063 ದ್ರೌಪದೀವರಲಾಭಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 63

ಸಾರ

ಕರ್ಣನು ದ್ರೌಪದಿಗೆ ಧಾರ್ತರಾಷ್ಟ್ರರ ಮನೆಯಲ್ಲಿ ದಾಸಿಯಾಗಿರೆಂದೂ ಬೇರೆ ಯಾರನ್ನಾದರೂ ಪತಿಯನ್ನಾಗಿ ಆರಿಸಿಕೊಳ್ಳಬೇಕೆಂದೂ ಚುಚ್ಚಿ ನುಡಿಯುವುದು (1-5). ಭೀಮನು ಯುಧಿಷ್ಠಿರನ ಮೇಲೆ ಕುಪಿತನಾಗುವುದು (6-7). ಮಾತನಾಡದೇ ಕುಳಿತಿದ್ದ ಯುಧಿಷ್ಠಿರನನ್ನು ದುರ್ಯೋಧನನು ಪಶ್ನಿಸಿ (8-9) ತನ್ನ ಎಡತೊಡೆಯನ್ನು ದ್ರೌಪದಿಗೆ ತೋರಿಸುವುದು (10-12). ಭೀಮನು ಕ್ರೋಧದಿಂದ ಆ ತೊಡೆಯನ್ನು ಒಡೆಯುವುದಾಗಿ ಪ್ರತಿಜ್ಞೆಮಾಡುವುದು (13-15). ಸಭಾಸದರು ಪ್ರಶ್ನೆಗೆ ಉತ್ತರ ಕೊಡಬೇಕೆಂದು ವಿದುರನು ಕೇಳಿಕೊಳ್ಳುವುದು (16-19). ದುರ್ಯೋಧನನು ಪುನಃ ಪ್ರಶ್ನಿಸಲು ಅರ್ಜುನನು ಉತ್ತರಿಸಿವುದು (20-21). ಅರಮನೆಯಲ್ಲಿ ದುಃಶಕುನಗಳು ಕಾಣಿಸಿಕೊಳ್ಳುವುದು (22-24). ಧೃತರಾಷ್ಟ್ರನು ದ್ರೌಪದಿಗೆ ವರಗಳನ್ನು ನೀಡುವುದು (25-36).

02063001 ಕರ್ಣ ಉವಾಚ।
02063001a ತ್ರಯಃ ಕಿಲೇಮೇ ಅಧನಾ ಭವಂತಿ ದಾಸಃ ಶಿಷ್ಯಶ್ಚಾಸ್ವತಂತ್ರಾ ಚ ನಾರೀ।
02063001c ದಾಸಸ್ಯ ಪತ್ನೀ ತ್ವಂ ಧನಮಸ್ಯ ಭದ್ರೇ ಹೀನೇಶ್ವರಾ ದಾಸಧನಂ ಚ ದಾಸೀ।।

ಕರ್ಣನು ಹೇಳಿದನು: “ದಾಸ, ಶಿಷ್ಯ ಮತ್ತು ಅಸ್ವತಂತ್ರ ನಾರಿ - ಈ ಮೂವರು ಅಧನರು. ಭದ್ರೇ! ದಾಸನ ಪತ್ನಿಯಾದ ನೀನು ಇವನ ಧನ. ಹೀನೇಶ್ವರಳಾದ ದಾಸಿಯೇ! ನೀನು ದಾಸಧನ.

02063002a ಪ್ರವಿಶ್ಯ ಸಾ ನಃ ಪರಿಚಾರೈರ್ಭಜಸ್ವ ತತ್ತೇ ಕಾರ್ಯಂ ಶಿಷ್ಟಮಾವೇಶ್ಯ ವೇಶ್ಮ।
02063002c ಈಶಾಃ ಸ್ಮ ಸರ್ವೇ ತವ ರಾಜಪುತ್ರಿ ಭವಂತಿ ತೇ ಧಾರ್ತರಾಷ್ಟ್ರಾ ನ ಪಾರ್ಥಾಃ।।

ಇವನ ಮನೆಯನ್ನು ಪ್ರವೇಶಿಸಿ ಪರಿಚಾರ ಸೇವೆಗಳನ್ನು ಮಾಡು. ಅದೊಂದು ಕಾರ್ಯವು ಉಳಿದುಕೊಂಡಿದೆ. ರಾಜಪುತ್ರಿ! ಈಗ ಈ ಎಲ್ಲ ಧಾರ್ತರಾಷ್ಟ್ರರೂ ನಿನ್ನ ಒಡೆಯರು. ಪಾರ್ಥರಲ್ಲ.

