ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 61
ಸಾರ
ಭೀಮನು ಕೋಪದಿಂದ ಯುಧಿಷ್ಠಿರನ ಕೈಗಳನ್ನು ಸುಡಲು ಸಹದೇವನಿಗೆ ಬೆಂಕಿಯುನ್ನು ತರಲು ಹೇಳುವುದು ಮತ್ತು ಅರ್ಜುನನು ಅವನನ್ನು ತಡೆಯುವುದು (1-10). ದ್ರೌಪದಿಯನ್ನು ಗೆಲ್ಲಲಿಲ್ಲ ಎಂದು ವಿಕರ್ಣನು ತನ್ನ ಅಭಿಪ್ರಾಯವನ್ನು ಹೇಳಿದುದು (11-25). ಕರ್ಣನು ವಿಕರ್ಣನನ್ನು ಜರೆದು ದ್ರೌಪದಿ ಮತ್ತು ಪಾಂಡವರ ವಸ್ತ್ರಗಳನ್ನು ಕಳಚುವಂತೆ ದುಃಶಾಸನನಿಗೆ ಹೇಳುವುದು (26-39). ದ್ರೌಪದಿಯ ವಸ್ತ್ರವು ಅಕ್ಷಯವಾದುದು (40-43). ಭೀಮಸೇನನ ಪ್ರತಿಜ್ಞೆ (44-50). ವಿದುರನ ನೀತಿ (51-80). ದುಃಶಾಸನನು ಪ್ರಲಪಿಸುತ್ತಿರುವ ದ್ರೌಪದಿಯನ್ನು ಸಭಾಮಧ್ಯಕ್ಕೆ ಎಳೆಯುವುದು (81-82).
02061001 ಭೀಮ ಉವಾಚ।
02061001a ಭವಂತಿ ದೇಶೇ ಬಂಧಕ್ಯಃ ಕಿತವಾನಾಂ ಯುಧಿಷ್ಠಿರ।
02061001c ನ ತಾಭಿರುತ ದೀವ್ಯಂತಿ ದಯಾ ಚೈವಾಸ್ತಿ ತಾಸ್ವಪಿ।।
ಭೀಮನು ಹೇಳಿದನು: “ಯುಧಿಷ್ಠಿರ! ಜೂಜುಗಾರರ ದೇಶದಲ್ಲಿ ವೈಶ್ಯೆಯರು ಬಹಳಷ್ಟು ಇರುತ್ತಾರೆ. ಆದರೆ ಅವರನ್ನು ಎಂದೂ ಪಣವಾಗಿ ಇಡುವುದಿಲ್ಲ. ಯಾಕೆಂದರೆ ಅಂಥವರ ಮೇಲೂ ಅವರಿಗೆ ದಯವಿರುತ್ತದೆ.
02061002a ಕಾಶ್ಯೋ ಯದ್ಬಲಿಂ ಆಹಾರ್ಷೀದ್ದ್ರವ್ಯಂ ಯಚ್ಚಾನ್ಯದುತ್ತಮಂ।
02061002c ತಥಾನ್ಯೇ ಪೃಥಿವೀಪಾಲಾ ಯಾನಿ ರತ್ನಾನ್ಯುಪಾಹರನ್।।
02061003a ವಾಹನಾನಿ ಧನಂ ಚೈವ ಕವಚಾನ್ಯಾಯುಧಾನಿ ಚ।
02061003c ರಾಜ್ಯಮಾತ್ಮಾ ವಯಂ ಚೈವ ಕೈತವೇನ ಹೃತಂ ಪರೈಃ।।
ಕಾಶಿರಾಜನು ತಂದ ಕಪ್ಪ, ಮತ್ತು ನಮ್ಮ ಎಲ್ಲ ವಿಶಾಲ ಸಂಪತ್ತು, ಅನ್ಯ ಪೃಥಿವೀಪಾಲಕರು ಉಡುಗೊರೆಯಾಗಿ ತಂದಿದ್ದ ರತ್ನಗಳು, ವಾಹನಗಳು, ಧನ, ಕವಚಗಳು, ಆಯುಧಗಳು, ರಾಜ್ಯ ಮತ್ತು ಸ್ವಯಂ ನಮ್ಮನ್ನು ಜೂಜಿನಲ್ಲಿ ಇತರರಿಗೆ ಸೋತಿದ್ದೇವೆ.
02061004a ನ ಚ ಮೇ ತತ್ರ ಕೋಪೋಽಭೂತ್ಸರ್ವಸ್ಯೇಶೋ ಹಿ ನೋ ಭವಾನ್।
02061004c ಇದಂ ತ್ವತಿಕೃತಂ ಮನ್ಯೇ ದ್ರೌಪದೀ ಯತ್ರ ಪಣ್ಯತೇ।।
ಆದರೆ ಇದರಲ್ಲಿ ನನಗೆ ಕೋಪ ಬರಲಿಲ್ಲ. ಯಾಕೆಂದರೆ ನೀನು ಇವೆಲ್ಲವುಗಳ ಒಡೆಯ. ಆದರೆ ದ್ರೌಪದಿಯನ್ನು ಪಣವಿಟ್ಟು ನೀನು ಅತಿಕ್ರಮಿಸಿದೆ ಎಂದು ನನ್ನ ಅಭಿಪ್ರಾಯ.
02061005a ಏಷಾ ಹ್ಯನರ್ಹತೀ ಬಾಲಾ ಪಾಂಡವಾನ್ಪ್ರಾಪ್ಯ ಕೌರವೈಃ।
02061005c ತ್ವತ್ಕೃತೇ ಕ್ಲಿಶ್ಯತೇ ಕ್ಷುದ್ರೈರ್ನೃಶಂಸೈರ್ನಿಕೃತಿಪ್ರಿಯೈಃ।।
ಇದಕ್ಕೆ ಅವಳು ಅರ್ಹಳಲ್ಲ. ಬಾಲಕಿಯಾದಾಗ ಪಾಂಡವರನ್ನು ಪಡೆದ ಅವಳು ನೀನು ಮಾಡಿದ ಕೆಲಸದಿಂದಾಗಿ ಈಗ ಕ್ಷುದ್ರ, ಅಸತ್ಯ, ಮೋಸಮಾಡುವುದರಲ್ಲಿ ಆನಂದಹೊಂದುವ ಕೌರವರಿಗೆ ಸಿಕ್ಕಿ ಬಿದ್ದಿದ್ದಾಳೆ.
02061006a ಅಸ್ಯಾಃ ಕೃತೇ ಮನ್ಯುರಯಂ ತ್ವಯಿ ರಾಜನ್ನಿಪಾತ್ಯತೇ।
02061006c ಬಾಹೂ ತೇ ಸಂಪ್ರಧಕ್ಷ್ಯಾಮಿ ಸಹದೇವಾಗ್ನಿಮಾನಯ।।
ರಾಜನ್! ಇವಳಿಂದಾಗಿ ನಾನು ನನ್ನ ಸಿಟ್ಟನ್ನು ನಿನ್ನ ಮೇಲೆ ಉರುಳಿಸುತ್ತಿದ್ದೇನೆ. ನಿನ್ನ ಕೈಗಳನ್ನು ಸುಡುತ್ತೇನೆ. ಸಹದೇವ! ಅಗ್ನಿಯನ್ನು ತೆಗೆದುಕೊಂಡು ಬಾ!”
02061007 ಅರ್ಜುನ ಉವಾಚ।
02061007a ನ ಪುರಾ ಭೀಮಸೇನ ತ್ವಮೀದೃಶೀರ್ವದಿತಾ ಗಿರಃ।
02061007c ಪರೈಸ್ತೇ ನಾಶಿತಂ ನೂನಂ ನೃಶಂಸೈರ್ಧರ್ಮಗೌರವಂ।।
ಅರ್ಜುನನು ಹೇಳಿದನು: “ಭೀಮಸೇನ! ಇದಕ್ಕೆ ಮೊದಲು ನೀನು ಈ ರೀತಿಯ ಮಾತುಗಳನ್ನಾಡಿರಲಿಲ್ಲ. ನಿನ್ನಲ್ಲಿರುವ ಧರ್ಮಗೌರವವನ್ನು ನಿನ್ನ ವೈರಿಗಳು ಖಂಡಿತವಾಗಿಯೂ ನಾಶಪಡಿಸಿದಂತಿದೆ.
02061008a ನ ಸಕಾಮಾಃ ಪರೇ ಕಾರ್ಯಾ ಧರ್ಮಮೇವಾಚರೋತ್ತಮಂ।
02061008c ಭ್ರಾತರಂ ಧಾರ್ಮಿಕಂ ಜ್ಯೇಷ್ಠಂ ನಾತಿಕ್ರಮಿತುಮರ್ಹತಿ।।
ವೈರಿಗಳ ಯೋಜನೆಯಲ್ಲಿ ಬೀಳಬೇಡ. ಉತ್ತಮ ಧರ್ಮದಂತೆ ನಡೆದುಕೋ. ಜ್ಯೇಷ್ಠ ಭ್ರಾತ ಧಾರ್ಮಿಕನನ್ನು ಅತಿಕ್ರಮಿಸುವ ಅರ್ಹತೆ ಯಾರಿಗೂ ಇಲ್ಲ.
