052 ಯುಧಿಷ್ಠಿರಸಭಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 52

ಸಾರ

ವಿದುರನು ಇಂದ್ರಪ್ರಸ್ಥಕ್ಕೆ ಹೋಗಿ ಯುಧಿಷ್ಠಿರನಿಗೆ ಧೃತರಾಷ್ಟ್ರನ ಆಹ್ವಾನವನ್ನು ನೀಡುವುದು (1-10). “ನನಗಿಷ್ಟವಿದೆ ಎಂದು ನಾನು ಹೋಗಲು ಬಯಸುತ್ತಿಲ್ಲ. ಆದರೆ ಇದು ರಾಜ ಧೃತರಾಷ್ಟ್ರನ ಶಾಸನವೆಂದು ಜೂಜಾಡಲು ಹೋಗುತ್ತೇನೆ” ಎಂದು ಹೇಳಿ ಯುಧಿಷ್ಠಿರನು ತಮ್ಮಂದಿರು ಮತ್ತು ದ್ರೌಪದಿಯೊಡನೆ ಹಸ್ತಿನಾಪುರವನ್ನು ಸೇರಿದ್ದುದು (11-37).

02052001 ವೈಶಂಪಾಯನ ಉವಾಚ।
02052001a ತತಃ ಪ್ರಾಯಾದ್ವಿದುರೋಽಶ್ವೈರುದಾರೈರ್ ಮಹಾಜವೈರ್ಬಲಿಭಿಃ ಸಾಧುದಾಂತೈಃ।
02052001c ಬಲಾನ್ನಿಯುಕ್ತೋ ಧೃತರಾಷ್ಟ್ರೇಣ ರಾಜ್ಞಾ ಮನೀಷಿಣಾಂ ಪಾಂಡವಾನಾಂ ಸಕಾಶಂ।।

ವೈಶಂಪಾಯನನು ಹೇಳಿದನು: “ರಾಜ ಧೃತರಾಷ್ಟ್ರನಿಂದ ಬಲವಂತವಾಗಿ ನಿಯುಕ್ತನಾದ ವಿದುರನು ಮನೀಷಿ ಪಾಂಡವರ ವಾಸಸ್ಥಳಕ್ಕೆ ಮಹಾವೇಗವನ್ನುಳ್ಳ ಚೆನ್ನಾಗಿ ಪಳಗಿದ ಬಲಶಾಲಿ ಉದಾರ ಅಶ್ವಗಳೊಂದಿಗೆ ಹೊರಟನು.

02052002a ಸೋಽಭಿಪತ್ಯ ತದಧ್ವಾನಮಾಸಾದ್ಯ ನೃಪತೇಃ ಪುರಂ।
02052002c ಪ್ರವಿವೇಶ ಮಹಾಬುದ್ಧಿಃ ಪೂಜ್ಯಮಾನೋ ದ್ವಿಜಾತಿಭಿಃ।।

ದಾರಿಯನ್ನು ಜಿಗಿದು ದಾಟಿ ನೃಪತಿಯ ಪುರವನ್ನು ತಲುಪಿ ಆ ಮಹಾಬುದ್ಧಿಯು ದ್ವಿಜರನ್ನು ಗೌರವಿಸುತ್ತಾ ಪ್ರವೇಶಿಸಿದನು.

02052003a ಸ ರಾಜಗೃಹಮಾಸಾದ್ಯ ಕುಬೇರಭವನೋಪಮಂ।
02052003c ಅಭ್ಯಗಚ್ಛತ ಧರ್ಮಾತ್ಮಾ ಧರ್ಮಪುತ್ರಂ ಯುಧಿಷ್ಠಿರಂ।।

ಕುಬೇರನ ಭವನದಂತಿದ್ದ ರಾಜಗೃಹವನ್ನು ಸೇರಿ ಆ ಧರ್ಮಾತ್ಮನು ಧರ್ಮಪುತ್ರ ಯುಧಿಷ್ಠಿರನ ಬಳಿಸಾರಿದನು.

02052004a ತಂ ವೈ ರಾಜಾ ಸತ್ಯಧೃತಿರ್ಮಹಾತ್ಮಾ ಅಜಾತಶತ್ರುರ್ವಿದುರಂ ಯಥಾವತ್।
02052004c ಪೂಜಾಪೂರ್ವಂ ಪ್ರತಿಗೃಹ್ಯಾಜಮೀಢಸ್ ತತೋಽಪೃಚ್ಛದ್ಧೃತರಾಷ್ಟ್ರಂ ಸಪುತ್ರಂ।।

ಸತ್ಯಧೃತಿ ಮಹಾತ್ಮ ರಾಜ ಅಜಾತಶತ್ರುವು ವಿದುರನನ್ನು ಯಥಾವತ್ತಾಗಿ ಪೂಜಾಪೂರ್ವಕವಾಗಿ ಸ್ವಾಗತಿಸಿದನು. ನಂತರ ಆಜಮೀಢನು ಪುತ್ರಸಮೇತ ಧೃತರಾಷ್ಟ್ರನ ಕುರಿತು ಪ್ರಶ್ನಿಸಿದನು.

