ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಅನುದ್ಯೂತ ಪರ್ವ
ಅಧ್ಯಾಯ 66
ಸಾರ
ಧೃತರಾಷ್ಟ್ರನು ಪಾಂಡವರಿಗೆ ಗೆದ್ದ ರಾಜ್ಯವನ್ನು ಹಿಂದಿರುಗಿಸಿದುದನ್ನು ದುಃಶಾಸನನು ಅಣ್ಣನಿಗೆ ಹೇಳುವುದು (1-4). ದುರ್ಯೋಧನನು ಮಿತ್ರರೊಂದಿಗೆ ಸಮಾಲೋಚಿಸಿ, ಧೃತರಾಷ್ಟ್ರನಿಗೆ ಪಾಂಡವರನ್ನು ಪುನಃ ದ್ಯೂತಕ್ಕೆ ಕರೆಯಿಸಲು ಹೇಳುವುದು (5-23). ಧೃತರಾಷ್ಟ್ರನು ಮರುದ್ಯೂತಕ್ಕೆ ಅಪ್ಪಣೆಯನ್ನು ನೀಡುವುದು (24). ಸಭಾಸದರು ಮರುದ್ಯೂತವು ಬೇಡವೆನ್ನುವುದು (25-27). ಗಾಂಧಾರಿಯು ಧೃತರಾಷ್ಟ್ರನಿಗೆ ಮರುದ್ಯೂತದ ವಿರುದ್ಧ ಸಲಹೆ ನೀಡುವುದು (28-35). ಎಲ್ಲರ ಸಲಹೆಗಳನ್ನೂ ತಿರಸ್ಕರಿಸಿ ರಾಜನು ಮರುದ್ಯೂತಕ್ಕೆ ಆಜ್ಞೆಯನ್ನು ಮಾಡುವುದು (36-37).
02066001 ಜನಮೇಜಯ ಉವಾಚ।
02066001a ಅನುಜ್ಞಾತಾಂಸ್ತಾನ್ವಿದಿತ್ವಾ ಸರತ್ನಧನಸಂಚಯಾನ್।
02066001c ಪಾಂಡವಾನ್ಧಾರ್ತರಾಷ್ಟ್ರಾಣಾಂ ಕಥಮಾಸೀನ್ಮನಸ್ತದಾ।।
ಜನಮೇಜಯನು ಹೇಳಿದನು: “ಪಾಂಡವರಿಗೆ ರತ್ನಧನಸಂಚಯದ ಜೊತೆಗೆ ಹೋಗಲು ಅಪ್ಪಣೆ ಸಿಕ್ಕಿತು ಎಂದು ತಿಳಿದ ನಂತರ ಧಾರ್ತರಾಷ್ಟ್ರರಿಗೆ ಹೇಗನ್ನಿಸಿತು?”
02066002 ವೈಶಂಪಾಯನ ಉವಾಚ।
02066002a ಅನುಜ್ಞಾತಾಂಸ್ತಾನ್ವಿದಿತ್ವಾ ಧೃತರಾಷ್ಟ್ರೇಣ ಧೀಮತಾ।
02066002c ರಾಜನ್ದುಃಶಾಸನಃ ಕ್ಷಿಪ್ರಂ ಜಗಾಮ ಭ್ರಾತರಂ ಪ್ರತಿ।।
ವೈಶಂಪಾಯನನು ಹೇಳಿದನು: “ರಾಜನ್! ಧೀಮತ ಧೃತರಾಷ್ಟ್ರನು ಅವರಿಗೆ ಹೋಗಲು ಅನುಮತಿಯನ್ನು ಕೊಟ್ಟ ಎಂದು ತಿಳಿದಾಕ್ಷಣವೇ ದುಃಶಾಸನನು ಅಣ್ಣನ ಬಳಿ ಹೋದನು.