02061009a ಆಹೂತೋ ಹಿ ಪರೈ ರಾಜಾ ಕ್ಷಾತ್ರಧರ್ಮಮನುಸ್ಮರನ್।
02061009c ದೀವ್ಯತೇ ಪರಕಾಮೇನ ತನ್ನಃ ಕೀರ್ತಿಕರಂ ಮಹತ್।।
ಶತ್ರು ಆಹ್ವಾನಿತ ರಾಜನು ಕ್ಷಾತ್ರಧರ್ಮವನ್ನು ತಿಳಿದು ಶತ್ರುಗಳ ಇಚ್ಛೆಯಂತೆ ಜೂಜಾಡಿದನು. ಅದೇ ಮಹಾ ಕೀರ್ತಿಕರವಾದುದು.”
02061010 ಭೀಮಸೇನ ಉವಾಚ।
02061010a ಏವಮಸ್ಮಿಕೃತಂ ವಿದ್ಯಾಂ ಯದ್ಯಸ್ಯಾಹಂ ಧನಂಜಯ।
02061010c ದೀಪ್ತೇಽಗ್ನೌ ಸಹಿತೌ ಬಾಹೂ ನಿರ್ದಹೇಯಂ ಬಲಾದಿವ।।
ಭೀಮಸೇನನು ಹೇಳಿದನು: “ಧನಂಜಯ! ತನಗಾಗಿ ಇದನ್ನೆಲ್ಲ ಮಾಡಿದನೆಂದು ನಾನು ಯೋಚಿಸಿದ್ದರೆ ಇವನ ಎರಡೂ ಕೈಗಳನ್ನು ಬಲವಂತವಾಗಿ ಬಿಗಿದು ಉರಿಯುತ್ತಿರುವ ಬೆಂಕಿಯಲ್ಲಿ ಸುಡುತ್ತಿದ್ದೆ!””
02061011 ವೈಶಂಪಾಯನ ಉವಾಚ।
02061011a ತಥಾತಾನ್ದುಃಖಿತಾನ್ದೃಷ್ಟ್ವಾ ಪಾಂಡವಾಂಧೃತರಾಷ್ಟ್ರಜಃ।
02061011c ಕ್ಲಿಶ್ಯಮಾನಾಂ ಚ ಪಾಂಚಾಲೀಂ ವಿಕರ್ಣ ಇದಮಬ್ರವೀತ್।।
ವೈಶಂಪಾಯನನು ಹೇಳಿದನು: “ಆಗ ದುಃಖಿತ ಪಾಂಡವರನ್ನೂ ಮತ್ತು ಕಷ್ಟದಲ್ಲಿರುವ ಪಾಂಚಾಲಿಯನ್ನೂ ನೋಡಿದ ಧೃತರಾಷ್ಟ್ರಜ ವಿಕರ್ಣನು ಈ ರೀತಿ ಹೇಳಿದನು:
02061012a ಯಾಜ್ಞಸೇನ್ಯಾ ಯದುಕ್ತಂ ತದ್ವಾಕ್ಯಂ ವಿಬ್ರೂತ ಪಾರ್ಥಿವಾಃ।
02061012c ಅವಿವೇಕೇನ ವಾಕ್ಯಸ್ಯ ನರಕಃ ಸದ್ಯ ಏವ ನಃ।।
“ಪಾರ್ಥಿವರೇ! ಯಾಜ್ಞಸೇನಿಯು ಕೇಳಿದ ಪ್ರಶ್ನೆಗೆ ಉತ್ತರಿಸಿ. ನಾವು ಆ ಮಾತನ್ನು ನಿರ್ಧರಿಸಬೇಕು. ಇಲ್ಲದಿದ್ದರೆ ನರಕಕ್ಕೆ ಹೋಗುವುದಿಲ್ಲವೇ?
02061013a ಭೀಷ್ಮಶ್ಚ ಧೃತರಾಷ್ಟ್ರಶ್ಚ ಕುರುವೃದ್ಧತಮಾವುಭೌ।
02061013c ಸಮೇತ್ಯ ನಾಹತುಃ ಕಿಂ ಚಿದ್ವಿದುರಶ್ಚ ಮಹಾಮತಿಃ।।
ಭೀಷ್ಮ ಮತ್ತು ಧೃತರಾಷ್ಟ್ರರು ಕುರುವೃದ್ಧರು. ಅವರು ಮತ್ತು ಮಹಾಮತಿ ವಿದುರ ಇಲ್ಲಿ ಇದ್ದೂ ಮಾತನಾಡುತ್ತಿಲ್ಲವಲ್ಲ?
02061014a ಭಾರದ್ವಾಜೋಽಪಿ ಸರ್ವೇಷಾಮಾಚಾರ್ಯಃ ಕೃಪ ಏವ ಚ।
02061014c ಅತ ಏತಾವಪಿ ಪ್ರಶ್ನಂ ನಾಹತುರ್ದ್ವಿಜಸತ್ತಮೌ।।
ನಮ್ಮೆಲ್ಲರ ಆಚಾರ್ಯ ಭಾರದ್ವಾಜ ದ್ರೋಣನೂ ಕೃಪನೂ ಇಲ್ಲಿದ್ದಾರೆ. ಆದರೂ ಆ ದ್ವಿಜಸತ್ತಮರು ಈ ಪ್ರಶ್ನೆಯ ಕುರಿತು ಮಾತನಾಡುತ್ತಿಲ್ಲವಲ್ಲ!
02061015a ಯೇ ತ್ವನ್ಯೇ ಪೃಥಿವೀಪಾಲಾಃ ಸಮೇತಾಃ ಸರ್ವತೋ ದಿಶಃ।
02061015c ಕಾಮಕ್ರೋಧೌ ಸಮುತ್ಸೃಜ್ಯ ತೇ ಬ್ರುವಂತು ಯಥಾಮತಿ।।
ಸರ್ವದಿಕ್ಕುಗಳಿಂದ ಬಂದು ಇಲ್ಲಿ ನೆರೆದಿರುವ ಅನ್ಯ ಪೃಥಿವೀಪಾಲಕರೂ ಕೂಡ ಕಾಮಕ್ರೋಧಗಳನ್ನು ತೊರೆದು ಅವರಿಗೆ ತಿಳಿದಂತೆ ಮಾತನಾಡಬೇಕು!
02061016a ಯದಿದಂ ದ್ರೌಪದೀ ವಾಕ್ಯಮುಕ್ತವತ್ಯಸಕೃಚ್ಶುಭಾ।
02061016c ವಿಮೃಶ್ಯ ಕಸ್ಯ ಕಃ ಪಕ್ಷಃ ಪಾರ್ಥಿವಾ ವದತೋತ್ತರಂ।।
ಪಾರ್ಥಿವರೇ! ಅತ್ಯಂತ ಸುಂದರಿ ದ್ರೌಪದಿಯು ಪುನಃ ಪುನಃ ಕೇಳಿದ ಪ್ರಶ್ನೆಯನ್ನು ಗಮನಿಸಿ. ಅದನ್ನು ವಿಮರ್ಶಿಸಿ, ಪರವಾಗಿರಲಿ ವಿರುದ್ಧವಾಗಿರಲಿ, ಅದಕ್ಕೆ ಉತ್ತರವನ್ನು ನೀಡಿ!”
02061017a ಏವಂ ಸ ಬಹುಶಃ ಸರ್ವಾನುಕ್ತವಾಂಸ್ತಾನ್ಸಭಾಸದಃ।
02061017c ನ ಚ ತೇ ಪೃಥಿವೀಪಾಲಾಸ್ತಂ ಊಚುಃ ಸಾಧ್ವಸಾಧು ವಾ।।
ಈ ರೀತಿ ಅವನು ಸರ್ವ ಸಭಾಸದರಲ್ಲಿ ಅನೇಕಬಾರಿ ಕೇಳಿಕೊಂಡನು. ಆದರೂ ಅಲ್ಲಿದ್ದ ಪೃಥಿವೀಪಾಲಕರು ಒಳ್ಳೆಯದಾದ ಅಥವಾ ಕೆಟ್ಟುದಾದ ಏನನ್ನೂ ಹೇಳಲಿಲ್ಲ.
02061018a ಉಕ್ತ್ವಾ ತಥಾಸಕೃತ್ಸರ್ವಾನ್ವಿಕರ್ಣಃ ಪೃಥಿವೀಪತೀನ್।
02061018c ಪಾಣಿಂ ಪಾಣೌ ವಿನಿಷ್ಪಿಷ್ಯ ನಿಃಶ್ವಸನ್ನಿದಮಬ್ರವೀತ್।।
ವಿಕರ್ಣನು ಸರ್ವ ಪೃಥಿವೀಪಾಲಕರಲ್ಲಿ ಪುನಃ ಪುನಃ ಕೇಳಿಕೊಂಡನಂತರ, ಕೈ ಕೈ ತಿವಿಯುತ್ತಾ ನಿಟ್ಟಿಸುರು ಬಿಡುತ್ತಾ ಹೇಳಿದನು:
02061019a ವಿಬ್ರೂತ ಪೃಥಿವೀಪಾಲಾ ವಾಕ್ಯಂ ಮಾ ವಾ ಕಥಂ ಚನ।
02061019c ಮನ್ಯೇ ನ್ಯಾಯ್ಯಂ ಯದತ್ರಾಹಂ ತದ್ಧಿ ವಕ್ಷ್ಯಾಮಿ ಕೌರವಾಃ।।
“ಪೃಥಿವೀಪಾಲಕರೇ! ನಿಮ್ಮ ಉತ್ತರವನ್ನು ಹೇಳಿ ಅಥವಾ ಹೇಳದೇ ಇರಿ. ಕೌರವರೇ! ಆದರೆ ನಾನು ಮಾತ್ರ ಈ ವಿಷಯದಲ್ಲಿ ನ್ಯಾಯವೆಂದು ತಿಳಿದುದನ್ನು ಹೇಳುತ್ತೇನೆ.
