ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಅನುದ್ಯೂತ ಪರ್ವ
ಅಧ್ಯಾಯ 67
ಸಾರ
ಧೃತರಾಷ್ಟ್ರನ ಆಜ್ಞೆಯಂತೆ ಪ್ರತಿಕಾಮಿಯು ಹಿಂದಿರುಗಿ ಹೋಗುತ್ತಿದ್ದ ಯುಧಿಷ್ಠಿರನಿಗೆ ಪುನಃ ದ್ಯೂತದ ಆಹ್ವಾನವನ್ನು ನೀಡುವುದು (1-2). ಯುಧಿಷ್ಠಿರನು ಚಿಂತಿಸಿ ದ್ಯೂತಕ್ಕೆ ಸಭೆಗೆ ಮರಳುವುದು (3-7). ಶಕುನಿಯು ದ್ಯೂತದ ನಿಬಂಧನೆಗಳನ್ನು ವಿವರಿಸುವುದು (8-13). ಸಭಾಸದರ ಉದ್ಗಾರ (14). ಯುಧಿಷ್ಠಿರನು ನಿಬಂಧನೆಗಳಿಗೆ ಒಪ್ಪಿಕೊಳ್ಳುವುದು (15-17). ಶಕುನಿಯು ಪಣವನ್ನಿಟ್ಟು ದಾಳಗಳನ್ನು ಹಿಡಿದು ಗೆದ್ದೆ ಎನ್ನುವುದು (18-21).
02067001 ವೈಶಂಪಾಯನ ಉವಾಚ।
02067001a ತತೋ ವ್ಯಧ್ವಗತಂ ಪಾರ್ಥಂ ಪ್ರಾತಿಕಾಮೀ ಯುಧಿಷ್ಠಿರಂ।
02067001c ಉವಾಚ ವಚನಾದ್ರಾಜ್ಞೋ ಧೃತರಾಷ್ಟ್ರಸ್ಯ ಧೀಮತಃ।।
ವೈಶಂಪಾಯನನು ಹೇಳಿದನು: “ಧೀಮಂತ ರಾಜ ಧೃತರಾಷ್ಟ್ರನ ವಚನದಂತೆ ಪ್ರತಿಕಾಮಿಯೋರ್ವನು ಬಹಳಷ್ಟು ದೂರ ಪ್ರಯಾಣಿಸಿದ್ದ ಯುಧಿಷ್ಠಿರನಿಗೆ ಹೇಳಿದನು:
02067002a ಉಪಸ್ತೀರ್ಣಾ ಸಭಾ ರಾಜನ್ನಕ್ಷಾನುಪ್ತ್ವಾ ಯುಧಿಷ್ಠಿರ।
02067002c ಏಹಿ ಪಾಂಡವ ದೀವ್ಯೇತಿ ಪಿತಾ ತ್ವಾಮಾಹ ಭಾರತ।।
“ರಾಜನ್! ಯುಧಿಷ್ಠಿರ! ಸಭೆಯು ಹಾಸಿ ತಯಾರಾಗಿದೆ. ದಾಳಗಳನ್ನು ಎಸೆಯಲಾಗಿದೆ. ಭಾರತ! ಪಾಂಡವ! ಬಂದು ಆಡು! ಎಂದು ನಿನ್ನ ತಂದೆಯು ನಿನಗೆ ಹೇಳಿದ್ದಾನೆ.”
02067003 ಯುಧಿಷ್ಠಿರ ಉವಾಚ।
02067003a ಧಾತುರ್ನಿಯೋಗಾದ್ಭೂತಾನಿ ಪ್ರಾಪ್ನುವಂತಿ ಶುಭಾಶುಭಂ।
02067003c ನ ನಿವೃತ್ತಿಸ್ತಯೋರಸ್ತಿ ದೇವಿತವ್ಯಂ ಪುನರ್ಯದಿ।।
ಯುಧಿಷ್ಠಿರನು ಹೇಳಿದನು: “ಧಾತುವಿನ ನಿಯೋಗದಿಂದಲೇ ಜೀವಿಗಳು ಶುಭಾಶುಭಗಳನ್ನು ಹೊಂದುತ್ತವೆ. ನಾವು ಪುನಃ ದ್ಯೂತವನ್ನಾಡಬೇಕೆಂದಿದ್ದರೆ ಅದನ್ನು ತಡೆಯಲು ಸಾಧ್ಯವಿಲ್ಲ!
