070 ದ್ರೌಪದೀಕುಂತೀಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಅನುದ್ಯೂತ ಪರ್ವ

ಅಧ್ಯಾಯ 70

ಸಾರ

ದ್ರೌಪದಿಯು ಕುಂತಿಯನ್ನು ಬೀಳ್ಕೊಳ್ಳಲು ಹೋಗುವುದು (1-3). ಕುಂತಿಯು ದ್ರೌಪದಿಗೆ ಸಾಂತ್ವನ ಮತ್ತು ಉಪದೇಶದ ನುಡಿಗಳನ್ನು ಹೇಳುವುದು (4-9). ಕುಂತಿಯು ಮಕ್ಕಳನ್ನು ನೋಡಿ ರೋದಿಸುವುದು (10-21). ಕುಂತಿಯನ್ನು ವಿದುರನ ಮನೆಗೆ ಕರೆದೊಯ್ಯುವುದು (22). ಚಿಂತಾಪರನಾದ ಧೃತರಾಷ್ಟ್ರನು ವಿದುರನನ್ನು ಕರೆಸುವುದು (23-24).

02070001 ವೈಶಂಪಾಯನ ಉವಾಚ।
02070001a ತಸ್ಮಿನ್ಸಂಪ್ರಸ್ಥಿತೇ ಕೃಷ್ಣಾ ಪೃಥಾಂ ಪ್ರಾಪ್ಯ ಯಶಸ್ವಿನೀಂ।
02070001c ಆಪೃಚ್ಛದ್ಭೃಶದುಃಖಾರ್ತಾ ಯಾಶ್ಚಾನ್ಯಾಸ್ತತ್ರ ಯೋಷಿತಃ।।

ವೈಶಂಪಾಯನನು ಹೇಳಿದನು: “ಅವನು ಹೊರಡುತ್ತಿರುವಾಗ ಕೃಷ್ಣೆಯು ಯಶಸ್ವಿನೀ ಪೃಥೆಯಲ್ಲಿಗೆ ಹೋದಳು. ಅಲ್ಲಿ ಅತ್ಯಂತ ದುಃಖಾರ್ತಳಾಗಿ ಅವಳಿಂದ ಮತ್ತು ಇತರರಿಂದ ಬೀಳ್ಕೊಂಡಳು.

02070002a ಯಥಾರ್ಹಂ ವಂದನಾಶ್ಲೇಷಾನ್ಕೃತ್ವಾ ಗಂತುಮಿಯೇಷ ಸಾ।
02070002c ತತೋ ನಿನಾದಃ ಸುಮಹಾನ್ಪಾಂಡವಾಂತಃಪುರೇಽಭವತ್।।

ಅವರವರಿಗೆ ತಕ್ಕಂತೆ ನಮಸ್ಕರಿಸಿ ಅಥವಾ ಆಲಂಗಿಸಿ1 ಅವಳು ಹೋಗಲು ಸಿದ್ಧವಾಗಿರಲು ಪಾಂಡವರ ಅಂತಃಪುರದಲ್ಲಿ ಜೋರಾದ ರೋದನವು ಕೇಳಿಬಂದಿತು.

02070003a ಕುಂತೀ ಚ ಭೃಶಸಂತಪ್ತಾ ದ್ರೌಪದೀಂ ಪ್ರೇಕ್ಷ್ಯ ಗಚ್ಛತೀಂ।
02070003c ಶೋಕವಿಹ್ವಲಯಾ ವಾಚಾ ಕೃಚ್ಛ್ರಾದ್ವಚನಮಬ್ರವೀತ್।।

ದುಃಖಸಂತಪ್ತೆ ಕುಂತಿಯು ಹೊರಡುತ್ತಿರುವ ದ್ರೌಪದಿಯನ್ನು ನೋಡಿ ಶೋಕವಿಹ್ವಲಳಾಗಿ ಕಷ್ಟದಿಂದ ಈ ಮಾತುಗಳನ್ನಾಡಿದಳು:

