ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 46
ಸಾರ
ಪೃಥ್ವಿಯ ವಿನಾಶಕ್ಕೆ ಮೂಲಹೇತುವಾಗಿದ್ದ ದ್ಯೂತದ ಕುರಿತು ವಿಸ್ತಾರವಾಗಿ ಹೇಳಬೇಕೆಂದು ಕೇಳಿಕೊಳ್ಳಲು ವೈಶಂಪಾಯನನು ಮುಂದುವರಿಸಿದುದು (1-6). ಧೃತರಾಷ್ಟ್ರನು ದುರ್ಯೋಧನನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿ, ಈ ಶೋಕದ ಮೂಲವೇನೆಂದು ಕೇಳಿದುದು (7-17). “ಊಟ ಮತ್ತು ಉಡುಗೆತೊಡುಗೆಗಳನ್ನಷ್ಟೇ ಕಾಣುವವನು ಪಾಪಪುರುಷ. ಅಸೂಯೆಪಡದಿರುವ ಪುರುಷನು ಅಧಮನೆಂದು ಹೇಳುತ್ತಾರೆ” ಎಂದು ಹೇಳಿ ದುರ್ಯೋಧನನು ರಾಜಸೂಯ ಯಾಗದಲ್ಲಿ ಪಾಂಡವರಿಗೆ ದೊರೆತ ಉಡುಗೊರೆ-ಮಾನ್ಯತೆಗಳನ್ನು ವರ್ಣಿಸುವುದು (18-35).
02046001 ಜನಮೇಜಯ ಉವಾಚ।
02046001a ಕಥಂ ಸಮಭವದ್ದ್ಯೂತಂ ಭ್ರಾತೄಣಾಂ ತನ್ಮಹಾತ್ಯಯಂ।
02046001c ಯತ್ರ ತದ್ವ್ಯಸನಂ ಪ್ರಾಪ್ತಂ ಪಾಂಡವೈರ್ಮೇ ಪಿತಾಮಹೈಃ।।
ಜನಮೇಜಯನು ಹೇಳಿದನು: “ಭ್ರಾತೃಗಳ ಮಹಾತ್ಯಯ ನನ್ನ ಪಿತಾಮಹ ಪಾಂಡವರಿಗೆ ದುಃಖನೀಡಿದ ಆ ದ್ಯೂತವು ಹೇಗೆ ನಡೆಯಿತು?
02046002a ಕೇ ಚ ತತ್ರ ಸಭಾಸ್ತಾರಾ ರಾಜಾನೋ ಬ್ರಹ್ಮವಿತ್ತಮ।
02046002c ಕೇ ಚೈನಮನ್ವಮೋದಂತ ಕೇ ಚೈನಂ ಪ್ರತ್ಯಷೇಧಯನ್।।
ಬ್ರಹ್ಮವಿತ್ತಮ! ಆ ಸಭೆಯಲ್ಲಿ ಯಾವ ಯಾವ ರಾಜರು ಆಡಿದರು? ಯಾರು ಅವರಿಗೆ ಪ್ರೋತ್ಸಾಹಿಸಿದರು ಮತ್ತು ಯಾರು ವಿರೋಧಿಸಿದರು?
02046003a ವಿಸ್ತರೇಣೈತದಿಚ್ಛಾಮಿ ಕಥ್ಯಮಾನಂ ತ್ವಯಾ ದ್ವಿಜ।
02046003c ಮೂಲಂ ಹ್ಯೇತದ್ವಿನಾಶಸ್ಯ ಪೃಥಿವ್ಯಾ ದ್ವಿಜಸತ್ತಮ।।
ದ್ವಿಜ! ದ್ವಿಜಸತ್ತಮ! ಈ ಪೃಥ್ವಿಯ ವಿನಾಶಕ್ಕೆ ಮೂಲಹೇತುವಾಗಿದ್ದ ಇದರ ಕುರಿತು ವಿಸ್ತಾರವಾಗಿ ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.””