02052005 ಯುಧಿಷ್ಠಿರ ಉವಾಚ।
02052005a ವಿಜ್ಞಾಯತೇ ತೇ ಮನಸೋ ನ ಪ್ರಹರ್ಷಃ ಕಚ್ಚಿತ್ ಕ್ಷತ್ತಃ ಕುಶಲೇನಾಗತೋಽಸಿ।
02052005c ಕಚ್ಚಿತ್ಪುತ್ರಾಃ ಸ್ಥವಿರಸ್ಯಾನುಲೋಮಾ ವಶಾನುಗಾಶ್ಚಾಪಿ ವಿಶೋಽಪಿ ಕಚ್ಚಿತ್।।

ಯುಧಿಷ್ಠಿರನು ಹೇಳಿದನು: “ಕ್ಷತ್ತ! ನಿನ್ನ ಮನಸ್ಸಿನಲ್ಲಿ ಸಂತೋಷವನ್ನು ಕಾಣುತ್ತಿಲ್ಲ. ನೀನು ಕುಶಲವಾಗಿ ಬಂದಿದ್ದೀಯಾ? ಮಕ್ಕಳು ತಮ್ಮ ಹಿರಿಯರನ್ನು ಅನುಸರಿಸುತ್ತಿದ್ದಾರೆಯೇ? ಪ್ರಜೆಗಳು ಅವನ ಆಡಳಿತವನ್ನು ಅನುಸರಿಸುತ್ತಿದ್ದಾರೆಯೇ?”

02052006 ವಿದುರ ಉವಾಚ।
02052006a ರಾಜಾ ಮಹಾತ್ಮಾ ಕುಶಲೀ ಸಪುತ್ರ ಆಸ್ತೇ ವೃತೋ ಜ್ಞಾತಿಭಿರಿಂದ್ರಕಲ್ಪೈಃ।
02052006c ಪ್ರೀತೋ ರಾಜನ್ಪುತ್ರಗಣೈರ್ವಿನೀತೈರ್ ವಿಶೋಕ ಏವಾತ್ಮರತಿರ್ದೃಢಾತ್ಮಾ।।

ವಿದುರನು ಹೇಳಿದನು: “ಮಹಾತ್ಮ ರಾಜನು ತನ್ನ ಪುತ್ರರೊಂದಿಗೆ ಕುಶಲನಾಗಿದ್ದಾನೆ. ತನ್ನ ಇಂದ್ರಸಮಾನ ಕುಟುಂಬದವರಿಂದ ಸುತ್ತುವರೆಯಲ್ಪಟ್ಟಿದ್ದಾನೆ. ರಾಜನ್! ತನ್ನ ವಿನೀತ ಪುತ್ರಗಣಗಳಿಂದ ಪ್ರೀತನಾಗಿ ವಿಶೋಕನಾಗಿ ದೃಢಾತ್ಮನಾಗಿ ಸಂತೋಷದಿಂದಿದ್ದಾನೆ.

02052007a ಇದಂ ತು ತ್ವಾಂ ಕುರುರಾಜೋಽಭ್ಯುವಾಚ ಪೂರ್ವಂ ಪೃಷ್ಟ್ವಾ ಕುಶಲಂ ಚಾವ್ಯಯಂ ಚ।
02052007c ಇಯಂ ಸಭಾ ತ್ವತ್ಸಭಾತುಲ್ಯರೂಪಾ ಭ್ರಾತೄಣಾಂ ತೇ ಪಶ್ಯ ತಾಮೇತ್ಯ ಪುತ್ರ।।

ಆದರೆ ಕುರುರಾಜನು ನಿನ್ನ ಕುಶಲ ಮತ್ತು ಅಭಿವೃದ್ಧಿಯನ್ನು ಕೇಳಿದ ನಂತರ ನಿನಗೆ ಈ ರೀತಿ ಹೇಳಿದ್ದಾನೆ: “ಪುತ್ರ! ನಿನ್ನಲ್ಲಿರುವುದರ ಹಾಗೇ ತೋರುತ್ತಿರುವ ಈ ಸಭೆಯನ್ನು ನಿನ್ನ ಸಹೋದರರ ಸಹಿತ ಬಂದು ನೋಡು.

02052008a ಸಮಾಗಮ್ಯ ಭ್ರಾತೃಭಿಃ ಪಾರ್ಥ ತಸ್ಯಾಂ ಸುಹೃದ್ದ್ಯೂತಂ ಕ್ರಿಯತಾಂ ರಮ್ಯತಾಂ ಚ।
02052008c ಪ್ರೀಯಾಮಹೇ ಭವತಃ ಸಂಗಮೇನ ಸಮಾಗತಾಃ ಕುರವಶ್ಚೈವ ಸರ್ವೇ।।

ಪಾರ್ಥ! ನಿನ್ನ ಭ್ರಾತೃಗಳ ಸಹಿತ ಇಲ್ಲಿಗೆ ಬಂದು ಸೇರು. ಸ್ನೇಹಪರ ಜೂಜಾಡೋಣ! ರಮಿಸೋಣ. ಸರ್ವ ಕುರುಗಳೂ ಇಲ್ಲಿಗೆ ಬಂದು ಸೇರಿದ್ದಾರೆ. ನೀನೂ ಕೂಡ ಬಂದು ಸೇರಿದರೆ ನನಗೆ ಸಂತೋಷವಾಗುತ್ತದೆ.”

