ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 58
ಸಾರ
ಮುಂದಿನ ನಾಲ್ಕು ಪಣಗಳನ್ನೂ ಯುಧಿಷ್ಠಿರನು ಸೋತುದು (1-10). ಮುಂದಿನ ನಾಲ್ಕು ಪಣಗಳಾಗಿ ತಮ್ಮಂದಿರನ್ನೂ ಯುಧಿಷ್ಠಿರನು ಸೋತುದು (11-25). ಯುಧಿಷ್ಠಿರನು ತನ್ನನ್ನೂ, ದ್ರೌಪದಿಯನ್ನೂ ಪಣವಾಗಿಟ್ಟು ಸೋತುದು (26-43).
02058001 ಶಕುನಿರುವಾಚ।
02058001a ಬಹು ವಿತ್ತಂ ಪರಾಜೈಷೀಃ ಪಾಂಡವಾನಾಂ ಯುಧಿಷ್ಠಿರ।
02058001c ಆಚಕ್ಷ್ವ ವಿತ್ತಂ ಕೌಂತೇಯ ಯದಿ ತೇಽಸ್ತ್ಯಪರಾಜಿತಂ।।
ಶಕುನಿಯು ಹೇಳಿದನು: “ಯುಧಿಷ್ಠಿರ! ಪಾಂಡವರ ಬಹಳಷ್ಟು ಸಂಪತ್ತನ್ನು ಸೋತಿದ್ದೀಯೆ. ಕೌಂತೇಯ! ಇನ್ನೂ ಸೋಲದೇ ಇದ್ದ ಸಂಪತ್ತು ಇದ್ದರೆ ಹೇಳು.”
02058002 ಯುಧಿಷ್ಠಿರ ಉವಾಚ।
02058002a ಮಮ ವಿತ್ತಮಸಂಖ್ಯೇಯಂ ಯದಹಂ ವೇದ ಸೌಬಲ।
02058002c ಅಥ ತ್ವಂ ಶಕುನೇ ಕಸ್ಮಾದ್ವಿತ್ತಂ ಸಮನುಪೃಚ್ಛಸಿ।।
ಯುಧಿಷ್ಠಿರನು ಹೇಳಿದನು: “ಸೌಬಲ! ನನ್ನಲ್ಲಿ ಅಸಂಖ್ಯ ಸಂಪತ್ತಿದೆ ಎಂದು ತಿಳಿ. ಶಕುನಿ! ನನ್ನ ಸಂಪತ್ತಿನ ಕುರಿತು ನೀನೇಕೆ ಕೇಳುತ್ತಿದ್ದೀಯೆ?
02058003a ಅಯುತಂ ಪ್ರಯುತಂ ಚೈವ ಖರ್ವಂ ಪದ್ಮಂ ತಥಾರ್ಬುದಂ।
02058003c ಶಂಖಂ ಚೈವ ನಿಖರ್ವಂ ಚ ಸಮುದ್ರಂ ಚಾತ್ರ ಪಣ್ಯತಾಂ।
02058003e ಏತನ್ಮಮ ಧನಂ ರಾಜಂಸ್ತೇನ ದೀವ್ಯಾಮ್ಯಹಂ ತ್ವಯಾ।।
ಪಣವಿಡಲು ಲೆಕ್ಕ ಮಾಡಲಾಗದಷ್ಟು, ತೂಕಮಾಡಲಾಗದಷ್ಟು, ಕೋಟಿಗಟ್ಟಲೆ, ಪದ್ಮಗಟ್ಟಲೆ, ಅರ್ಬುದಗಟ್ಟಲೆ, ಸಮುದ್ರದ ನೀರಿನ ಹನಿಗಳನ್ನು ಹೇಗೆ ಲೆಖ್ಕಮಾಡಲು ಅಸಾಧ್ಯವೋ ಅಷ್ಟು ಧನ ನನ್ನಲ್ಲಿದೆ. ರಾಜನ್! ಈ ನನ್ನ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.””
02058004 ವೈಶಂಪಾಯನ ಉವಾಚ।
02058004a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ।
02058004c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058005 ಯುಧಿಷ್ಠಿರ ಉವಾಚ।
02058005a ಗವಾಶ್ವಂ ಬಹುಧೇನೂಕಮಸಂಖ್ಯೇಯಮಜಾವಿಕಂ।
02058005c ಯತ್ಕಿಂಚಿದನುವರ್ಣಾನಾಂ ಪ್ರಾಕ್ಸಿಂಧೋರಪಿ ಸೌಬಲ।
02058005e ಏತನ್ಮಮ ಧನಂ ರಾಜಂಸ್ತೇನ ದೀವ್ಯಾಮ್ಯಹಂ ತ್ವಯಾ।।
ಯುಧಿಷ್ಠಿರನು ಹೇಳಿದನು: “ನನ್ನಲ್ಲಿ ಅಸಂಖ್ಯ ಹೆಚ್ಚು ಹಾಲನ್ನೀಯುವ ಗೋವುಗಳು, ಕುದುರೆಗಳು ಇವೆ. ಸಿಂಧುವಿನ ಪೂರ್ವಕ್ಕೆ ನಮ್ಮ ಬಣ್ಣದ ಜನರಲ್ಲಿರುವ ಎಲ್ಲವೂ ನನ್ನವೇ. ರಾಜನ್! ನನ್ನ ಈ ಧನವನ್ನೇ ನಿನಗೆ ನಾನು ನೀಡುತ್ತಿದ್ದೇನೆ.””