02063003a ಅನ್ಯಂ ವೃಣೀಷ್ವ ಪತಿಮಾಶು ಭಾಮಿನಿ ಯಸ್ಮಾದ್ದಾಸ್ಯಂ ನ ಲಭಸೇ ದೇವನೇನ।
02063003c ಅನವದ್ಯಾ ವೈ ಪತಿಷು ಕಾಮವೃತ್ತಿರ್ ನಿತ್ಯಂ ದಾಸ್ಯೇ ವಿದಿತಂ ವೈ ತವಾಸ್ತು।।

ಭಾಮಿನಿ! ನಿನ್ನ ಸ್ವಾತಂತ್ರ್ಯವನ್ನು ಪಣವನ್ನಾಗಿಡದಂಥಹ ಬೇರೆ ಯಾರನ್ನಾದರೂ ನಿನ್ನ ಪತಿಯನ್ನಾಗಿ ಆರಿಸಿಕೋ. ಪತಿಯ ಸೇವೆ ಮಾಡುವುದು ಅನವದ್ಯವಲ್ಲ. ನಿನ್ನನ್ನು ನಿತ್ಯ ದಾಸಿಯಾಗಿ ತಿಳಿಯುತ್ತೇವೆ.

02063004a ಪರಾಜಿತೋ ನಕುಲೋ ಭೀಮಸೇನೋ ಯುಧಿಷ್ಠಿರಃ ಸಹದೇವೋಽರ್ಜುನಶ್ಚ।
02063004c ದಾಸೀಭೂತಾ ಪ್ರವಿಶ ಯಾಜ್ಞಸೇನಿ ಪರಾಜಿತಾಸ್ತೇ ಪತಯೋ ನ ಸಂತಿ।।

ನಕುಲ, ಭೀಮಸೇನ, ಯುಧಿಷ್ಠಿರ, ಸಹದೇವ ಮತ್ತು ಅರ್ಜುನರು ಪರಾಜಿತರಾಗಿದ್ದಾರೆ. ಯಾಜ್ಞಸೇನೆ! ದಾಸಿಯಾಗಿ ಒಳಗೆ ಬಾ. ಪರಾಜಿತರಾದವರು ನಿನ್ನ ಪತಿಗಳಾಗಿ ಉಳಿದಿಲ್ಲ.

02063005a ಪ್ರಯೋಜನಂ ಚಾತ್ಮನಿ ಕಿಂ ನು ಮನ್ಯತೇ ಪರಾಕ್ರಮಂ ಪೌರುಷಂ ಚೇಹ ಪಾರ್ಥಃ।
02063005c ಪಾಂಚಾಲ್ಯಸ್ಯ ದ್ರುಪದಸ್ಯಾತ್ಮಜಾಮಿಮಾಂ ಸಭಾಮಧ್ಯೇ ಯೋಽತಿದೇವೀದ್ಗ್ಲಹೇಷು।।

ಪಾರ್ಥನ ಪರಾಕ್ರಮ-ಪೌರುಷವೆಲ್ಲ ಅವನ ಸ್ವಂತ ಪ್ರಯೋಜನಕ್ಕೇ ಬರುತ್ತಿಲ್ಲ. ಪಾಂಚಾಲ ದ್ರುಪದನ ಈ ಮಗಳನ್ನು ಸಭಾಮಧ್ಯದಲ್ಲಿ ಜೂಜಿನ ಪಣವನ್ನಾಗಿಟ್ಟು ಕಳೆದುಕೊಂಡ!””

02063006 ವೈಶಂಪಾಯನ ಉವಾಚ।
02063006a ತದ್ವೈ ಶ್ರುತ್ವಾ ಭೀಮಸೇನೋಽತ್ಯಮರ್ಷೀ ಭೃಶಂ ನಿಶಶ್ವಾಸ ತದಾರ್ತರೂಪಃ।
02063006c ರಾಜಾನುಗೋ ಧರ್ಮಪಾಶಾನುಬದ್ಧೋ ದಹನ್ನಿವೈನಂ ಕೋಪವಿರಕ್ತದೃಷ್ಟಿಃ।।

ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಅತಿಕುಪಿತನಾದ ಭೀಮಸೇನನು ಸಹಿಸಲಾಗದೇ ನಿಟ್ಟುಸಿರು ಬಿಡುತ್ತಾ ಆರ್ತರೂಪಿ ಧರ್ಮಪಾಶಗಳಿಂದ ಬದ್ಧ ರಾಜನನ್ನು ಸುಡುತ್ತಿರುವನೋ ಎನ್ನುವಂತೆ ಕೋಪವಿರಕ್ತ ದೃಷ್ಠಿಯಿಂದ ನೋಡಿದನು.

02063007 ಭೀಮ ಉವಾಚ।
02063007a ನಾಹಂ ಕುಪ್ಯೇ ಸೂತಪುತ್ರಸ್ಯ ರಾಜನ್ನ್ ಏಷ ಸತ್ಯಂ ದಾಸಧರ್ಮಃ ಪ್ರವಿಷ್ಟಃ।
02063007c ಕಿಂ ವಿದ್ವಿಷೋ ವಾದ್ಯ ಮಾಂ ಧಾರಯೇಯುರ್ ನಾದೇವೀಸ್ತ್ವಂ ಯದ್ಯನಯಾ ನರೇಂದ್ರ।।

ಭೀಮನು ಹೇಳಿದನು: “ರಾಜನ್! ನಾನು ಸೂತಪುತ್ರನ ಮೇಲೆ ಕುಪಿತನಾಗಿಲ್ಲ. ಯಾಕೆಂದರೆ ನಾವು ದಾಸಧರ್ಮವನ್ನು ಪಡೆದಿರುವುದು ಸತ್ಯ. ನರೇಂದ್ರ! ಆದರೆ ನೀನು ಅವಳನ್ನು ಪಣವಾಗಿ ಎಸೆಯದಿದ್ದರೆ ನನ್ನನ್ನು ಈ ರೀತಿ ಇವರು ಬಂಧನದಲ್ಲಿಡಲು ಸಾಧ್ಯವಾಗುತ್ತಿತ್ತೇ?””