02061020a ಚತ್ವಾರ್ಯಾಹುರ್ನರಶ್ರೇಷ್ಠಾ ವ್ಯಸನಾನಿ ಮಹೀಕ್ಷಿತಾಂ।
02061020c ಮೃಗಯಾಂ ಪಾನಮಕ್ಷಾಂಶ್ಚ ಗ್ರಾಮ್ಯೇ ಚೈವಾತಿಸಕ್ತತಾಂ।।
ನರಶ್ರೇಷ್ಠರೇ! ಮಹೀಕ್ಷಿತರ ನಾಲ್ಕು ವ್ಯಸನಗಳ ಕುರಿತು ಹೇಳುತ್ತಾರೆ: ಬೇಟೆಯಾಡುವುದು, ಮದಿರ ಸೇವನೆ, ಜೂಜಾಡುವುದು ಮತ್ತು ದ್ವಂದ್ವಯುದ್ಧ ಮಾಡುವುದು.
02061021a ಏತೇಷು ಹಿ ನರಃ ಸಕ್ತೋ ಧರ್ಮಮುತ್ಸೃಜ್ಯ ವರ್ತತೇ।
02061021c ತಥಾಯುಕ್ತೇನ ಚ ಕೃತಾಂ ಕ್ರಿಯಾಂ ಲೋಕೋ ನ ಮನ್ಯತೇ।।
ಇವುಗಳಲ್ಲಿ ನಿರತನಾದ ನರನು ಧರ್ಮವನ್ನು ತೊರೆದು ನಡೆದುಕೊಳ್ಳುತ್ತಾನೆ, ಮತ್ತು ಯಥಾಯುಕ್ತವಾಗಿ ಮಾಡಿದ ಕ್ರಿಯೆಗಳನ್ನು ಲೋಕವು ಪರಿಗಣಿಸುವುದಿಲ್ಲ.
02061022a ತದಯಂ ಪಾಂಡುಪುತ್ರೇಣ ವ್ಯಸನೇ ವರ್ತತಾ ಭೃಶಂ।
02061022c ಸಮಾಹೂತೇನ ಕಿತವೈರಾಸ್ಥಿತೋ ದ್ರೌಪದೀಪಣಃ।।
ವ್ಯಸನದಲ್ಲಿ ನಿರತನಾಗಿದ್ದ ಪಾಂಡುಪುತ್ರನು ಭಾವುಕತೆಯಿಂದ ವರ್ತಿಸಿ ಜೂಜುಕೋರರು ಜೂಜಿಗೆಂದು ಕರೆದಾಗ ದ್ರೌಪದಿಯನ್ನು ಪಣವನ್ನಾಗಿಟ್ಟನು.
02061023a ಸಾಧಾರಣೀ ಚ ಸರ್ವೇಷಾಂ ಪಾಂಡವಾನಾಮನಿಂದಿತಾ।
02061023c ಜಿತೇನ ಪೂರ್ವಂ ಚಾನೇನ ಪಾಂಡವೇನ ಕೃತಃ ಪಣಃ।।
ಈ ಅನಿಂದಿತೆಯು ಸರ್ವ ಪಾಂಡವರ ಸಾಧಾರಣ ಪತ್ನಿ. ಇವಳನ್ನು ಪಣವಾಗಿಡುವ ಮೊದಲೇ ಪಾಂಡವನು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದನು.
02061024a ಇಯಂ ಚ ಕೀರ್ತಿತಾ ಕೃಷ್ಣಾ ಸೌಬಲೇನ ಪಣಾರ್ಥಿನಾ।
02061024c ಏತತ್ಸರ್ವಂ ವಿಚಾರ್ಯಾಹಂ ಮನ್ಯೇ ನ ವಿಜಿತಾಮಿಮಾಂ।।
ಪಣವು ಬೇಕಿದ್ದಾಗ ಸೌಬಲನು ಕೃಷ್ಣೆಯ ಕುರಿತು ಹೇಳಿದನು. ಇವೆಲ್ಲವನ್ನೂ ವಿಚಾರಿಸಿದರೆ ಅವಳನ್ನು ಗೆದ್ದಾಯಿತು ಎಂದು ನನಗೆ ಅನ್ನಿಸುವುದಿಲ್ಲ.”
02061025a ಏತಚ್ಛೃತ್ವಾ ಮಹಾನ್ನಾದಃ ಸಭ್ಯಾನಾಮುದತಿಷ್ಠತ।
02061025c ವಿಕರ್ಣಂ ಶಂಸಮಾನಾನಾಂ ಸೌಬಲಂ ಚ ವಿನಿಂದಿತಾಂ।।
ಇದನ್ನು ಕೇಳಿದ ಕೂಡಲೇ ಆ ಸಭೆಯಿಂದ ಮಹಾ ಕೋಲಾಹಲವು ಕೇಳಿ ಬಂದಿತು. ವಿಕರ್ಣನನ್ನು ಪ್ರಶಂಸಿಸಲಾಯಿತು ಮತ್ತು ಸೌಬಲನನ್ನು ನಿಂದಿಸಲಾಯಿತು.
02061026a ತಸ್ಮಿನ್ನುಪರತೇ ಶಬ್ದೇ ರಾಧೇಯಃ ಕ್ರೋಧಮೂರ್ಚಿತಃ।
02061026c ಪ್ರಗೃಹ್ಯ ರುಚಿರಂ ಬಾಹುಮಿದಂ ವಚನಮಬ್ರವೀತ್।।
ಆ ಶಬ್ಧವು ಕಡಿಮೆಯಾದಾಗ ಕ್ರೋಧಮೂರ್ಛಿತ ರಾಧೇಯನು ತನ್ನ ಸುಂದರ ಬಾಹುವನ್ನು ಹಿಡಿದು ಈ ಮಾತುಗಳನ್ನಾಡಿದನು:
02061027a ದೃಶ್ಯಂತೇ ವೈ ವಿಕರ್ಣೇ ಹಿ ವೈಕೃತಾನಿ ಬಹೂನ್ಯಪಿ।
02061027c ತಜ್ಜಸ್ತಸ್ಯ ವಿನಾಶಾಯ ಯಥಾಗ್ನಿರರಣಿಪ್ರಜಃ।।
“ಅರಣಿಯಿಂದ ಉತ್ಪನ್ನ ಬೆಂಕಿಯು ಹೇಗೆ ಕಟ್ಟಿಗೆಯನ್ನೇ ಸುಡುತ್ತದೆಯೋ ಹಾಗೆ ವಿಕರ್ಣನ ಮಾತುಗಳಲ್ಲಿ ಬಹಳಷ್ಟು ವೈಕೃತಗಳು ಕಂಡುಬರುತ್ತವೆ.
02061028a ಏತೇ ನ ಕಿಂ ಚಿದಪ್ಯಾಹುಶ್ಚೋದ್ಯಮಾನಾಪಿ ಕೃಷ್ಣಯಾ।
02061028c ಧರ್ಮೇಣ ವಿಜಿತಾಂ ಮನ್ಯೇ ಮನ್ಯಂತೇ ದ್ರುಪದಾತ್ಮಜಾಂ।।
ಕೃಷ್ಣೆಯು ಬಹಳಷ್ಟು ಒತ್ತಾಯಿಸಿದರೂ ಇಲ್ಲಿರುವವರು ಅವಳಿಗೆ ಉತ್ತರಿಸಲಿಲ್ಲ. ಏಕೆಂದರೆ, ದೃಪದಾತ್ಮಜೆಯನ್ನು ಧರ್ಮಪೂರಕವಾಗಿಯೇ ಗೆದ್ದಿದ್ದೇವೆ ಎಂದು ನನಗೆ ಮತ್ತು ಅವರಿಗೆ ಅನ್ನಿಸುತ್ತದೆ.
02061029a ತ್ವಂ ತು ಕೇವಲಬಾಲ್ಯೇನ ಧಾರ್ತರಾಷ್ಟ್ರ ವಿದೀರ್ಯಸೇ।
02061029c ಯದ್ಬ್ರವೀಷಿ ಸಭಾಮಧ್ಯೇ ಬಾಲಃ ಸ್ಥವಿರಭಾಷಿತಂ।।
ಧಾರ್ತರಾಷ್ಟ್ರ! ನೀನು ನಿನ್ನ ಕೇವಲ ಬಾಲ್ಯತನವನ್ನು ತೋರಿಸಿಕೊಳ್ಳುತ್ತಿದ್ದೀಯೆ. ಸಭಾಮಧ್ಯದಲ್ಲಿ ನಿನ್ನ ಹಿರಿಯರು ಹೇಳಬಹುದಾಗಿದ್ದುದನ್ನು ಇನ್ನೂ ಬಾಲಕನಾದ ನೀನು ಹೇಳುತ್ತಿದ್ದೀಯೆ.