02046004 ಸೂತ ಉವಾಚ।
02046004a ಏವಮುಕ್ತಸ್ತದಾ ರಾಜ್ಞಾ ವ್ಯಾಸಶಿಷ್ಯಃ ಪ್ರತಾಪವಾನ್।
02046004c ಆಚಚಕ್ಷೇ ಯಥಾವೃತ್ತಂ ತತ್ಸರ್ವಂ ಸರ್ವವೇದವಿತ್।।
ಸೂತನು ಹೇಳಿದನು: “ರಾಜನು ಹೀಗೆ ಕೇಳಿಕೊಳ್ಳಲು ಸರ್ವವೇದವಿದುಷಿ ಪ್ರತಾಪಿ ವ್ಯಾಸಶಿಷ್ಯನು ಅದೆಲ್ಲವನ್ನು ನಡೆದ ಹಾಗೆಯೇ ಹೇಳಿದನು.
02046005 ವೈಶಂಪಾಯನ ಉವಾಚ।
02046005a ಶೃಣು ಮೇ ವಿಸ್ತರೇಣೇಮಾಂ ಕಥಾಂ ಭರತಸತ್ತಮ।
02046005c ಭೂಯ ಏವ ಮಹಾರಾಜ ಯದಿ ತೇ ಶ್ರವಣೇ ಮತಿಃ।।
ವೈಶಂಪಾಯನನು ಹೇಳಿದನು: “ಭರತಸತ್ತಮ! ಮಹಾರಾಜ! ನಡೆದಿದ್ದುದನ್ನು ಕೇಳಲು ಮನಸ್ಸುಳ್ಳವನಾಗಿದ್ದರೆ ನನ್ನಿಂದ ವಿಸ್ತಾರವಾದ ಈ ಕಥೆಯನ್ನು ಕೇಳು.
02046006a ವಿದುರಸ್ಯ ಮತಂ ಜ್ಞಾತ್ವಾ ಧೃತರಾಷ್ಟ್ರೋಽಂಬಿಕಾಸುತಃ।
02046006c ದುರ್ಯೋಧನಮಿದಂ ವಾಕ್ಯಮುವಾಚ ವಿಜನೇ ಪುನಃ।।
ವಿದುರನ ಅಭಿಪ್ರಾಯವನ್ನು ತಿಳಿದ ಅಂಬಿಕಾಸುತ ಧೃತರಾಷ್ಟ್ರನು ಪುನಃ ಏಕಾಂತದಲ್ಲಿ ದುರ್ಯೋಧನನಿಗೆ ಹೇಳಿದನು:
02046007a ಅಲಂ ದ್ಯೂತೇನ ಗಾಂಧಾರೇ ವಿದುರೋ ನ ಪ್ರಶಂಸತಿ।
02046007c ನ ಹ್ಯಸೌ ಸುಮಹಾಬುದ್ಧಿರಹಿತಂ ನೋ ವದಿಷ್ಯತಿ।।
“ಗಾಂಧಾರೇ! ದ್ಯೂತವು ಬೇಡ. ವಿದುರನು ಇದಕ್ಕೆ ಇಷ್ಟಪಡುತ್ತಿಲ್ಲ. ಆ ಮಹಾಬುದ್ಧಿಯು ಇದು ನಮ್ಮೆಲ್ಲರ ಹಿತದಲ್ಲಿದೆ ಎಂದೂ ಅಭಿಪ್ರಾಯಪಟ್ಟಿಲ್ಲ.
02046008a ಹಿತಂ ಹಿ ಪರಮಂ ಮನ್ಯೇ ವಿದುರೋ ಯತ್ಪ್ರಭಾಷತೇ।
02046008c ಕ್ರಿಯತಾಂ ಪುತ್ರ ತತ್ಸರ್ವಮೇತನ್ಮನ್ಯೇ ಹಿತಂ ತವ।।
ಪರಮ ಹಿತಕ್ಕಾಗಿಯೇ ವಿದುರನು ಹೀಗೆ ಮಾತನಾಡುತ್ತಿದ್ದಾನೆ. ಪುತ್ರ! ಅವನು ಹೇಳಿದ ಹಾಗೆ ಮಾಡೋಣ. ಅದರಲ್ಲಿಯೇ ನಿನ್ನ ಹಿತವಿದೆ ಎಂದು ನನಗನ್ನಿಸುತ್ತದೆ.
