053 ದ್ಯೂತಾರಂಭಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 53

ಸಾರ

ಯುಧಿಷ್ಠಿರ-ಶಕುನಿಯರ ಸಂವಾದ ಮತ್ತು ದ್ಯೂತಾರಂಭ (1-21). ಮೊದಲನೆಯ ಪಣವನ್ನು ಶಕುನಿಯು ದುರ್ಯೋಧನನಿಗೆ ಗೆದ್ದುದುದು (22-25).

02053001 ಶಕುನಿರುವಾಚ।
02053001a ಉಪಸ್ತೀರ್ಣಾ ಸಭಾ ರಾಜನ್ರಂತುಂ ಚೈತೇ ಕೃತಕ್ಷಣಾಃ।
02053001c ಅಕ್ಷಾನುಪ್ತ್ವಾ ದೇವನಸ್ಯ ಸಮಯೋಽಸ್ತು ಯುಧಿಷ್ಠಿರ।।

ಶಕುನಿಯು ಹೇಳಿದನು: “ರಾಜನ್! ಸಭೆಯಲ್ಲಿ ಜಮಖಾನವನ್ನು ಹಾಸಿಯಾಗಿದೆ ಮತ್ತು ಇಲ್ಲಿರುವವರು ಸಂತೋಷಪಡಲು ಸಮಯವನ್ನು ತೆಗೆದಿಟ್ಟಿದ್ದಾರೆ. ಯುಧಿಷ್ಠಿರ! ನಾವು ದಾಳಗಳನ್ನು ಉರುಳಿಸುವಾಗ ಪಣದ ಕುರಿತು ಪರಸ್ಪರರಲ್ಲಿ ಒಪ್ಪಂದವಿರಲಿ.”

02053002 ಯುಧಿಷ್ಠಿರ ಉವಾಚ।
02053002a ನಿಕೃತಿರ್ದೇವನಂ ಪಾಪಂ ನ ಕ್ಷಾತ್ರೋಽತ್ರ ಪರಾಕ್ರಮಃ।
02053002c ನ ಚ ನೀತಿರ್ಧ್ರುವಾ ರಾಜನ್ಕಿಂ ತ್ವಂ ದ್ಯೂತಂ ಪ್ರಶಂಸಸಿ।।

ಯುಧಿಷ್ಠಿರನು ಹೇಳಿದನು: “ರಾಜನ್! ಪಣವಿಟ್ಟು ಜೂಜಾಡುವುದು ಮೋಸ ಮತ್ತು ಪಾಪದ ಕೆಲಸ. ಅದರಲ್ಲಿ ಕ್ಷತ್ರಿಯ ಪರಾಕ್ರಮವೇನೂ ಇಲ್ಲ ಮತ್ತು ಶಾಶ್ವತ ನೀತಿಯೂ ಇಲ್ಲ. ನೀನು ಏಕೆ ದ್ಯೂತವನ್ನು ಪ್ರಶಂಸಿಸುತ್ತಿದ್ದೀಯೆ?

02053003a ನ ಹಿ ಮಾನಂ ಪ್ರಶಂಸಂತಿ ನಿಕೃತೌ ಕಿತವಸ್ಯ ಹ।
02053003c ಶಕುನೇ ಮೈವ ನೋ ಜೈಷೀರಮಾರ್ಗೇಣ ನೃಶಂಸವತ್।।

ಶಕುನಿ! ಜೂಜಾಡುವವನ ಕಪಟವನ್ನು ಯಾರೂ ಪ್ರಶಂಸಿಸುವುದಿಲ್ಲ, ಗೌರವಿಸುವುದಿಲ್ಲ. ನಮ್ಮನ್ನು ಕಪಟಮಾರ್ಗದಿಂದ ಕ್ರೂರವಾಗಿ ಸೋಲಿಸಬೇಡ.”