02061030a ನ ಚ ಧರ್ಮಂ ಯಥಾತತ್ತ್ವಂ ವೇತ್ಸಿ ದುರ್ಯೋಧನಾವರ।
02061030c ಯದ್ಬ್ರವೀಷಿ ಜಿತಾಂ ಕೃಷ್ಣಾಮಜಿತೇತಿ ಸುಮನ್ದಧೀಃ।।
ದುರ್ಯೋಧನನ ಕಿರಿಯ ತಮ್ಮನಾದ ನಿನಗೆ ಧರ್ಮವೇನೆಂದು ತಿಳಿದಿಲ್ಲ. ಆದುದರಿಂದಲೇ ಅಲ್ಪಬುದ್ಧಿಯ ನೀನು ಕೃಷ್ಣೆಯನ್ನು ಗೆದ್ದಿದ್ದರೂ ಗೆಲ್ಲಲಿಲ್ಲವೆಂದು ಹೇಳುತ್ತಿದ್ದೀಯೆ.
02061031a ಕಥಂ ಹ್ಯವಿಜಿತಾಂ ಕೃಷ್ಣಾಂ ಮನ್ಯಸೇ ಧೃತರಾಷ್ಟ್ರಜ।
02061031c ಯದಾ ಸಭಾಯಾಂ ಸರ್ವಸ್ವಂ ನ್ಯಸ್ತವಾನ್ಪಾಂಡವಾಗ್ರಜಃ।।
ಧೃತರಾಷ್ಟ್ರಜ! ಪಾಂಡವಾಗ್ರಜನು ಸಭೆಯಲ್ಲಿ ಸರ್ವಸ್ವವನ್ನೂ ಕಳೆದುಕೊಂಡಾಗ ಕೃಷ್ಣೆಯನ್ನು ಗೆಲ್ಲಲಿಲ್ಲ ಎಂದು ಹೇಗೆ ಹೇಳುತ್ತೀಯೆ?
02061032a ಅಭ್ಯಂತರಾ ಚ ಸರ್ವಸ್ವೇ ದ್ರೌಪದೀ ಭರತರ್ಷಭ।
02061032c ಏವಂ ಧರ್ಮಜಿತಾಂ ಕೃಷ್ಣಾಂ ಮನ್ಯಸೇ ನ ಜಿತಾಂ ಕಥಂ।।
ಭರತರ್ಷಭ! ದ್ರೌಪದಿಯು ಅವನ ಸರ್ವಸ್ವದ ಒಂದು ಭಾಗವಲ್ಲವೇ? ಹಾಗಿರುವಾಗ ಕೃಷ್ಣೆಯನ್ನು ಧರ್ಮಪೂರ್ವಕವಾಗಿ ಗೆಲ್ಲಲಿಲ್ಲ ಎಂದು ನೀನು ಹೇಗೆ ಅಭಿಪ್ರಾಯ ಪಡುತ್ತೀಯೆ?
02061033a ಕೀರ್ತಿತಾ ದ್ರೌಪದೀ ವಾಚಾ ಅನುಜ್ಞಾತಾ ಚ ಪಾಂಡವೈಃ।
02061033c ಭವತ್ಯವಿಜಿತಾ ಕೇನ ಹೇತುನೈಷಾ ಮತಾ ತವ।।
ತನ್ನ ತಿಳುವಳಿಕೆಯಲ್ಲಿದ್ದು ಪಾಂಡವನು ದ್ರೌಪದಿಯ ಹೆಸರು ಹೇಳಿ ಪಣವನ್ನಿಟ್ಟಿದ್ದಾನೆ. ಹಾಗಿರುವಾಗ ನೀನು ಹೇಗೆ ಅವಳನ್ನು ಗೆಲ್ಲಲಿಲ್ಲ ಎಂದು ಹೇಳುತ್ತೀಯೆ?
02061034a ಮನ್ಯಸೇ ವಾ ಸಭಾಮೇತಾಮಾನೀತಾಮೇಕವಾಸಸಂ।
02061034c ಅಧರ್ಮೇಣೇತಿ ತತ್ರಾಪಿ ಶೃಣು ಮೇ ವಾಕ್ಯಮುತ್ತರಂ।।
ಒಂದು ವೇಳೆ ನಿನ್ನ ಅಭಿಪ್ರಾಯದಲ್ಲಿ ಏಕವಸ್ತ್ರಳಾದವಳನ್ನು ಸಭೆಗೆ ಎಳೆದು ತಂದಿದ್ದುದು ಅಧರ್ಮ ಎಂದಾದರೆ ಅದರ ಕುರಿತು ನಾನು ಹೇಳುವ ಮಾತನ್ನು ಕೇಳು.
02061035a ಏಕೋ ಭರ್ತಾ ಸ್ತ್ರಿಯಾ ದೇವೈರ್ವಿಹಿತಃ ಕುರುನಂದನ।
02061035c ಇಯಂ ತ್ವನೇಕವಶಗಾ ಬಂಧಕೀತಿ ವಿನಿಶ್ಚಿತಾ।।
ಕುರುನಂದನ! ಸ್ತ್ರೀಗೆ ಒಬ್ಬನೇ ಪತಿ ಎಂದು ದೈವವಿಹಿತವಾಗಿದ್ದುದು. ಅನೇಕರ ವಶಳಾಗಿರುವ ಇವಳು ಬಂಧಕಿ ಎನ್ನುವುದು ವಿನಿಶ್ಚಿತ.
02061036a ಅಸ್ಯಾಃ ಸಭಾಮಾನಯನಂ ನ ಚಿತ್ರಮಿತಿ ಮೇ ಮತಿಃ।
02061036c ಏಕಾಂಬರಧರತ್ವಂ ವಾಪ್ಯಥ ವಾಪಿ ವಿವಸ್ತ್ರತಾ।।
ನನ್ನ ಅಭಿಪ್ರಾಯದಲ್ಲಿ ಅಂಥವಳನ್ನು ಸಭೆಗೆ ಕರೆತರುವುದರಲ್ಲಿ ಅಥವಾ ಏಕವಸ್ತ್ರದಲ್ಲಿರುವುದಾಗಲೀ ಅಥವಾ ಆ ವಿಷಯದಲ್ಲಿ ವಿವಸ್ತ್ರಳಾಗಿದ್ದರೂ ಏನೂ ತಪ್ಪಿಲ್ಲ.
02061037a ಯಚ್ಚೈಷಾಂ ದ್ರವಿಣಂ ಕಿಂ ಚಿದ್ಯಾ ಚೈಷಾ ಯೇ ಚ ಪಾಂಡವಾಃ।
02061037c ಸೌಬಲೇನೇಹ ತತ್ಸರ್ವಂ ಧರ್ಮೇಣ ವಿಜಿತಂ ವಸು।।
ಇವಳು ಪಾಂಡವರ ಸ್ವತ್ತು ಮತ್ತು ಅವರೆಲ್ಲರನ್ನೂ ಧರ್ಮಪ್ರಕಾರವಾಗಿ ಸಂಪತ್ತಿನ ಸಮೇತ ಸೌಬಲನು ಗೆದ್ದಿರುವನು.
02061038a ದುಃಶಾಸನ ಸುಬಾಲೋಽಯಂ ವಿಕರ್ಣಃ ಪ್ರಾಜ್ಞವಾದಿಕಃ।
02061038c ಪಾಂಡವಾನಾಂ ಚ ವಾಸಾಂಸಿ ದ್ರೌಪದ್ಯಾಶ್ಚಾಪ್ಯುಪಾಹರ।।
ದುಃಶಾಸನ! ಈ ವಿಕರ್ಣನು ಬಾಲಕನಂತೆ ತಿಳಿಯದೇ ಮಾತನಾಡುತ್ತಿದ್ದಾನೆ. ಪಾಂಡವರ ಮತ್ತು ದ್ರೌಪದಿಯ ಬಟ್ಟೆಗಳನ್ನು ಕಳಚು!”
02061039a ತಚ್ಛೃತ್ವಾ ಪಾಂಡವಾಃ ಸರ್ವೇ ಸ್ವಾನಿ ವಾಸಾಂಸಿ ಭಾರತ।
02061039c ಅವಕೀರ್ಯೋತ್ತರೀಯಾಣಿ ಸಭಾಯಾಂ ಸಮುಪಾವಿಶನ್।।
ಭಾರತ! ಇದನ್ನು ಕೇಳಿದ ಸರ್ವ ಪಾಂಡವರೂ ತಮ್ಮ ತಮ್ಮ ವಸ್ತ್ರಗಳನ್ನು ಉತ್ತರೀಯಗಳನ್ನು ತೆಗೆದು ಸಭೆಯಲ್ಲಿ ಕುಳಿತುಕೊಂಡರು.
02061040a ತತೋ ದುಃಶಾಸನೋ ರಾಜನ್ದ್ರೌಪದ್ಯಾ ವಸನಂ ಬಲಾತ್।
02061040c ಸಭಾಮಧ್ಯೇ ಸಮಾಕ್ಷಿಪ್ಯ ವ್ಯಪಕ್ರಷ್ಟುಂ ಪ್ರಚಕ್ರಮೇ।।
ರಾಜನ್! ಆಗ ದುಃಶಾಸನನು ಸಭಾಮಧ್ಯದಲ್ಲಿ ದ್ರೌಪದಿಯ ಬಟ್ಟೆಯನ್ನು ಬಲವಂತವಾಗಿ ಏಳೆಯಲು ಪ್ರಾರಂಭಿಸಿದನು.
