೇವಕರು, ಒಟ್ಟು ಹದಿನಾಲ್ಕು ಮಂದಿ, ತಮ್ಮ ಪತ್ನಿಯರೊನ್ನೊಡಗೂಡಿ ಶೀಘ್ರ ರಥಗಳಲ್ಲಿ ಅವರನ್ನು ಹಿಂಬಾಲಿಸಿದರು.
03001011a ವ್ರಜತಸ್ತಾನ್ವಿದಿತ್ವಾ ತು ಪೌರಾಃ ಶೋಕಾಭಿಪೀಡಿತಾಃ।
03001011c ಗರ್ಹಯಂತೋಽಸಕೃದ್ಭೀಷ್ಮವಿದುರದ್ರೋಣಗೌತಮಾನ್।
03001011e ಊಚುರ್ವಿಗತಸಂತ್ರಾಸಾಃ ಸಮಾಗಮ್ಯ ಪರಸ್ಪರಂ।।
ಅವರು ಹೊರಡುತ್ತಿರುವುದನ್ನು ತಿಳಿದ ಪೌರಜನರು ಶೋಕಪೀಡಿತರಾಗಿ ಭೀಷ್ಮ, ವಿದುರ, ದ್ರೋಣ ಮತ್ತು ಗೌತಮರನ್ನು ನಿಂದಿಸುತ್ತಾ ಗುಂಪುಗೂಡಿ ಪರಸ್ಪರರಲ್ಲಿ ನಿರ್ಭಯರಾಗಿ ಮಾತನಾಡತೊಡಗಿದರು.
03001012a ನೇದಮಸ್ತಿ ಕುಲಂ ಸರ್ವಂ ನ ವಯಂ ನ ಚ ನೋ ಗೃಹಾಃ।
03001012c ಯತ್ರ ದುರ್ಯೋಧನಃ ಪಾಪಃ ಸೌಬಲೇಯೇನ ಪಾಲಿತಃ।
03001012e ಕರ್ಣದುಃಶಾಸನಾಭ್ಯಾಂ ಚ ರಾಜ್ಯಮೇತಚ್ಚಿಕೀರ್ಷತಿ।।
“ಪಾಪಿ ದುರ್ಯೋಧನನು ಸೌಬಲನಿಂದ ಪ್ರೋತ್ಸಾಹಗೊಂಡು, ಕರ್ಣ ದುಃಶಾಸನರಿಂದೊಡಗೂಡಿ ರಾಜ್ಯವನ್ನು ಕಬಳಿಸಲು ಯೋಚಿಸಿದರೆ ಈ ಕುಲವೂ, ನಾವೂ ಮತ್ತು ನಮ್ಮ ಮನೆ ಇವು ಯಾವುವೂ ಸುರಕ್ಷಿತವಲ್ಲ.
03001013a ನೋ ಚೇತ್ಕುಲಂ ನ ಚಾಚಾರೋ ನ ಧರ್ಮೋಽರ್ಥಃ ಕುತಃ ಸುಖಂ।
03001013c ಯತ್ರ ಪಾಪಸಹಾಯೋಽಯಂ ಪಾಪೋ ರಾಜ್ಯಂ ಬುಭೂಷತೇ।।
ಪಾಪಿಗಳ ಸಹಾಯದಿಂದ ಆ ಪಾಪಿಯು ರಾಜ್ಯವನ್ನು ಪಡೆದರೆ ಕುಲವೂ ಇರುವುದಿಲ್ಲ, ಆಚಾರವೂ ಇರುವುದಿಲ್ಲ, ಧರ್ಮವೂ ಇರುವುದಿಲ್ಲ, ಸುಖವಾದರೂ ಹೇಗಿದ್ದೀತು?
03001014a ದುರ್ಯೋಧನೋ ಗುರುದ್ವೇಷೀ ತ್ಯಕ್ತಾಚಾರಸುಹೃಜ್ಜನಃ।
03001014c ಅರ್ಥಲುಬ್ಧೋಽಭಿಮಾನೀ ಚ ನೀಚಃ ಪ್ರಕೃತಿನಿರ್ಘೃಣಃ।।
ದುರ್ಯೋಧನನು ಗುರುದ್ವೇಷಿ, ಆಚಾರ ಮತ್ತು ಸುಹೃಜ್ಜನರನ್ನು ಬಿಟ್ಟವನು. ಅವನು ಸಂಪತ್ತಿನ ದುರಾಸಿ, ಅಭಿಮಾನಿ, ನೀಚ ಮತ್ತು ಸ್ವಭಾವದಲ್ಲಿ ಕ್ರೂರಿ.