02058006 ವೈಶಂಪಾಯನ ಉವಾಚ।
02058006a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ।
02058006c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058007 ಯುಧಿಷ್ಠಿರ ಉವಾಚ।
02058007a ಪುರಂ ಜನಪದೋ ಭೂಮಿರಬ್ರಾಹ್ಮಣಧನೈಃ ಸಹ।
02058007c ಅಬ್ರಾಹ್ಮಣಾಶ್ಚ ಪುರುಷಾ ರಾಜಂ ಶಿಷ್ಟಂ ಧನಂ ಮಮ।
02058007e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ।।
ಯುಧಿಷ್ಠಿರನು ಹೇಳಿದನು: “ರಾಜನ್! ಇನ್ನು ನನ್ನಲ್ಲಿ ಉಳಿದಿರುವ ಧನವೆಂದರೆ ನನ್ನ ನಗರ, ಜನಪದ, ಬ್ರಾಹ್ಮಣರದ್ದನ್ನು ಬಿಟ್ಟು ಉಳಿದ ಭೂಮಿ, ಬ್ರಾಹ್ಮಣರನ್ನು ಬಿಟ್ಟು ಉಳಿದ ನಾಗರೀಕರು. ರಾಜನ್! ನನ್ನ ಇವೆಲ್ಲವನ್ನೂ ನಿನಗೆ ನಾನು ಕೊಡುತ್ತಿದ್ದೇನೆ.””
02058008 ವೈಶಂಪಾಯನ ಉವಾಚ।
02058008a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ।
02058008c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058009 ಯುಧಿಷ್ಠಿರ ಉವಾಚ।
02058009a ರಾಜಪುತ್ರಾ ಇಮೇ ರಾಜಂ ಶೋಭಂತೇ ಯೇನ ಭೂಷಿತಾಃ।
02058009c ಕುಂಡಲಾನಿ ಚ ನಿಷ್ಕಾಶ್ಚ ಸರ್ವಂ ಚಾಂಗವಿಭೂಷಣಂ।
02058009e ಏತನ್ಮಮ ಧನಂ ರಾಜಂಸ್ತೇನ ದೀವ್ಯಾಮ್ಯಹಂ ತ್ವಯಾ।।
ಯುಧಿಷ್ಠಿರನು ಹೇಳಿದನು: “ರಾಜನ್! ಇಗೋ ರಾಜಪುತ್ರರು ಧರಿಸಿ ಶೋಭಿಸುತ್ತಿರುವ ಎಲ್ಲ ಕುಂಡಲಗಳು, ಎದೆ ಕವಚಗಳು, ಅಂಗವಿಭೂಷಣಗಳು. ರಾಜನ್! ಈ ನನ್ನ ಧನವನ್ನು ನಿನಗೆ ನಾನು ಕೊಡುತ್ತಿದ್ದೇನೆ.””
02058010 ವೈಶಂಪಾಯನ ಉವಾಚ।
02058010a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ।
02058010c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058011 ಯುಧಿಷ್ಠಿರ ಉವಾಚ।
02058011a ಶ್ಯಾಮೋ ಯುವಾ ಲೋಹಿತಾಕ್ಷಃ ಸಿಂಹಸ್ಕಂಧೋ ಮಹಾಭುಜಃ।
02058011c ನಕುಲೋ ಗ್ಲಹ ಏಕೋ ಮೇ ಯಚ್ಚೈತತ್ಸ್ವಗತಂ ಧನಂ।।
ಯುಧಿಷ್ಠಿರನು ಹೇಳಿದನು: “ಶ್ಯಾಮವರ್ಣಿ ಲೋಹಿತಾಕ್ಷ ಸಿಂಹಸ್ಕಂಧ ಮಹಾಭುಜ ಯುವಕ ನಕುಲ ಮತ್ತು ಅವನ ಒಡೆತನದಲ್ಲಿರುವ ಎಲ್ಲ ಧನವೂ ನನ್ನ ಈ ಒಂದು ಕೈಗೆ.”
