ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಅನುದ್ಯೂತ ಪರ್ವ
ಅಧ್ಯಾಯ 72
ಸಾರ
ಚಿಂತಾಪರನಾಗಿದ್ದ ಧೃತರಾಷ್ಟ್ರನಿಗೆ ಸಂಜಯನು ತಾನೇ ಎಲ್ಲವನ್ನೂ ಮಾಡಿಕೊಂಡು ಚಿಂತಿಸುವುದಕ್ಕೆ ಅರ್ಥವಿಲ್ಲ ಎನ್ನುವುದು (1-7). ಧೃತರಾಷ್ಟ್ರನು ಕುರುಗಳ ಪರಾಭವವು ದೈವನಿಶ್ಚಿತವಾದುದೆಂದೂ (8-12), ಸಭೆಯಲ್ಲಿ ನಡೆದ ಘಟನೆಗಳಿಂದಾದ ತುಮುಲಗಳು, ಶಕುನಗಳು, ಮಹಾ ಆಪತ್ತನ್ನು ಸೂಚಿಸುತ್ತವೆ ಎಂದೂ (13-24), ವಿದುರನು ಸಭೆಯಲ್ಲಿ ಹೇಳಿದ ಮಾತನ್ನೂ (25-35) ಮತ್ತು ತಾನು ಅದನ್ನು ಸ್ವೀಕರಿಸಲಿಲ್ಲ (36) ಎನ್ನುವುದನ್ನು ಸಂಜಯನಲ್ಲಿ ಹೇಳಿಕೊಳ್ಳುವುದು.
02072001 ವೈಶಂಪಾಯನ ಉವಾಚ।
02072001a ವನಂ ಗತೇಷು ಪಾರ್ಥೇಷು ನಿರ್ಜಿತೇಷು ದುರೋದರೇ।
02072001c ಧೃತರಾಷ್ಟ್ರಂ ಮಹಾರಾಜ ತದಾ ಚಿಂತಾ ಸಮಾವಿಶತ್।।
ವೈಶಂಪಾಯನನು ಹೇಳಿದನು: “ಮಹಾರಾಜ! ದ್ಯೂತದಲ್ಲಿ ಸೋತ ಪಾರ್ಥರು ವನಕ್ಕೆ ಹೋಗಲು ಧೃತರಾಷ್ಟ್ರನನ್ನು ಚಿಂತೆಯು ಸಮಾವೇಶಗೊಂಡಿತು.
02072002a ತಂ ಚಿಂತಯಾನಮಾಸೀನಂ ಧೃತರಾಷ್ಟ್ರಂ ಜನೇಶ್ವರಂ।
02072002c ನಿಃಶ್ವಸಂತಮನೇಕಾಗ್ರಮಿತಿ ಹೋವಾಚ ಸಂಜಯಃ।।
ಆ ಜನೇಶ್ವರ ಧೃತರಾಷ್ಟ್ರನು ಚಿಂತೆಯಲ್ಲಿ ನಿಟ್ಟುಸಿರು ಬಿಡುತ್ತಾ ಏಕಾಗ್ರಚಿತ್ತನಾಗಿರದೇ ಕುಳಿತುಕೊಂಡಿರಲು ಸಂಜಯನು ಹೇಳಿದನು:
02072003a ಅವಾಪ್ಯ ವಸುಸಂಪೂರ್ಣಾಂ ವಸುಧಾಂ ವಸುಧಾಧಿಪ।
02072003c ಪ್ರವ್ರಾಜ್ಯ ಪಾಂಡವಾನ್ರಾಜ್ಯಾದ್ರಾಜನ್ಕಿಮನುಶೋಚಸಿ।।
“ವಸುಧಾಧಿಪ! ರಾಜನ್! ಸಂಪತ್ತಿನೊಂದಿಗೆ ಸಂಪೂರ್ಣ ವಸುಧೆಯನ್ನು ಪಡೆದು, ಪಾಂಡವರನ್ನು ಅವರ ರಾಜ್ಯದಿಂದ ಹೊರಹಾಕಿ, ಯಾಕೆ ಶೋಕಿಸುತ್ತಿದ್ದೀಯೆ?”
