050 ದುರ್ಯೋಧನಸಂತಾಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 50

ಸಾರ

“ನೀನೂ ಕೂಡ ಮಹಾಧ್ವರವನ್ನು ನಡೆಸು, ಉಡುಗೊರೆಗಳು ಸಿಗುತ್ತವೆ” ಎಂದು ಧೃತರಾಷ್ಟ್ರನು ಯುಧಿಷ್ಠಿರನನ್ನು ದ್ವೇಷಿಸಬೇಡವೆಂದು ಮಗನಿಗೆ ಹೇಳಿದುದು (1-9). “ವೃದ್ಧರನ್ನೇ ಸೇವೆಗೈಯುತ್ತಿರುವ ನಿನ್ನ ಬುದ್ಧಿಯು ಹಳತಾಗಿ ಹೋಗಿದೆ” ಎಂದು ತಂದೆಯನ್ನು ಹೀಯಾಳಿಸಿ “ಅಸಂತೋಷವೇ ಸಂಪತ್ತಿನ ಮೂಲ. ಆದುದರಿಂದಲೇ ನಾನು ಅಸಂತುಷ್ಟನಾಗಿರಲು ಬಯಸುತ್ತೇನೆ.” ಎಂದು ದುರ್ಯೋಧನನು ತನ್ನ ದೃಢ ನಿರ್ಧಾರವನ್ನು ತಿಳಿಸುವುದು (10-28).

02050001 ಧೃತರಾಷ್ಟ್ರ ಉವಾಚ।
02050001a ತ್ವಂ ವೈ ಜ್ಯೇಷ್ಠೋ ಜ್ಯೈಷ್ಠಿನೇಯಃ ಪುತ್ರ ಮಾ ಪಾಂಡವಾನ್ದ್ವಿಷಃ।
02050001c ದ್ವೇಷ್ಟಾ ಹ್ಯಸುಖಮಾದತ್ತೇ ಯಥೈವ ನಿಧನಂ ತಥಾ।।

ಧೃತರಾಷ್ಟ್ರನು ಹೇಳಿದನು: “ನನ್ನ ಜೈಷ್ಠಿನಿಯ ಜ್ಯೇಷ್ಠ ಪುತ್ರ ನೀನು. ಪಾಂಡವರನ್ನು ದ್ವೇಷಿಸಬೇಡ. ದ್ವೇಷಿಸುವವನು ಸಾವಿನಲ್ಲಿ ಎಷ್ಟು ನೋವಿದೆಯೋ ಅಷ್ಟೇ ನೋವನ್ನು ಅನುಭವಿಸುತ್ತಾನೆ.

02050002a ಅವ್ಯುತ್ಪನ್ನಂ ಸಮಾನಾರ್ಥಂ ತುಲ್ಯಮಿತ್ರಂ ಯುಧಿಷ್ಠಿರಂ।
02050002c ಅದ್ವಿಷಂತಂ ಕಥಂ ದ್ವಿಷ್ಯಾತ್ತ್ವಾದೃಶೋ ಭರತರ್ಷಭ।।

ಭರತರ್ಷಭ! ನಿನ್ನಂಥವರು ಯಾವ ಕಾರಣಕ್ಕಾಗಿ ನಿನ್ನ ಗುರಿಗಳನ್ನೇ ತಾನೂ ಇಟ್ಟುಕೊಂಡಿರುವ, ನಿನ್ನ ಮಿತ್ರರನ್ನೇ ಮಿತ್ರರನ್ನಾಗಿ ಪಡೆದಿರುವ ಮತ್ತು ನಿನ್ನನ್ನು ದ್ವೇಷಿಸದೇ ಇರುವ ಸರಳ ಯುಧಿಷ್ಠಿರನನ್ನು ದ್ವೇಷಿಸುತ್ತಾರೆ? y02050003a ತುಲ್ಯಾಭಿಜನವೀರ್ಯಶ್ಚ ಕಥಂ ಭ್ರಾತುಃ ಶ್ರಿಯಂ ನೃಪ।