02067004a ಅಕ್ಷದ್ಯೂತೇ ಸಮಾಹ್ವಾನಂ ನಿಯೋಗಾತ್ ಸ್ಥವಿರಸ್ಯ ಚ।
02067004c ಜಾನನ್ನಪಿ ಕ್ಷಯಕರಂ ನಾತಿಕ್ರಮಿತುಮುತ್ಸಹೇ।।
ವಯೋವೃದ್ಧನ ನಿಯೋಗದಂತೆ ಅಕ್ಷದ್ಯೂತದ ಆಹ್ವಾನವನ್ನು ಸ್ವೀಕರಿಸುವುದು ಕ್ಷಯಕರ ಎಂದು ತಿಳಿದಿದ್ದರೂ ಅವನ ಮಾತುಗಳನ್ನು ಅತಿಕ್ರಮಿಸಲಾರೆ.””
02067005 ವೈಶಂಪಾಯನ ಉವಾಚ।
02067005a ಇತಿ ಬ್ರುವನ್ನಿವವೃತೇ ಭ್ರಾತೃಭಿಃ ಸಹ ಪಾಂಡವಃ।
02067005c ಜಾನಂಶ್ಚ ಶಕುನೇರ್ಮಾಯಾಂ ಪಾರ್ಥೋ ದ್ಯೂತಮಿಯಾತ್ಪುನಃ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಪಾರ್ಥ ಪಾಂಡವನು ಶಕುನಿಯ ಮಾಯೆಯನ್ನು ತಿಳಿದಿದ್ದರೂ ದ್ಯೂತಕ್ಕೆ ತನ್ನ ತಮ್ಮಂದಿರೊಡನೆ ಹಿಂದಿರುಗಿದನು.
02067006a ವಿವಿಶುಸ್ತೇ ಸಭಾಂ ತಾಂ ತು ಪುನರೇವ ಮಹಾರಥಾಃ।
02067006c ವ್ಯಥಯಂತಿ ಸ್ಮ ಚೇತಾಂಸಿ ಸುಹೃದಾಂ ಭರತರ್ಷಭಾಃ।।
ಪುನಃ ಆ ಮಹಾರಥಿ ಭರತರ್ಷಭರು ತಮ್ಮ ಸುಹೃದಯರ ಮನಸ್ಸನ್ನು ಚಿಂತೆಗೊಳಪಡಿಸುತ್ತಾ ಆ ಸಭೆಯನ್ನು ಪ್ರವೇಶಿಸಿದರು.
02067007a ಯಥೋಪಜೋಷಮಾಸೀನಾಃ ಪುನರ್ದ್ಯೂತಪ್ರವೃತ್ತಯೇ।
02067007c ಸರ್ವಲೋಕವಿನಾಶಾಯ ದೈವೇನೋಪನಿಪೀಡಿತಾಃ।।
ಸರ್ವಲೋಕವಿನಾಶದ ದೈವ ನಿಶ್ಚಯದಿಂದ ಪೀಡಿತರಾದ ಅವರು ಕುಳಿತುಕೊಂಡು ಪುನಃ ದ್ಯೂತವನ್ನು ಪಾರಂಭಿಸಿದರು.
