057 ವಿದುರಹಿತವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 57

ಸಾರ

ದುರ್ಯೋಧನನು ವಿದುರನನ್ನು ನಿಂದಿಸಿ, ಬಿಟ್ಟುಹೋಗೆಂದು ಹೇಳುವುದು (1-12). ವಿದುರನು ದುರ್ಯೋಧನನಿಗೆ ಹಿತವಚನವನ್ನಾಡಿದುದು (13-21).

02057001 ದುರ್ಯೋಧನ ಉವಾಚ।
02057001a ಪರೇಷಾಮೇವ ಯಶಸಾ ಶ್ಲಾಘಸೇ ತ್ವಂ ಸದಾ ಚನ್ನಃ ಕುತ್ಸಯನ್ಧಾರ್ತರಾಷ್ಟ್ರಾನ್।
02057001c ಜಾನೀಮಸ್ತ್ವಾಂ ವಿದುರ ಯತ್ಪ್ರಿಯಸ್ತ್ವಂ ಬಾಲಾನಿವಾಸ್ಮಾನವಮನ್ಯಸೇ ತ್ವಂ।।

ದುರ್ಯೋಧನನು ಹೇಳಿದನು: “ವಿದುರ! ನೀನು ಯಾವಾಗಲೂ ಪರರ ಯಶಸ್ಸನ್ನು ಶ್ಲಾಘಿಸುತ್ತೀಯೆ ಮತ್ತು ಧಾರ್ತರಾಷ್ಟ್ರರನ್ನು ಒಳಗಿಂದೊಳಗೇ ಹೀಯಾಳಿಸುತ್ತೀಯೆ. ನಿನಗೆ ಯಾರಲ್ಲಿ ಪ್ರೀತಿಯಿದೆ ಎನ್ನುವುದನ್ನು ತಿಳಿದಿದ್ದೇವೆ. ಬಾಲಕರೆಂದು ತಿಳಿದು ನಮ್ಮನ್ನು ನೀನು ಮನ್ನಿಸುವುದಿಲ್ಲ.

02057002a ಸುವಿಜ್ಞೇಯಃ ಪುರುಷೋಽನ್ಯತ್ರಕಾಮೋ ನಿಂದಾಪ್ರಶಂಸೇ ಹಿ ತಥಾ ಯುನಕ್ತಿ।
02057002c ಜಿಹ್ವಾ ಮನಸ್ತೇ ಹೃದಯಂ ನಿರ್ವ್ಯನಕ್ತಿ ಜ್ಯಾಯೋ ನಿರಾಹ ಮನಸಃ ಪ್ರಾತಿಕೂಲ್ಯಂ।।

ಅವನ ನಿಂದನೆ ಪ್ರಶಂಸೆಯಲ್ಲಿಯೇ ಒಬ್ಬ ಪುರುಷನ ಪ್ರೀತಿ ಯಾರಲ್ಲಿದೆ ಎನ್ನುವುದನ್ನು ಚೆನ್ನಾಗಿ ತಿಳಿಯಬಹುದು. ನಿನ್ನ ನಾಲಗೆಯು ಹೃದಯ ಮತ್ತು ಮನಸ್ಸನ್ನು ತೆರೆಯುತ್ತದೆ. ಮನಸ್ಸಿನಲ್ಲಿರುವ ದ್ವಂದ್ವಗಳನ್ನೂ ಅದು ಪ್ರಕಟಿಸುತ್ತದೆ.