02046009a ದೇವರ್ಷಿರ್ವಾಸವಗುರುರ್ದೇವರಾಜಾಯ ಧೀಮತೇ।
02046009c ಯತ್ಪ್ರಾಹ ಶಾಸ್ತ್ರಂ ಭಗವಾನ್ಬೃಹಸ್ಪತಿರುದಾರಧೀಃ।।
02046010a ತದ್ವೇದ ವಿದುರಃ ಸರ್ವಂ ಸರಹಸ್ಯಂ ಮಹಾಕವಿಃ।
02046010c ಸ್ಥಿತಶ್ಚ ವಚನೇ ತಸ್ಯ ಸದಾಹಮಪಿ ಪುತ್ರಕ।।
ಪುತ್ರಕ! ದೇವರಾಜ ವಾಸವನ ಗುರು ದೇವರ್ಷಿ ಧೀಮಂತ ಉದಾರಧೀ ಭಗವಾನ್ ಬೃಹಸ್ಪತಿಯಿಂದ ಶಾಸ್ತ್ರಗಳನ್ನು ತಿಳಿಸಲ್ಪಟ್ಟ ಮತ್ತು ಸರ್ವರಹಸ್ಯಗಳ ಸಹಿತ ಅವುಗಳನ್ನು ತಿಳಿದುಕೊಂಡ ಮಹಾಕವಿ ವಿದುರನ ಮಾತುಗಳಂತೆಯೇ ನಾನು ಸದಾ ನಡೆದುಕೊಳ್ಳುತ್ತೇನೆ.
02046011a ವಿದುರೋ ವಾಪಿ ಮೇಧಾವೀ ಕುರೂಣಾಂ ಪ್ರವರೋ ಮತಃ।
02046011c ಉದ್ಧವೋ ವಾ ಮಹಾಬುದ್ಧಿರ್ವೃಷ್ಣೀನಾಮರ್ಚಿತೋ ನೃಪ।।
ನೃಪ! ವೃಷ್ಣಿಗಳಲ್ಲಿ ಉದ್ಧವನನ್ನು ಹೇಗೆ ಮಹಾಬುದ್ಧಿವಂತನೆಂದು ಪೂಜಿಸುತ್ತಾರೋ ಹಾಗೆ ಕುರುಗಳಲ್ಲಿ ವಿದುರನನ್ನು ಮೇಧಾವೀ ಪ್ರವರನೆಂದು ಅಭಿಪ್ರಾಯಪಡುತ್ತಾರೆ.
02046012a ದ್ಯೂತೇನ ತದಲಂ ಪುತ್ರ ದ್ಯೂತೇ ಭೇದೋ ಹಿ ದೃಶ್ಯತೇ।
02046012c ಭೇದೇ ವಿನಾಶೋ ರಾಜ್ಯಸ್ಯ ತತ್ಪುತ್ರ ಪರಿವರ್ಜಯ।।
ಪುತ್ರ! ಆದುದರಿಂದ ಈ ದ್ಯೂತವು ಬೇಡ. ದ್ಯೂತದಿಂದ ಭೇದವುಂಟಾಗುತ್ತದೆ ಮತ್ತು ಭೇದದಿಂದ ರಾಜ್ಯವು ವಿನಾಶಗೊಳ್ಳುತ್ತದೆ. ಅದನ್ನು ಬಿಟ್ಟುಬಿಡು.
02046013a ಪಿತ್ರಾ ಮಾತ್ರಾ ಚ ಪುತ್ರಸ್ಯ ಯದ್ವೈ ಕಾರ್ಯಂ ಪರಂ ಸ್ಮೃತಂ।
02046013c ಪ್ರಾಪ್ತಸ್ತ್ವಮಸಿ ತತ್ತಾತ ಪಿತೃಪೈತಾಮಹಂ ಪದಂ।।
ಮಾತಾ ಪಿತರಿಂದ ಒಬ್ಬ ಪುತ್ರನಿಗೆ ದೊರಕಬೇಕೆಂದು ಸ್ಮೃತವಾದ ಪರಮ ಪಿತೃ ಪಿತಾಮಹರ ಪದವು ನಿನಗೆ ದೊರಕಿದೆ.
