051 ಯುಧಿಷ್ಠಿರಾನಯನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 51

ಸಾರ

ಶತ್ರುವಿಗೆ ದ್ಯೂತದ ಆಹ್ವಾನವನ್ನು ನೀಡಿದರೆ ತಾನು ಯುಧಿಷ್ಠಿರನ ಯಾವ ಸಂಪತ್ತನ್ನು ನೋಡಿ ದುರ್ಯೋಧನನು ಪರಿತಪಿಸುತ್ತಿದ್ದಾನೋ ಅದನ್ನು ಅಪಹರಿಸಿಕೊಡುವೆನೆಂದು ಶಕುನಿಯು ಆಶ್ವಾಸನೆ ನೀಡುವುದು; ಅದರ ಕುರಿತು ದುರ್ಯೋಧನ-ಧೃತರಾಷ್ಟ್ರರ ನಡುವೆ ಚರ್ಚೆ (1-16). ಸಭೆಯು ಸಿದ್ಧವಾದಾಗ ಧೃತರಾಷ್ಟ್ರನು ದ್ಯೂತದ ವಿರುದ್ಧ ಸಲಹೆ ನೀಡಿದ ವಿದುರನನ್ನೇ ಯುಧಿಷ್ಠಿರನನ್ನು ಕರೆತರಲು ಆಜ್ಞೆಯಿತ್ತುದು (17-26).

02051001 ಶಕುನಿರುವಾಚ।
02051001a ಯಾಂ ತ್ವಮೇತಾಂ ಶ್ರಿಯಂ ದೃಷ್ಟ್ವಾ ಪಾಂಡುಪುತ್ರೇ ಯುಧಿಷ್ಠಿರೇ।
02051001c ತಪ್ಯಸೇ ತಾಂ ಹರಿಷ್ಯಾಮಿ ದ್ಯೂತೇನಾಹೂಯತಾಂ ಪರಃ।।

ಶಕುನಿಯು ಹೇಳಿದನು: “ಪಾಂಡುಪುತ್ರ ಯುಧಿಷ್ಠಿರನಲ್ಲಿ ನೀನು ಯಾವ ಸಂಪತ್ತನ್ನು ನೋಡಿ ತಪಿಸುತ್ತಿರುವೆಯೋ ಅದನ್ನು ನಾನು ಅಪಹರಿಸುತ್ತೇನೆ. ಶತ್ರುವಿಗೆ ದ್ಯೂತದ ಆಹ್ವಾನವನ್ನು ಕಳುಹಿಸು.

02051002a ಅಗತ್ವಾ ಸಂಶಯಮಹಮಯುದ್ಧ್ವಾ ಚ ಚಮೂಮುಖೇ।
02051002c ಅಕ್ಷಾನ್ ಕ್ಷಿಪನ್ನಕ್ಷತಃ ಸನ್ವಿದ್ವಾನವಿದುಷೋ ಜಯೇ।।

ನಾನು ಸಂಶಯ ಬರುವಂಥಹುದೇನನ್ನೂ ಮಾಡುವುದಿಲ್ಲ. ಸೇನೆಗಳನ್ನು ಎದುರಿಟ್ಟು ಯುದ್ಧ ಮಾಡುವುದೂ ಇಲ್ಲ. ದಾಳಗಳನ್ನು ಮಾತ್ರ ಎಸೆದು ಆ ವಿದ್ವಾನ್ ವಿದುಷಿಯನ್ನು ಜಯಿಸುತ್ತೇನೆ.

02051003a ಗ್ಲಹಾನ್ಧನೂಂಷಿ ಮೇ ವಿದ್ಧಿ ಶರಾನಕ್ಷಾಂಶ್ಚ ಭಾರತ।
02051003c ಅಕ್ಷಾಣಾಂ ಹೃದಯಂ ಮೇ ಜ್ಯಾಂ ರಥಂ ವಿದ್ಧಿ ಮಮಾಸ್ತರಂ।।

ಭಾರತ! ದಾಳಗಳೇ ನನ್ನ ಬಿಲ್ಲು ಬಾಣಗಳೆಂದು ತಿಳಿ. ದಾಳಗಳ ಹೃದಯವು ಧನುಸ್ಸಿನ ದಾರ ಮತ್ತು ದಾಳಗಳನ್ನು ಎಸೆಯುವ ಚಾಪೆಯು ರಥವೆಂದು ತಿಳಿ.”