02070004a ವತ್ಸೇ ಶೋಕೋ ನ ತೇ ಕಾರ್ಯಃ ಪ್ರಾಪ್ಯೇದಂ ವ್ಯಸನಂ ಮಹತ್।
02070004c ಸ್ತ್ರೀಧರ್ಮಾಣಾಮಭಿಜ್ಞಾಸಿ ಶೀಲಾಚಾರವತೀ ತಥಾ।।

“ವತ್ಸೇ! ಈ ಮಹಾ ವ್ಯಸನವನ್ನು ಪಡೆದುದಕ್ಕೆ ಶೋಕಿಸಬೇಡ. ಸ್ತ್ರೀಧರ್ಮಗಳನ್ನು ಅರಿತಿದ್ದೀಯೆ ಮತ್ತು ಶೀಲಾಚಾರವತಿಯೂ ಆಗಿದ್ದೀಯೆ.

02070005a ನ ತ್ವಾಂ ಸಂದೇಷ್ಟುಮರ್ಹಾಮಿ ಭರ್ತೄನ್ಪ್ರತಿ ಶುಚಿಸ್ಮಿತೇ।
02070005c ಸಾಧ್ವೀಗುಣಸಮಾಧಾನೈರ್ಭೂಷಿತಂ ತೇ ಕುಲದ್ವಯಂ।।

ಶುಚಿಸ್ಮಿತೇ! ನಿನ್ನ ಪತಿಗಳ ಕುರಿತು ನಾನು ಏನನ್ನೂ ಹೇಳಬೇಕಾದ್ದಿಲ್ಲ. ನೀನು ನಿನ್ನ ಸಾಧ್ವೀಗುಣ ಸಮಾಧಾನಗಳಿಂದ ಎರಡೂ ಕುಲಗಳನ್ನು2 ಸಿಂಗರಿಸಿದ್ದೀಯೆ.

02070006a ಸಭಾಗ್ಯಾಃ ಕುರವಶ್ಚೇಮೇ ಯೇ ನ ದಗ್ಧಾಸ್ತ್ವಯಾನಘೇ।
02070006c ಅರಿಷ್ಟಂ ವ್ರಜ ಪಂಥಾನಂ ಮದನುಧ್ಯಾನಬೃಂಹಿತಾ।।
02070007a ಭಾವಿನ್ಯರ್ಥೇ ಹಿ ಸತ್ಸ್ತ್ರೀಣಾಂ ವೈಕ್ಲವ್ಯಂ ನೋಪಜಾಯತೇ।
02070007c ಗುರುಧರ್ಮಾಭಿಗುಪ್ತಾ ಚ ಶ್ರೇಯಃ ಕ್ಷಿಪ್ರಮವಾಪ್ಸ್ಯಸಿ।।

ಅನಘೇ! ನಿನ್ನಿಂದ ಸುಟ್ಟುಹೋಗದೇ ಇದ್ದ ಕುರುಗಳು ಭಾಗ್ಯವಂತರು. ನನ್ನ ಧ್ಯಾನದಿಂದ ಶಕ್ತಿಯನ್ನು ಪಡೆದು ಅರಿಷ್ಟ3 ಮಾರ್ಗವನ್ನು ನಿನ್ನದಾಗಿಸಿಕೋ. ಆಗಲೇ ಬೇಕಾದುದಕ್ಕೆ ಸತ್ಸ್ತ್ರೀಯರು ಹಿಂಜರಿಯುವುದಿಲ್ಲ. ನಿನ್ನ ಹಿರಿಯರ ಧರ್ಮದ ರಕ್ಷಣೆಯಿರುವ ನೀನು ಅಲ್ಪ ಸಮಯದಲ್ಲಿಯೇ ಶ್ರೇಯಸ್ಸನ್ನು ಹೊಂದುತ್ತೀಯೆ!

