060 ದ್ರೌಪದೀಪ್ರಶ್ನವಿಷಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 60

ಸಾರ

ದುರ್ಯೋಧನನು ದ್ರೌಪದಿಯನ್ನು ಕರೆತರಲು ಪ್ರತಿಕಾಮಿಯನ್ನು ಕಳುಹಿಸುವುದು (1-3). ಪ್ರತಿಕಾಮಿಯ ಮೂಲಕ ಪ್ರಶ್ನೆಗಳನ್ನು ಕಳುಹಿಸಿದ ದ್ರೌಪದಿಯು ಬಾರದಿರಲು ದುರ್ಯೋಧನನು ದುಃಶಾಸನನನ್ನು ಕಳುಹಿಸಿದುದು (4-18). ತಾನು ರಜಸ್ವಲೆಯಾಗಿದ್ದು ಏಕವಸ್ತ್ರದಲ್ಲಿದ್ದೇನೆಂದು ಕೇಳಿಕೊಂಡರೂ ದುಃಶಾಸನನು ದ್ರೌಪದಿಯ ಮುಡಿಗೆ ಕೈಹಾಕಿ, ಬಲವಂತವಾಗಿ ಕುರುಸಭೆಗೆ ಎಳೆದು ತರುವುದು (19-27). ಸಭೆಗೆ ಎಳೆತಂದ ದ್ರೌಪದಿಯನ್ನು ನೋಡಿ ಕರ್ಣ, ಶಕುನಿ, ದುರ್ಯೋಧನ ಮತ್ತು ದುಃಶಾಸನರನ್ನು ಬಿಟ್ಟು ಎಲ್ಲರೂ ದುಃಖಿತರಾದುದು (28-39). ಅವಳ ಪ್ರಶ್ನೆಗೆ ಉತ್ತರಿಸುವುದು ಕಷ್ಟವೆಂದು ಭೀಷ್ಮನು ನುಡಿಯಲು, ದ್ರೌಪದಿಯು ಪುನಃ ಪಶ್ನಿಸಿದುದು (40-47).

02060001 ವೈಶಂಪಾಯನ ಉವಾಚ।
02060001a ಧಿಗಸ್ತು ಕ್ಷತ್ತಾರಮಿತಿ ಬ್ರುವಾಣೋ ದರ್ಪೇಣ ಮತ್ತೋ ಧೃತರಾಷ್ಟ್ರಸ್ಯ ಪುತ್ರಃ।
02060001c ಅವೈಕ್ಷತ ಪ್ರಾತಿಕಾಮೀಂ ಸಭಾಯಾಂ ಉವಾಚ ಚೈನಂ ಪರಮಾರ್ಯಮಧ್ಯೇ।।

ವೈಶಂಪಾಯನನು ಹೇಳಿದನು: ““ಕ್ಷತ್ತನಿಗೆ ಧಿಕ್ಕಾರ!” ಎಂದು ಹೇಳಿ, ದರ್ಪಮತ್ತ ಧೃತರಾಷ್ಟ್ರ ಪುತ್ರನು ಸಭೆಯಲ್ಲಿರುವ ಪ್ರತಿಕಾಮಿಯನ್ನು ನೋಡಿ, ಆ ಪರಮ ಆರ್ಯರ ಮಧ್ಯದಲ್ಲಿ ಹೇಳಿದನು:

02060002a ತ್ವಂ ಪ್ರಾತಿಕಾಮಿನ್ದ್ರೌಪದೀಮಾನಯಸ್ವ ನ ತೇ ಭಯಂ ವಿದ್ಯತೇ ಪಾಂಡವೇಭ್ಯಃ।
02060002c ಕ್ಷತ್ತಾ ಹ್ಯಯಂ ವಿವದತ್ಯೇವ ಭೀರುರ್ ನ ಚಾಸ್ಮಾಕಂ ವೃದ್ಧಿಕಾಮಃ ಸದೈವ।।

“ಪ್ರತಿಕಾಮಿ! ನೀನು ಹೋಗಿ ದ್ರೌಪದಿಯನ್ನು ಕರೆದು ತಾ. ಪಾಂಡವರಿಂದ ನಿನಗೆ ಏನೂ ಭಯವಿಲ್ಲ. ಈ ಕ್ಷತ್ತನು ತುಂಬಾ ಮೃದು ಮತ್ತು ಇದರ ವಿರುದ್ಧ ಮಾತನಾಡುತ್ತಾನೆ. ನಮ್ಮ ವೃದ್ಧಿಯನ್ನು ಇವನು ಎಂದೂ ಬಯಸಲಿಲ್ಲ.”

02060003a ಏವಮುಕ್ತಃ ಪ್ರಾತಿಕಾಮೀ ಸ ಸೂತಃ ಪ್ರಾಯಾಚ್ಛೀಘ್ರಂ ರಾಜವಚೋ ನಿಶಮ್ಯ।
02060003c ಪ್ರವಿಶ್ಯ ಚ ಶ್ವೇವ ಸ ಸಿಂಹಗೋಷ್ಠಂ ಸಮಾಸದನ್ಮಹಿಷೀಂ ಪಾಂಡವಾನಾಂ।।

ರಾಜವಚನವನ್ನು ಕೇಳಿದ ಶೀಘ್ರವೇ ಆ ಸೂತ ಪ್ರತಿಕಾಮಿಯು ಹೊರಗೆ ಹೋದನು. ಅವನು ಸಿಂಹದ ಗುಹೆಯನ್ನು ಒಂದು ನಾಯಿಯು ಹೊಗುವಂತೆ ಪಾಂಡವರ ಮಹಿಷಿಯ ಮನೆಯನ್ನು ಪ್ರವೇಶಿಸಿದನು.

02060004 ಪ್ರಾತಿಕಾಮ್ಯುವಾಚ।
02060004a ಯುಧಿಷ್ಠಿರೇ ದ್ಯೂತಮದೇನ ಮತ್ತೇ ದುರ್ಯೋಧನೋ ದ್ರೌಪದಿ ತ್ವಾಮಜೈಷೀತ್।
02060004c ಸಾ ಪ್ರಪದ್ಯ ತ್ವಂ ಧೃತರಾಷ್ಟ್ರಸ್ಯ ವೇಶ್ಮ ನಯಾಮಿ ತ್ವಾಂ ಕರ್ಮಣೇ ಯಾಜ್ಞಸೇನಿ।।

ಪ್ರತಿಕಾಮಿಯು ಹೇಳಿದನು: “ದ್ರೌಪದೀ! ದ್ಯೂತಮದಮತ್ತ ಯುಧಿಷ್ಠಿರನು ನಿನ್ನನ್ನು ದುರ್ಯೋಧನನಿಗೆ ಸೋತನು. ಯಾಜ್ಞಸೇನಿ! ಬಂದು ಧೃತರಾಷ್ಟ್ರನ ಮನೆಯನ್ನು ಪ್ರವೇಶಿಸು. ಅಲ್ಲಿ ನಿನಗೆ ನಿನ್ನ ಕೆಲಸಗಳ ಕುರಿತು ಹೇಳುತ್ತೇನೆ.”