02051004 ದುರ್ಯೋಧನ ಉವಾಚ।
02051004a ಅಯಮುತ್ಸಹತೇ ರಾಜಂ ಶ್ರಿಯಮಾಹರ್ತುಮಕ್ಷವಿತ್।
02051004c ದ್ಯೂತೇನ ಪಾಂಡುಪುತ್ರೇಭ್ಯಸ್ತತ್ತುಭ್ಯಂ ತಾತ ರೋಚತಾಂ।।

ದುರ್ಯೋಧನನು ಹೇಳಿದನು: “ರಾಜನ್! ಈ ಅಕ್ಷವಿದನು ದ್ಯೂತದಲ್ಲಿ ಪಾಂಡುಪುತ್ರನಿಂದ ಅವನ ಸಂಪತ್ತನ್ನು ಕಸಿದುಕೊಳ್ಳಲು ಉತ್ಸುಕನಾಗಿದ್ದಾನೆ. ತಂದೇ! ಇದು ನಿನಗೆ ಸಂತಸವನ್ನುಂಟುಮಾಡಬೇಕು.”

02051005 ಧೃತರಾಷ್ಟ್ರ ಉವಾಚ।
02051005a ಸ್ಥಿತೋಽಸ್ಮಿ ಶಾಸನೇ ಭ್ರಾತುರ್ವಿದುರಸ್ಯ ಮಹಾತ್ಮನಃ।
02051005c ತೇನ ಸಂಗಮ್ಯ ವೇತ್ಸ್ಯಾಮಿ ಕಾರ್ಯಸ್ಯಾಸ್ಯ ವಿನಿಶ್ಚಯಂ।।

ಧೃತರಾಷ್ಟ್ರನು ಹೇಳಿದನು: “ನನ್ನ ತಮ್ಮ ಮಹಾತ್ಮ ವಿದುರನ ಶಾಸನದಂತೆ ನಡೆಯುತ್ತಿದ್ದೇನೆ. ಅವನೊಂದಿಗೆ ವಿಚಾರಮಾಡಿ ಮುಂದಿನ ಕಾರ್ಯದ ಕುರಿತು ನಿಶ್ಚಯಿಸುತ್ತೇನೆ.”

02051006 ದುರ್ಯೋಧನ ಉವಾಚ।
02051006a ವಿಹನಿಷ್ಯತಿ ತೇ ಬುದ್ಧಿಂ ವಿದುರೋ ಮುಕ್ತಸಂಶಯಃ।
02051006c ಪಾಂಡವಾನಾಂ ಹಿತೇ ಯುಕ್ತೋ ನ ತಥಾ ಮಮ ಕೌರವ।।

ದುರ್ಯೋಧನನು ಹೇಳಿದನು: “ಕೌರವ! ವಿದುರನು ನಿನ್ನ ಬುದ್ಧಿಯನ್ನು ನಾಶಪಡಿಸುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವನು ಪಾಂಡವರ ಹಿತದಲ್ಲಿ ಎಷ್ಟು ನಿರತನಾಗಿದ್ದಾನೋ ಅಷ್ಟು ನನ್ನ ಕುರಿತು ಇಲ್ಲ.

02051007a ನಾರಭೇತ್ಪರಸಾಮರ್ಥ್ಯಾತ್ಪುರುಷಃ ಕಾರ್ಯಮಾತ್ಮನಃ।
02051007c ಮತಿಸಾಮ್ಯಂ ದ್ವಯೋರ್ನಾಸ್ತಿ ಕಾರ್ಯೇಷು ಕುರುನನ್ದನ।।

ಕುರುನಂದನ! ಪುರುಷನು ತನ್ನ ಕೆಲಸವನ್ನು ಇನ್ನೊಬ್ಬರ ಅಧಿಕಾರಕ್ಕೊಳಪಟ್ಟು ಮಾಡಬಾರದು. ಯಾವುದೇ ಕಾರ್ಯದಲ್ಲಿ ಇಬ್ಬರ ಅಭಿಪ್ರಾಯಗಳೂ ಒಂದೇ ಆಗಿರುವುದಿಲ್ಲ.

