ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 65
ಸಾರ
ಏನು ಮಾಡಬೇಕೆಂದು ಕೇಳಲು (1) ಧೃತರಾಷ್ಟ್ರನು ಯುಧಿಷ್ಠಿರನಿಗೆ ಇಂದ್ರಪ್ರಸ್ಥಕ್ಕೆ ಮರಳಿ, ದುರ್ಯೋಧನಾದಿಗಳ ವಿರುದ್ಧ ವೈರವನ್ನು ಸಾಧಿಸದೇ, ವೃದ್ಧ ಗಾಂಧಾರಿ ಮತ್ತು ರಾಜನನ್ನು ಗೌರವಿಸಿಕೊಂಡು, ನಿನ್ನ ರಾಜ್ಯವನ್ನು ಆಳು ಎಂದು ಸಲಹೆಯನ್ನು ನೀಡುವುದು (2-15). ಯುಧಿಷ್ಠಿರನು ದ್ರೌಪದಿ ಮತ್ತು ತಮ್ಮಂದಿರೊಡನೆ ರಥಗಳನ್ನೇರಿ ಇಂದ್ರಪ್ರಸ್ಥದ ಕಡೆ ಪ್ರಯಾಣಿಸಿದುದು (16-17).
02065001 ಯುಧಿಷ್ಠಿರ ಉವಾಚ।
02065001a ರಾಜನ್ಕಿಂ ಕರವಾಮಸ್ತೇ ಪ್ರಶಾಧ್ಯಸ್ಮಾಂಸ್ತ್ವಮೀಶ್ವರಃ।
02065001c ನಿತ್ಯಂ ಹಿ ಸ್ಥಾತುಮಿಚ್ಛಾಮಸ್ತವ ಭಾರತ ಶಾಸನೇ।।
ಯುಧಿಷ್ಠಿರನು ಹೇಳಿದನು: “ರಾಜನ್! ಈಗ ನಾವು ಏನು ಮಾಡಬೇಕು? ನಮಗೆ ಆಜ್ಞಾಪಿಸು. ನೀನು ನಮ್ಮ ಒಡೆಯ. ಭಾರತ! ನಿತ್ಯವೂ ನಾವು ನಿನ್ನ ಶಾಸನದಂತೆ ನಡೆದುಕೊಳ್ಳಲು ಬಯಸುತ್ತೇವೆ.”
02065002 ಧೃತರಾಷ್ಟ್ರ ಉವಾಚ।
02065002a ಅಜಾತಶತ್ರೋ ಭದ್ರಂ ತೇ ಅರಿಷ್ಟಂ ಸ್ವಸ್ತಿ ಗಚ್ಛತ।
02065002c ಅನುಜ್ಞಾತಾಃ ಸಹಧನಾಃ ಸ್ವರಾಜ್ಯಮನುಶಾಸತ।।
ಧೃತರಾಷ್ಟ್ರನು ಹೇಳಿದನು: “ಅಜಾತಶತ್ರು! ನಿನಗೆ ಮಂಗಳವಾಗಲಿ! ಶಾಂತಿ ಮತ್ತು ಸುಖದಿಂದ ಹೋಗು. ನಿನಗೆ ಅನುಜ್ಞೆಯಿದೆ. ನಿನ್ನ ರಾಜ್ಯವನ್ನು ಧನದೊಂದಿಗೆ ಆಳು.
02065003a ಇದಂ ತ್ವೇವಾವಬೋದ್ಧವ್ಯಂ ವೃದ್ಧಸ್ಯ ಮಮ ಶಾಸನಂ।
02065003c ಧಿಯಾ ನಿಗದಿತಂ ಕೃತ್ಸ್ನಂ ಪಥ್ಯಂ ನಿಃಶ್ರೇಯಸಂ ಪರಂ।।
ಆದರೆ ಈ ವೃದ್ಧನು ನಿನಗೆ ನೀಡುವ ಸಲಹೆಯನ್ನು ಹೃದಯಕ್ಕೆ ತೆಗೆದುಕೋ. ಏಕೆಂದರೆ ಇದು ನಿಶ್ಚಯವಾಗಿಯೂ ಪರಮ ಶ್ರೇಯಸ್ಸಿಗೆ ಪಥ್ಯ.
