062 ಭೀಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 62

ಸಾರ

ದ್ರೌಪದಿಯ ಪ್ರಲಾಪ ಮತ್ತು ಪ್ರಶ್ನೆ (1-13). ದ್ರೌಪದಿಯ ಪ್ರಶ್ನೆಗಳಿಗೆ ಯುಧಿಷ್ಠಿರನೇ ಉತ್ತರಿಸಬೇಕೆಂದು ಭೀಷ್ಮನು ಹೇಳುವುದು (14-21). ಯುಧಿಷ್ಠಿರನ ಉತ್ತರಕ್ಕೆ ಸಭೆಯು ಕಾಯುವುದು (22-30). ಉತ್ತರ ಬರದಿದ್ದಾಗ ಭೀಮನು ಕೋಪದಿಂದ ಮಾತನಾಡಿದುದು (31-38).

02062001 ದ್ರೌಪದ್ಯುವಾಚ।
02062001a ಪುರಸ್ತಾತ್ಕರಣೀಯಂ ಮೇ ನ ಕೃತಂ ಕಾರ್ಯಮುತ್ತರಂ।
02062001c ವಿಹ್ವಲಾಸ್ಮಿ ಕೃತಾನೇನ ಕರ್ಷತಾ ಬಲಿನಾ ಬಲಾತ್।।

ದ್ರೌಪದಿಯು ಹೇಳಿದಳು: “ಬಲಶಾಲಿಯು ಬಲಾತ್ಕಾರವಾಗಿ ಎಳೆದು ತರುವಾಗ ವಿಹ್ವಲಳಾದ ನಾನು ಮೊದಲೇ ಮಾಡಬೇಕಾಗಿದ್ದ ಒಂದು ಮಹೋತ್ತರ ಕಾರ್ಯವು ಉಳಿದುಬಿಟ್ಟಿದೆ.

02062002a ಅಭಿವಾದಂ ಕರೋಮ್ಯೇಷಾಂ ಗುರೂಣಾಂ ಕುರುಸಂಸದಿ।
02062002c ನ ಮೇ ಸ್ಯಾದಪರಾಧೋಽಯಂ ಯದಿದಂ ನ ಕೃತಂ ಮಯಾ।।

ಕುರುಸಂಸದಿಯಲ್ಲಿರುವ ಈ ಗುರುಗಳ ಅಭಿವಂದನೆಯನ್ನು ಮಾಡಬೇಕಾಗಿತ್ತು. ಇದು ನನ್ನ ಅಪರಾಧ ಎಂದು ತಿಳಿಯಬೇಡಿ. ಇದನ್ನು ಮೊದಲೇ ನಾನು ಮಾಡಲಿಲ್ಲ!””

02062003 ವೈಶಂಪಾಯನ ಉವಾಚ।
02062003a ಸಾ ತೇನ ಚ ಸಮುದ್ಧೂತಾ ದುಃಖೇನ ಚ ತಪಸ್ವಿನೀ।
02062003c ಪತಿತಾ ವಿಲಲಾಪೇದಂ ಸಭಾಯಾಮತಥೋಚಿತಾ।।

ವೈಶಂಪಾಯನನು ಹೇಳಿದನು: “ಅವನಿಂದ ಸಭೆಗೆ ಎಳೆದು ತರಲ್ಪಟ್ಟ ಆ ತಪಸ್ವಿನಿಯು ಉಚಿತವಾಗಿರದ ಆ ಅನುಭವದಿಂದ ದುಃಖಿತಳಾಗಿ ಬಿದ್ದು ವಿಲಪಿಸಿದಳು.

02062004 ದ್ರೌಪದ್ಯುವಾಚ।
02062004a ಸ್ವಯಂವರೇ ಯಾಸ್ಮಿ ನೃಪೈರ್ದೃಷ್ಟಾ ರಂಗೇ ಸಮಾಗತೈಃ।
02062004c ನ ದೃಷ್ಟಪೂರ್ವಾ ಚಾನ್ಯತ್ರ ಸಾಹಮದ್ಯ ಸಭಾಂ ಗತಾ।।

ದ್ರೌಪದಿಯು ಹೇಳಿದಳು: “ಸ್ವಯಂವರ ರಂಗದಲ್ಲಿ ಸಮಾಗಮಿಸಿದ್ದ ನೃಪರು ನೋಡಿದ ಮೊದಲು ಅಥವಾ ನಂತರ ನೋಡದೇ ಇದ್ದ ನನ್ನನ್ನು ಇಂದು ಸಭೆಗೆ ಎಳೆದು ತರಲಾಯಿತು.

