ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 64
ಸಾರ
ಕರ್ಣನು ಮುಳುಗುತ್ತಿರುವ ಪಾಂಡವರಿಗೆ ದ್ರೌಪದಿಯೇ ಪಾರುಮಾಡಿಸಿದಳು ಎಂದು ಅಪಮಾನಿಸಿದುದು (1-3). ಭೀಮಸೇನನು ಕೃದ್ಧನಾಗಿ “ಉಲ್ಲಂಘನೆಗೊಂಡ ಪತ್ನಿಯಿಂದ ಸಂತಾನವನ್ನು ಹೇಗೆ ಪಡೆಯಬಹುದು?” ಎಂದು ಕೇಳಲು (4-7), ಅರ್ಜುನನು ಅವನಿಗೆ ಶಾಂತನಾಗಲು ಹೇಳಿದುದು (8-9). ಭೀಮನು ಕ್ರೋಧದಿಂದ ಸಭೆಯಲ್ಲಿರುವರನ್ನು ನಾಶಪಡಿಸುವೆನೆಂದು ಗರ್ಜಿಸಿ ಎದ್ದು ನಿಲ್ಲುವುದು (10-15). ಯುಧಿಷ್ಠಿರನು ಭೀಮನನ್ನು ತಡೆಹಿಡಿದು ಕುಳ್ಳಿರಿಸಿ ಧೃತರಾಷ್ಟ್ರನ ಬಳಿ ಹೋಗುವುದು (16-17).
02064001 ಕರ್ಣ ಉವಾಚ।
02064001a ಯಾ ನಃ ಶ್ರುತಾ ಮನುಷ್ಯೇಷು ಸ್ತ್ರಿಯೋ ರೂಪೇಣ ಸಮ್ಮತಾಃ।
02064001c ತಾಸಾಮೇತಾದೃಶಂ ಕರ್ಮ ನ ಕಸ್ಯಾಂ ಚನ ಶುಶ್ರುಮಃ।।
ಕರ್ಣನು ಹೇಳಿದನು: “ಇದೂವರೆಗೆ ಕೇಳಿದ್ದ ರೂಪಸಮನ್ವಿತ ಯಾವ ಮನುಷ್ಯ ಸ್ತ್ರೀಯೂ ಇಂಥಹ ಕರ್ಮವನ್ನು ಸಾಧಿಸಿದುದನ್ನು ಕೇಳಿಲ್ಲ.
02064002a ಕ್ರೋಧಾವಿಷ್ಟೇಷು ಪಾರ್ಥೇಷು ಧಾರ್ತರಾಷ್ಟ್ರೇಷು ಚಾಪ್ಯತಿ।
02064002c ದ್ರೌಪದೀ ಪಾಂಡುಪುತ್ರಾಣಾಂ ಕೃಷ್ಣಾ ಶಾಂತಿರಿಹಾಭವತ್।।
ಪಾರ್ಥರು ಮತ್ತು ಧಾರ್ತರಾಷ್ಟ್ರರು ಕ್ರೋಧಾವಿಷ್ಟರಾಗುತ್ತಿರಲು ಈ ದ್ರೌಪದಿ ಕೃಷ್ಣೆಯು ಪಾಂಡುಪುತ್ರರರಿಗೆ ಶಾಂತಿಯನ್ನು ತಂದಿಟ್ಟಹಾಗಾಯಿತು.
02064003a ಅಪ್ಲವೇಂಽಭಸಿ ಮಗ್ನಾನಾಮಪ್ರತಿಷ್ಠೇ ನಿಮಜ್ಜತಾಂ।
02064003c ಪಾಂಚಾಲೀ ಪಾಂಡುಪುತ್ರಾಣಾಂ ನೌರೇಷಾ ಪಾರಗಾಭವತ್।।
ಮುಳುಗುತ್ತಿದ್ದ ದೋಣಿಯಿಂದ ತಳವಿಲ್ಲದ ಸಾಗರದಲ್ಲಿ ಮುಳುಗಿ ಹೋಗುತ್ತಿದ್ದ ಈ ಪಾಂಡುಪುತ್ರರಿಗೆ ಪಾಂಚಾಲಿಯು ಪಾರುಮಾಡುವ ದೋಣಿಯಂತಾದಳು.””