02051008a ಭಯಂ ಪರಿಹರನ್ಮಂದ ಆತ್ಮಾನಂ ಪರಿಪಾಲಯನ್।
02051008c ವರ್ಷಾಸು ಕ್ಲಿನ್ನಕಟವತ್ತಿಷ್ಠನ್ನೇವಾವಸೀದತಿ।।

ಭಯದಿಂದ ತನ್ನ ರಕ್ಷಣೆಯನ್ನು ಮಾಡಿಕೊಳ್ಳದಿದ್ದ ಮೂಢನು ಮಳೆಯಲ್ಲಿ ನಿಂತ ಒಂಟಿ ಕಡ್ಡಿಯಂತೆ ನಾಶಹೊಂದುತ್ತಾನೆ.

02051009a ನ ವ್ಯಾಧಯೋ ನಾಪಿ ಯಮಃ ಶ್ರೇಯಃಪ್ರಾಪ್ತಿಂ ಪ್ರತೀಕ್ಷತೇ।
02051009c ಯಾವದೇವ ಭವೇತ್ಕಲ್ಪಸ್ತಾವಚ್ಛ್ರೇಯಃ ಸಮಾಚರೇತ್।।

ವ್ಯಾಧಿಯಾಗಲೀ ಯಮನಾಗಲೀ ಒಳ್ಳೆಯ ಗಳಿಗೆಯನ್ನು ನೋಡಿ ಬರುವುದಿಲ್ಲ. ಸಮಯ ದೊರಕಿದಾಗಲೇ ನಮ್ಮ ಶ್ರೇಯಸ್ಸಿಗಾಗಿ ನಡೆದುಕೊಳ್ಳಬೇಕು.”

02051010 ಧೃತರಾಷ್ಟ್ರ ಉವಾಚ।
02051010a ಸರ್ವಥಾ ಪುತ್ರ ಬಲಿಭಿರ್ವಿಗ್ರಹಂ ತೇ ನ ರೋಚಯೇ।
02051010c ವೈರಂ ವಿಕಾರಂ ಸೃಜತಿ ತದ್ವೈ ಶಸ್ತ್ರಮನಾಯಸಂ।।

ಧೃತರಾಷ್ಟ್ರನು ಹೇಳಿದನು: “ಆದರೂ ಪುತ್ರ! ನಮಗಿಂಥಲೂ ಬಲಶಾಲಿಯಾಗಿರುವರನ್ನು ವಿರೋಧಿಸಲು ಮನಸ್ಸು ಬರುತ್ತಿಲ್ಲ. ಶಸ್ತ್ರದಂತೆ ವೈರವು ವಿಕಾರಗಳನ್ನು ಸೃಷ್ಟಿಸುತ್ತದೆ.

02051011a ಅನರ್ಥಮರ್ಥಂ ಮನ್ಯಸೇ ರಾಜಪುತ್ರ ಸಂಗ್ರಂಥನಂ ಕಲಹಸ್ಯಾತಿಘೋರಂ।
02051011c ತದ್ವೈ ಪ್ರವೃತ್ತಂ ತು ಯಥಾ ಕಥಂ ಚಿದ್ ವಿಮೋಕ್ಷಯೇಚ್ಚಾಪ್ಯಸಿಸಾಯಕಾಂಶ್ಚ।।

ರಾಜಪುತ್ರ! ಯಾವ ಅನರ್ಥವನ್ನು ಅರ್ಥವೆಂದು ತಿಳಿದಿದ್ದೀಯೋ ಅದು ಅತಿ ಘೋರ ಕಲಹವನ್ನು ತಂದೊಡ್ಡುತ್ತದೆ. ಯಾವುದೇ ರೀತಿಯಲ್ಲಿ ಅದು ಒಮ್ಮೆ ಪ್ರಾರಂಭವಾಯಿತೆಂದರೆ ಅದು ಖಡ್ಗ ಬಾಣಗಳನ್ನು ಬಿಟ್ಟೇ ಬಿಡುತ್ತದೆ.”