02050003c ಪುತ್ರ ಕಾಮಯಸೇ ಮೋಹಾನ್ಮೈವಂ ಭೂಃ ಶಾಮ್ಯ ಸಾಧ್ವಿಹ।।

ನೃಪ! ಜನನ ಮತ್ತು ವೀರ್ಯದಲ್ಲಿ ನಿನ್ನ ಸಮನಾಗಿರುವ ನಿನ್ನ ಭ್ರಾತುವಿನ ಸಂಪತ್ತನ್ನು ಮೋಹದಿಂದ ಏಕೆ ಬಯಸುತ್ತಿರುವೆ? ಹಾಗಾಗಬೇಡ! ನಿನ್ನನ್ನು ನೀನು ಶಾಂತಗೊಳಿಸಿಕೋ!

02050004a ಅಥ ಯಜ್ಞವಿಭೂತಿಂ ತಾಂ ಕಾಂಕ್ಷಸೇ ಭರತರ್ಷಭ।
02050004c ಋತ್ವಿಜಸ್ತವ ತನ್ವಂತು ಸಪ್ತತಂತುಂ ಮಹಾಧ್ವರಂ।।

ಭರತರ್ಷಭ! ಆ ಯಜ್ಞದ ವೈಭವವನ್ನು ಬಯಸುವುದಾದರೆ ನಿನ್ನ ಋತ್ವಿಜರಿಂದ ಏಳು ಎಳೆಗಳಿರುವ ಮಹಾಧ್ವರವನ್ನು ಆಯೋಜಿಸು.

02050005a ಆಹರಿಷ್ಯಂತಿ ರಾಜಾನಸ್ತವಾಪಿ ವಿಪುಲಂ ಧನಂ।
02050005c ಪ್ರೀತ್ಯಾ ಚ ಬಹುಮಾನಾಚ್ಚ ರತ್ನಾನ್ಯಾಭರಣಾನಿ ಚ।।

ಆಗ ನಿನಗಾಗಿ ರಾಜರುಗಳು ಪ್ರೀತಿಯಿಂದ ಮತ್ತು ಗೌರವದಿಂದ ರತ್ನಾಭರಣಗಳನ್ನೂ ವಿಪುಲ ಧನವನ್ನೂ ತರುತ್ತಾರೆ.

02050006a ಅನರ್ಥಾಚರಿತಂ ತಾತ ಪರಸ್ವಸ್ಪೃಹಣಂ ಭೃಶಂ।
02050006c ಸ್ವಸಂತುಷ್ಟಃ ಸ್ವಧರ್ಮಸ್ಥೋ ಯಃ ಸ ವೈ ಸುಖಮೇಧತೇ।।

ತಾತ! ಪರರು ಸಂಪಾದಿಸಿದ ಧನವನ್ನು ಬಯಸುವುದು ಸ್ವಲ್ಪವೂ ಸರಿಯಲ್ಲ. ನಿನಗಿದ್ದುದರಲ್ಲಿ ತೃಪ್ತನಾಗು. ಸ್ವಧರ್ಮದಲ್ಲಿ ನಿರತನಾಗಿರು. ಅದರಲ್ಲಿ ಸುಖವಿದೆ.

02050007a ಅವ್ಯಾಪಾರಃ ಪರಾರ್ಥೇಷು ನಿತ್ಯೋದ್ಯೋಗಃ ಸ್ವಕರ್ಮಸು।
02050007c ಉದ್ಯಮೋ ರಕ್ಷಣೇ ಸ್ವೇಷಾಮೇತದ್ವೈಭವಲಕ್ಷಣಂ।।

ಬೇರೆಯವರ ಸಂಪತ್ತನ್ನು ಗಮನಿಸದೇ ಇರುವುದು, ನಿತ್ಯವೂ ಸ್ವಕರ್ಮದಲ್ಲಿ ನಿರತನಾಗಿರುವುದು ಮತ್ತು ತನ್ನ ಉದ್ಯಮವನ್ನು ರಕ್ಷಿಸಿಕೊಂಡು ಬರುವುದು ಇವೇ ವೈಭವದ ಲಕ್ಷಣಗಳು.