02065004a ವೇತ್ಥ ತ್ವಂ ತಾತ ಧರ್ಮಾಣಾಂ ಗತಿಂ ಸೂಕ್ಷ್ಮಾಂ ಯುಧಿಷ್ಠಿರ।
02065004c ವಿನೀತೋಽಸಿ ಮಹಾಪ್ರಾಜ್ಞ ವೃದ್ಧಾನಾಂ ಪರ್ಯುಪಾಸಿತಾ।।
ಯುಧಿಷ್ಠಿರ! ಮಹಾಪ್ರಾಜ್ಞ! ಮಗನೇ! ನಿನಗೆ ಧರ್ಮಗಳ ಸೂಕ್ಷ್ಮ ಗತಿಯು ತಿಳಿದಿದೆ. ವಿನೀತನಾಗಿರುವೆ ಮತ್ತು ವೃದ್ಧರ ಸೇವೆ ಮಾಡುತ್ತೀಯೆ.
02065005a ಯತೋ ಬುದ್ಧಿಸ್ತತಃ ಶಾಂತಿಃ ಪ್ರಶಮಂ ಗಚ್ಛ ಭಾರತ।
02065005c ನಾದಾರೌ ಕ್ರಮತೇ ಶಸ್ತ್ರಂ ದಾರೌ ಶಸ್ತ್ರಂ ನಿಪಾತ್ಯತೇ।।
ಭಾರತ! ಎಲ್ಲಿ ಬುದ್ಧಿಯಿದೆಯೋ ಅಲ್ಲಿ ಶಾಂತಿಯಿರುತ್ತದೆ. ಶಾಂತನಾಗಿ ಹೋಗು. ಕಟ್ಟಿಗೆಯಲ್ಲದುದನ್ನು ಶಸ್ತ್ರವು ಕಡಿಯುವುದಿಲ್ಲ. ಕಟ್ಟಿಗೆಯ ಮೇಲೆ ಮಾತ್ರ ಶಸ್ತ್ರವನ್ನು ಪ್ರಯೋಗಿಸಬಹುದು.
02065006a ನ ವೈರಾಣ್ಯಭಿಜಾನಂತಿ ಗುಣಾನ್ಪಶ್ಯಂತಿ ನಾಗುಣಾನ್।
02065006c ವಿರೋಧಂ ನಾಧಿಗಚ್ಛಂತಿ ಯೇ ತ ಉತ್ತಮಪೂರುಷಾಃ।।
ಉತ್ತಮ ಪುರುಷನು ವೈರತ್ವವನ್ನು ತಿಳಿದಿರುವುದಿಲ್ಲ. ಗುಣಗಳನ್ನು ನೋಡುತ್ತಾನೆ, ಅವಗುಣಗಳನ್ನಲ್ಲ ಮತ್ತು ವಿರೋಧವನ್ನು ಸಾಧಿಸುವುದಿಲ್ಲ.
02065007a ಸಂವಾದೇ ಪರುಷಾಣ್ಯಾಹುರ್ಯುಧಿಷ್ಠಿರ ನರಾಧಮಾಃ।
02065007c ಪ್ರತ್ಯಾಹುರ್ಮಧ್ಯಮಾಸ್ತ್ವೇತಾನುಕ್ತಾಃ ಪರುಷಮುತ್ತರಂ।।
02065008a ನೈವೋಕ್ತಾ ನೈವ ಚಾನುಕ್ತಾ ಅಹಿತಾಃ ಪರುಷಾ ಗಿರಃ।
02065008c ಪ್ರತಿಜಲ್ಪಂತಿ ವೈ ಧೀರಾಃ ಸದಾ ಉತ್ತಮಪೂರುಷಾಃ।।
ಯುಧಿಷ್ಠಿರ! ನರಾಧಮರು ಮಾತ್ರ ಮಾತನಾಡುವಾಗ ಅಪಮಾನ ಮಾಡುತ್ತಾರೆ. ಆದರೆ ಉತ್ತಮ ಪುರುಷರು ಹೇಳದೇ ಇದ್ದ ಅಥವಾ ಹೇಳಿದ ಯಾವುದೇ ಅಹಿತ ಮಾತುಗಳಿಗೆ ಪ್ರತಿಕ್ರಿಯೆ ತೋರಿಸದೇ ಸಹಿಸಿಕೊಳ್ಳುತ್ತಾರೆ.