02046014a ಅಧೀತವಾನ್ಕೃತೀ ಶಾಸ್ತ್ರೇ ಲಾಲಿತಃ ಸತತಂ ಗೃಹೇ।
02046014c ಭ್ರಾತೃಜ್ಯೇಷ್ಠಃ ಸ್ಥಿತೋ ರಾಜ್ಯೇ ವಿನ್ದಸೇ ಕಿಂ ನ ಶೋಭನಂ।।
ಶಾಸ್ತ್ರಗಳಲ್ಲಿ ಪರಿಣಿತನನ್ನಾಗಿ ಮಾಡಿದ್ದೇವೆ. ಮನೆಯಲ್ಲಿ ಸತತವಾಗಿ ಆಡುತ್ತಿರುವೆ. ರಾಜ್ಯದಲ್ಲಿ ಜ್ಯೇಷ್ಠ ಭ್ರಾತೃವಾಗಿದ್ದೀಯೆ. ಇವುಗಳಲ್ಲಿ ಯಾವುದನ್ನೂ ನೀನು ಒಳ್ಳೆಯದೆಂದು ತಿಳಿಯುವುದಿಲ್ಲವೇ?
02046015a ಪೃಥಗ್ಜನೈರಲಭ್ಯಂ ಯದ್ಭೋಜನಾಚ್ಛಾದನಂ ಪರಂ।
02046015c ತತ್ಪ್ರಾಪ್ತೋಽಸಿ ಮಹಾಬಾಹೋ ಕಸ್ಮಾಚ್ಛೋಚಸಿ ಪುತ್ರಕ।।
ಸಾಮನ್ಯ ಜನರಿಗೆ ದೊರೆಯುವುದಕ್ಕಿಂತಲೂ ಶ್ರೇಷ್ಠವಾದ ಬೋಜನ, ಉಡುಗೆತೊಡುಗೆಗಳನ್ನು ಪಡೆದಿದ್ದೀಯೆ. ಮಹಾಬಾಹು ಪುತ್ರಕ! ಇವೆಲ್ಲವನ್ನೂ ಹೊಂದಿದ ನೀನು ಯಾಕೆ ಶೋಕಿಸುತ್ತಿರುವೆ?
02046016a ಸ್ಫೀತಂ ರಾಷ್ಟ್ರಂ ಮಹಾಬಾಹೋ ಪಿತೃಪೈತಾಮಹಂ ಮಹತ್।
02046016c ನಿತ್ಯಮಾಜ್ಞಾಪಯನ್ಭಾಸಿ ದಿವಿ ದೇವೇಶ್ವರೋ ಯಥಾ।।
ಪಿತೃಪಿತಾಮಹರಿಂದ ದೊರಕಿದ ಈ ಸಮೃದ್ಧ ಮಹಾ ರಾಷ್ಟ್ರವನ್ನು ನಿತ್ಯವೂ ಆಳುತ್ತಿರುವ ನೀನು ದಿವಿಯಲ್ಲಿ ದೇವೇಶ್ವರನಂತೆ ಬೆಳಗುತ್ತಿದ್ದೀಯೆ.
02046017a ತಸ್ಯ ತೇ ವಿದಿತಪ್ರಜ್ಞ ಶೋಕಮೂಲಮಿದಂ ಕಥಂ।
02046017c ಸಮುತ್ಥಿತಂ ದುಃಖತರಂ ತನ್ಮೇ ಶಂಸಿತುಮರ್ಹಸಿ।।
ನೀನು ವಿದಿತಪ್ರಜ್ಞನೆಂದು ನನಗೆ ಗೊತ್ತು. ಆದರೂ ನಿನ್ನ ಈ ಸಮುತ್ಥಿತ ದುಃಖತರ ಶೋಕದ ಮೂಲವು ಏನು? ನನಗೆ ಹೇಳು.”
