ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಶಿಶುಪಾಲವಧ ಪರ್ವ
ಅಧ್ಯಾಯ 42
ಸಾರ
ಶಿಶುಪಾಲನು ಕೃಷ್ಣನೊಂದಿಗೆ ಯುದ್ಧಕ್ಕೆ ಸನ್ನದ್ಧನಾಗಿ ಅವನನ್ನೂ ನಿಂದಿಸಿದುದು (1-4). ಕೃಷ್ಣನು ಶಿಶುಪಾಲನ ಅಪರಾಧಗಳನ್ನು ವರ್ಣಿಸಿ, ಅವನು ವಧಾರ್ಹನೆನ್ನುವುದು (5-16). ಶಿಶುಪಾಲನು ಪ್ರತಿಯಾಗಿ ಮಾತನಾಡುತ್ತಿರುವಾಗಲೇ ಚಕ್ರದಿಂದ ಕೃಷ್ಣನು ಅವನ ಶಿರವನ್ನು ಕತ್ತರಿಸಿದುದು (17-29). ಯಾಗಸಮಾಪ್ತಿ (30-60).
02042001 ವೈಶಂಪಾಯನ ಉವಾಚ।
02042001a ತತಃ ಶ್ರುತ್ವೈವ ಭೀಷ್ಮಸ್ಯ ಚೇದಿರಾಡುರುವಿಕ್ರಮಃ।
02042001c ಯುಯುತ್ಸುರ್ವಾಸುದೇವೇನ ವಾಸುದೇವಮುವಾಚ ಹ।।
ವೈಶಂಪಾಯನನು ಹೇಳಿದನು: “ಭೀಷ್ಮನನ್ನು ಕೇಳಿದ ಅತಿವಿಕ್ರಮಿ ಚೇದಿರಾಜನು ವಾಸುದೇವನೊಂದಿಗೆ ಯುದ್ಧಮಾಡಲು ಉತ್ಸುಕನಾಗಿ ವಾಸುದೇವನಿಗೆ ಹೇಳಿದನು:
02042002a ಆಹ್ವಯೇ ತ್ವಾಂ ರಣಂ ಗಚ್ಛ ಮಯಾ ಸಾರ್ಧಂ ಜನಾರ್ದನ।
02042002c ಯಾವದದ್ಯ ನಿಹನ್ಮಿ ತ್ವಾಂ ಸಹಿತಂ ಸರ್ವಪಾಂಡವೈಃ।।
“ನಾನು ನಿನ್ನನ್ನು ಅಹ್ವಾನಿಸುತ್ತಿದ್ದೇನೆ. ಜನಾರ್ದನ! ನನ್ನೊಡನೆ ರಣಕ್ಕೆ ಬಾ. ಪಾಂಡವರೆಲ್ಲರ ಸಹಿತ ನಿನ್ನನ್ನು ನಿರ್ನಾಮಗೊಳಿಸುತ್ತೇನೆ!
02042003a ಸಹ ತ್ವಯಾ ಹಿ ಮೇ ವಧ್ಯಾಃ ಪಾಂಡವಾಃ ಕೃಷ್ಣ ಸರ್ವಥಾ।
02042003c ನೃಪತೀನ್ಸಮತಿಕ್ರಮ್ಯ ಯೈರರಾಜಾ ತ್ವಮರ್ಚಿತಃ।।
ಕೃಷ್ಣ! ನೃಪತಿಗಳನ್ನೆಲ್ಲ ಅತಿಕ್ರಮಿಸಿ ರಾಜನಲ್ಲದ ನಿನ್ನನ್ನು ಅರ್ಚಿಸಿದ ಆ ಪಾಂಡವರನ್ನೂ ನಾನು ವಧಿಸುತ್ತೇನೆ.