02061041a ಆಕೃಷ್ಯಮಾಣೇ ವಸನೇ ದ್ರೌಪದ್ಯಾಸ್ತು ವಿಶಾಂ ಪತೇ।
02061041c ತದ್ರೂಪಮಪರಂ ವಸ್ತ್ರಂ ಪ್ರಾದುರಾಸೀದನೇಕಶಃ।।
ವಿಶಾಂಪತೇ! ಆದರೆ ದ್ರೌಪದಿಯ ವಸ್ತ್ರವನ್ನು ಎಳೆಯುತ್ತಿದ್ದ ಹಾಗೆ ಪ್ರತೀಸಾರಿ ಅದೇ ರೀತಿಯ ವಸ್ತ್ರವು ಪುನಃ ಕಂಡು ಬರುತ್ತಿತ್ತು.
02061042a ತತೋ ಹಲಹಲಾಶಬ್ಧಸ್ತತ್ರಾಸೀದ್ಘೋರನಿಸ್ವನಃ।
02061042c ತದದ್ಭುತತಮಂ ಲೋಕೇ ವೀಕ್ಷ್ಯ ಸರ್ವಮಹೀಕ್ಷಿತಾಂ।।
ಆಗ ಆ ಅದ್ಭುತವನ್ನು ನೋಡಿದ ಲೋಕದ ಸರ್ವ ಮಹೀಕ್ಷಿತರಲ್ಲಿ ಘೋರ ಧ್ವನಿಯಲ್ಲಿ ಹಲಹಲ ಶಬ್ಧ ಉಂಟಾಯಿತು.
02061043a ಶಶಾಪ ತತ್ರ ಭೀಮಸ್ತು ರಾಜಮಧ್ಯೇ ಮಹಾಸ್ವನಃ।
02061043c ಕ್ರೋಧಾದ್ವಿಸ್ಫುರಮಾಣೋಷ್ಠೋ ವಿನಿಷ್ಪಿಷ್ಯ ಕರೇ ಕರಂ।।
ಅಗ ಆ ರಾಜಮಧ್ಯದಲ್ಲಿ ಕ್ರೋಧದಿಂದ ತುಟಿಗಳು ಕಂಪಿಸುತ್ತಿರಲು ಭೀಮನು ಕೈ ಕೈ ತಿರುವುತ್ತಾ ಮಹಾ ಧ್ವನಿಯಲ್ಲಿ ಶಾಪವನ್ನಿತ್ತನು.
02061044a ಇದಂ ಮೇ ವಾಕ್ಯಮಾದದ್ಧ್ವಂ ಕ್ಷತ್ರಿಯಾ ಲೋಕವಾಸಿನಃ।
02061044c ನೋಕ್ತಪೂರ್ವಂ ನರೈರನ್ಯೈರ್ನ ಚಾನ್ಯೋ ಯದ್ವದಿಷ್ಯತಿ।।
“ಈ ಲೋಕದಲ್ಲಿ ವಾಸಿಸುವ ಕ್ಷತ್ರಿಯರೇ! ಇದರ ಮೊದಲು ಯಾರೂ ಹೇಳಿರದ ಮತ್ತು ಇದರ ನಂತರ ಯಾರೂ ಹೇಳಲಾರದ ನನ್ನ ಈ ಮಾತುಗಳನ್ನು ಹೃದಯಪೂರ್ವಕವಾಗಿ ಕೇಳಿ.
02061045a ಯದ್ಯೇತದೇವಮುಕ್ತ್ವಾ ತು ನ ಕುರ್ಯಾಂ ಪೃಥಿವೀಶ್ವರಾಃ।
02061045c ಪಿತಾಮಹಾನಾಂ ಸರ್ವೇಷಾಂ ನಾಹಂ ಗತಿಮವಾಪ್ನುಯಾಂ।।
02061046a ಅಸ್ಯ ಪಾಪಸ್ಯ ದುರ್ಜಾತೇರ್ಭಾರತಾಪಸದಸ್ಯ ಚ।
02061046c ನ ಪಿಬೇಯಂ ಬಲಾದ್ವಕ್ಷೋ ಭಿತ್ತ್ವಾ ಚೇದ್ರುಧಿರಂ ಯುಧಿ।।
ಪೃಥಿವೀಶ್ವರರೇ! ಇಂದು ನಾನು ಹೇಳುವ ಹಾಗೆ ಮಾಡದೇ ಯುದ್ಧದಲ್ಲಿ ಪಾಪಿ ದುರ್ಜಾತಿ ಭಾರತರಿಗೆ ಹೊರತಾದ ಇವನ ಎದೆಯನ್ನು ಬಲವಂತವಾಗಿ ಸೀಳಿ ರಕ್ತವನ್ನು ಕುಡಿಯದೇ ಇದ್ದರೆ ನನ್ನ ಸರ್ವ ಪಿತಾಮಹರ ಗತಿಯನ್ನು ಪಡೆಯದೇ ಇರಲಿ!”
02061047a ತಸ್ಯ ತೇ ವಚನಂ ಶ್ರುತ್ವಾ ಸರ್ವಲೋಕಪ್ರಹರ್ಷಣಂ।
02061047c ಪ್ರಚಕ್ರುರ್ಬಹುಲಾಂ ಪೂಜಾಂ ಕುತ್ಸಂತೋ ಧೃತರಾಷ್ಟ್ರಜಂ।।
ಅವನ ಈ ವಚನವನ್ನು ಕೇಳಿದ ಸರ್ವಲೋಕಗಳೂ ಹರ್ಷಿತಗೊಂಡವು. ಅವನನ್ನು ಬಹಳಷ್ಟು ಗೌರವಿಸಿದರು ಮತ್ತು ಧೃತರಾಷ್ಟ್ರಜನನ್ನು ಜರೆದರು.
02061048a ಯದಾ ತು ವಾಸಸಾಂ ರಾಶಿಃ ಸಭಾಮಧ್ಯೇ ಸಮಾಚಿತಃ।
02061048c ತತೋ ದುಃಶಾಸನಃ ಶ್ರಾಂತೋ ವ್ರೀಡಿತಃ ಸಮುಪಾವಿಶತ್।।
ಸಭಾಮಧ್ಯದಲ್ಲಿ ಬಟ್ಟೆಗಳ ರಾಶಿಯೇ ಆಗಿತ್ತು. ಆಗ ದುಃಶಾಸನನು ಆಯಾಸಗೊಂಡು ನಾಚಿಕೆಯಿಂದ ಕೆಳಗೆ ಕುಳಿತುಕೊಂಡನು.
02061049a ಧಿಕ್ಶಬ್ದಸ್ತು ತತಸ್ತತ್ರ ಸಮಭೂಲ್ಲೋಮಹರ್ಷಣಃ।
02061049c ಸಭ್ಯಾನಾಂ ನರದೇವಾನಾಂ ದೃಷ್ಟ್ವಾ ಕುಂತೀಸುತಾಂಸ್ತದಾ।।
ಆಗ ಆ ಸಭೆಯಲ್ಲಿದ್ದ ನರದೇವತೆಗಳು ಕುಂತೀಸುತರನ್ನು ನೋಡಿ ರೋಮಾಂಚನ ಧ್ವನಿಯಲ್ಲಿ ಧಿಕ್ಕಾರ ಎಂದು ಕೂಗಿದರು.
02061050a ನ ವಿಬ್ರುವಂತಿ ಕೌರವ್ಯಾಃ ಪ್ರಶ್ನಮೇತಮಿತಿ ಸ್ಮ ಹ।
02061050c ಸ ಜನಃ ಕ್ರೋಶತಿ ಸ್ಮಾತ್ರ ಧೃತರಾಷ್ಟ್ರಂ ವಿಗರ್ಹಯನ್।।
ಕೌರವರು ಅವಳ ಪ್ರಶ್ನೆಗೆ ಉತ್ತರಿಸುತ್ತಿಲ್ಲ ಎಂದು ಜನರು ಧೃತರಾಷ್ಟ್ರನನ್ನು ಜರಿದರು.
02061051a ತತೋ ಬಾಹೂ ಸಮುಚ್ಛ್ರಿತ್ಯ ನಿವಾರ್ಯ ಚ ಸಭಾಸದಃ।
02061051c ವಿದುರಃ ಸರ್ವಧರ್ಮಜ್ಞ ಇದಂ ವಚನಮಬ್ರವೀತ್।।
ಆಗ ತನ್ನ ಕೈ ಎತ್ತಿ ಸಭಾಸದರನ್ನು ಸುಮ್ಮನಿಸಿರಿದ ಸರ್ವಧರ್ಮಜ್ಞ ವಿದುರನು ಈ ಮಾತುಗಳನ್ನಾಡಿದನು:
02061052 ವಿದುರ ಉವಾಚ।
02061052a ದ್ರೌಪದೀ ಪ್ರಶ್ನಮುಕ್ತ್ವೈವಂ ರೋರವೀತಿ ಹ್ಯನಾಥವತ್।
02061052c ನ ಚ ವಿಬ್ರೂತ ತಂ ಪ್ರಶ್ನಂ ಸಭ್ಯಾ ಧರ್ಮೋಽತ್ರ ಪೀಡ್ಯತೇ।।
ವಿದುರನು ಹೇಳಿದನು: “ಪ್ರಶ್ನೆಯನ್ನು ಕೇಳಿದ ದ್ರೌಪದಿಯು ಅನಾಥೆಯಂತೆ ರೋದಿಸುತ್ತಿದ್ದಾಳೆ. ಸಭ್ಯರೇ! ಅವಳ ಪ್ರಶ್ನೆಯನ್ನು ಬಿಡಿಸದೇ ಇದ್ದರೆ ಧರ್ಮ ಪೀಡನವಾಗುತ್ತದೆ.