02052009a ದುರೋದರಾ ವಿಹಿತಾ ಯೇ ತು ತತ್ರ ಮಹಾತ್ಮನಾ ಧೃತರಾಷ್ಟ್ರೇಣ ರಾಜ್ಞಾ।
02052009c ತಾನ್ದ್ರಕ್ಷ್ಯಸೇ ಕಿತವಾನ್ಸಂನಿವಿಷ್ಟಾನ್ ಇತ್ಯಾಗತೋಽಹಂ ನೃಪತೇ ತಜ್ಜುಷಸ್ವ।।

ಮಹಾತ್ಮ ರಾಜ ಧೃತರಾಷ್ಟ್ರನು ಆಟಗಾರರನ್ನು ನೇಮಿಸಿದ್ದಾನೆ. ಆಟಗಾರರೆಲ್ಲ ಸೇರಿರುವುದನ್ನು ನೀನು ಅಲ್ಲಿ ನೋಡಬಹುದು. ನೃಪತೇ! ಈ ಸಂದೇಶವನ್ನು ತಂದು ಬಂದಿದ್ದೇನೆ. ಅದನ್ನು ಸ್ವೀಕರಿಸು.”

02052010 ಯುಧಿಷ್ಠಿರ ಉವಾಚ।
02052010a ದ್ಯೂತೇ ಕ್ಷತ್ತಃ ಕಲಹೋ ವಿದ್ಯತೇ ನಃ ಕೋ ವೈ ದ್ಯೂತಂ ರೋಚಯೇದ್ಬುಧ್ಯಮಾನಃ।
02052010c ಕಿಂ ವಾ ಭವಾನ್ಮನ್ಯತೇ ಯುಕ್ತರೂಪಂ ಭವದ್ವಾಕ್ಯೇ ಸರ್ವ ಏವ ಸ್ಥಿತಾಃ ಸ್ಮ।।

ಯುಧಿಷ್ಠಿರನು ಹೇಳಿದನು: “ಕ್ಷತ್ತ! ದ್ಯೂತದಲ್ಲಿ ಕಲಹವಾಗುತ್ತದೆ ಎನ್ನುವುದು ತಿಳಿದಿಲ್ಲವೇ? ಇದನ್ನು ತಿಳಿದ ಯಾರುತಾನೆ ದ್ಯೂತವನ್ನು ಇಷ್ಟಪಡುತ್ತಾನೆ? ನೀನಾದರೂ ಸರಿಯಾದುದೇನೆಂದು ಅಭಿಪ್ರಾಯಪಡುತ್ತೀಯೆ? ನಾವೆಲ್ಲರೂ ನಿನ್ನ ಮಾತುಗಳಂತೆಯೇ ನಡೆದುಕೊಳ್ಳುತ್ತೇವೆ.”

02052011 ವಿದುರ ಉವಾಚ।
02052011a ಜಾನಾಮ್ಯಹಂ ದ್ಯೂತಮನರ್ಥಮೂಲಂ ಕೃತಶ್ಚ ಯತ್ನೋಽಸ್ಯ ಮಯಾ ನಿವಾರಣೇ।
02052011c ರಾಜಾ ತು ಮಾಂ ಪ್ರಾಹಿಣೋತ್ತ್ವತ್ಸಕಾಶಂ ಶ್ರುತ್ವಾ ವಿದ್ವಂ ಶ್ರೇಯ ಇಹಾಚರಸ್ವ।।

ವಿದುರನು ಹೇಳಿದನು: “ದ್ಯೂತವು ಅನರ್ಥದ ಮೂಲ ಎನ್ನುವುದನ್ನು ನಾನು ತಿಳಿದಿದ್ದೇನೆ. ಇದನ್ನು ತಡೆಯಲು ನಾನು ಪ್ರಯತ್ನವನ್ನೂ ಮಾಡಿರುತ್ತೇನೆ. ಆದರೆ ರಾಜನು ನನ್ನನ್ನು ನಿನ್ನ ಸಮಕ್ಷಮದಲ್ಲಿ ಕಳುಹಿಸಿದ್ದಾನೆ. ಇದನ್ನು ಕೇಳಿ ತಿಳಿದ ನೀನು ಶ್ರೇಯಸ್ಸು ಯಾವುದರಲ್ಲಿಯೋ ಅದನ್ನು ಮಾಡು.”