02057003a ಉತ್ಸಂಗೇನ ವ್ಯಾಲ ಇವಾಹೃತೋಽಸಿ ಮಾರ್ಜಾರವತ್ಪೋಷಕಂ ಚೋಪಹಂಸಿ।
02057003c ಭರ್ತೃಘ್ನತ್ವಾನ್ನ ಹಿ ಪಾಪೀಯ ಆಹುಸ್ ತಸ್ಮಾತ್ ಕ್ಷತ್ತಃ ಕಿಂ ನ ಬಿಭೇಷಿ ಪಾಪಾತ್।।

ಅಪ್ಪಿಕೊಂಡ ಹಾವಿನಂತೆ ಇದ್ದೀಯೆ. ಪೋಷಕನನ್ನೇ ಕಾಡಿಸುವ ಬೆಕ್ಕಿನಂತಿದ್ದೀಯೆ. ಸಹೋದರನಿಗೆ ಕೇಡನ್ನು ಬಯಸುವುದು ಪಾಪವೆಂದು ಹೇಳುತ್ತಾರೆ. ಕ್ಷತ್ತ! ನಿನಗೆ ಪಾಪದ ಭಯ ಸ್ವಲ್ಪವೂ ಇಲ್ಲವೇ?

02057004a ಜಿತ್ವಾ ಶತ್ರೂನ್ಫಲಮಾಪ್ತಂ ಮಹನ್ನೋ ಮಾಸ್ಮಾನ್ ಕ್ಷತ್ತಃ ಪರುಷಾಣೀಹ ವೋಚಃ।
02057004c ದ್ವಿಷದ್ಭಿಸ್ತ್ವಂ ಸಂಪ್ರಯೋಗಾಭಿನನ್ದೀ ಮುಹುರ್ದ್ವೇಷಂ ಯಾಸಿ ನಃ ಸಂಪ್ರಮೋಹಾತ್।।

ಶತ್ರುಗಳನ್ನು ಗೆದ್ದು ಮಹಾ ಫಲವನ್ನು ಗಳಿಸುತ್ತೇವೆ. ಕ್ಷತ್ತ! ನಮ್ಮೊಡನೆ ಇಷ್ಟೊಂದು ನಿಷ್ಟೂರವಾಗಿ ಮಾತನಾಡಬೇಡ. ನಮ್ಮ ದ್ವೇಷಿಗಳೊಂದಿಗೆ ನೀನು ಸೇರಿಕೊಂಡು ಸಂತೋಷದಿಂದಿರುವೆ ಮತ್ತು ಇನ್ನೂ ಕೆಟ್ಟದ್ದೆಂದರೆ ನಮ್ಮೊಡನೆಯೇ ದ್ವೇಷವನ್ನು ಸಾಧಿಸುತ್ತಿರುವೆ.

02057005a ಅಮಿತ್ರತಾಂ ಯಾತಿ ನರೋಽಕ್ಷಮಂ ಬ್ರುವನ್ ನಿಗೂಹತೇ ಗುಹ್ಯಮಮಿತ್ರಸಂಸ್ತವೇ।
02057005c ತದಾಶ್ರಿತಾಪತ್ರಪಾ ಕಿಂ ನ ಬಾಧತೇ ಯದಿಚ್ಛಸಿ ತ್ವಂ ತದಿಹಾದ್ಯ ಭಾಷಸೇ।।

ಅಕ್ಷಮವಾಗಿ ಮಾತನಾಡಿದವನು ಅಮಿತ್ರನಾಗುತ್ತಾನೆ ಮತ್ತು ಅಮಿತ್ರರನ್ನು ಪ್ರಶಂಸಿಸುವುದರ ಮೂಲಕ ತನ್ನ ಗುಟ್ಟನ್ನು ಅಡಗಿಸಿಟ್ಟುಕೊಳ್ಳುತ್ತಾನೆ. ನಾಚಿಕೆಯಿಂದಲಾದರೂ ಅವನ ಬಾಯಿಯು ಏಕೆ ಮುಚ್ಚುವುದಿಲ್ಲ? ನೀನು ಏನನ್ನು ಬಯಸಿದ್ದೆಯೋ ಅದನ್ನು ಇಂದು ಮಾತನಾಡುತ್ತಿದ್ದೀಯೆ.