02066003a ದುರ್ಯೋಧನಂ ಸಮಾಸಾದ್ಯ ಸಾಮಾತ್ಯಂ ಭರತರ್ಷಭ।
02066003c ದುಃಖಾರ್ತೋ ಭರತಶ್ರೇಷ್ಠ ಇದಂ ವಚನಮಬ್ರವೀತ್।।
ಭರತರ್ಷಭ! ಭರತಶ್ರೇಷ್ಠ! ಅಲ್ಲಿ ಅಮಾತ್ಯರ ಜೊತೆಗಿದ್ದ ದುರ್ಯೋಧನನ್ನು ಭೆಟ್ಟಿಯಾಗಿ ದುಃಖಾರ್ತನಾಗಿ ಹೇಳಿದನು:
02066004a ದುಃಖೇನೈತತ್ಸಮಾನೀತಂ ಸ್ಥವಿರೋ ನಾಶಯತ್ಯಸೌ।
02066004c ಶತ್ರುಸಾದ್ಗಮಯದ್ದ್ರವ್ಯಂ ತದ್ಬುಧ್ಯಧ್ವಂ ಮಹಾರಥಾಃ।।
“ಕಷ್ಟಪಟ್ಟು ಗಳಿಸಿದ ಎಲ್ಲವನ್ನೂ ಆ ಮುದುಕನು ನಾಶಮಾಡಿಬಿಟ್ಟನಲ್ಲ! ಎಲ್ಲ ಸಂಪತ್ತನ್ನೂ ಶತ್ರುಗಳಿಗೆ ಹೋಗುವ ಹಾಗೆ ಮಾಡಿದ್ದಾನೆ. ಮಹಾರಥಿಗಳೇ! ಇದನ್ನು ಯೋಚಿಸಿ.”
02066005a ಅಥ ದುರ್ಯೋಧನಃ ಕರ್ಣಃ ಶಕುನಿಶ್ಚಾಪಿ ಸೌಬಲಃ।
02066005c ಮಿಥಃ ಸಂಗಮ್ಯ ಸಹಿತಾಃ ಪಾಂಡವಾನ್ಪ್ರತಿ ಮಾನಿನಃ।।
02066006a ವೈಚಿತ್ರವೀರ್ಯಂ ರಾಜಾನಂ ಧೃತರಾಷ್ಟ್ರಂ ಮನೀಷಿಣಂ।
02066006c ಅಭಿಗಮ್ಯ ತ್ವರಾಯುಕ್ತಾಃ ಶ್ಲಕ್ಷ್ಣಂ ವಚನಮಬ್ರುವನ್।।
ಆಗ ಮಾನಿನ ದುರ್ಯೋಧನನು ಕರ್ಣ ಮತ್ತು ಸೌಬಲ ಶಕುನಿಯರೊಡಗೂಡಿ ಒಟ್ಟಿಗೇ ಪಾಂಡವರ ಪ್ರತಿ ಸಂಚು ಹೂಡಿದನು. ಅವರು ಅವಸರ ಮಾಡಿ ವೈಚಿತ್ರವೀರ್ಯ ಮನೀಷಿಣಿ ರಾಜ ಧೃತರಾಷ್ಟ್ರನಲ್ಲಿಗೆ ಹೋಗಿ ಮೃದು ಮಾತುಗಳಿಂದ ಹೇಳಿದರು:
02066007 ದುರ್ಯೋಧನ ಉವಾಚ।
02066007a ನ ತ್ವಯೇದಂ ಶ್ರುತಂ ರಾಜನ್ಯಜ್ಜಗಾದ ಬೃಹಸ್ಪತಿಃ।
02066007c ಶಕ್ರಸ್ಯ ನೀತಿಂ ಪ್ರವದನ್ವಿದ್ವಾನ್ದೇವಪುರೋಹಿತಃ।।
ದುರ್ಯೋಧನನು ಹೇಳಿದನು: “ರಾಜನ್! ದೇವಪುರೋಹಿತ ವಿದ್ವಾನ್ ಬೃಹಸ್ಪತಿಯು ಶಕ್ರ ನೀತಿಯನ್ನು ಪ್ರತಿಪಾದಿಸುತ್ತಾ ಏನು ಹೇಳಿದನೆಂದು ನೀನು ಕೇಳಿಲ್ಲವೇ?
02066008a ಸರ್ವೋಪಾಯೈರ್ನಿಹಂತವ್ಯಾಃ ಶತ್ರವಃ ಶತ್ರುಕರ್ಷಣ।
02066008c ಪುರಾ ಯುದ್ಧಾದ್ಬಲಾದ್ವಾಪಿ ಪ್ರಕುರ್ವಂತಿ ತವಾಹಿತಂ।।
ಶತ್ರುಕರ್ಷಣ! ಶತ್ರುಗಳು ಯುದ್ಧ ಅಥವಾ ಬಲವನ್ನುಪಯೋಗಿಸಿ ನಿನಗೆ ಹಾನಿಯನ್ನುಂಟುಮಾಡುವ ಮೊದಲೇ ಎಲ್ಲ ಉಪಾಯಗಳನ್ನೂ ಬಳಸಿ ಅವರನ್ನು ಬಗ್ಗಿಸಬೇಕು.