02052012 ಯುಧಿಷ್ಠಿರ ಉವಾಚ।
02052012a ಕೇ ತತ್ರಾನ್ಯೇ ಕಿತವಾ ದೀವ್ಯಮಾನಾ ವಿನಾ ರಾಜ್ಞೋ ಧೃತರಾಷ್ಟ್ರಸ್ಯ ಪುತ್ರೈಃ।
02052012c ಪೃಚ್ಛಾಮಿ ತ್ವಾಂ ವಿದುರ ಬ್ರೂಹಿ ನಸ್ತಾನ್ ಯೈರ್ದೀವ್ಯಾಮಃ ಶತಶಃ ಸಂನಿಪತ್ಯ।।

ಯುಧಿಷ್ಠಿರನು ಹೇಳಿದನು: “ರಾಜ ಧೃತರಾಷ್ಟ್ರನ ಪುತ್ರರ ಹೊರತಾಗಿ ಇನ್ನು ಯಾರು ಯಾರು ಅಲ್ಲಿ ಜೂಜಾಡುತ್ತಾರೆ? ವಿದುರ! ನಿನ್ನಲ್ಲಿ ಕೇಳುತ್ತಿದ್ದೇನೆ ಹೇಳು. ಅಲ್ಲಿ ಸೇರಿರುವ ನೂರರಲ್ಲಿ ನಾವು ಯಾರೊಂದಿಗೆ ಜೂಜಾಡುತ್ತೇವೆ?”

02052013 ವಿದುರ ಉವಾಚ।
02052013a ಗಾಂಧಾರರಾಜಃ ಶಕುನಿರ್ವಿಶಾಂ ಪತೇ ರಾಜಾತಿದೇವೀ ಕೃತಹಸ್ತೋ ಮತಾಕ್ಷಃ।
02052013c ವಿವಿಂಶತಿಶ್ಚಿತ್ರಸೇನಶ್ಚ ರಾಜಾ ಸತ್ಯವ್ರತಃ ಪುರುಮಿತ್ರೋ ಜಯಶ್ಚ।।

ವಿದುರನು ಹೇಳಿದನು: “ವಿಶಾಂಪತೇ! ಅಕ್ಷವನ್ನು ತಿಳಿದ ಕೈಕುಶಲತೆಯಿರುವ ಅತಿಯಾಗಿ ಜೂಜಾಡುವ ಗಾಂಧಾರರಾಜ ಶಕುನಿ, ರಾಜ ವಿವಿಂಶತಿ, ರಾಜ ಚಿತ್ರಸೇನ, ಸತ್ಯವ್ರತ, ಪುರುಮಿತ್ರ ಮತ್ತು ಜಯ.”

02052014 ಯುಧಿಷ್ಠಿರ ಉವಾಚ।
02052014a ಮಹಾಭಯಾಃ ಕಿತವಾಃ ಸನ್ನಿವಿಷ್ಟಾ ಮಾಯೋಪಧಾ ದೇವಿತಾರೋಽತ್ರ ಸಂತಿ।
02052014c ಧಾತ್ರಾ ತು ದಿಷ್ಟಸ್ಯ ವಶೇ ಕಿಲೇದಂ ನಾದೇವನಂ ಕಿತವೈರದ್ಯ ತೈರ್ಮೇ।।

ಯುಧಿಷ್ಠಿರನು ಹೇಳಿದನು: “ಮಹಾ ಭಯಂಕರ ಆಟಗಾರರು ಮತ್ತು ಮಾಯೆಯನ್ನು ಬಳಸಿ ದ್ಯೂತವಾಡುವವರೆಲ್ಲ ಅಲ್ಲಿ ಸೇರಿದ್ದಾರೆ. ಆದರೆ ಇವೆಲ್ಲವೂ ದಾತಾರನ ಕಲ್ಪನೆಯ ವಶದಲ್ಲಿವೆ. ಆದುದರಿಂದ ನಾನು ಈ ಜೂಜುಕೋರರೊಂದಿಗೆ ಆಡುವುದನ್ನು ನಿರಾಕರಿಸುವುದಿಲ್ಲ.

02052015a ನಾಹಂ ರಾಜ್ಞೋ ಧೃತರಾಷ್ಟ್ರಸ್ಯ ಶಾಸನಾನ್ ನ ಗಂತುಮಿಚ್ಛಾಮಿ ಕವೇ ದುರೋದರಂ।
02052015c ಇಷ್ಟೋ ಹಿ ಪುತ್ರಸ್ಯ ಪಿತಾ ಸದೈವ ತದಸ್ಮಿ ಕರ್ತಾ ವಿದುರಾತ್ಥ ಮಾಂ ಯಥಾ।।

ಕವೇ! ನನಗಿಷ್ಟವಿದೆ ಎಂದು ನಾನು ಹೋಗಲು ಬಯಸುತ್ತಿಲ್ಲ. ಆದರೆ ಇದು ರಾಜ ಧೃತರಾಷ್ಟ್ರನ ಶಾಸನವೆಂದು ಜೂಜಾಡಲು ಹೋಗುತ್ತೇನೆ. ಪುತ್ರನು ಸದಾ ತಂದೆಯ ಇಷ್ಟದಂತೆ ನಡೆದುಕೊಳ್ಳುತ್ತಾನೆ. ಆದುದರಿಂದ ವಿದುರ! ನೀನು ನನಗೆ ಹೇಳಿದ ಹಾಗೆ ಮಾಡುತ್ತೇನೆ.