02053004 ಶಕುನಿರುವಾಚ।
02053004a ಯೋಽನ್ವೇತಿ ಸಂಖ್ಯಾಂ ನಿಕೃತೌ ವಿಧಿಜ್ಞಃ ಚೇಷ್ಟಾಸ್ವಖಿನ್ನಃ ಕಿತವೋಽಕ್ಷಜಾಸು।
02053004c ಮಹಾಮತಿರ್ಯಶ್ಚ ಜಾನಾತಿ ದ್ಯೂತಂ ಸ ವೈ ಸರ್ವಂ ಸಹತೇ ಪ್ರಕ್ರಿಯಾಸು।।

ಶಕುನಿಯು ಹೇಳಿದನು: “ಸಂಖ್ಯೆಗಳನ್ನು ಅನುಸರಿಸುವ, ಮೋಸವನ್ನು ಗುರುತಿಸುವ, ದಾಳಗಳನ್ನು ಉರುಳಿಸುವುದರಲ್ಲಿ ನಿರಾಯಾಸನಾದ, ಮತ್ತು ದ್ಯೂತವನ್ನು ತಿಳಿದ ಮಹಾಮತಿಯು ದ್ಯೂತದ ಎಲ್ಲ ಪ್ರಕ್ರಿಯೆಗಳನ್ನೂ ಸಹಿಸಬಲ್ಲ.

02053005a ಅಕ್ಷಗ್ಲಹಃ ಸೋಽಭಿಭವೇತ್ಪರಂ ನಃ ತೇನೈವ ಕಾಲೋ ಭವತೀದಮಾತ್ಥ।
02053005c ದೀವ್ಯಾಮಹೇ ಪಾರ್ಥಿವ ಮಾ ವಿಶಂಕಾಂ ಕುರುಷ್ವ ಪಾಣಂ ಚ ಚಿರಂ ಚ ಮಾ ಕೃಥಾಃ।।

ಜೂಜಿನಲ್ಲಿ ಇಡುವ ಪಣವನ್ನು ಕಳೆದುಕೊಳ್ಳುವುದರಿಂದ ನಮಗೆ ಪರಮ ಕಷ್ಟವೆನಿಸಬಹುದು. ಆದುದರಿಂದ ಜೂಜಾಡುವುದು ಕೆಟ್ಟದೆಂದು ಹೇಳುತ್ತಾರೆ. ಪಾರ್ಥಿವ! ಜೂಜಾಡೋಣ. ಅನುಮಾನಪಡಬೇಡ. ಈಗಲೇ ಪಣವನ್ನು ಇಡು. ತಡಮಾಡಬೇಡ.”

02053006 ಯುಧಿಷ್ಠಿರ ಉವಾಚ।
02053006a ಏವಮಾಹಾಯಮಸಿತೋ ದೇವಲೋ ಮುನಿಸತ್ತಮಃ।
02053006c ಇಮಾನಿ ಲೋಕದ್ವಾರಾಣಿ ಯೋ ವೈ ಸಂಚರತೇ ಸದಾ।।

ಯುಧಿಷ್ಠಿರನು ಹೇಳಿದನು: “ಸದಾ ಲೋಕದ್ವಾರಗಳಿಗೆ ಸಂಚರಿಸುವ ಮುನಿಸತ್ತಮ ಅಸಿತ ದೇವಲನು ಈ ರೀತಿ ಹೇಳಿದ್ದಾನೆ:

02053007a ಇದಂ ವೈ ದೇವನಂ ಪಾಪಂ ಮಾಯಯಾ ಕಿತವೈಃ ಸಹ।
02053007c ಧರ್ಮೇಣ ತು ಜಯೋ ಯುದ್ಧೇ ತತ್ಪರಂ ಸಾಧು ದೇವನಂ।।

“ಮಾಯೆಯಿಂದ ಜೂಜಾಡುವವರೊಂದಿಗೆ ಪಣವಿಡುವುದು ಪಾಪ. ಧರ್ಮವನ್ನು ಪಣವಿಟ್ಟು ಯುದ್ಧದಲ್ಲಿ ಜಯಗಳಿಸುವುದು ಇದಕ್ಕಿಂತಲೂ ಉತ್ತಮವಾದುದು.