03001015a ನೇಯಮಸ್ತಿ ಮಹೀ ಕೃತ್ಸ್ನಾ ಯತ್ರ ದುರ್ಯೋಧನೋ ನೃಪಃ।
03001015c ಸಾಧು ಗಚ್ಚಾಮಹೇ ಸರ್ವೇ ಯತ್ರ ಗಚ್ಚಂತಿ ಪಾಂಡವಾಃ।।
ದುರ್ಯೋಧನನು ರಾಜನಾದ ಈ ಭೂಮಿಯು ಶ್ರೇಷ್ಠವಲ್ಲ. ನಾವೆಲ್ಲರೂ ಪಾಂಡವರು ಎಲ್ಲಿ ಹೋಗುತ್ತಾರೋ ಅಲ್ಲಿಗೇ ಹೋಗುವುದು ಒಳ್ಳೆಯದು.
03001016a ಸಾನುಕ್ರೋಶಾ ಮಹಾತ್ಮಾನೋ ವಿಜಿತೇಂದ್ರಿಯಶತ್ರವಃ।
03001016c ಹ್ರೀಮಂತಃ ಕೀರ್ತಿಮಂತಶ್ಚ ಧರ್ಮಾಚಾರಪರಾಯಣಾಃ।।
ಅವರು ಅನುಕಂಪಿಗಳು, ಮಹಾತ್ಮರು, ಶತೃಗಳನ್ನೂ ಇಂದ್ರಿಯಗಳನ್ನೂ ಗೆದ್ದವರು, ವಿನೀತರು, ಕೀರ್ತಿವಂತರು ಮತ್ತು ಧರ್ಮಾಚಾರ ಪರಾಯಣರು.”
03001017a ಏವಮುಕ್ತ್ವಾನುಜಗ್ಮುಸ್ತಾನ್ಪಾಂಡವಾಂಸ್ತೇ ಸಮೇತ್ಯ ಚ।
03001017c ಊಚುಃ ಪ್ರಾಂಜಲಯಃ ಸರ್ವೇ ತಾನ್ಕುಂತೀಮಾದ್ರಿನಂದನಾನ್।।
ಈ ರೀತಿ ಮಾತನಾಡಿಕೊಳ್ಳುತ್ತಾ, ಎಲ್ಲರೂ ಒಟ್ಟುಗೂಡಿ ಪಾಂಡವರಲ್ಲಿಗೆ ಹೋಗಿ ಅಂಜಲೀಬದ್ಧರಾಗಿ ಆ ಕುಂತೀ-ಮಾದ್ರಿ ನಂದನರಲ್ಲಿ ಕೇಳಿಕೊಂಡರು.
03001018a ಕ್ವ ಗಮಿಷ್ಯಥ ಭದ್ರಂ ವಸ್ತ್ಯಕ್ತ್ವಾಸ್ಮಾನ್ದುಃಖಭಾಗಿನಃ।
03001018c ವಯಮಪ್ಯನುಯಾಸ್ಯಾಮೋ ಯತ್ರ ಯೂಯಂ ಗಮಿಷ್ಯಥ।।
“ನಿಮಗೆ ಮಂಗಳವಾಗಲಿ! ನಿಮ್ಮ ದುಃಖದಲ್ಲಿ ಭಾಗಿಗಳಾದ ನಮ್ಮನ್ನು ತೊರೆದು ಎಲ್ಲಿ ಹೋಗುತ್ತಿದ್ದೀರಿ? ನೀವು ಎಲ್ಲಿ ಹೋಗುತ್ತೀರೋ ಅಲ್ಲಿಗೆ ನಾವೂ ಬರುತ್ತೇವೆ.