02052016a ನ ಚಾಕಾಮಃ ಶಕುನಿನಾ ದೇವಿತಾಹಂ ನ ಚೇನ್ಮಾಂ ಧೃಷ್ಣುರಾಹ್ವಯಿತಾ ಸಭಾಯಾಂ।
02052016c ಆಹೂತೋಽಹಂ ನ ನಿವರ್ತೇ ಕದಾ ಚಿತ್ ತದಾಹಿತಂ ಶಾಶ್ವತಂ ವೈ ವ್ರತಂ ಮೇ।।

ಶಕುನಿಯೊಡನೆ ಜೂಜಾಡಲೂ ನಾನು ತಿರಸ್ಕರಿಸುವುದಿಲ್ಲ. ಇಲ್ಲದಿದ್ದರೆ ಅವನು ನನ್ನನ್ನು ಸಭೆಯಲ್ಲಿ ಕ್ರೂರವಾಗಿ ದ್ಯೂತಕ್ಕೆ ಆಹ್ವಾನಿಸುತ್ತಾನೆ. ಒಮ್ಮೆ ಆಹ್ವಾನಿತನಾದರೆ ನಾನು ಎಂದೂ ಹಿಂಜರಿಯಲಾರೆ. ಯಾಕೆಂದರೆ ಇದು ನನ್ನ ಶಾಶ್ವತ ವ್ರತವಾಗಿದೆ.””

02052017 ವೈಶಂಪಾಯನ ಉವಾಚ।
02052017a ಏವಮುಕ್ತ್ವಾ ವಿದುರಂ ಧರ್ಮರಾಜಃ ಪ್ರಾಯಾತ್ರಿಕಂ ಸರ್ವಮಾಜ್ಞಾಪ್ಯ ತೂರ್ಣಂ।
02052017c ಪ್ರಾಯಾಚ್ಛ್ವೋಭೂತೇ ಸಗಣಃ ಸಾನುಯಾತ್ರಃ ಸಹ ಸ್ತ್ರೀಭಿರ್ದ್ರೌಪದೀಮಾದಿಕೃತ್ವಾ।।

ವೈಶಂಪಾಯನನು ಹೇಳಿದನು: “ಈ ರೀತಿ ವಿದುರನಿಗೆ ಹೇಳಿದ ಧರ್ಮರಾಜನು ಸರ್ವರಿಗೂ ಬೇಗನೆ ಹೊರಡುವಂತೆ ಆಜ್ಞಾಪಿಸಿ, ಕುದುರೆಗಳನ್ನೇರಿ ಸೇನೆ ಮತ್ತು ಅನುಯಾಯಿಗಳೊಂದಿಗೆ, ದ್ರೌಪದಿಯ ಮುಂದಾಳತ್ವದಲ್ಲಿ ಸ್ತ್ರೀಯರೊಂದಿಗೆ ಹೊರಟನು.

02052018a ದೈವಂ ಪ್ರಜ್ಞಾಂ ತು ಮುಷ್ಣಾತಿ ತೇಜಶ್ಚಕ್ಷುರಿವಾಪತತ್।
02052018c ಧಾತುಶ್ಚ ವಶಮನ್ವೇತಿ ಪಾಶೈರಿವ ನರಃ ಸಿತಃ।।

“ತೀಕ್ಷ್ಣ ಪ್ರಕಾಶವು ಕಣ್ಣಿನ ದೃಷ್ಟಿಯನ್ನು ಹೇಗೋ ಹಾಗೆ ದೈವವು ಪ್ರಜ್ಞೆಯನ್ನು ಕಸಿದುಕೊಳ್ಳುತ್ತದೆ. ಧಾತುಪಾಶಗಳ ವಶದಲ್ಲಿ ಸಿಲುಕಿದ ನರನು ಅದರಂತೆಯೇ ನಡೆದುಕೊಳ್ಳುತ್ತಾನೆ.”

02052019a ಇತ್ಯುಕ್ತ್ವಾ ಪ್ರಯಯೌ ರಾಜಾ ಸಹ ಕ್ಷತ್ತ್ರಾ ಯುಧಿಷ್ಠಿರಃ।
02052019c ಅಮೃಷ್ಯಮಾಣಸ್ತತ್ಪಾರ್ಥಃ ಸಮಾಹ್ವಾನಮರಿಂದಮಃ।।

ಹೀಗೆ ಹೇಳುತ್ತಾ ಅಹ್ವಾನವನ್ನು ಸಹಿಸಲಾರದೇ ಕ್ಷತ್ತನ ಸಹಿತ ಅರಿಂದಮ ಪಾರ್ಥ ರಾಜ ಯುಧಿಷ್ಠಿರನು ಹೊರಟನು.