02058012 ಶಕುನಿರುವಾಚ।
02058012a ಪ್ರಿಯಸ್ತೇ ನಕುಲೋ ರಾಜನ್ರಾಜಪುತ್ರೋ ಯುಧಿಷ್ಠಿರ।
02058012c ಅಸ್ಮಾಕಂ ಧನತಾಂ ಪ್ರಾಪ್ತೋ ಭೂಯಸ್ತ್ವಂ ಕೇನ ದೀವ್ಯಸಿ।।
ಶಕುನಿಯು ಹೇಳಿದನು: “ರಾಜನ್! ಯುಧಿಷ್ಠಿರ! ಆದರೆ ರಾಜಪುತ್ರ ನಕುಲನು ನಿನ್ನ ಪ್ರಿಯಕರನು. ಈ ಪಣವನ್ನೂ ನಾವು ಗೆದ್ದರೆ ನಿನ್ನಲ್ಲಿ ಪಣವಿಡಲು ಬೇರೆ ಏನಿದೆ?””
02058013 ವೈಶಂಪಾಯನ ಉವಾಚ।
02058013a ಏವಮುಕ್ತ್ವಾ ತು ಶಕುನಿಸ್ತಾನಕ್ಷಾನ್ಪ್ರತ್ಯಪದ್ಯತ।
02058013c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಶಕುನಿಯು ದಾಳಗಳೊಂದಿಗೆ ಮಾತನಾಡಿದನು. ನಂತರ ಶಕುನಿಯು ಯುಧಿಷ್ಠಿರನಿಗೆ “ಇದನ್ನೂ ಗೆದ್ದೆ!” ಎಂದು ಕೂಗಿ ಹೇಳಿದನು.
02058014 ಯುಧಿಷ್ಠಿರ ಉವಾಚ।
02058014a ಅಯಂ ಧರ್ಮಾನ್ಸಹದೇವೋಽನುಶಾಸ್ತಿ ಲೋಕೇ ಹ್ಯಸ್ಮಿನ್ಪಂಡಿತಾಖ್ಯಾಂ ಗತಶ್ಚ।
02058014c ಅನರ್ಹತಾ ರಾಜಪುತ್ರೇಣ ತೇನ ತ್ವಯಾ ದೀವ್ಯಾಮ್ಯಪ್ರಿಯವತ್ಪ್ರಿಯೇಣ।।
ಯುಧಿಷ್ಠಿರನು ಹೇಳಿದನು: “ಈ ಸಹದೇವನು ಧರ್ಮವನ್ನು ಹೇಳಿಕೊಡುತ್ತಾನೆ. ಇವನು ಲೋಕದಲ್ಲಿ ಪಂಡಿತನೆಂದು ಕರೆಯಲ್ಪಟ್ಟಿದ್ದಾನೆ. ಇದಕ್ಕೆ ಅನರ್ಹನಾದ ಈ ಪ್ರಿಯ ರಾಜಪುತ್ರನನ್ನು ಅಪ್ರಿಯನ ಹಾಗೆ ನಾನು ನಿನಗೆ ಕೊಡುತ್ತಿದ್ದೇನೆ.””
02058015 ವೈಶಂಪಾಯನ ಉವಾಚ।
02058015a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ।
02058015c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058016 ಶಕುನಿರುವಾಚ।
02058016a ಮಾದ್ರೀಪುತ್ರೌ ಪ್ರಿಯೌ ರಾಜಂಸ್ತವೇಮೌ ವಿಜಿತೌ ಮಯಾ।
02058016c ಗರೀಯಾಂಸೌ ತು ತೇ ಮನ್ಯೇ ಭೀಮಸೇನಧನಂಜಯೌ।।
ಶಕುನಿಯು ಹೇಳಿದನು: “ರಾಜನ್! ನಿನಗೆ ಪ್ರಿಯರಾದ ಮಾದ್ರೀಪುತ್ರರೀರ್ವರನ್ನೂ ನಾನು ಗೆದ್ದೆ. ಆದರೂ ಭೀಮಸೇನ ಮತ್ತು ಧನಂಜಯರಲ್ಲಿ ನಿನಗೆ ಹೆಚ್ಚಿನ ಪ್ರೀತಿಯಿದೆ ಎಂದು ನನಗನ್ನಿಸುತ್ತದೆ.”
02058017 ಯುಧಿಷ್ಠಿರ ಉವಾಚ।
02058017a ಅಧರ್ಮಂ ಚರಸೇ ನೂನಂ ಯೋ ನಾವೇಕ್ಷಸಿ ವೈ ನಯಂ।
02058017c ಯೋ ನಃ ಸುಮನಸಾಂ ಮೂಢ ವಿಭೇದಂ ಕರ್ತುಮಿಚ್ಛಸಿ।।
ಯುಧಿಷ್ಠಿರನು ಹೇಳಿದನು: “ನ್ಯಾಯವಾದುದನ್ನು ನೋಡದೇ ಅಧರ್ಮದಲ್ಲಿ ನಡೆದುಕೊಳ್ಳುತ್ತಿದ್ದೀಯೆ. ಮೂಢ! ಸುಮನಸ್ಕರಾದ ನಮ್ಮಲ್ಲಿ ಭೇದವನ್ನು ಉಂಟುಮಾಡಲು ಬಯಸುತ್ತಿದ್ದೀಯೆ.”