03001019a ಅಧರ್ಮೇಣ ಜಿತಾಂ ಶ್ರುತ್ವಾ ಯುಷ್ಮಾಂಸ್ತ್ಯಕ್ತಘೃಣೈಃ ಪರೈಃ।
03001019c ಉದ್ವಿಗ್ನಾಃ ಸ್ಮ ಭೃಶಂ ಸರ್ವೇ ನಾಸ್ಮಾನ್ ಹಾತುಮಿಹಾರ್ಹಥ।।
ದಯವನ್ನೇ ಬಿಟ್ಟ ಶತ್ರುಗಳಿಂದ ಅಧರ್ಮಪೂರ್ವಕವಾಗಿ ನೀನು ಗೆಲ್ಲಲ್ಪಟ್ಟೆ ಎಂದು ಕೇಳಿ ನಾವೆಲ್ಲರೂ ತುಂಬಾ ಉದ್ವಿಗ್ನರಾಗಿದ್ದೇವೆ.
03001020a ಭಕ್ತಾನುರಕ್ತಾಃ ಸುಹೃದಃ ಸದಾ ಪ್ರಿಯಹಿತೇ ರತಾನ್।
03001020c ಕುರಾಜಾಧಿಷ್ಠಿತೇ ರಾಜ್ಯೇ ನ ವಿನಶ್ಯೇಮ ಸರ್ವಶಃ।।
ಭಕ್ತಾನುರಗ! ಸದಾ ಪ್ರಿಯಹಿತ ರತ! ಸುಹೃದಯ! ನಮ್ಮನ್ನು ಕುರಾಜನಿಂದ ಆಳಲ್ಪಡುವ ರಾಜ್ಯದಲ್ಲಿ ವಿನಾಶಹೊಂದಲು ಸರ್ವಥಾ ಬಿಡಬೇಡ.
03001021a ಶ್ರೂಯತಾಂ ಚಾಭಿಧಾಸ್ಯಾಮೋ ಗುಣದೋಷಾನ್ನರರ್ಷಭಾಃ।
03001021c ಶುಭಾಶುಭಾಧಿವಾಸೇನ ಸಂಸರ್ಗಂ ಕುರುತೇ ಯಥಾ।।
ಪುರುಷರ್ಷಭರೇ! ಗುಣ-ದೋಷಗಳ ಸಂಸರ್ಗದಿಂದ ಶುಭಾಶುಭಗಳು ಹೇಗೆ ಆಗುತ್ತವೆ ಎನ್ನುವುದನ್ನು ಕೇಳಿ.
03001022a ವಸ್ತ್ರಮಾಪಸ್ತಿಲಾನ್ಭೂಮಿಂ ಗಂಧೋ ವಾಸಯತೇ ಯಥಾ।
03001022c ಪುಷ್ಪಾಣಾಮಧಿವಾಸೇನ ತಥಾ ಸಂಸರ್ಗಜಾ ಗುಣಾಃ।।
ಸುಗಂಧವು ಹೇಗೆ ವಸ್ತ್ರವನ್ನು ಸುಹಾಸಯುಕ್ತವನ್ನಾಗಿ ಮಾಡುತ್ತದೆಯೋ, ಮಳೆ, ತಿಲ, ಮತ್ತು ಪುಷ್ಪಗಳು ಭೂಮಿಯನ್ನು ಹೇಗೆ ಸುಗಂಧಯುಕ್ತವನಾಗಿ ಮಾಡುತ್ತವೆಯೋ ಹಾಗೆ ಸಂಸರ್ಗದಿಂದ ಒಳ್ಳೆಯದಾಗುತ್ತದೆ.
03001023a ಮೋಹಜಾಲಸ್ಯ ಯೋನಿರ್ಹಿ ಮೂಢೈರೇವ ಸಮಾಗಮಃ।
03001023c ಅಹನ್ಯಹನಿ ಧರ್ಮಸ್ಯ ಯೋನಿಃ ಸಾಧುಸಮಾಗಮಃ।।
ಮೂಢರ ಸಹವಾಸವೇ ಮೋಹಜಾಲದ ಮೂಲ ಮತ್ತು ಸಾಧುಸಮಾಗಮವು ಧರ್ಮದ ಮೂಲ.