02070008a ಸಹದೇವಶ್ಚ ಮೇ ಪುತ್ರಃ ಸದಾವೇಕ್ಷ್ಯೋ ವನೇ ವಸನ್।
02070008c ಯಥೇದಂ ವ್ಯಸನಂ ಪ್ರಾಪ್ಯ ನಾಸ್ಯ ಸೀದೇನ್ಮಹನ್ಮನಃ।।

ವನದಲ್ಲಿ ವಾಸಿಸುವಾಗ ನನ್ನ ಪುತ್ರ ಸಹದೇವನನ್ನು ಸದಾ ನೋಡಿಕೋ! ಈ ವ್ಯಸನವನ್ನು ಹೊಂದಿದ ಅವನ ಮಹಾಮನಸ್ಸು ದುಃಖಿಸಬಾರದು.”

02070009a ತಥೇತ್ಯುಕ್ತ್ವಾ ತು ಸಾ ದೇವೀ ಸ್ರವನ್ನೇತ್ರಜಲಾವಿಲಾ।
02070009c ಶೋಣಿತಾಕ್ತೈಕವಸನಾ ಮುಕ್ತಕೇಶ್ಯಭಿನಿರ್ಯಯೌ।।

ಹಾಗೆಯೇ ಅಗಲೆಂದು ಹೇಳಿ ಸುರಿಯುವ ಕಣ್ಣೀರಿನಿಂದ ಮುಖವು ಕಲೆಯಾಗಿರಲು, ರಜಸ್ವಲೆಯಾಗಿ ಏಕವಸ್ತ್ರದಲ್ಲಿದ್ದ ಆ ದೇವಿಯು ತಲೆಕೂದಲನ್ನು ಕಟ್ಟದೆಯೇ ಹೊರಟಳು.

02070010a ತಾಂ ಕ್ರೋಶಂತೀಂ ಪೃಥಾ ದುಃಖಾದನುವವ್ರಾಜ ಗಚ್ಛತೀಂ।
02070010c ಅಥಾಪಶ್ಯತ್ಸುತಾನ್ಸರ್ವಾನ್ ಹೃತಾಭರಣವಾಸಸಃ।।
02070011a ರುರುಚರ್ಮಾವೃತತನೂನ್ ಹ್ರಿಯಾ ಕಿಂ ಚಿದವಾಮ್ಮುಖಾನ್।
02070011c ಪರೈಃ ಪರೀತಾನ್ಸಂಹೃಷ್ಟೈಃ ಸುಹೃದ್ಭಿಶ್ಚಾನುಶೋಚಿತಾನ್।।

ಅಳುತ್ತಾ ಹೋಗುತ್ತಿದ್ದ ಅವಳನ್ನು ಪೃಥೆಯು ದುಃಖದಿಂದ ಹಿಂಬಾಲಿಸಿ ಬಂದು ವಸ್ತ್ರಾಭರಣಗಳನ್ನು ಕಳಚಿಕೊಂಡು, ದೇಹಕ್ಕೆ ರುರುಚರ್ಮವನ್ನು ಸುತ್ತಿಕೊಂಡು, ಕೇಳಿ ಹಾಕುತ್ತಿದ್ದ ತಮ್ಮ ಶತ್ರುಗಳ ಮಧ್ಯದಲ್ಲಿ ನಾಚಿಕೆಯಿಂದ ತಲೆತಗ್ಗಿಸಿದ್ದ, ಆದರೆ ಸುಹೃದಯರ ಶೋಕದ ವಿಷಯರಾದ ಸರ್ವ ಸುತರನ್ನೂ ನೋಡಿದಳು.