02061053a ಸಭಾಂ ಪ್ರಪದ್ಯತೇ ಹ್ಯಾರ್ತಃ ಪ್ರಜ್ವಲನ್ನಿವ ಹವ್ಯವಾಟ್।
02061053c ತಂ ವೈ ಸತ್ಯೇನ ಧರ್ಮೇಣ ಸಭ್ಯಾಃ ಪ್ರಶಮಯಂತ್ಯುತ।।
ಆರ್ತನಾಗಿ ಸಭೆಗೆ ಬರುವವನು ಪ್ರಜ್ವಲಿಸುವ ಹವ್ಯವಾಹನನ ಹಾಗೆ. ಸಭಿಕರು ಸತ್ಯ ಮತ್ತು ಧರ್ಮದಿಂದ ಅವನನ್ನು ಪ್ರಶಾಂತಗೊಳಿಸಬೇಕು.
02061054a ಧರ್ಮಪ್ರಶ್ನಮಥೋ ಬ್ರೂಯಾದಾರ್ತಃ ಸಭ್ಯೇಷು ಮಾನವಃ।
02061054c ವಿಬ್ರೂಯುಸ್ತತ್ರ ತೇ ಪ್ರಶ್ನಂ ಕಾಮಕ್ರೋಧವಶಾತಿಗಾಃ।।
ಆರ್ತ ಮಾನವನು ಸಭೆಯಲ್ಲಿ ಧರ್ಮಪ್ರಶ್ನೆಯನ್ನು ಕೇಳಿದಾಗ ಕಾಮಕ್ರೋಧಗಳ ವಶಹೋಗದೇ ಆ ಪ್ರಶ್ನೆಯನ್ನು ಅಲ್ಲಿಯೇ ಉತ್ತರಿಸಬೇಕು.
02061055a ವಿಕರ್ಣೇನ ಯಥಾಪ್ರಜ್ಞಮುಕ್ತಃ ಪ್ರಶ್ನೋ ನರಾಧಿಪಾಃ।
02061055c ಭವಂತೋಽಪಿ ಹಿ ತಂ ಪ್ರಶ್ನಂ ವಿಬ್ರುವಂತು ಯಥಾಮತಿ।।
ನರಾಧಿಪರೇ! ವಿಕರ್ಣನು ತನಗೆ ತಿಳಿದ ಪ್ರಮಾಣದಲ್ಲಿ ಪ್ರಶ್ನೆಯನ್ನು ಉತ್ತರಿಸಿದ್ದಾನೆ. ನೀವು ಕೂಡ ನಿಮಗೆ ತಿಳಿದ ಹಾಗೆ ಈ ಪ್ರಶ್ನೆಯ ಕುರಿತು ಮಾತನಾಡಬೇಕು.
02061056a ಯೋ ಹಿ ಪ್ರಶ್ನಂ ನ ವಿಬ್ರೂಯಾದ್ಧರ್ಮದರ್ಶೀ ಸಭಾಂ ಗತಃ।
02061056c ಅನೃತೇ ಯಾ ಫಲಾವಾಪ್ತಿಸ್ತಸ್ಯಾಃ ಸೋಽರ್ಧಂ ಸಮಶ್ನುತೇ।।
ಸಭೆಯಲ್ಲಿ ಕುಳಿತುಕೊಂಡು ಪ್ರಶ್ನೆಗೆ ಉತ್ತರವನ್ನು ನೀಡದೇ ಇದ್ದರೆ ಅವನು ಧರ್ಮದರ್ಶಿಯಾಗಿದ್ದರೂ ಸುಳ್ಳನು ಹೇಳುವುದರ ಅರ್ಧದಷ್ಟು ಫಲವನ್ನು ಅನುಭವಿಸುತ್ತಾನೆ.
02061057a ಯಃ ಪುನರ್ವಿತಥಂ ಬ್ರೂಯಾದ್ಧರ್ಮದರ್ಶೀ ಸಭಾಂ ಗತಃ।
02061057c ಅನೃತಸ್ಯ ಫಲಂ ಕೃತ್ಸ್ನಂ ಸಂಪ್ರಾಪ್ನೋತೀತಿ ನಿಶ್ಚಯಃ।।
ಮತ್ತು ಸಭೆಯಲ್ಲಿದ್ದುಕೊಂಡು ಧರ್ಮದರ್ಶಿಯು ಪ್ರಶ್ನೆಯನ್ನು ಅಧರ್ಮ ರೀತಿಯಲ್ಲಿ ಉತ್ತರಿಸಿದರೆ ಸುಳ್ಳುಹೇಳುವುದರ ಪೂರ್ಣಫಲವನ್ನು ಅನುಭವಿಸಬೇಕಾಗುತ್ತದೆ.
02061058a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ।
02061058c ಪ್ರಹ್ಲಾದಸ್ಯ ಚ ಸಂವಾದಂ ಮುನೇರಾಂಗಿರಸಸ್ಯ ಚ।।
ಇದಕ್ಕೆ ಪುರಾತನ ಇತಿಹಾಸ ಪ್ರಹ್ಲಾದ ಮತ್ತು ಮುನಿ ಆಂಗಿರಸರ ನಡುವಿನ ಸಂವಾದವನ್ನು ಉದಾಹರಣೆಯಾಗಿ ಕೊಡುತ್ತಾರೆ.
02061059a ಪ್ರಹ್ಲಾದೋ ನಾಮ ದೈತ್ಯೇಂದ್ರಸ್ತಸ್ಯ ಪುತ್ರೋ ವಿರೋಚನಃ।
02061059c ಕನ್ಯಾಹೇತೋರಾಂಗಿರಸಂ ಸುಧನ್ವಾನಮುಪಾದ್ರವತ್।।
ಪ್ರಹ್ಲಾದನೆಂಬ ಹೆಸರಿನ ದೈತ್ಯೇಂದ್ರನ ಪುತ್ರ ವಿರೋಚನನು ಓರ್ವ ಕನ್ಯೆಗೋಸ್ಕರ ಆಂಗಿರಸ ಸುಧನ್ವನ ಎದುರಾದನು.
02061060a ಅಹಂ ಜ್ಯಾಯಾನಹಂ ಜ್ಯಾಯಾನಿತಿ ಕನ್ಯೇಪ್ಸಯಾ ತದಾ।
02061060c ತಯೋರ್ದೇವನಮತ್ರಾಸೀತ್ಪ್ರಾಣಯೋರಿತಿ ನಃ ಶ್ರುತಂ।।
ಕನ್ಯೆಯನ್ನು ಬಯಸಿದ ಅವರಿಬ್ಬರೂ ನಾನು ಉತ್ತಮ ನಾನು ಉತ್ತಮ ಎಂದು ತಮ್ಮ ಪ್ರಾಣವನ್ನೇ ಪಣವಿಟ್ಟು ಹೋರಾಡಿದರು ಎಂದು ಕೇಳಿಲ್ಲವೇ?
02061061a ತಯೋಃ ಪ್ರಶ್ನವಿವಾದೋಽಭೂತ್ಪ್ರಹ್ಲಾದಂ ತಾವಪೃಚ್ಛತಾಂ।
02061061c ಜ್ಯಾಯಾಂಕ ಆವಯೋರೇಕಃ ಪ್ರಶ್ನಂ ಪ್ರಬ್ರೂಹಿ ಮಾ ಮೃಷಾ।।
ಅವರಿಬ್ಬರೂ ಆ ಪ್ರಶ್ನೆಯನ್ನು ವಿವಾದಿಸಿ ಪ್ರಹ್ಲಾದನಲ್ಲಿ ಕೇಳಿದರು: “ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎನ್ನುವ ಪ್ರಶ್ನೆಯನ್ನು ಉತ್ತರಿಸು. ಆದರೆ ಸುಳ್ಳನ್ನು ಹೇಳಬೇಡ.”
02061062a ಸ ವೈ ವಿವದನಾದ್ಭೀತಃ ಸುಧನ್ವಾನಂ ವ್ಯಲೋಕಯತ್।
02061062c ತಂ ಸುಧನ್ವಾಬ್ರವೀತ್ಕ್ರುದ್ಧೋ ಬ್ರಹ್ಮದಂಡ ಇವ ಜ್ವಲನ್।
ಈ ವಿವಾದದಿಂದ ಭೀತನಾಗಿ ಅವನು ಸುಧನ್ವನನ್ನು ನೋಡಿದನು. ಆಗ ಸುಧನ್ವನು ಕೃದ್ಧನಾಗಿ ಬ್ರಹ್ಮದಂಡತಂತೆ ಪ್ರಜ್ವಲಿಸುತ್ತಾ ಇಂತೆಂದನು:
02061063a ಯದಿ ವೈ ವಕ್ಷ್ಯಸಿ ಮೃಷಾ ಪ್ರಹ್ಲಾದಾಥ ನ ವಕ್ಷ್ಯಸಿ।
02061063c ಶತಧಾ ತೇ ಶಿರೋ ವಜ್ರೀ ವಜ್ರೇಣ ಪ್ರಹರಿಷ್ಯತಿ।।
“ಪ್ರಹ್ಲಾದ! ಒಂದು ವೇಳೆ ನೀನು ಸುಳ್ಳನ್ನು ಹೇಳಿದರೆ ಅಥವಾ ಏನನ್ನೂ ಹೇಳದೇ ಇದ್ದರೆ ವಜ್ರಿಯು ತನ್ನ ವಜ್ರದಿಂದ ನಿನ್ನ ಶಿರವನ್ನು ನೂರು ತುಂಡುಗಳನ್ನಾಗಿ ಒಡೆಯುತ್ತಾನೆ.”