02058018 ಶಕುನಿರುವಾಚ।
02058018a ಗರ್ತೇ ಮತ್ತಃ ಪ್ರಪತತಿ ಪ್ರಮತ್ತಃ ಸ್ಥಾಣುಮೃಚ್ಛತಿ।
02058018c ಜ್ಯೇಷ್ಠೋ ರಾಜನ್ವರಿಷ್ಠೋಽಸಿ ನಮಸ್ತೇ ಭರತರ್ಷಭ।।
ಶಕುನಿಯು ಹೇಳಿದನು: “ಮತ್ತನಾದವನು ಹಳ್ಳದಲ್ಲಿ ಬೀಳುತ್ತಾನೆ. ಪ್ರಮತ್ತನಾದವನು ಮರಕ್ಕೇ ಎಡವುತ್ತಾನೆ. ರಾಜನ್! ನೀನು ಜ್ಯೇಷ್ಠ. ಹಿರಿಯವನು. ಭರತರ್ಷಭ! ನಿನಗೆ ನನ್ನ ವಂದನೆಗಳು.
02058019a ಸ್ವಪ್ನೇ ನ ತಾನಿ ಪಶ್ಯಂತಿ ಜಾಗ್ರತೋ ವಾ ಯುಧಿಷ್ಠಿರ।
02058019c ಕಿತವಾ ಯಾನಿ ದೀವ್ಯಂತಃ ಪ್ರಲಪಂತ್ಯುತ್ಕಟಾ ಇವ।।
ಯುಧಿಷ್ಠಿರ! ಜೂಜಾಡುವವರು ಹುಚ್ಚರಂತೆ ಮಾತನಾಡುತ್ತಾರೆ ಮತ್ತು ಕನಸಿನಲ್ಲಿಯೂ ನನಸಿನಲ್ಲಿಯೂ ಕಂಡಿರದಂಥಹ ದೃಶ್ಯಗಳನ್ನು ಕಾಣುತ್ತಾರೆ.”
02058020 ಯುಧಿಷ್ಠಿರ ಉವಾಚ।
02058020a ಯೋ ನಃ ಸಂಖ್ಯೇ ನೌರಿವ ಪಾರನೇತಾ ಜೇತಾ ರಿಪೂಣಾಂ ರಾಜಪುತ್ರಸ್ತರಸ್ವೀ।
02058020c ಅನರ್ಹತಾ ಲೋಕವೀರೇಣ ತೇನ ದೀವ್ಯಾಮ್ಯಹಂ ಶಕುನೇ ಫಲ್ಗುನೇನ।।
ಯುಧಿಷ್ಠಿರನು ಹೇಳಿದನು: “ಶಕುನಿ! ಯುದ್ಧದಲ್ಲಿ ನಮ್ಮನ್ನು ನಾವೆಯಂತೆ ಪಾರುಮಾಡಿ ರಿಪುಗಳನ್ನು ಜಯಿಸಿದ ತರಸ್ವೀ ಲೋಕವೀರ ಮತ್ತು ಇದಕ್ಕೆ ಅನರ್ಹನಾದ ಫಲ್ಗುನನನ್ನು ನಿನಗೆ ಕೊಡುತ್ತಿದ್ದೇನೆ.””
02058021 ವೈಶಂಪಾಯನ ಉವಾಚ।
02058021a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ।
02058021c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058022 ಶಕುನಿರುವಾಚ।
02058022a ಅಯಂ ಮಯಾ ಪಾಂಡವಾನಾಂ ಧನುರ್ಧರಃ ಪರಾಜಿತಃ ಪಾಂಡವಃ ಸವ್ಯಸಾಚೀ।
02058022c ಭೀಮೇನ ರಾಜನ್ದಯಿತೇನ ದೀವ್ಯ ಯತ್ಕೈತವ್ಯಂ ಪಾಂಡವ ತೇಽವಶಿಷ್ಟಂ।।
ಶಕುನಿಯು ಹೇಳಿದನು: “ಇಗೋ! ಈ ಪಾಂಡವ ದನುರ್ಧರ, ಪಾಂಡವ ಸವ್ಯಸಾಚಿಯನ್ನು ನಾನು ಪರಾಜಿತಗೊಳಿಸಿದ್ದೇನೆ. ರಾಜನ್! ಇನ್ನು ಪಣವನ್ನಿಡಲು ನಿನ್ನಲ್ಲಿ ಉಳಿದಿರುವವನು ನಿನ್ನ ಪ್ರೀತಿಯ ಪಾಂಡವ ಭೀಮ.”