02050008a ವಿಪತ್ತಿಷ್ವವ್ಯಥೋ ದಕ್ಷೋ ನಿತ್ಯಮುತ್ಥಾನವಾನ್ನರಃ।
02050008c ಅಪ್ರಮತ್ತೋ ವಿನೀತಾತ್ಮಾ ನಿತ್ಯಂ ಭದ್ರಾಣಿ ಪಶ್ಯತಿ।।

ವಿಪತ್ತು ಬಂದಾಗ ವ್ಯಥಿಸಲು ನಿರಾಕರಿಸುವ ದಕ್ಷ ನರನು ನಿತ್ಯವೂ ಏಳಿಗೆಯನ್ನು ಹೊಂದುತ್ತಾನೆ. ಅಪ್ರಮತ್ತ ವಿನೀತನು ನಿತ್ಯವೂ ಒಳ್ಳೆಯದನ್ನು ಕಾಣುತ್ತಾನೆ.

02050009a ಅಂತರ್ವೇದ್ಯಾಂ ದದದ್ವಿತ್ತಂ ಕಾಮಾನನುಭವನ್ಪ್ರಿಯಾನ್।
02050009c ಕ್ರೀಡನ್ ಸ್ತ್ರೀಭಿರ್ನಿರಾತಂಕಃ ಪ್ರಶಾಮ್ಯ ಭರತರ್ಷಭ।।

ಭರತರ್ಷಭ! ವೇದಿಕೆಗಳಲ್ಲಿ ವಿತ್ತವನ್ನು ದಾನಮಾಡುತ್ತಾ, ಪ್ರೀತಿಯ ಬಯಕೆಗಳನ್ನೆಲ್ಲಾ ಅನುಭವಿಸುತ್ತಾ, ಆರೋಗ್ಯ ಸ್ತ್ರೀಯರೊಂದಿಗೆ ಕ್ರೀಡಿಸುತ್ತಾ, ನೆಮ್ಮಂದಿಯಿಂದಿರು.”

02050010 ದುರ್ಯೋಧನ ಉವಾಚ।
02050010a ಜಾನನ್ವೈ ಮೋಹಯಸಿ ಮಾಂ ನಾವಿ ನೌರಿವ ಸಮ್ಯತಾ।
02050010c ಸ್ವಾರ್ಥೇ ಕಿಂ ನಾವಧಾನಂ ತೇ ಉತಾಹೋ ದ್ವೇಷ್ಟಿ ಮಾಂ ಭವಾನ್।।

ದುರ್ಯೋಧನನು ಹೇಳಿದನು: “ನಾವೆಗೆ ಕಟ್ಟಿದ ನಾವೆಯಂತೆ ನೀನು ತಿಳಿದವನಾಗಿದ್ದರೂ ನನ್ನಲ್ಲಿ ಗೊಂದಲವನ್ನುಂಟುಮಾಡುತ್ತಿದ್ದೀಯೆ! ಸ್ವಾರ್ಥದ ಕುರಿತು ನಿನಗೆ ಸ್ವಲ್ಪವೂ ಚಿಂತೆಯಿಲ್ಲವೇ? ನೀನು ನನ್ನನ್ನು ದ್ವೇಷಿಸುತ್ತೀಯಾ?

02050011a ನ ಸಂತೀಮೇ ಧಾರ್ತರಾಷ್ಟ್ರಾ ಯೇಷಾಂ ತ್ವಮನುಶಾಸಿತಾ।
02050011c ಭವಿಷ್ಯಮರ್ಥಮಾಖ್ಯಾಸಿ ಸದಾ ತ್ವಂ ಕೃತ್ಯಮಾತ್ಮನಃ।।

ನಿನ್ನ ಅನುಶಾಸನದಲ್ಲಿರುವ ಧಾರ್ತರಾಷ್ಟ್ರರು ನನ್ನ ಸಂಗಡವಿದ್ದಾರೆಯೇ? ಭವಿಷ್ಯದ ವಿಚಾರಗಳ ಕುರಿತು ಮಾಡಬೇಕಾದುದು ಬಹಳವಿದೆ ಎಂದು ಸದಾ ನೀನು ಯೋಚಿಸುತ್ತಿರುವೆ.