02051012 ದುರ್ಯೋಧನ ಉವಾಚ।
02051012a ದ್ಯೂತೇ ಪುರಾಣೈರ್ವ್ಯವಹಾರಃ ಪ್ರಣೀತಸ್ ತತ್ರಾತ್ಯಯೋ ನಾಸ್ತಿ ನ ಸಂಪ್ರಹಾರಃ।
02051012c ತದ್ರೋಚತಾಂ ಶಕುನೇರ್ವಾಕ್ಯಮದ್ಯ ಸಭಾಂ ಕ್ಷಿಪ್ರಂ ತ್ವಮಿಹಾಜ್ಞಾಪಯಸ್ವ।।

ದುರ್ಯೋಧನನು ಹೇಳಿದನು: “ಪುರಾಣಗಳಲ್ಲಿ ದ್ಯೂತವು ಒಂದು ವ್ಯವಹಾರವೆಂದು ಪ್ರಣೀತವಾಗಿದೆ. ಅದರಲ್ಲಿ ಕೆಟ್ಟದ್ದೇನೂ ಇಲ್ಲ. ಸಂಪ್ರಹಾರಗಳೇನೂ ಇಲ್ಲ. ಇಂದು ಶಕುನಿಯ ಮಾತುಗಳನ್ನು ಒಪ್ಪು. ಕ್ಷಿಪ್ರವಾಗಿ ಒಂದು ಸಭೆಯನ್ನು ಕಟ್ಟಲು ಆಜ್ಞಾಪಿಸು.

02051013a ಸ್ವರ್ಗದ್ವಾರಂ ದೀವ್ಯತಾಂ ನೋ ವಿಶಿಷ್ಟಂ ತದ್ವರ್ತಿನಾಂ ಚಾಪಿ ತಥೈವ ಯುಕ್ತಂ।
02051013c ಭವೇದೇವಂ ಹ್ಯಾತ್ಮನಾ ತುಲ್ಯಮೇವ ದುರೋದರಂ ಪಾಂಡವೈಸ್ತ್ವಂ ಕುರುಷ್ವ।।

ಜೂಜಾಡಿದರೆ ಸ್ವರ್ಗದ ಬಾಗಿಲು ನಮಗೆ ಹತ್ತಿರವಾಗುತ್ತದೆ. ಹಾಗೆ ಮಾಡುವುದೇ ನಮಗೆ ಸೂಕ್ತ. ನಾವಿಬ್ಬರೂ ಒಂದೇ ಸ್ತರದಲ್ಲಿ ನಿಲ್ಲುವ ಹಾಗಾಗುತ್ತದೆ. ಪಾಂಡವರೊಂದಿಗೆ ಆಡಲು ಒಪ್ಪಿಗೆ ನೀಡು.”

02051014 ಧೃತರಾಷ್ಟ್ರ ಉವಾಚ।
02051014a ವಾಕ್ಯಂ ನ ಮೇ ರೋಚತೇ ಯತ್ತ್ವಯೋಕ್ತಂ ಯತ್ತೇ ಪ್ರಿಯಂ ತತ್ಕ್ರಿಯತಾಂ ನರೇಂದ್ರ।
02051014c ಪಶ್ಚಾತ್ತಪ್ಸ್ಯಸೇ ತದುಪಾಕ್ರಮ್ಯ ವಾಕ್ಯಂ ನ ಹೀದೃಶಂ ಭಾವಿ ವಚೋ ಹಿ ಧರ್ಮ್ಯಂ।।

ಧೃತರಾಷ್ಟ್ರನು ಹೇಳಿದನು: “ನೀನು ಆಡುವ ಮಾತುಗಳು ನನಗೆ ಹಿಡಿಸುತ್ತಿಲ್ಲ. ಆದರೆ, ನರೇಂದ್ರ! ನಿನಗೆ ಇಷ್ಟವಾದುದನ್ನು ಮಾಡು. ನನ್ನ ಮಾತುಗಳನ್ನು ಉಲ್ಲಂಘಿಸಿದ ನೀನು ನಂತರ ಪಶ್ಚಾತ್ತಾಪ ಪಡುತ್ತೀಯೆ. ಏಕೆಂದರೆ ಇಂಥಹ ಮಾತುಗಳು ಧರ್ಮವನ್ನು ಅನುಸರಿಸಿಲ್ಲ.

02051015a ದೃಷ್ಟಂ ಹ್ಯೇತದ್ವಿದುರೇಣೈವಮೇವ ಸರ್ವಂ ಪೂರ್ವಂ ಬುದ್ಧಿವಿದ್ಯಾನುಗೇನ।
02051015c ತದೇವೈತದವಶಸ್ಯಾಭ್ಯುಪೈತಿ ಮಹದ್ಭಯಂ ಕ್ಷತ್ರಿಯಬೀಜಘಾತಿ।।

ತನ್ನ ಬುದ್ಧಿ-ವಿಧ್ಯೆಗಳ ಸಹಾಯದಿಂದ ವಿದುರನು ಹಿಂದೆಯೇ ಈ ಎಲ್ಲವನ್ನೂ ಕಂಡಿದ್ದನು. ಕ್ಷತ್ರಿಯರ ಬೀಜವನ್ನೇ ನಾಶಪಡಿಸುವ ಆ ಮಹಾ ಭಯವೇ ಇಂದು ಅಸಹಾಯಕ ನರನ ಎದಿರಾಗಿ ನಿಂತಿದೆ.””