02058023 ಯುಧಿಷ್ಠಿರ ಉವಾಚ।
02058023a ಯೋ ನೋ ನೇತಾ ಯೋ ಯುಧಾಂ ನಃ ಪ್ರಣೇತಾ ಯಥಾ ವಜ್ರೀ ದಾನವಶತ್ರುರೇಕಃ।
02058023c ತಿರ್ಯಕ್ಪ್ರೇಕ್ಷೀ ಸಂಹತಭ್ರೂರ್ಮಹಾತ್ಮಾ ಸಿಂಹಸ್ಕಂಧೋ ಯಶ್ಚ ಸದಾತ್ಯಮರ್ಷೀ।।
02058024a ಬಲೇನ ತುಲ್ಯೋ ಯಸ್ಯ ಪುಮಾನ್ನ ವಿದ್ಯತೇ ಗದಾಭೃತಾಮಗ್ರ್ಯ ಇಹಾರಿಮರ್ದನಃ।
02058024c ಅನರ್ಹತಾ ರಾಜಪುತ್ರೇಣ ತೇನ ದೀವ್ಯಾಮ್ಯಹಂ ಭೀಮಸೇನೇನ ರಾಜನ್।।
ಯುಧಿಷ್ಠಿರನು ಹೇಳಿದನು: “ವಜ್ರಿ ದಾನವಶತ್ರುವಿನಂತೆ ಒಬ್ಬನೇ ಯುದ್ಧದಲ್ಲಿ ನಮ್ಮ ನಾಯಕನಾಗಿ ನಮಗೆ ಮಾರ್ಗದರ್ಶನ ನೀಡಿದ, ಹುಬ್ಬುಗಳನ್ನು ಬಿಗಿಮಾಡಿ ಕೆಳಗೇ ದಿಟ್ಟಿಟ್ಟು ನೋಡುತ್ತಿರುವ, ಸದಾ ಸಿಟ್ಟಿನಲ್ಲಿರುವ ಆ ಸಿಂಹಸ್ಕಂಧ ಬಲದಲ್ಲಿ ಯಾರೂ ಸರಿಸಾಟಿಯನ್ನು ಹೊಂದದಿದ್ದ ಗದಾಯೋದ್ಧರಲ್ಲಿಯೇ ಶ್ರೇಷ್ಠ ಅರಿಮರ್ದನ ರಾಜಪುತ್ರ ಭೀಮಸೇನನನ್ನು, ಅವನು ಇದಕ್ಕೆ ಅನರ್ಹನಾದರೂ, ರಾಜನ್! ನಾನು ನಿನಗೆ ನೀಡುತ್ತಿದ್ದೇನೆ.””
02058025 ವೈಶಂಪಾಯನ ಉವಾಚ।
02058025a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ।
02058025c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058026 ಶಕುನಿರುವಾಚ।
02058026a ಬಹು ವಿತ್ತಂ ಪರಾಜೈಷೀರ್ಭ್ರಾತೄಂಶ್ಚ ಸಹಯದ್ವಿಪಾನ್।
02058026c ಆಚಕ್ಷ್ವ ವಿತ್ತಂ ಕೌಂತೇಯ ಯದಿ ತೇಽಸ್ತ್ಯಪರಾಜಿತಂ।।
ಶಕುನಿಯು ಹೇಳಿದನು: “ಕೌಂತೇಯ! ನೀನು ಬಹಳ ಸಂಪತ್ತನ್ನೂ, ಭ್ರಾತೃಗಳನ್ನೂ, ಆನೆ ಕುದುರೆಗಳನ್ನೂ ಸೋತಿದ್ದೀಯೆ. ಇನ್ನು ಸೋತುಕೊಳ್ಳಲು ಬೇರೆ ಏನಾದರೂ ಇದ್ದರೆ ಹೇಳು.”
02058027 ಯುಧಿಷ್ಠಿರ ಉವಾಚ।
02058027a ಅಹಂ ವಿಶಿಷ್ಟಃ ಸರ್ವೇಷಾಂ ಭ್ರಾತೄಣಾಂ ದಯಿತಸ್ತಥಾ।
02058027c ಕುರ್ಯಾಮಸ್ತೇ ಜಿತಾಃ ಕರ್ಮ ಸ್ವಯಮಾತ್ಮನ್ಯುಪಪ್ಲವೇ।।
ಯುಧಿಷ್ಠಿರನು ಹೇಳಿದನು: “ನನ್ನ ಎಲ್ಲ ಭ್ರಾತೃಗಳಿಂದ ಗಾಢವಾಗಿ ಪ್ರೀತಿಸಲ್ಪಟ್ಟ ನಾನೇ ಉಳಿದಿದ್ದೇನೆ. ಗೆದ್ದನಂತರ ನಾವು ನಾಶವಾಗುವವರೆಗೆ ನಿನ್ನ ಸೇವೆ ದಾಸರಾಗಿರುತ್ತೇವೆ.””