02072004 ಧೃತರಾಷ್ಟ್ರ ಉವಾಚ।
02072004a ಅಶೋಚ್ಯಂ ತು ಕುತಸ್ತೇಷಾಂ ಯೇಷಾಂ ವೈರಂ ಭವಿಷ್ಯತಿ।
02072004c ಪಾಂಡವೈರ್ಯುದ್ಧಶೌಂಡೈರ್ಹಿ ಮಿತ್ರವದ್ಭಿರ್ಮಹಾರಥೈಃ।।
ಧೃತರಾಷ್ಟ್ರನು ಹೇಳಿದನು: “ಯುದ್ಧಶೌಂಡರನ್ನು ಮಿತ್ರರನ್ನಾಗಿ ಪಡೆದಿರುವ ಆ ಮಹಾರಥಿ ಪಾಂಡವರೊಂದಿಗೆ ವೈರವಾಗಿರುವರಿಗೆ ಚಿಂತೆ ಮಾಡಲು ಏನೂ ಇಲ್ಲವೇ?”
02072005 ಸಂಜಯ ಉವಾಚ।
02072005a ತವೇದಂ ಸುಕೃತಂ ರಾಜನ್ಮಹದ್ವೈರಂ ಭವಿಷ್ಯತಿ।
02072005c ವಿನಾಶಃ ಸರ್ವಲೋಕಸ್ಯ ಸಾನುಬಂಧೋ ಭವಿಷ್ಯತಿ।।
ಸಂಜಯನು ಹೇಳಿದನು: “ರಾಜನ್! ಇದು ನೀನೇ ಮಾಡಿಕೊಂಡ ಸುಕೃತ. ಅತಿದೊಡ್ಡ ವೈರವು ಉಂಟಾಗುತ್ತದೆ. ಅನುಯಾಯಿಗಳೊಂದಿಗೆ ಸರ್ವಲೋಕದ ವಿನಾಶವಾಗುತ್ತದೆ.
02072006a ವಾರ್ಯಮಾಣೋಽಪಿ ಭೀಷ್ಮೇಣ ದ್ರೋಣೇನ ವಿದುರೇಣ ಚ।
02072006c ಪಾಂಡವಾನಾಂ ಪ್ರಿಯಾಂ ಭಾರ್ಯಾಂ ದ್ರೌಪದೀಂ ಧರ್ಮಚಾರಿಣೀಂ।।
02072007a ಪ್ರಾಹಿಣೋದಾನಯೇಹೇತಿ ಪುತ್ರೋ ದುರ್ಯೋಧನಸ್ತವ।
02072007c ಸೂತಪುತ್ರಂ ಸುಮಂದಾತ್ಮಾ ನಿರ್ಲಜ್ಜಃ ಪ್ರಾತಿಕಾಮಿನಂ।।
ಭೀಷ್ಮ, ದ್ರೋಣ ಮತ್ತು ವಿದುರರು ಬೇಡವೆಂದರೂ ಅತ್ಯಂತ ದಡ್ಡನೂ ನಿರ್ಲಜ್ಜನೂ ಆದ ನಿನ್ನ ಪುತ್ರ ದುರ್ಯೋಧನನು ಪಾಂಡವರ ಪ್ರಿಯ ಭಾರ್ಯೆ ಧರ್ಮಚಾರಿಣಿ ದ್ರೌಪದಿಯನ್ನು ಕರೆತರಲು ಸೂತಪುತ್ರ ಪ್ರತಿಕಾಮಿಯನ್ನು ಕಳುಹಿಸಿದನು.”
02072008 ಧೃತರಾಷ್ಟ್ರ ಉವಾಚ।
02072008a ಯಸ್ಮೈ ದೇವಾಃ ಪ್ರಯಚ್ಛಂತಿ ಪುರುಷಾಯ ಪರಾಭವಂ।
02072008c ಬುದ್ಧಿಂ ತಸ್ಯಾಪಕರ್ಷಂತಿ ಸೋಽಪಾಚೀನಾನಿ ಪಶ್ಯತಿ।।
ಧೃತರಾಷ್ಟ್ರನು ಹೇಳಿದನು: “ಯಾರ ಪರಾಭವವನ್ನು ದೇವತೆಗಳೇ ನಿಶ್ಚಯಿಸಿದ್ದಾರೋ ಅವನು ವಿಷಯವನ್ನು ಸರಿಯಾಗಿ ಕಾಣದೇ ಇರಲಿ ಎಂದು ಮೊದಲು ಅವನ ಬುದ್ಧಿಯನ್ನು ಕಿತ್ತುಕೊಳ್ಳುತ್ತಾರೆ.