02057006a ಮಾ ನೋಽವಮಂಸ್ಥಾ ವಿದ್ಮ ಮನಸ್ತವೇದಂ ಶಿಕ್ಷಸ್ವ ಬುದ್ಧಿಂ ಸ್ಥವಿರಾಣಾಂ ಸಕಾಶಾತ್।
02057006c ಯಶೋ ರಕ್ಷಸ್ವ ವಿದುರ ಸಂಪ್ರಣೀತಂ ಮಾ ವ್ಯಾಪೃತಃ ಪರಕಾರ್ಯೇಷು ಭೂಸ್ತ್ವಂ।।

ನಮ್ಮನ್ನು ಅಪಮಾನಿಸಬೇಡ. ನಿನ್ನ ಮನಸ್ಸಿನಲ್ಲೇನಿದೆ ಎನ್ನುವುದನ್ನು ನಾವು ತಿಳಿದಿದ್ದೇವೆ. ವಿದುರ! ಇದೂವರೆಗೆ ಗಳಿಸಿರುವ ಗೌರವವನ್ನು ಉಳಿಸಿಕೋ. ಇನ್ನೊಬ್ಬರ ವ್ಯವಹಾರದಲ್ಲಿ ಹೆಚ್ಚು ತಲೆಹಾಕಬೇಡ.

02057007a ಅಹಂ ಕರ್ತೇತಿ ವಿದುರ ಮಾವಮಂಸ್ಥಾ ಮಾ ನೋ ನಿತ್ಯಂ ಪರುಷಾಣೀಹ ವೋಚಃ।
02057007c ನ ತ್ವಾಂ ಪೃಚ್ಛಾಮಿ ವಿದುರ ಯದ್ಧಿತಂ ಮೇ ಸ್ವಸ್ತಿ ಕ್ಷತ್ತರ್ಮಾ ತಿತಿಕ್ಷೂನ್ ಕ್ಷಿಣು ತ್ವಂ।।

ವಿದುರ! ನಾನೇ ಮಾಡುತ್ತಿದ್ದೇನೆ ಎಂದು ನನ್ನನ್ನು ದೂರಬೇಡ. ಅಂಥಹ ಕಠೋರ ಮಾತುಗಳಿಂದ ಸದಾ ನಮ್ಮನ್ನು ಹೀಯಾಳಿಸಬೇಡ. ವಿದುರ! ನೀನು ಏನನ್ನು ಯೋಚಿಸುತ್ತಿದ್ದೀಯೆ ಎಂದು ನಾನು ಎಂದೂ ನಿನ್ನನ್ನು ಕೇಳಲಿಲ್ಲ. ಕ್ಷತ್ತ! ನಿನ್ನನ್ನು ಬೀಳ್ಕೊಡುತ್ತೇನೆ. ನಮ್ಮ ತಾಳ್ಮೆಯು ಕಡಿಮೆಯಾಗುತ್ತಿದೆ.

02057008a ಏಕಃ ಶಾಸ್ತಾ ನ ದ್ವಿತೀಯೋಽಸ್ತಿ ಶಾಸ್ತಾ ಗರ್ಭೇ ಶಯಾನಂ ಪುರುಷಂ ಶಾಸ್ತಿ ಶಾಸ್ತಾ।
02057008c ತೇನಾನುಶಿಷ್ಟಃ ಪ್ರವಣಾದಿವಾಂಭೋ ಯಥಾ ನಿಯುಕ್ತೋಽಸ್ಮಿ ತಥಾ ವಹಾಮಿ।।

ಗುರುವು ಒಬ್ಬನೇ. ಎರಡನೆಯ ಗುರುವೇ ಇಲ್ಲ. ಆ ಗುರುವು ಗರ್ಭದಲ್ಲಿ ಮಲಗಿರುವ ಪುರುಷನಿಗೆ ಹೇಳಿಕೊಡುತ್ತಾನೆ. ಅವನ ಹೇಳಿಕೆಯಂತೆಯೇ, ನೀರು ಹೇಗೆ ಹರಿಯುತ್ತದೆಯೋ ಹಾಗೆ, ನಾನೂ ಕೂಡ ಹರಿಯುತ್ತೇನೆ.

