ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 59
ಸಾರ
ದ್ರೌಪದಿಯನ್ನು ಕರೆದುಕೊಂಡು ಬಾ ಎಂದು ದುರ್ಯೋಧನನು ವಿದುರನಿಗೆ ಹೇಳಲು ವಿದುರನು ಅವನಿಗೆ ಎಚ್ಚರಿಸುವ ಮಾತುಗಳನ್ನಾಡುವುದು (1-12).
02059001 ದುರ್ಯೋಧನ ಉವಾಚ।
02059001a ಏಹಿ ಕ್ಷತ್ತರ್ದ್ರೌಪದೀಮಾನಯಸ್ವ ಪ್ರಿಯಾಂ ಭಾರ್ಯಾಂ ಸಮ್ಮತಾಂ ಪಾಂಡವಾನಾಂ।
02059001c ಸಮ್ಮಾರ್ಜತಾಂ ವೇಶ್ಮ ಪರೈತು ಶೀಘ್ರಂ ಆನಂದೋ ನಃ ಸಹ ದಾಸೀಭಿರಸ್ತು।।
ದುರ್ಯೋಧನನು ಹೇಳಿದನು: “ಕ್ಷತ್ತ! ಇಲ್ಲಿ ಬಾ! ಪಾಂಡವರು ಗೌರವಿಸುವ ಪ್ರಿಯ ಭಾರ್ಯೆ ದ್ರೌಪದಿಯನ್ನು ಕರೆದುಕೊಂಡು ಬಾ! ತಕ್ಷಣವೇ ಅವಳು ನಮ್ಮ ಇತರ ದಾಸಿಯರೊಂದಿಗೆ ಮನೆಯನ್ನು ಗುಡಿಸಲಿ ಮತ್ತು ಇತರ ಕೆಲಸಗಳನ್ನು ಮಾಡಲಿ. ಅದನ್ನು ನೋಡಲು ಏನು ಸಂತೋಷ!”
02059002 ವಿದುರ ಉವಾಚ।
02059002a ದುರ್ವಿಭಾವ್ಯಂ ಭವತಿ ತ್ವಾದೃಶೇನ ನ ಮಂದ ಸಂಬುಧ್ಯಸಿ ಪಾಶಬದ್ಧಃ।
02059002c ಪ್ರಪಾತೇ ತ್ವಂ ಲಂಬಮಾನೋ ನ ವೇತ್ಸಿ ವ್ಯಾಘ್ರಾನ್ಮೃಗಃ ಕೋಪಯಸೇಽತಿಬಾಲ್ಯಾತ್।।
ವಿದುರನು ಹೇಳಿದನು: “ನಿನ್ನಂಥವರಿಂದ ನಡೆಯಬಾರದ್ದುದು ನಡೆದುಹೋಗುತ್ತದೆ. ಮೂಢ! ಪಾಶವನ್ನು ಸುತ್ತಿಹಾಕಿಕೊಳ್ಳುತ್ತಿದ್ದೀಯೆ ಎನ್ನುವುದು ನಿನಗೆ ತಿಳಿಯುತ್ತಿಲ್ಲ. ಸಿಟ್ಟಾದ ಹುಲಿಯ ಮೇಲೆ ಬೀಳುವ ಜಿಂಕೆಯಂತೆ ನೀನು ತಿಳಿಯದೇ ಪ್ರಪಾತದಲ್ಲಿ ನೇತಾಡುತ್ತಿದ್ದೀಯೆ.
02059003a ಆಶೀವಿಷಾಃ ಶಿರಸಿ ತೇ ಪೂರ್ಣಕೋಶಾ ಮಹಾವಿಷಾಃ।
02059003c ಮಾ ಕೋಪಿಷ್ಠಾಃ ಸುಮಂದಾತ್ಮನ್ಮಾ ಗಮಸ್ತ್ವಂ ಯಮಕ್ಷಯಂ।।
ಮಹಾವಿಷದಿಂದ ತುಂಬಿದ ವಿಷಸರ್ಪಗಳನ್ನು ತಲೆಯಮೇಲೆ ಹೊತ್ತಿದ್ದೀಯೆ. ಮಂದಾತ್ಮ! ಅವರನ್ನು ಇನ್ನೂ ಸಿಟ್ಟಿಗೆಬ್ಬಿಸಬೇಡ. ನೀನು ಯಮಕ್ಷಯಕ್ಕೆ ಹೋಗುತ್ತೀಯೆ.
02059004a ನ ಹಿ ದಾಸೀತ್ವಮಾಪನ್ನಾ ಕೃಷ್ಣಾ ಭವತಿ ಭಾರತ।
02059004c ಅನೀಶೇನ ಹಿ ರಾಜ್ಞೈಷಾ ಪಣೇ ನ್ಯಸ್ತೇತಿ ಮೇ ಮತಿಃ।।
ಭಾರತ! ತನ್ನ ಮೇಲಿನ ಒಡೆತನವನ್ನು ಕಳೆದುಕೊಂಡ ನಂತರವೇ ರಾಜನು ಅವಳನ್ನು ಪಡವಾಗಿಟ್ಟಿದುದರಿಂದ ಕೃಷ್ಣೆಯು ಇನ್ನೂ ದಾಸಿಯಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯ.
