044 ದುರ್ಯೋಧನಸಂತಾಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ದ್ಯೂತ ಪರ್ವ

ಅಧ್ಯಾಯ 44

ಸಾರ

ದುರ್ಯೋಧನನು ಅಸೂಯೆಪಡುವುದು ಸರಿಯಲ್ಲವೆಂದು ಶಕುನಿಯು ಸಲಹೆ ನೀಡುವುದು (1-11). ಪಾಂಡವರನ್ನು ಸೋಲಿಸಲು ಉಪಾಯವೇನೆಂದು ಕೇಳಲು ಶಕುನಿಯು ದ್ಯೂತವನ್ನು ಸೂಚಿಸುವುದು (12-22).

02044001 ಶಕುನಿರುವಾಚ।
02044001a ದುರ್ಯೋಧನ ನ ತೇಽಮರ್ಷಃ ಕಾರ್ಯಃ ಪ್ರತಿ ಯುಧಿಷ್ಠಿರಂ।
02044001c ಭಾಗಧೇಯಾನಿ ಹಿ ಸ್ವಾನಿ ಪಾಂಡವಾ ಭುಂಜತೇ ಸದಾ।।

ಶಕುನಿಯು ಹೇಳಿದನು: “ದುರ್ಯೋಧನ! ಯುಧಿಷ್ಠಿರನ ಕುರಿತು ಯಾವುದೇ ರೀತಿಯ ಅಸೂಯೆ ಮಾಡಬೇಡ. ಯಾಕೆಂದರೆ ಪಾಂಡವರು ಸದಾ ಭಾಗ್ಯವಂತರಾಗಿದ್ದಾರೆ.

02044002a ಅನೇಕೈರಭ್ಯುಪಾಯೈಶ್ಚ ತ್ವಯಾರಬ್ಧಾಃ ಪುರಾಸಕೃತ್।
02044002c ವಿಮುಕ್ತಾಶ್ಚ ನರವ್ಯಾಘ್ರಾ ಭಾಗಧೇಯಪುರಸ್ಕೃತಾಃ।।

ಹಿಂದೆ ನೀನು ಅವರ ಮೇಲೆ ಅನೇಕ ಉಪಾಯ ಪ್ರಯತ್ನಗಳನ್ನು ಮಾಡಿದ್ದೀಯೆ. ಆದರೆ ಆ ನರವ್ಯಾಘ್ರರು ಭಾಗ್ಯದಿಂದಲೇ ವಿಮುಕ್ತರಾದರು.

02044003a ತೈರ್ಲಬ್ಧಾ ದ್ರೌಪದೀ ಭಾರ್ಯಾ ದ್ರುಪದಶ್ಚ ಸುತೈಃ ಸಹ।
02044003c ಸಹಾಯಃ ಪೃಥಿವೀಲಾಭೇ ವಾಸುದೇವಶ್ಚ ವೀರ್ಯವಾನ್।।

ಪೃಥ್ವಿಯನ್ನು ಗೆಲ್ಲುವುದಕ್ಕೆ ಅವರು ದ್ರೌಪದಿಯನ್ನು ಪತ್ನಿಯನಾಗಿ, ಸುತರ ಸಹಿತ ದ್ರುಪದನನ್ನು ಹಾಗೂ ವೀರ್ಯವಾನ್ ವಾಸುದೇವನನ್ನು ಸಹಾಯಕರನ್ನಾಗಿ ಗೆದ್ದರು.

02044004a ಲಬ್ಧಶ್ಚ ನಾಭಿಭೂತೋಽರ್ಥಃ ಪಿತ್ರ್ಯೋಽಂಶಃ ಪೃಥಿವೀಪತೇ।
02044004c ವಿವೃದ್ಧಸ್ತೇಜಸಾ ತೇಷಾಂ ತತ್ರ ಕಾ ಪರಿದೇವನಾ।।

ಅವರು ಪೃಥ್ವೀಪತಿ ತಂದೆಯ ಭಾಗವಾದ ಸಂಪತ್ತನ್ನು ಪಡೆದರು ಮತ್ತು ಅವರದ್ದೇ ತೇಜಸ್ಸಿನಿಂದ ಅದನ್ನು ವೃದ್ಧಿಸಿದರು. ಅದರಲ್ಲಿ ದುಃಖಪಡುವಂಥಹುದು ಏನಿದೆ?