02046018 ದುರ್ಯೋಧನ ಉವಾಚ।
02046018a ಅಶ್ನಾಮ್ಯಾಚ್ಛಾದಯಾಮೀತಿ ಪ್ರಪಶ್ಯನ್ಪಾಪಪೂರುಷಃ।
02046018c ನಾಮರ್ಷಂ ಕುರುತೇ ಯಸ್ತು ಪುರುಷಃ ಸೋಽಧಮಃ ಸ್ಮೃತಃ।।
ದುರ್ಯೋಧನನು ಹೇಳಿದನು: “ಊಟ ಮತ್ತು ಉಡುಗೆತೊಡುಗೆಗಳನ್ನಷ್ಟೇ ಕಾಣುವವನು ಪಾಪಪುರುಷ. ಅಸೂಯೆಪಡದಿರುವ ಪುರುಷನು ಅಧಮನೆಂದು ಹೇಳುತ್ತಾರೆ.
02046019a ನ ಮಾಂ ಪ್ರೀಣಾತಿ ರಾಜೇಂದ್ರ ಲಕ್ಷ್ಮೀಃ ಸಾಧಾರಣಾ ವಿಭೋ।
02046019c ಜ್ವಲಿತಾಮಿವ ಕೌಂತೇಯೇ ಶ್ರಿಯಂ ದೃಷ್ಟ್ವಾ ಚ ವಿವ್ಯಥೇ।।
ರಾಜೇಂದ್ರ! ವಿಭೋ! ಸಾಧಾರಣವಾದ ಸಂಪತ್ತು ನನಗೆ ಸಂತೋಷವನ್ನು ನೀಡುವುದಿಲ್ಲ. ಕೌಂತೇಯನಲ್ಲಿರುವ ಪ್ರಜ್ವಲಿಸುವ ಶ್ರೀಯನು ನೋಡಿ ನನ್ನ ಮನಸ್ಸು ವಿಹ್ವಲವಾಗಿದೆ.
02046020a ಸರ್ವಾಂ ಹಿ ಪೃಥಿವೀಂ ದೃಷ್ಟ್ವಾ ಯುಧಿಷ್ಠಿರವಶಾನುಗಾಂ।
02046020c ಸ್ಥಿರೋಽಸ್ಮಿ ಯೋಽಹಂ ಜೀವಾಮಿ ದುಃಖಾದೇತದ್ಬ್ರವೀಮಿ ತೇ।।
ಸರ್ವ ಪೃಥ್ವಿಯೂ ಯುಧಿಷ್ಠಿರನ ವಶವಾದುದನ್ನು ನೋಡಿಯೂ ನಾನು ಇನ್ನೂ ಜೀವಂತನಾಗಿ ಇಲ್ಲಿ ನಿಂತಿದ್ದೇನಲ್ಲ! ಇದನ್ನು ದುಃಖದಿಂದ ನಿನಗೆ ಹೇಳುತ್ತಿದ್ದೇನೆ.
02046021a ಆವರ್ಜಿತಾ ಇವಾಭಾಂತಿ ನಿಘ್ನಾಶ್ಚೈತ್ರಕಿಕೌಕುರಾಃ।
02046021c ಕಾರಸ್ಕರಾ ಲೋಹಜಂಘಾ ಯುಧಿಷ್ಠಿರನಿವೇಶನೇ।।
ಯುಧಿಷ್ಠಿರನ ನಿವೇಶನದಲ್ಲಿ ಸದೆಬಡಿಯಲ್ಪಟ್ಟ ಸೋತ ಚೈತ್ರಿಕರು, ಕೌಕುರರು, ಕಾರಸ್ಕರರು, ಲೋಹಜಂಘರಂತೆ ಆಗಿದ್ದೇನೆ.