02072009a ಬುದ್ಧೌ ಕಲುಷಭೂತಾಯಾಂ ವಿನಾಶೇ ಪ್ರತ್ಯುಪಸ್ಥಿತೇ।
02072009c ಅನಯೋ ನಯಸಂಕಾಶೋ ಹೃದಯಾನ್ನಾಪಸರ್ಪತಿ।।
ವಿನಾಶವು ನಿಶ್ಚಿತವಾದಾಗ ಮತ್ತು ಬುದ್ಧಿಯು ಕಲುಷಿತವಾದಾಗ ಅನ್ಯಾಯವೂ ನ್ಯಾಯವೆಂದೇ ತೋರುತ್ತದೆ ಮತ್ತು ಅದನ್ನಲ್ಲದೇ ಬೇರೆ ಏನನ್ನೂ ಹೃದಯವು ಬಯಸುವುದಿಲ್ಲ.
02072010a ಅನರ್ಥಾಶ್ಚಾರ್ಥರೂಪೇಣ ಅರ್ಥಾಶ್ಚಾನರ್ಥರೂಪಿಣಃ।
02072010c ಉತ್ತಿಷ್ಠಂತಿ ವಿನಾಶಾಂತೇ ನರಂ ತಚ್ಚಾಸ್ಯ ರೋಚತೇ।।
ವಿನಾಶವು ಹತ್ತಿರವಾದಾಗ ಕೆಟ್ಟದ್ದು ಒಳ್ಳೆಯದಾಗಿಯೂ ಒಳ್ಳೆಯದು ಕೆಟ್ಟದ್ದಾಗಿಯೂ ತೋರುತ್ತದೆ ಮತ್ತು ಮನುಷ್ಯನು ತನಗೆ ಕಂಡದ್ದನ್ನೇ ಸ್ವೀಕರಿಸುತ್ತಾನೆ.
02072011a ನ ಕಾಲೋ ದಂಡಮುದ್ಯಮ್ಯ ಶಿರಃ ಕೃಂತತಿ ಕಸ್ಯ ಚಿತ್।
02072011c ಕಾಲಸ್ಯ ಬಲಮೇತಾವದ್ವಿಪರೀತಾರ್ಥದರ್ಶನಂ।।
ಕಾಲವು ದಂಡವನ್ನೆತ್ತಿ ಶಿರವನ್ನೆಂದೂ ಒಡೆಯುವುದಿಲ್ಲ1. ಈ ರೀತಿಯ ವಿಪರೀತ ಅರ್ಥಗಳನ್ನು ತೋರಿಸುವುದೇ ಕಾಲದ ಬಲ.
02072012a ಆಸಾದಿತಮಿದಂ ಘೋರಂ ತುಮುಲಂ ಲೋಮಹರ್ಷಣಂ।
02072012c ಪಾಂಚಾಲೀಮಪಕರ್ಷದ್ಭಿಃ ಸಭಾಮಧ್ಯೇ ತಪಸ್ವಿನೀಂ।।
ಮೈನವಿರೇಳಿಸುವ ಈ ಘೋರ ತುಮುಲವು ತಪಸ್ವಿನೀ ಪಾಂಚಾಲಿಯನ್ನು ಸಭಾಮಧ್ಯದಲ್ಲಿ ಎಳೆದು ತಂದಿರುವುದರಿಂದ ಆಗಿದ್ದುದು.