03001024a ತಸ್ಮಾತ್ಪ್ರಾಜ್ಞೈಶ್ಚ ವೃದ್ಧೈಶ್ಚ ಸುಸ್ವಭಾವೈಸ್ತಪಸ್ವಿಭಿಃ।
03001024c ಸದ್ಭಿಶ್ಚ ಸಹ ಸಂಸರ್ಗಃ ಕಾರ್ಯಃ ಶಮಪರಾಯಣೈಃ।।
ಆದ್ದರಿಂದಲೇ ಶಮಪರಾಯಣರು ಪ್ರಾಜ್ಞರ, ವೃದ್ಧರ, ಸುಸ್ವಭಾವಿಗಳ, ತಪಸ್ವಿಗಳ ಮತ್ತು ಒಳ್ಳೆಯವರ ಜೊತೆ ಸಂಸರ್ಗಮಾಡಬೇಕು.
03001025a ಯೇಷಾಂ ತ್ರೀಣ್ಯವದಾತಾನಿ ಯೋನಿರ್ವಿದ್ಯಾ ಚ ಕರ್ಮ ಚ।
03001025c ತಾನ್ಸೇವೇತ್ತೈಃ ಸಮಾಸ್ಯಾ ಹಿ ಶಾಸ್ತ್ರೇಭ್ಯೋಽಪಿ ಗರೀಯಸೀ।।
ಯಾರ ಕುಲ, ವಿದ್ಯೆ, ಮತ್ತು ಕರ್ಮಗಳು ಉತ್ತಮವೋ ಅವರನ್ನು ಸೇವಿಸಬೇಕು. ಅವರ ಸಮಾಗಮವು ಶಾಸ್ತ್ರಗಳಿಗಿಂತಲೂ ಶ್ರೇಷ್ಠವಾದದ್ದು.
03001026a ನಿರಾರಂಭಾ ಹ್ಯಪಿ ವಯಂ ಪುಣ್ಯಶೀಲೇಷು ಸಾಧುಷು।
03001026c ಪುಣ್ಯಮೇವಾಪ್ನುಯಾಮೇಹ ಪಾಪಂ ಪಾಪೋಪಸೇವನಾತ್।।
ಪಾಪಿಗಳ ಉಪಸೇವನೆಯಿಂದ ಪಾಪವನ್ನು ಹೇಗೋ ಹಾಗೆ ಯಾವ ಕ್ರಿಯೆಗಳನ್ನು ಮಾಡದಿದ್ದರೂ ಪುಣ್ಯಶೀಲ ಸಾಧುಗಳ ಉಪಸೇವನೆಯಿಂದ ಪುಣ್ಯವನ್ನು ಹೊಂದುತ್ತೇವೆ.
03001027a ಅಸತಾಂ ದರ್ಶನಾತ್ಸ್ಪರ್ಶಾತ್ಸಂಜಲ್ಪನಸಹಾಸನಾತ್।
03001027c ಧರ್ಮಾಚಾರಾಃ ಪ್ರಹೀಯಂತೇ ನ ಚ ಸಿಧ್ಯಂತಿ ಮಾನವಾಃ।।
ಅಸತ್ಯರನ್ನು ನೋಡುವುದರಿಂದ, ಮುಟ್ಟುವುದರಿಂದ ಮತ್ತು ಅವರೊಂದಿಗೆ ಕುಳಿತುಕೊಳ್ಳುವುದರಿಂದ ಧರ್ಮಾಚಾರಿ ಮಾನವರು ತಮ್ಮನ್ನು ತಾವೇ ಕೀಳುಮಾಡಿಕೊಳ್ಳುತ್ತಾರೆ.
03001028a ಬುದ್ಧಿಶ್ಚ ಹೀಯತೇ ಪುಂಸಾಂ ನೀಚೈಃ ಸಹ ಸಮಾಗಮಾತ್।
03001028c ಮಧ್ಯಮೈರ್ಮಧ್ಯತಾಂ ಯಾತಿ ಶ್ರೇಷ್ಠತಾಂ ಯಾತಿ ಚೋತ್ತಮೈಃ।।
ಬುದ್ಧಿಯೂ ಕೂಡ ನೀಚರ ಸಮಾಗಮದಿಂದ ಕೆಳಹೋಗುತ್ತದೆ, ಮದ್ಯಮರ ಸಮಾಗಮದಿಂದ ಮದ್ಯಮವಾಗಿರುತ್ತದೆ ಮತ್ತು ಶ್ರೇಷ್ಠರ ಸಮಾಗಮದಿಂದ ಉತ್ತಮಸ್ಥಿತಿಯನ್ನು ಹೊಂದುತ್ತದೆ.