02060005 ದ್ರೌಪದ್ಯುವಾಚ।
02060005a ಕಥಂ ತ್ವೇವಂ ವದಸಿ ಪ್ರಾತಿಕಾಮಿನ್ ಕೋ ವೈ ದೀವ್ಯೇದ್ಭಾರ್ಯಯಾ ರಾಜಪುತ್ರಃ।
02060005c ಮೂಢೋ ರಾಜಾ ದ್ಯೂತಮದೇನ ಮತ್ತ ಆಹೋ ನಾನ್ಯತ್ಕೈತವಮಸ್ಯ ಕಿಂ ಚಿತ್।।

ದ್ರೌಪದಿಯು ಹೇಳಿದಳು: “ಪ್ರತಿಕಾಮಿ! ನನ್ನಲ್ಲಿ ಈ ರೀತಿ ಹೇಗೆ ಮಾತನಾಡುತ್ತಿದ್ದೀಯೆ? ಯಾವ ರಾಜಪುತ್ರನು ತನ್ನ ಪತ್ನಿಯನ್ನು ಪಣವಾಗಿ ಇಡುತ್ತಾನೆ? ಮೂಢ ರಾಜನು ದ್ಯೂತಮದದಲ್ಲಿ ಮತ್ತನಾಗಿದ್ದಿರಬಹುದು. ಅವನಿಗೆ ಪಣವಿಡಲು ಬೇರೆ ಏನೂ ಉಳಿದಿರಲಿಲ್ಲವೇ?”

02060006 ಪ್ರಾತಿಕಾಮ್ಯುವಾಚ।
02060006a ಯದಾ ನಾಭೂತ್ಕೈತವಮನ್ಯದಸ್ಯ ತದಾದೇವೀತ್ಪಾಂಡವೋಽಜಾತಶತ್ರುಃ।
02060006c ನ್ಯಸ್ತಾಃ ಪೂರ್ವಂ ಭ್ರಾತರಸ್ತೇನ ರಾಜ್ಞಾ ಸ್ವಯಂ ಚಾತ್ಮಾ ತ್ವಮಥೋ ರಾಜಪುತ್ರಿ।।

ಪ್ರತಿಕಾಮಿಯು ಹೇಳಿದನು: “ಬೇರೆ ಏನೂ ಪಣವನ್ನಾಗಿಡಲು ಇಲ್ಲದಿದ್ದಾಗಲೇ ಅಜಾತಶತ್ರು ಪಾಂಡವನು ನಿನ್ನನ್ನು ಪಣವಾಗಿಟ್ಟನು. ಇದಕ್ಕೆ ಮೊದಲು ರಾಜನು ತನ್ನ ಸಹೋದರರನ್ನು ಮತ್ತು ನಂತರ ಸ್ವಯಂ ತನ್ನನ್ನೇ ಕಳೆದುಕೊಂಡು ರಾಜಪುತ್ರಿ ನಿನ್ನನ್ನು ಪಣವನ್ನಾಗಿಟ್ಟನು.”

02060007 ದ್ರೌಪದ್ಯುವಾಚ।
02060007a ಗಚ್ಛ ತ್ವಂ ಕಿತವಂ ಗತ್ವಾ ಸಭಾಯಾಂ ಪೃಚ್ಛ ಸೂತಜ।
02060007c ಕಿಂ ನು ಪೂರ್ವಂ ಪರಾಜೈಷೀರಾತ್ಮಾನಂ ಮಾಂ ನು ಭಾರತ।
02060007e ಏತಜ್ಜ್ಞಾತ್ವಾ ತ್ವಮಾಗಚ್ಛ ತತೋ ಮಾಂ ನಯ ಸೂತಜ।।

ದ್ರೌಪದಿಯು ಹೇಳಿದಳು: “ಸೂತಜ! ಹಾಗಾದರೆ ನೀನು ಜೂಜಾಡುವ ಸಭೆಗೆ ಹೋಗಿ ಕೇಳು: “ಭಾರತ! ಮೊದಲು ನೀನು ಯಾರನ್ನು ಸೋತೆ? ನಿನ್ನನ್ನು ಅಥವಾ ನನ್ನನ್ನು?” ಸೂತಜ! ಇದನ್ನು ತಿಳಿದು ನಂತರ ಬಂದು ನನ್ನನ್ನು ಕರೆದುಕೊಂಡು ಹೋಗು.””

02060008 ವೈಶಂಪಾಯನ ಉವಾಚ ।
02060008a ಸಭಾಂ ಗತ್ವಾ ಸ ಚೋವಾಚ ದ್ರೌಪದ್ಯಾಸ್ತದ್ವಚಸ್ತದಾ।
02060008c ಕಸ್ಯೇಶೋ ನಃ ಪರಾಜೈಷೀರಿತಿ ತ್ವಾಮಾಹ ದ್ರೌಪದೀ।।
02060008e ಕಿಂ ನು ಪೂರ್ವಂ ಪರಾಜೈಷೀರಾತ್ಮಾನಮಥ ವಾಪಿ ಮಾಂ।

ವೈಶಂಪಾಯನನು ಹೇಳಿದನು: “ಸಭೆಗೆ ಹೋಗಿ ಅವನು ದ್ರೌಪದಿಯ ಪ್ರಶ್ನೆಯನ್ನು ಕೇಳಿದನು: ““ಯಾರ ಒಡೆಯನೆಂದು ನೀನು ನನ್ನನ್ನು ಸೋತೆ?” ಎಂದು ದ್ರೌಪದಿಯು ಕೇಳುತ್ತಾಳೆ. “ಮೊದಲು ಯಾರನ್ನು ಸೋತೆ? ನಿನ್ನನ್ನೋ ಅಥವಾ ನನ್ನನ್ನೋ?””

02060009a ಯುಧಿಷ್ಠಿರಸ್ತು ನಿಶ್ಚೇಷ್ಟೋ ಗತಸತ್ತ್ವ ಇವಾಭವತ್।।
02060009c ನ ತಂ ಸೂತಂ ಪ್ರತ್ಯುವಾಚ ವಚನಂ ಸಾಧ್ವಸಾಧು ವಾ।

ಆದರೆ ಯುಧಿಷ್ಠಿರನು ಜೀವಹೋದವನಂತೆ ಹಂದಾಡದೇ ಕುಳಿತಿದ್ದನು. ಅವನು ಸೂತನಿಗೆ ಒಳ್ಳೆಯ ಅಥವಾ ಕೆಟ್ಟ ಯಾವುದೇ ಮಾತನ್ನೂ ಹೇಳಲಿಲ್ಲ.

02060010 ದುರ್ಯೋಧನ ಉವಾಚ।
02060010a ಇಹೈತ್ಯ ಕೃಷ್ಣಾ ಪಾಂಚಾಲೀ ಪ್ರಶ್ನಮೇತಂ ಪ್ರಭಾಷತಾಂ।
02060010c ಇಹೈವ ಸರ್ವೇ ಶೃಣ್ವಂತು ತಸ್ಯಾ ಅಸ್ಯ ಚ ಯದ್ವಚಃ।।

ದುರ್ಯೋಧನನು ಹೇಳಿದನು: “ಕೃಷ್ಣೆ ಪಾಂಚಾಲಿಯು ಇಲ್ಲಿಗೇ ಬಂದು ಅವಳೇ ಈ ಪ್ರಶ್ನೆಯನ್ನು ಕೇಳಲಿ. ಅವಳು ಏನು ಹೇಳುವವಳಿದ್ದಾಳೆ ಮತ್ತು ಇವನು ಏನು ಹೇಳುವವನಿದ್ದಾನೆ ಎನ್ನುವುದನ್ನು ಇಡೀ ಸಭೆಯೇ ಕೇಳಲಿ.””