02072013a ಅಯೋನಿಜಾಂ ರೂಪವತೀಂ ಕುಲೇ ಜಾತಾಂ ವಿಭಾವರೀಂ।
02072013c ಕೋ ನು ತಾಂ ಸರ್ವಧರ್ಮಜ್ಞಾಂ ಪರಿಭೂಯ ಯಶಸ್ವಿನೀಂ।।
02072014a ಪರ್ಯಾನಯೇತ್ಸಭಾಮಧ್ಯಮೃತೇ ದುರ್ದ್ಯೂತದೇವಿನಂ।
ಕೆಟ್ಟ ಜೂಜಾಡುವವನಲ್ಲದೇ ಬೇರೆ ಯಾರು ತಾನೆ ಆ ಅಯೋನಿಜೆ, ರೂಪವತಿ, ಉತ್ತಮ ಕುಲದಲ್ಲಿ ಹುಟ್ಟಿದ, ವಿಭಾವರೀ, ಸರ್ವಧರ್ಮಜ್ಞೆ, ಯಶಸ್ವಿನಿಯನ್ನು ಬಲವಂತವಾಗಿ ಸಭಾಮಧ್ಯದಲ್ಲಿ ಎಳೆದು ತಂದಾರು?
02072014c ಸ್ತ್ರೀಧರ್ಮಿಣೀಂ ವರಾರೋಹಾಂ ಶೋಣಿತೇನ ಸಮುಕ್ಷಿತಾಂ।।
02072015a ಏಕವಸ್ತ್ರಾಂ ಚ ಪಾಂಚಾಲೀಂ ಪಾಂಡವಾನಭ್ಯವೇಕ್ಷತೀಂ।
02072015c ಹೃತಸ್ವಾನ್ಭ್ರಷ್ಟಚಿತ್ತಾಂಸ್ತಾನ್ ಹೃತದಾರಾನ್ ಹೃತಶ್ರಿಯಃ।।
02072016a ವಿಹೀನಾನ್ಸರ್ವಕಾಮೇಭ್ಯೋ ದಾಸಭಾವವಶಂ ಗತಾನ್।
02072016c ಧರ್ಮಪಾಶಪರಿಕ್ಷಿಪ್ತಾನಶಕ್ತಾನಿವ ವಿಕ್ರಮೇ।।
ಆ ಸ್ತ್ರೀಧರ್ಮಿಣೀ, ವರಾರೋಹೆ, ರಕ್ತದಿಂದ ತೋಯ್ದ ಏಕ ವಸ್ತ್ರಧಾರಿಣಿ ಪಾಂಚಾಲಿಯು ಸೋತ, ಭ್ರಷ್ಟಚಿತ್ತ, ಪತ್ನಿಯನ್ನು ಕಳೆದುಕೊಂಡ, ಸಂಪತ್ತನ್ನು ಕಳೆದುಕೊಂಡ, ಸರ್ವಕಾಮಗಳಿಂದ ವಂಚಿತರಾದ, ದಾಸಭಾವವನ್ನು ಹೊಂದಿದ, ಧರ್ಮಪಾಶದಲ್ಲಿ ಸಿಲುಕಿಕೊಂಡ, ವಿಕ್ರಮದಲ್ಲಿ ಅಶಕ್ತರಂತಿರುವ ಪಾಂಡವರನ್ನು ನೋಡಿದಳು.
02072017a ಕ್ರುದ್ಧಾಮಮರ್ಷಿತಾಂ ಕೃಷ್ಣಾಂ ದುಃಖಿತಾಂ ಕುರುಸಂಸದಿ।
02072017c ದುರ್ಯೋಧನಶ್ಚ ಕರ್ಣಶ್ಚ ಕಟುಕಾನ್ಯಭ್ಯಭಾಷತಾಂ।।
ಕೃದ್ಧಳೂ, ಅಸಹಾಯಕಳೂ. ದುಃಖಿತಳೂ ಆಗಿದ್ದ ಕೃಷ್ಣೆಯನ್ನು ದುರ್ಯೋಧನ ಕರ್ಣರು ಕಟು ಮಾತುಗಳಿಂದ ಅವಮಾನಿಸಿದರು.
02072018a ತಸ್ಯಾಃ ಕೃಪಣಚಕ್ಷುರ್ಭ್ಯಾಂ ಪ್ರದಹ್ಯೇತಾಪಿ ಮೇದಿನೀ।
02072018c ಅಪಿ ಶೇಷಂ ಭವೇದದ್ಯ ಪುತ್ರಾಣಾಂ ಮಮ ಸಂಜಯ।।
ಸಂಜಯ! ಅವಳ ದೀನ ಕಣ್ಣುಗಳಿಂದ ಇಡೀ ಭೂಮಿಯೇ ಸುಟ್ಟುಹೋಗಬಹುದಾಗಿತ್ತು. ಇನ್ನು ನನ್ನ ಪುತ್ರರು ಉಳಿಯುವರೇ?