02044005a ಧನಂಜಯೇನ ಗಾಂಡೀವಮಕ್ಷಯ್ಯೌ ಚ ಮಹೇಷುಧೀ।
02044005c ಲಬ್ಧಾನ್ಯಸ್ತ್ರಾಣಿ ದಿವ್ಯಾನಿ ತರ್ಪಯಿತ್ವಾ ಹುತಾಶನಂ।।

ಮಹೇಷುಧೀ ಧನಂಜಯನು ಹುತಾಶನನನ್ನು ತೃಪ್ತಿಗೊಳಿಸಿ ಗಾಂಡೀವವನ್ನೂ, ಅಕ್ಷಯ ಬತ್ತಳಿಕೆಗಳನ್ನೂ, ದಿವ್ಯಾಸ್ತ್ರಗಳನ್ನೂ ಪಡೆದನು.

02044006a ತೇನ ಕಾರ್ಮುಕಮುಖ್ಯೇನ ಬಾಹುವೀರ್ಯೇಣ ಚಾತ್ಮನಃ।
02044006c ಕೃತಾ ವಶೇ ಮಹೀಪಾಲಾಸ್ತತ್ರ ಕಾ ಪರಿದೇವನಾ।।

ಆ ಉತ್ತಮ ಧನುಸ್ಸಿನಿಂದ ಮತ್ತು ತನ್ನದೇ ಬಾಹುವೀರ್ಯದಿಂದ ಅವನು ಮಹೀಪಾಲರನ್ನು ವಶಗೊಳಿಸಿದನು. ಅದರಲ್ಲಿ ಬೇಸರಪಡುವಂಥಹುದು ಏನಿದೆ?

02044007a ಅಗ್ನಿದಾಹಾನ್ಮಯಂ ಚಾಪಿ ಮೋಕ್ಷಯಿತ್ವಾ ಸ ದಾನವಂ।
02044007c ಸಭಾಂ ತಾಂ ಕಾರಯಾಮಾಸ ಸವ್ಯಸಾಚೀ ಪರಂತಪಃ।।

ಆ ಪರಂತಪ ಸವ್ಯಸಾಚಿಯು ದಹಿಸುತ್ತಿರುವ ಅಗ್ನಿಯಿಂದ ದಾನವ ಮಯನನ್ನು ಉಳಿಸಿ ಅವನಿಂದ ಸಭೆಯನ್ನು ಕಟ್ಟಿಸಿದನು.

02044008a ತೇನ ಚೈವ ಮಯೇನೋಕ್ತಾಃ ಕಿಂಕರಾ ನಾಮ ರಾಕ್ಷಸಾಃ।
02044008c ವಹಂತಿ ತಾಂ ಸಭಾಂ ಭೀಮಾಸ್ತತ್ರ ಕಾ ಪರಿದೇವನಾ।।

ಅದೇ ಮಯನ ಹೇಳಿಕೆಯಂತೆ ಕಿಂಕರರೆಂಬ ಹೆಸರಿನ ಭಯಂಕರ ರಾಕ್ಷಸರು ಆ ಸಭೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ದುಃಖಿಸುವುದಾದರೂ ಏನಿದೆ?

02044009a ಯಚ್ಚಾಸಹಾಯತಾಂ ರಾಜನ್ನುಕ್ತವಾನಸಿ ಭಾರತ।
02044009c ತನ್ಮಿಥ್ಯಾ ಭ್ರಾತರೋ ಹೀಮೇ ಸಹಾಯಾಸ್ತೇ ಮಹಾರಥಾಃ।।

ಭಾರತ! ರಾಜನ್! ನಿನ್ನ ಸಹಾಯಕರು ಯಾರೂ ಇಲ್ಲ ಎಂದು ಹೇಳುತ್ತಿದ್ದೀಯಲ್ಲ. ಅದು ಸುಳ್ಳು! ನಿನ್ನ ಮಹಾರಥಿ ಸಹೋದರರೇ ನಿನ್ನ ಸಹಾಯಕರು.