03001029a ಯೇ ಗುಣಾಃ ಕೀರ್ತಿತಾ ಲೋಕೇ ಧರ್ಮಕಾಮಾರ್ಥಸಂಭವಾಃ।
03001029c ಲೋಕಾಚಾರಾತ್ಮಸಂಭೂತಾ ವೇದೋಕ್ತಾಃ ಶಿಷ್ಟಸಮ್ಮತಾಃ।।
03001030a ತೇ ಯುಷ್ಮಾಸು ಸಮಸ್ತಾಶ್ಚ ವ್ಯಸ್ತಾಶ್ಚೈವೇಹ ಸದ್ಗುಣಾಃ।
03001030c ಇಚ್ಚಾಮೋ ಗುಣವನ್ಮಧ್ಯೇ ವಸ್ತುಂ ಶ್ರೇಯೋಽಭಿಕಾಂಕ್ಷಿಣಃ।।
ಶಿಷ್ಟಸಮ್ಮತ, ವೇದೋಕ್ತ, ಲೋಕಾಚಾರಗಳಿಂದ ಹುಟ್ಟುವ ಯಾವ ಗುಣಗಳಿಂದ ಧರ್ಮ-ಕಾಮ-ಅರ್ಥಗಳು ಸಂಭವಿಸುತ್ತವೆಯೆಂದು ಲೋಕದಲ್ಲಿ ಕೀರ್ತಿತವಾಗಿವೆಯೋ ಆ ಎಲ್ಲ ಸದ್ಗುಣಗಳೂ ಸಮನಾಗಿ ಇರುವ ಗುಣವಂತ ನಿಮ್ಮ ಮದ್ಯದಲ್ಲಿ ವಾಸಿಸಲು ನಮ್ಮ ಶ್ರೇಯೋಕಾಂಕ್ಷಿಗಳಾದ ನಾವು ಇಚ್ಚಿಸುತ್ತೇವೆ.”
03001031 ಯುಧಿಷ್ಠಿರ ಉವಾಚ।
03001031a ಧನ್ಯಾ ವಯಂ ಯದಸ್ಮಾಕಂ ಸ್ನೇಹಕಾರುಣ್ಯಯಂತ್ರಿತಾಃ।
03001031c ಅಸತೋಽಪಿ ಗುಣಾನಾಹುರ್ಬ್ರಾಹ್ಮಣಪ್ರಮುಖಾಃ ಪ್ರಜಾಃ।।
ಯುಧಿಷ್ಠಿರನು ಹೇಳಿದನು: “ಬ್ರಾಹ್ಮಣಪ್ರಮುಖ ಪ್ರಜೆಗಳು ನಮ್ಮ ಮೇಲಿನ ಸ್ನೇಹ-ಕರುಣೆಗಳಿಂದ ಭಾವಿತರಾಗಿ ನಮ್ಮಲ್ಲಿ ಇಲ್ಲದೇ ಇರುವ ಗುಣಗಳ ಕುರಿತು ಹೇಳುತ್ತಾರೆಂದರೆ ನಾವು ಧನ್ಯರಾದೆವು.
03001032a ತದಹಂ ಭ್ರಾತೃಸಹಿತಃ ಸರ್ವಾನ್ವಿಜ್ಞಾಪಯಾಮಿ ವಃ।
03001032c ನಾನ್ಯಥಾ ತದ್ಧಿ ಕರ್ತವ್ಯಮಸ್ಮತ್ಸ್ನೇಹಾನುಕಂಪಯಾ।।
ಆದ್ದರಿಂದ ನಮ್ಮ ಮೇಲಿನ ಸ್ನೇಹ ಅನುಕಂಪಗಳಿಂದಾಗಿ ಅನ್ಯಥಾ ಕಾರ್ಯವನ್ನು ಮಾಡಬೇಡಿ ಎಂದು ಭ್ರಾತೃಸಹಿತನಾಗಿ ನಿಮ್ಮೆಲ್ಲರಲ್ಲಿ ವಿಜ್ಞಾಪಿಸಿಕೊಳ್ಳುತ್ತೇನೆ.