02063008 ವೈಶಂಪಾಯನ ಉವಾಚ।
02063008a ರಾಧೇಯಸ್ಯ ವಚಃ ಶ್ರುತ್ವಾ ರಾಜಾ ದುರ್ಯೋಧನಸ್ತದಾ।
02063008c ಯುಧಿಷ್ಠಿರಮುವಾಚೇದಂ ತೂಷ್ಣೀಂಭೂತಮಚೇತಸಂ।।

ವೈಶಂಪಾಯನನು ಹೇಳಿದನು: “ರಾಧೇಯನ ಮಾತುಗಳನ್ನು ಕೇಳಿದ ರಾಜ ದುರ್ಯೋಧನನು ಜೀವವಿಲ್ಲದವನಂತೆ ಸುಮ್ಮನೆ ಕುಳಿತಿದ್ದ ಯುಧಿಷ್ಠಿರನಿಗೆ ಹೇಳಿದನು:

02063009a ಭೀಮಾರ್ಜುನೌ ಯಮೌ ಚೈವ ಸ್ಥಿತೌ ತೇ ನೃಪ ಶಾಸನೇ।
02063009c ಪ್ರಶ್ನಂ ಪ್ರಬ್ರೂಹಿ ಕೃಷ್ಣಾಂ ತ್ವಮಜಿತಾಂ ಯದಿ ಮನ್ಯಸೇ।।

“ನೃಪ! ಭೀಮಾರ್ಜುನರು ಮತ್ತು ಯಮಳರು ನಿನ್ನ ಶಾಸನವನ್ನು ಅನುಸರಿಸುತ್ತಾರೆ. ಪ್ರಶ್ನೆಗೆ ಉತ್ತರಿಸು. ನಾವು ಕೃಷ್ಣೆಯನ್ನು ಗೆದ್ದಿದ್ದೇವೆ ಎಂದು ನಿನಗನಿಸುತ್ತದೆಯೇ?”

02063010a ಏವಮುಕ್ತ್ವಾ ಸ ಕೌಂತೇಯಮಪೋಹ್ಯ ವಸನಂ ಸ್ವಕಂ।
02063010c ಸ್ಮಯನ್ನಿವೈಕ್ಷತ್ಪಾಂಚಾಲೀಮೈಶ್ವರ್ಯಮದಮೋಹಿತಃ।।

ಈ ರೀತಿ ಕೌಂತೇಯನಿಗೆ ಹೇಳಿ ಆ ಐಶ್ವರ್ಯಮದಮೋಹಿತನು ತನ್ನ ವಸ್ತ್ರವನ್ನು ಮೇಲೆತ್ತಿ ಕರೆಯುವ ದೃಷ್ಠಿಯಿಂದ ದ್ರೌಪದಿಯತ್ತ ನೋಡಿದನು.

02063011a ಕದಲೀದಂಡಸದೃಶಂ ಸರ್ವಲಕ್ಷಣಪೂಜಿತಂ।
02063011c ಗಜಹಸ್ತಪ್ರತೀಕಾಶಂ ವಜ್ರಪ್ರತಿಮಗೌರವಂ।।
02063012a ಅಭ್ಯುತ್ಸ್ಮಯಿತ್ವಾ ರಾಧೇಯಂ ಭೀಮಮಾಧರ್ಷಯನ್ನಿವ।
02063012c ದ್ರೌಪದ್ಯಾಃ ಪ್ರೇಕ್ಷಮಾಣಾಯಾಃ ಸವ್ಯಮೂರುಮದರ್ಶಯತ್।।

ರಾಧೇಯನೊಂದಿಗೆ ಚೇಷ್ಟೆಯಾಡುತ್ತಾ ಭೀಮಸೇನನನ್ನು ಸಿಟ್ಟಿಗೇಳಿಸಲು, ಅವನು ಬಾಳೆಯದಿಂಡಿನಂತಿದ್ದ, ಸರ್ವಲಕ್ಷಣಪೂಜಿತ, ಆನೆಯ ಸೊಂಡಿಲಿನಂತಿದ್ದ, ವಜ್ರಪ್ರತಿಮ, ಗೌರವಯುಕ್ತ ತನ್ನ ಎಡ ತೊಡೆಯನ್ನು ದ್ರೌಪದಿಗೆ ತೋರಿಸಿದನು.