02042004a ಯೇ ತ್ವಾಂ ದಾಸಮರಾಜಾನಂ ಬಾಲ್ಯಾದರ್ಚಂತಿ ದುರ್ಮತಿಂ।
02042004c ಅನರ್ಹಮರ್ಹವತ್ ಕೃಷ್ಣ ವಧ್ಯಾಸ್ತ ಇತಿ ಮೇ ಮತಿಃ।
02042004e ಇತ್ಯುಕ್ತ್ವಾ ರಾಜಶಾರ್ದೂಲಸ್ತಸ್ಥೌ ಗರ್ಜನ್ನಮರ್ಷಣಃ।।
ಕೃಷ್ಣ! ಬಾಲ್ಯದಲ್ಲಿ ದುರ್ಮತಿ, ದಾಸ ಮತ್ತು ಅರಾಜನಾದ ನಿನ್ನನ್ನು ಅನರ್ಹನಾಗಿದ್ದರೂ ಅರ್ಹನೆಂದು ತಿಳಿದು ಅರ್ಚಿಸಿದ ಅವರನ್ನೂ ವಧಿಸಬೇಕೆಂದು ಯೋಚಿಸುತ್ತಿದ್ದೇನೆ.” ಈ ರೀತಿ ಹೇಳಿದ ರಾಜಶಾರ್ದೂಲನು ಗರ್ಜಿಸುತ್ತಾ ಕೋಪವನ್ನು ಕಾರುತ್ತಾ ಎದ್ದು ನಿಂತನು.
02042005a ಏವಮುಕ್ತೇ ತತಃ ಕೃಷ್ಣೋ ಮೃದುಪೂರ್ವಮಿದಂ ವಚಃ।
02042005c ಉವಾಚ ಪಾರ್ಥಿವಾನ್ಸರ್ವಾಂಸ್ತತ್ಸಮಕ್ಷಂ ಚ ಪಾಂಡವಾನ್।।
02042006a ಏಷ ನಃ ಶತ್ರುರತ್ಯಂತಂ ಪಾರ್ಥಿವಾಃ ಸಾತ್ವತೀಸುತಃ।
02042006c ಸಾತ್ವತಾನಾಂ ನೃಶಂಸಾತ್ಮಾ ನ ಹಿತೋಽನಪಕಾರಿಣಾಂ।।
ಇದನ್ನು ಕೇಳಿದ ಕೃಷ್ಣನು ಮೃದುಪೂರ್ವಕ ಮಾತುಗಳಲ್ಲಿ ಅಲ್ಲಿದ್ದ ಸರ್ವ ಪಾರ್ಥಿವ-ಪಾಂಡವರ ಸಮಕ್ಷಮದಲ್ಲಿ ಹೇಳಿದನು: “ಈ ಸಾತ್ವತೀಸುತನು ಪಾರ್ಥಿವರ ಅತ್ಯಂತ ಶತ್ರು. ಈ ನೃಶಂಸಾತ್ಮನು ಸಾತ್ವತರ ಹಿತವಂತನಲ್ಲ. ಅನಪಕಾರಿ.
02042007a ಪ್ರಾಗ್ಜ್ಯೋತಿಷಪುರಂ ಯಾತಾನಸ್ಮಾಂಜ್ಞಾತ್ವಾ ನೃಶಂಸಕೃತ್।
02042007c ಅದಹದ್ದ್ವಾರಕಾಮೇಷ ಸ್ವಸ್ರೀಯಃ ಸನ್ನರಾಧಿಪಾಃ।।
ನರಾಧಿಪರೇ! ನಾನು ಪ್ರಾಗ್ಜೋತಿಷಪುರಕ್ಕೆ ಹೋದದ್ದನ್ನು ತಿಳಿದ ಈ ಕಪಟಿಯು ಸ್ವಸ್ತ್ರೀಯರ ದ್ವಾರಕೆಯನ್ನು ಸುಟ್ಟುಹಾಕಲು ಪ್ರಯತ್ನಿಸಿದನು.
02042008a ಕ್ರೀಡತೋ ಭೋಜರಾಜನ್ಯಾನೇಷ ರೈವತಕೇ ಗಿರೌ।
02042008c ಹತ್ವಾ ಬದ್ಧ್ವಾ ಚ ತಾನ್ಸರ್ವಾನುಪಾಯಾತ್ಸ್ವಪುರಂ ಪುರಾ।।
ಹಿಂದೆ ಭೋಜರಾಜರು ರೈವತಕ ಗಿರಿಯಲ್ಲಿ ಆಡುತ್ತಿರುವಾಗ ಇವನು ಅವರೆಲ್ಲರನ್ನೂ ಹೊಡೆದು, ಬಂಧಿಸಿ ತನ್ನ ನಗರಕ್ಕೆ ಕರೆದೊಯ್ದನು.