02060011 ವೈಶಂಪಾಯನ ಉವಾಚ।
02060011a ಸ ಗತ್ವಾ ರಾಜಭವನಂ ದುರ್ಯೋಧನವಶಾನುಗಃ।
02060011c ಉವಾಚ ದ್ರೌಪದೀಂ ಸೂತಃ ಪ್ರಾತಿಕಾಮೀ ವ್ಯಥನ್ನಿವ।।

ವೈಶಂಪಾಯನನು ಹೇಳಿದನು: “ದುರ್ಯೋಧನನ ವಶಾನುಗ ಆ ಸೂತ ಪ್ರತಿಕಾಮಿಯು ರಾಜಭವನಕ್ಕೆ ಹೋಗಿ ನಡುಗುತ್ತಾ ದ್ರೌಪದಿಗೆ ಹೇಳಿದನು:

02060012a ಸಭ್ಯಾಸ್ತ್ವಮೀ ರಾಜಪುತ್ರ್ಯಾಹ್ವಯಂತಿ ಮನ್ಯೇ ಪ್ರಾಪ್ತಃ ಸಂಕ್ಷಯಃ ಕೌರವಾಣಾಂ।
02060012c ನ ವೈ ಸಮೃದ್ಧಿಂ ಪಾಲಯತೇ ಲಘೀಯಾನ್ ಯತ್ತ್ವಂ ಸಭಾಮೇಷ್ಯಸಿ ರಾಜಪುತ್ರಿ।।

“ರಾಜಪುತ್ರಿ! ಸಭೆಯಲ್ಲಿರುವವರು ನಿನ್ನನ್ನು ಕರೆಯುತ್ತಿದ್ದಾರೆ. ಕೌರವರ ನಾಶವು ಪ್ರಾಪ್ತವಾಗಿದೆ ಎಂದು ನನಗನ್ನಿಸುತ್ತದೆ. ರಾಜಪುತ್ರಿ! ನೀನು ಸಭೆಗೆ ಬರಬೇಕು ಎನ್ನುವ ಅವನು ನಮ್ಮ ಸಮೃದ್ಧಿಯನ್ನು ಪಾಲಿಸುವವನಲ್ಲ.”

02060013 ದ್ರೌಪದ್ಯುವಾಚ।
02060013a ಏವಂ ನೂನಂ ವ್ಯದಧಾತ್ಸಂವಿಧಾತಾ ಸ್ಪರ್ಶಾವುಭೌ ಸ್ಪೃಶತೋ ಧೀರಬಾಲೌ।
02060013c ಧರ್ಮಂ ತ್ವೇಕಂ ಪರಮಂ ಪ್ರಾಹ ಲೋಕೇ ಸ ನಃ ಶಮಂ ಧಾಸ್ಯತಿ ಗೋಪ್ಯಮಾನಃ।।

ದ್ರೌಪದಿಯು ಹೇಳಿದಳು: “ಇದು ಸಂವಿಧಾತನು ನಿಶ್ಚಯಿಸಿದುದಲ್ಲವೇ! ಎರಡೂ ಸ್ಪರ್ಷಗಳು ಧೀರ-ಬಾಲಕರಿಬ್ಬರನ್ನೂ ಮುಟ್ಟುತ್ತವೆ. ಅವನು ಹೇಳಿದಂತೆ ಲೋಕದಲ್ಲಿ ಧರ್ಮವೊಂದೇ ಶ್ರೇಷ್ಠವಾದುದು. ಧರ್ಮವನ್ನು ಕಾಪಾಡಿದರೆ ಮಾತ್ರ ನಮಗೆ ಶಾಂತಿಯು ದೊರೆಯುತ್ತದೆ.””

02060014 ವೈಶಂಪಾಯನ ಉವಾಚ।
02060014a ಯುಧಿಷ್ಠಿರಸ್ತು ತಚ್ಛೃತ್ವಾ ದುರ್ಯೋಧನಚಿಕೀರ್ಷಿತಂ।
02060014c ದ್ರೌಪದ್ಯಾಃ ಸಮ್ಮತಂ ದೂತಂ ಪ್ರಾಹಿಣೋದ್ಭರತರ್ಷಭ।।

ವೈಶಂಪಾಯನನು ಹೇಳಿದನು: “ಭರತರ್ಷಭ! ಯುಧಿಷ್ಠಿರನಾದರೋ ದುರ್ಯೋದನನು ಏನು ಮಾಡಬೇಕೆಂದಿದ್ದಾನೆ ಎನ್ನುವುದನ್ನು ಕೇಳಿ, ಓರ್ವ ಸಮ್ಮತ ದೂತನನ್ನು ದ್ರೌಪದಿಯ ಕಡೆ ಕಳುಹಿಸಿದನು.

02060015a ಏಕವಸ್ತ್ರಾ ಅಧೋನೀವೀ ರೋದಮಾನಾ ರಜಸ್ವಲಾ।
02060015c ಸಭಾಮಾಗಮ್ಯ ಪಾಂಚಾಲೀ ಶ್ವಶುರಸ್ಯಾಗ್ರತೋಽಭವತ್।।

ರಜಸ್ವಲೆಯಾದ ಏಕವಸ್ತ್ರದಲ್ಲಿದ್ದ ಪಾಂಚಾಲಿಯು ರೋದಿಸುತ್ತಾ ಸಭೆಗೆ ಆಗಮಿಸಿ ತನ್ನ ಮಾವನ ಎದುರು ನಿಂತುಕೊಂಡಳು.

02060016a ತತಸ್ತೇಷಾಂ ಮುಖಮಾಲೋಕ್ಯ ರಾಜಾ ದುರ್ಯೋಧನಃ ಸೂತಮುವಾಚ ಹೃಷ್ಟಃ।
02060016c ಇಹೈವೈತಾಮಾನಯ ಪ್ರಾತಿಕಾಮಿನ್ ಪ್ರತ್ಯಕ್ಷಮಸ್ಯಾಃ ಕುರವೋ ಬ್ರುವಂತು।।

ಅವರ ಮುಖವನ್ನು ನೋಡಿದ ರಾಜ ದುರ್ಯೋಧನನು ಹೃಷ್ಟನಾಗಿ ಸೂತನಿಗೆ ಹೇಳಿದನು: “ಪ್ರತಿಕಾಮಿ! ಅವಳನ್ನು ಇಲ್ಲಿಗೆ ಕರೆದುಕೊಂಡು ಬಾ. ಕುರುಗಳು ಅವಳೊಡನೆ ಪ್ರತ್ಯಕ್ಷವಾಗಿ ಮಾತನಾಡುತ್ತಾರೆ.”

02060017a ತತಃ ಸೂತಸ್ತಸ್ಯ ವಶಾನುಗಾಮೀ ಭೀತಶ್ಚ ಕೋಪಾದ್ದ್ರುಪದಾತ್ಮಜಾಯಾಃ।
02060017c ವಿಹಾಯ ಮಾನಂ ಪುನರೇವ ಸಭ್ಯಾನ್ ಉವಾಚ ಕೃಷ್ಣಾಂ ಕಿಮಹಂ ಬ್ರವೀಮಿ।।

ಅವನ ವಶಾನುಗಾಮಿ ಸೂತನು ದ್ರುಪದಾತ್ಮಜರ ಕೋಪದಿಂದ ಭಯಭೀತನಾಗಿ ತನ್ನ ಮಾನವನ್ನು ತೊರೆದು ಪುನಃ ಸಭೆಗೆ ಹೇಳಿದನು: “ಕೃಷ್ಣೆಯೊಂದಿಗೆ ಮಾತನಾಡಲು ನಾನು ಯಾರು?”