02070012a ತದವಸ್ಥಾನ್ಸುತಾನ್ಸರ್ವಾನುಪಸೃತ್ಯಾತಿವತ್ಸಲಾ।
02070012c ಸಸ್ವಜಾನಾವದಚ್ಶೋಕಾತ್ತತ್ತದ್ವಿಲಪತೀ ಬಹು।।

ಅತಿಪ್ರೀತಿಯಿಂದ ಬೇಗನೇ ಅದೇ ಅವಸ್ಥೆಯಲ್ಲಿ ಅವರ ಹತ್ತಿರ ಹೋಗಿ ಶೋಕದಿಂದ ವಿಲಪಿಸುತ್ತಾ ಅವರಿಗೆ ಮತ್ತು ಅವರ ಜನರಿಗೆ ಹೇಳಿದಳು:

02070013a ಕಥಂ ಸದ್ಧರ್ಮಚಾರಿತ್ರವೃತ್ತಸ್ಥಿತಿವಿಭೂಷಿತಾನ್।
02070013c ಅಕ್ಷುದ್ರಾನ್ದೃಢಭಕ್ತಾಂಶ್ಚ ದೈವತೇಜ್ಯಾಪರಾನ್ಸದಾ।।
02070014a ವ್ಯಸನಂ ವಃ ಸಮಭ್ಯಾಗಾತ್ಕೋಽಯಂ ವಿಧಿವಿಪರ್ಯಯಃ।
02070014c ಕಸ್ಯಾಪಧ್ಯಾನಜಂ ಚೇದಮಾಗಃ ಪಶ್ಯಾಮಿ ವೋ ಧಿಯಾ।।

“ಸದ್ಧರ್ಮ-ಚಾರಿತ್ರ್ಯಗಳನ್ನು ಸುತ್ತಿಕೊಂಡು ವಿಭೂಷಿತರಾದ, ಎಂದೂ ಕೆಳಮಟ್ಟಕ್ಕಿಳಿಯದೇ, ದೃಢಭಕ್ತರಾಗಿದ್ದ, ಸದಾ ದೇವತೆಗಳ ಪೂಜೆಯಲ್ಲಿ ನಿರತರಾದ ನಿಮಗೆ ಹೇಗೆ ಈ ವ್ಯಸನವು ಬಂದು ಸೇರಿಕೊಂಡಿತು? ಅಥವಾ ಇದು ಯಾವ ವಿಧಿವಿಪರ್ಯಾಸ? ಯಾರ ಶತ್ರುತ್ವ-ತಪ್ಪಿನಿಂದಾಗಿ ನಿಮ್ಮನ್ನು ಈ ಪರಿಸ್ಥಿತಿಯಲ್ಲಿ ಕಾಣುತ್ತಿದ್ದೇನೆ?

02070015a ಸ್ಯಾತ್ತು ಮದ್ಭಾಗ್ಯದೋಷೋಽಯಂ ಯಾಹಂ ಯುಷ್ಮಾನಜೀಜನಂ।
02070015c ದುಃಖಾಯಾಸಭುಜೋಽತ್ಯರ್ಥಂ ಯುಕ್ತಾನಪ್ಯುತ್ತಮೈರ್ಗುಣೈಃ।।

ಬಹುಷಃ ನಿಮಗೆ ಜನ್ಮವಿತ್ತ ನನ್ನದೇ ದುರ್ಭಾಗ್ಯದಿಂದ, ಎಷ್ಟೇ ಉತ್ತಮ ಗುಣಾನ್ವಿತರಾಗಿದ್ದರೂ ನೀವು ಈ ಮಹಾ ದುಃಖಾಯಾಸಗಳನ್ನು ಅನುಭವಿಸುತ್ತಿರುವಿರಿ.

02070016a ಕಥಂ ವತ್ಸ್ಯಥ ದುರ್ಗೇಷು ವನೇಷ್ವೃದ್ಧಿವಿನಾಕೃತಾಃ।
02070016c ವೀರ್ಯಸತ್ತ್ವಬಲೋತ್ಸಾಹತೇಜೋಭಿರಕೃಶಾಃ ಕೃಶಾಃ।।

ಸಂಪತ್ತು ಇಲ್ಲದವರಾಗಿ, ವೀರ್ಯ, ಸತ್ವ, ಬಲ, ಉತ್ಸಾಹ, ತೇಜಸ್ಸನ್ನು ಕಳೆದುಕೊಳ್ಳದಿದ್ದರೂ ಕೃಶರಾಗಿ ಹೇಗೆ ಆ ವನದುರ್ಗಗಳಲ್ಲಿ ವಾಸಿಸುವಿರಿ?