02072019a ಭಾರತಾನಾಂ ಸ್ತ್ರಿಯಃ ಸರ್ವಾ ಗಾಂಧಾರ್ಯಾ ಸಹ ಸಂಗತಾಃ।
02072019c ಪ್ರಾಕ್ರೋಶನ್ಭೈರವಂ ತತ್ರ ದೃಷ್ಟ್ವಾ ಕೃಷ್ಣಾಂ ಸಭಾಗತಾಂ।।
ಅಲ್ಲಿ ಸೇರಿದ್ದ ಗಾಂಧಾರಿಯನ್ನೂ ಸೇರಿ ಸರ್ವ ಭಾರತ ಸ್ತ್ರೀಯರು ಕೃಷ್ಣೆಯನ್ನು ಸಭೆಗೆ ಕರಿಸಿದ್ದುದನ್ನು ನೋಡಿ ಭೈರವವಾಗಿ ಕೂಗಿಕೊಂಡರು.
02072020a ಅಗ್ನಿಹೋತ್ರಾಣಿ ಸಾಯಾಹ್ನೇ ನ ಚಾಹೂಯಂತ ಸರ್ವಶಃ।
02072020c ಬ್ರಾಹ್ಮಣಾಃ ಕುಪಿತಾಶ್ಚಾಸನ್ದ್ರೌಪದ್ಯಾಃ ಪರಿಕರ್ಷಣೇ।।
ಸರ್ವ ಬ್ರಾಹ್ಮಣರೂ ದ್ರೌಪದಿಯ ಬಲಾತ್ಕಾರದಿಂದ ಕುಪಿತರಾಗಿ ಅಂದಿನ ಸಂಜೆ ಅಗ್ನಿಹೋತ್ರಗಳು ಉರಿಯಲಿಲ್ಲ.
02072021a ಆಸೀನ್ನಿಷ್ಟಾನಕೋ ಘೋರೋ ನಿರ್ಘಾತಶ್ಚ ಮಹಾನಭೂತ್।
02072021c ದಿವೋಲ್ಕಾಶ್ಚಾಪತನ್ಘೋರಾ ರಾಹುಶ್ಚಾರ್ಕಮುಪಾಗ್ರಸತ್।
02072021e ಅಪರ್ವಣಿ ಮಹಾಘೋರಂ ಪ್ರಜಾನಾಂ ಜನಯನ್ಭಯಂ।।
ಅನಿಷ್ಟ ಘೋರ ಭೂಕಂಪನದ ಧ್ವನಿಯು ಕೇಳಿಬಂದಿತು. ಆಕಾಶದಿಂದ ಘೋರ ಉಲ್ಕೆಗಳು ಬಿದ್ದವು. ಗ್ರಹಣ ಕಾಲವಲ್ಲದಿದ್ದರೂ ಮಹಾಘೋರ ರಾಹುವು ಸೂರ್ಯಗ್ರಹಣ ಮಾಡಿ ಪ್ರಜೆಗಳಲ್ಲಿ ಭಯವನ್ನುಂಟು ಮಾಡಿದನು.
02072022a ತಥೈವ ರಥಶಾಲಾಸು ಪ್ರಾದುರಾಸೀದ್ಧುತಾಶನಃ।
02072022c ಧ್ವಜಾಶ್ಚ ವ್ಯವಶೀರ್ಯಂತ ಭರತಾನಾಮಭೂತಯೇ।।
ಹಾಗೆಯೇ ಭಾರತರ ವಿನಾಶವನ್ನು ಸೂಚಿಸುವಂತೆ ರಥಶಾಲೆಗಳಲ್ಲಿ ಬೆಂಕಿಯು ಕಾಣಿಸಿಕೊಂಡಿತು ಮತ್ತು ಧ್ವಜಸ್ಥಂಭಗಳು ತಾವಾಗಿಯೇ ಮುರಿದು ಬಿದ್ದವು.