02060018 ದುರ್ಯೋಧನ ಉವಾಚ।
02060018a ದುಃಶಾಸನೈಷ ಮಮ ಸೂತಪುತ್ರೋ ವೃಕೋದರಾದುದ್ವಿಜತೇಽಲ್ಪಚೇತಾಃ।
02060018c ಸ್ವಯಂ ಪ್ರಗೃಹ್ಯಾನಯ ಯಾಜ್ಞಸೇನೀಂ ಕಿಂ ತೇ ಕರಿಷ್ಯಂತ್ಯವಶಾಃ ಸಪತ್ನಾಃ।।

ದುರ್ಯೋಧನನು ಹೇಳಿದನು: “ದುಃಶಾಸನ! ಈ ದಡ್ಡ ಸೂತಪುತ್ರನು ವೃಕೋದರನಿಗೆ ಹೆದರಿದ್ದಾನೆ. ನೀನೇ ಹೋಗಿ ಯಾಜ್ಞಸೇನಿಯನ್ನು ಎಳೆದು ತಾ. ಅಧಿಕಾರವನ್ನು ಕಳೆದುಕೊಂಡವರು ನಿನ್ನನ್ನು ಹೇಗೆ ತಡೆದಾರು?”

02060019a ತತಃ ಸಮುತ್ಥಾಯ ಸ ರಾಜಪುತ್ರಃ ಶ್ರುತ್ವಾ ಭ್ರಾತುಃ ಕೋಪವಿರಕ್ತದೃಷ್ಟಿಃ।
02060019c ಪ್ರವಿಶ್ಯ ತದ್ವೇಶ್ಮ ಮಹಾರಥಾನಾಂ ಇತ್ಯಬ್ರವೀದ್ದ್ರೌಪದೀಂ ರಾಜಪುತ್ರೀಂ।।

ಅಣ್ಣನನ್ನು ಕೇಳಿದ ರಾಜಪುತ್ರನು ಮೇಲೆದ್ದು ಕೋಪದಿಂದ ಕಣ್ಣುಕೆಂಪು ಮಾಡಿಕೊಂಡು ಆ ಮಹಾರಥಿಗಳ ಅರಮನೆಯನ್ನು ಪ್ರವೇಶಿಸಿ ರಾಜಪುತ್ರಿ ದ್ರೌಪದಿಗೆ ಹೇಳಿದನು:

02060020a ಏಹ್ಯೇಹಿ ಪಾಂಚಾಲಿ ಜಿತಾಸಿ ಕೃಷ್ಣೇ ದುರ್ಯೋಧನಂ ಪಶ್ಯ ವಿಮುಕ್ತಲಜ್ಜಾ।
02060020c ಕುರೂನ್ಭಜಸ್ವಾಯತಪದ್ಮನೇತ್ರೇ ಧರ್ಮೇಣ ಲಬ್ಧಾಸಿ ಸಭಾಂ ಪರೈಹಿ।।

“ಪಾಂಚಾಲಿ ಕೃಷ್ಣೇ! ನಿನ್ನನ್ನು ಗೆದ್ದಾಗಿದೆ. ಬಾ. ಲಜ್ಜೆಯನ್ನು ತೊರೆದು ದುರ್ಯೋಧನನ್ನು ನೋಡು. ಆಯತಪದ್ಮನೇತ್ರೇ! ಇನ್ನು ನೀನು ಕುರುಗಳ ಸೇವೆ ಮಾಡುವೆ. ನಿನ್ನನ್ನು ಧರ್ಮಪೂರ್ವಕವಾಗಿಯೇ ಪಡೆದಿದ್ದಾಗಿದೆ. ನನ್ನೊಂದಿಗೆ ಸಭೆಗೆ ಬಾ.”

02060021a ತತಃ ಸಮುತ್ಥಾಯ ಸುದುರ್ಮನಾಃ ಸಾ ವಿವರ್ಣಮಾಮೃಜ್ಯ ಮುಖಂ ಕರೇಣ।
02060021c ಆರ್ತಾ ಪ್ರದುದ್ರಾವ ಯತಃ ಸ್ತ್ರಿಯಸ್ತಾ ವೃದ್ಧಸ್ಯ ರಾಜ್ಞಃ ಕುರುಪುಂಗವಸ್ಯ।।

ಅವಳು ಮನಸ್ಸಿಲ್ಲದೇ ಎದ್ದು ಕೈಗಳಿಂದ ವಿವರ್ಣ ಮುಖವನ್ನು ಉಜ್ಜಿಕೊಂಡು ಆರ್ತಳಾಗಿ ರೋದಿಸುತ್ತಾ ಕುರುಪುಂಗವ ವೃದ್ಧ ರಾಜನ ಸ್ತ್ರೀಯರು ಇರುವ ಕಡೆ ಓಡಿದಳು.

02060022a ತತೋ ಜವೇನಾಭಿಸಸಾರ ರೋಷಾದ್ ದುಃಶಾಸನಸ್ತಾಮಭಿಗರ್ಜಮಾನಃ।
02060022c ದೀರ್ಘೇಷು ನೀಲೇಷ್ವಥ ಚೋರ್ಮಿಮತ್ಸು ಜಗ್ರಾಹ ಕೇಶೇಷು ನರೇಂದ್ರಪತ್ನೀಂ।।

ಆಗ ತಕ್ಷಣವೇ ರೋಷದಿಂದ ಗರ್ಜಿಸುತ್ತಾ ದುಃಶಾಸನನು ಅವಳ ಬಿಚ್ಚಿದ ದೀರ್ಘ ನೀಲ ಕೇಶದ ಮೂಲಕ ಆ ನರೇಂದ್ರಪತ್ನಿಯನ್ನು ಹಿಡಿದನು.

02060023a ಯೇ ರಾಜಸೂಯಾವಭೃಥೇ ಜಲೇನ ಮಹಾಕ್ರತೌ ಮಂತ್ರಪೂತೇನ ಸಿಕ್ತಾಃ।
02060023c ತೇ ಪಾಂಡವಾನಾಂ ಪರಿಭೂಯ ವೀರ್ಯಂ ಬಲಾತ್ಪ್ರಮೃಷ್ಟಾ ಧೃತರಾಷ್ಟ್ರಜೇನ।।

ಮಹಾಕ್ರತು ರಾಜಸೂಯದ ಅವಭೃಥ ಜಲದಿಂದ ಮಂತ್ರೋಕ್ತವಾಗಿ ತೊಳೆಯಲ್ಪಟ್ಟ ಕೇಶವನ್ನು ಧೃತರಾಷ್ಟ್ರಜನು ಬಲವಂತವಾಗಿ ಎಳೆದು ಪಾಂಡವರ ವೀರ್ಯವನ್ನು ಅಲ್ಲಗಳೆದನು.