02050012a ಪರಪ್ರಣೇಯೋಽಗ್ರಣೀರ್ಹಿ ಯಶ್ಚ ಮಾರ್ಗಾತ್ಪ್ರಮುಹ್ಯತಿ।
02050012c ಪಂಥಾನಮನುಗಚ್ಛೇಯುಃ ಕಥಂ ತಸ್ಯ ಪದಾನುಗಾಃ।।

ಪ್ರೇರಿತ ಮಾರ್ಗದರ್ಶಿಗೆ ವೈರಿಗಳಿಂದ ಪ್ರಭಾವಿತನಾಗಿ ಯಾವ ಮಾರ್ಗವನ್ನು ತೆಗೆದುಕೊಳ್ಳಬೇಕು ಎನ್ನುವುದೇ ಗೊಂದಲಮಯವಾಗಿದೆಯಾದರೆ ಅವನನ್ನು ಅನುಸರಿಸುವರು ಹೇಗೆ ತಾನೆ ಅವನ ಮಾರ್ಗದಲ್ಲಿ ನಡೆಯಬಲ್ಲರು?

02050013a ರಾಜನ್ಪರಿಗತಪ್ರಜ್ಞೋ ವೃದ್ಧಸೇವೀ ಜಿತೇಂದ್ರಿಯಃ।
02050013c ಪ್ರತಿಪನ್ನಾನ್ಸ್ವಕಾರ್ಯೇಷು ಸಮ್ಮೋಹಯಸಿ ನೋ ಭೃಶಂ।।

ರಾಜನ್! ವೃದ್ಧರನ್ನೇ ಸೇವೆಗೈಯುತ್ತಿರುವ ನಿನ್ನ ಬುದ್ಧಿಯು ಹಳತಾಗಿ ಹೋಗಿದೆ. ಜಿತೇಂದ್ರಿಯನಾಗಿದ್ದರೂ ನೀನು ನಮ್ಮ ಕಾರ್ಯಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಗೊಂದಲಗಳನ್ನುಂಟುಮಾಡುತ್ತಿದ್ದೀಯೆ.

02050014a ಲೋಕವೃತ್ತಾದ್ರಾಜವೃತ್ತಮನ್ಯದಾಹ ಬೃಹಸ್ಪತಿಃ।
02050014c ತಸ್ಮಾದ್ರಾಜ್ಞಾ ಪ್ರಯತ್ನೇನ ಸ್ವಾರ್ಥಶ್ಚಿಂತ್ಯಃ ಸದೈವ ಹಿ।।

ಬೃಹಸ್ಪತಿಯು ಹೇಳಿದಂತೆ ರಾಜನ ನಡತೆಯು ಇತರ ಜನರ ನಡತೆಗಿಂಥ ಭಿನ್ನವಾಗಿರಬೇಕು. ಆದುದರಿಂದ ರಾಜನು ಸದಾ ತನ್ನ ಸ್ವಾರ್ಥ್ಯವನ್ನು ಚಿಂತಿಸುತ್ತಿರಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸುತ್ತಿರಬೇಕು.

02050015a ಕ್ಷತ್ರಿಯಸ್ಯ ಮಹಾರಾಜ ಜಯೇ ವೃತ್ತಿಃ ಸಮಾಹಿತಾ।
02050015c ಸ ವೈ ಧರ್ಮೋಽಸ್ತ್ವಧರ್ಮೋ ವಾ ಸ್ವವೃತ್ತೌ ಭರತರ್ಷಭ।।

ಭರತರ್ಷಭ! ಮಹಾರಾಜ! ಕ್ಷತ್ರಿಯನ ನಡವಳಿಕೆಯು ಜಯವನ್ನು ಪಡೆಯುವುದಕ್ಕಾಗಿಯೇ ಇರಬೇಕು. ಅದು ಧರ್ಮವಾಗಿರಲಿ ಅಥವಾ ಅಧರ್ಮವಾಗಿರಲಿ, ಅದೇ ಅವನ ನಡತೆಯಾಗಿರಬೇಕು.