02057009a ಭಿನತ್ತಿ ಶಿರಸಾ ಶೈಲಮಹಿಂ ಭೋಜಯತೇ ಚ ಯಃ।
02057009c ಸ ಏವ ತಸ್ಯ ಕುರುತೇ ಕಾರ್ಯಾಣಾಮನುಶಾಸನಂ।।

ತಲೆಯಿಂದ ಕಲ್ಲನ್ನು ತುಂಡುಮಾಡುವವನಾಗಲೀ, ಅಥವಾ ಹಾವಿಗೆ ತಿನ್ನಿಸುವವನಾಗಲೀ ಏನು ಮಾಡಬೇಕೆಂದು ಅವನ ಅನುಶಾಸನವಿರುತ್ತದೆಯೋ ಅದರಂತೆಯೇ ಮಾಡುತ್ತಾನೆ.

02057010a ಯೋ ಬಲಾದನುಶಾಸ್ತೀಹ ಸೋಽಮಿತ್ರಂ ತೇನ ವಿನ್ದತಿ।
02057010c ಮಿತ್ರತಾಮನುವೃತ್ತಂ ತು ಸಮುಪೇಕ್ಷೇತ ಪಂಡಿತಃ।।

ಯಾರು ಬಲವಂತವಾಗಿ ಆಜ್ಞೆಯನ್ನು ನೀಡುತ್ತಾನೋ ಅವನನ್ನು ಅಮಿತ್ರನೆಂದು ತಿಳಿಯುತ್ತಾರೆ. ಪಂಡಿತನು ಮಿತ್ರನಂತೆ ವರ್ತಿಸುವವನ ಸಾಂಗತ್ಯವನ್ನು ಬಯಸುತ್ತಾನೆ.

02057011a ಪ್ರದೀಪ್ಯ ಯಃ ಪ್ರದೀಪ್ತಾಗ್ನಿಂ ಪ್ರಾಕ್ತ್ವರನ್ನಾಭಿಧಾವತಿ।
02057011c ಭಸ್ಮಾಪಿ ನ ಸ ವಿನ್ದೇತ ಶಿಷ್ಟಂ ಕ್ವ ಚನ ಭಾರತ।।

ಭಾರತ! ಉರಿಯುತ್ತಿರುವ ಬೆಂಕಿಯನ್ನು ಹಚ್ಚಿದವನು ಮೊದಲೇ ಓಡಿ ಹೋಗದಿದ್ದರೆ ಉಳಿದಿರುವ ಭಸ್ಮವೂ ಅವನಿಗೆ ಕಾಣಲಿಕ್ಕೆ ಸಿಗುವುದಿಲ್ಲ.

02057012a ನ ವಾಸಯೇತ್ಪಾರವರ್ಗ್ಯಂ ದ್ವಿಷಂತಂ ವಿಶೇಷತಃ ಕ್ಷತ್ತರಹಿತಂ ಮನುಷ್ಯಂ।
02057012c ಸ ಯತ್ರೇಚ್ಛಸಿ ವಿದುರ ತತ್ರ ಗಚ್ಛ ಸುಸಾಂತ್ವಿತಾಪಿ ಹ್ಯಸತೀ ಸ್ತ್ರೀ ಜಹಾತಿ।।

ಕ್ಷತ್ತ! ದ್ವೇಷಿಸುವ ಶತ್ರುವಿನ ವರ್ಗದವನನ್ನು, ಅದರಲ್ಲೂ ವಿಶೇಷವಾಗಿ ಕೆಟ್ಟದ್ದನ್ನು ಬಯಸುವ ಮನುಷ್ಯನನ್ನು ಎಂದೂ ಇಟ್ಟುಕೊಳ್ಳಬಾರದು. ವಿದುರ! ನಿನಗಿಷ್ಟವಿದ್ದ ಕಡೆ ಹೋಗು. ಯಾಕೆಂದರೆ ಕೆಟ್ಟ ಹೆಂಡತಿಯು ಎಷ್ಟು ಒತ್ತಾಯಮಾಡಿದರೂ ಬಿಟ್ಟೇ ಹೋಗುತ್ತಾಳೆ.”