02063013a ವೃಕೋದರಸ್ತದಾಲೋಕ್ಯ ನೇತ್ರೇ ಉತ್ಫಾಲ್ಯ ಲೋಹಿತೇ।
02063013c ಪ್ರೋವಾಚ ರಾಜಮಧ್ಯೇ ತಂ ಸಭಾಂ ವಿಶ್ರಾವಯನ್ನಿವ।।

ಅದನ್ನು ನೋಡಿದ ವೃಕೋದರನು ತನ್ನ ಕೆಂಪು ಕಣ್ಣುಗಳನ್ನು ಅರಳಿಸಿ ಸಭೆಯಲ್ಲಿದ್ದ ರಾಜರೆಲ್ಲರಿಗೂ ಕೇಳುವ ಹಾಗೆ ಕೂಗಿ ಹೇಳಿದನು:

02063014a ಪಿತೃಭಿಃ ಸಹ ಸಾಲೋಕ್ಯಂ ಮಾ ಸ್ಮ ಗಚ್ಛೇದ್ವೃಕೋದರಃ।
02063014c ಯದ್ಯೇತಮೂರುಂ ಗದಯಾ ನ ಭಿಂದ್ಯಾಂ ತೇ ಮಹಾಹವೇ।।

“ಮಹಾಯುದ್ಧದಲ್ಲಿ ನಾನು ಇವನ ಆ ತೊಡೆಯನ್ನು ಗದೆಯಿಂದ ಹೊಡೆದು ತುಂಡುಮಾಡದಿದ್ದರೆ ಈ ವೃಕೋದರನು ತನ್ನ ಪಿತೃಗಳ ಲೋಕವನ್ನು ಸೇರದಿರಲಿ!”

02063015a ಕ್ರುದ್ಧಸ್ಯ ತಸ್ಯ ಸ್ರೋತೋಭ್ಯಃ ಸರ್ವೇಭ್ಯಃ ಪಾವಕಾರ್ಚಿಷಃ।
02063015c ವೃಕ್ಷಸ್ಯೇವ ವಿನಿಶ್ಚೇರುಃ ಕೋಟರೇಭ್ಯಃ ಪ್ರದಹ್ಯತಃ।।

ಅವನು ಈ ರೀತಿ ಹೇಳುತ್ತಿದ್ದಂತೆ ಪೊಳ್ಳು ಮರದ ಕೊಟರೆಯಿಂದ ಹೇಗೋ ಹಾಗೆ ಆ ಕೃದ್ಧನ ದೇಹದ ಎಲ್ಲ ರಂಧ್ರಗಳಿಂದ ಬೆಂಕಿಯು ಹೊರಬಿದ್ದಿತು.

02063016 ವಿದುರ ಉವಾಚ।
02063016a ಪರಂ ಭಯಂ ಪಶ್ಯತ ಭೀಮಸೇನಾದ್ ಬುಧ್ಯಧ್ವಂ ರಾಜ್ಞೋ ವರುಣಸ್ಯೇವ ಪಾಶಾತ್।
02063016c ದೈವೇರಿತೋ ನೂನಮಯಂ ಪುರಸ್ತಾತ್ ಪರೋಽನಯೋ ಭರತೇಷೂದಪಾದಿ।।

ವಿದುರನು ಹೇಳಿದನು: “ರಾಜರೇ! ಈ ಮಹಾ ಭಯಂಕರ ಭೀಮಸೇನನನ್ನು ನೋಡಿ! ಇವನು ವರುಣನ ಪಾಶದಂತೆಯೇ ತೋರುತ್ತಿದ್ದಾನೆ. ಇದು ಈ ಪುರಾತನ ಭರತವಂಶಕ್ಕೆ ದೈವವು ಮೊದಲೇ ನೀಡಿದ ಒಂದು ದುರ್ಭಾಗ್ಯವಾಗಿರಬಹುದು.

02063017a ಅತಿದ್ಯೂತಂ ಕೃತಮಿದಂ ಧಾರ್ತರಾಷ್ಟ್ರಾ ಯೇಽಸ್ಯಾಂ ಸ್ತ್ರಿಯಂ ವಿವದಧ್ವಂ ಸಭಾಯಾಂ।
02063017c ಯೋಗಕ್ಷೇಮೋ ದೃಶ್ಯತೇ ವೋ ಮಹಾಭಯಃ ಪಾಪಾನ್ಮಂತ್ರಾನ್ಕುರವೋ ಮಂತ್ರಯಂತಿ।।

ಧಾರ್ತರಾಷ್ಟ್ರರೇ! ಸಭೆಯಲ್ಲಿ ಈ ಸ್ತ್ರೀಗಾಗಿ ನಡೆಸಿದ ನಿಮ್ಮ ಅತಿದ್ಯೂತವನ್ನು ಸಾಕುಮಾಡಿ. ಕುರುಗಳೇ! ಪಾಪವನ್ನು ಯೋಜಿಸಿ ಕಾರ್ಯಗತಗೊಳಿಸಿದ ನಿಮ್ಮ ಯೋಗಕ್ಷೇಮಕ್ಕೆ ಮಹಾಭಯವೊಂದು ಗೋಚರವಾಗುತ್ತಿದೆ.