02042009a ಅಶ್ವಮೇಧೇ ಹಯಂ ಮೇಧ್ಯಮುತ್ಸೃಷ್ಟಂ ರಕ್ಷಿಭಿರ್ವೃತಂ।
02042009c ಪಿತುರ್ಮೇ ಯಜ್ಞವಿಘ್ನಾರ್ಥಮಹರತ್ಪಾಪನಿಶ್ಚಯಃ।।
ರಕ್ಷಣೆಯ ಜೊತೆ ಅಶ್ವಮೇಧದ ಕುದುರೆಯನ್ನು ಇವನ ತಂದೆಯು ಬಿಟ್ಟಾಗ ಈ ಪಾಪನಿಶ್ಚಯಿಯು ಅವನ ಯಜ್ಞಕ್ಕೆ ವಿಘ್ನವನ್ನುಂಟುಮಾಡಲೋಸುಗ ಕುದುರೆಯನ್ನು ಕದ್ದನು.
02042010a ಸೌವೀರಾನ್ಪ್ರತಿಪತ್ತೌ ಚ ಬಭ್ರೋರೇಷ ಯಶಸ್ವಿನಃ।
02042010c ಭಾರ್ಯಾಮಭ್ಯಹರನ್ಮೋಹಾದಕಾಮಾಂ ತಾಮಿತೋ ಗತಾಂ।।
ಸೌವೀರಕ್ಕೆ ಹೋಗುತ್ತಿರುವಾಗ ಇವನು ಯಶಸ್ವಿನಿ ಬಭ್ರುವಿನ ಭಾರ್ಯೆಯನ್ನು ಮೋಹಿಸಿ ಅವಳಿಗೆ ಇಷ್ಟವಿಲ್ಲದಿದ್ದರೂ ಅಪಹರಿಸಿದನು.
02042011a ಏಷ ಮಾಯಾಪ್ರತಿಚ್ಛನ್ನಃ ಕರೂಷಾರ್ಥೇ ತಪಸ್ವಿನೀಂ।
02042011c ಜಹಾರ ಭದ್ರಾಂ ವೈಶಾಲೀಂ ಮಾತುಲಸ್ಯ ನೃಶಂಸಕೃತ್।।
ತನ್ನ ಮಾವ ಕರೂಷನಿಗೆಂದಿರುವ ತಪಸ್ವಿನೀ ಭದ್ರೆ ವೈಶಾಲಿಯನ್ನು ಇವನು ಮಾಯೆಯ ಮಸುಕನ್ನು ಎಸೆದು ಮೋಸಗೊಳಿಸಿ ಎತ್ತಿಕೊಂಡು ಹೋದನು.
02042012a ಪಿತೃಷ್ವಸುಃ ಕೃತೇ ದುಃಖಂ ಸುಮಹನ್ಮರ್ಷಯಾಮ್ಯಹಂ।
02042012c ದಿಷ್ಟ್ಯಾ ತ್ವಿದಂ ಸರ್ವರಾಜ್ಞಾಂ ಸನ್ನಿಧಾವದ್ಯ ವರ್ತತೇ।।
ನನ್ನ ಅತ್ತೆಯ ದುಃಖವನ್ನು ನೋಡಿ ಈ ಮಹತ್ತರ ಹಿಂಸೆಯನ್ನು ತಡೆದುಕೊಳ್ಳುತ್ತಿದ್ದೇನೆ. ಅದರೆ ದುರದೃಷ್ಟವಶಾತ್ ಇದು ಈ ಎಲ್ಲ ರಾಜರ ಸಭೆಯಲ್ಲಿ ನಡೆಯುತ್ತಿದೆ.
02042013a ಪಶ್ಯಂತಿ ಹಿ ಭವಂತೋಽದ್ಯ ಮಯ್ಯತೀವ ವ್ಯತಿಕ್ರಮಂ।
02042013c ಕೃತಾನಿ ತು ಪರೋಕ್ಷಂ ಮೇ ಯಾನಿ ತಾನಿ ನಿಬೋಧತ।।
ಇಂದು ಇವನು ನನ್ನ ಕುರಿತು ಮಾಡಿದ ಅತೀವ ವಿರೋಧಗಳನ್ನು ನೋಡಿದ್ದೀರಿ. ಅವನು ಪರೋಕ್ಷವಾಗಿ ನನ್ನ ವಿರುದ್ಧ ಎನೇನು ಮಾಡಿದ್ದಾನೆ ಎನ್ನುವುದನ್ನು ಕೇಳಿ.