02050016a ಪ್ರಕಾಲಯೇದ್ದಿಶಃ ಸರ್ವಾಃ ಪ್ರತೋದೇನೇವ ಸಾರಥಿಃ।
02050016c ಪ್ರತ್ಯಮಿತ್ರಶ್ರಿಯಂ ದೀಪ್ತಾಂ ಬುಭೂಷುರ್ಭರತರ್ಷಭ।।

ಭರತರ್ಷಭ! ವೈರಿಗಳ ಸಂಪತ್ತನ್ನು ಪಡೆಯುವ ಆಸೆಯಿಂದ ಸಾರಥಿಯು ತನ್ನ ಚಾಟಿಯನ್ನು ಎಲ್ಲೆಡೆಯಲ್ಲಿಯೂ ಬೀಸಬೇಕಾಗುತ್ತದೆ.

02050017a ಪ್ರಚ್ಛನ್ನೋ ವಾ ಪ್ರಕಾಶೋ ವಾ ಯೋ ಯೋಗೋ ರಿಪುಬಾಂಧನಃ।
02050017c ತದ್ವೈ ಶಸ್ತ್ರಂ ಶಸ್ತ್ರವಿದಾಂ ನ ಶಸ್ತ್ರಂ ಚೇದನಂ ಸ್ಮೃತಂ।।

ಶಸ್ತ್ರವನ್ನು ತಿಳಿದವನು ಕತ್ತರಿಸುವ ಖಡ್ಗದ ಕುರಿತಲ್ಲದೇ ಅದು ಬಹಿರಂಗವಾಗಲೀ ಅಥವಾ ಮುಚ್ಚುಮರೆಯಲ್ಲಿಯಾಗಲೀ ಶತ್ರುವನ್ನು ಕೆಳಗುರುಳಿಸುವುದಕ್ಕೆ ಮಾತ್ರ ಇದೆ ಎಂದು ತಿಳಿದಿರುತ್ತಾನೆ.

02050018a ಅಸಂತೋಷಃ ಶ್ರಿಯೋ ಮೂಲಂ ತಸ್ಮಾತ್ತಂ ಕಾಮಯಾಮ್ಯಹಂ।
02050018c ಸಮುಚ್ಛ್ರಯೇ ಯೋ ಯತತೇ ಸ ರಾಜನ್ಪರಮೋ ನಯೀ।।

ಅಸಂತೋಷವೇ ಸಂಪತ್ತಿನ ಮೂಲ. ಆದುದರಿಂದಲೇ ನಾನು ಅಸಂತುಷ್ಟನಾಗಿರಲು ಬಯಸುತ್ತೇನೆ. ರಾಜನ್! ಅತ್ಯುತ್ತಮ ಏಳಿಗೆಯನ್ನು ಹೊಂದಿದವನೇ ಪರಮ ರಾಜಕಾರಣಿ.

02050019a ಮಮತ್ವಂ ಹಿ ನ ಕರ್ತವ್ಯಮೈಶ್ವರ್ಯೇ ವಾ ಧನೇಽಪಿ ವಾ।
02050019c ಪೂರ್ವಾವಾಪ್ತಂ ಹರಂತ್ಯನ್ಯೇ ರಾಜಧರ್ಮಂ ಹಿ ತಂ ವಿದುಃ।।

ಐಶ್ವರ್ಯ ಅಥವಾ ಧನವಿರುವಾಗ ಮಮತ್ವವನ್ನು ಸಾಧಿಸುವುದು ಸರಿಯಲ್ಲವೇ? ಹಿಂದೆ ಗಳಿಸಿದ್ದುದನ್ನು ಕಸಿದುಕೊಳ್ಳುವುದೇ ರಾಜಧರ್ಮವೆಂದು ತಿಳಿಯುತ್ತಾರೆ.