02061064a ಸುಧನ್ವನಾ ತಥೋಕ್ತಃ ಸನ್ವ್ಯಥಿತೋಽಶ್ವತ್ಥಪರ್ಣವತ್।
02061064c ಜಗಾಮ ಕಶ್ಯಪಂ ದೈತ್ಯಃ ಪರಿಪ್ರಷ್ಟುಂ ಮಹೌಜಸಂ।।
ಸುಧನ್ವನ ಆ ಮಾತಿಗೆ ದೈತ್ಯನು ವ್ಯತಿಥನಾಗಿ ಅಶ್ವತ್ಥ ಎಲೆಯಂತೆ ತತ್ತರಿಸಿದನು ಮತ್ತು ಸಮಾಲೋಚಿಸಲು ಮಹೌಜಸ ಕಶ್ಯಪನಲ್ಲಿಗೆ ಹೋದನು.
02061065 ಪ್ರಹ್ಲಾದ ಉವಾಚ।
02061065a ತ್ವಂ ವೈ ಧರ್ಮಸ್ಯ ವಿಜ್ಞಾತಾ ದೈವಸ್ಯೇಹಾಸುರಸ್ಯ ಚ।
02061065c ಬ್ರಾಹ್ಮಣಸ್ಯ ಮಹಾಪ್ರಾಜ್ಞ ಧರ್ಮಕೃಚ್ಛ್ರಮಿದಂ ಶೃಣು।।
ಪ್ರಹ್ಲಾದನು ಹೇಳಿದನು: “ನೀನು ದೇವತೆಗಳ ಮತ್ತು ಅಸುರರ ಧರ್ಮವನ್ನು ತಿಳಿದಿದ್ದೀಯೆ. ಮಹಾಪ್ರಾಜ್ಞ! ಈಗ ಓರ್ವ ಬ್ರಾಹ್ಮಣನ ಧರ್ಮಪ್ರಶ್ನೆಯನ್ನು ಕೇಳು.
02061066a ಯೋ ವೈ ಪ್ರಶ್ನಂ ನ ವಿಬ್ರೂಯಾದ್ವಿತಥಂ ವಾಪಿ ನಿರ್ದಿಶೇತ್।
02061066c ಕೇ ವೈ ತಸ್ಯ ಪರೇ ಲೋಕಾಸ್ತನ್ಮಮಾಚಕ್ಷ್ವ ಪೃಚ್ಛತಃ।।
ನನ್ನ ಕೇಳಿಕೆಯಂತೆ ಒಂದು ಪ್ರಶ್ನೆಗೆ ನಿರ್ದಿಷ್ಠ ಉತ್ತರವನ್ನು ನೀಡದಿರುವ ಅಥವಾ ಸುಳ್ಳು ಉತ್ತರವನ್ನು ನೀಡುವವನಿಗೆ ಪರ ಲೋಕದಲ್ಲಿ ಯಾವ ಸ್ಥಾನವು ದೊರೆಯುತ್ತದೆ ಎನ್ನುವುದನ್ನು ಹೇಳು.”
02061067 ಕಶ್ಯಪ ಉವಾಚ।
02061067a ಜಾನನ್ನ ವಿಬ್ರುವನ್ಪ್ರಶ್ನಂ ಕಾಮಾತ್ಕ್ರೋಧಾತ್ತಥಾ ಭಯಾತ್।
02061067c ಸಹಸ್ರಂ ವಾರುಣಾನ್ಪಾಶಾನಾತ್ಮನಿ ಪ್ರತಿಮುಂಚತಿ।।
02061068a ತಸ್ಯ ಸಂವತ್ಸರೇ ಪೂರ್ಣೇ ಪಾಶ ಏಕಃ ಪ್ರಮುಚ್ಯತೇ।
02061068c ತಸ್ಮಾತ್ಸತ್ಯಂ ತು ವಕ್ತವ್ಯಂ ಜಾನತಾ ಸತ್ಯಮಂಜಸಾ।।
ಕಶ್ಯಪನು ಹೇಳಿದನು: “ಪ್ರಶ್ನೆಗೆ ಉತ್ತರವನ್ನು ತಿಳಿದೂ ಕಾಮ, ಕ್ರೋಧ ಅಥವಾ ಭಯದಿಂದ ಉತ್ತರಿಸದೇ ಇರುವವನು ತನ್ನ ಮೇಲೆಯೇ ಸಹಸ್ರ ವರುಣ ಪಾಶಗಳನ್ನು ಬಿಡುಗಡೆಮಾಡಿಕೊಳ್ಳುತ್ತಾನೆ. ಅಂಥಹ ಒಂದು ಪಾಶವನ್ನು ಬಿಡಿಸಿಕೊಳ್ಳಲೂ ಅವನಿಗೆ ಒಂದು ವರ್ಷ ಬೇಕಾಗುತ್ತದೆ. ಆದುದರಿಂದ ನಿನಗೆ ಸತ್ಯವು ತಿಳಿದಿದ್ದರೆ ಸತ್ಯವನ್ನು ನೇರವಾಗಿ ಹೇಳಿಬಿಡು.
02061069a ವಿದ್ಧೋ ಧರ್ಮೋ ಹ್ಯಧರ್ಮೇಣ ಸಭಾಂ ಯತ್ರ ಪ್ರಪದ್ಯತೇ।
02061069c ನ ಚಾಸ್ಯ ಶಲ್ಯಂ ಕೃಂತಂತಿ ವಿದ್ಧಾಸ್ತತ್ರ ಸಭಾಸದಃ।।
ಅಧರ್ಮದಿಂದ ಇರಿತಗೊಂಡ ಧರ್ಮನು ಸಭೆಗೆ ಬಂದಾಗ ಸಭಾಸದರು ಆ ಈಟಿಯನ್ನು ಕಿತ್ತೊಗೆಯದಿದ್ದರೆ ಅದು ಅಲ್ಲಿರುವವರನ್ನು ಇರಿಯುತ್ತದೆ.
02061070a ಅರ್ಧಂ ಹರತಿ ವೈ ಶ್ರೇಷ್ಠಃ ಪಾದೋ ಭವತಿ ಕರ್ತೃಷು।
02061070c ಪಾದಶ್ಚೈವ ಸಭಾಸತ್ಸು ಯೇ ನ ನಿಂದಂತಿ ನಿನ್ದಿತಂ।।
ಅವರಲ್ಲಿ ಶ್ರೇಷ್ಠನು ಅರ್ಧವನ್ನು ಪಡೆಯುತ್ತಾನೆ, ಕರ್ತೃವು ಕಾಲುಭಾಗವನ್ನು ಪಡೆಯುತ್ತಾನೆ, ಮತ್ತು ನಿಂದಿಸಬೇಕಾದವರನ್ನು ನಿಂದಿಸದೇ ಇದ್ದ ಸಭಾಸದರು ಕಾಲುಭಾಗವನ್ನು ಪಡೆಯುತ್ತಾರೆ.
02061071a ಅನೇನಾ ಭವತಿ ಶ್ರೇಷ್ಠೋ ಮುಚ್ಯಂತೇ ಚ ಸಭಾಸದಃ।
02061071c ಏನೋ ಗಚ್ಛತಿ ಕರ್ತಾರಂ ನಿಂದಾರ್ಹೋ ಯತ್ರ ನಿಅಂದ್ಯತೇ।।
ನಿಂದಾರ್ಹನನ್ನು ನಿಂದಿಸುವುದರಿಂದ ಶ್ರೇಷ್ಠನು ತಪ್ಪಿಲ್ಲದವನಾಗುತ್ತಾನೆ ಮತ್ತು ಸಭಾಸದರು ಮುಕ್ತರಾಗುತ್ತಾರೆ. ಆಗ ಪಾಪವು ಕರ್ತಾರನಿಗೆ ಹೋಗುತ್ತದೆ.
02061072a ವಿತಥಂ ತು ವದೇಯುರ್ಯೇ ಧರ್ಮಂ ಪ್ರಹ್ಲಾದ ಪೃಚ್ಛತೇ।
02061072c ಇಷ್ಟಾಪೂರ್ತಂ ಚ ತೇ ಘ್ನಂತಿ ಸಪ್ತ ಚೈವ ಪರಾವರಾನ್।।
ಪ್ರಹ್ಲಾದ! ಆದರೆ ಪ್ರಶ್ನೆಯನ್ನು ತಂದವನಿಗೆ ಧರ್ಮದ ವಿರುದ್ಧವನ್ನು ಹೇಳುವವನು ಹಿಂದಿನ ಮತ್ತು ಮುಂದಿನ ಏಳು ಪೀಳಿಗೆಗಳವರೆಗೆ ದಾನ-ಆಹುತಿಗಳ ಫಲವನ್ನು ನಾಶಗೊಳಿಸುತ್ತಾನೆ.