02060024a ಸ ತಾಂ ಪರಾಮೃಶ್ಯ ಸಭಾಸಮೀಪಂ ಆನೀಯ ಕೃಷ್ಣಾಮತಿಕೃಷ್ಣಕೇಶೀಂ।
02060024c ದುಃಶಾಸನೋ ನಾಥವತೀಮನಾಥವಚ್ ಚಕರ್ಷ ವಾಯುಃ ಕದಲೀಮಿವಾರ್ತಾಂ।।

ದುಃಶಾಸನನು ಅತಿಕೃಷ್ಣಕೇಶಿನಿ ಕೃಷ್ಣೆಯನ್ನು ಎಳೆದು ಸಭಾಸಮೀಪಕ್ಕೆ ತಂದು ನಾಥವತಿಯಾಗಿದ್ದರೂ ಅನಾಥೆಯಂತೆ ಅವಳನ್ನು ವಾಯುವು ಬಾಳೆಯ ಮರವನ್ನು ತಳ್ಳಿ ಉರುಳಿಸುವಂತೆ ತಳ್ಳಿದನು.

02060025a ಸಾ ಕೃಷ್ಯಮಾಣಾ ನಮಿತಾಂಗಯಷ್ಟಿಃ ಶನೈರುವಾಚಾದ್ಯ ರಜಸ್ವಲಾಸ್ಮಿ।
02060025c ಏಕಂ ಚ ವಾಸೋ ಮಮ ಮಂದಬುದ್ಧೇ ಸಭಾಂ ನೇತುಂ ನಾರ್ಹಸಿ ಮಾಮನಾರ್ಯ।।

ಅವಳನ್ನು ಎಳೆದುಕೊಂಡು ಹೋಗುತ್ತಿರುವಾಗ ಅವಳು ತನ್ನ ದೇಹವನ್ನು ಬಗ್ಗಿಸಿಕೊಂಡು ಸಣ್ಣ ಸ್ವರದಲ್ಲಿ ಹೇಳಿದಳು: “ಇಂದು ನಾನು ರಜಸ್ವಲೆಯಾಗಿದ್ದೇನೆ. ಮೂಢ! ಒಂದೇ ಒಂದು ವಸ್ತ್ರದಲ್ಲಿದ್ದೇನೆ. ಅನಾರ್ಯ! ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಡ.”

02060026a ತತೋಽಬ್ರವೀತ್ತಾಂ ಪ್ರಸಭಂ ನಿಗೃಹ್ಯ ಕೇಶೇಷು ಕೃಷ್ಣೇಷು ತದಾ ಸ ಕೃಷ್ಣಾಂ।
02060026c ಕೃಷ್ಣಂ ಚ ಜಿಷ್ಣುಂ ಚ ಹರಿಂ ನರಂ ಚ ತ್ರಾಣಾಯ ವಿಕ್ರೋಶ ನಯಾಮಿ ಹಿ ತ್ವಾಂ।।

ಆದರೆ ತನ್ನ ಶಕ್ತಿಯಿಂದ ಕಪ್ಪು ಕೇಶವನ್ನು ಹಿಡಿದು ಕೃಷ್ಣೆಯನ್ನು ಕೆಳಗೆ ತಳ್ಳಿದ ಅವನು “ಪಾರುಮಾಡಲು ಕೃಷ್ಣ, ಜಿಷ್ಣು, ಹರಿ ಮತ್ತು ನರ ಯಾರನ್ನಾದರೂ ಕೂಗಿ ಕರೆ. ಆದರೂ ನಾನು ನಿನ್ನನ್ನು ಎಳೆದೊಯ್ಯುತ್ತೇನೆ” ಎಂದನು.

02060027a ರಜಸ್ವಲಾ ವಾ ಭವ ಯಾಜ್ಞಸೇನಿ ಏಕಾಂಬರಾ ವಾಪ್ಯಥ ವಾ ವಿವಸ್ತ್ರಾ।
02060027c ದ್ಯೂತೇ ಜಿತಾ ಚಾಸಿ ಕೃತಾಸಿ ದಾಸೀ ದಾಸೀಷು ಕಾಮಶ್ಚ ಯಥೋಪಜೋಷಂ।

“ಯಾಜ್ಞಸೇನಿ! ನೀನು ರಜಸ್ವಲೆಯಾಗಿರಬಹುದು, ಏಕಾಂಬರಿಯಾಗಿರಬದುದು ಅಥವಾ ವಿವಸ್ತ್ರಳಾಗಿರಬಹುದು. ದ್ಯೂತದಲ್ಲಿ ನಿನ್ನನ್ನು ಗೆದ್ದು ದಾಸಿಯನಾಗಿ ಮಾಡಿದ್ದೇವೆ. ಮತ್ತು ದಾಸಿಯರೊಂದಿಗೆ ನಮಗಿಷ್ಟಬಂದಂತೆ ವರ್ತಿಸುತ್ತೇವೆ.”

02060028a ಪ್ರಕೀರ್ಣಕೇಶೀ ಪತಿತಾರ್ಧವಸ್ತ್ರಾ ದುಃಶಾಸನೇನ ವ್ಯವಧೂಯಮಾನಾ।
02060028c ಹ್ರೀಮತ್ಯಮರ್ಷೇಣ ಚ ದಹ್ಯಮಾನಾ ಶನೈರಿದಂ ವಾಕ್ಯಮುವಾಚ ಕೃಷ್ಣಾ।।

ಕೂದಲು ಕೆದರಿಹೋಗಿರಲು ವಸ್ತ್ರವು ಬೀಳುತ್ತಿರಲು ದುಃಶಾಸನನಿಂದ ಎಳೆದುಕೊಂಡು ಹೋಗಲ್ಪಟ್ಟ ಕೃಷ್ಣೆಯು ನಾಚಿಕೆ ಮತ್ತು ಸಿಟ್ಟಿನಿಂದ ಸಣ್ಣಧ್ವನಿಯಲ್ಲಿ ಪುನಃ ಹೇಳಿದಳು:

02060029a ಇಮೇ ಸಭಾಯಾಮುಪದಿಷ್ಟಶಾಸ್ತ್ರಾಃ ಕ್ರಿಯಾವಂತಃ ಸರ್ವ ಏವೇಂದ್ರಕಲ್ಪಾಃ।
02060029c ಗುರುಸ್ಥಾನಾ ಗುರವಶ್ಚೈವ ಸರ್ವೇ ತೇಷಾಮಗ್ರೇ ನೋತ್ಸಹೇ ಸ್ಥಾತುಮೇವಂ।।

“ಸಭೆಯಲ್ಲಿ ಸರ್ವರೂ ಇಂದ್ರ ಸಮಾನರು, ಶಾಸ್ತ್ರಗಳನ್ನು ಓದಿದವರು ಮತ್ತು ಕ್ರಿಯಾವಂತರಿದ್ದಾರೆ. ಸರ್ವರೂ ಹಿರಿಯರಾಗಿದ್ದು ನನ್ನ ಗುರುಸ್ಥಾನದಲ್ಲಿದ್ದಾರೆ. ಅವರ ಕಣ್ಣೆದುರು ನಾನು ಈ ರೀತಿ ನಿಲ್ಲಲಾರೆ!