02066009a ತೇ ವಯಂ ಪಾಂಡವಧನೈಃ ಸರ್ವಾನ್ಸಂಪೂಜ್ಯ ಪಾರ್ಥಿವಾನ್।
02066009c ಯದಿ ತಾನ್ಯೋಧಯಿಷ್ಯಾಮಃ ಕಿಂ ವಾ ನಃ ಪರಿಹಾಸ್ಯತಿ।।
ಪಾಂಡವರ ಧನದಿಂದ ನಾವು ಸರ್ವ ಪಾರ್ಥಿವರನ್ನೂ ಮೆಚ್ಚಿಸಿ ನಂತರ ನಾವು ಅವರ ಮೇಲೆ ಆಕ್ರಮಣ ಮಾಡಿದರೆ ನಾವು ಸೋಲುವುದೇ ಇಲ್ಲ.
02066010a ಅಹೀನಾಶೀವಿಷಾನ್ಕ್ರುದ್ಧಾನ್ದಂಶಾಯ ಸಮುಪಸ್ಥಿತಾನ್।
02066010c ಕೃತ್ವಾ ಕಂಠೇ ಚ ಪೃಷ್ಠೇ ಚ ಕಃ ಸಮುತ್ಸ್ರಷ್ಟುಮರ್ಹತಿ।।
ಆದರೆ ಸಿಟ್ಟಿಗೆದ್ದು ಕಚ್ಚಲು ಸಿದ್ಧವಾದ ವಿಷಭರಿತ ಸರ್ಪವನ್ನು ತನ್ನ ಬೆನ್ನಮೇಲೆ ಹಾಕಿಕೊಂಡು ಕುತ್ತಿಗೆಗೆ ಸುತ್ತಿಕೊಂಡರೆ ಅದರಿಂದ ಬಿಡುಗಡೆ ಹೊಂದುವುದಾದರೂ ಹೇಗೆ?
02066011a ಆತ್ತಶಸ್ತ್ರಾ ರಥಗತಾಃ ಕುಪಿತಾಸ್ತಾತ ಪಾಂಡವಾಃ।
02066011c ನಿಃಶೇಷಂ ನಃ ಕರಿಷ್ಯಂತಿ ಕ್ರುದ್ಧಾ ಹ್ಯಾಶೀವಿಷಾ ಯಥಾ।।
ತಾತ! ಕುಪಿತ ಪಾಂಡವರು ಶಸ್ತ್ರಗಳನ್ನು ಪಡೆದು ರಥವನ್ನೇರಿದ್ದಾರೆ. ಕೃದ್ಧ ವಿಷಸರ್ಪದಂತೆ ಅವರು ನಮ್ಮನ್ನು ನಿಶ್ಯೇಷ ನಾಶಪಡಿಸುತ್ತಾರೆ.
02066012a ಸನ್ನದ್ಧೋ ಹ್ಯರ್ಜುನೋ ಯಾತಿ ವಿವೃತ್ಯ ಪರಮೇಷುಧೀ।
02066012c ಗಾಂಡೀವಂ ಮುಹುರಾದತ್ತೇ ನಿಃಯ್ವಸಂಶ್ಚ ನಿರೀಕ್ಷತೇ।।
ಅರ್ಜುನನು ತನ್ನ ಎರಡು ಬತ್ತಳಿಕೆಗಳನ್ನು ತೆರೆದು ಮತ್ತೆ ಮತ್ತೆ ಗಾಂಡೀವವನ್ನೆತ್ತಿಕೊಂಡು ನಿಟ್ಟಿಸುರು ಬಿಡುತ್ತಾ ಸುತ್ತಲೂ ನೋಡುತ್ತಿದ್ದಾನೆ.
02066013a ಗದಾಂ ಗುರ್ವೀಂ ಸಮುದ್ಯಮ್ಯ ತ್ವರಿತಶ್ಚ ವೃಕೋದರಃ।
02066013c ಸ್ವರಥಂ ಯೋಜಯಿತ್ವಾಶು ನಿರ್ಯಾತ ಇತಿ ನಃ ಶ್ರುತಂ।।
ವೃಕೋದರನು ಭಾರೀ ಗದೆಯನ್ನು ವೇಗವಾಗಿ ಮೇಲೆತ್ತಿ ಕಟ್ಟಿದ ಸ್ವರಥದಲ್ಲಿ ಹೊರಡುತ್ತಿದ್ದಾನೆ ಎಂದು ಕೇಳಿದೆವು.