02053008a ನಾರ್ಯಾ ಮ್ಲೇಚ್ಛಂತಿ ಭಾಷಾಭಿರ್ಮಾಯಯಾ ನ ಚರಂತ್ಯುತ।
02053008c ಅಜಿಹ್ಮಮಶಠಂ ಯುದ್ಧಮೇತತ್ಸತ್ಪುರುಷವ್ರತಂ।।

ಯಾವ ಆರ್ಯನೂ ಮ್ಲೇಚ್ಛಭಾಷೆಯಲ್ಲಿ ಮಾತನಾಡುವುದಿಲ್ಲ ಮತ್ತು ಮಾಯೆಯಿಂದ ನಡೆದುಕೊಳ್ಳುವುದಿಲ್ಲ. ಓರೆ ಕೋರೆಗಳಿಲ್ಲದ ನೇರ ಯುದ್ಧವೇ ಸತ್ಪುರುಷನ ವ್ರತ.”

02053009a ಶಕ್ತಿತೋ ಬ್ರಾಹ್ಮಣಾನ್ವಂದ್ಯಾಂ ಶಿಕ್ಷಿತುಂ ಪ್ರಯತಾಮಹೇ।
02053009c ತದ್ವೈ ವಿತ್ತಂ ಮಾತಿದೇವೀರ್ಮಾ ಜೈಷೀಃ ಶಕುನೇ ಪರಂ।।

ನಮ್ಮ ಶಕ್ತಿಗನುಗುಣವಾಗಿ ಅರ್ಹ ಬ್ರಾಹ್ಮಣರನ್ನು ಪೂಜಿಸಲು ಪ್ರಯತ್ನಿಸುತ್ತೇವೆ. ಶಕುನಿ! ಆ ವಿತ್ತವನ್ನು ಮೀರಿ ಪಣವಿಟ್ಟು ಆಡಬೇಡ. ಅದಕ್ಕಿಂತಲೂ ಹೆಚ್ಚಿನದನ್ನು ಗೆಲ್ಲಬೇಡ.

02053010a ನಾಹಂ ನಿಕೃತ್ಯಾ ಕಾಮಯೇ ಸುಖಾನ್ಯುತ ಧನಾನಿ ವಾ।
02053010c ಕಿತವಸ್ಯಾಪ್ಯನಿಕೃತೇರ್ವೃತ್ತಮೇತನ್ನ ಪೂಜ್ಯತೇ।।

ನಾನು ಮೋಸದಿಂದ ಸುಖವನ್ನಾಗಲೀ ಧನವನ್ನಾಗಲೀ ಬಯಸುವುದಿಲ್ಲ. ಆದರೆ, ಮೋಸವಿಲ್ಲದ ಜೂಜಿಗೆ ಮಾನ್ಯತೆಯಿಲ್ಲ.”

02053011 ಶಕುನಿರುವಾಚ।
02053011a ಶ್ರೋತ್ರಿಯೋಽಶ್ರೋತ್ರಿಯಮುತ ನಿಕೃತ್ಯೈವ ಯುಧಿಷ್ಠಿರ।
02053011c ವಿದ್ವಾನವಿದುಷೋಽಭ್ಯೇತಿ ನಾಹುಸ್ತಾಂ ನಿಕೃತಿಂ ಜನಾಃ।।

ಶಕುನಿಯು ಹೇಳಿದನು: “ಯುಧಿಷ್ಠಿರ! ಶ್ರೋತ್ರಿಯನ್ನು ಅಶ್ರೋತ್ರಿಯು ಕೇವಲ ಮೋಸದಿಂದಲೇ ಗೆಲ್ಲಬಹುದು. ವಿದ್ವಾನನು ಅವಿದುಷಿಯನ್ನೂ ಕೂಡ ಮೋಸದಿಂದಲೇ ಹಿಂದೆಮಾಡುತ್ತಾನೆ. ಆದರೆ ಜನರು ಅದನ್ನು ಮೋಸವೆಂದು ಕರೆಯುವುದಿಲ್ಲ.