02062005a ಯಾಂ ನ ವಾಯುರ್ನ ಚಾದಿತ್ಯೋ ದೃಷ್ಟವಂತೌ ಪುರಾ ಗೃಹೇ।
02062005c ಸಾಹಮದ್ಯ ಸಭಾಮಧ್ಯೇ ದೃಶ್ಯಾಮಿ ಕುರುಸಂಸದಿ।।
02062006a ಯಾಂ ನ ಮೃಷ್ಯಂತಿ ವಾತೇನ ಸ್ಪೃಶ್ಯಮಾನಾಂ ಪುರಾ ಗೃಹೇ।
02062006c ಸ್ಪೃಶ್ಯಮಾನಾಂ ಸಹಂತೇಽದ್ಯ ಪಾಂಡವಾಸ್ತಾಂ ದುರಾತ್ಮನಾ।।

ಇದಕ್ಕೆ ಮೊದಲು ನನ್ನ ಮನೆಯಲ್ಲಿ ವಾಯುವಾಗಲೀ ಆದಿತ್ಯನಾಗಲೀ ನೋಡದೇ ಇದ್ದ ನನ್ನನ್ನು ಕುರುಸಂಸದಿಯಲ್ಲಿ ಸಭಾಮಧ್ಯದಲ್ಲಿ ಎಳೆದು ತಂದು ಪ್ರದರ್ಶಿಸಲಾಗಿದೆ. ಇದಕ್ಕೆ ಮೊದಲು ನನ್ನ ಮನೆಯಲ್ಲಿ ವಾಯು ಸ್ಪರ್ಷವನ್ನೂ ಸಹಿಸಲಾರದ ಪಾಂಡವರು ಇಂದು ಈ ದುರಾತ್ಮನು ನನ್ನನ್ನು ಸ್ಪರ್ಷಿಸುವುದನ್ನು ಸಹಿಸಿಕೊಂಡಿದ್ದಾರೆ.

02062007a ಮೃಷ್ಯಂತೇ ಕುರವಶ್ಚೇಮೇ ಮನ್ಯೇ ಕಾಲಸ್ಯ ಪರ್ಯಯಂ।
02062007c ಸ್ನುಷಾಂ ದುಹಿತರಂ ಚೈವ ಕ್ಲಿಶ್ಯಮಾನಾಮನರ್ಹತೀಂ।।
02062008a ಕಿಂ ತ್ವತಃ ಕೃಪಣಂ ಭೂಯೋ ಯದಹಂ ಸ್ತ್ರೀ ಸತೀ ಶುಭಾ।
02062008c ಸಭಾಮಧ್ಯಂ ವಿಗಾಹೇಽದ್ಯ ಕ್ವ ನು ಧರ್ಮೋ ಮಹೀಕ್ಷಿತಾಂ।।

ಕೌರವರ ಕಾಲವು ಮುಗಿಯಲು ಬಂದಿದೆಯೆಂದು ನನಗನ್ನಿಸುತ್ತದೆ. ತಮ್ಮ ಅನರ್ಹ ಸೊಸೆ ಮತ್ತು ಹೆಣ್ಣುಮಕ್ಕಳಿಗೆ ಕಷ್ಟಕೊಡುತ್ತಿದ್ದಾರೆ. ಇಲ್ಲವಾದರೆ ಏಕೆ ಸತಿ ಮತ್ತು ಶುಭೆಯಾದ ನನ್ನನ್ನು ಈ ಸಭಾಮಧ್ಯದಲ್ಲಿ ಎಳೆದು ತಂದಿದ್ದಾರೆ? ಮಹೀಕ್ಷಿತರ ಧರ್ಮವೇ ಇಲ್ಲವಾಯಿತೆ?

02062009a ಧರ್ಮ್ಯಾಃ ಸ್ತ್ರಿಯಃ ಸಭಾಂ ಪೂರ್ವಂ ನ ನಯಂತೀತಿ ನಃ ಶ್ರುತಂ।
02062009c ಸ ನಷ್ಟಃ ಕೌರವೇಯೇಷು ಪೂರ್ವೋ ಧರ್ಮಃ ಸನಾತನಃ।।

ಹಿಂದೆ ಎಂದೂ ಧಾರ್ಮಿಕ ಸ್ತ್ರೀಯರನ್ನು ಸಭೆಗೆ ಕರೆತಂದಿದ್ದುದನ್ನು ಕೇಳಿಲ್ಲ. ಈ ಸನಾತನ ಧರ್ಮವು ಕೌರವರಲ್ಲಿ ನಶಿಸಿಹೋದಂತಿದೆ.