02066014a ನಕುಲಃ ಖಡ್ಗಮಾದಾಯ ಚರ್ಮ ಚಾಪ್ಯಷ್ಟಚಂದ್ರಕಂ।
02066014c ಸಹದೇವಶ್ಚ ರಾಜಾ ಚ ಚಕ್ರುರಾಕಾರಮಿಂಗಿತೈಃ।।
ನಕುಲನು ಅಷ್ಟಚಂದ್ರಕ ಗುರಾಣಿ ಮತ್ತು ಖಡ್ಗವನ್ನು ಹಿಡಿದಿದ್ದಾನೆ. ರಾಜ ಮತ್ತು ಸಹದೇವರು ತಮ್ಮ ಇಂಗಿತಗಳನ್ನು ಬಹಿರಂಗಪಡಿಸುತ್ತಿದ್ದಾರೆ.
02066015a ತೇ ತ್ವಾಸ್ಥಾಯ ರಥಾನ್ಸರ್ವೇ ಬಹುಶಸ್ತ್ರಪರಿಚ್ಛದಾನ್।
02066015c ಅಭಿಘ್ನಂತೋ ರಥವ್ರಾತಾನ್ಸೇನಾಯೋಗಾಯ ನಿರ್ಯಯುಃ।।
ಬಹಳಷ್ಟು ಶಸ್ತ್ರಸಮೇತರಾಗಿ ಅವರೆಲ್ಲರೂ ರಥಗಳನ್ನೇರಿ ರಥಗಳಿಗೆ ಕಟ್ಟಿದ ಕುದುರೆಗಳನ್ನು ಹೊಡೆಯುತ್ತಾ ಸೇನೆಗಳನ್ನು ಒಟ್ಟುಗೂಡಿಸಲು ಹೊರಟಿದ್ದಾರೆ.
02066016a ನ ಕ್ಷಂಸ್ಯಂತೇ ತಥಾಸ್ಮಾಭಿರ್ಜಾತು ವಿಪ್ರಕೃತಾ ಹಿ ತೇ।
02066016c ದ್ರೌಪದ್ಯಾಶ್ಚ ಪರಿಕ್ಲೇಶಂ ಕಸ್ತೇಷಾಂ ಕ್ಷಂತುಮರ್ಹತಿ।।
ನಾವು ಅವರನ್ನು ಅವಮಾನಿಸಿದ್ದೇವೆ. ಅವರು ನಮ್ಮನ್ನು ಎಂದೂ ಕ್ಷಮಿಸುವುದಿಲ್ಲ. ಅವರಲ್ಲಿ ಯಾರುತಾನೆ ದ್ರೌಪದಿಯ ಅಪಮಾನವನ್ನು ಕ್ಷಮಿಸಿಯಾರು?
02066017a ಪುನರ್ದೀವ್ಯಾಮ ಭದ್ರಂ ತೇ ವನವಾಸಾಯ ಪಾಂಡವೈಃ।
02066017c ಏವಮೇತಾನ್ವಶೇ ಕರ್ತುಂ ಶಕ್ಷ್ಯಾಮೋ ಭರತರ್ಷಭ।।
ಭರತರ್ಷಭ! ನಿನಗೆ ಮಂಗಳವಾಗಲಿ! ಪಾಂಡವರ ವನವಾಸಕ್ಕಾಗಿ ಇನ್ನೊಮ್ಮೆ ಜೂಜಾಡಬೇಕು. ಹೀಗೆ ಮಾತ್ರ ನಾವು ಅವರನ್ನು ವಶಪಡಿಸಿಕೊಳ್ಳಲು ಸಾಧ್ಯ.
02066018a ತೇ ವಾ ದ್ವಾದಶ ವರ್ಷಾಣಿ ವಯಂ ವಾ ದ್ಯೂತನಿರ್ಜಿತಾಃ।
02066018c ಪ್ರವಿಶೇಮ ಮಹಾರಣ್ಯಮಜಿನೈಃ ಪ್ರತಿವಾಸಿತಾಃ।।
ಅವರಾಗಲೀ ನಾವಾಗಲೀ ಯಾರು ದ್ಯೂತದಲ್ಲಿ ಸೋಲುತ್ತಾರೋ ಅವರು ಹನ್ನೆರಡು ವರ್ಷಗಳು ಮಹಾರಣ್ಯವನ್ನು ಪ್ರವೇಶಿಸಿ ಜಿನಧಾರಿಗಳಾಗಿ ವಾಸಿಸಬೇಕು.