02065009a ಸ್ಮರಂತಿ ಸುಕೃತಾನ್ಯೇವ ನ ವೈರಾಣಿ ಕೃತಾನ್ಯಪಿ।
02065009c ಸಂತಃ ಪ್ರತಿವಿಜಾನಂತೋ ಲಬ್ಧ್ವಾ ಪ್ರತ್ಯಯಮಾತ್ಮನಃ।।
ಸಂತರು ಸುಕೃತಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಮತ್ತು ಗುರುತಿಸುತ್ತಾರೆ. ದ್ವೇಷದಲ್ಲಿ ಮಾಡಿದವುಗಳನ್ನಲ್ಲ. ಏಕೆಂದರೆ ಅವರಿಗೆ ತಮ್ಮ ಮೇಲೆಯೇ ವಿಶ್ವಾಸವಿರುತ್ತದೆ.
02065010a ತಥಾಚರಿತಮಾರ್ಯೇಣ ತ್ವಯಾಸ್ಮಿನ್ಸತ್ಸಮಾಗಮೇ।
02065010c ದುರ್ಯೋಧನಸ್ಯ ಪಾರುಷ್ಯಂ ತತ್ತಾತ ಹೃದಿ ಮಾ ಕೃಥಾಃ।।
ಈ ಸತ್ಸಮಾಗಮದಲ್ಲಿ ನೀನು ಗೌರವಯುತವಾಗಿ ನಡೆದುಕೊಂಡಿದ್ದೀಯೆ. ಮಗನೇ! ದುರ್ಯೋಧನನ ಕೆಟ್ಟ ವರ್ತನೆಗಳನ್ನು ಹೃದಯಕ್ಕೆ ತೆಗೆದುಕೊಳ್ಳಬೇಡ.
02065011a ಮಾತರಂ ಚೈವ ಗಾಂಧಾರೀಂ ಮಾಂ ಚ ತ್ವದ್ಗುಣಕಾಂಕ್ಷಿಣಂ।
02065011c ಉಪಸ್ಥಿತಂ ವೃದ್ಧಮಂಧಂ ಪಿತರಂ ಪಶ್ಯ ಭಾರತ।।
ಭಾರತ! ನಿನ್ನ ಋಣಾಕಾಂಕ್ಷಿಗಳಾಗಿ ಉಪಸ್ಥಿತರಿರುವ ಈ ವೃದ್ಧರೂ ಅಂಧರೂ ಆದ ನಿನ್ನ ತಾಯಿ ಗಾಂಧಾರಿ ಮತ್ತು ತಂದೆ ನನ್ನನ್ನು ನೋಡು.
02065012a ಪ್ರೇಕ್ಷಾಪೂರ್ವಂ ಮಯಾ ದ್ಯೂತಮಿದಮಾಸೀದುಪೇಕ್ಷಿತಂ।
02065012c ಮಿತ್ರಾಣಿ ದ್ರಷ್ಟುಕಾಮೇನ ಪುತ್ರಾಣಾಂ ಚ ಬಲಾಬಲಂ।।
ಮಿತ್ರರನ್ನು ಮತ್ತು ಪುತ್ರರ ಬಲಾಬಲವನ್ನು ನೋಡುವುದಕ್ಕೋಸ್ಕರ ನಾನು ಈ ದ್ಯೂತವನ್ನು ಏರ್ಪಡಿಸಿದ್ದೆ.
02065013a ಅಶೋಚ್ಯಾಃ ಕುರವೋ ರಾಜನ್ಯೇಷಾಂ ತ್ವಮನುಶಾಸಿತಾ।
02065013c ಮಂತ್ರೀ ಚ ವಿದುರೋ ಧೀಮಾನ್ಸರ್ವಶಾಸ್ತ್ರವಿಶಾರದಃ।।
ರಾಜನ್! ನಿನ್ನ ಅನುಶಾಸನದಲ್ಲಿರುವ ಕುರುಗಳ ಮತ್ತು ಧೀಮಂತ ಸರ್ವಶಾಸ್ತ್ರವಿಶಾರದ ಮಂತ್ರಿ ವಿದುರನ ಕುರಿತು ಶೋಕಿಸಬೇಡ.