02062010a ಕಥಂ ಹಿ ಭಾರ್ಯಾ ಪಾಂಡೂನಾಂ ಪಾರ್ಷತಸ್ಯ ಸ್ವಸಾ ಸತೀ।
02062010c ವಾಸುದೇವಸ್ಯ ಚ ಸಖೀ ಪಾರ್ಥಿವಾನಾಂ ಸಭಾಮಿಯಾಂ।।

ಪಾಂಡವರ ಭಾರ್ಯೆ, ಪಾರ್ಷತನ ತಂಗಿ, ವಾಸುದೇವನ ಸಖಿ ಸತಿಯನ್ನು ಪಾರ್ಥಿವರ ಸಭೆಯಲ್ಲಿ ಏಕೆ ಎಳೆದು ತರಲಾಯಿತು?

02062011a ತಾಮಿಮಾಂ ಧರ್ಮರಾಜಸ್ಯ ಭಾರ್ಯಾಂ ಸದೃಶವರ್ಣಜಾಂ।
02062011c ಬ್ರೂತ ದಾಸೀಮದಾಸೀಂ ವಾ ತತ್ಕರಿಷ್ಯಾಮಿ ಕೌರವಾಃ।।

ಧರ್ಮರಾಜನ ಭಾರ್ಯೆ ಸದೃಶವರ್ಣಜಳಾದ ಇವಳು ದಾಸಿಯೋ ಅಥವಾ ದಾಸಿಯಲ್ಲವೋ ಹೇಳಿ ಕೌರವರೇ! ನಿಮ್ಮ ಹೇಳಿಕೆಯಂತೆ ನಡೆದುಕೊಳ್ಳುತ್ತೇನೆ.

02062012a ಅಯಂ ಹಿ ಮಾಂ ದೃಢಂ ಕ್ಷುದ್ರಃ ಕೌರವಾಣಾಂ ಯಶೋಹರಃ।
02062012c ಕ್ಲಿಶ್ನಾತಿ ನಾಹಂ ತತ್ಸೋಢುಂ ಚಿರಂ ಶಕ್ಷ್ಯಾಮಿ ಕೌರವಾಃ।।

ಕೌರವರೇ! ಈ ಕೌರವರ ಯಶೋಹರ ಕ್ಷುದ್ರನು ನನ್ನ ಮಾನಕಳೆಯುತ್ತಿದ್ದಾನೆ. ಇನ್ನು ಇದನ್ನು ನಾನು ಸಹಿಸಲಾರೆ.

02062013a ಜಿತಾಂ ವಾಪ್ಯಜಿತಾಂ ವಾಪಿ ಮನ್ಯಧ್ವಂ ವಾ ಯಥಾ ನೃಪಾಃ।
02062013c ತಥಾ ಪ್ರತ್ಯುಕ್ತಮಿಚ್ಛಾಮಿ ತತ್ಕರಿಷ್ಯಾಮಿ ಕೌರವಾಃ।।

ಕೌರವರೇ! ನೃಪರೇ! ನಿಮ್ಮ ಅಭಿಪ್ರಾಯದಲ್ಲಿ ನನ್ನನ್ನು ಗೆದ್ದಿದ್ದಾರೆಯೋ ಇಲ್ಲವೋ ಎನ್ನುವುದನ್ನು ಹೇಳಿ. ನನ್ನ ಪ್ರಶ್ನೆಗೆ ಉತ್ತರವನ್ನು ಬಯಸುತ್ತೇನೆ ಮತ್ತು ಅದರಂತೆ ಮಾಡುತ್ತೇನೆ.”

02062014 ಭೀಷ್ಮ ಉವಾಚ।
02062014a ಉಕ್ತವಾನಸ್ಮಿ ಕಲ್ಯಾಣಿ ಧರ್ಮಸ್ಯ ತು ಪರಾಂ ಗತಿಂ।
02062014c ಲೋಕೇ ನ ಶಕ್ಯತೇ ಗಂತುಮಪಿ ವಿಪ್ರೈರ್ಮಹಾತ್ಮಭಿಃ।।

ಭೀಷ್ಮನು ಹೇಳಿದನು: “ಕಲ್ಯಾಣಿ! ಧರ್ಮದ ನಡೆಯನ್ನು ತಿಳಿಯಲಸಾಧ್ಯ ಎಂದು ಕೇಳಿದ್ದೇನೆ. ಲೋಕದ ಮಹಾತ್ಮ ವಿಪ್ರರೂ ಅದನ್ನು ಹಿಂಬಾಲಿಸಲು ಶಕ್ಯರಿಲ್ಲ.