02052020a ಬಾಹ್ಲಿಕೇನ ರಥಂ ದತ್ತಮಾಸ್ಥಾಯ ಪರವೀರಹಾ।
02052020c ಪರಿಚ್ಛನ್ನೋ ಯಯೌ ಪಾರ್ಥೋ ಭ್ರಾತೃಭಿಃ ಸಹ ಪಾಂಡವಃ।।

ಬಾಹ್ಲೀಕನು ನೀಡಿದ್ದ ರಥವನ್ನು ಏರಿ ಪರಿಚಾರಕರಿಂದ ಸುತ್ತುವರೆಯಲ್ಪಟ್ಟು ಭ್ರಾತೃಗಳ ಸಹಿತ ಪಾಂಡವ ಪಾರ್ಥನು ಪ್ರಯಾಣಿಸಿದನು.

02052021a ರಾಜಶ್ರಿಯಾ ದೀಪ್ಯಮಾನೋ ಯಯೌ ಬ್ರಹ್ಮಪುರಃಸರಃ।
02052021c ಧೃತರಾಷ್ಟ್ರೇಣ ಚಾಹೂತಃ ಕಾಲಸ್ಯ ಸಮಯೇನ ಚ।।

ಬ್ರಾಹ್ಮಣರನ್ನು ಮುಂದಿರಿಸಿಕೊಂಡು, ರಾಜಶ್ರೀಯಿಂದ ಬೆಳಗುತ್ತಾ ಧೃತರಾಷ್ಟ್ರನ ಆಮಂತ್ರಣ ಮತ್ತು ಕಾಲ ಪ್ರಚೋದನೆಗೆ ಸಿಲುಕಿ ಪ್ರಯಾಣಿಸಿದನು.

02052022a ಸ ಹಾಸ್ತಿನಪುರಂ ಗತ್ವಾ ಧೃತರಾಷ್ಟ್ರಗೃಹಂ ಯಯೌ।
02052022c ಸಮಿಯಾಯ ಚ ಧರ್ಮಾತ್ಮಾ ಧೃತರಾಷ್ಟ್ರೇಣ ಪಾಂಡವಃ।।

ಅವನು ಹಸ್ತಿನಾಪುರಕ್ಕೆ ಹೋಗಿ ಧೃತರಾಷ್ಟ್ರನ ಮನೆಯನ್ನು ತಲುಪಿದನು ಮತ್ತು ಧರ್ಮಾತ್ಮ ಪಾಂಡವನು ಧೃತರಾಷ್ಟ್ರನನ್ನು ಭೇಟಿ ಮಾಡಿದನು.

02052023a ತಥಾ ದ್ರೋಣೇನ ಭೀಷ್ಮೇಣ ಕರ್ಣೇನ ಚ ಕೃಪೇಣ ಚ।
02052023c ಸಮಿಯಾಯ ಯಥಾನ್ಯಾಯಂ ದ್ರೌಣಿನಾ ಚ ವಿಭುಃ ಸಹ।।

ಹಾಗೆಯೇ ಆ ವಿಭುವು ದ್ರೋಣ, ಭೀಷ್ಮ, ಕರ್ಣ, ಕೃಪ, ಮತ್ತು ದ್ರೌಣಿಯೊಂದಿಗೆ ಯಥಾವತ್ತಾಗಿ ಭೇಟಿಯಾದನು.

02052024a ಸಮೇತ್ಯ ಚ ಮಹಾಬಾಹುಃ ಸೋಮದತ್ತೇನ ಚೈವ ಹ।
02052024c ದುರ್ಯೋಧನೇನ ಶಲ್ಯೇನ ಸೌಬಲೇನ ಚ ವೀರ್ಯವಾನ್।।
02052025a ಯೇ ಚಾನ್ಯೇ ತತ್ರ ರಾಜಾನಃ ಪೂರ್ವಮೇವ ಸಮಾಗತಾಃ।
02052025c ಜಯದ್ರಥೇನ ಚ ತಥಾ ಕುರುಭಿಶ್ಚಾಪಿ ಸರ್ವಶಃ।।

ವೀರ್ಯವಂತ ಆ ಮಹಾಬಾಹುವು ಸೋಮದತ್ತನನ್ನೂ, ದುರ್ಯೋಧನನನ್ನೂ, ಶಲ್ಯನನ್ನೂ, ಸೌಬಲನನ್ನೂ ಮತ್ತು ಮೊದಲೇ ಅಲ್ಲಿಗೆ ಬಂದು ಸೇರಿದ್ದ ಇತರ ರಾಜರನ್ನೂ, ಜಯದ್ರಥನನ್ನೂ, ಮತ್ತು ಸರ್ವ ಕುರುಗಳನ್ನೂ ಬೇಟಿಯಾದನು.

