069 ಯುಧಿಷ್ಠಿರವನಪ್ರಸ್ಥಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಅನುದ್ಯೂತ ಪರ್ವ

ಅಧ್ಯಾಯ 69

ಸಾರ

ಯುಧಿಷ್ಠಿರನು ಸಭೆಯಲ್ಲಿದ್ದ ಎಲ್ಲರಿಂದ ಬೀಳ್ಕೊಳ್ಳುವುದು (1-4). ವಿದುರನು ಯುಧಿಷ್ಠಿರನಿಗೆ ಮಂಗಳವನ್ನು ಕೋರಿ, ಉಪದೇಶಗಳೊಂದಿಗೆ ಬೀಳ್ಕೊಡುವುದು (5-20), ಯುಧಿಷ್ಠಿರನು ಮುಂದುವರೆಯುವುದು (21).

02069001 ಯುಧಿಷ್ಠಿರ ಉವಾಚ।
02069001a ಆಮಂತ್ರಯಾಮಿ ಭರತಾಂಸ್ತಥಾ ವೃದ್ಧಂ ಪಿತಾಮಹಂ।
02069001c ರಾಜಾನಂ ಸೋಮದತ್ತಂ ಚ ಮಹಾರಾಜಂ ಚ ಬಾಹ್ಲಿಕಂ।।

ಯುಧಿಷ್ಠಿರನು ಹೇಳಿದನು: “ಭಾರತರೇ! ವೃದ್ಧ ಪಿತಾಮಹನೇ! ರಾಜ ಸೋಮದತ್ತ! ಮಹಾರಾಜ ಬಾಹ್ಲೀಕ! ನಿಮ್ಮಿಂದ ಬೀಳ್ಕೊಳ್ಳುತ್ತಿದ್ದೇನೆ.

02069002a ದ್ರೋಣಂ ಕೃಪಂ ನೃಪಾಂಶ್ಚಾನ್ಯಾನಶ್ವತ್ಥಾಮಾನಮೇವ ಚ।
02069002c ವಿದುರಂ ಧೃತರಾಷ್ಟ್ರಂ ಚ ಧಾರ್ತರಾಷ್ಟ್ರಾಂಶ್ಚ ಸರ್ವಶಃ।।
02069003a ಯುಯುತ್ಸುಂ ಸಂಜಯಂ ಚೈವ ತಥೈವಾನ್ಯಾನ್ಸಭಾಸದಃ।
02069003c ಸರ್ವಾನಾಮಂತ್ರ್ಯ ಗಚ್ಛಾಮಿ ದ್ರಷ್ಟಾಸ್ಮಿ ಪುನರೇತ್ಯ ವಃ।।

ದ್ರೋಣ, ಕೃಪ, ಅನ್ಯ ನೃಪರು, ಅಶ್ವತ್ಥಾಮ, ವಿದುರ, ಧೃತರಾಷ್ಟ್ರ, ಸರ್ವ ಧಾರ್ತರಾಷ್ಟ್ರರು, ಯುಯುತ್ಸು, ಸಂಜಯ, ಮತ್ತು ಸರ್ವ ಸಭಾಸದರಿಂದ ಬೀಳ್ಕೊಂಡು ಹೋಗುತ್ತಿದ್ದೇನೆ. ಪುನಃ ನಿಮ್ಮನ್ನು ಕಾಣುತ್ತೇನೆ.””

02069004 ವೈಶಂಪಾಯನ ಉವಾಚ।
02069004a ನ ಚ ಕಿಂ ಚಿತ್ತದೋಚುಸ್ತೇ ಹ್ರಿಯಾ ಸಂತೋ ಯುಧಿಷ್ಠಿರಂ।
02069004c ಮನೋಭಿರೇವ ಕಲ್ಯಾಣಂ ದಧ್ಯುಸ್ತೇ ತಸ್ಯ ಧೀಮತಃ।।

ವೈಶಂಪಾಯನನು ಹೇಳಿದನು: “ನಾಚಿಕೆಯಿಂದ ಆ ಸಂತರು ಯುಧಿಷ್ಠಿರನಿಗೆ ಏನನ್ನೂ ಹೇಳಲಿಲ್ಲ. ಮನಸ್ಸಿನಲ್ಲಿಯೇ ಅವರು ಆ ಧೀಮಂತನಿಗೆ ಕಲ್ಯಾಣವನ್ನು ಬಯಸಿದರು.