02058028 ವೈಶಂಪಾಯನ ಉವಾಚ।
02058028a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ।
02058028c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058029 ಶಕುನಿರುವಾಚ।
02058029a ಏತತ್ಪಾಪಿಷ್ಠಮಕರೋರ್ಯದಾತ್ಮಾನಂ ಪರಾಜಿತಃ।
02058029c ಶಿಷ್ಟೇ ಸತಿ ಧನೇ ರಾಜನ್ಪಾಪ ಆತ್ಮಪರಾಜಯಃ।।
ಶಕುನಿಯು ಹೇಳಿದನು: “ನಿನ್ನನ್ನು ನೀನೇ ಸೋಲಿಸಿಕೊಂಡು ನೀನು ಒಂದು ಪಾಪಿಷ್ಟ ಕಾರ್ಯವನ್ನೇ ಎಸೆಗಿದ್ದೀಯೆ. ರಾಜನ್! ಇನ್ನೂ ಧನವು ಉಳಿದಿರುವಾಗ ತನ್ನನ್ನು ತಾನು ಸೋಲಿಸಿಕೊಳ್ಳುವುದು ಪಾಪ.””
02058030 ವೈಶಂಪಾಯನ ಉವಾಚ।
02058030a ಏವಮುಕ್ತ್ವಾ ಮತಾಕ್ಷಸ್ತಾನ್ಗ್ಲಹೇ ಸರ್ವಾನವಸ್ಥಿತಾನ್।
02058030c ಪರಾಜಯಲ್ಲೋಕವೀರಾನಾಕ್ಷೇಪೇಣ ಪೃಥಕ್ ಪೃಥಕ್।।
ವೈಶಂಪಾಯನನು ಹೇಳಿದನು: “ಅಲ್ಲಿ ಕುಳಿತಿದ್ದ ಸರ್ವ ಲೋಕವೀರರನ್ನೂ ಒಂದೊಂದೇ ಎಸೆತದಲ್ಲಿ ಗೆದ್ದಿದ್ದ ಆ ಅಕ್ಷಜ್ಞಾನಿ, ಜೂಜಿನಲ್ಲಿ ಚಾಕಚಕ್ಯತೆಯನ್ನು ಹೊಂದಿದ್ದ ಶಕುನಿಯು ಈ ರೀತಿ ಹೇಳಿದನು:
02058031 ಶಕುನಿರುವಾಚ।
02058031a ಅಸ್ತಿ ವೈ ತೇ ಪ್ರಿಯಾ ದೇವೀ ಗ್ಲಹ ಏಕೋಽಪರಾಜಿತಃ।
02058031c ಪಣಸ್ವ ಕೃಷ್ಣಾಂ ಪಾಂಚಾಲೀಂ ತಯಾತ್ಮಾನಂ ಪುನರ್ಜಯ।।
ಶಕುನಿಯು ಹೇಳಿದನು: “ಇನ್ನೂ ಒಂದು ಎಸೆತವನ್ನು ಗೆಲ್ಲಲು ನಿನ್ನ ಪ್ರಿಯ ದೇವಿಯಿದ್ದಾಳೆ. ಕೃಷ್ಣಾ ಪಾಂಚಾಲಿಯನ್ನು ಪಣವನ್ನಾಗಿಟ್ಟು ನಿನ್ನನ್ನು ಪುನಃ ಗೆಲ್ಲು.”
02058032 ಯುಧಿಷ್ಠಿರ ಉವಾಚ।
02058032a ನೈವ ಹ್ರಸ್ವಾ ನ ಮಹತೀ ನಾತಿಕೃಷ್ಣಾ ನ ರೋಹಿಣೀ।
02058032c ಸರಾಗರಕ್ತನೇತ್ರಾ ಚ ತಯಾ ದೀವ್ಯಾಮ್ಯಹಂ ತ್ವಯಾ।।
ಯುಧಿಷ್ಠಿರನು ಹೇಳಿದನು: “ಗಾತ್ರದಲ್ಲಿ ಅತಿ ಸಣ್ಣವಳೂ ಅತಿ ದೊಡ್ಡವಳೂ ಆಗಿಲ್ಲದ, ಅತಿ ಕಪ್ಪೂ ಅಥವಾ ಅತಿ ಕೆಂಪೂ ಅಲ್ಲದ, ಪ್ರೇಮದಿಂದ ಕಣ್ಣುಗಳು ಕೆಂಪಾಗಿರುವ ಅವಳನ್ನು ನಾನು ನಿನಗೆ ಪಣವನ್ನಾಗಿ ಇಡುತ್ತಿದ್ದೇನೆ.