02066019a ತ್ರಯೋದಶಂ ಚ ಸಜನೇ ಅಜ್ಞಾತಾಃ ಪರಿವತ್ಸರಂ।
02066019c ಜ್ಞಾತಾಶ್ಚ ಪುನರನ್ಯಾನಿ ವನೇ ವರ್ಷಾಣಿ ದ್ವಾದಶ।।
ಹದಿಮೂರನೆಯ ವರ್ಷ ಜನಮದ್ಯದಲ್ಲಿ ಅಜ್ಞಾತರಾಗಿ ಇರಬೇಕು. ಒಂದುವೇಳೆ ಕಂಡುಹಿಡಿಯಲ್ಪಟ್ಟರೆ, ವನದಲ್ಲಿ ಪುನಃ ಹನ್ನೆರಡು ವರ್ಷಗಳನ್ನು ಕಳೆಯಬೇಕು.
02066020a ನಿವಸೇಮ ವಯಂ ತೇ ವಾ ತಥಾ ದ್ಯೂತಂ ಪ್ರವರ್ತತಾಂ।
02066020c ಅಕ್ಷಾನುಪ್ತ್ವಾ ಪುನರ್ದ್ಯೂತಮಿದಂ ದೀವ್ಯಂತು ಪಾಂಡವಾಃ।।
ನಾವು ಅಥವಾ ಅವರು ಉಳಿದುಕೊಳ್ಳಬೇಕು. ಹಾಗೆ ದ್ಯೂತವು ನಡೆಯಲಿ. ಇದನ್ನು ಪಣವಾಗಿಟ್ಟು ಪಾಂಡವರು ದಾಳಗಳನ್ನು ಎಸೆದು ಜೂಜಾಡಲಿ.
02066021a ಏತತ್ಕೃತ್ಯತಮಂ ರಾಜನ್ನಸ್ಮಾಕಂ ಭರತರ್ಷಭ।
02066021c ಅಯಂ ಹಿ ಶಕುನಿರ್ವೇದ ಸವಿದ್ಯಾಮಕ್ಷಸಂಪದಂ।।
ಭರತರ್ಷಭ! ರಾಜನ್! ಇದು ನಾವು ಮುಖ್ಯವಾಗಿ ಮಾಡಬೇಕಾಗಿರುವ ಕೆಲಸ. ಅಕ್ಷವಿದ್ಯೆಯನ್ನು ತಿಳಿದಿರುವ ಈ ಶಕುನಿಯು ನಮ್ಮ ಸಂಪನ್ಮೂಲ ವ್ಯಕ್ತಿ.
02066022a ದೃಢಮೂಲಾ ವಯಂ ರಾಜ್ಯೇ ಮಿತ್ರಾಣಿ ಪರಿಗೃಹ್ಯ ಚ।
02066022c ಸಾರವದ್ವಿಪುಲಂ ಸೈನ್ಯಂ ಸತ್ಕೃತ್ಯ ಚ ದುರಾಸದಂ।।
ಮಿತ್ರರನ್ನು ಸಂಪಾದಿಸಿ, ದುರಾಸದ, ಶಕ್ತಿಯುತ ಸೈನ್ಯವನ್ನು ಬೆಳೆಸಿ ನಾವು ನಮ್ಮ ರಾಜ್ಯದಲ್ಲಿ ದೃಢ ನೆಲೆಯನ್ನು ಸಾಧಿಸಬಲ್ಲೆವು.
02066023a ತೇ ಚ ತ್ರಯೋದಶೇ ವರ್ಷೇ ಪಾರಯಿಷ್ಯಂತಿ ಚೇದ್ವ್ರತಂ।
02066023c ಜೇಷ್ಯಾಮಸ್ತಾನ್ವಯಂ ರಾಜನ್ರೋಚತಾಂ ತೇ ಪರಂತಪ।।
ರಾಜನ್! ಪರಂತಪ! ಒಂದುವೇಳೆ ಅವರು ಈ ಹದಿಮೂರು ವರ್ಷಗಳ ವ್ರತವನ್ನು ಮಾಡಿ ಜೀವಂತ ಉಳಿದರೆ ಅವರನ್ನು ನಾವು ಜಯಿಸಬಹುದು. ಇದಕ್ಕೆ ಅನುಮತಿಯನ್ನು ನೀಡು.”