02062015a ಬಲವಾಂಸ್ತು ಯಥಾ ಧರ್ಮಂ ಲೋಕೇ ಪಶ್ಯತಿ ಪೂರುಷಃ।
02062015c ಸ ಧರ್ಮೋ ಧರ್ಮವೇಲಾಯಾಂ ಭವತ್ಯಭಿಹಿತಃ ಪರೈಃ।।

ಲೋಕದಲ್ಲಿ ಧರ್ಮವು ಪ್ರಶ್ನೆಯಲ್ಲಿದ್ದಾಗಲೆಲ್ಲಾ ಬಲಶಾಲಿ ಪುರುಷರು ಏನನ್ನು ಧರ್ಮವೆಂದು ಕಾಣುತ್ತಾರೋ ಅದನ್ನೇ ಇತರರೂ ಕೂಡ ಧರ್ಮವೆಂದು ಸ್ವೀಕರಿಸುತ್ತಾರೆ.

02062016a ನ ವಿವೇಕ್ತುಂ ಚ ತೇ ಪ್ರಶ್ನಮೇತಂ ಶಕ್ನೋಮಿ ನಿಶ್ಚಯಾತ್।
02062016c ಸೂಕ್ಷ್ಮತ್ವಾದ್ಗಹನತ್ವಾಚ್ಚ ಕಾರ್ಯಸ್ಯಾಸ್ಯ ಚ ಗೌರವಾತ್।।

ನಾನು ಈ ಪ್ರಶ್ನೆಯನ್ನು ನಿಶ್ಚಯವಾಗಿ ಉತ್ತರಿಸಲು ಶಕ್ತನಾಗಿಲ್ಲ. ಯಾಕೆಂದರೆ ಇದು ಸೂಕ್ಷ್ಮವಾದುದು, ಗಹನವಾದುದು ಮತ್ತು ಇದೊಂದು ದೊಡ್ಡ ಸಾಹಸವು.

02062017a ನೂನಮಂತಃ ಕುಲಸ್ಯಾಸ್ಯ ಭವಿತಾ ನಚಿರಾದಿವ।
02062017c ತಥಾ ಹಿ ಕುರವಃ ಸರ್ವೇ ಲೋಭಮೋಹಪರಾಯಣಾಃ।।

ಈ ಕುಲದ ಅಂತ್ಯಕ್ಕೆ ತಡವಿಲ್ಲವೆಂದು ತೋರುತ್ತದೆ. ಸರ್ವ ಕುರುಗಳೂ ಲೋಭ-ಮೋಹಪರಾಯಣರಾಗಿದ್ದಾರೆ.

02062018a ಕುಲೇಷು ಜಾತಾಃ ಕಲ್ಯಾಣಿ ವ್ಯಸನಾಭ್ಯಾಹತಾ ಭೃಶಂ।
02062018c ಧರ್ಮ್ಯಾನ್ಮಾರ್ಗಾನ್ನ ಚ್ಯವಂತೇ ಯಥಾ ನಸ್ತ್ವಂ ವಧೂಃ ಸ್ಥಿತಾ।।

ಕಲ್ಯಾಣಿ! ಕುಲವಧು ನಿನ್ನನ್ನು ಇಲ್ಲಿ ಕರೆತಂದಂತೆ ಉತ್ತಮ ಕುಲಗಳಲ್ಲಿ ಜನಿಸಿದವರು ವ್ಯಸನಪೀಡಿತರಾಗಿ ಧರ್ಮಮಾರ್ಗವನ್ನು ತೊರೆಯುವುದಿಲ್ಲ.

02062019a ಉಪಪನ್ನಂ ಚ ಪಾಂಚಾಲಿ ತವೇದಂ ವೃತ್ತಮೀದೃಶಂ।
02062019c ಯತ್ಕೃಚ್ಛ್ರಮಪಿ ಸಂಪ್ರಾಪ್ತಾ ಧರ್ಮಮೇವಾನ್ವವೇಕ್ಷಸೇ।।

ಪಾಂಚಾಲಿ! ಕಷ್ಟಶೋಕವನ್ನು ಹೊಂದಿದ್ದರೂ ನೀನು ನಡೆದುಕೊಂಡ ರೀತಿಯು ಅಂಥಹುದು. ಈಗಲೂ ನೀನು ಧರ್ಮವನ್ನು ಹುಡುಕುತ್ತಿದ್ದೀಯೆ.

02062020a ಏತೇ ದ್ರೋಣಾದಯಶ್ಚೈವ ವೃದ್ಧಾ ಧರ್ಮವಿದೋ ಜನಾಃ।
02062020c ಶೂನ್ಯೈಃ ಶರೀರೈಸ್ತಿಷ್ಠಂತಿ ಗತಾಸವ ಇವಾನತಾಃ।।

ಇಲ್ಲಿರುವ ದ್ರೋಣ ಮೊದಲಾದ ಧರ್ಮವಿದ ವೃದ್ಧ ಜನರು ಸತ್ವವನ್ನು ಕಳೆದುಕೊಂಡು ಶೂನ್ಯ ದೇಹದಲ್ಲಿರುವವರಂತೆ ಮುಖವನ್ನು ಕೆಳಮಾಡಿ ಕುಳಿತಿದ್ದಾರೆ.