02072023a ದುರ್ಯೋಧನಸ್ಯಾಗ್ನಿಹೋತ್ರೇ ಪ್ರಾಕ್ರೋಶನ್ಭೈರವಂ ಶಿವಾಃ।
02072023c ತಾಸ್ತದಾ ಪ್ರತ್ಯಭಾಷಂತ ರಾಸಭಾಃ ಸರ್ವತೋದಿಶಂ।।
ದುರ್ಯೋಧನನ ಅಗ್ನಿಹೋತ್ರದಲ್ಲಿ ನರಿಗಳು ಭೈರವವಾಗಿ ಕೂಗಿದವು, ಅದಕ್ಕೆ ಪ್ರತ್ಯುತ್ತರವಾಗಿ ಎಲ್ಲ ದಿಕ್ಕುಗಳಿಂದಲೂ ಕತ್ತೆಗಳು ಕೂಗಿದವು.
02072024a ಪ್ರಾತಿಷ್ಠತ ತತೋ ಭೀಷ್ಮೋ ದ್ರೋಣೇನ ಸಹ ಸಂಜಯ।
02072024c ಕೃಪಶ್ಚ ಸೋಮದತ್ತಶ್ಚ ಬಾಹ್ಲೀಕಶ್ಚ ಮಹಾರಥಃ।।
ಸಂಜಯ! ಆಗ ಭೀಷ್ಮನು ದ್ರೋಣ, ಕೃಪ, ಸೋಮದತ್ತ, ಮಹಾರಥಿ ಬಾಹ್ಲೀಕರೊಂದಿಗೆ ಸಭೆಯನ್ನು ಬಿಟ್ಟು ಹೊರಟು ಹೋದನು.
02072025a ತತೋಽಹಮಬ್ರುವಂ ತತ್ರ ವಿದುರೇಣ ಪ್ರಚೋದಿತಃ।
02072025c ವರಂ ದದಾನಿ ಕೃಷ್ಣಾಯೈ ಕಾಂಕ್ಷಿತಂ ಯದ್ಯದಿಚ್ಛತಿ।।
ಆಗ ನಾನು ವಿದುರನಿಂದ ಪ್ರಚೋದಿತನಾಗಿ ಬೇಡಿದ ವರವನ್ನು ಕೊಡುತ್ತೇನೆ ಎಂದು ಕೃಷ್ಣೆಗೆ ಹೇಳಿದೆನು.
02072026a ಅವೃಣೋತ್ತತ್ರ ಪಾಂಚಾಲೀ ಪಾಂಡವಾನಮಿತೌಜಸಃ।
02072026c ಸರಥಾನ್ಸಧನುಷ್ಕಾಂಶ್ಚಾಪ್ಯನುಜ್ಞಾಸಿಷಮಪ್ಯಹಂ।।
ಆಗ ಪಾಂಚಾಲಿಯು ಅಮಿತೌಜಸ ಪಾಂಡವರನ್ನು ಕೇಳಿಕೊಂಡಳು. ನಾನು ರಥ, ಧನುಸ್ಸುಗಳೊಂದಿಗೆ ಅವರಿಗೆ ಹೋಗಲು ಅನುಮತಿಯನ್ನಿತ್ತೆನು.
02072027a ಅಥಾಬ್ರವೀನ್ಮಹಾಪ್ರಾಜ್ಞೋ ವಿದುರಃ ಸರ್ವಧರ್ಮವಿತ್।
02072027c ಏತದಂತಾಃ ಸ್ಥ ಭರತಾ ಯದ್ವಃ ಕೃಷ್ಣಾ ಸಭಾಂ ಗತಾ।।
ಆಗ ಮಹಾಪ್ರಾಜ್ಞ, ಸರ್ವಧರ್ಮವಿದು ವಿದುರನು ಹೇಳಿದನು: “ಭಾರತರೇ! ಕೃಷ್ಣೆಯು ಸಭೆಗೆ ಬಂದಿರುವುದು ನಿಮ್ಮ ಅಂತ್ಯವನ್ನು ಸೂಚಿಸುತ್ತದೆ.