02064004 ವೈಶಂಪಾಯನ ಉವಾಚ।
02064004a ತದ್ವೈ ಶ್ರುತ್ವಾ ಭೀಮಸೇನಃ ಕುರುಮಧ್ಯೇಽತ್ಯಮರ್ಷಣಃ।
02064004c ಸ್ತ್ರೀ ಗತಿಃ ಪಾಂಡುಪುತ್ರಾಣಾಮಿತ್ಯುವಾಚ ಸುದುರ್ಮನಾಃ।।
ವೈಶಂಪಾಯನನು ಹೇಳಿದನು: “ಪಾಂಡುಪುತ್ರರಿಗೆ ಸ್ತ್ರೀಯೇ ಗತಿಯಾದಳು ಎಂದು ಕುರುಮಧ್ಯದಲ್ಲಿ ಹೇಳಿದ್ದುದನ್ನು ಕೇಳಿದ ಭೀಮಸೇನನು ಅತಿ ಕೋಪಗೊಂಡು ಮನನೊಂದು ಹೇಳಿದನು:
02064005a ತ್ರೀಣಿ ಜ್ಯೋತೀಂಷಿ ಪುರುಷ ಇತಿ ವೈ ದೇವಲೋಽಬ್ರವೀತ್।
02064005c ಅಪತ್ಯಂ ಕರ್ಮ ವಿದ್ಯಾ ಚ ಯತಃ ಸೃಷ್ಟಾಃ ಪ್ರಜಾಸ್ತತಃ।।
“ಪುರುಶನಿಗೆ ಮೂರು ಜ್ಯೋತಿಗಳಿವೆ ಎಂದು ದೇವಲನು ಹೇಳಿದ್ದಾನೆ: ಸಂತಾನ, ಕರ್ಮ ಮತ್ತು ವಿದ್ಯೆ. ಇವುಗಳಿಂದಲೇ ಸೃಷ್ಟಿಯಾದವುಗಳು ಬಾಳುತ್ತವೆ.
02064006a ಅಮೇಧ್ಯೇ ವೈ ಗತಪ್ರಾಣೇ ಶೂನ್ಯೇ ಜ್ಞಾತಿಭಿರುಂಝಿತೇ।
02064006c ದೇಹೇ ತ್ರಿತಯಮೇವೈತತ್ಪುರುಷಸ್ಯೋಪಜಾಯತೇ।।
ಬಾಂಧವರು ಬಿಸಾಡಿದ ಪುರುಷನ ಮಾಂಸವಿಲ್ಲದ ಪ್ರಾಣಗತ ಶೂನ್ಯ ದೇಹದ ನಂತರ ಉಳಿಯುವುದೆಂದರೆ ಇವು ಮೂರೇ.
02064007a ತನ್ನೋ ಜ್ಯೋತಿರಭಿಹತಂ ದಾರಾಣಾಮಭಿಮರ್ಶನಾತ್।
02064007c ಧನಂಜಯ ಕಥಂ ಸ್ವಿತ್ಸ್ಯಾದಪತ್ಯಮಭಿಮೃಷ್ಟಜಂ।।
ಧನಂಜಯ! ನಮ್ಮ ಪತ್ನಿಯನ್ನು ಇವರು ಉಲ್ಲಂಘಿಸಿ ಒಂದು ಜ್ಯೋತಿಯನ್ನು ಆರಿಸಿದ್ದಾರೆ. ಉಲ್ಲಂಘನೆಗೊಂಡ ಪತ್ನಿಯಿಂದ ಸಂತಾನವನ್ನು ಹೇಗೆ ಪಡೆಯಬಹುದು?”