02059005a ಅಯಂ ಧತ್ತೇ ವೇಣುರಿವಾತ್ಮಘಾತೀ ಫಲಂ ರಾಜಾ ಧೃತರಾಷ್ಟ್ರಸ್ಯ ಪುತ್ರಃ।
02059005c ದ್ಯೂತಂ ಹಿ ವೈರಾಯ ಮಹಾಭಯಾಯ ಪಕ್ವೋ ನ ಬುಧ್ಯತ್ಯಯಮಂತಕಾಲೇ।।
ತನ್ನನ್ನೇ ನಾಶಪಡಿಸುವ ಬಿದಿರು ಹೇಗೆ ಹೂವನ್ನು ನೀಡುತ್ತದೆಯೋ ಹಾಗೆ ರಾಜ ಧೃತರಾಷ್ಟ್ರ ಪುತ್ರನು ಫಲವನ್ನು ನೀಡುತ್ತಿದ್ದಾನೆ. ಯಮಾಂತಕಾಲವನ್ನು ಪ್ರಾಪ್ತಿ ಹೊಂದಿದ ಇವನಿಗೆ ದ್ಯೂತವು ಮಹಾಭಯಂಕರ ವೈರಕ್ಕೆ ದಾರಿಮಾಡಿಕೊಡುತ್ತದೆ ಎನ್ನುವುದನ್ನು ತಿಳಿದಿಲ್ಲ.
02059006a ನಾರುಂತುದಃ ಸ್ಯಾನ್ನ ನೃಶಂಸವಾದೀ ನ ಹೀನತಃ ಪರಮಭ್ಯಾದದೀತ।
02059006c ಯಯಾಸ್ಯ ವಾಚಾ ಪರ ಉದ್ವಿಜೇತ ನ ತಾಂ ವದೇದ್ರುಶತೀಂ ಪಾಪಲೋಕ್ಯಾಂ।।
ಕೆಟ್ಟದ್ದನ್ನು ಮಾಡಬೇಡ, ಕೆಟ್ಟದ್ದನ್ನು ಮಾತನಾಡಬೇಡ. ಏನೂ ಇಲ್ಲದವನಿಂದ ಎಲ್ಲವನ್ನೂ ಕಸಿಯಬೇಡ. ಘಾಯಗೊಂಡಿರುವವನಿಗೆ ಏನನ್ನು ಹೇಳಿದರೆ ಇನ್ನೊಬ್ಬರಿಗೆ ದುಃಖವನ್ನುಂಟುಮಾಡುತ್ತದೆಯೋ ಅಂಥಹ ಮಾತುಗಳನ್ನಾಡಬೇಡ.
02059007a ಸಮುಚ್ಚರಂತ್ಯತಿವಾದಾ ಹಿ ವಕ್ತ್ರಾದ್ ಯೈರಾಹತಃ ಶೋಚತಿ ರಾತ್ರ್ಯಹಾನಿ।
02059007c ಪರಸ್ಯ ನಾಮರ್ಮಸು ತೇ ಪತಂತಿ ತಾನ್ಪಂಡಿತೋ ನಾವಸೃಜೇತ್ಪರೇಷು।।
ಬಾಯಿಂದ ಹೊರಬರುವ ಮಾತುಗಳು ಯಾರನ್ನು ತಲುಪುತ್ತದೆಯೋ ಅವನು ಹಗಲು ರಾತ್ರಿ ಶೋಕಿಸುತ್ತಾನೆ. ಇನ್ನೊಬ್ಬರಿಗೆ ನೋವನ್ನುಂಟುಮಾಡುವ ಮಾತುಗಳನ್ನು ಪಂಡಿತರು ಆಡುವುದೇ ಇಲ್ಲ.
02059008a ಅಜೋ ಹಿ ಶಸ್ತ್ರಮಖನತ್ಕಿಲೈಕಃ ಶಸ್ತ್ರೇ ವಿಪನ್ನೇ ಪದ್ಭಿರಪಾಸ್ಯ ಭೂಮಿಂ।
02059008c ನಿಕೃಂತನಂ ಸ್ವಸ್ಯ ಕಂಠಸ್ಯ ಘೋರಂ ತದ್ವದ್ವೈರಂ ಮಾ ಖನೀಃ ಪಾಂಡುಪುತ್ರೈಃ।।
ಕಳೆದು ಹೋದ ಖಡ್ಗವನ್ನು ಒಂದು ಆಡು ಭೂಮಿಯನ್ನು ಪರಚಿ ಅಗೆದು ತೆಗೆಯಿತಂತೆ. ಆದರೆ ಮುಂದೆ ಅದೇ ಖಡ್ಗವು ಅದರ ಕುತ್ತಿಗೆಯನ್ನು ಕಡಿಯುವ ಘೋರ ಸಾಧನವಾಯಿತಂತೆ. ಆದುದರಿಂದ ಪಾಂಡುಪುತ್ರರೊಂದಿಗೆ ವೈರವನ್ನು ಬಗೆಯಬೇಡ.