02053012a ಏವಂ ತ್ವಂ ಮಾಮಿಹಾಭ್ಯೇತ್ಯ ನಿಕೃತಿಂ ಯದಿ ಮನ್ಯಸೇ।
02053012c ದೇವನಾದ್ವಿನಿವರ್ತಸ್ವ ಯದಿ ತೇ ವಿದ್ಯತೇ ಭಯಂ।।

ನೀನು ನನ್ನಲ್ಲಿಗೆ ಬಂದಿದ್ದೀಯೆ. ಒಮ್ಮೆ ನಾನು ಮೋಸಗಾರನೆಂದು ನಿನಗನ್ನಿಸಿದರೆ ಮತ್ತು ಇದರಲ್ಲಿ ನಿನಗೆ ಭಯವೆನಿಸಿದರೆ ಜೂಜಿನಿಂದ ದೂರವಿರು.”

02053013 ಯುಧಿಷ್ಠಿರ ಉವಾಚ।
02053013a ಆಹೂತೋ ನ ನಿವರ್ತೇಯಮಿತಿ ಮೇ ವ್ರತಮಾಹಿತಂ।
02053013c ವಿಧಿಶ್ಚ ಬಲವಾನ್ರಾಜನ್ದಿಷ್ಟಸ್ಯಾಸ್ಮಿ ವಶೇ ಸ್ಥಿತಃ।।

ಯುಧಿಷ್ಠಿರನು ಹೇಳಿದನು: “ಎದುರಾಳಿಯು ಕರೆದಾಗ ನಾನು ಹಿಂಜರಿಯುವುದಿಲ್ಲ. ಇದು ನಾನು ನಡೆಸುತ್ತಿರುವ ವ್ರತ. ರಾಜನ್! ವಿಧಿಯು ಬಲಶಾಲಿಯು. ನಾನು ದೈವದ ವಶನಾಗಿದ್ದೇನೆ.

02053014a ಅಸ್ಮಿನ್ಸಮಾಗಮೇ ಕೇನ ದೇವನಂ ಮೇ ಭವಿಷ್ಯತಿ।
02053014c ಪ್ರತಿಪಾಣಶ್ಚ ಕೋಽನ್ಯೋಽಸ್ತಿ ತತೋ ದ್ಯೂತಂ ಪ್ರವರ್ತತಾಂ।।

ಈ ಸಮಾಗಮದಲ್ಲಿ ಯಾರೊಡನೆ ನಾನು ಜೂಜಾಡಬೇಕಾಗುತ್ತದೆ? ಎದಿರು ಪಣವೇನಿದೆ? ದ್ಯೂತವನ್ನು ಆರಂಭಿಸೋಣ.”

02053015 ದುರ್ಯೋಧನ ಉವಾಚ।
02053015a ಅಹಂ ದಾತಾಸ್ಮಿ ರತ್ನಾನಾಂ ಧನಾನಾಂ ಚ ವಿಶಾಂ ಪತೇ।
02053015c ಮದರ್ಥೇ ದೇವಿತಾ ಚಾಯಂ ಶಕುನಿರ್ಮಾತುಲೋ ಮಮ।।

ದುರ್ಯೋಧನನು ಹೇಳಿದನು: “ವಿಶಾಂಪತೇ! ನಾನು ರತ್ನಗಳನ್ನು ಧನವನ್ನು ನೀಡುತ್ತೇನೆ. ನನ್ನ ಪರವಾಗಿ ನನ್ನ ಮಾತುಲ ಶಕುನಿಯು ದಾಳಗಳನ್ನೆಸೆಯುತ್ತಾನೆ.”

02053016 ಯುಧಿಷ್ಠಿರ ಉವಾಚ।
02053016a ಅನ್ಯೇನಾನ್ಯಸ್ಯ ವಿಷಮಂ ದೇವನಂ ಪ್ರತಿಭಾತಿ ಮೇ।
02053016c ಏತದ್ವಿದ್ವನ್ನುಪಾದತ್ಸ್ವ ಕಾಮಮೇವಂ ಪ್ರವರ್ತತಾಂ।।

ಯುಧಿಷ್ಠಿರನು ಹೇಳಿದನು: “ಒಬ್ಬನ ಪರವಾಗಿ ಇನ್ನೊಬ್ಬನು ಜೂಜಾಡುವುದು ನನಗೆ ಸರಿಯೆನಿಸುವುದಿಲ್ಲ. ನಿನಗೆ ಇದು ತಿಳಿದಿದೆ. ಇದನ್ನು ತಿಳಿದುಕೊಂಡು ನಿನಗಿಷ್ಟವಿದ್ದಂತೆ ಆಟವು ಪ್ರಾರಂಭವಾಗಲಿ.””