02069005 ವಿದುರ ಉವಾಚ।
02069005a ಆರ್ಯಾ ಪೃಥಾ ರಾಜಪುತ್ರೀ ನಾರಣ್ಯಂ ಗಂತುಮರ್ಹತಿ।
02069005c ಸುಕುಮಾರೀ ಚ ವೃದ್ಧಾ ಚ ನಿತ್ಯಂ ಚೈವ ಸುಖೋಚಿತಾ।।

ವಿದುರನು ಹೇಳಿದನು: “ಆರ್ಯೆ ರಾಜಪುತ್ರಿ ಸುಕುಮಾರಿ, ವೃದ್ಧೆ, ನಿತ್ಯವೂ ಸುಖವನ್ನೇ ಹೊಂದಿದ್ದ ಪೃಥೆಯು ಅರಣ್ಯಕ್ಕೆ ಹೋಗಬಾರದು.

02069006a ಇಹ ವತ್ಸ್ಯತಿ ಕಲ್ಯಾಣೀ ಸತ್ಕೃತಾ ಮಮ ವೇಶ್ಮನಿ।
02069006c ಇತಿ ಪಾರ್ಥಾ ವಿಜಾನೀಧ್ವಮಗದಂ ವೋಽಸ್ತು ಸರ್ವಶಃ।।

ಅವಳು ಇಲ್ಲಿ ನನ್ನ ಮನೆಯಲ್ಲಿ ಸತ್ಕೃತಳಾಗಿ ವಾಸಿಸುತ್ತಾಳೆ. ಪಾರ್ಥರೇ! ಇದನ್ನು ತಿಳಿದು ಎಲ್ಲ ರೀತಿಯಲ್ಲಿಯೂ ಸುರಕ್ಷಿತರಾಗಿರಿ.

02069007a ಯುಧಿಷ್ಠಿರ ವಿಜಾನೀಹಿ ಮಮೇದಂ ಭರತರ್ಷಭ।
02069007c ನಾಧರ್ಮೇಣ ಜಿತಃ ಕಶ್ಚಿದ್ವ್ಯಥತೇ ವೈ ಪರಾಜಯಾತ್।।

ಭರತರ್ಷಭ ಯುಧಿಷ್ಠಿರ! ನನ್ನಿಂದ ಇದನ್ನು ತಿಳಿದುಕೋ. ಅಧರ್ಮದಿಂದ ಗೆಲ್ಲಲ್ಪಟ್ಟವರು ಎಂದೂ ಸೋಲಿನಿಂದ ವ್ಯಥಿತರಾಗುವುದಿಲ್ಲ.

02069008a ತ್ವಂ ವೈ ಧರ್ಮಾನ್ವಿಜಾನೀಷೇ ಯುಧಾಂ ವೇತ್ತಾ ಧನಂಜಯಃ।
02069008c ಹಂತಾರೀಣಾಂ ಭೀಮಸೇನೋ ನಕುಲಸ್ತ್ವರ್ಥಸಂಗ್ರಹೀ।।
02069009a ಸಮ್ಯಂತಾ ಸಹದೇವಸ್ತು ಧೌಮ್ಯೋ ಬ್ರಹ್ಮವಿದುತ್ತಮಃ।
02069009c ಧರ್ಮಾರ್ಥಕುಶಲಾ ಚೈವ ದ್ರೌಪದೀ ಧರ್ಮಚಾರಿಣೀ।।