02059009a ನ ಕಿಂ ಚಿದೀಡ್ಯಂ ಪ್ರವದಂತಿ ಪಾಪಂ ವನೇಚರಂ ವಾ ಗೃಹಮೇಧಿನಂ ವಾ।
02059009c ತಪಸ್ವಿನಂ ಸಂಪರಿಪೂರ್ಣವಿದ್ಯಂ ಭಷಂತಿ ಹೈವಂ ಶ್ವನರಾಃ ಸದೈವ।।
ಅಂಥವರು ವನೇಚರರ ಮೇಲೆ ಅಥವಾ ಗೃಹಸ್ಥರಮೇಲೆ ಅಥವಾ ಪರಿಪೂರ್ಣ ವಿಧ್ಯಾವಂತರಾದ ತಪಸ್ವಿಗಳ ಮೇಲೆ ಒಳ್ಳೆಯದನ್ನಾಗಲೀ ಕೆಟ್ಟದ್ದನ್ನಾಗಲೀ ಮಾತನಾಡುವುದಿಲ್ಲ. ಆದರೆ ಅವರು ನಾಯಿಗಳಂತೆ ಸದಾ ಬೊಗಳುತ್ತಿರುತ್ತಾರೆ.
02059010a ದ್ವಾರಂ ಸುಘೋರಂ ನರಕಸ್ಯ ಜಿಹ್ಮಂ ನ ಬುಧ್ಯಸೇ ಧೃತರಾಷ್ಟ್ರಸ್ಯ ಪುತ್ರ।
02059010c ತ್ವಾಮನ್ವೇತಾರೋ ಬಹವಃ ಕುರೂಣಾಂ ದ್ಯೂತೋದಯೇ ಸಹ ದುಃಶಾಸನೇನ।।
ಧೃತರಾಷ್ಟ್ರ ಪುತ್ರ! ಇದೊಂದು ಘೋರ ನರಕದ ಕಡೆ ತೆರೆಯುವ ದ್ವಾರ ಎಂದು ನಿನಗೆ ತಿಳಿದಿಲ್ಲ. ಈ ದ್ಯೂತದೊಂದಿಗೆ ಅಲ್ಲಿಗೆ ನಿನ್ನನ್ನು ದುಃಶಾಸನನ ಸಹಿತ ಅಲ್ಲಿ ಇನ್ನೂ ಬಹಳಷ್ಟು ಕುರುಗಳು ಹಿಂಬಾಲಿಸುವರು.
02059011a ಮಜ್ಜಂತ್ಯಲಾಬೂನಿ ಶಿಲಾಃ ಪ್ಲವಂತೇ ಮುಹ್ಯಂತಿ ನಾವೋಽಂಭಸಿ ಶಶ್ವದೇವ।
02059011c ಮೂಢೋ ರಾಜಾ ಧೃತರಾಷ್ಟ್ರಸ್ಯ ಪುತ್ರೋ ನ ಮೇ ವಾಚಃ ಪಥ್ಯರೂಪಾಃ ಶೃಣೋತಿ।।
ಮೂಢ ರಾಜ ಧೃತರಾಷ್ಟ್ರನ ಪುತ್ರನು ಪದ್ಯರೂಪದ ನನ್ನ ಈ ಮಾತುಗಳನ್ನು ಕೇಳದಿದ್ದರೆ ಹಲಗೆಗಳು ಮುಳುಗುತ್ತವೆ ಮತ್ತು ಕಲ್ಲುಗಳು ತೇಲುತ್ತವೆ. ಹಡಗುಗಳು ಸಮುದ್ರದಲ್ಲಿ ಶಾಶ್ವತವಾಗಿ ದಾರಿತಪ್ಪುತ್ತವೆ.
02059012a ಅಂತೋ ನೂನಂ ಭವಿತಾಯಂ ಕುರೂಣಾಂ ಸುದಾರುಣಃ ಸರ್ವಹರೋ ವಿನಾಶಃ।
02059012c ವಾಚಃ ಕಾವ್ಯಾಃ ಸುಹೃದಾಂ ಪಥ್ಯರೂಪಾ ನ ಶ್ರೂಯಂತೇ ವರ್ಧತೇ ಲೋಭ ಏವ।।
ತಿಳಿದಿರುವವರ ಮತ್ತು ಸುಹೃದಯರ ಪದ್ಯರೂಪದ ಮಾತುಗಳನ್ನು ಕೇಳದ ಮತ್ತು ಲೋಭವನ್ನು ವೃದ್ಧಿಸುತ್ತಿರುವ ಇದು ಕುರುಗಳ ಸುದಾರುಣ, ಸರ್ವಹರ ವಿನಾಶವನ್ನು ತರುತ್ತದೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ವಿದುರವಾಕ್ಯೇ ಏಕೋನಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ವಿದುರವಾಕ್ಯ ಎನ್ನುವ ಐವತ್ತೊಂಭತ್ತನೆಯ ಅಧ್ಯಾಯವು.