02067008 ಶಕುನಿರುವಾಚ।
02067008a ಅಮುಂಚತ್ ಸ್ಥವಿರೋ ಯದ್ವೋ ಧನಂ ಪೂಜಿತಮೇವ ತತ್।
02067008c ಮಹಾಧನಂ ಗ್ಲಹಂ ತ್ವೇಕಂ ಶೃಣು ಮೇ ಭರತರ್ಷಭ।।
ಶಕುನಿಯು ಹೇಳಿದನು: “ಭರತರ್ಷಭ! ಈ ವಯೋವೃದ್ಧನು ನಿನ್ನ ಧನವನ್ನು ನಿನಗೆ ಬಿಡುಗಡೆ ಮಾಡಿದನು. ಅದಕ್ಕೆ ಅವನನ್ನು ಗೌರವಿಸುತ್ತೇನೆ. ಆದರೆ ಈ ಮಹಾಧನಕ್ಕಾಗಿ ಒಂದೇ ಒಂದು ಆಟವಿದೆ. ಕೇಳು.
02067009a ವಯಂ ದ್ವಾದಶ ವರ್ಷಾಣಿ ಯುಷ್ಮಾಭಿರ್ದ್ಯೂತನಿರ್ಜಿತಾಃ।
02067009c ಪ್ರವಿಶೇಮ ಮಹಾರಣ್ಯಂ ರೌರವಾಜಿನವಾಸಸಃ।।
02067010a ತ್ರಯೋದಶಂ ಚ ಸಜನೇ ಅಜ್ಞಾತಾಃ ಪರಿವತ್ಸರಂ।
02067010c ಜ್ಞಾತಾಶ್ಚ ಪುನರನ್ಯಾನಿ ವನೇ ವರ್ಷಾಣಿ ದ್ವಾದಶ।।
ನಿಮ್ಮಿಂದ ನಾವು ದ್ಯೂತದಲ್ಲಿ ಸೋತರೆ ರುರು ಮತ್ತು ಜಿಂಕೆಯ ಚರ್ಮಗಳ ವಸ್ತ್ರಧಾರಣೆ ಮಾಡಿ ಹನ್ನೆರಡು ವರ್ಷ ಮಹಾರಣ್ಯವನ್ನು ಪ್ರವೇಶಿಸುತ್ತೇವೆ. ಮತ್ತು ಹದಿಮೂರನೆಯ ವರ್ಷ ಜನರ ಮಧ್ಯದಲ್ಲಿ ಅಜ್ಞಾತವಾಸ ಮಾಡುತ್ತೇವೆ. ಆ ಒಂದು ವರ್ಷದಲ್ಲಿ ಗುರುತಿಸಲ್ಪಟ್ಟರೆ ಪುನಃ ಹನ್ನೆರಡು ವರ್ಷಗಳ ವನವಾಸವನ್ನು ಮುಗಿಸುತ್ತೇವೆ.
02067011a ಅಸ್ಮಾಭಿರ್ವಾ ಜಿತಾ ಯೂಯಂ ವನೇ ವರ್ಷಾಣಿ ದ್ವಾದಶ।
02067011c ವಸಧ್ವಂ ಕೃಷ್ಣಯಾ ಸಾರ್ಧಮಜಿನೈಃ ಪ್ರತಿವಾಸಿತಾಃ।।
ಅಥವಾ ನಾವು ನಿಮ್ಮನ್ನು ಸೋಲಿಸಿದರೆ ನೀವು ಕೃಷ್ಣೆಯೊಡನೆ ಹನ್ನೆರಡು ವರ್ಷಗಳು ಜಿನವನ್ನು ಧರಿಸಿ ವನದಲ್ಲಿ ವಾಸಿಸಬೇಕು.
02067012a ತ್ರಯೋದಶೇ ಚ ನಿರ್ವೃತ್ತೇ ಪುನರೇವ ಯಥೋಚಿತಂ।
02067012c ಸ್ವರಾಜ್ಯಂ ಪ್ರತಿಪತ್ತವ್ಯಮಿತರೈರಥ ವೇತರೈಃ।।
ಹದಿಮೂರನೆಯ ವರ್ಷವು ಮುಗಿದ ನಂತರ ಪುನಃ ಯಥೋಚಿತವಾಗಿ ತಮ್ಮ ರಾಜ್ಯವನ್ನು ಒಬ್ಬರು ಇನ್ನೊಬ್ಬರಿಂದ ಹಿಂದೆ ತೆಗೆದುಕೊಳ್ಳಬೇಕು.