02062021a ಯುಧಿಷ್ಠಿರಸ್ತು ಪ್ರಶ್ನೇಽಸ್ಮಿನ್ಪ್ರಮಾಣಮಿತಿ ಮೇ ಮತಿಃ।
02062021c ಅಜಿತಾಂ ವಾ ಜಿತಾಂ ವಾಪಿ ಸ್ವಯಂ ವ್ಯಾಹರ್ತುಮರ್ಹತಿ।।

ನನ್ನ ಪ್ರಕಾರ ಯುಧಿಷ್ಠಿರನು ಮಾತ್ರ ಈ ಪ್ರಶ್ನೆಗೆ ಪ್ರಮಾಣ. ನಿನ್ನನ್ನು ಗೆದ್ದಿದ್ದಾರೆಯೋ ಅಥವಾ ಇಲ್ಲವೋ ಎನ್ನುವುದನ್ನು ಸ್ವಯಂ ಅವನೇ ಹೇಳಬೇಕು.””

02062022 ವೈಶಂಪಾಯನ ಉವಾಚ।
02062022a ತಥಾ ತು ದೃಷ್ಟ್ವಾ ಬಹು ತತ್ತದೇವಂ ರೋರೂಯಮಾಣಾಂ ಕುರರೀಮಿವಾರ್ತಾಂ।
02062022c ನೋಚುರ್ವಚಃ ಸಾಧ್ವಥ ವಾಪ್ಯಸಾಧು ಮಹೀಕ್ಷಿತೋ ಧಾರ್ತರಾಷ್ಟ್ರಸ್ಯ ಭೀತಾಃ।।

ವೈಶಂಪಾಯನನು ಹೇಳಿದನು: “ಬಹಳಷ್ಟು ನಡೆದುಹೋದವುಗಳನ್ನು ಮತ್ತು ಕುರರೀ ಪಕ್ಷಿಯಂತೆ ಆರ್ತಳಾಗಿ ರೋಧಿಸುತ್ತಿದ್ದ ಅವಳನ್ನು ನೋಡಿದ ಮಹೀಕ್ಷಿತರು ಧಾರ್ತರಾಷ್ಟ್ರನ ಭೀತಿಯಿಂದ ಒಳ್ಳೆಯ ಅಥವಾ ಕೆಟ್ಟ ಯಾವ ಮಾತುಗಳನ್ನೂ ಆಡಲಿಲ್ಲ.

02062023a ದೃಷ್ಟ್ವಾ ತು ತಾನ್ಪಾರ್ಥಿವಪುತ್ರಪೌತ್ರಾಂಸ್ ತೂಷ್ಣೀಂಭೂತಾನ್ಧೃತರಾಷ್ಟ್ರಸ್ಯ ಪುತ್ರಃ।
02062023c ಸ್ಮಯನ್ನಿವೇದಂ ವಚನಂ ಬಭಾಷೇ ಪಾಂಚಾಲರಾಜಸ್ಯ ಸುತಾಂ ತದಾನೀಂ।।

ಪಾರ್ಥಿವ ಪುತ್ರಪೌತ್ರರೆಲ್ಲರೂ ಸುಮ್ಮನಿದ್ದುದನ್ನು ನೋಡಿದ ಧೃತರಾಷ್ಟ್ರಪುತ್ರನು ಮುಗುಳ್ನಗುತ್ತಾ ಪಾಂಚಾಲರಾಜ ಸುತೆಗೆ ಹೇಳಿದನು:

02062024a ತಿಷ್ಠತ್ವಯಂ ಪ್ರಶ್ನ ಉದಾರಸತ್ತ್ವೇ ಭೀಮೇಽರ್ಜುನೇ ಸಹದೇವೇ ತಥೈವ।
02062024c ಪತ್ಯೌ ಚ ತೇ ನಕುಲೇ ಯಾಜ್ಞಸೇನಿ ವದಂತ್ವೇತೇ ವಚನಂ ತ್ವತ್ಪ್ರಸೂತಂ।।

“ಯಾಜ್ಞಸೇನಿ! ನಿನ್ನ ಈ ಪ್ರಶ್ನೆಯನ್ನು ನಿನ್ನ ಸತ್ವಶಾಲಿ ಪತಿಗಳು - ಭೀಮ, ಅರ್ಜುನ, ಸಹದೇವ ಮತ್ತು ನಕುಲರಲ್ಲಿ ಇಡು. ನೀನು ಕೇಳಿದುದರ ಉತ್ತರ ಅವರಿಂದ ಬರಲಿ.