02070017a ಯದ್ಯೇತದಹಮಜ್ಞಾಸ್ಯಂ ವನವಾಸೋ ಹಿ ವೋ ಧ್ರುವಂ।
02070017c ಶತಶೃಂಗಾನ್ಮೃತೇ ಪಾಂಡೌ ನಾಗಮಿಷ್ಯಂ ಗಜಾಹ್ವಯಂ।।

ವನವಾಸವೇ ನಿಮಗೆ ನಿಶ್ಚಿತವಾದುದು ಎಂದು ನಾನು ತಿಳಿದಿದ್ದರೆ ಪಾಂಡುವಿನ ಮರಣದ ನಂತರ ಶತಶೃಂಗದಿಂದ ಗಜಾಹ್ವಯಕ್ಕೆ ಬರುತ್ತಲೇ ಇರಲಿಲ್ಲ.

02070018a ಧನ್ಯಂ ವಃ ಪಿತರಂ ಮನ್ಯೇ ತಪೋಮೇಧಾನ್ವಿತಂ ತಥಾ।
02070018c ಯಃ ಪುತ್ರಾಧಿಮಸಂಪ್ರಾಪ್ಯ ಸ್ವರ್ಗೇಚ್ಛಾಮಕರೋತ್ಪ್ರಿಯಾಂ।।

ಪ್ರಿಯ ಪುತ್ರರಿಗಾಗಿ ಶೋಕಿಸುವ ಮೊದಲೇ ಸ್ವರ್ಗಕ್ಕೆ ಹೋಗಲು ಬಯಸಿದ ತಪೋಮೇಧಾನ್ವಿತ ನಿಮ್ಮ ತಂದೆಯೇ ಧನ್ಯ ಎಂದು ತಿಳಿಯುತ್ತೇನೆ.

02070019a ಧನ್ಯಾಂ ಚಾತೀಂದ್ರಿಯಜ್ಞಾನಾಮಿಮಾಂ ಪ್ರಾಪ್ತಾಂ ಪರಾಂ ಗತಿಂ।
02070019c ಮನ್ಯೇಽದ್ಯ ಮಾದ್ರೀಂ ಧರ್ಮಜ್ಞಾಂ ಕಲ್ಯಾಣೀಂ ಸರ್ವಥೈವ ಹಿ।।

ಸರ್ವಥಾ ಧರ್ಮಜ್ಞೆಯೂ, ಕಲ್ಯಾಣಿಯೂ, ಅತೀಂದ್ರಿಯಜ್ಞಾನಿಯೂ ಆದ ಮಾದ್ರಿಯೂ ಕೂಡ ಪರಮ ಗತಿಯನ್ನು ಹೊಂದಿ ಧನ್ಯಳಾದಳು ಎಂದು ತಿಳಿಯುತ್ತೇನೆ.

02070020a ರತ್ಯಾ ಮತ್ಯಾ ಚ ಗತ್ಯಾ ಚ ಯಯಾಹಮಭಿಸಂಧಿತಾ।
02070020c ಜೀವಿತಪ್ರಿಯತಾಂ ಮಹ್ಯಂ ಧಿಗಿಮಾಂ ಕ್ಲೇಶಭಾಗಿನೀಂ।।

ಪ್ರೀತಿ, ಚಿಂತೆ ಮತ್ತು ಗತಿಯು ನನ್ನನ್ನು ಇನ್ನೂ ಜೀವವನ್ನು ಹಿಡಿದಿಟ್ಟುಕೊಂಡಿರುವಂತೆ ಮಾಡಿವೆ. ಈ ಅಪ್ರಿಯ, ಕ್ಲೇಶವನ್ನೇ ಕೊಟ್ಟಿರುವ ನನ್ನ ಈ ಜೀವಿತಕ್ಕೆ ಧಿಕ್ಕಾರ!”