ನೀನು ಧರ್ಮವನ್ನು ತಿಳಿದಿದ್ದೀಯೆ. ಧನಂಜಯನು ಯೋದ್ಧರಲ್ಲಿ ತಿಳಿದವನು. ಅರಿಗಳನ್ನು ಕೊಲ್ಲುವುದರಲ್ಲಿ ಭೀಮಸೇನನಿದ್ದಾನೆ. ನಕುಲನು ಸಂಪತ್ತನ್ನು ಕೂಡಿಸುವವನು. ಸಹದೇವನು ಸದೆಬಡಿಯುವವನು. ಧೌಮ್ಯನು ಬ್ರಹ್ಮವಿದರಲ್ಲಿ ಉತ್ತಮನು. ದ್ರೌಪದಿಯು ಧರ್ಮ-ಅರ್ಥಗಳಲ್ಲಿ ಕುಶಲಳೂ ಧರ್ಮಚಾರಿಣಿಯೂ ಆಗಿದ್ದಾಳೆ.

02069010a ಅನ್ಯೋನ್ಯಸ್ಯ ಪ್ರಿಯಾಃ ಸರ್ವೇ ತಥೈವ ಪ್ರಿಯವಾದಿನಃ।
02069010c ಪರೈರಭೇದ್ಯಾಃ ಸಂತುಷ್ಟಾಃ ಕೋ ವೋ ನ ಸ್ಪೃಹಯೇದಿಹ।।

ನೀವು ಎಲ್ಲರೂ ಅನ್ಯೋನ್ಯರನ್ನು ಪ್ರೀತಿಸುತ್ತೀರಿ ಮತ್ತು ಅನ್ಯೋನ್ಯರಲ್ಲಿ ಪ್ರೀತಿಯಿಂದ ಮಾತನಾಡುತ್ತೀರಿ. ಸಂತುಷ್ಟರಾದ ನಿಮ್ಮನ್ನು ಇತರರು ಬೇರೆ ಮಾಡಲು ಸಾಧ್ಯವಿಲ್ಲ. ನಿಮ್ಮನ್ನು ಯಾರು ತಾನೇ ದ್ವೇಷಿಸುವುದಿಲ್ಲ?

02069011a ಏಷ ವೈ ಸರ್ವಕಲ್ಯಾಣಃ ಸಮಾಧಿಸ್ತವ ಭಾರತ।
02069011c ನೈನಂ ಶತ್ರುರ್ವಿಷಹತೇ ಶಕ್ರೇಣಾಪಿ ಸಮೋಽಚ್ಯುತ।।

ಭಾರತ! ಅಚ್ಯುತ! ಈ ಎಲ್ಲ ಒಳ್ಳೆಯವೂ ನಿನ್ನಲ್ಲಿ ಒಂದಾಗಿವೆ. ಯಾವ ಶತ್ರುವೂ, ಶಕ್ರನ ಸಮನಾಗಿದ್ದರೂ ಅದನ್ನು ಕೊಲ್ಲಲು ಸಾಧ್ಯವಿಲ್ಲ.

02069012a ಹಿಮವತ್ಯನುಶಿಷ್ಟೋಽಸಿ ಮೇರುಸಾವರ್ಣಿನಾ ಪುರಾ।
02069012c ದ್ವೈಪಾಯನೇನ ಕೃಷ್ಣೇನ ನಗರೇ ವಾರಣಾವತೇ।।
02069013a ಭೃಗುತುಂಗೇ ಚ ರಾಮೇಣ ದೃಷದ್ವತ್ಯಾಂ ಚ ಶಂಭುನಾ।
02069013c ಅಶ್ರೌಷೀರಸಿತಸ್ಯಾಪಿ ಮಹರ್ಷೇರಂಜನಂ ಪ್ರತಿ।।
02069014a ದ್ರಷ್ಟಾ ಸದಾ ನಾರದಸ್ಯ ಧೌಮ್ಯಸ್ತೇಽಯಂ ಪುರೋಹಿತಃ।
02069014c ಮಾ ಹಾರ್ಷೀಃ ಸಾಂಪರಾಯೇ ತ್ವಂ ಬುದ್ಧಿಂ ತಾಮೃಷಿಪೂಜಿತಾಂ।।