02060030a ನೃಶಂಸಕರ್ಮಂಸ್ತ್ವಮನಾರ್ಯವೃತ್ತ ಮಾ ಮಾಂ ವಿವಸ್ತ್ರಾಂ ಕೃಧಿ ಮಾ ವಿಕಾರ್ಷೀಃ।
02060030c ನ ಮರ್ಷಯೇಯುಸ್ತವ ರಾಜಪುತ್ರಾಃ ಸೇಂದ್ರಾಪಿ ದೇವಾ ಯದಿ ತೇ ಸಹಾಯಾಃ।।

ಅನಾರ್ಯನಂತೆ ನಡೆದುಕೊಳ್ಳುತ್ತಿರುವವನೇ! ನೃಷಂಸಕ! ನನ್ನನ್ನು ಈ ರೀತಿ ವಿವಸ್ತ್ರಳನ್ನಾಗಿ ಮಾಡಿ ಅಪಮಾನಗೊಳಿಸಬೇಡ! ನಿನ್ನ ಸಹಾಯಕ್ಕೆಂದು ಇಂದ್ರನೊಂದಿಗೆ ದೇವತೆಗಳು ಬಂದರೂ ಈ ರಾಜಪುತ್ರರು ನಿನ್ನನ್ನು ಬಿಡಲಾರರು.

02060031a ಧರ್ಮೇ ಸ್ಥಿತೋ ಧರ್ಮಸುತಶ್ಚ ರಾಜಾ ಧರ್ಮಶ್ಚ ಸೂಕ್ಷ್ಮೋ ನಿಪುಣೋಪಲಭ್ಯಃ।
02060031c ವಾಚಾಪಿ ಭರ್ತುಃ ಪರಮಾಣುಮಾತ್ರಂ ನೇಚ್ಛಾಮಿ ದೋಷಂ ಸ್ವಗುಣಾನ್ವಿಸೃಜ್ಯ।।

ರಾಜ ಧರ್ಮಸುತನು ಧರ್ಮದಲ್ಲಿ ನಿರತನಾದವನು ಮತ್ತು ಧರ್ಮವು ನಿಪುಣರಿಗೂ ತಿಳಿಯದೇ ಸೂಕ್ಷ್ಮವಾದದ್ದು. ನನ್ನ ಪತಿಯ ಮಾತೂ ಕೂಡ ನನ್ನ ಸ್ವಗುಣಗಳನ್ನು ತೊರೆದು ಪರಮಾಣುಮಾತ್ರದ ದೋಷವನ್ನೂ ಕೂಡ ಬಯಸುವುದಿಲ್ಲ.

02060032a ಇದಂ ತ್ವನಾರ್ಯಂ ಕುರುವೀರಮಧ್ಯೇ ರಜಸ್ವಲಾಂ ಯತ್ಪರಿಕರ್ಷಸೇ ಮಾಂ।
02060032c ನ ಚಾಪಿ ಕಶ್ಚಿತ್ಕುರುತೇಽತ್ರ ಪೂಜಾಂ ಧ್ರುವಂ ತವೇದಂ ಮತಮನ್ವಪದ್ಯನ್।।

ರಜಸ್ವಲೆಯಾಗಿರುವ ನನ್ನನ್ನು ಕುರುವೀರರ ಮಧ್ಯದಲ್ಲಿ ನೀನು ಈ ರೀತಿ ಎಳೆದುಕೊಂಡು ಹೋಗುವುದು ಅನಾರ್ಯವಾದುದು. ಇದಕ್ಕಾಗಿ ನಿನ್ನನ್ನು ಇಲ್ಲಿರುವ ಯಾರೂ ಗೌರವಿಸುವುದಿಲ್ಲ. ನಿಶ್ಚಯವಾಗಿಯೂ ನಿನ್ನ ಮನಸ್ಸಿನಲ್ಲಿರುವುದು ಅವರಿಗೆ ತಿಳಿದಿಲ್ಲ.

02060033a ಧಿಗಸ್ತು ನಷ್ಟಃ ಖಲು ಭಾರತಾನಾಂ ಧರ್ಮಸ್ತಥಾ ಕ್ಷತ್ರವಿದಾಂ ಚ ವೃತ್ತಂ।
02060033c ಯತ್ರಾಭ್ಯತೀತಾಂ ಕುರುಧರ್ಮವೇಲಾಂ ಪ್ರೇಕ್ಷಂತಿ ಸರ್ವೇ ಕುರವಃ ಸಭಾಯಾಂ।।

ನಿನಗೆ ಧಿಕ್ಕಾರ! ಸಭೆಯಲ್ಲಿರುವ ಸರ್ವ ಕುರುಗಳೂ ಕುರುಧರ್ಮವನ್ನು ಉಲ್ಲಂಘಿಸುತ್ತಿರುವುದನ್ನು ನೋಡುತ್ತಿರುವರಲ್ಲಾ! ಭಾರತರ ಧರ್ಮ ಮತ್ತು ಕ್ಷತ್ರಿಯರಿಗಿರುವ ನಡವಳಿಕೆ ನಷ್ಟವಾಗಿ ಹೋಯಿತೇ!

02060034a ದ್ರೋಣಸ್ಯ ಭೀಷ್ಮಸ್ಯ ಚ ನಾಸ್ತಿ ಸತ್ತ್ವಂ ಧ್ರುವಂ ತಥೈವಾಸ್ಯ ಮಹಾತ್ಮನೋಽಪಿ।
02060034c ರಾಜ್ಞಸ್ತಥಾ ಹೀಮಮಧರ್ಮಮುಗ್ರಂ ನ ಲಕ್ಷಯಂತೇ ಕುರುವೃದ್ಧಮುಖ್ಯಾಃ।।

ದ್ರೋಣ ಮತ್ತು ಭೀಷ್ಮರಲ್ಲಿ ಸತ್ವವು ಉಳಿದಿಲ್ಲ ಎನ್ನುವುದು ನಿಶ್ಚಯ. ಹಾಗೆಯೇ ಮಹಾತ್ಮ ರಾಜನನ್ನೂ ಸೇರಿ ಕುರುವೃದ್ಧಮುಖ್ಯರು ಈ ಉಗ್ರ ಅಧರ್ಮವನ್ನು ಗಮನಿಸುತ್ತಿಲ್ಲವಲ್ಲಾ!”

02060035a ತಥಾ ಬ್ರುವಂತೀ ಕರುಣಂ ಸುಮಧ್ಯಮಾ ಕಾಕ್ಷೇಣ ಭರ್ತೄನ್ಕುಪಿತಾನಪಶ್ಯತ್।
02060035c ಸಾ ಪಾಂಡವಾನ್ಕೋಪಪರೀತದೇಹಾನ್ ಸಂದೀಪಯಾಮಾಸ ಕಟಾಕ್ಷಪಾತೈಃ।।

ಹೀಗೆ ಕರುಣಾಜನಕವಾಗಿ ಮಾತನಾಡುತ್ತಿದ್ದ ಆ ಸುಮಧ್ಯಮೆಯು ತನ್ನ ಪತಿಯರನ್ನು ಹೀನ ಕೋಪ ದೃಷ್ಟಿಯಿಂದ ನೋಡಿದಳು ಮತ್ತು ಅವಳ ತುದಿಗಣ್ಣಿನ ಕುಪಿತ ದೃಷ್ಟಿಯು ಅವರ ಮೇಲೆ ಬೀಳಲು ಪಾಂಡವರ ಅಂಗಾಂಗಗಳು ಕೋಪಪರಿವೃತವಾದವು.