02052026a ತತಃ ಸರ್ವೈರ್ಮಹಾಬಾಹುರ್ಭ್ರಾತೃಭಿಃ ಪರಿವಾರಿತಃ।
02052026c ಪ್ರವಿವೇಶ ಗೃಹಂ ರಾಜ್ಞೋ ಧೃತರಾಷ್ಟ್ರಸ್ಯ ಧೀಮತಃ।।

ಸರ್ವ ಮಹಾಬಾಹು ಭ್ರಾತೃಗಳಿಂದ ಪರಿವೃತನಾಗಿ ಅವನು ಧೀಮಂತ ರಾಜ ಧೃತರಾಷ್ಟ್ರನ ಮನೆಯನ್ನು ಪ್ರವೇಶಿಸಿದನು.

02052027a ದದರ್ಶ ತತ್ರ ಗಾಂಧಾರೀಂ ದೇವೀಂ ಪತಿಮನುವ್ರತಾಂ।
02052027c ಸ್ನುಷಾಭಿಃ ಸಂವೃತಾಂ ಶಶ್ವತ್ತಾರಾಭಿರಿವ ರೋಹಿಣೀಂ।।

ಅಲ್ಲಿ ಅವನು ತಾರೆಗಳಿಂದ ಶಾಶ್ವತವಾಗಿ ಸುತ್ತುವರೆಯಲ್ಪಟ್ಟ ರೋಹಿಣಿಯಂತೆ ತನ್ನ ಅತ್ತಿಗೆಯವರಿಂದ ಸುತ್ತುವರೆಯಲ್ಪಟ್ಟ ಪತಿಯ ಅನುವ್ರತೆ ದೇವಿ ಗಾಂಧಾರಿಯನ್ನು ಕಂಡನು.

02052028a ಅಭಿವಾದ್ಯ ಸ ಗಾಂಧಾರೀಂ ತಯಾ ಚ ಪ್ರತಿನನ್ದಿತಃ।
02052028c ದದರ್ಶ ಪಿತರಂ ವೃದ್ಧಂ ಪ್ರಜ್ಞಾಚಕ್ಷುಷಮೀಶ್ವರಂ।।

ಗಾಂಧಾರಿಯನ್ನು ಅಭಿವಂದಿಸಿ, ಅವಳಿಂದ ಪ್ರತಿನಂದಿತರಾಗಿ ಅವರು ಪ್ರಜ್ಞಾಚಕ್ಷು ಈಶ್ವರ ವೃದ್ಧ ತಂದೆಯನ್ನು ಕಂಡರು.

02052029a ರಾಜ್ಞಾ ಮೂರ್ಧನ್ಯುಪಾಘ್ರಾತಾಸ್ತೇ ಚ ಕೌರವನಂದನಾಃ।
02052029c ಚತ್ವಾರಃ ಪಾಂಡವಾ ರಾಜನ್ಭೀಮಸೇನಪುರೋಗಮಾಃ।।

ರಾಜನ್! ರಾಜನು ಭೀಮಸೇನನನ್ನು ಮೊದಲು ಮಾಡಿ ಆ ನಾಲ್ಕು ಕೌರವನಂದನರ ನೆತ್ತಿಯನ್ನು ಆಘ್ರಾಣಿಸಿದನು.

02052030a ತತೋ ಹರ್ಷಃ ಸಮಭವತ್ಕೌರವಾಣಾಂ ವಿಶಾಂ ಪತೇ।
02052030c ತಾನ್ದೃಷ್ಟ್ವಾ ಪುರುಷವ್ಯಾಘ್ರಾನ್ಪಾಂಡವಾನ್ಪ್ರಿಯದರ್ಶನಾನ್।।

ವಿಶಾಂಪತೇ! ಪ್ರಿಯದರ್ಶನ ಪುರುಷವ್ಯಾಘ್ರ ಪಾಂಡವರನ್ನು ನೋಡಿದ ಕೌರವರನ್ನು ಹರ್ಷವೇ ಆವರಿಸಿತು.

02052031a ವಿವಿಶುಸ್ತೇಽಭ್ಯನುಜ್ಞಾತಾ ರತ್ನವಂತಿ ಗೃಹಾಣ್ಯಥ।
02052031c ದದೃಶುಶ್ಚೋಪಯಾತಾಸ್ತಾನ್ದ್ರೌಪದೀಪ್ರಮುಖಾಃ ಸ್ತ್ರಿಯಃ।।

ಅವನಿಂದ ಅನುಜ್ಞೆಯನ್ನು ಪಡೆದು ರತ್ನಗಳಿಂದ ಅಲಂಕೃತವಾದ ತಮ್ಮ ಮನೆಯನ್ನು ಪ್ರವೇಶಿಸಿದಾಗ ಪ್ರಮುಖ ಸ್ತ್ರೀಯರು ದ್ರೌಪದಿಯನ್ನು ಕಾಣಲು ಬಂದರು.