02046022a ಹಿಮವತ್ಸಾಗರಾನೂಪಾಃ ಸರ್ವರತ್ನಾಕರಾಸ್ತಥಾ।
02046022c ಅಂತ್ಯಾಃ ಸರ್ವೇ ಪರ್ಯುದಸ್ತಾ ಯುಧಿಷ್ಠಿರನಿವೇಶನೇ।।
ಯುಧಿಷ್ಠಿರನ ನಿವೇಶನದಲ್ಲಿ ಹಿಮಾಲಯದ, ಸಾಗರದ ಮತ್ತು ತಪ್ಪಲುಪ್ರದೇಶಗಳ ಸರ್ವ ರತ್ನಾಕರರೂ ಮತ್ತು ಇತರರೂ ದಾಸರಂತೆ ಇದ್ದಾರೆ.
02046023a ಜ್ಯೇಷ್ಠೋಽಯಮಿತಿ ಮಾಂ ಮತ್ವಾ ಶ್ರೇಷ್ಠಶ್ಚೇತಿ ವಿಶಾಂ ಪತೇ।
02046023c ಯುಧಿಷ್ಠಿರೇಣ ಸತ್ಕೃತ್ಯ ಯುಕ್ತೋ ರತ್ನಪರಿಗ್ರಹೇ।।
ವಿಶಾಂಪತೇ! ನಾನು ಜ್ಯೇಷ್ಠ ಮತ್ತು ಶ್ರೇಷ್ಠನೆಂದು ತಿಳಿದು ಸತ್ಕರಿಸಿ ಯುಧಿಷ್ಠಿರನು ನನ್ನನ್ನು ರತ್ನಪರಿಗ್ರಹಕ್ಕೆ ನಿಯುಕ್ತಗೊಳಿಸಿದನು.
02046024a ಉಪಸ್ಥಿತಾನಾಂ ರತ್ನಾನಾಂ ಶ್ರೇಷ್ಠಾನಾಮರ್ಘಹಾರಿಣಾಂ।
02046024c ನಾದೃಶ್ಯತ ಪರಃ ಪ್ರಾಂತೋ ನಾಪರಸ್ತತ್ರ ಭಾರತ।।
ಭಾರತ! ಅಲ್ಲಿದ್ದ ಶ್ರೇಷ್ಠ ಬೆಲೆಬಾಳುವ ರತ್ನಗಳ ತುದಿ ಮೊದಲುಗಳನ್ನು ನೋಡಲಿಕ್ಕಾಗುತ್ತಿರಲಿಲ್ಲ.
02046025a ನ ಮೇ ಹಸ್ತಃ ಸಮಭವದ್ವಸು ತತ್ಪ್ರತಿಗೃಹ್ಣತಃ।
02046025c ಪ್ರಾತಿಷ್ಠಂತ ಮಯಿ ಶ್ರಾಂತೇ ಗೃಹ್ಯ ದೂರಾಹೃತಂ ವಸು।।
ಆ ಸಂಪತ್ತುಗಳನ್ನು ಸ್ವೀಕರಿಸುವಾಗ ನಾನು ನನ್ನ ಕೈಒಡ್ಡಬೇಕಾಗಿರಲಿಲ್ಲ. ದೂರದಿಂದ ತಂದು ಅಲ್ಲಿರಿಸಿದ್ದ ಸಂಪತ್ತನ್ನು ತೆಗೆದುಕೊಳ್ಳುವುದರಲ್ಲಿಯೇ ನಾನು ಆಯಾಸಗೊಂಡಿದ್ದೆನು.
02046026a ಕೃತಾಂ ಬಿಂದುಸರೋರತ್ನೈರ್ಮಯೇನ ಸ್ಫಾಟಿಕಚ್ಛದಾಂ।
02046026c ಅಪಶ್ಯಂ ನಲಿನೀಂ ಪೂರ್ಣಾಮುದಕಸ್ಯೇವ ಭಾರತ।।
ಭಾರತ! ಬಿಂದುಸರೋವರದ ರತ್ನಗಳು ಮತ್ತು ಸ್ಫಟಿಕ-ಕಾಂಚನಗಳಿಂದ ಮಯನು ನಿರ್ಮಿಸಿದ ತಾವರೆಯ ಕೊಳವನ್ನು ನಾನು ನೋಡಿದ್ದೇನೆ.
