ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 56
ಸಾರ
ವಿದುರನು ದ್ಯೂತವನ್ನು ನಿಲ್ಲಿಸುವಂತೆ ಧೃತರಾಷ್ಟ್ರನಲ್ಲಿ ಕೇಳಿಕೊಂಡಿದುದು (1-10).
02056001 ವಿದುರ ಉವಾಚ।
02056001a ದ್ಯೂತಂ ಮೂಲಂ ಕಲಹಸ್ಯಾನುಪಾತಿ ಮಿಥೋಭೇದಾಯ ಮಹತೇ ವಾ ರಣಾಯ।
02056001c ಯದಾಸ್ಥಿತೋಽಯಂ ಧೃತರಾಷ್ಟ್ರಸ್ಯ ಪುತ್ರೋ ದುರ್ಯೋಧನಃ ಸೃಜತೇ ವೈರಮುಗ್ರಂ।।
ವಿದುರನು ಹೇಳಿದನು: “ಎಲ್ಲ ಕಲಹಗಳಿಗೆ, ಸುಳ್ಳು ಬೇಧಗಳಿಗೆ ಮತ್ತು ಮಹಾ ಯುದ್ಧಕ್ಕೆ ದ್ಯೂತವೇ ಕಾರಣವಾಗುತ್ತದೆ. ಇದಕ್ಕೆ ತೊಡಗಿರುವ ಧೃತರಾಷ್ಟ್ರ ಪುತ್ರ ದುರ್ಯೋಧನನು ಉಗ್ರ ವೈರತ್ವವನ್ನು ಸೃಷ್ಠಿಸುತ್ತಿದ್ದಾನೆ.
02056002a ಪ್ರಾತಿಪೀಯಾಃ ಶಾಂತನವಾ ಭೈಮಸೇನಾಃ ಸಬಾಹ್ಲಿಕಾಃ।
02056002c ದುರ್ಯೋಧನಾಪರಾಧೇನ ಕೃಚ್ಛ್ರಂ ಪ್ರಾಪ್ಸ್ಯಂತಿ ಸರ್ವಶಃ।।
ದುರ್ಯೋಧನನ ಅಪರಾಧದಿಂದ ಪ್ರತೀಪನ ಕುಲದವರು, ಶಾಂತನವರು, ಭೀಮಸೇನನ ಕುಲದವರು, ಮತ್ತು ಬಾಹ್ಲೀಕರು ಎಲ್ಲರೂ ಶೋಕವನ್ನು ಹೊಂದುತ್ತಾರೆ.
02056003a ದುರ್ಯೋಧನೋ ಮದೇನೈವ ಕ್ಷೇಮಂ ರಾಷ್ಟ್ರಾದಪೋಹತಿ।
02056003c ವಿಷಾಣಂ ಗೌರಿವ ಮದಾತ್ಸ್ವಯಮಾರುಜತೇ ಬಲಾತ್।।
ಬರಿಯ ಮದದಿಂದ ದುರ್ಯೋಧನನು ಮದದಲ್ಲಿರುವ ಹೋರಿಯು ಹೇಗೆ ತನ್ನ ಕೋಡನ್ನೇ ತೀವಿ ತುಂಡುಮಾಡಿಕೊಳ್ಳುತ್ತದೆಯೋ ಹಾಗೆ ಇಡೀ ರಾಷ್ಟ್ರದ ಸುರಕ್ಷತೆಯನ್ನು ಅಪಹರಿಸಿದ್ದಾನೆ.
02056004a ಯಶ್ಚಿತ್ತಮನ್ವೇತಿ ಪರಸ್ಯ ರಾಜನ್ ವೀರಃ ಕವಿಃ ಸ್ವಾಮತಿಪತ್ಯ ದೃಷ್ಟಿಂ।
02056004c ನಾವಂ ಸಮುದ್ರ ಇವ ಬಾಲನೇತ್ರಾಂ ಆರುಹ್ಯ ಘೋರೇ ವ್ಯಸನೇ ನಿಮಜ್ಜೇತ್।।
ರಾಜನ್! ವೀರನಾಗಿರಲಿ ಕವಿಯಾಗಿರಲಿ ಯಾರು ತನ್ನ ದೃಷ್ಟಿಕೋಣವನ್ನು ಬಿಟ್ಟು ಇನ್ನೊಬ್ಬರ ಮನಸ್ಸಿನಂತೆ ನಡೆದುಕೊಳ್ಳುತ್ತಾನೋ ಅವನು ಬಾಲಕನಿಂದ ನಡೆಸಲ್ಪಡುವ ದೋಣಿಯನ್ನು ಏರಿ ಸಮುದ್ರವನ್ನು ದಾಟಲು ಹೋಗಿ ಘೋರವಾದ ವ್ಯಸನದಲ್ಲಿ ಮುಳುಗುತ್ತಾನೆ.