02066024 ಧೃತರಾಷ್ಟ್ರ ಉವಾಚ।
02066024a ತೂರ್ಣಂ ಪ್ರತ್ಯಾನಯಸ್ವೈತಾನ್ಕಾಮಂ ವ್ಯಧ್ವಗತಾನಪಿ।
02066024c ಆಗಚ್ಛಂತು ಪುನರ್ದ್ಯೂತಮಿದಂ ಕುರ್ವಂತು ಪಾಂಡವಾಃ।।
ಧೃತರಾಷ್ಟ್ರನು ಹೇಳಿದನು: “ಅವರು ತಮ್ಮ ದಾರಿಯಲ್ಲಿ ದೂರ ಹೋಗಿದ್ದರೂ ಕೂಡ ಅವರನ್ನು ಕೂಡಲೆ ಹಿಂದಕ್ಕೆ ಕರೆಯಿರಿ. ಪಾಂಡವರು ಹಿಂದುರಿಗಿ ಬಂದು ಇನ್ನೊಮ್ಮೆ ದ್ಯೂತವನ್ನು ಆಡಬೇಕು!””
02066025 ವೈಶಂಪಾಯನ ಉವಾಚ।
02066025a ತತೋ ದ್ರೋಣಃ ಸೋಮದತ್ತೋ ಬಾಹ್ಲೀಕಶ್ಚ ಮಹಾರಥಃ।
02066025c ವಿದುರೋ ದ್ರೋಣಪುತ್ರಶ್ಚ ವೈಶ್ಯಾಪುತ್ರಶ್ಚ ವೀರ್ಯವಾನ್।।
02066026a ಭೂರಿಶ್ರವಾಃ ಶಾಂತನವೋ ವಿಕರ್ಣಶ್ಚ ಮಹಾರಥಃ।
02066026c ಮಾ ದ್ಯೂತಮಿತ್ಯಭಾಷಂತ ಶಮೋಽಸ್ತ್ವಿತಿ ಚ ಸರ್ವಶಃ।।
ವೈಶಂಪಾಯನನು ಹೇಳಿದನು: “ಆಗ ದ್ರೋಣ, ಸೋಮದತ್ತ, ಮಹಾರಥಿ ಬಾಹ್ಲೀಕ, ವಿದುರ, ದ್ರೋಣಪುತ್ರ, ವೈಶ್ಯಾಪುತ್ರ, ವೀರ್ಯವಾನ್ ಭೂರಿಶ್ರವ, ಶಾಂತನವ, ಮಹಾರಥಿ ವಿಕರ್ಣ ಎಲ್ಲರೂ “ದ್ಯೂತವು ಬೇಡ! ಶಾಂತತೆಯನ್ನು ಕಾಪಾಡಿರಿ!” ಎಂದು ಹೇಳಿದರು.
02066027a ಅಕಾಮಾನಾಂ ಚ ಸರ್ವೇಷಾಂ ಸುಹೃದಾಮರ್ಥದರ್ಶಿನಾಂ।
02066027c ಅಕರೋತ್ಪಾಂಡವಾಹ್ವಾನಂ ಧೃತರಾಷ್ಟ್ರಃ ಸುತಪ್ರಿಯಃ।।
ಅದರ ಪರಿಣಾಮಗಳನ್ನು ಕಂಡ ಸರ್ವ ಸುಹೃದಯರೂ ಇಷ್ಟಪಡದೇ ಇದ್ದರೂ ಸುತಪ್ರಿಯ ಧೃತರಾಷ್ಟ್ರನು ಪಾಂಡವರಿಗೆ ಆಹ್ವಾನವನ್ನು ಕಳುಹಿಸಿದನು.