02063018a ಇಮಂ ಧರ್ಮಂ ಕುರವೋ ಜಾನತಾಶು ದುರ್ದೃಷ್ಟೇಽಸ್ಮಿನ್ಪರಿಷತ್ಸಂಪ್ರದುಷ್ಯೇತ್।
02063018c ಇಮಾಂ ಚೇತ್ಪೂರ್ವಂ ಕಿತವೋಽಗ್ಲಹೀಷ್ಯದ್ ಈಶೋಽಭವಿಷ್ಯದಪರಾಜಿತಾತ್ಮಾ।।

ಕುರುಗಳೇ! ಬೇಗನೆ ಇದರ ಕುರಿತು ಧರ್ಮವು ಏನು ಹೇಳುತ್ತದೆ ಎನ್ನುವುದನ್ನು ನಿರ್ಧಾರಮಾಡಿ. ಆ ನಿರ್ಧಾರವು ಸರಿಯಾಗಿರದಿದ್ದರೆ ಈ ಸಭೆಯು ಅನುಭವಿಸುತ್ತದೆ. ಈ ಜೂಜುಗಾರನು ತಾನು ಪರಾಜಿತನಾಗುವುದರ ಮೊದಲೇ ಇವಳನ್ನು ಪಣವನ್ನಾಗಿಟ್ಟಿದ್ದರೆ ಅವನು ಅವಳ ಒಡೆಯನಾಗಿರುತ್ತಿದ್ದನು.

02063019a ಸ್ವಪ್ನೇ ಯಥೈತದ್ಧಿ ಧನಂ ಜಿತಂ ಸ್ಯಾತ್ ತದೇವಂ ಮನ್ಯೇ ಯಸ್ಯ ದೀವ್ಯತ್ಯನೀಶಃ।
02063019c ಗಾಂಧಾರಿಪುತ್ರಸ್ಯ ವಚೋ ನಿಶಮ್ಯ ಧರ್ಮಾದಸ್ಮಾತ್ಕುರವೋ ಮಾಪಯಾತ।।

ಯಾವುದರ ಮೇಲೆ ತನಗೆ ಒಡೆತನವೇ ಇಲ್ಲವೋ ಅದನ್ನು ಪಣವಾಗಿಟ್ಟು ಗೆದ್ದೆನೆಂದರೆ ಕನಸಿನಲ್ಲಿ ಗೆದ್ದ ಪಣವೂ ಧನವಾಗಿರುತ್ತಿತ್ತು. ಕುರುಗಳೇ! ಗಾಂಧಾರಿಪುತ್ರನ ಮಾತುಗಳನ್ನು ಕೇಳಿದ ನೀವು ಇದರ ಕುರಿತಾದ ಧರ್ಮನಿರ್ಣಯವನ್ನು ಹೇಳಿ.”

02063020 ದುರ್ಯೋಧನ ಉವಾಚ।
02063020a ಭೀಮಸ್ಯ ವಾಕ್ಯೇ ತದ್ವದೇವಾರ್ಜುನಸ್ಯ ಸ್ಥಿತೋಽಹಂ ವೈ ಯಮಯೋಶ್ಚೈವಮೇವ।
02063020c ಯುಧಿಷ್ಠಿರಂ ಚೇತ್ಪ್ರವದಂತ್ಯನೀಶಂ ಅಥೋ ದಾಸ್ಯಾನ್ಮೋಕ್ಷ್ಯಸೇ ಯಾಜ್ಞಸೇನಿ।।

ದುರ್ಯೋಧನನು ಹೇಳಿದನು: “ಭೀಮನ ವಾಕ್ಯ, ಹಾಗೆಯೇ ಅರ್ಜುನನ ಮತ್ತು ಯಮಳರ ಮಾತಿನಂತೆ ನಾವು ನಡೆದುಕೊಳ್ಳೋಣ. ಒಂದು ವೇಳೆ ಯುಧಿಷ್ಠಿರನು ಅವರ ಒಡೆಯನಾಗಿರಲಿಲ್ಲ ಎಂದು ಅವರು ಹೇಳಿದರೆ, ಯಾಜ್ಞಸೇನಿ! ನೀನು ದಾಸತ್ವದಿಂದ ಮುಕ್ತಳಾಗುತ್ತೀಯೆ.”

02063021 ಅರ್ಜುನ ಉವಾಚ।
02063021a ಈಶೋ ರಾಜಾ ಪೂರ್ವಮಾಸೀದ್ಗ್ಲಹೇ ನಃ ಕುಂತೀಪುತ್ರೋ ಧರ್ಮರಾಜೋ ಮಹಾತ್ಮಾ।
02063021c ಈಶಸ್ತ್ವಯಂ ಕಸ್ಯ ಪರಾಜಿತಾತ್ಮಾ ತಜ್ಜಾನೀಧ್ವಂ ಕುರವಃ ಸರ್ವ ಏವ।।

ಅರ್ಜುನನು ಹೇಳಿದನು: “ನಮ್ಮನ್ನು ಪಣವನ್ನಾಗಿ ಇಡುವುದಕ್ಕೆ ಮೊದಲು ರಾಜ ಮಹಾತ್ಮ ಕುಂತೀಪುತ್ರ ಧರ್ಮರಾಜನು ನಮ್ಮ ಒಡೆಯನಾಗಿದ್ದನು. ಆದರೆ ತನ್ನನ್ನು ತಾನೇ ಕಳೆದುಕೊಂಡವನು ಯಾರ ಒಡೆಯ? ಇದನ್ನೇ ನೀವು ಸರ್ವ ಕುರುಗಳೂ ನಿರ್ಧಾರ ಮಾಡಬೇಕು.””