02067013a ಅನೇನ ವ್ಯವಸಾಯೇನ ಸಹಾಸ್ಮಾಭಿರ್ಯುಧಿಷ್ಠಿರ।
02067013c ಅಕ್ಷಾನುಪ್ತ್ವಾ ಪುನರ್ದ್ಯೂತಮೇಹಿ ದೀವ್ಯಸ್ವ ಭಾರತ।।
ಭಾರತ! ಯುಧಿಷ್ಠಿರ! ಈ ಒಪ್ಪಂದದೊಂದಿಗೆ ಪುನಃ ನಮ್ಮೊಂದಿಗೆ ದಾಳವನ್ನೆಸೆದು ಪಣವನ್ನಿಟ್ಟು ದ್ಯೂತವನ್ನಾಡು.”
02067014 ಸಭಾಸದ ಊಚುಃ।
02067014a ಅಹೋ ಧಿಗ್ಬಾಂಧವಾ ನೈನಂ ಬೋಧಯಂತಿ ಮಹದ್ಭಯಂ।
02067014c ಬುದ್ಧ್ಯಾ ಬೋಧ್ಯಂ ನ ಬುಧ್ಯಂತೇ ಸ್ವಯಂ ಚ ಭರತರ್ಷಭಾಃ।।
ಸಭಾಸದರು ಹೇಳಿದರು: “ಅಹೋ! ಧಿಕ್ಕಾರ! ಈ ಬಾಂಧವನು ಮಹಾ ಭಯವನ್ನು ತಿಳಿದಿಲ್ಲ! ಯಾರೂ ಕೂಡ ಇದನ್ನು ತಿಳಿಯಬಹುದು. ಆದರೆ ಸ್ವಯಂ ಭರತರ್ಷಭರೇ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ!””
02067015 ವೈಶಂಪಾಯನ ಉವಾಚ।
02067015a ಜನಪ್ರವಾದಾನ್ಸುಬಹೂನಿತಿ ಶೃಣ್ವನ್ನರಾಧಿಪಃ।
02067015c ಹ್ರಿಯಾ ಚ ಧರ್ಮಸಂಗಾಚ್ಚ ಪಾರ್ಥೋ ದ್ಯೂತಮಿಯಾತ್ಪುನಃ।।
ವೈಶಂಪಾಯನನು ಹೇಳಿದನು: “ನರಾಧಿಪ ಪಾರ್ಥನು ಜನರ ಕೂಗನ್ನು ಕೇಳಿಸಿಕೊಂಡರೂ ತನಗಾದ ನಾಚಿಕೆಯಿಂದ ಮತ್ತು ಧರ್ಮದೊಂದಿಗಿರಬೇಕೆಂಬ ಇಚ್ಛೆಯಿಂದ ಪುನಃ ದ್ಯೂತಕ್ಕೆ ಒಪ್ಪಿಕೊಂಡನು.
02067016a ಜಾನನ್ನಪಿ ಮಹಾಬುದ್ಧಿಃ ಪುನರ್ದ್ಯೂತಮವರ್ತಯತ್।
02067016c ಅಪ್ಯಯಂ ನ ವಿನಾಶಃ ಸ್ಯಾತ್ಕುರೂಣಾಮಿತಿ ಚಿಂತಯನ್।।
ಆ ಮಹಾಬುದ್ಧಿಯು ತಿಳಿದಿದ್ದರೂ “ಇದು ಕುರುಗಳ ವಿನಾಶವನ್ನು ತರುವುದಿಲ್ಲವೇ?” ಎಂದು ಚಿಂತಿಸಿ ಪುನಃ ದ್ಯೂತಕ್ಕೆ ಮರಳಿದನು.