02062025a ಅನೀಶ್ವರಂ ವಿಬ್ರುವಂತ್ವಾರ್ಯಮಧ್ಯೇ ಯುಧಿಷ್ಠಿರಂ ತವ ಪಾಂಚಾಲಿ ಹೇತೋಃ।
02062025c ಕುರ್ವಂತು ಸರ್ವೇ ಚಾನೃತಂ ಧರ್ಮರಾಜಂ ಪಾಂಚಾಲಿ ತ್ವಂ ಮೋಕ್ಷ್ಯಸೇ ದಾಸಭಾವಾತ್।।

ಪಾಂಚಾಲಿ! ಯುಧಿಷ್ಠಿರನು ನಿನ್ನ ಒಡೆಯನಲ್ಲ ಎಂದು ಇವರೆಲ್ಲರೂ ಈ ಅರ್ಯರ ಮಧ್ಯದಲ್ಲಿ ಹೇಳಲಿ. ಆಗ ಪಾಂಚಾಲೀ! ನೀನು ಧರ್ಮರಾಜನನ್ನು ದಾಸಭಾವದಿಂದ ಮುಕ್ತನನ್ನಾಗಿಸಬಲ್ಲೆ.

02062026a ಧರ್ಮೇ ಸ್ಥಿತೋ ಧರ್ಮರಾಜೋ ಮಹಾತ್ಮಾ ಸ್ವಯಂ ಚೇದಂ ಕಥಯತ್ವಿಂದ್ರಕಲ್ಪಃ।
02062026c ಈಶೋ ವಾ ತೇ ಯದ್ಯನೀಶೋಽಥ ವೈಷ ವಾಕ್ಯಾದಸ್ಯ ಕ್ಷಿಪ್ರಮೇಕಂ ಭಜಸ್ವ।।

ಅವನು ನಿನ್ನ ಒಡೆಯ ಅಥವಾ ಒಡೆಯನಲ್ಲವೆಂದು ಸ್ವಯಂ ಧರ್ಮಸ್ಥಿತ ಇಂದ್ರಸಮಾನ ಮಹಾತ್ಮ ಧರ್ಮರಾಜನು ಹೇಳಲಿ. ಅವನ ಮಾತಿನ ಪ್ರಕಾರ ನೀನು ಯಾವುದಾದರೂ ಒಂದರಂತೆ ಮಾಡು.

02062027a ಸರ್ವೇ ಹೀಮೇ ಕೌರವೇಯಾಃ ಸಭಾಯಾಂ ದುಃಖಾಂತರೇ ವರ್ತಮಾನಾಸ್ತವೈವ।
02062027c ನ ವಿಬ್ರುವಂತ್ಯಾರ್ಯಸತ್ತ್ವಾ ಯಥಾವತ್ ಪತೀಂಶ್ಚ ತೇ ಸಮವೇಕ್ಷ್ಯಾಲ್ಪಭಾಗ್ಯಾನ್।।

ಈ ಸಭೆಯಲ್ಲಿರುವ ಸರ್ವ ಕೌರವರೂ ವರ್ತಮಾನದಲ್ಲಿ ನಿನ್ನ ದುಃಖದಲ್ಲಿ ಮುಳುಗಿಹೋಗಿದ್ದಾರೆ. ಆ ಆರ್ಯಸತ್ವರು ಯಥಾವತ್ತಾಗಿ ಉತ್ತರಿಸಲಾಗದೇ ನಿನ್ನ ಅಲ್ಪ ಭಾಗ್ಯ ಪತಿಗಳ ಕಡೆ ನೋಡುತ್ತಿದ್ದಾರೆ.”

02062028a ತತಃ ಸಭ್ಯಾಃ ಕುರುರಾಜಸ್ಯ ತತ್ರ ವಾಕ್ಯಂ ಸರ್ವೇ ಪ್ರಶಶಂಸುಸ್ತದೋಚ್ಚೈಃ।
02062028c ಚೇಲಾವೇಧಾಂಶ್ಚಾಪಿ ಚಕ್ರುರ್ನದಂತೋ ಹಾ ಹೇತ್ಯಾಸೀದಪಿ ಚೈವಾತ್ರ ನಾದಃ।
02062028e ಸರ್ವೇ ಚಾಸನ್ಪಾರ್ಥಿವಾಃ ಪ್ರೀತಿಮಂತಃ ಕುರುಶ್ರೇಷ್ಠಂ ಧಾರ್ಮಿಕಂ ಪೂಜಯಂತಃ।।