02063022 ವೈಶಂಪಾಯನ ಉವಾಚ।
02063022a ತತೋ ರಾಜ್ಞೋ ಧೃತರಾಷ್ಟ್ರಸ್ಯ ಗೇಹೇ ಗೋಮಾಯುರುಚ್ಚೈರ್ವ್ಯಾಹರದಗ್ನಿಹೋತ್ರೇ।
02063022c ತಂ ರಾಸಭಾಃ ಪ್ರತ್ಯಭಾಷಂತ ರಾಜನ್ ಸಮಂತತಃ ಪಕ್ಷಿಣಶ್ಚೈವ ರೌದ್ರಾಃ।।

ವೈಶಂಪಾಯನನು ಹೇಳಿದನು: “ರಾಜನ್! ಆಗ ಅಲ್ಲಿ ರಾಜ ಧೃತರಾಷ್ಟ್ರನ ಗೃಹದ ಅಗ್ನಿಹೋತ್ರದ ಬಳಿ ನರಿಯೊಂದು ಕೂಗಿತು. ಅದಕ್ಕೆ ಪ್ರತ್ಯುತ್ತರವಾಗಿ ಕತ್ತೆಗಳು ಒದರಿದವು. ಅದೇ ಸಮಯದಲ್ಲಿ ಎಲ್ಲಕಡೆಗಳಿಂದ ಪಕ್ಷಿಗಳ ರೋದನವು ಕೇಳಿಬಂದಿತು.

02063023a ತಂ ಚ ಶಬ್ಧಂ ವಿದುರಸ್ತತ್ತ್ವವೇದೀ ಶುಶ್ರಾವ ಘೋರಂ ಸುಬಲಾತ್ಮಜಾ ಚ।
02063023c ಭೀಷ್ಮದ್ರೋಣೌ ಗೌತಮಶ್ಚಾಪಿ ವಿದ್ವಾನ್ ಸ್ವಸ್ತಿ ಸ್ವಸ್ತೀತ್ಯಪಿ ಚೈವಾಹುರುಚ್ಚೈಃ।।

ಆ ಘೋರ ಶಬ್ಧವನ್ನು ತತ್ವವಾದಿ ವಿದುರನು ಕೇಳಿದನು. ಹಾಗೆಯೇ ಸುಬಲಾತ್ಮಜನೂ, ಭೀಷ್ಮ-ದ್ರೋಣರೂ, ಮತ್ತು ವಿದ್ವಾನ್ ಗೌತಮನೂ ಕೇಳಿದರು. ಅವರು ಜೋರಾಗಿ “ಸ್ವಸ್ತಿ! ಸ್ವಸ್ತಿ!” ಎಂದು ಕೂಗಿದರು.

02063024a ತತೋ ಗಾಂಧಾರೀ ವಿದುರಶ್ಚೈವ ವಿದ್ವಾಂಸ್ ತಮುತ್ಪಾತಂ ಘೋರಮಾಲಕ್ಷ್ಯ ರಾಜ್ಞೇ।
02063024c ನಿವೇದಯಾಮಾಸತುರಾರ್ತವತ್ತದಾ ತತೋ ರಾಜಾ ವಾಕ್ಯಮಿದಂ ಬಭಾಷೇ।।

ವಿದ್ವಾಂಸ ವಿದುರ ಮತ್ತು ಗಾಂಧಾರಿ ಇಬ್ಬರೂ ಆ ಘೋರ ಉತ್ಪಾತಗಳು ತೋರಿದುದನ್ನು ತಕ್ಷಣವೇ ರಾಜನಿಗೆ ಹೇಳಿದ ನಂತರ ರಾಜನು ಈ ಮಾತುಗಳನ್ನಾಡಿದನು:

02063025a ಹತೋಽಸಿ ದುರ್ಯೋಧನ ಮಂದಬುದ್ಧೇ ಯಸ್ತ್ವಂ ಸಭಾಯಾಂ ಕುರುಪುಂಗವಾನಾಂ।
02063025c ಸ್ತ್ರಿಯಂ ಸಮಾಭಾಷಸಿ ದುರ್ವಿನೀತ ವಿಶೇಷತೋ ದ್ರೌಪದೀಂ ಧರ್ಮಪತ್ನೀಂ।।

“ಮಂದಬುದ್ಧಿ! ದುರ್ಯೋಧನ! ಕುರುಪುಂಗವರ ಈ ಸಭೆಯಲ್ಲಿ ಸರಿಯಾಗಿಯೇ ಮಾತನಾಡುತ್ತಿರುವ ಸ್ತ್ರೀಯೊಂದಿಗೆ ಅದರಲ್ಲೂ ವಿಶೇಷವಾಗಿ ಧರ್ಮನ ಪತ್ನಿ ದ್ರೌಪದಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಿದ್ದುದರಿಂದ ಸೋತವನು ನೀನೇ!”