02066028a ಅಥಾಬ್ರವೀನ್ಮಹಾರಾಜ ಧೃತರಾಷ್ಟ್ರಂ ಜನೇಶ್ವರಂ।
02066028c ಪುತ್ರಹಾರ್ದಾದ್ಧರ್ಮಯುಕ್ತಂ ಗಾಂಧಾರೀ ಶೋಕಕರ್ಶಿತಾ।।
ಆಗ ಪುತ್ರನ ಮೇಲೆ ಪ್ರೀತಿಯಿದ್ದರೂ ಧರ್ಮನಿರತೆ ಗಾಂಧಾರಿಯು ಶೋಕಾರ್ತಳಾಗಿ ಜನೇಶ್ವರ ಮಹಾರಾಜ ಧೃತರಾಷ್ಟ್ರನಿಗೆ ಹೇಳಿದಳು:
02066029a ಜಾತೇ ದುರ್ಯೋಧನೇ ಕ್ಷತ್ತಾ ಮಹಾಮತಿರಭಾಷತ।
02066029c ನೀಯತಾಂ ಪರಲೋಕಾಯ ಸಾಧ್ವಯಂ ಕುಲಪಾಂಸನಃ।।
“ದುರ್ಯೋಧನನು ಹುಟ್ಟಿದಾಗ ಮಹಾಮತಿ ಕ್ಷತ್ತನು ಈ ಕುಲಪಾಂಸನನನ್ನು ಪರಲೋಕಕ್ಕೆ ಕಳುಹಿಸುವುದೇ ಲೇಸು ಎಂದು ಹೇಳಿದ್ದನು.
02066030a ವ್ಯನದಜ್ಜಾತಮಾತ್ರೋ ಹಿ ಗೋಮಾಯುರಿವ ಭಾರತ।
02066030c ಅಂತೋ ನೂನಂ ಕುಲಸ್ಯಾಸ್ಯ ಕುರವಸ್ತನ್ನಿಬೋಧತ।।
ಭಾರತ! ಹುಟ್ಟುತ್ತಿರುವಾಗಲೇ ಇವನು ನರಿಯಂತೆ ಕೂಗಿದನು. ಕುರುಗಳೇ! ನೋಡುತ್ತಿರಿ! ಇವನು ಈ ಕುಲದ ಅಂತ್ಯಕ್ಕೆ ಕಾರಣನಾಗುತ್ತಾನೆ.
02066031a ಮಾ ಬಾಲಾನಾಮಶಿಷ್ಟಾನಾಮಭಿಮಂಸ್ಥಾ ಮತಿಂ ಪ್ರಭೋ।
02066031c ಮಾ ಕುಲಸ್ಯ ಕ್ಷಯೇ ಘೋರೇ ಕಾರಣಂ ತ್ವಂ ಭವಿಷ್ಯಸಿ।।
ಪ್ರಭೋ! ಶಿಷ್ಟರಲ್ಲದ ಬಾಲಕರ ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಡ. ಕುಲದ ಘೋರ ಕ್ಷಯಕ್ಕೆ ನೀನು ಕಾರಣನಾಗಬೇಡ.
02066032a ಬದ್ಧಂ ಸೇತುಂ ಕೋ ನು ಭಿಂದ್ಯಾದ್ಧಮೇಚ್ಚಾಂತಂ ಚ ಪಾವಕಂ।
02066032c ಶಮೇ ಧೃತಾನ್ಪುನಃ ಪಾರ್ಥಾನ್ಕೋಪಯೇತ್ಕೋ ನು ಭಾರತ।।
ಕಟ್ಟಿದ ಸೇತುವೆಯನ್ನು ಯಾರು ಒಡೆಯುತ್ತಾರೆ? ಆರಿಹೋಗುತ್ತಿರುವ ಬೆಂಕಿಯನ್ನು ಯಾರು ಗಾಳಿ ಹಾಕಿ ಉರಿಸುತ್ತಾರೆ? ಭಾರತ! ಶಾಂತರಾಗಿರುವ ಪಾರ್ಥರನ್ನು ಪುನಃ ಯಾರುತಾನೆ ಸಿಟ್ಟಿಗೇಳಿಸುತ್ತಾರೆ?
02066033a ಸ್ಮರಂತಂ ತ್ವಾಮಾಜಮೀಢ ಸ್ಮಾರಯಿಷ್ಯಾಮ್ಯಹಂ ಪುನಃ।
02066033c ಶಾಸ್ತ್ರಂ ನ ಶಾಸ್ತಿ ದುರ್ಬುದ್ಧಿಂ ಶ್ರೇಯಸೇ ವೇತರಾಯ ವಾ।।
ಆಜಮೀಡ! ನಿನಗೆ ನೆನಪಿರಬಹುದು. ಆದರೂ ನಿನಗೆ ಪುನಃ ನೆನಪಿಸಿಕೊಡುತ್ತೇನೆ. ಶಾಸ್ತ್ರವು ದುರ್ಬುದ್ಧಿಗೆ ಒಳ್ಳೆಯದನ್ನಲ್ಲದೇ ಬೇರೆಯದನ್ನು ಕಲಿಸಲಾರದು.