ಆಗ ಸಭೆಯಲ್ಲಿದ್ದ ಸರ್ವರೂ ಕುರುರಾಜನ ಆ ಮಾತನ್ನು ಉಚ್ಛ ಸ್ವರಗಳಲ್ಲಿ ಪ್ರಶಂಸಿಸಿದರು. ಕೆಲವರು ಸಂತೋಷದಿಂದ ಕರವಸ್ತ್ರಗಳನ್ನು ಮೇಲೆ ಹಾರಿಸಿದರೆ ಇನ್ನು ಕೆಲವರು “ಹಾ! ಹಾ!” ಎಂದು ಜೋರಾಗಿ ಕೂಗಿದರು. ಅಲ್ಲಿದ್ದ ಸರ್ವ ಪಾರ್ಥಿವರೂ ಸಂತೋಷದಿಂದ ಧಾರ್ಮಿಕ ಕುರುಶ್ರೇಷ್ಠನನ್ನು ಗೌರವಿಸಿದರು.

02062029a ಯುಧಿಷ್ಠಿರಂ ಚ ತೇ ಸರ್ವೇ ಸಮುದೈಕ್ಷಂತ ಪಾರ್ಥಿವಾಃ।
02062029c ಕಿಂ ನು ವಕ್ಷ್ಯತಿ ಧರ್ಮಜ್ಞ ಇತಿ ಸಾಚೀಕೃತಾನನಾಃ।।

ಸರ್ವ ಪಾರ್ಥಿವರೂ ಧರ್ಮಜ್ಞನು ಏನು ಹೇಳುತ್ತಾನೆ ಎಂದು ಮುಖ ತಿರುಗಿಸಿ ಯುಧಿಷ್ಠಿರನೆಡೆಗೆ ನೋಡಿದರು.

02062030a ಕಿಂ ನು ವಕ್ಷ್ಯತಿ ಬೀಭತ್ಸುರಜಿತೋ ಯುಧಿ ಪಾಂಡವಃ।
02062030c ಭೀಮಸೇನೋ ಯಮೌ ಚೇತಿ ಭೃಶಂ ಕೌತೂಹಲಾನ್ವಿತಾಃ।।

ಯುದ್ಧದಲ್ಲಿ ಗೆಲ್ಲಲಾರದ ಪಾಂಡವ ಬೀಭತ್ಸುವು ಏನು ಹೇಳುತ್ತಾನೆ? ಭೀಮಸೇನ ಮತ್ತು ಯಮಳರು ಏನು ಹೇಳುತ್ತಾರೆ? ಎಂದು ತುಂಬಾ ಕುತೂಹಲಗೊಂಡರು.

02062031a ತಸ್ಮಿನ್ನುಪರತೇ ಶಬ್ಧೇ ಭೀಮಸೇನೋಽಬ್ರವೀದಿದಂ।
02062031c ಪ್ರಗೃಹ್ಯ ವಿಪುಲಂ ವೃತ್ತಂ ಭುಜಂ ಚಂದನರೂಷಿತಂ।।

ಆ ಶಬ್ಧವು ಕಡಿಮೆಯಾಗಲು ಭೀಮಸೇನನು ಚಂದನಲೇಪಿತ ವಿಪುಲ ಭುಜವನ್ನು ಹಿಡಿದು ಹೇಳಿದನು:

02062032a ಯದ್ಯೇಷ ಗುರುರಸ್ಮಾಕಂ ಧರ್ಮರಾಜೋ ಯುಧಿಷ್ಠಿರಃ।
02062032c ನ ಪ್ರಭುಃ ಸ್ಯಾತ್ಕುಲಸ್ಯಾಸ್ಯ ನ ವಯಂ ಮರ್ಷಯೇಮಹಿ।।

“ಧರ್ಮರಾಜ ಯುಧಿಷ್ಠಿರನು ನಮ್ಮ ಗುರು ಮತ್ತು ಈ ಕುಲದ ಪ್ರಭುವಾಗಿರದಿದ್ದರೆ ನಾವು ಈ ರೀತಿ ನೋವನ್ನನುಭವಿಸುತ್ತಿರಲಿಲ್ಲ.

02062033a ಈಶೋ ನಃ ಪುಣ್ಯತಪಸಾಂ ಪ್ರಾಣಾನಾಮಪಿ ಚೇಶ್ವರಃ।
02062033c ಮನ್ಯತೇ ಜಿತಮಾತ್ಮಾನಂ ಯದ್ಯೇಷ ವಿಜಿತಾ ವಯಂ।

ಅವನು ನಮ್ಮ ಪುಣ್ಯ ಮತ್ತು ತಪಸ್ಸಿನ ಈಶ್ವರ ಮಾತ್ರ ಅಲ್ಲ ಪ್ರಾಣಗಳ ಈಶ್ವರನೂ ಹೌದು. ಅವನು ತನ್ನನ್ನು ತಾನು ಸೋತೆನೆಂದು ತಿಳಿದರೆ ನಾವೂ ಕೂಡ ಸೋತೆವೆಂದೇ ತಿಳಿಯುತ್ತೇವೆ.