02060036a ಹೃತೇನ ರಾಜ್ಯೇನ ತಥಾ ಧನೇನ ರತ್ನೈಶ್ಚ ಮುಖ್ಯೈರ್ನ ತಥಾ ಬಭೂವ।
02060036c ಯಥಾರ್ತಯಾ ಕೋಪಸಮೀರಿತೇನ ಕೃಷ್ಣಾಕಟಾಕ್ಷೇಣ ಬಭೂವ ದುಃಖಂ।।

ಕೃಷ್ಣೆಯ ಆರ್ತ ಮತ್ತು ಕೋಪಗಳಿಂದ ಕೂಡಿದ ತುದಿಗಣ್ಣಿನ ದೃಷ್ಟಿಯಷ್ಟು ಅವರಿಗೆ ರಾಜ್ಯ, ಧನ ಅಥವಾ ಪ್ರಮುಖ ರತ್ನಗಳನ್ನಾಗಲೀ ಕಳೆದುಕೊಂಡಿದ್ದುದು ದುಃಖವನ್ನು ಕೊಟ್ಟಿರಲಿಲ್ಲ.

02060037a ದುಃಶಾಸನಶ್ಚಾಪಿ ಸಮೀಕ್ಷ್ಯ ಕೃಷ್ಣಾಂ ಅವೇಕ್ಷಮಾಣಾಂ ಕೃಪಣಾನ್ಪತೀಂಸ್ತಾನ್।
02060037c ಆಧೂಯ ವೇಗೇನ ವಿಸಂಜ್ಞಕಲ್ಪಾಂ ಉವಾಚ ದಾಸೀತಿ ಹಸನ್ನಿವೋಗ್ರಃ।

ಕೃಪಣರಾದ ತನ್ನ ಆ ಪತಿಗಳ ಮೇಲೆ ದೃಷ್ಟಿಹಾಯಿಸುತ್ತಿದ್ದ ಕೃಷ್ಣೆಯನ್ನು ನೋಡಿದ ದುಃಶಾಸನನು ಅವಳು ಮೂರ್ಛೆಹೋಗುವಷ್ಟು ವೇಗದಿಂದ ಅವಳನ್ನು ಹಿಡಿದು ಅಲ್ಲಾಡಿಸುತ್ತಾ ಉಗ್ರವಾಗಿ ನಗುತ್ತಾ ದಾಸಿ ಎಂದು ಕರೆದನು.

02060038a ಕರ್ಣಸ್ತು ತದ್ವಾಕ್ಯಮತೀವ ಹೃಷ್ಟಃ ಸಂಪೂಜಯಾಮಾಸ ಹಸನ್ಸಶಬ್ಧಂ।
02060038c ಗಾಂಧಾರರಾಜಃ ಸುಬಲಸ್ಯ ಪುತ್ರಸ್ ತಥೈವ ದುಃಶಾಸನಮಭ್ಯನಂದತ್।।

ಅತೀವ ಹೃಷ್ಟನಾದ ಕರ್ಣನು ನಗುತ್ತಾ ಅದೇ ಶಬ್ಧವನ್ನು ಬಳಸಿ ಅವನ ಆ ಮಾತನ್ನು ಗೌರವಿಸಿದನು. ಗಾಂಧಾರರಾಜ ಸುಬಲನ ಪುತ್ರನೂ ಕೂಡ ಹಾಗೆಯೇ ದುಃಶಾಸನನನ್ನು ಅಭಿನಂದಿಸಿದನು.

02060039a ಸಭ್ಯಾಸ್ತು ಯೇ ತತ್ರ ಬಭೂವುರನ್ಯೇ ತಾಭ್ಯಾಂ ಋತೇ ಧಾರ್ತರಾಷ್ಟ್ರೇಣ ಚೈವ।
02060039c ತೇಷಾಮಭೂದ್ದುಃಖಮತೀವ ಕೃಷ್ಣಾಂ ದೃಷ್ಟ್ವಾ ಸಭಾಯಾಂ ಪರಿಕೃಷ್ಯಮಾಣಾಂ।।

ಇವರಿಬ್ಬರು ಮತ್ತು ಧಾರ್ತರಾಷ್ಟ್ರನನ್ನು ಬಿಟ್ಟು ಸಭೆಯಲ್ಲಿ ಕುಳಿತಿದ್ದ ಎಲ್ಲರೂ ಕೃಷ್ಣೆಯನ್ನು ಈ ರೀತಿ ಸಭೆಗೆ ಎಳೆದು ತಂದಿದ್ದನ್ನು ನೋಡಿ ಅತೀವ ದುಃಖಿತರಾದರು.

02060040 ಭೀಷ್ಮ ಉವಾಚ।
02060040a ನ ಧರ್ಮಸೌಕ್ಷ್ಮ್ಯಾತ್ಸುಭಗೇ ವಿವಕ್ತುಂ ಶಕ್ನೋಮಿ ತೇ ಪ್ರಶ್ನಮಿಮಂ ಯಥಾವತ್।
02060040c ಅಸ್ವೋ ಹ್ಯಶಕ್ತಃ ಪಣಿತುಂ ಪರಸ್ವಂ ಸ್ತ್ರಿಯಶ್ಚ ಭರ್ತುರ್ವಶತಾಂ ಸಮೀಕ್ಷ್ಯ।।

ಭೀಷ್ಮನು ಹೇಳಿದನು: “ಸುಭಗೇ! ಧರ್ಮವು ಸೂಕ್ಷ್ಮವಾದುದು. ನಿನ್ನ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳಲು ನಾನು ಅಸಮರ್ಥನಾಗಿದ್ದೇನೆ. ತನ್ನದಲ್ಲದ ಇನ್ನೊಬ್ಬರನ್ನು ಪಣವಾಗಿಡುವುದು ಸರಿಯಲ್ಲ. ಆದರೆ ಸ್ತ್ರೀಯು ಭರ್ತೃವಿನ ವಶವೆಂದು ಕಾಣುತ್ತಾರೆ.

02060041a ತ್ಯಜೇತ ಸರ್ವಾಂ ಪೃಥಿವೀಂ ಸಮೃದ್ಧಾಂ ಯುಧಿಷ್ಠಿರಃ ಸತ್ಯಮಥೋ ನ ಜಹ್ಯಾತ್।
02060041c ಉಕ್ತಂ ಜಿತೋಽಸ್ಮೀತಿ ಚ ಪಾಂಡವೇನ ತಸ್ಮಾನ್ನ ಶಕ್ನೋಮಿ ವಿವೇಕ್ತುಮೇತತ್।।

ಯುಧಿಷ್ಠಿರನು ಸತ್ಯವನ್ನು ತ್ಯಜಿಸುವ ಮೊದಲು ಸರ್ವ ಸಮೃದ್ಧ ಪೃಥಿವಿಯನ್ನೇ ತ್ಯಜಿಸುವವನು. ಆ ಪಾಂಡವನು ನನ್ನನ್ನು ಗೆದ್ದಿದ್ದಾರೆ ಎಂದು ಹೇಳಿದ. ಆದುದರಿಂದ ನಾನು ಈ ಗೊಂದಲವನ್ನು ಬಿಡಿಸಲಾರೆ.