03001033a ಭೀಷ್ಮಃ ಪಿತಾಮಹೋ ರಾಜಾ ವಿದುರೋ ಜನನೀ ಚ ಮೇ।
03001033c ಸುಹೃಜ್ಜನಶ್ಚ ಪ್ರಾಯೋ ಮೇ ನಗರೇ ನಾಗಸಾಹ್ವಯೇ।।
ಭೀಷ್ಮ ಪಿತಾಮಹ, ರಾಜ, ವಿದುರ, ನಮ್ಮ ಜನನಿ ಮತ್ತು ಇತರ ಸುಹೃಜ್ಜನರು ಈ ನಾಗಸಾಹ್ವಯ ನಗರದಲ್ಲಿ ಇದ್ದಾರೆ.
03001034a ತೇ ತ್ವಸ್ಮದ್ಧಿತಕಾಮಾರ್ಥಂ ಪಾಲನೀಯಾಃ ಪ್ರಯತ್ನತಃ।
03001034c ಯುಷ್ಮಾಭಿಃ ಸಹಿತೈಃ ಸರ್ವೈಃ ಶೋಕಸಂತಾಪವಿಹ್ವಲಾಃ।।
ನಮ್ಮ ಹಿತಕ್ಕಾಗಿ ನೀವೆಲ್ಲರೂ ಸೇರಿ ಶೋಕಸಂತಾಪವಿಹ್ವಲರಾದ ಅವರನ್ನು ಪಾಲಿಸಲು ಪ್ರಯತ್ನಿಸಬೇಕು.
03001035a ನಿವರ್ತತಾಗತಾ ದೂರಂ ಸಮಾಗಮನಶಾಪಿತಾಃ।
03001035c ಸ್ವಜನೇ ನ್ಯಾಸಭೂತೇ ಮೇ ಕಾರ್ಯಾ ಸ್ನೇಹಾನ್ವಿತಾ ಮತಿಃ।।
ದೂರ ಬಂದಿದ್ದೀರಿ. ಹಿಂದುರಿಗಿರಿ. ಪುನಃ ಭೇಟಿಯಾಗುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇನೆ. ನಿಮ್ಮ ಸ್ನೇಹಾನ್ವಿತ ಮನಸ್ಸನ್ನು ನಿಮ್ಮಲ್ಲಿ ಇಟ್ಟುಹೋಗುತ್ತಿರುವ ಸ್ವಜನರಕಡೆ ತಿರುಗಿಸಿ.
03001036a ಏತದ್ಧಿ ಮಮ ಕಾರ್ಯಾಣಾಂ ಪರಮಂ ಹೃದಿ ಸಂಸ್ಥಿತಂ।
03001036c ಸುಕೃತಾನೇನ ಮೇ ತುಷ್ಟಿಃ ಸತ್ಕಾರಶ್ಚ ಭವಿಷ್ಯತಿ।।
ಇದೊಂದು ಕಾರ್ಯವು ಈಗ ನನ್ನ ಹೃದಯದಲ್ಲಿ ಮುಖ್ಯವಾಗಿ ಉಳಿದುಕೊಂಡಿದೆ. ಈ ಸುಕೃತ್ಯದಿಂದ ನಾನು ಸಂತುಷ್ಟನಾಗುತ್ತೇನೆ ಮತ್ತು ನನಗೆ ಸತ್ಕಾರವಾದಂಥಾಗುತ್ತದೆ.””