02044010a ದ್ರೋಣಸ್ತವ ಮಹೇಷ್ವಾಸಃ ಸಹ ಪುತ್ರೇಣ ಧೀಮತಾ।
02044010c ಸೂತಪುತ್ರಶ್ಚ ರಾಧೇಯೋ ಗೌತಮಶ್ಚ ಮಹಾರಥಃ।।

ಹಾಗೆಯೇ ತನ್ನ ಧೀಮಂತ ಪುತ್ರ ಸಹಿತ ಮಹೇಷ್ವಾಸ ದ್ರೋಣ, ಸೂತಪುತ್ರ ರಾಧೇಯ, ಮತ್ತು ಮಹಾರಥಿ ಗೌತಮಿ ಇವರೂ ನಿನ್ನವರೇ.

02044011a ಅಹಂ ಚ ಸಹ ಸೋದರ್ಯೈಃ ಸೌಮದತ್ತಿಶ್ಚ ವೀರ್ಯವಾನ್।
02044011c ಏತೈಸ್ತ್ವಂ ಸಹಿತಃ ಸರ್ವೈರ್ಜಯ ಕೃತ್ಸ್ನಾಂ ವಸುಂಧರಾಂ।।

ಸೋದರರೊಂದಿಗೆ ನಾನೂ ಕೂಡ, ಮತ್ತು ವೀರ್ಯವಂತ ಸೌಮದತ್ತಿ, ಇವರೆಲ್ಲರ ಜೊತೆಗೂಡಿ ನೀನು ಇಡೀ ವಸುಂಧರೆಯನ್ನೇ ಜಯಿಸಬಹುದು.”

02044012 ದುರ್ಯೋಧನ ಉವಾಚ।
02044012a ತ್ವಯಾ ಚ ಸಹಿತೋ ರಾಜನ್ನೇತೈಶ್ಚಾನ್ಯೈರ್ಮಹಾರಥೈಃ।
02044012c ಏತಾನೇವ ವಿಜೇಷ್ಯಾಮಿ ಯದಿ ತ್ವಮನುಮನ್ಯಸೇ।।

ದುರ್ಯೋಧನನು ಹೇಳಿದನು: “ರಾಜನ್! ನೀನು ಒಪ್ಪುವುದಾದರೆ, ನಿನ್ನ ಮತ್ತು ಇತರ ಮಹಾರಥಿಗಳೊಡಗೂಡಿ ಅವರನ್ನು ಸೋಲಿಸುತ್ತೇನೆ.

02044013a ಏತೇಷು ವಿಜಿತೇಷ್ವದ್ಯ ಭವಿಷ್ಯತಿ ಮಹೀ ಮಮ।
02044013c ಸರ್ವೇ ಚ ಪೃಥಿವೀಪಾಲಾಃ ಸಭಾ ಸಾ ಚ ಮಹಾಧನಾ।।

ಅವರನ್ನು ಸೋಲಿಸಿದಾಗ ಈ ಮಹಿ, ಸರ್ವ ಪೃಥಿವೀಪಾಲರು, ಆ ಸಭೆ, ಆ ಮಹಾ ಐಶ್ವರ್ಯ ಎಲ್ಲವೂ ನನ್ನದಾಗುತ್ತದೆ.”