02060042a ದ್ಯೂತೇಽದ್ವಿತೀಯಃ ಶಕುನಿರ್ನರೇಷು ಕುಂತೀಸುತಸ್ತೇನ ನಿಸೃಷ್ಟಕಾಮಃ।
02060042c ನ ಮನ್ಯತೇ ತಾಂ ನಿಕೃತಿಂ ಮಹಾತ್ಮಾ ತಸ್ಮಾನ್ನ ತೇ ಪ್ರಶ್ನಮಿಮಂ ಬ್ರವೀಮಿ।।

ದ್ಯೂತದಲ್ಲಿ ಶಕುನಿಯ ಅದ್ವಿತೀಯರಾದವರು ಯಾರೂ ಇಲ್ಲ. ಅವನು ಕುಂತೀಸುತನಿಗೆ ಅವನಿಗಿಷ್ಟಬಂದಹಾಗೆ ಮಾಡಲು ಅವಕಾಶಕೊಟ್ಟಿದ್ದಾನೆ. ಆ ಮಹಾತ್ಮನು ತನಗೆ ಮೋಸವಾಗಿದೆ ಎಂದು ತಿಳಿದಿಲ್ಲ. ಆದುದರಿಂದ ನಾನು ನಿನ್ನ ಈ ಪ್ರಶ್ನೆಗೆ ಉತ್ತರಿಸಲಾರೆ.”

02060043 ದ್ರೌಪದ್ಯುವಾಚ।
02060043a ಆಹೂಯ ರಾಜಾ ಕುಶಲೈಃ ಸಭಾಯಾಂ ದುಷ್ಟಾತ್ಮಭಿರ್ನೈಕೃತಿಕೈರನಾರ್ಯೈಃ।
02060043c ದ್ಯೂತಪ್ರಿಯೈರ್ನಾತಿಕೃತಪ್ರಯತ್ನಃ ಕಸ್ಮಾದಯಂ ನಾಮ ನಿಸೃಷ್ಟಕಾಮಃ।।

ದ್ರೌಪದಿಯು ಹೇಳಿದಳು: “ಅನಾರ್ಯ ದುಷ್ಟಾತ್ಮ ಮೋಸಗಾರ ಕುಶಲ ದ್ಯೂತಪ್ರಿಯರು ಇದರಲ್ಲಿ ಪಳಗಿಲ್ಲದ ರಾಜನನ್ನು ಸಭೆಗೆ ಆಹ್ವಾನಿಸಿದರು. ಹಾಗಿದ್ದಾಗ ಅವನಿಗೆ ಇಷ್ಟಬಂದಹಾಗೆ ಮಾಡಲು ಅವಕಾಶವಿತ್ತು ಎಂದು ಹೇಗೆ ಹೇಳಬಹುದು?

02060044a ಸ ಶುದ್ಧಭಾವೋ ನಿಕೃತಿಪ್ರವೃತ್ತಿಂ ಅಬುಧ್ಯಮಾನಃ ಕುರುಪಾಂಡವಾಗ್ರ್ಯಃ।
02060044c ಸಂಭೂಯ ಸರ್ವೈಶ್ಚ ಜಿತೋಽಪಿ ಯಸ್ಮಾತ್ ಪಶ್ಚಾಚ್ಚ ಯತ್ಕೈತವಮಭ್ಯುಪೇತಃ।।

ಈ ಶುದ್ಧಭಾವ ಕುರುಪಾಂಡವಾಗ್ರನು ಮೋಸಪ್ರವೃತ್ತಿಯನ್ನು ತಿಳಿಯಲಿಲ್ಲ. ಆಟವಾಡಲು ತೊಡಗಿದ ಅವನು ಸರ್ವವನ್ನೂ ಕಳೆದುಕೊಂಡ ನಂತರವೇ ನನ್ನನ್ನು ಪಣವನ್ನಾಗಿಡಲು ಒಪ್ಪಿಕೊಂಡನು.

02060045a ತಿಷ್ಠಂತಿ ಚೇಮೇ ಕುರವಃ ಸಭಾಯಾಂ ಈಶಾಃ ಸುತಾನಾಂ ಚ ತಥಾ ಸ್ನುಷಾಣಾಂ।
02060045c ಸಮೀಕ್ಷ್ಯ ಸರ್ವೇ ಮಮ ಚಾಪಿ ವಾಕ್ಯಂ ವಿಬ್ರೂತ ಮೇ ಪ್ರಶ್ನಮಿಮಂ ಯಥಾವತ್।।

ಮಕ್ಕಳು ಮತ್ತು ಸೊಸೆಯಂದಿರ ಈಶರಾದ ಕುರುಗಳು ಇಲ್ಲಿ ಈ ಸಭೆಯಲ್ಲಿ ಇದ್ದಾರೆ. ಎಲ್ಲರೂ ನನ್ನ ಈ ಮಾತನ್ನು ಸಮೀಕ್ಷಿಸಿ ಮತ್ತು ನನ್ನ ಈ ಪ್ರಶ್ನೆಗೆ ಯಥಾವತ್ತಾಗಿ ಉತ್ತರಿಸಿ.””

02060046 ವೈಶಂಪಾಯನ ಉವಾಚ।
02060046a ತಥಾ ಬ್ರುವಂತೀಂ ಕರುಣಂ ರುದಂತೀಂ ಅವೇಕ್ಷಮಾಣಾಮಸಕೃತ್ಪತೀಂಸ್ತಾನ್।
02060046c ದುಃಶಾಸನಃ ಪರುಷಾಣ್ಯಪ್ರಿಯಾಣಿ ವಾಕ್ಯಾನ್ಯುವಾಚಾಮಧುರಾಣಿ ಚೈವ।।

ವೈಶಂಪಾಯನನು ಹೇಳಿದನು: “ಈ ರೀತಿ ಕರುಣಾಜನಕವಾಗಿ ರೋದಿಸುತ್ತಾ ಹೇಳಿದ ಅವಳು ತನ್ನ ಆ ಪತಿಯಂದಿರನ್ನು ನೋಡುತ್ತಿರಲು ದುಃಶಾಸನನು ಪೌರುಷದಿಂದ ಅಪ್ರಿಯ ಅಮಧುರ ಮಾತುಗಳನ್ನಾಡಿದನು.

02060047a ತಾಂ ಕೃಷ್ಯಮಾಣಾಂ ಚ ರಜಸ್ವಲಾಂ ಚ ಸ್ರಸ್ತೋತ್ತರೀಯಾಮತದರ್ಹಮಾಣಾಂ।
02060047c ವೃಕೋದರಃ ಪ್ರೇಕ್ಷ್ಯ ಯುಧಿಷ್ಠಿರಂ ಚ ಚಕಾರ ಕೋಪಂ ಪರಮಾರ್ತರೂಪಃ।।

ಉತ್ತರೀಯವನ್ನು ಹಿಡಿದೆಳೆಯುವಂತೆ ಆ ಅನರ್ಹ ರಜಸ್ವಲೆಯನ್ನು ಎಳೆದು ತಂದುದ್ದನ್ನು ನೋಡಿದ ವೃಕೋದರನು ಕೋಪದಿಂದ ಯುಧಿಷ್ಠಿರನನ್ನು ನೋಡಿ ಪರಮಾರ್ತರೂಪನಾದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ರೌಪದೀಪ್ರಶ್ನವಿಷಯಕ ಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ರೌಪದೀಪ್ರಶ್ನವಿಷಯಕ ಅರವತ್ತನೆಯ ಅಧ್ಯಾಯವು.