02058033a ಶಾರದೋತ್ಪಲಪತ್ರಾಕ್ಷ್ಯಾ ಶಾರದೋತ್ಪಲಗಂಧಯಾ।
02058033c ಶಾರದೋತ್ಪಲಸೇವಿನ್ಯಾ ರೂಪೇಣ ಶ್ರೀಸಮಾನಯಾ।।
ರೂಪದಲ್ಲಿ ಶ್ರೀಯ ಸಮಾನ ಅವಳಿಗೆ ಶರತ್ಕಾಲ ಕಮಲದ ಎಸಳುಗಳಂಥಹ ಕಣ್ಣುಗಳಿವೆ. ಅವಳು ಶರತ್ಕಾಲ ಕಮಲದ ಸುಗಂಧವನ್ನು ಸೂಸುತ್ತಾಳೆ, ಶರತ್ಕಾಲ ಕಮಲಗಳನ್ನು ಸೇವಿಸುತ್ತಾಳೆ.
02058034a ತಥೈವ ಸ್ಯಾದಾನೃಶಂಸ್ಯಾತ್ತಥಾ ಸ್ಯಾದ್ರೂಪಸಂಪದಾ।
02058034c ತಥಾ ಸ್ಯಾಚ್ಶೀಲಸಂಪತ್ತ್ಯಾ ಯಾಮಿಚ್ಛೇತ್ಪುರುಷಃ ಸ್ತ್ರಿಯಂ।।
ಕ್ರೂರತ್ವವೆನ್ನುವುದೇ ಇಲ್ಲದ ಅವಳು ಪುರುಷರು ಇಚ್ಛಿಸುವ ಸ್ತ್ರೀಯಂತೆ ರೂಪಸಂಪದಳು ಮತ್ತು ಶೀಲಸಂಪದಳು.
02058035a ಚರಮಂ ಸಂವಿಶತಿ ಯಾ ಪ್ರಥಮಂ ಪ್ರತಿಬುಧ್ಯತೇ।
02058035c ಆ ಗೋಪಾಲಾವಿಪಾಲೇಭ್ಯಃ ಸರ್ವಂ ವೇದ ಕೃತಾಕೃತಂ।।
ಕೊನೆಯಲ್ಲಿ ಮಲಗಿ ಮೊದಲೇ ಏಳುವ ಅವಳು ಗೋಪಾಲಕರು ಮತ್ತು ಆಡು ಮೇಯಿಸುವ ಯಾರಿಗೆ ಏನನ್ನು ಮಾಡಬೇಕು ಏನನ್ನು ಮಾಡಬಾರದು ಎನ್ನುವುದನ್ನು ತಿಳಿದಿದ್ದಾಳೆ.
02058036a ಆಭಾತಿ ಪದ್ಮವದ್ವಕ್ತ್ರಂ ಸಸ್ವೇದಂ ಮಲ್ಲಿಕೇವ ಚ।
02058036c ವೇದೀಮಧ್ಯಾ ದೀರ್ಘಕೇಶೀ ತಾಮ್ರಾಕ್ಷೀ ನಾತಿರೋಮಶಾ।।
ಬೆವರಿದ ಅವಳ ಪದ್ಮವಕ್ತ್ರವು ಮಲ್ಲಿಕದಂತೆ ಬೆಳಗುತ್ತದೆ, ವೇದಿಯಂಥಹ ನಡುವಿರುವ ಅವಳು ದೀರ್ಘಕೇಶೀ ಮತ್ತು ತಾಮ್ರಾಕ್ಷೀ. ಅವಳ ದೇಹದಮೇಲೆ ಸ್ವಲ್ಪವೂ ರೋಮಗಳಿಲ್ಲ.
02058037a ತಯೈವಂವಿಧಯಾ ರಾಜನ್ಪಾಂಚಾಲ್ಯಾಹಂ ಸುಮಧ್ಯಯಾ।
02058037c ಗ್ಲಹಂ ದೀವ್ಯಾಮಿ ಚಾರ್ವಂಗ್ಯಾ ದ್ರೌಪದ್ಯಾ ಹಂತ ಸೌಬಲ।।
ರಾಜನ್! ಸೌಬಲ! ಈ ಎಲ್ಲ ವಿವಿಧ ಗುಣಗಳನ್ನು ಹೊಂದಿದ ಸುಮಧ್ಯಮೆ ಚಾರ್ವಾಂಗಿ ದ್ರೌಪದಿ ಪಾಂಚಾಲಿಯನ್ನು ನಾನು ಪಣವಾಗಿ ಇಡುತ್ತಿದ್ದೇನೆ.””
02058038 ವೈಶಂಪಾಯನ ಉವಾಚ।
02058038a ಏವಮುಕ್ತೇ ತು ವಚನೇ ಧರ್ಮರಾಜೇನ ಭಾರತ।
02058038c ಧಿಗ್ಧಿಗಿತ್ಯೇವ ವೃದ್ಧಾನಾಂ ಸಭ್ಯಾನಾಂ ನಿಃಸೃತಾ ಗಿರಃ।।
ವೈಶಂಪಾಯನನು ಹೇಳಿದನು: “ಭಾರತ! ಧರ್ಮರಾಜನು ಈ ರೀತಿ ಮಾತನ್ನಾಡಲು ಸಭೆಯಲ್ಲಿರುವ ಹಿರಿಯರೆಲ್ಲರೂ “ಧಿಕ್ಕಾರ! ಧಿಕ್ಕಾರ!” ಎಂದು ಕೂಗಿದರು.