02056005a ದುರ್ಯೋಧನೋ ಗ್ಲಹತೇ ಪಾಂಡವೇನ ಪ್ರಿಯಾಯಸೇ ತ್ವಂ ಜಯತೀತಿ ತಚ್ಚ।
02056005c ಅತಿನರ್ಮಾಜ್ಜಾಯತೇ ಸಂಪ್ರಹಾರೋ ಯತೋ ವಿನಾಶಃ ಸಮುಪೈತಿ ಪುಂಸಾಂ।।
ದುರ್ಯೋಧನನು ಪಾಂಡವರೊಂದಿಗೆ ಆಡುತ್ತಿದ್ದಾನೆ, ಮತ್ತು ಅವನು ಗೆಲ್ಲುತ್ತಿದ್ದಾನೆ ಎಂದು ನೀನು ಸಂತೋಷಪಡುತ್ತಿದ್ದೀಯೆ. ಈ ಒಂದು ಆಟದಿಂದ ಯುದ್ಧವು ಹುಟ್ಟುತ್ತದೆ, ಮತ್ತು ಅದರಿಂದ ಎಲ್ಲರ ವಿನಾಶವು ಉಂಟಾಗುತ್ತದೆ.
02056006a ಆಕರ್ಷಸ್ತೇಽವಾಕ್ಫಲಃ ಕುಪ್ರಣೀತೋ ಹೃದಿ ಪ್ರೌಢೋ ಮಂತ್ರಪದಃ ಸಮಾಧಿಃ।
02056006c ಯುಧಿಷ್ಠಿರೇಣ ಸಫಲಃ ಸಂಸ್ತವೋಽಸ್ತು ಸಾಮ್ನಃ ಸುರಿಕ್ತೋಽರಿಮತೇಃ ಸುಧನ್ವಾ।।
ಈ ಕುಪ್ರಣೀತ ಆಟವು ಇದನ್ನು ಆಯೋಜಿಸಿದ ಪ್ರೌಢನ ಹೃದಯದ ಅಂತರಾಳದಲ್ಲಿ ಅಧೋಗತಿಯಲ್ಲಿರುವ ಫಲವನ್ನು ಆಕರ್ಷಿಸುತ್ತದೆ. ಯುಧಿಷ್ಠಿರನೊಂದಿಗೆ ಇದು ಸಫಲವಾದರೆ ಸುಧನ್ವಿಯಲ್ಲಿ ವೈರತ್ವವನ್ನು ಉಂಟುಮಾಡುತ್ತದೆ.
02056007a ಪ್ರಾತಿಪೀಯಾಃ ಶಾಂತನವಾಶ್ಚ ರಾಜನ್ ಕಾವ್ಯಾಂ ವಾಚಂ ಶೃಣುತ ಮಾತ್ಯಗಾದ್ವಃ।
02056007c ವೈಶ್ವಾನರಂ ಪ್ರಜ್ವಲಿತಂ ಸುಘೋರಂ ಅಯುದ್ಧೇನ ಪ್ರಶಮಯತೋತ್ಪತಂತಂ।।
ರಾಜನ್! ಪ್ರತೀಪನ ಮತ್ತು ಶಾಂತನವನ ಕುಲದವರೇ! ಕಾವ್ಯನ ಮಾತುಗಳನ್ನು ಕೇಳಿ. ಕಿಚ್ಚೇಳುತ್ತಿರುವ ಈ ಕೆಟ್ಟ ಬೆಂಕಿಯು ನಿಮ್ಮನ್ನು ಆವರಿಸದಿರಲಿ. ಯುದ್ಧದ ಮೊದಲೇ ಇದನ್ನು ಶಾಂತಗೊಳಿಸಿ.