03001037 ವೈಶಂಪಾಯನ ಉವಾಚ।
03001037a ತಥಾನುಮಂತ್ರಿತಾಸ್ತೇನ ಧರ್ಮರಾಜೇನ ತಾಃ ಪ್ರಜಾಃ।
03001037c ಚಕ್ರುರಾರ್ತಸ್ವರಂ ಘೋರಂ ಹಾ ರಾಜನ್ನಿತಿ ದುಃಖಿತಾಃ।।
ವೈಶಂಪಾಯನನು ಹೇಳಿದನು: “ಈ ರೀತಿ ಧರ್ಮರಾಜನಿಂದ ಹಿಂದೆ ಕಳುಹಿಸಲ್ಪಟ್ಟ ಪ್ರಜೆಗಳೆಲ್ಲರೂ ದುಃಖಿತರಾಗಿ “ಹಾ ರಾಜ!” ಎಂದು ಘೋರ ಆರ್ತಸ್ವರದಲ್ಲಿ ಕೂಗಿದರು.
03001038a ಗುಣಾನ್ಪಾರ್ಥಸ್ಯ ಸಂಸ್ಮೃತ್ಯ ದುಃಖಾರ್ತಾಃ ಪರಮಾತುರಾಃ।
03001038c ಅಕಾಮಾಃ ಸಂನ್ಯವರ್ತಂತ ಸಮಾಗಮ್ಯಾಥ ಪಾಂಡವಾನ್।।
ಪಾಂಡವರನ್ನು ಭೇಟಿಮಾಡಿ, ಪಾರ್ಥರ ಗುಣಗಳನ್ನು ಸಂಸ್ಮರಿಸುತ್ತಾ, ದುಃಖಾರ್ತರಾಗಿ, ಸ್ವಲ್ಪವೂ ಮನಸ್ಸಿಲ್ಲದೇ ಹಿಂದಿರುಗಿದರು.
03001039a ನಿವೃತ್ತೇಷು ತು ಪೌರೇಷು ರಥಾನಾಸ್ಥಾಯ ಪಾಂಡವಾಃ।
03001039c ಪ್ರಜಗ್ಮುರ್ಜಾಹ್ನವೀತೀರೇ ಪ್ರಮಾಣಾಖ್ಯಂ ಮಹಾವಟಂ।।
ಪುರಜನರು ಹಿಂದಿರುಗಿದ ನಂತರ ಪಾಂಡವರು ರಥಗಳನ್ನೇರಿ ಜಾಹ್ನವೀತೀರದಲ್ಲಿ ಪ್ರಮಾಣ ಎಂಬ ಹೆಸರಿನ ಆಲದ ಮಹಾ ವೃಕ್ಷವೊಂದನ್ನು ತಲುಪಿದರು.
03001040a ತಂ ತೇ ದಿವಸಶೇಷೇಣ ವಟಂ ಗತ್ವಾ ತು ಪಾಂಡವಾಃ।
03001040c ಊಷುಸ್ತಾಂ ರಜನೀಂ ವೀರಾಃ ಸಂಸ್ಪೃಶ್ಯ ಸಲಿಲಂ ಶುಚಿ।
03001040e ಉದಕೇನೈವ ತಾಂ ರಾತ್ರಿಮೂಷುಸ್ತೇ ದುಃಖಕರ್ಶಿತಾಃ।।
ದಿವಸವಿಡೀ ಪ್ರಯಾಣಮಾಡಿ ವಟವನ್ನು ತಲುಪಿ, ವೀರ ಪಾಂಡವರು ದುಃಖಾಕರ್ಷಿತರಾಗಿ ಶುಚಿ ಸಲಿಲ ನೀರನ್ನು ಮಾತ್ರ ಕುಡಿದು ರಾತ್ರಿಯನ್ನು ಅಲ್ಲಿಯೇ ಕಳೆದರು.
03001041a ಅನುಜಗ್ಮುಶ್ಚ ತತ್ರೈತಾನ್ಸ್ನೇಹಾತ್ಕೇ ಚಿದ್ದ್ವಿಜಾತಯಃ।
03001041c ಸಾಗ್ನಯೋಽನಗ್ನಯಶ್ಚೈವ ಸಶಿಷ್ಯಗಣಬಾಂಧವಾಃ।
03001041e ಸ ತೈಃ ಪರಿವೃತೋ ರಾಜಾ ಶುಶುಭೇ ಬ್ರಹ್ಮವಾದಿಭಿಃ।।
ಅವರ ಮೇಲಿನ ಸ್ನೇಹದಿಂದಾಗಿ ಕೆಲವು ದ್ವಿಜರು ಅಗ್ನಿಯೊಂದಿಗೆ ಅಥವಾ ಅಗ್ನಿಯಿಲ್ಲದೇ ಶಿಷ್ಯಗಣ ಬಾಂಧವರೊಡಗೂಡಿ ಅವರನ್ನು ಅಲ್ಲಿಯವರೆಗೂ ಹಿಂಬಾಲಿಸಿದ್ದರು. ಆ ಬ್ರಹ್ಮವಾದಿಗಳಿಂದ ಪರಿವೃತ ರಾಜನು ಕಂಗೊಳಿಸುತ್ತಿದ್ದನು.