02067017 ಯುಧಿಷ್ಠಿರ ಉವಾಚ।
02067017a ಕಥಂ ವೈ ಮದ್ವಿಧೋ ರಾಜಾ ಸ್ವಧರ್ಮಮನುಪಾಲಯನ್।
02067017c ಆಹೂತೋ ವಿನಿವರ್ತೇತ ದೀವ್ಯಾಮಿ ಶಕುನೇ ತ್ವಯಾ।।
ಯುಧಿಷ್ಠಿರನು ಹೇಳಿದನು: “ಸ್ವಧರ್ಮವನ್ನು ಅನುಸರಿಸುವ ನನ್ನಂಥಹ ರಾಜನು ಆಹ್ವಾನಿಸಲ್ಪಟ್ಟಾಗ ಹಿಂದಿರುಗಿ ಬರದೇ ಇರಲು ಹೇಗೆ ಸಾಧ್ಯ? ಶಕುನಿ! ನಿನ್ನೊಂದಿಗೆ ಆಡುತ್ತೇನೆ!”
02067018 ಶಕುನಿರುವಾಚ।
02067018a ಗವಾಶ್ವಂ ಬಹುಧೇನೂಕಮಪರ್ಯಂತಮಜಾವಿಕಂ।
02067018c ಗಜಾಃ ಕೋಶೋ ಹಿರಣ್ಯಂ ಚ ದಾಸೀದಾಸಂ ಚ ಸರ್ವಶಃ।।
ಶಕುನಿಯು ಹೇಳಿದನು: “ಗೋವುಗಳು, ಕುದುರೆಗಳು, ಹಾಲುಕೊಡುವ ಹಸುಗಳು, ಲೆಕ್ಕವಿಲ್ಲದಷ್ಟು ಕುರಿಗಳು ಮತ್ತು ಆಡುಗಳು, ಆನೆಗಳು, ಕೋಶ, ಹಿರಣ್ಯ ಮತ್ತು ದಾಸಿಯರು ಎಲ್ಲವೂ ಪಣವಾಗಿರಲಿ.
02067019a ಏಷ ನೋ ಗ್ಲಹ ಏವೈಕೋ ವನವಾಸಾಯ ಪಾಂಡವಾಃ।
02067019c ಯೂಯಂ ವಯಂ ವಾ ವಿಜಿತಾ ವಸೇಮ ವನಮಾಶ್ರಿತಾಃ।।
02067020a ಅನೇನ ವ್ಯವಸಾಯೇನ ದೀವ್ಯಾಮ ಭರತರ್ಷಭ।
02067020c ಸಮುತ್ಕ್ಷೇಪೇಣ ಚೈಕೇನ ವನವಾಸಾಯ ಭಾರತ।।
ಪಾಂಡವರೇ! ಇದು ನನ್ನ ಒಂದೇ ಒಂದು ಎಸೆತ! ಇದರಲ್ಲಿ ಸೋತ ನೀವು ಅಥವಾ ನಾವು ವನವನ್ನು ಸೇರಿ ವಾಸಿಸೋಣ. ಭರತರ್ಷಭ! ಈ ಒಪ್ಪಂದದೊಂದಿಗೆ ಆಡೋಣ. ಭಾರತ! ಒಂದೇ ಒಂದು ದಾಳದಿಂದ ವನವಾಸ!””
02067021 ವೈಶಂಪಾಯನ ಉವಾಚ।
02067021a ಪ್ರತಿಜಗ್ರಾಹ ತಂ ಪಾರ್ಥೋ ಗ್ಲಹಂ ಜಗ್ರಾಹ ಸೌಬಲಃ।
02067021c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಪಾರ್ಥನು ಅದಕ್ಕೆ ಒಪ್ಪಿಕೊಳ್ಳಲು ಸೌಬಲ ಶಕುನಿಯು ದಾಳಗಳನ್ನು ಹಿಡಿದು ಯುಧಿಷ್ಠಿರನಿಗೆ “ಗೆದ್ದೆ!” ಎಂದು ಕೂಗಿ ಹೇಳಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ಪುನರ್ಯುಧಿಷ್ಠಿರಪರಾಜಯೇ ಸಪ್ತಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಪುನಃ ಯುಧಿಷ್ಠಿರನ ಪರಾಜಯ ಎನ್ನುವ ಅರವತ್ತೇಳನೆಯ ಅಧ್ಯಾಯವು.