02070021a ಏವಂ ವಿಲಪತೀಂ ಕುಂತೀಮಭಿಸಾಂತ್ವ್ಯ ಪ್ರಣಮ್ಯ ಚ।
02070021c ಪಾಂಡವಾ ವಿಗತಾನಂದಾ ವನಾಯೈವ ಪ್ರವವ್ರಜುಃ।।

ಈ ರೀತಿ ವಿಲಪಿಸುತ್ತಿರುವ ಕುಂತಿಯನ್ನು ಸಂತವಿಸಿ, ನಮಸ್ಕರಿಸಿ, ಬೀಳ್ಕೊಂಡು ಪಾಂಡವರು ವನದಕಡೆ ಮುಂದುವರೆದರು.

02070022a ವಿದುರಾದಯಶ್ಚ ತಾಮಾರ್ತಾಂ ಕುಂತೀಮಾಶ್ವಾಸ್ಯ ಹೇತುಭಿಃ।
02070022c ಪ್ರಾವೇಶಯನ್ಗೃಹಂ ಕ್ಷತ್ತುಃ ಸ್ವಯಮಾರ್ತತರಾಃ ಶನೈಃ।।

ವಿದುರ ಮೊದಲಾದವರು ಸ್ವಯಂ ತಾವೇ ದುಃಖಿತರಾಗಿದ್ದರೂ ಆರ್ತೆ ಕುಂತಿಯನ್ನು ಕಾರಣಗಳನ್ನಿತ್ತು ಸಮಾಧಾನ ಪಡಿಸಿ ನಿಧಾನವಾಗಿ ಕ್ಷತ್ತನ ಮನೆಗೆ ಕರೆದೊಯ್ದರು.

02070023a ರಾಜಾ ಚ ಧೃತರಾಷ್ಟ್ರಃ ಸ ಶೋಕಾಕುಲಿತಚೇತನಃ।
02070023c ಕ್ಷತ್ತುಃ ಸಂಪ್ರೇಷಯಾಮಾಸ ಶೀಘ್ರಮಾಗಮ್ಯತಾಮಿತಿ।।

ಶೋಕಾಕುಲಿತಚೇತನ ರಾಜಾ ಧೃತರಾಷ್ಟ್ರನು “ಶೀಘ್ರವೇ ಬಾ!” ಎಂದು ಕ್ಷತ್ತನಿಗೆ ಹೇಳಿ ಕಳುಹಿಸಿದನು.

02070024a ತತೋ ಜಗಾಮ ವಿದುರೋ ಧೃತರಾಷ್ಟ್ರನಿವೇಶನಂ।
02070024c ತಂ ಪರ್ಯಪೃಚ್ಛತ್ಸಂವಿಗ್ನೋ ಧೃತರಾಷ್ಟ್ರೋ ನರಾಧಿಪಃ।।

ಆಗ ವಿದುರನು ಧೃತರಾಷ್ಟ್ರನ ಮನೆಗೆ ಹೋದನು. ಅಲ್ಲಿ ಸಂವಿಗ್ನ ನರಾಧಿಪ ಧೃತರಾಷ್ಟ್ರನು ಅವನನ್ನು ಪ್ರಶ್ನಿಸಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ದ್ರೌಪದೀಕುಂತೀಸಂವಾದೇ ಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ದ್ರೌಪದೀಕುಂತೀಸಂವಾದ ಎನ್ನುವ ಎಪ್ಪತ್ತನೆಯ ಅಧ್ಯಾಯವು.


  1. ಹಿರಿಯರಿಗೆ ನಮಸ್ಕರಿಸಿ, ಸಮವಯಸ್ಕರನ್ನು ಮತ್ತು ಕಿರಿಯವರನ್ನು ಆಲಂಗಿಸಿ ↩︎

  2. ಪಾಂಡವ ಮತ್ತು ಪಾಂಚಾಲ ಕುಲಗಳು ↩︎

  3. ಭಯವಿಲ್ಲದಿರುವ . ↩︎