02064008 ಅರ್ಜುನ ಉವಾಚ।
02064008a ನ ಚೈವೋಕ್ತಾ ನ ಚಾನುಕ್ತಾ ಹೀನತಃ ಪರುಷಾ ಗಿರಃ।
02064008c ಭಾರತಾಃ ಪ್ರತಿಜಲ್ಪಂತಿ ಸದಾ ತೂತ್ತಮಪೂರುಷಾಃ।।
02064009a ಸ್ಮರಂತಿ ಸುಕೃತಾನ್ಯೇವ ನ ವೈರಾಣಿ ಕೃತಾನಿ ಚ।
02064009c ಸಂತಃ ಪ್ರತಿವಿಜಾನಂತೋ ಲಬ್ಧ್ವಾ ಪ್ರತ್ಯಯಮಾತ್ಮನಃ।।
ಅರ್ಜುನನು ಹೇಳಿದನು: “ಹೀನಪುರುಷರು ಆಡಿದ ಅಥವಾ ಆಡದೇ ಇದ್ದ ಮಾತುಗಳಿಗೆ ಭಾರತರು ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಉತ್ತಮ ಪುರುಷರು ಸದಾ ಸುಕೃತಗಳನ್ನೇ ನೆನಪಿಟ್ಟುಕೊಳ್ಳುತ್ತಾರೆ. ವೈರತ್ವದಿಂದ ಮಾಡಿದ ಕರ್ಮಗಳನ್ನಲ್ಲ. ತಮ್ಮ ಮೇಲೆಯೇ ವಿಶ್ವಾಸವಿರುವ ಸಂತರು ಒಳ್ಳೆಯದನ್ನು ಗುರುತಿಸುತ್ತಾರೆ117.”
02064010 ಭೀಮ ಉವಾಚ।
02064010a ಇಹೈವೈತಾಂಸ್ತುರಾ ಸರ್ವಾನ್ ಹನ್ಮಿ ಶತ್ರೂನ್ಸಮಾಗತಾನ್।
02064010c ಅಥ ನಿಷ್ಕ್ರಮ್ಯ ರಾಜೇಂದ್ರ ಸಮೂಲಾನ್ಕೃಂಧಿ ಭಾರತ।।
ಭೀಮನು ಹೇಳಿದನು: “ಸಮಾಗತ ಎಲ್ಲ ಶತ್ರುಗಳನ್ನೂ ಇಲ್ಲಿಯೇ ಕೊಂದುಬಿಡುತ್ತೇನೆ. ಆದುದರಿಂದ ರಾಜೇಂದ್ರ! ಭಾರತ! ಹೊರಗೆ ಹೋಗು. ಇವರನ್ನು ಸಮೂಲವಾಗಿ ಸಂಹರಿಸುತ್ತೇನೆ.
02064011a ಕಿಂ ನೋ ವಿವದಿತೇನೇಹ ಕಿಂ ನಃ ಕ್ಲೇಶೇನ ಭಾರತ।
02064011c ಅದ್ಯೈವೈತಾನ್ನಿಹನ್ಮೀಹ ಪ್ರಶಾಧಿ ವಸುಧಾಮಿಮಾಂ।।
ಭಾರತ! ಇಲ್ಲಿ ಇನ್ನೂ ಏಕೆ ವಿವಾದದಲ್ಲಿ ತೊಡಗಿ ಕ್ಲೇಶವನ್ನು ಅನುಭವಿಸಬೇಕು? ಇಂದೇ ಇಲ್ಲಿಯೇ ಇವರನ್ನು ವಧಿಸುತ್ತೇನೆ. ನೀನು ಈ ವಸುಧೆಯನ್ನು ಆಳು.””
02064012 ವೈಶಂಪಾಯನ ಉವಾಚ।
02064012a ಇತ್ಯುಕ್ತ್ವಾ ಭೀಮಸೇನಸ್ತು ಕನಿಷ್ಠೈರ್ಭ್ರಾತೃಭಿರ್ವೃತಃ।
02064012c ಮೃಗಮಧ್ಯೇ ಯಥಾ ಸಿಂಹೋ ಮುಹುಃ ಪರಿಘಮೈಕ್ಷತ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ಭೀಮಸೇನನು ತನ್ನ ಕಿರಿಯ ತಮ್ಮಂದಿರಿಂದ ಆವೃತನಾಗಿ ಮೃಗಮಧ್ಯದಲ್ಲಿದ್ದ ಸಿಂಹನಂತೆ ಕಾಣುತ್ತಿದ್ದನು ಮತ್ತು ಆಗಾಗ ಪರಿಘವನ್ನು ನೋಡುತ್ತಿದ್ದನು.