02063026a ಏವಮುಕ್ತ್ವಾ ಧೃತರಾಷ್ಟ್ರೋ ಮನೀಷೀ ಹಿತಾನ್ವೇಷೀ ಬಾಂಧವಾನಾಮಪಾಯಾತ್।
02063026c ಕೃಷ್ಣಾಂ ಪಾಂಚಾಲೀಮಬ್ರವೀತ್ಸಾಂತ್ವಪೂರ್ವಂ ವಿಮೃಶ್ಯೈತತ್ಪ್ರಜ್ಞಯಾ ತತ್ತ್ವಬುದ್ಧಿಃ।।

ಹೀಗೆ ಹೇಳಿದ ಮನೀಷಿ ಧೃತರಾಷ್ಟ್ರನು ಬಾಂಧವ ಪತ್ನಿ ಕೃಷ್ಣಾ ಪಾಂಚಾಲಿಯನ್ನು ಸಂತವಿಸುವ ಉದ್ದೇಶದಿಂದ ಪ್ರಜ್ಞೆಯ ತತ್ವಬುದ್ಧಿಯನ್ನು ಸೂಚಿಸುವ ಮಾತುಗಳನ್ನಾಡಿದನು.

02063027 ಧೃತರಾಷ್ಟ್ರ ಉವಾಚ।
02063027a ವರಂ ವೃಣೀಷ್ವ ಪಾಂಚಾಲಿ ಮತ್ತೋ ಯದಭಿಕಾಂಕ್ಷಸಿ।
02063027c ವಧೂನಾಂ ಹಿ ವಿಶಿಷ್ಟಾ ಮೇ ತ್ವಂ ಧರ್ಮಪರಮಾ ಸತೀ।।

ಧೃತರಾಷ್ಟ್ರನು ಹೇಳಿದನು: “ಪಾಂಚಾಲಿ! ಪರಮ ಧಾರ್ಮಿಕ ಸತಿಯಾದ ನೀನು ನನ್ನ ಸೊಸೆಯಂದಿರಲ್ಲಿಯೇ ವಿಶಿಷ್ಠಳಾಗಿದ್ದೀಯೆ. ನನ್ನಿಂದ ನೀನು ಬಯಸುವ ವರವನ್ನು ಪಡೆ.”

02063028 ದ್ರೌಪದ್ಯುವಾಚ।
02063028a ದದಾಸಿ ಚೇದ್ವರಂ ಮಹ್ಯಂ ವೃಣೋಮಿ ಭರತರ್ಷಭ।
02063028c ಸರ್ವಧರ್ಮಾನುಗಃ ಶ್ರೀಮಾನದಾಸೋಽಸ್ತು ಯುಧಿಷ್ಠಿರಃ।।

ದ್ರೌಪದಿಯು ಹೇಳಿದಳು: “ಭರತರ್ಷಭ! ವರವೊಂದನ್ನು ನನಗೆ ಕೊಡುವುದಾದರೆ ಸರ್ವಧರ್ಮಾನುಗ ಶ್ರೀಮಾನ್ ಯುಧಿಷ್ಠಿರನು ಅದಾಸನಾಗಲಿ.

02063029a ಮನಸ್ವಿನಮಜಾನಂತೋ ಮಾ ವೈ ಬ್ರೂಯುಃ ಕುಮಾರಕಾಃ।
02063029c ಏಷ ವೈ ದಾಸಪುತ್ರೇತಿ ಪ್ರತಿವಿಂಧ್ಯಂ ತಮಾಗತಂ।।

ತಿಳಿಯದವರು ಮನಸ್ವಿ ಪ್ರತಿವಿಂಧ್ಯನನ್ನು “ಇಗೋ ಇವನು ದಾಸಪುತ್ರ!” ಎಂದು ಕರೆಯದಂತಾಗದಿರಲಿ!

02063030a ರಾಜಪುತ್ರಃ ಪುರಾ ಭೂತ್ವಾ ಯಥಾ ನಾನ್ಯಃ ಪುಮಾನ್ಕ್ವ ಚಿತ್।
02063030c ಲಾಲಿತೋ ದಾಸಪುತ್ರತ್ವಂ ಪಶ್ಯನ್ನಶ್ಯೇದ್ಧಿ ಭಾರತ।।

ಭಾರತ! ಈ ವರೆಗೆ ಬೇರೆ ಯಾವ ಪುರುಷನೂ ಅವನಂತೆ ಲಾಲಿತನಾಗಿಲ್ಲ. ಅವನು ತನ್ನ ದಾಸಪುತ್ರತ್ವವನ್ನು ನೋಡಿ ಸತ್ತೇಹೋಗುತ್ತಾನೆ!”

02063031 ಧೃತರಾಷ್ಟ್ರ ಉವಾಚ।
02063031a ದ್ವಿತೀಯಂ ತೇ ವರಂ ಭದ್ರೇ ದದಾಮಿ ವರಯಸ್ವ ಮಾಂ।
02063031c ಮನೋ ಹಿ ಮೇ ವಿತರತಿ ನೈಕಂ ತ್ವಂ ವರಮರ್ಹಸಿ।।

ಧೃತರಾಷ್ಟ್ರನು ಹೇಳಿದನು: “ಭದ್ರೇ! ನಾನು ನಿನಗೆ ಎರಡನೇ ವರವನ್ನು ಕೊಡುತ್ತೇನೆ. ಕೇಳಿಕೋ. ನೀನು ಒಂದೇ ಒಂದು ವರಕ್ಕೆ ಅರ್ಹಳಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ.”