02050020a ಅದ್ರೋಹೇ ಸಮಯಂ ಕೃತ್ವಾ ಚಿಚ್ಛೇದ ನಮುಚೇಃ ಶಿರಃ।
02050020c ಶಕ್ರಃ ಸಾ ಹಿ ಮತಾ ತಸ್ಯ ರಿಪೌ ವೃತ್ತಿಃ ಸನಾತನೀ।।

ದ್ರೋಹಬೇಡವೆಂದು ಒಪ್ಪಂದಮಾಡಿಕೊಂಡ ಶಕ್ರನು ನಮೂಚಿಯ ಶಿರವನ್ನು ಕತ್ತರಿಸಿದನು. ಅವನು ಮಾಡಿದ್ದುದು ಶತ್ರುವಿನೊಂದಿಗೆ ನಡೆದುಕೊಳ್ಳುವ ಒಂದು ಸನಾತನ ನಡತೆ.

02050021a ದ್ವಾವೇತೌ ಗ್ರಸತೇ ಭೂಮಿಃ ಸರ್ಪೋ ಬಿಲಶಯಾನಿವ।
02050021c ರಾಜಾನಂ ಚಾವಿರೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಂ।।

ಸರ್ಪವು ಇಲಿಯನ್ನು ಹೇಗೆ ನುಂಗುತ್ತದೆಯೋ ಹಾಗೆ ಭೂಮಿಯು ವಿರೋಧಿಸದಿರುವ ರಾಜನನ್ನು ಮತ್ತು ಪ್ರವಾಸವನ್ನೇ ಮಾಡದಿರುವ ಬ್ರಾಹ್ಮಣನನ್ನು ನುಂಗುತ್ತದೆ.

02050022a ನಾಸ್ತಿ ವೈ ಜಾತಿತಃ ಶತ್ರುಃ ಪುರುಷಸ್ಯ ವಿಶಾಂ ಪತೇ।
02050022c ಯೇನ ಸಾಧಾರಣೀ ವೃತ್ತಿಃ ಸ ಶತ್ರುರ್ನೇತರೋ ಜನಃ।।

ವಿಶಾಂಪತೇ! ಹುಟ್ಟಿನಿಂದಲೇ ಯಾರೂ ಇನ್ನೊಬ್ಬ ಪುರುಷನ ಶತ್ರುವಾಗಿರುವುದಿಲ್ಲ. ತನ್ನ ಹಾಗೆ ನಡೆದುಕೊಳ್ಳುವ ಯಾರೂ ಅವನಿಗೆ ಶತ್ರುವಾಗುವುದಿಲ್ಲ.

02050023a ಶತ್ರುಪಕ್ಷಂ ಸಮೃಧ್ಯಂತಂ ಯೋ ಮೋಹಾತ್ಸಮುಪೇಕ್ಷತೇ।
02050023c ವ್ಯಾಧಿರಾಪ್ಯಾಯಿತ ಇವ ತಸ್ಯ ಮೂಲಂ ಚಿನತ್ತಿ ಸಃ।।

ಶತ್ರುಪಕ್ಷವು ವೃದ್ಧಿಸುತ್ತಿರುವುದನ್ನು ಮೋಹದಿಂದ ನೋಡಿದವನು ಹರಡುತ್ತಿರುವ ವ್ಯಾಧಿಯನ್ನು ಹೇಗೋ ಹಾಗೆ ಅದರ ಬುಡವನ್ನೇ ಕತ್ತರಿಸುತ್ತಾನೆ.

02050024a ಅಲ್ಪೋಽಪಿ ಹ್ಯರಿರತ್ಯಂತಂ ವರ್ಧಮಾನಪರಾಕ್ರಮಃ।
02050024c ವಲ್ಮೀಕೋ ಮೂಲಜ ಇವ ಗ್ರಸತೇ ವೃಕ್ಷಮಂತಿಕಾತ್।।

ಎಷ್ಟೇ ಸಣ್ಣದಿರಲಿ, ಪರಾಕ್ರಮದಲ್ಲಿ ವೃದ್ಧಿಸುತ್ತಿರುವ ಶತ್ರುವು ಖಂಡಿತವಾಗಿಯೂ ವೃಕ್ಷದ ಬುಡದಲ್ಲಿ ಬೆಳೆಯುತ್ತಿರುವ ಹುತ್ತವು ವೃಕ್ಷವನ್ನು ಹೇಗೋ ಹಾಗೆ ನುಂಗಿಬಿಡುತ್ತದೆ.