02052032a ಯಾಜ್ಞಸೇನ್ಯಾಃ ಪರಾಂ ಋದ್ಧಿಂ ದೃಷ್ಟ್ವಾ ಪ್ರಜ್ವಲಿತಾಮಿವ।
02052032c ಸ್ನುಷಾಸ್ತಾ ಧೃತರಾಷ್ಟ್ರಸ್ಯ ನಾತಿಪ್ರಮನಸೋಽಭವನ್।।

ಪ್ರಜ್ವಲಿಸುತ್ತಿರುವ ಯಾಜ್ಞಸೇನೆಯ ಸಂಪತ್ತನ್ನು ನೋಡಿ ಧೃತರಾಷ್ಟ್ರನ ಸೊಸೆಯರು ಅಷ್ಟೊಂದು ಸಂತೋಷ ಪಡಲಿಲ್ಲ.

02052033a ತತಸ್ತೇ ಪುರುಷವ್ಯಾಘ್ರಾ ಗತ್ವಾ ಸ್ತ್ರೀಭಿಸ್ತು ಸಂವಿದಂ।
02052033c ಕೃತ್ವಾ ವ್ಯಾಯಾಮಪೂರ್ವಾಣಿ ಕೃತ್ಯಾನಿ ಪ್ರತಿಕರ್ಮ ಚ।।
02052034a ತತಃ ಕೃತಾಹ್ನಿಕಾಃ ಸರ್ವೇ ದಿವ್ಯಚಂದನರೂಷಿತಾಃ।
02052034c ಕಲ್ಯಾಣಮನಸಶ್ಚೈವ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ।।
02052035a ಮನೋಜ್ಞಮಶನಂ ಭುಕ್ತ್ವಾ ವಿವಿಶುಃ ಶರಣಾನ್ಯಥ।
02052035c ಉಪಗೀಯಮಾನಾ ನಾರೀಭಿರಸ್ವಪನ್ಕುರುನಂದನಾಃ।।

ಅನಂತರ ಆ ಪುರುಷವ್ಯಾಘ್ರ ಕುರುನಂದನರು ಸ್ತ್ರೀಯರೊಂದಿಗೆ ಮಾತನಾಡಿ ವ್ಯಾಯಾಮವೇ ಮೊದಲಾದ ಪ್ರತಿಯೊಂದು ದಿನಕಾರ್ಯಗಳನ್ನೂ ಮಾಡಿ ಸ್ನಾನಮಾಡಿ, ದಿವ್ಯಚಂದನವನ್ನು ಎಲ್ಲೆಡೆ ಲೇಪಿಸಿಕೊಂಡು, ಕಲ್ಯಾಣಮನಸ್ಕರಾದ ಬ್ರಾಹ್ಮಣರಿಂದ ಸ್ವಸ್ತಿವಾಚನಗಳನ್ನು ಕೇಳಿ, ಮನಸ್ಸು ತೃಪ್ತಿಯಾಗುವ ಭೋಜನವನ್ನು ಮಾಡಿ, ತಾವು ಉಳಿಯುವ ಸ್ಥಳಕ್ಕೆ ಹಿಂದಿರುಗಿ, ನಾರಿಯರಿಂದ ಗೀತೆಗಳನ್ನು ಕೇಳಿ, ಮಲಗಿದರು.

02052036a ಜಗಾಮ ತೇಷಾಂ ಸಾ ರಾತ್ರಿಃ ಪುಣ್ಯಾ ರತಿವಿಹಾರಿಣಾಂ।
02052036c ಸ್ತೂಯಮಾನಾಶ್ಚ ವಿಶ್ರಾಂತಾಃ ಕಾಲೇ ನಿದ್ರಾಮಥಾತ್ಯಜನ್।।

ರತಿಕ್ರೀಡೆಗೈದು ರಾತ್ರಿಯ ನಿದ್ದೆಯನ್ನು ಮಾಡಿ ವಿಶ್ರಾಂತಿಗೊಂಡ ಅವರನ್ನು ಸ್ತುತಿಗಳಿಂದ ಎಬ್ಬಿಸಲಾಯಿತು.

02052037a ಸುಖೋಷಿತಾಸ್ತಾಂ ರಜನೀಂ ಪ್ರಾತಃ ಸರ್ವೇ ಕೃತಾಃನಿಕಾಃ।
02052037c ಸಭಾಂ ರಮ್ಯಾಂ ಪ್ರವಿವಿಶುಃ ಕಿತವೈರಭಿಸಂವೃತಾಂ।।

ಸುಖವಾಗಿ ರಾತ್ರಿಯನ್ನು ಕಳೆದ ಅವರೆಲ್ಲರೂ ಆಹ್ನೀಕವನ್ನು ಮುಗಿಸಿ ಜೂಜಾಡುವವರಿಂದ ತುಂಬಿದ್ದ ರಮ್ಯ ಸಭೆಯನ್ನು ಪ್ರವೇಶಿಸಿದರು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಯುಧಿಷ್ಠಿರಸಭಾಗಮನೇ ದ್ವಿಪಂಚಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಯುಧಿಷ್ಠಿರಸಭಾಗಮನ ಎನ್ನುವ ಐವತ್ತೆರಡನೆಯ ಅಧ್ಯಾಯವು.