02065014a ತ್ವಯಿ ಧರ್ಮೋಽರ್ಜುನೇ ವೀರ್ಯಂ ಭೀಮಸೇನೇ ಪರಾಕ್ರಮಃ।
02065014c ಶ್ರದ್ಧಾ ಚ ಗುರುಶುಶ್ರೂಷಾ ಯಮಯೋಃ ಪುರುಷಾಗ್ರ್ಯಯೋಃ।।
ನಿನ್ನಲ್ಲಿ ಧರ್ಮವಿದೆ. ಅರ್ಜುನನಲ್ಲಿ ವೀರ್ಯವಿದೆ. ಭೀಮಸೇನನಲ್ಲಿ ಪರಾಕ್ರಮವಿದೆ ಮತ್ತು ಯಮಳರಲ್ಲಿ ಶ್ರದ್ಧೆ, ಗುರು-ಹಿರಿಯರ ಶುಶ್ರೂಷೆಯಿದೆ.
02065015a ಅಜಾತಶತ್ರೋ ಭದ್ರಂ ತೇ ಖಾಂಡವಪ್ರಸ್ಥಮಾವಿಶ।
02065015c ಭ್ರಾತೃಭಿಸ್ತೇಽಸ್ತು ಸೌಭ್ರಾತ್ರಂ ಧರ್ಮೇ ತೇ ಧೀಯತಾಂ ಮನಃ।।
ಅಜಾತಶತ್ರು! ನಿನಗೆ ಮಂಗಳವಾಗಲಿ! ಖಾಂಡವಪ್ರಸ್ಥವನ್ನು ಸೇರು. ನಿನ್ನ ಭ್ರಾತೃಗಳಲ್ಲಿ ನಿನಗೆ ಸೌಹಾರ್ದತ್ವ ಇರಲಿ ಮತ್ತು ನಿನ್ನ ಮನಸ್ಸು ಧರ್ಮದಲ್ಲಿ ನೆಲೆಸಿರಲಿ.””
02065016 ವೈಶಂಪಾಯನ ಉವಾಚ।
02065016a ಇತ್ಯುಕ್ತೋ ಭರತಶ್ರೇಷ್ಠೋ ಧರ್ಮರಾಜೋ ಯುಧಿಷ್ಠಿರಃ।
02065016c ಕೃತ್ವಾರ್ಯಸಮಯಂ ಸರ್ವಂ ಪ್ರತಸ್ಥೇ ಭ್ರಾತೃಭಿಃ ಸಹ।।
ವೈಶಂಪಾಯನನು ಹೇಳಿದನು: “ಭರತಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಈ ಮಾತುಗಳೆಲ್ಲವನ್ನೂ ಗೌರವಾನ್ವಿತವಾಗಿ ಒಪ್ಪಿಕೊಂಡು ಭ್ರಾತೃಗಳ ಸಹಿತ ಹೊರಟನು.
02065017a ತೇ ರಥಾನ್ಮೇಘಸಂಕಾಶಾನಾಸ್ಥಾಯ ಸಹ ಕೃಷ್ಣಯಾ।
02065017c ಪ್ರಯಯುರ್ಹೃಷ್ಟಮನಸ ಇಂದ್ರಪ್ರಸ್ಥಂ ಪುರೋತ್ತಮಂ।।
ಅವರು ಮೇಘದಂತೆ ಗರ್ಜಿಸುವ ರಥಗಳನ್ನೇರಿ ಕೃಷ್ಣೆಯ ಸಹಿತ ಹೃಷ್ಠಮನಸ್ಕರಾಗಿ ಉತ್ತಮ ಪುರ ಇಂದ್ರಪ್ರಸ್ಥದ ಕಡೆ ಹೊರಟರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಇಂದ್ರಪ್ರಸ್ಥಂ ಪ್ರತಿ ಯುಧಿಷ್ಠಿರಗಮನೇ ಪಂಚಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಇಂದ್ರಪ್ರಸ್ಥಕ್ಕೆ ಯುಧಿಷ್ಠಿರನ ಪ್ರಯಾಣ ಎನ್ನುವ ಅರವತ್ತೈದನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-1/18, ಉಪಪರ್ವಗಳು-27/100, ಅಧ್ಯಾಯಗಳು-290/1995, ಶ್ಲೋಕಗಳು-9348/73784.