02044014 ಶಕುನಿರುವಾಚ।
02044014a ಧನಂಜಯೋ ವಾಸುದೇವೋ ಭೀಮಸೇನೋ ಯುಧಿಷ್ಠಿರಃ।
02044014c ನಕುಲಃ ಸಹದೇವಶ್ಚ ದ್ರುಪದಶ್ಚ ಸಹಾತ್ಮಜೈಃ।।
02044015a ನೈತೇ ಯುಧಿ ಬಲಾಜ್ಜೇತುಂ ಶಕ್ಯಾಃ ಸುರಗಣೈರಪಿ।
02044015c ಮಹಾರಥಾ ಮಹೇಷ್ವಾಸಾಃ ಕೃತಾಸ್ತ್ರಾ ಯುದ್ಧದುರ್ಮದಾಃ।।

ಶಕುನಿಯು ಹೇಳಿದನು: “ಆ ಮಹಾರಥಿ, ಮಹೇಷ್ವಾಸ, ಕೃತಾಸ್ತ್ರ ಮತ್ತು ಯುದ್ಧದುರ್ಮದ ಧನಂಜಯ, ವಾಸುದೇವ, ಭೀಮಸೇನ, ಯುಧಿಷ್ಠಿರ, ನಕುಲ, ಸಹದೇವ ಮತ್ತು ಪುತ್ರರ ಸಹಿತ ದ್ರುಪದ ಇವರನ್ನು ಬಲದಿಂದ ಯುದ್ಧದಲ್ಲಿ ಜಯಿಸಲು ಸುರಗಣರಿಗೂ ಶಕ್ಯವಿಲ್ಲ.

02044016a ಅಹಂ ತು ತದ್ವಿಜಾನಾಮಿ ವಿಜೇತುಂ ಯೇನ ಶಕ್ಯತೇ।
02044016c ಯುಧಿಷ್ಠಿರಂ ಸ್ವಯಂ ರಾಜಂಸ್ತನ್ನಿಬೋಧ ಜುಷಸ್ವ ಚ।।

ರಾಜನ್! ಆದರೆ ಯುಧಿಷ್ಠಿರನನ್ನು ಹೇಗೆ ಸೋಲಿಸಬಹುದು ಎನ್ನುವುದನ್ನು ನಾನು ತಿಳಿದಿದ್ದೇನೆ. ಅದನ್ನು ಕೇಳು ಮತ್ತು ಅದರಂತೆ ಮಾಡು.”

02044017 ದುರ್ಯೋಧನ ಉವಾಚ।
02044017a ಅಪ್ರಮಾದೇನ ಸುಹೃದಾಮನ್ಯೇಷಾಂ ಚ ಮಹಾತ್ಮನಾಂ।
02044017c ಯದಿ ಶಕ್ಯಾ ವಿಜೇತುಂ ತೇ ತನ್ಮಮಾಚಕ್ಷ್ವ ಮಾತುಲ।।

ದುರ್ಯೋಧನನು ಹೇಳಿದನು: “ಮಾವ! ಸುಹೃದಯರಿಗೆ ಮತ್ತು ಇತರ ಮಹಾತ್ಮರಿಗೆ ಅಪ್ರಮಾದವಾಗದ ರೀತಿಯಲ್ಲಿ ಅವರನ್ನು ಜಯಿಸಲು ಶಕ್ಯವಿದ್ದರೆ ಅದನ್ನು ಹೇಳು!”

02044018 ಶಕುನಿರುವಾಚ।
02044018a ದ್ಯೂತಪ್ರಿಯಶ್ಚ ಕೌಂತೇಯೋ ನ ಚ ಜಾನಾತಿ ದೇವಿತುಂ।
02044018c ಸಮಾಹೂತಶ್ಚ ರಾಜೇಂದ್ರೋ ನ ಶಕ್ಷ್ಯತಿ ನಿವರ್ತಿತುಂ।।

ಶಕುನಿಯು ಹೇಳಿದನು: “ಕೌಂತೇಯನು ದ್ಯೂತಪ್ರಿಯ. ಆದರೆ ಜೂಜಾಡುವುದು ಅವನಿಗೆ ಗೊತ್ತಿಲ್ಲ. ಆಹ್ವಾನಿಸಿದರೆ ಆ ರಾಜೇಂದ್ರನಿಗೆ ನಿರಾಕರಿಸಲು ಕಷ್ಟವಾಗುತ್ತದೆ.