02053017 ವೈಶಂಪಾಯನ ಉವಾಚ।
02053017a ಉಪೋಹ್ಯಮಾನೇ ದ್ಯೂತೇ ತು ರಾಜಾನಃ ಸರ್ವ ಏವ ತೇ।
02053017c ಧೃತರಾಷ್ಟ್ರಂ ಪುರಸ್ಕೃತ್ಯ ವಿವಿಶುಸ್ತಾಂ ಸಭಾಂ ತತಃ।।
02053018a ಭೀಷ್ಮೋ ದ್ರೋಣಃ ಕೃಪಶ್ಚೈವ ವಿದುರಶ್ಚ ಮಹಾಮತಿಃ।
02053018c ನಾತೀವಪ್ರೀತಮನಸಸ್ತೇಽನ್ವವರ್ತಂತ ಭಾರತ।।

ವೈಶಂಪಾಯನನು ಹೇಳಿದನು: “ಭಾರತ! ದ್ಯೂತವು ಪ್ರಾರಂಭವಾದ ಹಾಗೆಯೇ ಧೃತರಾಷ್ಟ್ರನ ಮುಂದಾಳುತ್ವದಲ್ಲಿ ಸರ್ವ ರಾಜರು - ಇದರಿಂದ ಅತೀವ ಪ್ರೀತಮನಸ್ಕರಾಗಿರದ ಭೀಷ್ಮ, ದ್ರೋಣ, ಕೃಪ, ಮಹಾಮತಿ ವಿದುರ, ಮತ್ತು ಅನ್ಯರು - ಸಭೆಯನ್ನು ಪ್ರವೇಶಿಸಿದರು.

02053019a ತೇ ದ್ವಂದ್ವಶಃ ಪೃಥಕ್ಚೈವ ಸಿಂಹಗ್ರೀವಾ ಮಹೌಜಸಃ।
02053019c ಸಿಂಹಾಸನಾನಿ ಭೂರೀಣಿ ವಿಚಿತ್ರಾಣಿ ಚ ಭೇಜಿರೇ।।

ಆ ಸಿಂಹಗ್ರೀವ ಮಹೌಜಸರು ಜೋಡಿಗಳಲ್ಲಿ ಅಥವಾ ಒಬ್ಬಂಟಿಗರಾಗಿ ಸುಂದರ ವಿಶಾಲ ಸಿಂಹಾಸನಗಳಲ್ಲಿ ಆಸೀನರಾದರು.

02053020a ಶುಶುಭೇ ಸಾ ಸಭಾ ರಾಜನ್ರಾಜಭಿಸ್ತೈಃ ಸಮಾಗತೈಃ।
02053020c ದೇವೈರಿವ ಮಹಾಭಾಗೈಃ ಸಮವೇತೈಸ್ತ್ರಿವಿಷ್ಟಪಂ।।
02053021a ಸರ್ವೇ ವೇದವಿದಃ ಶೂರಾಃ ಸರ್ವೇ ಭಾಸ್ವರಮೂರ್ತಯಃ।
02053021c ಪ್ರಾವರ್ತತ ಮಹಾರಾಜ ಸುಹೃದ್ದ್ಯೂತಮನಂತರಂ।।

ರಾಜನ್! ಆ ಸಭೆಯು ಮಹಾಭಾಗ ದೇವತೆಗಳ ಸಮಾಗಮದಿಂದ ಶೋಭಿಸುವ ದಿವಿಯಂತೆ ಸಮಾಗತ ರಾಜರಿಂದ ಶೋಭಿಸುತ್ತಿತ್ತು. ಎಲ್ಲರೂ ವೇದವಿದರೂ, ಶೂರರೂ ಆಗಿದ್ದು ಸರ್ವರೂ ಭಾಸ್ಕರಮೂರ್ತಿಗಳಾಗಿದ್ದರು. ಮಹಾರಾಜ! ನಂತರ ಆ ಸುಹೃದಯಕರ ದ್ಯೂತವು ಪ್ರಾರಂಭವಾಯಿತು.