02056008a ಯದಾ ಮನ್ಯುಂ ಪಾಂಡವೋಽಜಾತಶತ್ರುರ್ ನ ಸಮ್ಯಚ್ಛೇದಕ್ಷಮಯಾಭಿಭೂತಃ।
02056008c ವೃಕೋದರಃ ಸವ್ಯಸಾಚೀ ಯಮೌ ಚ ಕೋಽತ್ರ ದ್ವೀಪಃ ಸ್ಯಾತ್ತುಮುಲೇ ವಸ್ತದಾನೀಂ।।
ದ್ಯೂತದಿಂದ ಪಾಂಡವ ಅಜಾತಶತ್ರುವಿಗೆ ಅಥವಾ ವೃಕೋದರ, ಸವ್ಯಸಾಚೀ ಅಥವಾ ಯಮಳರಿಗೆ ಉಂಟಾದ ಸಿಟ್ಟು ತಣಿಯದಿದ್ದರೆ ಅದರಿಂದ ಉಂಟಾಗುವ ತುಮುಲದಲ್ಲಿ ಯಾವ ದ್ವೀಪವು ದೊರೆಯಬಲ್ಲದು?
02056009a ಮಹಾರಾಜ ಪ್ರಭವಸ್ತ್ವಂ ಧನಾನಾಂ ಪುರಾ ದ್ಯೂತಾನ್ಮನಸಾ ಯಾವದಿಚ್ಛೇಃ।
02056009c ಬಹು ವಿತ್ತಂ ಪಾಂಡವಾಂಶ್ಚೇಜ್ಜಯೇಸ್ತ್ವಂ ಕಿಂ ತೇನ ಸ್ಯಾದ್ವಸು ವಿಂದೇಹ ಪಾರ್ಥಾನ್।।
ಮಹಾರಾಜ! ಈ ದ್ಯೂತದ ಮೊದಲೂ ನೀನು ನಿನ್ನ ಮನಸ್ಸಿನಲ್ಲಿ ಬಯಸಿದಷ್ಟು ಸಂಪತ್ತಿನ ಒಡೆಯನಾಗಿರುವೆ. ಪಾಂಡವರಿಂದ ಇನ್ನೂ ಹೆಚ್ಚಿನ ಸಂಪತ್ತನ್ನು ಪಡೆದರೆ ಅದು ಯಾರಿಗೆ ಬೇಕು? ಪಾರ್ಥರೇ ನಿನ್ನ ಸಂಪತ್ತಲ್ಲವೇ?
02056010a ಜಾನೀಮಹೇ ದೇವಿತಂ ಸೌಬಲಸ್ಯ ವೇದ ದ್ಯೂತೇ ನಿಕೃತಿಂ ಪಾರ್ವತೀಯಃ।
02056010c ಯತಃ ಪ್ರಾಪ್ತಃ ಶಕುನಿಸ್ತತ್ರ ಯಾತು ಮಾಯಾಯೋಧೀ ಭಾರತ ಪಾರ್ವತೀಯಃ।।
ಭಾರತ! ಸೌಬಲನಾಡುವ ದ್ಯೂತವು ನಮಗೆಲ್ಲ ಗೊತ್ತೇ ಇದೆ. ಆ ಪಾರ್ವತೀಯನು ದ್ಯೂತದಲ್ಲಿ ಕೈಚಳಕವನ್ನು ತಿಳಿದಿದ್ದಾನೆ. ಆದುದರಿಂದ ಮಾಯೆಯಿಂದ ಆಡುವ ಈ ಪಾರ್ವತೀಯ ಶಕುನಿಯು ಎಲ್ಲಿಂದ ಬಂದಿದ್ದಾನೋ ಅಲ್ಲಿಗೇ ಹೋಗಲಿ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ವಿದುರಹಿತವಾಕ್ಯೇ ಷಟ್ಪಂಚಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ವಿದುರಹಿತವಾಕ್ಯ ಎನ್ನುವ ಐವತ್ತಾರನೆಯ ಅಧ್ಯಾಯವು.