02051016 ವೈಶಂಪಾಯನ ಉವಾಚ।
02051016a ಏವಮುಕ್ತ್ವಾ ಧೃತರಾಷ್ಟ್ರೋ ಮನೀಷೀ ದೈವಂ ಮತ್ವಾ ಪರಮಂ ದುಸ್ತರಂ ಚ।
02051016c ಶಶಾಸೋಚ್ಚೈಃ ಪುರುಷಾನ್ಪುತ್ರವಾಕ್ಯೇ ಸ್ಥಿತೋ ರಾಜಾ ದೈವಸಮ್ಮೂಢಚೇತಾಃ।।

ವೈಶಂಪಾಯನನು ಹೇಳಿದನು: “ದೈವವು ಪರಮ ದುಸ್ತರವಾದುದೆಂದು ತಿಳಿದು ದೈವಸಮ್ಮೂಢಚೇತಸ ಮನೀಷಿ ರಾಜ ಧೃತರಾಷ್ಟ್ರನು ಹೀಗೆ ಹೇಳಿ ಪುರುಷರಿಗೆ ತನ್ನ ಪುತ್ರನ ವಾಕ್ಯಗಳನ್ನು ಪರಿಪಾಲಿಸುವಂತೆ ಆಜ್ಞೆಯನ್ನಿತ್ತನು.

02051017a ಸಹಸ್ರಸ್ತಂಭಾಂ ಹೇಮವೈಡೂರ್ಯಚಿತ್ರಾಂ ಶತದ್ವಾರಾಂ ತೋರಣಸ್ಫಾಟಿಶೃಂಗಾಂ।
02051017c ಸಭಾಮಗ್ರ್ಯಾಂ ಕ್ರೋಶಮಾತ್ರಾಯತಾಂ ಮೇ ತದ್ವಿಸ್ತಾರಾಮಾಶು ಕುರ್ವಂತು ಯುಕ್ತಾಃ।।

“ಹೇಮವೈಡೂರ್ಯಗಳಿಂದ ಅಲಂಕರಿಸಿದ ಸಾವಿರ ಸ್ತಂಭಗಳ ಮತ್ತು ಸ್ಫಟಿಕದ ತೋರಣ ಕಮಾನುಗಳನ್ನುಳ್ಳ ನೂರು ದ್ವಾರಗಳ, ಒಂದು ಕ್ರೋಶ ಚೌಕದ ವಿಸ್ತಾರ ಸುಂದರ ಸಭಾಗೃಹವನ್ನು ನಿರ್ಮಾಣಮಾಡಿ.”

02051018a ಶ್ರುತ್ವಾ ತಸ್ಯ ತ್ವರಿತಾ ನಿರ್ವಿಶಂಕಾಃ ಪ್ರಾಜ್ಞಾ ದಕ್ಷಾಸ್ತಾಂ ತಥಾ ಚಕ್ರುರಾಶು।
02051018c ಸರ್ವದ್ರವ್ಯಾಣ್ಯುಪಜಹ್ರುಃ ಸಭಾಯಾಂ ಸಹಸ್ರಶಃ ಶಿಲ್ಪಿನಶ್ಚಾಪಿ ಯುಕ್ತಾಃ।।

ಅವನನ್ನು ಕೇಳಿದ ನಿರ್ವಿಶಂಕ ಪ್ರಾಜ್ಞ ಮತ್ತು ದಕ್ಷರು ಸರ್ವವಸ್ತು ಸಾಮಾಗ್ರಿಗಳನ್ನೂ ಸಹಸ್ರಾರು ಯುಕ್ತಶಿಲ್ಪಿಗಳನ್ನೂ ತರಿಸಿ ಸಭೆಯನ್ನು ಕಟ್ಟಿಸಿದರು.