02064013a ಸಾಂತ್ವ್ಯಮಾನೋ ವೀಜ್ಯಮಾನಃ ಪಾರ್ಥೇನಾಕ್ಲಿಷ್ಟಕರ್ಮಣಾ।
02064013c ಸ್ವಿದ್ಯತೇ ಚ ಮಹಾಬಾಹುರಂತರ್ದಾಹೇನ ವೀರ್ಯವಾನ್।।
ಅಕ್ಲಿಷ್ಟಕರ್ಮಿ ಪಾರ್ಥರು ಅವನನ್ನು ಒಳ್ಳೆಯ ರೀತಿಯಲ್ಲಿ ಸಂತವಿಸುತ್ತಿರಲು ವೀರ್ಯವಾನ್ ಮಹಾಬಾಹುವು ಒಳಗಿಂದೊಳಗೇ ಬೇಯತೊಡಗಿದನು.
02064014a ಕ್ರುದ್ಧಸ್ಯ ತಸ್ಯ ಸ್ರೋತೋಭ್ಯಃ ಕರ್ಣಾದಿಭ್ಯೋ ನರಾಧಿಪ।
02064014c ಸಧೂಮಃ ಸಸ್ಫುಲಿಂಗಾರ್ಚಿಃ ಪಾವಕಃ ಸಮಜಾಯತ।।
ನರಾಧಿಪ! ಅವನ ಕಿವಿ ಮತ್ತು ಇತರ ರಂಧ್ರಗಳಿಂದ ಧೂಮದೊಂದಿಗೆ ನಿಧಾನವಾಗಿ ಉರಿಯುತ್ತಿರುವ ಕೆಂಡದಂತೆ ಬೆಂಕಿಯು ಹೊರಬಂದಿತು.
02064015a ಭ್ರುಕುಟೀಪುಟದುಷ್ಪ್ರೇಕ್ಷ್ಯಮಭವತ್ತಸ್ಯ ತನ್ಮುಖಂ।
02064015c ಯುಗಾಂತಕಾಲೇ ಸಂಪ್ರಾಪ್ತೇ ಕೃತಾಂತಸ್ಯೇವ ರೂಪಿಣಃ।।
ಅವನ ಮುಖವು ಯುಗಾಂತಕಾಲವು ಪ್ರಾಪ್ತವಾದಾಗ ಸ್ವಯಂ ಕೃತಾಂತನ ರೂಪವು ಹೇಗೋ ಹಾಗೆ ನೋಡಿದವರಿಗೆ ಭಯವನ್ನುಂಟುಮಾಡುವಂಥಾಯಿತು.
02064016a ಯುಧಿಷ್ಠಿರಸ್ತಮಾವಾರ್ಯ ಬಾಹುನಾ ಬಾಹುಶಾಲಿನಂ।
02064016c ಮೈವಮಿತ್ಯಬ್ರವೀಚ್ಚೈನಂ ಜೋಷಮಾಸ್ಸ್ವೇತಿ ಭಾರತ।।
ಯುಧಿಷ್ಠಿರನು ಆ ಬಾಹುಬಲಶಾಲಿಯ ಬಾಹುಗಳನ್ನು ಹಿಡಿದು “ಭಾರತ! ಬೇಡ! ಸುಮ್ಮನಿರು!” ಎಂದು ಕೂರಿಸಿದನು.
02064017a ನಿವಾರ್ಯ ತಂ ಮಹಾಬಾಹುಂ ಕೋಪಸಂರಕ್ತಲೋಚನಂ।
02064017c ಪಿತರಂ ಸಮುಪಾತಿಷ್ಠದ್ಧೃತರಾಷ್ಟ್ರಂ ಕೃತಾಂಜಲಿಃ।।
ಆ ಕೋಪಸಂರಕ್ತಲೋಚನ ಮಹಾಬಾಹುವನ್ನು ತಡೆಹಿಡಿದ ಯುಧಿಷ್ಠಿರನು ಅಂಜಲೀ ಬದ್ಧನಾಗಿ ತನ್ನ ಪಿತ ಧೃತರಾಷ್ಟ್ರನ ಸಮುಪಸ್ಥಿತಿಯಲ್ಲಿ ಬಂದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಭೀಮಕ್ರೋಧೇ ಚತುಷ್ಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಭೀಮಕ್ರೋಧ ಎನ್ನುವ ಅರವತ್ನಾಲ್ಕನೆಯ ಅಧ್ಯಾಯವು.