02063032 ದ್ರೌಪದ್ಯುವಾಚ।
02063032a ಸರಥೌ ಸಧನುಷ್ಕೌ ಚ ಭೀಮಸೇನಧನಂಜಯೌ।
02063032c ನಕುಲಂ ಸಹದೇವಂ ಚ ದ್ವಿತೀಯಂ ವರಯೇ ವರಂ।।

ದ್ರೌಪದಿಯು ಹೇಳಿದಳು: “ನನ್ನ ಎರಡನೆಯ ವರವಾಗಿ ನಾನು ರಥ-ಧನುಸ್ಸುಗಳೊಂದಿಗೆ ಭೀಮಸೇನ, ಧನಂಜಯ ಮತ್ತು ನಕುಲ ಸಹದೇವರನ್ನು ಕೇಳಿಕೊಳ್ಳುತ್ತೇನೆ.”

02063033 ಧೃತರಾಷ್ಟ್ರ ಉವಾಚ।
02063033a ತೃತೀಯಂ ವರಯಾಸ್ಮತ್ತೋ ನಾಸಿ ದ್ವಾಭ್ಯಾಂ ಸುಸತ್ಕೃತಾ।
02063033c ತ್ವಂ ಹಿ ಸರ್ವಸ್ನುಷಾಣಾಂ ಮೇ ಶ್ರೇಯಸೀ ಧರ್ಮಚಾರಿಣೀ।।

ಧೃತರಾಷ್ಟ್ರನು ಹೇಳಿದನು: “ಮೂರನೆಯ ವರವನ್ನೂ ಕೇಳು. ನೀನು ಎರಡೇ ಎರಡು ವರಗಳಿಂದ ಸುಸತ್ಕೃತಳಾದೆಯೆಂದು ಅನಿಸುವುದಿಲ್ಲ. ಧರ್ಮಚಾರಿಣಿಯಾದ ನೀನು ನನ್ನ ಎಲ್ಲ ಸೊಸೆಯಂದಿರಲ್ಲಿ ಶ್ರೇಯಸಿ.”

02063034 ದ್ರೌಪದ್ಯುವಾಚ।
02063034a ಲೋಭೋ ಧರ್ಮಸ್ಯ ನಾಶಾಯ ಭಗವನ್ನಾಹಮುತ್ಸಹೇ।
02063034c ಅನರ್ಹಾ ವರಮಾದಾತುಂ ತೃತೀಯಂ ರಾಜಸತ್ತಮ।।

ದ್ರೌಪದಿಯು ಹೇಳಿದಳು: “ಭಗವನ್! ಲೋಭವು ಧರ್ಮವನ್ನು ನಾಶಪಡಿಸುತ್ತದೆ. ರಾಜಸತ್ತಮ! ನಾನು ಮೂರನೆಯ ವರವನ್ನು ಪಡೆಯಲು ಅನರ್ಹಳು.

02063035a ಏಕಮಾಹುರ್ವೈಶ್ಯವರಂ ದ್ವೌ ತು ಕ್ಷತ್ರಸ್ತ್ರಿಯಾ ವರೌ।
02063035c ತ್ರಯಸ್ತು ರಾಜ್ಞೋ ರಾಜೇಂದ್ರ ಬ್ರಾಹ್ಮಣಸ್ಯ ಶತಂ ವರಾಃ।।

ರಾಜನ್! ವೈಶ್ಯೆಯ ಪತ್ನಿಗೆ ಒಂದೇ ವರ, ಕ್ಷತ್ರಿಯನ ಪತ್ನಿಗೆ ಎರಡು ವರಗಳು, ರಾಜನ ಪತ್ನಿಗೆ ಮೂರು ವರಗಳು ಮತ್ತು ಬ್ರಾಹ್ಮಣನ ಪತ್ನಿಗೆ ನೂರು ವರಗಳೆಂದು ಹೇಳುತ್ತಾರೆ.

02063036a ಪಾಪೀಯಾಂಸ ಇಮೇ ಭೂತ್ವಾ ಸಂತೀರ್ಣಾಃ ಪತಯೋ ಮಮ।
02063036c ವೇತ್ಸ್ಯಂತಿ ಚೈವ ಭದ್ರಾಣಿ ರಾಜನ್ಪುಣ್ಯೇನ ಕರ್ಮಣಾ।।

ರಾಜನ್! ಪಾಪೀಯಸರಾಗಿದ್ದ ನನ್ನ ಪತಿಗಳು ಈಗ ಪಾರಾಗಿದ್ದಾರೆ. ಇನ್ನು ಮುಂದೆ ಅವರೇ ತಮ್ಮ ಪುಣ್ಯ ಕರ್ಮಗಳಿಂದ ಒಳ್ಳೆಯದನ್ನು ಹೊಂದುತ್ತಾರೆ!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ರೌಪದೀವರಲಾಭೇ ತ್ರಿಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ರೌಪದೀವರಲಾಭ ಎನ್ನುವ ಅರವತ್ಮೂರನೆಯ ಅಧ್ಯಾಯವು.