03001042a ತೇಷಾಂ ಪ್ರಾದುಷ್ಕೃತಾಗ್ನೀನಾಂ ಮುಹೂರ್ತೇ ರಮ್ಯದಾರುಣೇ।
03001042c ಬ್ರಹ್ಮಘೋಷಪುರಸ್ಕಾರಃ ಸಂಜಲ್ಪಃ ಸಮಜಾಯತ।।
ರಮ್ಯವೂ ದಾರುಣವೂ ಆದ ಮುಹೂರ್ತದಲ್ಲಿ ಅವರವರ ಅಗ್ನಿಗಳನ್ನು ಹೊರತಂದರು ಮತ್ತು ಬ್ರಹ್ಮಘೋಶದೊಂದಿಗೆ ಚರ್ಚೆಯು ಪ್ರಾರಂಭವಾಯಿತು.
03001043a ರಾಜಾನಂ ತು ಕುರುಶ್ರೇಷ್ಠಂ ತೇ ಹಂಸಮಧುರಸ್ವರಾಃ।
03001043c ಆಶ್ವಾಸಯಂತೋ ವಿಪ್ರಾಗ್ರ್ಯಾಃ ಕ್ಷಪಾಂ ಸರ್ವಾಂ ವ್ಯನೋದಯನ್।।
ಹಂಸಗಳಂತೆ ಮಧುರಸ್ವರಗಳಲ್ಲಿ ವಿಪ್ರಾಗ್ರರೆಲ್ಲರೂ ಕುರುಶ್ರೇಷ್ಠ ರಾಜನಿಗೆ ಆಶ್ವಾಸನೆ ನೀಡುತ್ತಿರಲು ಎಲ್ಲರೂ ರಾತ್ರಿಯನ್ನು ಕಳೆದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಕಪರ್ವಣಿ ಪೌರಪ್ರತ್ಯಾಗಮನೇ ಪ್ರಥಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಕಪರ್ವದಲ್ಲಿ ಪೌರಪ್ರತ್ಯಾಗಮನ ಎನ್ನುವ ಮೊದಲನೆಯ ಅಧ್ಯಾಯವು.
-
ಗೋರಖಪುರ ಸಂಪುಟದಲ್ಲಿ ಈ ಮಹಾಪರ್ವವನ್ನು ವನಪರ್ವ ಎಂದು ಕರೆದಿದ್ದಾರೆ. ಆದರೆ ಪುಣೆಯ ಪರಿಷ್ಕೃತ ಆವೃತ್ತಿಯಲ್ಲಿ ಈ ಮಹಾಪರ್ವದ ಹೆಸರು ಆರಣ್ಯಕಪರ್ವ ಎಂದಿದೆ. ↩︎
-
ಪುಣೆಯ ಪರಿಷ್ಕೃತ ಆವೃತ್ತಿಯಲ್ಲಿ ಈ ಉಪಪರ್ವವು ಆರಣ್ಯಕ ಪರ್ವವೆಂದಿದೆ. ಈ ಮಹಾಪರ್ವದ ಹೆಸರೂ ಆರಣ್ಯಕಪರ್ವವಾದುದರಿಂದ ನಾನು ಈ ಉಪಪರ್ವವನ್ನು ಅರಣ್ಯಪರ್ವ ಎಂದು ಸೂಚಿಸಿದ್ದೇನೆ. ಗೋರಖಪುರಸಂಪುಟದಲ್ಲಿ ಇದು ಅರಣ್ಯಪರ್ವವೆಂದೇ ಸೂಚಿತಗೊಂಡಿದೆ. ↩︎