02053022 ಯುಧಿಷ್ಠಿರ ಉವಾಚ।
02053022a ಅಯಂ ಬಹುಧನೋ ರಾಜನ್ಸಾಗರಾವರ್ತಸಂಭವಃ।
02053022c ಮಣಿರ್ಹಾರೋತ್ತರಃ ಶ್ರೀಮಾನ್ಕನಕೋತ್ತಮಭೂಷಣಃ।।

ಯುಧಿಷ್ಠಿರನು ಹೇಳಿದನು: “ರಾಜನ್! ಇಗೋ! ಸಾಗರಾವರ್ತಸಂಭವ ಮಣಿಹಾರಗಳು ಮತ್ತು ಶ್ರೀಮಾನ ಕನಕ ಉತ್ತಮ ಭೂಷಣಗಳ ಬಹುಧನ.

02053023a ಏತದ್ರಾಜನ್ಧನಂ ಮಹ್ಯಂ ಪ್ರತಿಪಾಣಸ್ತು ಕಸ್ತವ।
02053023c ಭವತ್ವೇಷ ಕ್ರಮಸ್ತಾತ ಜಯಾಮ್ಯೇನಂ ದುರೋದರಂ।।

ರಾಜನ್! ಇದು ನನ್ನ ಪಣ. ಇದಕ್ಕೆ ಪ್ರತಿಯಾದ ನಿನ್ನ ಪಣವೇನು? ತಾತ! ನೀನು ಕ್ರಮದಿಂದಿರು. ಈ ಪಣವನ್ನು ನಾನೇ ಗೆಲ್ಲುತ್ತೇನೆ.”

02053024 ದುರ್ಯೋಧನ ಉವಾಚ।
02053024a ಸಂತಿ ಮೇ ಮಣಯಶ್ಚೈವ ಧನಾನಿ ವಿವಿಧಾನಿ ಚ।
02053024c ಮತ್ಸರಶ್ಚ ನ ಮೇಽರ್ಥೇಷು ಜಯಾಮ್ಯೇನಂ ದುರೋದರಂ।।

ದುರ್ಯೋಧನನು ಹೇಳಿದನು: “ನನ್ನಲ್ಲಿಯೂ ಮಣಿಗಳಿವೆ. ವಿವಿಧ ಧನಗಳಿವೆ. ಅರ್ಥದಲ್ಲಿ ನನಗೆ ಮತ್ಸರವಿಲ್ಲ. ಈ ಪಣವನ್ನು ನಾನೇ ಗೆಲ್ಲುತ್ತೇನೆ.””

02053025 ವೈಶಂಪಾಯನ ಉವಾಚ।
02053025a ತತೋ ಜಗ್ರಾಹ ಶಕುನಿಸ್ತಾನಕ್ಷಾನಕ್ಷತತ್ತ್ವವಿತ್।
02053025c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ।।

ವೈಶಂಪಾಯನನು ಹೇಳಿದನು: “ಆಗ ಅಕ್ಷತತ್ವವನ್ನು ತಿಳಿದಿದ್ದ ಶಕುನಿಯು ದಾಳಗಳನ್ನು ಹಿಡಿದನು. ಶಕುನಿಯು ಯುಧಿಷ್ಠಿರನಿಗೆ “ಗೆದ್ದೆ!” ಎಂದು ಹೇಳಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ಯೂತಾರಂಭೇ ತ್ರಿಪಂಚಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ಯೂತಾರಂಭ ಎನ್ನುವ ಐವತ್ಮೂರನೆಯ ಅಧ್ಯಾಯವು.