02066034a ನ ವೈ ವೃದ್ಧೋ ಬಾಲಮತಿರ್ಭವೇದ್ರಾಜನ್ಕಥಂ ಚನ।
02066034c ತ್ವನ್ನೇತ್ರಾಃ ಸಂತು ತೇ ಪುತ್ರಾ ಮಾ ತ್ವಾಂ ದೀರ್ಣಾಃ ಪ್ರಹಾಸಿಷುಃ।।
ರಾಜನ್! ಹಾಗೆಯೇ ಬಾಲಮತಿಯು ಎಂದೂ ವೃದ್ಧನೆನಿಸಲಾರ. ನೀನೇ ನಿನ್ನ ಪುತ್ರರಿಗೆ ದಾರಿತೋರಿಸಬೇಕು. ಇಲ್ಲವಾದರೆ ಸೋತ ಅವರು ನಿನ್ನನ್ನು ದೂರಮಾಡುತ್ತಾರೆ.
02066035a ಶಮೇನ ಧರ್ಮೇಣ ಪರಸ್ಯ ಬುದ್ಧ್ಯಾ ಜಾತಾ ಬುದ್ಧಿಃ ಸಾಸ್ತು ತೇ ಮಾ ಪ್ರತೀಪಾ।
02066035c ಪ್ರಧ್ವಂಸಿನೀ ಕ್ರೂರಸಮಾಹಿತಾ ಶ್ರೀಃ ಮೃದುಪ್ರೌಢಾ ಗಚ್ಛತಿ ಪುತ್ರಪೌತ್ರಾನ್।।
ಇತರರ ಬುದ್ಧಿಯಿಂದ ಹುಟ್ಟಿದ ನಿನ್ನ ಬುದ್ಧಿಯು ಶಮ-ಧರ್ಮಗಳಿಗೆ ಹೊರತಾಗದಿರಲಿ. ಕ್ರೂರಕರ್ಮಗಳಿಂದ ಸಂಪಾದಿಸಿದ ಐಶ್ವರ್ಯವು ನಾಶವಾಗಿ ಹೋಗುತ್ತದೆ. ಆದರೆ ಸೌಮ್ಯಕರ್ಮಗಳಿಂದ ಹೆಚ್ಚಿಸಿದ ಧನವು ಪುತ್ರಪೌತ್ರರಿಗೂ ಸಂದುತ್ತದೆ.”
02066036a ಅಥಾಬ್ರವೀನ್ಮಹಾರಾಜೋ ಗಾಂಧಾರೀಂ ಧರ್ಮದರ್ಶಿನೀಂ।
02066036c ಅಂತಃ ಕಾಮಂ ಕುಲಸ್ಯಾಸ್ತು ನ ಶಕ್ಷ್ಯಾಮಿ ನಿವಾರಿತುಂ।।
ಆಗ ಮಹಾರಾಜನು ಧರ್ಮದರ್ಶಿನೀ ಗಾಂಧಾರಿಗೆ ಹೇಳಿದನು: “ನಮ್ಮ ಕುಲವು ಅಂತ್ಯಗೊಳ್ಳುವುದೇ ಆದರೆ ಅದನ್ನು ತಡೆಯಲು ನಾನು ಶಕ್ಯನಿಲ್ಲ.
02066037a ಯಥೇಚ್ಛಂತಿ ತಥೈವಾಸ್ತು ಪ್ರತ್ಯಾಗಚ್ಛಂತು ಪಾಂಡವಾಃ।
02066037c ಪುನರ್ದ್ಯೂತಂ ಪ್ರಕುರ್ವಂತು ಮಾಮಕಾಃ ಪಾಂಡವೈಃ ಸಹ।।
ಅವರು ಏನನ್ನು ಬಯಸುತ್ತಾರೋ ಹಾಗೆಯೇ ಆಗಲಿ. ಪಾಂಡವರು ಹಿಂದಿರುಗಬೇಕು. ನನ್ನವರು ಪಾಂಡವರೊಂದಿಗೆ ಪುನಃ ದ್ಯೂತವನ್ನು ನಡೆಸಲಿ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ಯುಧಿಷ್ಠಿರಪ್ರತ್ಯಾನಯನೇ ಷಟ್ಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಯುಧಿಷ್ಠಿರನನ್ನು ಪುನಃ ಕರೆಯಿಸಿದ್ದುದು ಎನ್ನುವ ಅರವತ್ತಾರನೆಯ ಅಧ್ಯಾಯವು.