02046027a ವಸ್ತ್ರಮುತ್ಕರ್ಷತಿ ಮಯಿ ಪ್ರಾಹಸತ್ಸ ವೃಕೋದರಃ।
02046027c ಶತ್ರೋರೃದ್ಧಿವಿಶೇಷೇಣ ವಿಮೂಢಂ ರತ್ನವರ್ಜಿತಂ।।
ರತ್ನವರ್ಜಿತನಾದ ನಾನು ಶತ್ರುಗಳ ವಿಶೇಷ ವೃದ್ಧಿಯನ್ನು ನೋಡಿ ವಿಮೂಢನಾಗಿ ವಸ್ತ್ರವನ್ನು ಮೇಲಿತ್ತಿಕೊಂಡಾಗ ವೃಕೋದರನು ನಕ್ಕನು.
02046028a ತತ್ರ ಸ್ಮ ಯದಿ ಶಕ್ತಃ ಸ್ಯಾಂ ಪಾತಯೇಯಂ ವೃಕೋದರಂ।
02046028c ಸಪತ್ನೇನಾವಹಾಸೋ ಹಿ ಸ ಮಾಂ ದಹತಿ ಭಾರತ।।
ನನಗೆ ಸಾಧ್ಯವಾಗಿದ್ದರೆ ನಾನು ಆಗಲೇ ಆ ವೃಕೋದರನನ್ನು ಕೊಂದುಬಿಡುತ್ತಿದ್ದೆ! ಭಾರತ! ಪ್ರತಿಸ್ಪರ್ಧಿಯಿಂದ ಅಪಮಾನಗೊಂಡ ನಾನು ಸುಡುತ್ತಿದ್ದೇನೆ.
02046029a ಪುನಶ್ಚ ತಾದೃಶೀಮೇವ ವಾಪೀಂ ಜಲಜಶಾಲಿನೀಂ।
02046029c ಮತ್ವಾ ಶಿಲಾಸಮಾಂ ತೋಯೇ ಪತಿತೋಽಸ್ಮಿ ನರಾಧಿಪ।।
ನರಾಧಿಪ! ಇನ್ನೊಮ್ಮೆ ಅದೇತರಹದ ತಾವರೆಗಳಿಂದ ತುಂಬಿದ್ದ ಇನ್ನೊಂದು ಕೊಳವನ್ನು ನೋಡಿ ಅದೂಕೂಡ ಶಿಲಾಸಮವೆಂದು ತಿಳಿದು ಹೋಗಿ ನೀರಿನಲ್ಲಿ ಬಿದ್ದೆ.
02046030a ತತ್ರ ಮಾಂ ಪ್ರಾಹಸತ್ಕೃಷ್ಣಃ ಪಾರ್ಥೇನ ಸಹ ಸಸ್ವನಂ।
02046030c ದ್ರೌಪದೀ ಚ ಸಹ ಸ್ತ್ರೀಭಿರ್ವ್ಯಥಯಂತೀ ಮನೋ ಮಮ।।
ಆಗ ಅಲ್ಲಿ ಪಾರ್ಥನೊಂದಿಗೆ ಕೃಷ್ಣನು ಜೋರಾಗಿ ನಕ್ಕನು. ಹಾಗೆಯೇ ಸ್ತ್ರೀಯರೊಂದಿಗೆ ದ್ರೌಪದಿಯೂ ನನ್ನ ಮನಸ್ಸನ್ನು ನೋಯಿಸಲು ನಕ್ಕಳು.