02044019a ದೇವನೇ ಕುಶಲಶ್ಚಾಹಂ ನ ಮೇಽಸ್ತಿ ಸದೃಶೋ ಭುವಿ।
02044019c ತ್ರಿಷು ಲೋಕೇಷು ಕೌಂತೇಯಂ ತಂ ತ್ವಂ ದ್ಯೂತೇ ಸಮಾಹ್ವಯ।।

ನಾನು ಜೂಜಿನಲ್ಲಿ ಕುಶಲ ಮತ್ತು ಇದರಲ್ಲಿ ನನ್ನ ಸರಿಸಮನು ಮೂರೂ ಲೋಕಗಳಲ್ಲಿಯೂ, ಭೂಮಿಯಲ್ಲಿಯೂ ಯಾರೂ ಇಲ್ಲ. ಕೌಂತೇಯನನ್ನು ದ್ಯೂತಕ್ಕೆ ಆಹ್ವಾನಿಸು.

02044020a ತಸ್ಯಾಕ್ಷಕುಶಲೋ ರಾಜನ್ನಾದಾಸ್ಯೇಽಹಮಸಂಶಯಂ।
02044020c ರಾಜ್ಯಂ ಶ್ರಿಯಂ ಚ ತಾಂ ದೀಪ್ತಾಂ ತ್ವದರ್ಥಂ ಪುರುಷರ್ಷಭ।

ರಾಜನ್! ಪುರುಷರ್ಷಭ! ಜೂಜಾಟದಲ್ಲಿ ನನ್ನ ಈ ಕುಶಲತೆಯಿಂದ ನಿಶ್ಚಯವಾಗಿಯೂ ಅವನ ರಾಜ್ಯ ಮತ್ತು ಸಂಪತ್ತನ್ನು ನಿನ್ನದಾಗಿಸುತ್ತೇನೆ.

02044021a ಇದಂ ತು ಸರ್ವಂ ತ್ವಂ ರಾಜ್ಞೇ ದುರ್ಯೋಧನ ನಿವೇದಯ।
02044021c ಅನುಜ್ಞಾತಸ್ತು ತೇ ಪಿತ್ರಾ ವಿಜೇಷ್ಯೇ ತಂ ನ ಸಂಶಯಃ।।

ದುರ್ಯೋಧನ! ಇವೆಲ್ಲವನ್ನು ನೀನು ರಾಜನಿಗೆ ನಿವೇದಿಸು. ನಿನ್ನ ತಂದೆಯು ಅಪ್ಪಣೆಯಿತ್ತರೆ ನಾನು ಅವನನ್ನು ಜಯಿಸುತ್ತೇನೆ. ಸಂಶಯವೇ ಇಲ್ಲ.”

02044022 ದುರ್ಯೋಧನ ಉವಾಚ।
02044022a ತ್ವಮೇವ ಕುರುಮುಖ್ಯಾಯ ಧೃತರಾಷ್ಟ್ರಾಯ ಸೌಬಲ।
02044022c ನಿವೇದಯ ಯಥಾನ್ಯಾಯಂ ನಾಹಂ ಶಕ್ಷ್ಯೇ ನಿಶಂಸಿತುಂ।।

ದುರ್ಯೋಧನನು ಹೇಳಿದನು: “ಸೌಬಲ! ನೀನೇ ಇದನ್ನು ಕುರುಮುಖ್ಯ ಧೃತರಾಷ್ಟ್ರನಲ್ಲಿ ಸರಿಯಾದ ರೀತಿಯಲ್ಲಿ ಹೇಳಬೇಕು. ಈ ವಿಷಯವನ್ನು ಪ್ರಸ್ತಾಪಿಸಲು ನನಗೆ ಸಾಧ್ಯವಿಲ್ಲ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಚತುಶ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ನಾಲ್ಕನೆಯ ಅಧ್ಯಾಯವು.