02062034a ನ ಹಿ ಮುಚ್ಯೇತ ಜೀವನ್ಮೇ ಪದಾ ಭೂಮಿಮುಪಸ್ಪೃಶನ್।
02062034c ಮರ್ತ್ಯಧರ್ಮಾ ಪರಾಮೃಶ್ಯ ಪಾಂಚಾಲ್ಯಾ ಮೂರ್ಧಜಾನಿಮಾನ್।।

ಪಾಂಚಾಲಿಯ ಕೂದಲನ್ನು ಸ್ಪರ್ಷಿಸಿದ ಈ ಭೂಮಿಯ ಮೇಲಿನ ಯಾವ ನರನೂ ಜೀವ ಸಹಿತ ನನ್ನಿಂದ ಉಳಿಯುತ್ತಿರಲಿಲ್ಲ.

02062035a ಪಶ್ಯಧ್ವಮಾಯತೌ ವೃತ್ತೌ ಭುಜೌ ಮೇ ಪರಿಘಾವಿವ।
02062035c ನೈತಯೋರಂತರಂ ಪ್ರಾಪ್ಯ ಮುಚ್ಯೇತಾಪಿ ಶತಕ್ರತುಃ।।

ಪರಿಘದಂತೆ ಉರುಟಾದ ನನ್ನ ಈ ಭುಜಗಳನ್ನು ನೋಡಿ. ಇವುಗಳಲ್ಲಿ ಸಿಲುಕಿಕೊಂಡ ಶತಕ್ರತುವೂ ಕೂಡ ಬಿಡುಗಡೆ ಹೊಂದಲು ಸಾಧ್ಯವಿಲ್ಲ.

02062036a ಧರ್ಮಪಾಶಸಿತಸ್ತ್ವೇವಂ ನಾಧಿಗಚ್ಛಾಮಿ ಸಂಕಟಂ।
02062036c ಗೌರವೇಣ ನಿರುದ್ಧಶ್ಚ ನಿಗ್ರಹಾದರ್ಜುನಸ್ಯ ಚ।।

ಆದರೆ ಈಗ ಧರ್ಮಪಾಶದಲ್ಲಿ ಸಿಲುಕಿದ ನಾನು ಗೌರವ ಮತ್ತು ಅರ್ಜುನನ ನಿಗ್ರಹದಿಂದ ಸಂಕಟವನ್ನು ತರುತ್ತಿಲ್ಲ.

02062037a ಧರ್ಮರಾಜನಿಸೃಷ್ಟಸ್ತು ಸಿಂಹಃ ಕ್ಷುದ್ರಮೃಗಾನಿವ।
02062037c ಧಾರ್ತರಾಷ್ಟ್ರಾನಿಮಾನ್ಪಾಪಾನ್ನಿಷ್ಪಿಷೇಯಂ ತಲಾಸಿಭಿಃ।।

ಧರ್ಮರಾಜನು ನನ್ನನ್ನು ಬಿಡುಗಡೆಮಾಡಿದರೆ ಸಿಂಹವು ಕ್ಷುದ್ರಮೃಗಗಳನ್ನು ಹೇಗೋ ಹಾಗೆ ಈ ಪಾಪಿ ಧಾರ್ತರಾಷ್ಟ್ರರನ್ನು ನಿಶ್ಯೇಷವಾಗಿ ಸಮಮಾಡುತ್ತಿದ್ದೆ!”

02062038a ತಮುವಾಚ ತದಾ ಭೀಷ್ಮೋ ದ್ರೋಣೋ ವಿದುರ ಏವ ಚ।
02062038c ಕ್ಷಮ್ಯತಾಮೇವಮಿತ್ಯೇವಂ ಸರ್ವಂ ಸಂಭವತಿ ತ್ವಯಿ।।

ಆಗ ಭೀಷ್ಮ, ದ್ರೋಣ ಮತ್ತು ವಿದುರರು “ಶಾಂತನಾಗು! ನಿನ್ನಿಂದ ಸರ್ವವೂ ಸಂಭವವಿದೆ!” ಎಂದರು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಭೀಮವಾಕ್ಯೇ ದ್ವಿಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಭೀಮವಾಕ್ಯ ಎನ್ನುವ ಅರವತ್ತೆರಡನೆಯ ಅಧ್ಯಾಯವು.