ಹಿಂದೆ ಹಿಮಾಲಯದಲ್ಲಿರುವಾಗ ಮೇರು ಪರ್ವತದ ಸಾವರ್ಣಿಯಿಂದ, ವಾರಣಾವತ ನಗರಿಯಲ್ಲಿ ದ್ವೈಪಾಯನ ಕೃಷ್ಣನಿಂದ, ಭೃಗುತುಂಗದಲ್ಲಿ ರಾಮನಿಂದ, ದೃಷದ್ವತೀ ತೀರದಲ್ಲಿ ಶಂಭುವಿನಿಂದ ಉಪದೇಶವನ್ನು ಪಡೆದಿದ್ದೀಯೆ. ಅಂಜನದ ಬಳಿ ಮಹರ್ಷಿ ಅಸಿತನನ್ನೂ ಕೇಳಿದ್ದೀಯೆ. ನಿನ್ನ ಈ ಪುರೋಹಿತ ಧೌಮ್ಯನು ಋಷಿಪೂಜಿತ ಬುದ್ಧಿಯನ್ನು ನೀನು ಕಳೆದುಕೊಳ್ಳಬಾರದೆಂದು ಸದಾ ನಾರದನನ್ನು ಕಾಣುತ್ತಿರುತ್ತಾನೆ.

02069015a ಪುರೂರವಸಮೈಲಂ ತ್ವಂ ಬುದ್ಧ್ಯಾ ಜಯಸಿ ಪಾಂಡವ।
02069015c ಶಕ್ತ್ಯಾ ಜಯಸಿ ರಾಜ್ಞೋಽನ್ಯಾನೃಷೀನ್ಧರ್ಮೋಪಸೇವಯಾ।।

ಪಾಂಡವ! ಬುದ್ಧಿಯಲ್ಲಿ ನೀನು ಪುರೂರವ ಐಲನನ್ನೂ ಗೆಲ್ಲುತ್ತೀಯೆ! ಶಕ್ತಿಯಲ್ಲಿ ಅನ್ಯ ರಾಜರನ್ನು ಮತ್ತು ಧರ್ಮದ ಉಪಸೇವೆಯಲ್ಲಿ ಋಷಿಗಳನ್ನೂ ಗೆಲ್ಲುತ್ತೀಯೆ.

02069016a ಐಂದ್ರೇ ಜಯೇ ಧೃತಮನಾ ಯಾಮ್ಯೇ ಕೋಪವಿಧಾರಣೇ।
02069016c ವಿಸರ್ಗೇ ಚೈವ ಕೌಬೇರೇ ವಾರುಣೇ ಚೈವ ಸಂಯಮೇ।।

ಜಯದಲ್ಲಿ ಇಂದ್ರನಂತೆ, ಕೋಪವನ್ನು ತಡೆಹಿಡಿದುಕೊಳ್ಳುವುದರಲ್ಲಿ ಯಮನಂತೆ, ಉದಾರತೆಯಲ್ಲಿ ಕುಬೇರನಂತೆ, ಸಂಯಮದಲ್ಲಿ ವರುಣನಂತೆ ಮನಸ್ಸನ್ನಿಡು.

02069017a ಆತ್ಮಪ್ರದಾನಂ ಸೌಮ್ಯತ್ವಮದ್ಭ್ಯಶ್ಚೈವೋಪಜೀವನಂ।
02069017c ಭೂಮೇಃ ಕ್ಷಮಾ ಚ ತೇಜಶ್ಚ ಸಮಗ್ರಂ ಸೂರ್ಯಮಂಡಲಾತ್।।

ಚಂದ್ರನಿಂದ ಆತ್ಮವನ್ನು, ನೀರಿನಿಂದ ಉಪಜೀವನವನ್ನು, ಭೂಮಿಯಿಂದ ಕ್ಷಮೆಯನ್ನು, ಸಮಗ್ರ ತೇಜಸ್ಸನ್ನೂ ಸೂರ್ಯಮಂಡಲದಿಂದ ಪಡೆದುಕೋ.