02072028a ಏಷಾ ಪಾಂಚಾಲರಾಜಸ್ಯ ಸುತೈಷಾ ಶ್ರೀರನುತ್ತಮಾ।
02072028c ಪಾಂಚಾಲೀ ಪಾಂಡವಾನೇತಾನ್ದೈವಸೃಷ್ಟೋಪಸರ್ಪತಿ।।
ಈ ಪಾಂಚಾಲರಾಜನ ಸುತೆ ಪಾಂಚಾಲಿಯು ಪಾಂಡವರಿಗಾಗಿಯೇ ದೇವತೆಗಳು ಸೃಷ್ಟಿಸಿದ ಉತ್ತಮ ಶ್ರೀ.
02072029a ತಸ್ಯಾಃ ಪಾರ್ಥಾಃ ಪರಿಕ್ಲೇಶಂ ನ ಕ್ಷಂಸ್ಯಂತೇಽತ್ಯಮರ್ಷಣಾಃ।
02072029c ವೃಷ್ಣಯೋ ವಾ ಮಹೇಷ್ವಾಸಾಃ ಪಾಂಚಾಲಾ ವಾ ಮಹೌಜಸಃ।।
ಅವಳ ಅಪಮಾನವನ್ನು ಸಿಟ್ಟಿಗೆದ್ದ ಪಾಂಡವರಾಗಲೀ, ಮಹೇಷ್ವಾಸ ವೃಷ್ಣಿಗಳಾಗಲೀ, ಅಥವಾ ಮಹೌಜಸ ಪಾಂಚಾಲರಾಗಲೀ ಸಹಿಸುವುದಿಲ್ಲ.
02072030a ತೇನ ಸತ್ಯಾಭಿಸಂಧೇನ ವಾಸುದೇವೇನ ರಕ್ಷಿತಾಃ।
02072030c ಆಗಮಿಷ್ಯತಿ ಬೀಭತ್ಸುಃ ಪಾಂಚಾಲೈರಭಿರಕ್ಷಿತಃ।।
ಅವರು ಸತ್ಯಾಭಿಸಂಧ ವಾಸುದೇವನ ರಕ್ಷಣೆಯಲ್ಲಿದ್ದಾರೆ. ಪಾಂಚಾಲರಿಂದ ರಕ್ಷಿತನಾದ ಬೀಭತ್ಸುವು ಬರುತ್ತಾನೆ.
02072031a ತೇಷಾಂ ಮಧ್ಯೇ ಮಹೇಷ್ವಾಸೋ ಭೀಮಸೇನೋ ಮಹಾಬಲಃ।
02072031c ಆಗಮಿಷ್ಯತಿ ಧುನ್ವಾನೋ ಗದಾಂ ದಂಡಮಿವಾಂತಕಃ।।
ಅವರ ಮಧ್ಯದಲ್ಲಿ ಮಹೇಷ್ವಾಸ ಮಹಾಬಲ ಭೀಮಸೇನನು ಅಂತಕನ ದಂಡದಂತಿರುವ ಗದೆಯನ್ನು ಬೀಸುತ್ತಾ ಬರುತ್ತಾನೆ.
02072032a ತತೋ ಗಾಂಡೀವನಿರ್ಘೋಷಂ ಶ್ರುತ್ವಾ ಪಾರ್ಥಸ್ಯ ಧೀಮತಃ।
02072032c ಗದಾವೇಗಂ ಚ ಭೀಮಸ್ಯ ನಾಲಂ ಸೋಢುಂ ನರಾಧಿಪಾಃ।।
ಧೀಮತ ಪಾರ್ಥನ ಗಾಂಡೀವದ ಘೋಷವನ್ನಾಗಲೀ, ಭೀಮನ ಗದಾಪ್ರಹಾರದ ರಭಸವನ್ನಾಗಲೀ ಕೇಳಲು ನರಾಧಿಪರಿಗಾಗಲಿಕ್ಕಿಲ್ಲ.