02058039a ಚುಕ್ಷುಭೇ ಸಾ ಸಭಾ ರಾಜನ್ರಾಜ್ಞಾಂ ಸಂಜಜ್ಞಿರೇ ಕಥಾಃ।
02058039c ಭೀಷ್ಮದ್ರೋಣಕೃಪಾದೀನಾಂ ಸ್ವೇದಶ್ಚ ಸಮಜಾಯತ।।
ರಾಜನ್! ಆ ಸಭೆಯೇ ಕಂಪಿಸಿತು. ರಾಜರುಗಳು ತಮ್ಮ ತಮ್ಮೊಳಗೇ ಮಾತನಾಡಿಕೊಳ್ಳತೊಡಗಿದರು. ಭೀಷ್ಮ, ದ್ರೋಣ ಕೃಪ ಮೊದಲಾದವರು ಬೆವರಿನಲ್ಲಿ ಮುಳುಗಿದರು.
02058040a ಶಿರೋ ಗೃಹೀತ್ವಾ ವಿದುರೋ ಗತಸತ್ತ್ವ ಇವಾಭವತ್।
02058040c ಆಸ್ತೇ ಧ್ಯಾಯನ್ನಧೋವಕ್ತ್ರೋ ನಿಃಶ್ವಸನ್ಪನ್ನಗೋ ಯಥಾ।।
ವಿದುರನು ಶಕ್ತಿಯನ್ನು ಕಳೆದುಕೊಂಡವನಂತೆ ತಲೆಯನ್ನು ಹಿಡಿದುಕೊಂಡು, ಕೆಳಗೆ ನೋಡುತ್ತಾ, ಸರ್ಪದಂತೆ ನಿಟ್ಟಿಸುರು ಬಿಡುತ್ತಾ ಯೋಚನೆಯಲ್ಲಿ ತೊಡಗಿದನು.
02058041a ಧೃತರಾಷ್ಟ್ರಸ್ತು ಸಂಹೃಷ್ಟಃ ಪರ್ಯಪೃಚ್ಛತ್ಪುನಃ ಪುನಃ।
02058041c ಕಿಂ ಜಿತಂ ಕಿಂ ಜಿತಮಿತಿ ಹ್ಯಾಕಾರಂ ನಾಭ್ಯರಕ್ಷತ।।
ಆದರೆ ಸಂಹೃಷ್ಟ ಧೃತರಾಷ್ಟ್ರನು ತನ್ನ ಆಕಾರವನ್ನು ರಕ್ಷಿಸಲು ಅಸಮರ್ಥನಾಗಿ ಪುನಃ ಪುನಃ “ಅವನು ಗೆದ್ದನಾ? ಅವನು ಗೆದ್ದನಾ?” ಎಂದು ಕೇಳುತ್ತಿದ್ದನು.
02058042a ಜಹರ್ಷ ಕರ್ಣೋಽತಿಭೃಶಂ ಸಹ ದುಃಶಾಸನಾದಿಭಿಃ।
02058042c ಇತರೇಷಾಂ ತು ಸಭ್ಯಾನಾಂ ನೇತ್ರೇಭ್ಯಃ ಪ್ರಾಪತಜ್ಜಲಂ।।
ಕರ್ಣ, ದುಃಶಾಸನ ಮೊದಲಾದವರು ಅತ್ಯಂತ ಹರ್ಷಿತರಾದರು. ಆದರೆ ಸಭೆಯಲ್ಲಿರುವ ಇತರರ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು.
02058043a ಸೌಬಲಸ್ತ್ವವಿಚಾರ್ಯೈವ ಜಿತಕಾಶೀ ಮದೋತ್ಕಟಃ।
02058043c ಜಿತಮಿತ್ಯೇವ ತಾನಕ್ಷಾನ್ಪುನರೇವಾನ್ವಪದ್ಯತ।।
ಆದರೆ ಸೌಬಲನು ಏನೂ ವಿಚಾರಮಾಡದೇ ಗೆಲುವಿನ ಮದೋತ್ಕಟನಾಗಿ, “ನಾನು ಗೆದ್ದೆ!” ಎಂದು ಹೇಳುತ್ತಾ ದಾಳಗಳನ್ನು ಉರುಳಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ರೌಪದೀಪರಾಜಯೇ ಅಷ್ಟಪಂಚಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ರೌಪದೀಪರಾಜಯ ಎನ್ನುವ ಐವತ್ತೆಂಟನೆಯ ಅಧ್ಯಾಯವು.