02069018a ವಾಯೋರ್ಬಲಂ ವಿದ್ಧಿ ಸ ತ್ವಂ ಭೂತೇಭ್ಯಶ್ಚಾತ್ಮಸಂಭವಂ।
02069018c ಅಗದಂ ವೋಽಸ್ತು ಭದ್ರಂ ವೋ ದ್ರಕ್ಷ್ಯಾಮಿ ಪುನರಾಗತಾನ್।।

ನಿನ್ನ ಬಲವು ವಾಯುವಿನಿಂದ ಮತ್ತು ಆತ್ಮವು ಭೂತಗಳಿಂದ ಹುಟ್ಟಿದೆ ಎಂದು ತಿಳಿ. ಆರೋಗ್ಯವಾಗಿರು ಮತ್ತು ನಿನಗೆ ಮಂಗಳವಾಗಲಿ. ಹಿಂದಿರುಗಿದಾಗ ಪುನಃ ನೋಡುತ್ತೇನೆ.

02069019a ಆಪದ್ಧರ್ಮಾರ್ಥಕೃಚ್ಛ್ರೇಷು ಸರ್ವಕಾರ್ಯೇಷು ವಾ ಪುನಃ।
02069019c ಯಥಾವತ್ಪ್ರತಿಪದ್ಯೇಥಾಃ ಕಾಲೇ ಕಾಲೇ ಯುಧಿಷ್ಠಿರ।।
02069020a ಆಪೃಷ್ಟೋಽಸೀಹ ಕೌಂತೇಯ ಸ್ವಸ್ತಿ ಪ್ರಾಪ್ನುಹಿ ಭಾರತ।
02069020c ಕೃತಾರ್ಥಂ ಸ್ವಸ್ತಿಮಂತಂ ತ್ವಾಂ ದ್ರಕ್ಷ್ಯಾಮಃ ಪುನರಾಗತಂ।।

ಯುಧಿಷ್ಠಿರ! ಆಪತ್ತಿನಲ್ಲಿ ಧರ್ಮವನ್ನು, ಅಪಾಯದಲ್ಲಿ ಅರ್ಥವನ್ನು ಅನುಸರಿಸಿ ಕಾಲ ಕಾಲದಲ್ಲಿ ಸರ್ವ ಕಾರ್ಯದಲ್ಲಿ ಯಥಾವತ್ತಾಗಿ ನಡೆದುಕೋ. ಕೌಂತೇಯ! ಭಾರತ! ಬೀಳ್ಕೊಡುತ್ತಿದ್ದೇನೆ. ಸುಖವನ್ನು ಹೊಂದು. ನೀನು ಕೃತಾರ್ಥನಾಗಿ ಸುಖದಿಂದ ಹಿಂದಿರುಗುವುದನ್ನು ಕಾಯುತ್ತಿರುತ್ತೇನೆ.””

02069021 ವೈಶಂಪಾಯನ ಉವಾಚ।
02069021a ಏವಮುಕ್ತಸ್ತಥೇತ್ಯುಕ್ತ್ವಾ ಪಾಂಡವಃ ಸತ್ಯವಿಕ್ರಮಃ।
02069021c ಭೀಷ್ಮದ್ರೋಣೌ ನಮಸ್ಕೃತ್ಯ ಪ್ರಾತಿಷ್ಠತ ಯುಧಿಷ್ಠಿರಃ।।

ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಹಾಗೆಯೇ ಆಗಲೆಂದು ಹೇಳಿ ಸತ್ಯವಿಕ್ರಮ ಪಾಂಡವ ಯುಧಿಷ್ಠಿರನು ಭೀಷ್ಮ-ದ್ರೋಣರನ್ನು ನಮಸ್ಕರಿಸಿ ಮುಂದುವರೆದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ಯುಧಿಷ್ಠಿರವನಪ್ರಸ್ಥಾನೇ ಏಕೋನಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಯುಧಿಷ್ಠಿರವನಪ್ರಸ್ಥಾನ ಎನ್ನುವ ಅರವತ್ತೊಂಭತ್ತನೆಯ ಅಧ್ಯಾಯವು.