02051019a ಕಾಲೇನಾಲ್ಪೇನಾಥ ನಿಷ್ಠಾಂ ಗತಾಂ ತಾಂ ಸಭಾಂ ರಮ್ಯಾಂ ಬಹುರತ್ನಾಂ ವಿಚಿತ್ರಾಂ।
02051019c ಚಿತ್ರೈರ್ಹೈಮೈರಾಸನೈರಭ್ಯುಪೇತಾಂ ಆಚಖ್ಯುಸ್ತೇ ತಸ್ಯ ರಾಜ್ಞಃ ಪ್ರತೀತಾಃ।।

ಸ್ವಲ್ಪವೇ ಸಮಯದಲ್ಲಿ ನಿಷ್ಠರಾಗಿದ್ದ ಅವರು ಬಹುರತ್ನಗಳಿಂದ ಅಲಂಕೃತ, ಚಿನ್ನದ ಸುಂದರ ಆಸನಗಳಿಂದ ಕೂಡಿದ ರಮ್ಯ ಸಭೆಯು ತಯಾರಾಗಿದೆಯೆಂದು ರಾಜನಿಗೆ ವರದಿಮಾಡಿದರು.

02051020a ತತೋ ವಿದ್ವಾನ್ವಿದುರಂ ಮಂತ್ರಿಮುಖ್ಯಂ ಉವಾಚೇದಂ ಧೃತರಾಷ್ಟ್ರೋ ನರೇಂದ್ರಃ।
02051020c ಯುಧಿಷ್ಠಿರಂ ರಾಜಪುತ್ರಂ ಹಿ ಗತ್ವಾ ಮದ್ವಾಕ್ಯೇನ ಕ್ಷಿಪ್ರಮಿಹಾನಯಸ್ವ।।

ನಂತರ ನರೇಂದ್ರ ಧೃತರಾಷ್ಟ್ರನು ಮಂತ್ರಿ ಮುಖ್ಯ ವಿದ್ವಾನ್ ವಿದುರನನ್ನು ಕರೆಯಿಸಿ ಹೇಳಿದನು: “ರಾಜಪುತ್ರ ಯುದಿಷ್ಠಿರನಲ್ಲಿಗೆ ಹೋಗಿ ನನ್ನ ಕರೆಯಂತೆ ಅವನನ್ನು ತಕ್ಷಣವೇ ಇಲ್ಲಿಗೆ ಕರೆದುಕೊಂಡು ಬಾ.

02051021a ಸಭೇಯಂ ಮೇ ಬಹುರತ್ನಾ ವಿಚಿತ್ರಾ ಶಯ್ಯಾಸನೈರುಪಪನ್ನಾ ಮಹಾರ್ಹೈಃ।
02051021c ಸಾ ದೃಶ್ಯತಾಂ ಭ್ರಾತೃಭಿಃ ಸಾರ್ಧಮೇತ್ಯ ಸುಹೃದ್ದ್ಯೂತಂ ವರ್ತತಾಮತ್ರ ಚೇತಿ।।

“ಬಹುರತ್ನಗಳಿಂದ ಅಲಂಕೃತಗೊಂಡ, ಬೆಲೆಬಾಳುವ ಮಂಚ ಆಸನಗಳಿಂದ ಸಜ್ಜಿತವಾದ ಈ ನನ್ನ ಸಭೆಯನ್ನು ನಿನ್ನ ಸಹೋದರರೊಂದಿಗೆ ಬಂದು ನೋಡು. ಅಲ್ಲಿ ಸ್ನೇಹಪರ ದ್ಯೂತವನ್ನು ಆಡೋಣ!” ಎಂದು ಹೇಳು.”

02051022a ಮತಮಾಜ್ಞಾಯ ಪುತ್ರಸ್ಯ ಧೃತರಾಷ್ಟ್ರೋ ನರಾಧಿಪಃ।
02051022c ಮತ್ವಾ ಚ ದುಸ್ತರಂ ದೈವಮೇತದ್ರಾಜಾ ಚಕಾರ ಹ।।

ಪುತ್ರನ ಮನಸ್ಸನ್ನು ಅರಿತಿದ್ಡ ನರಾಧಿಪ ರಾಜ ಧೃತರಾಷ್ಟ್ರನು ಇದೊಂದು ದುಸ್ತರ ದೈವವೆಂದು ತಿಳಿದು ಹಾಗೆ ಮಾಡಿದನು.