02057013 ವಿದುರ ಉವಾಚ।
02057013a ಏತಾವತಾ ಯೇ ಪುರುಷಂ ತ್ಯಜಂತಿ ತೇಷಾಂ ಸಖ್ಯಮಂತವದ್ಬ್ರೂಹಿ ರಾಜನ್।
02057013c ರಾಜ್ಞಾಂ ಹಿ ಚಿತ್ತಾನಿ ಪರಿಪ್ಲುತಾನಿ ಸಾಂತ್ವಂ ದತ್ತ್ವಾ ಮುಸಲೈರ್ಘಾತಯಂತಿ।।

ವಿದುರನು ಹೇಳಿದನು: “ಇಷ್ಟು ಮಾತ್ರಕ್ಕೆ ಯಾರನ್ನು ತ್ಯಜಿಸುತ್ತಾರೋ ಅವರ ಸಖ್ಯವು ಅಂತ್ಯವಾಯಿತೆಂದು ಇವನಿಗೆ ಹೇಳು ರಾಜನ್! ರಾಜರ ಬುದ್ಧಿಯು ತಿರುಗುತ್ತಿರುತ್ತದೆ. ಸಂತವಿಸುತ್ತಾ ಮುಸಲದಿಂದ ಹೊಡೆಯುತ್ತಾರೆ.

02057014a ಅಬಾಲಸ್ತ್ವಂ ಮನ್ಯಸೇ ರಾಜಪುತ್ರ ಬಾಲೋಽಹಮಿತ್ಯೇವ ಸುಮಂದಬುದ್ಧೇ।
02057014c ಯಃ ಸೌಹೃದೇ ಪುರುಷಂ ಸ್ಥಾಪಯಿತ್ವಾ ಪಶ್ಚಾದೇನಂ ದೂಷಯತೇ ಸ ಬಾಲಃ।।

ರಾಜಪುತ್ರ! ನೀನು ಇನ್ನೂ ಬಾಲಕನೆಂದು ತಿಳಿದಿದ್ದೀಯೆ. ಬಾಲಕನಾದ ನೀನು ನಾನೊಬ್ಬ ಮಂದಬುದ್ಧಿಯೆಂದು ತಿಳಿದಿದ್ದೀಯೆ. ಮೊದಲು ಒಬ್ಬನನ್ನು ಸ್ನೇಹಿತನನ್ನಾಗಿ ಮಾಡಿಕೊಂಡು ನಂತರ ಅವನನ್ನೇ ದೂಷಿಸುವವನು ಬಾಲಕನೇ ಸರಿ.

02057015a ನ ಶ್ರೇಯಸೇ ನೀಯತೇ ಮನ್ದಬುದ್ಧಿಃ ಸ್ತ್ರೀ ಶ್ರೋತ್ರಿಯಸ್ಯೇವ ಗೃಹೇ ಪ್ರದುಷ್ಟಾ।
02057015c ಧ್ರುವಂ ನ ರೋಚೇದ್ಭರತರ್ಷಭಸ್ಯ ಪತಿಃ ಕುಮಾರ್ಯಾ ಇವ ಷಷ್ಟಿವರ್ಷಃ।।