02050025a ಆಜಮೀಢ ರಿಪೋರ್ಲಕ್ಷ್ಮೀರ್ಮಾ ತೇ ರೋಚಿಷ್ಟ ಭಾರತ।
02050025c ಏಷ ಭಾರಃ ಸತ್ತ್ವವತಾಂ ನಯಃ ಶಿರಸಿ ಧಿಷ್ಠಿತಃ।।

ಆಜಮೀಢ! ಭಾರತ! ಶತ್ರುವಿನ ಅಭಿವೃದ್ಧಿಯು ನಿನ್ನನ್ನು ಸಂತೋಷಗೊಳಿಸದಿರಲಿ! ಸತ್ಯವಂತರ ಶಿರದ ಮೇಲಿರುವ ಈ ನ್ಯಾಯವು ಒಂದು ಭಾರವೇ ಸರಿ.

02050026a ಜನ್ಮವೃದ್ಧಿಮಿವಾರ್ಥಾನಾಂ ಯೋ ವೃದ್ಧಿಮಭಿಕಾಂಕ್ಷತೇ।
02050026c ಏಧತೇ ಜ್ಞಾತಿಷು ಸ ವೈ ಸದ್ಯೋವೃದ್ಧಿರ್ಹಿ ವಿಕ್ರಮಃ।।

ಹುಟ್ಟಿದಾಗಿನಿಂದ ಹೇಗೆ ಬೆಳೆಯುತ್ತಾ ಬಂದಿದ್ದೀವೋ ಹಾಗೆ ನಮ್ಮ ಸಂಪತ್ತೂ ಕುಡ ಬೆಳೆಯುತ್ತದೆ ಎಂದು ಬಯಸುವವನು ತನ್ನ ಬಂಧುಬಾಂಧವರೊಡನೆ ಹೇಗೆ ತಾನೇ ಅಭಿವೃದ್ಧಿಯನ್ನು ಹೊಂದಬಲ್ಲ? ವಿಕ್ರಮವೇ ಶೀಘ್ರ ಅಭಿವೃದ್ಧಿ.

02050027a ನಾಪ್ರಾಪ್ಯ ಪಾಂಡವೈಶ್ವರ್ಯಂ ಸಂಶಯೋ ಮೇ ಭವಿಷ್ಯತಿ।
02050027c ಅವಾಪ್ಸ್ಯೇ ವಾ ಶ್ರಿಯಂ ತಾಂ ಹಿ ಶೇಷ್ಯೇ ವಾ ನಿಹತೋ ಯುಧಿ।।
02050028a ಅತಾದೃಶಸ್ಯ ಕಿಂ ಮೇಽದ್ಯ ಜೀವಿತೇನ ವಿಶಾಂ ಪತೇ।
02050028c ವರ್ಧಂತೇ ಪಾಂಡವಾ ನಿತ್ಯಂ ವಯಂ ತು ಸ್ಥಿರವೃದ್ಧಯಃ।।

ಪಾಂಡವರ ಐಶ್ವರ್ಯವನ್ನು ಪಡೆಯುವವರೆಗೆ ನಾನು ಅಪಾಯದಲ್ಲಿದ್ದೇನೆ. ನಾನು ಆ ಶ್ರೀಯನ್ನು ಪಡೆಯುತ್ತೇನೆ ಅಥವಾ ಯುದ್ಧದಲ್ಲಿ ಮರಣಹೊಂದುತ್ತೇನೆ. ವಿಶಾಂಪತೇ! ಅವನಿಗೆ ಸದೃಶನಾಗಿರದಿದ್ದರೆ ನಾನು ಏಕೆ ತಾನೆ ಜೀವಿಸಬೇಕು? ಪಾಂಡವರು ದಿನ ನಿತ್ಯವೂ ವರ್ಧಿಸುತ್ತಿದ್ದಾರೆ. ನಾವು ಮಾತ್ರ ನಿಂತಲ್ಲಿಯೇ ನಿಂತಿದ್ದೇವೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಪಂಚಶತ್ತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ಐವತ್ತನೆಯ ಅಧ್ಯಾಯವು.