02051023a ಅನ್ಯಾಯೇನ ತಥೋಕ್ತಸ್ತು ವಿದುರೋ ವಿದುಷಾಂ ವರಃ।
02051023c ನಾಭ್ಯನಂದದ್ವಚೋ ಭ್ರಾತುರ್ವಚನಂ ಚೇದಮಬ್ರವೀತ್।।

ವಿದ್ವಾಂಸರಲ್ಲಿಯೇ ಶ್ರೇಷ್ಠ ವಿದುರನು ತನ್ನ ಅಣ್ಣನ ಈ ಅನ್ಯಾಯದ ಮಾತುಗಳನ್ನು ಒಪ್ಪಿಕೊಳ್ಳದೇ ಹೀಗೆ ಹೇಳಿದನು:

02051024a ನಾಭಿನಂದಾಮಿ ನೃಪತೇ ಪ್ರೈಷಮೇತಂ ಮೈವಂ ಕೃಥಾಃ ಕುಲನಾಶಾದ್ಬಿಭೇಮಿ।
02051024c ಪುತ್ರೈರ್ಭಿನ್ನೈಃ ಕಲಹಸ್ತೇ ಧ್ರುವಂ ಸ್ಯಾದ್ ಏತಚ್ಛಂಕೇ ದ್ಯೂತಕೃತೇ ನರೇಂದ್ರ।।

“ನೃಪತೇ! ಈ ಕೆಲಸವನ್ನು ನಾನು ಸ್ವಾಗತಿಸುವುದಿಲ್ಲ. ಇದನ್ನು ಮಾಡಬೇಡ! ನಮ್ಮ ಕುಲದ ನಾಶದ ಕುರಿತು ಭಯಪಡುತ್ತೇನೆ. ನರೇಂದ್ರ! ಪುತ್ರರಲ್ಲಿ ಭಿನ್ನತೆಯನ್ನು ತರುವುದರಿಂದ ಕಲಹವಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ದ್ಯೂತವನ್ನಾಡುವುದರ ಕುರಿತು ಇದೇ ನನ್ನ ಭಯ.”

02051025 ಧೃತರಾಷ್ಟ್ರ ಉವಾಚ।
02051025a ನೇಹ ಕ್ಷತ್ತಃ ಕಲಹಸ್ತಪ್ಸ್ಯತೇ ಮಾಂ ನ ಚೇದ್ದೈವಂ ಪ್ರತಿಲೋಮಂ ಭವಿಷ್ಯತ್।
02051025c ಧಾತ್ರಾ ತು ದಿಷ್ಟಸ್ಯ ವಶೇ ಕಿಲೇದಂ ಸರ್ವಂ ಜಗಚ್ಚೇಷ್ಟತಿ ನ ಸ್ವತಂತ್ರಂ।।

ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಇದರಲ್ಲಿ ಯಾವುದೇ ಕಲಹದ ಚಿಂತೆ ನನಗಿಲ್ಲ. ದೈವದ ವಿರುದ್ಧವೂ ಇದು ಆಗುವುದಿಲ್ಲ. ಇವೆಲ್ಲವೂ ಧಾತಾರನ ಕಲ್ಪನೆಯ ವಶ. ಸರ್ವ ಜಗತ್ತೂ ಸ್ವತಂತ್ರವಾಗಿ ನಡೆಯುತ್ತಿಲ್ಲ.

02051026a ತದದ್ಯ ವಿದುರ ಪ್ರಾಪ್ಯ ರಾಜಾನಂ ಮಮ ಶಾಸನಾತ್।
02051026c ಕ್ಷಿಪ್ರಮಾನಯ ದುರ್ಧರ್ಷಂ ಕುಂತೀಪುತ್ರಂ ಯುಧಿಷ್ಠಿರಂ।।

ಆದುದರಿಂದ ವಿದುರ! ಇಂದು ನನ್ನ ಶಾಸನದಂತೆ ರಾಜನಲ್ಲಿಗೆ ತಲುಪಿ ಕ್ಷಿಪ್ರವಾಗಿ ಆ ದುರ್ಧರ್ಷ ಕುಂತೀಪುತ್ರ ಯುಧಿಷ್ಠಿರನನ್ನು ಕರೆದುಕೊಂಡು ಬಾ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಯುಧಿಷ್ಠಿರಾನಯನೇ ಏಕಪಂಚಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಯುಧಿಷ್ಠಿರಾನಯನ ಎನ್ನುವ ಐವತ್ತೊಂದನೆಯ ಅಧ್ಯಾಯವು.