ಶ್ರೋತ್ರಿಯ ಮನೆಯಲ್ಲಿ ದುಷ್ಟ ಸ್ತ್ರೀಯಿದ್ದರೆ ಹೇಗೋ ಹಾಗೆ ಮಂದಬುದ್ಧಿಯು ಯಾವ ಶ್ರೇಯಸ್ಸಿನೆಡೆಯೂ ಕೊಂಡೊಯ್ಯುವುದಿಲ್ಲ. ಆದರೆ ಅರುವತ್ತು ವರ್ಷದ ಪತಿಯು ಕುಮಾರಿಯೋರ್ವಳಿಗೆ ಹೇಗೋ ಹಾಗೆ ಇದು ಈ ಭರತರ್ಷಭನಿಗೆ ಇಷ್ಟವಾಗುವುದಿಲ್ಲ.

02057016a ಅನುಪ್ರಿಯಂ ಚೇದನುಕಾಂಕ್ಷಸೇ ತ್ವಂ ಸರ್ವೇಷು ಕಾರ್ಯೇಷು ಹಿತಾಹಿತೇಷು।
02057016c ಸ್ತ್ರಿಯಶ್ಚ ರಾಜಂ ಜಡಪಂಗುಕಾಂಶ್ಚ ಪೃಚ್ಛ ತ್ವಂ ವೈ ತಾದೃಶಾಂಶ್ಚೈವ ಮೂಢಾನ್।।

ರಾಜನ್! ನೀನು ಮಾಡುವ ಎಲ್ಲ ಕಾರ್ಯಗಳ, ಅವು ಎಷ್ಟೇ ಹಿತವಾಗಿರಲಿ ಅಥವಾ ಅಹಿತವಾಗಿರಲಿ, ಪ್ರಿಯವಾದುದನ್ನು ಮಾತ್ರ ಕೇಳಲು ಬಯಸುತ್ತೀಯಾದರೆ ಸ್ತ್ರೀಯರಲ್ಲಿ, ಜಡರಲ್ಲಿ, ಪಂಗುಕರಲ್ಲಿ ಅಥವಾ ಅವರಂತೆ ಮೂಢರಾಗಿರುವವರಲ್ಲಿ ಹೋಗಿ ಕೇಳು.

02057017a ಲಭ್ಯಃ ಖಲು ಪ್ರಾತಿಪೀಯ ನರೋಽನುಪ್ರಿಯವಾಗಿಹ।
02057017c ಅಪ್ರಿಯಸ್ಯ ತು ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ।।

ಪ್ರಾತಿಪೀಯ! ನಿನಗೆ ಇಲ್ಲಿ ಅನುಪ್ರಿಯವಾಗಿ ಮಾತನಾಡುವ ಜನರು ಖಂಡಿತವಾಗಿಯೂ ದೊರೆಯುತ್ತಾರೆ. ಆದರೆ ಅಪ್ರಿಯವಾಗಿದ್ದರೂ ಒಳ್ಳೆಯ ಸಲಹೆಯನ್ನು ನೀಡುವವರು ದುರ್ಲಭ ಎಂದು ತಿಳಿದವರು ಹೇಳುತ್ತಾರೆ.

02057018a ಯಸ್ತು ಧರ್ಮೇ ಪರಾಶ್ವಸ್ಯ ಹಿತ್ವಾ ಭರ್ತುಃ ಪ್ರಿಯಾಪ್ರಿಯೇ।
02057018c ಅಪ್ರಿಯಾಣ್ಯಾಹ ಪಥ್ಯಾನಿ ತೇನ ರಾಜಾ ಸಹಾಯವಾನ್।।

ಒಡೆಯನಿಗೆ ಯಾವುದು ಇಷ್ಟ ಯಾವುದು ಇಷ್ಟವಿಲ್ಲ ಎನ್ನುವುದನ್ನು ಮರೆತು ತಾನು ಧರ್ಮದಲ್ಲಿದ್ದುಕೊಂಡು ಅಪ್ರಿಯವಾದರೂ ಉತ್ತಮ ಸಲಹೆಗಳನ್ನು ನೀಡುವವನಲ್ಲಿಯೇ ರಾಜನು ಸಹಾಯಕನನ್ನು ಕಾಣುತ್ತಾನೆ.