02072033a ತತ್ರ ಮೇ ರೋಚತೇ ನಿತ್ಯಂ ಪಾರ್ಥೈಃ ಸಾರ್ಧಂ ನ ವಿಗ್ರಹಃ।
02072033c ಕುರುಭ್ಯೋ ಹಿ ಸದಾ ಮನ್ಯೇ ಪಾಂಡವಾಂ ಶಕ್ತಿಮತ್ತರಾನ್।।
ಆದುದರಿಂದ ಪಾರ್ಥರೊಂದಿಗೆ ಎಂದೂ ಯುದ್ಧವನ್ನು ಬಯಸಬಾರದು ಎಂದು ನನಗನ್ನಿಸುತ್ತದೆ. ಕುರುಗಳಿಗಿಂತ ಪಾಂಡವರೇ ಹೆಚ್ಚು ಶಕ್ತಿವಂತರು ಎಂದು ಸದಾ ನನ್ನ ಅಭಿಪ್ರಾಯ.
02072034a ತಥಾ ಹಿ ಬಲವಾನ್ರಾಜಾ ಜರಾಸಂಧೋ ಮಹಾದ್ಯುತಿಃ।
02072034c ಬಾಹುಪ್ರಹರಣೇನೈವ ಭೀಮೇನ ನಿಹತೋ ಯುಧಿ।।
ಮಹಾದ್ಯುತಿ ರಾಜ ಜರಾಸಂಧನು ಬಲಶಾಲಿಯಾಗಿದ್ದರೂ ಅವನನ್ನು ಭೀಮನು ಕೇವಲ ಬಾಹುಪ್ರಹಾರದಿಂದಲೇ ಕೊಂದನು.
02072035a ತಸ್ಯ ತೇ ಶಮ ಏವಾಸ್ತು ಪಾಂಡವೈರ್ಭರತರ್ಷಭ।
02072035c ಉಭಯೋಃ ಪಕ್ಷಯೋರ್ಯುಕ್ತಂ ಕ್ರಿಯತಾಮವಿಶಂಕಯಾ।।
ಭರತರ್ಷಭ! ಪಾಂಡವರೊಂದಿಗೆ ಶಾಂತಿಯಿಂದಿರು ಮತ್ತು ಎರಡೂ ಪಕ್ಷಗಳಿಗೂ ಯುಕ್ತವಾಗಿರುವ ಕಾರ್ಯವನ್ನು ಶೀಘ್ರವೇ ಕೈಗೊಳ್ಳು!”
02072036a ಏವಂ ಗಾವಲ್ಗಣೇ ಕ್ಷತ್ತಾ ಧರ್ಮಾರ್ಥಸಹಿತಂ ವಚಃ।
02072036c ಉಕ್ತವಾನ್ನ ಗೃಹೀತಂ ಚ ಮಯಾ ಪುತ್ರಹಿತೇಪ್ಸಯಾ।।
ಗಾವಲ್ಗಣಿ! ಪುತ್ರನಿಗೆ ಹಿತವನ್ನುಂಟುಮಾಡಲು ಬಯಸಿದ ನಾನು ಕ್ಷತ್ತನು ಈ ರೀತಿ ಧರ್ಮಾರ್ಥಸಂಹಿತ ಮಾತುಗಳನ್ನು ಹೇಳಿದರೂ ಸ್ವೀಕರಿಸಲಿಲ್ಲ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಣಿ ಅನುದ್ಯೂತಪರ್ವಣಿ ಧೃತರಾಷ್ಟ್ರಸಂಜಯಸಂವಾದೇ ದ್ವಿಸಪ್ತತಿತಮೋಽಧ್ಯಾಯಃ।।
ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಧೃತರಾಷ್ಟ್ರಸಂಜಯಸಂವಾದ ಎನ್ನುವ ಎಪ್ಪತ್ತೆರಡನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಣಿ ಅನುದ್ಯೂತಪರ್ವಃ।।
ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವವು.
ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಃ।।
ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-29/100, ಅಧ್ಯಾಯಗಳು-297/1995, ಶ್ಲೋಕಗಳು-9580/73784.
-
ಅಂದರೆ ಕಾಲವು ಒಂದೇ ಸಮನೆ ಮನುಷ್ಯನನ್ನು ನಾಶಗೊಳಿಸುವುದಿಲ್ಲ. ಅವನನ್ನು ನಿಧಾನವಾಗಿ, ವಿಪರೀತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿ, ಕೊಲ್ಲುತ್ತದೆ. ↩︎