02046031a ಕ್ಲಿನ್ನವಸ್ತ್ರಸ್ಯ ಚ ಜಲೇ ಕಿಂಕರಾ ರಾಜಚೋದಿತಾಃ।
02046031c ದದುರ್ವಾಸಾಂಸಿ ಮೇಽನ್ಯಾನಿ ತಚ್ಚ ದುಃಖತರಂ ಮಮ।।
02046032a ಪ್ರಲಂಭಂ ಚ ಶೃಣುಷ್ವಾನ್ಯಂ ಗದತೋ ಮೇ ನರಾಧಿಪ।
ನೀರಿನಿಂದ ನನ್ನ ವಸ್ತ್ರವು ಒದ್ದೆಯಾಗಿರಲು ರಾಜನ ಆಜ್ಞೆಯಂತೆ ಕಿಂಕರರು ನನಗಾಗಿ ಬೇರೆ ವಸ್ತ್ರಗಳನ್ನಿತ್ತರು. ನನಗೆ ಇನ್ನೂ ಹೆಚ್ಚು ದುಃಖವನ್ನು ನೀಡಿದ್ದುದೆಂದರೆ, ಅವರು ಅನ್ಯರಿಗೆ ಕೇಳುವಂತೆ ತುಂಬಾ ಹೊತ್ತು ನಕ್ಕಿದ್ದುದು, ನರಾಧಿಪ!
02046032c ಅದ್ವಾರೇಣ ವಿನಿರ್ಗಚ್ಛನ್ದ್ವಾರಸಂಸ್ಥಾನರೂಪಿಣಾ।
02046032e ಅಭಿಹತ್ಯ ಶಿಲಾಂ ಭೂಯೋ ಲಲಾಟೇನಾಸ್ಮಿ ವಿಕ್ಷತಃ।।
ದ್ವಾರವಿದೆಯೇನೋ ಎಂದು ತೋರುತ್ತಿದ್ದ ಗೋಡೆಯಲ್ಲಿ ಹೋಗಿ ಶಿಲೆಯು ನನ್ನ ಹಣೆಗೆ ಹೊಡೆದು ಗಾಯಗೊಂಡೆ.
02046033a ತತ್ರ ಮಾಂ ಯಮಜೌ ದೂರಾದಾಲೋಕ್ಯ ಲಲಿತೌ ಕಿಲ।
02046033c ಬಾಹುಭಿಃ ಪರಿಗೃಹ್ಣೀತಾಂ ಶೋಚಂತೌ ಸಹಿತಾವುಭೌ।।
ದೂರದಿಂದಲೇ ಇದನ್ನು ನೋಡಿದ ಅವಳಿಗಳು ವಿನೋದಿಸಿದರು. ದುಃಖಪಟ್ಟ ಅವರಿಬ್ಬರೂ ಬಾಹುಗಳಿಂದ ನನ್ನನ್ನು ಹಿಡಿದರು.
02046034a ಉವಾಚ ಸಹದೇವಸ್ತು ತತ್ರ ಮಾಂ ವಿಸ್ಮಯನ್ನಿವ।
02046034c ಇದಂ ದ್ವಾರಮಿತೋ ಗಚ್ಛ ರಾಜನ್ನಿತಿ ಪುನಃ ಪುನಃ।।
ಆಗ ಸಹದೇವನು ವಿಸ್ಮಯದಿಂದಲೋ ಎನ್ನುವಂತೆ “ರಾಜ! ಇದು ದ್ವಾರವು. ಇಲ್ಲಿ ಹೋಗು” ಎಂದು ಪುನಃ ಪುನಃ ಹೇಳಿದನು.
02046035a ನಾಮಧೇಯಾನಿ ರತ್ನಾನಾಂ ಪುರಸ್ತಾನ್ನ ಶ್ರುತಾನಿ ಮೇ।
02046035c ಯಾನಿ ದೃಷ್ಟಾನಿ ಮೇ ತಸ್ಯಾಂ ಮನಸ್ತಪತಿ ತಚ್ಚ ಮೇ।।
ಅಲ್ಲಿ ನಾನು ಹೆಸರೇ ತಿಳಿಯದಿದ್ದ ಮತ್ತು ಕೇಳದೇ ಇದ್ದ ರತ್ನಗಳ ರಾಶಿಯನ್ನು ಕಂಡೆ. ಇವುಗಳಿಂದ ನನ್ನ ಮನಸ್ಸು ಸುಡುತ್ತಿದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಷಟ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ತಾರನೆಯ ಅಧ್ಯಾಯವು.