02057019a ಅವ್ಯಾಧಿಜಂ ಕಟುಕಂ ತೀಕ್ಷ್ಣಮುಷ್ಣಂ ಯಶೋಮುಷಂ ಪರುಷಂ ಪೂತಿಗಂಧಿ।
02057019c ಸತಾಂ ಪೇಯಂ ಯನ್ನ ಪಿಬಂತ್ಯಸಂತೋ ಮನ್ಯುಂ ಮಹಾರಾಜ ಪಿಬ ಪ್ರಶಾಮ್ಯ।।

ಆರೋಗ್ಯದಿಂದಿರಲು ಕಟುಕಾದ, ತೀಕ್ಷ್ಣವಾದ, ಸುಡುತ್ತಿರುವ, ಕೆಟ್ಟವಾಸನೆಯ ದ್ರವವನ್ನು ಸಾತ್ವಿಕರು ಕುಡಿಯುತ್ತಾರೆ. ಆದರೆ ಕೆಟ್ಟವರು ಅದನ್ನೇ ನಿರಾಕರಿಸುತ್ತಾರೆ. ಮಹಾರಾಜ! ಇದನ್ನು ಕುಡಿದು ನಿನ್ನ ಸಿಟ್ಟನ್ನು ಶಾಂತಗೊಳಿಸು.

02057020a ವೈಚಿತ್ರವೀರ್ಯಸ್ಯ ಯಶೋ ಧನಂ ಚ ವಾಂಚಾಮ್ಯಹಂ ಸಹಪುತ್ರಸ್ಯ ಶಶ್ವತ್।
02057020c ಯಥಾ ತಥಾ ವೋಽಸ್ತು ನಮಶ್ಚ ವೋಽಸ್ತು ಮಮಾಪಿ ಚ ಸ್ವಸ್ತಿ ದಿಶಂತು ವಿಪ್ರಾಃ।।

ವೈಚಿತ್ರವೀರ್ಯನಿಗೆ ಮತ್ತು ಅವನ ಮಗನಿಗೆ ಶಾಶ್ವತ ಯಶಸ್ಸು ಮತ್ತು ಸಂಪತ್ತನ್ನು ಬಯಸುತ್ತೇನೆ. ಇದು ಹೀಗಿರುವಾಗ ನಾನು ನಿನಗೆ ನಮಸ್ಕರಿಸಿ ಬೀಳ್ಕೊಳ್ಳುತ್ತೇನೆ. ನನಗೂ ಕೂಡ ವಿಪ್ರರು ಅವರ ಅಶೀರ್ವಾದಗಳನ್ನು ನೀಡಲಿ.

02057021a ಆಶೀವಿಷಾನ್ನೇತ್ರವಿಷಾನ್ಕೋಪಯೇನ್ನ ತು ಪಂಡಿತಃ।
02057021c ಏವಂ ತೇಽಹಂ ವದಾಮೀದಂ ಪ್ರಯತಃ ಕುರುನಂದನ।।

ಕಣ್ಣಿನಲ್ಲಿ ವಿಷಕಾರುವ ಹಾವುಗಳನ್ನು ಸಿಟ್ಟಿಗೆಬ್ಬಿಸಬಾರದು ಎಂದು ಪಂಡಿತರು ಹೇಳುತ್ತಾರೆ. ಕುರುನಂದನ! ಅದನ್ನೇ ನಾನು ನಿನಗೆ ಹೇಳಲು ಪ್ರಯತ್ನಿಸಿದೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ವಿದುರಹಿತವಾಕ್ಯೇ ಸಪ್ತಪಂಚಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ವಿದುರಹಿತವಾಕ್ಯ ಎನ್ನುವ ಐವತ್ತೇಳನೆಯ ಅಧ್ಯಾಯವು.