02061073a ಹೃತಸ್ವಸ್ಯ ಹಿ ಯದ್ದುಃಖಂ ಹತಪುತ್ರಸ್ಯ ಚಾಪಿ ಯತ್।
02061073c ಋಣಿನಂ ಪ್ರತಿ ಯಚ್ಚೈವ ರಾಜ್ಞಾ ಗ್ರಸ್ತಸ್ಯ ಚಾಪಿ ಯತ್।।
02061074a ಸ್ತ್ರಿಯಾಃ ಪತ್ಯಾ ವಿಹೀನಾಯಾಃ ಸಾರ್ಥಾದ್ಭ್ರಷ್ಟಸ್ಯ ಚೈವ ಯತ್।
02061074c ಅಧ್ಯೂಢಾಯಾಶ್ಚ ಯದ್ದುಃಖಂ ಸಾಕ್ಷಿಭಿರ್ವಿಹತಸ್ಯ ಚ।।
02061075a ಏತಾನಿ ವೈ ಸಮಾನ್ಯಾಹುರ್ದುಃಖಾನಿ ತ್ರಿದಶೇಶ್ವರಾಃ।
02061075c ತಾನಿ ಸರ್ವಾಣಿ ದುಃಖಾನಿ ಪ್ರಾಪ್ನೋತಿ ವಿತಥಂ ಬ್ರುವನ್।।
ಸಂಪತ್ತನ್ನು ಅಪಹರಿಸಿಕೊಂಡವನ ದುಃಖ, ಪುತ್ರನ ಕೊಲೆಯಾದವನ ದುಃಖ, ಸಾಲಗಾರನ ಪ್ರತಿಯಾದ ದುಃಖ, ರಾಜನ ಬಂಧಿಯಾದವನ ದುಃಖ, ಪತಿವಿಹೀನ ಸ್ತ್ರೀಯ ದುಃಖ, ದಂಡಿನಿಂದ ತೊರೆಯಲ್ಪಟ್ಟವನ ದುಃಖ, ಇಬ್ಬರು ಹೆಂಡತಿಯರಿರುವವನ ಪತ್ನಿಯ ದುಃಖ, ಮತ್ತು ಸಾಕ್ಷಿಗಳ ಎದುರು ಹೊಡೆತತಿಂದವನ ದುಃಖ ಇವೆಲ್ಲವೂ ದುಃಖಗಳೂ ಒಂದೇ ಎಂದು ತ್ರಿದಶೇಶ್ವರರು ಹೇಳುತ್ತಾರೆ. ಈ ಎಲ್ಲ ದುಃಖಗಳಿಗೂ ತಪ್ಪು ಉತ್ತರವನ್ನು ನೀಡಿದವನು ಇದೇ ದುಃಖವನ್ನು ಅನುಭವಿಸಿತ್ತಾನೆ.
02061076a ಸಮಕ್ಷದರ್ಶನಾತ್ಸಾಕ್ಷ್ಯಂ ಶ್ರವಣಾಚ್ಚೇತಿ ಧಾರಣಾತ್।
02061076c ತಸ್ಮಾತ್ಸತ್ಯಂ ಬ್ರುವನ್ಸಾಕ್ಷೀ ಧರ್ಮಾರ್ಥಾಭ್ಯಾಂ ನ ಹೀಯತೇ।।
ತನ್ನ ಸಮಕ್ಷಮದಲ್ಲಿ ಯಾರು ನೋಡುತ್ತಾನೋ ಅಥವಾ ಕೇಳುತ್ತಾನೋ ಅವನನ್ನು ಸಾಕ್ಷಿ ಎಂದು ಕರೆಯುವುದರಿಂದ ಅವನು ಸತ್ಯವನ್ನು ನುಡಿದನಾದರೆ ಅವನ ಧರ್ಮ ಮತ್ತು ಅರ್ಧಗಳು ನಾಶವಾಗುವುದಿಲ್ಲ.””
02061077 ವಿದುರ ಉವಾಚ।
02061077a ಕಶ್ಯಪಸ್ಯ ವಚಃ ಶ್ರುತ್ವಾ ಪ್ರಹ್ಲಾದಃ ಪುತ್ರಮಬ್ರವೀತ್।
02061077c ಶ್ರೇಯಾನ್ಸುಧನ್ವಾ ತ್ವತ್ತೋ ವೈ ಮತ್ತಃ ಶ್ರೇಯಾಂಸ್ತಥಾಂಗಿರಾಃ।।
ವಿದುರನು ಹೇಳಿದನು: “ಕಶ್ಯಪನ ಮಾತನ್ನು ಕೇಳಿದ ಪ್ರಹ್ಲಾದನು ಪುತ್ರನಿಗೆ “ನಿನಗಿಂಥ ಸುಧನ್ವನು ಶ್ರೇಷ್ಠನು. ಏಕೆಂದರೆ ನನಗಿಂಥ ಅಂಗಿರಸನು ಶ್ರೇಷ್ಠ” ಎಂದನು.
02061078a ಮಾತಾ ಸುಧನ್ವನಶ್ಚಾಪಿ ಶ್ರೇಯಸೀ ಮಾತೃತಸ್ತವ।
02061078c ವಿರೋಚನ ಸುಧನ್ವಾಯಂ ಪ್ರಾಣಾನಾಮೀಶ್ವರಸ್ತವ।।
“ಸುಧನ್ವನ ತಾಯಿಯೂ ನಿನ್ನ ತಾಯಿಗಿಂಥ ಶ್ರೇಷ್ಠಳು. ವಿರೋಚನ! ಆದುದರಿಂದ ಸುಧನ್ವನು ನಿನ್ನ ಪ್ರಾಣದ ಈಶ್ವರನಾಗುತ್ತಾನೆ.”
02061079 ಸುಧನ್ವೋವಾಚ।
02061079a ಪುತ್ರಸ್ನೇಹಂ ಪರಿತ್ಯಜ್ಯ ಯಸ್ತ್ವಂ ಧರ್ಮೇ ಪ್ರತಿಷ್ಠಿತಃ।
02061079c ಅನುಜಾನಾಮಿ ತೇ ಪುತ್ರಂ ಜೀವತ್ವೇಷ ಶತಂ ಸಮಾಃ।।
ಸುಧನ್ವನು ಹೇಳಿದನು: “ಪುತ್ರಸ್ನೇಹವನ್ನು ಪರಿತ್ಯಜಿಸಿ ನೀನು ಧರ್ಮದಲ್ಲಿ ಗಟ್ಟಿಯಾಗಿ ನಿಂತಿದ್ದೀಯೆ. ನಿನ್ನ ಪುತ್ರನನ್ನು ಬಿಡುಗಡೆಮಾಡುತ್ತೇನೆ. ಅವನು ನೂರು ವರ್ಷಗಳು ಜೀವಿಸಲಿ.””
02061080 ವಿದುರ ಉವಾಚ।
02061080a ಏವಂ ವೈ ಪರಮಂ ಧರ್ಮಂ ಶ್ರುತ್ವಾ ಸರ್ವೇ ಸಭಾಸದಃ।
02061080c ಯಥಾಪ್ರಶ್ನಂ ತು ಕೃಷ್ಣಾಯಾ ಮನ್ಯಧ್ವಂ ತತ್ರ ಕಿಂ ಪರಂ।।
ವಿದುರನು ಹೇಳಿದನು: “ಸರ್ವ ಸಭಾಸದರೂ ಈ ಪರಮ ಧರ್ಮವನ್ನು ಕೇಳಿದ್ದೀರಿ. ಈಗ ಕೃಷ್ಣೆಯ ಪ್ರಶ್ನೆಯ ಕುರಿತು ಏನು ಉತ್ತರವನ್ನು ನೀಡಬೇಕೆಂದು ಯೋಚಿಸಿರಿ.””
02061081 ವೈಶಂಪಾಯನ ಉವಾಚ।
02061081a ವಿದುರಸ್ಯ ವಚಃ ಶ್ರುತ್ವಾ ನೋಚುಃ ಕಿಂ ಚನ ಪಾರ್ಥಿವಾಃ।
02061081c ಕರ್ಣೋ ದುಃಶಾಸನಂ ತ್ವಾಹ ಕೃಷ್ಣಾಂ ದಾಸೀಂ ಗೃಹಾನ್ನಯ।।
ವೈಶಂಪಾಯನನು ಹೇಳಿದನು: “ವಿದುರನ ಈ ಮಾತುಗಳನ್ನು ಕೇಳಿಯೂ ಪಾರ್ಥಿವರು ಏನನ್ನೂ ಮಾತನ್ನಾಡಲಿಲ್ಲ. ಆಗ ಕರ್ಣನು ದಾಸಿ ಕೃಷ್ಣೆಯನ್ನು ಮನೆಗೆ ಕರೆದುಕೊಂಡು ಹೋಗು ಎಂದು ದುಃಶಾಸನನಿಗೆ ಕೂಗಿ ಹೇಳಿದನು.
02061082a ತಾಂ ವೇಪಮಾನಾಂ ಸವ್ರೀಡಾಂ ಪ್ರಲಪಂತೀಂ ಸ್ಮ ಪಾಂಡವಾನ್।
02061082c ದುಃಶಾಸನಃ ಸಭಾಮಧ್ಯೇ ವಿಚಕರ್ಷ ತಪಸ್ವಿನೀಂ।।
ನಾಚಿ ಕಂಪಿಸುತ್ತಾ ಪಾಂಡವರನ್ನು ನೋಡಿ ಪ್ರಲಪಿಸುತ್ತಿದ್ದ ಆ ತಪಸ್ವಿನಿಯನ್ನು ದುಃಶಾಸನನು ಸಭಾಮದ್ಯದಲ್ಲಿ ಎಳೆದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ರೌಪದ್ಯಾಕರ್ಷಣೇ ಏಕಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ರೌಪದಿಯನ್ನು ಎಳೆತಂದ ವಿಷಯದ ಅರವತ್ತೊಂದನೆಯ ಅಧ್ಯಾಯವು.