02042014a ಇಮಂ ತ್ವಸ್ಯ ನ ಶಕ್ಷ್ಯಾಮಿ ಕ್ಷಂತುಮದ್ಯ ವ್ಯತಿಕ್ರಮಂ।
02042014c ಅವಲೇಪಾದ್ವಧಾರ್ಹಸ್ಯ ಸಮಗ್ರೇ ರಾಜಮಂಡಲೇ।।
ಇಂದು ನಡೆಸಿದ ಇವನ ಅತಿಕ್ರಮವನ್ನು ನಾನು ಕ್ಷಮಿಸಲು ಶಕ್ಯನಿಲ್ಲ. ಮತ್ತು ಸಮಗ್ರ ರಾಜಮಂಡಲದಲ್ಲಿ ಮಾಡಿದ ಈ ಅಪಮಾನಕ್ಕೆ ಅವನು ಮರಣಾರ್ಹ.
02042015a ರುಕ್ಮಿಣ್ಯಾಮಸ್ಯ ಮೂಢಸ್ಯ ಪ್ರಾರ್ಥನಾಸೀನ್ಮುಮೂರ್ಷತಃ।
02042015c ನ ಚ ತಾಂ ಪ್ರಾಪ್ತವಾನ್ಮೂಢಃ ಶೂದ್ರೋ ವೇದಶ್ರುತಿಂ ಯಥಾ।।
ಸಾವನ್ನು ಬಯಸುತ್ತಿರುವ ಈ ಮೂಢನು ಒಮ್ಮೆ ರುಕ್ಮಿಣಿಯನ್ನು ಕೇಳಿದನು. ಆದರೆ ಮೂಢ ಶೂದ್ರನು ವೇದವನ್ನು ಹೇಗೆ ಕೇಳಲಿಕ್ಕಾಗುವುದಿಲ್ಲವೋ ಹಾಗೆ ಅವಳನ್ನು ಪಡೆಯಲಿಲ್ಲ.”
02042016a ಏವಮಾದಿ ತತಃ ಸರ್ವೇ ಸಹಿತಾಸ್ತೇ ನರಾಧಿಪಾಃ।
02042016c ವಾಸುದೇವವಚಃ ಶ್ರುತ್ವಾ ಚೇದಿರಾಜಂ ವ್ಯಗರ್ಹಯನ್।।
ಅಲ್ಲಿ ನೆರೆದಿದ್ದ ಸರ್ವ ನರಾಧಿಪರೂ ವಾಸುದೇವನ ಈ ಮಾತುಗಳನ್ನು ಕೇಳಿ ಚೇದಿರಾಜನನ್ನು ನಿಂದಿಸಿದರು.
02042017a ತತಸ್ತದ್ವಚನಂ ಶ್ರುತ್ವಾ ಶಿಶುಪಾಲಃ ಪ್ರತಾಪವಾನ್।
02042017c ಜಹಾಸ ಸ್ವನವದ್ಧಾಸಂ ಪ್ರಹಸ್ಯೇದಮುವಾಚ ಹ।।
ಆದರೆ ಇದನ್ನು ಪ್ರತಾಪಿ ಶಿಶುಪಾಲನು ಕೇಳಿ ಜೋರಾಗಿ ನಕ್ಕನು ಮತ್ತು ನಗುತ್ತಾ ಹೇಳಿದನು:
02042018a ಮತ್ಪೂರ್ವಾಂ ರುಕ್ಮಿಣೀಂ ಕೃಷ್ಣ ಸಂಸತ್ಸು ಪರಿಕೀರ್ತಯನ್।
02042018c ವಿಶೇಷತಃ ಪಾರ್ಥಿವೇಷು ವ್ರೀಡಾಂ ನ ಕುರುಷೇ ಕಥಂ।।
“ಕೃಷ್ಣ! ನಿನ್ನವಳಾಗುವುದರ ಮೊದಲು ರುಕ್ಮಿಣಿಯು ಇನ್ನೊಬ್ಬನದ್ದಾಗಿದ್ದಳು ಎಂದು ವಿಶೇಷವಾಗಿ ಈ ಪಾರ್ಥಿವರ ಮುಂದೆ ಹೇಳಿಕೊಳ್ಳಲು ನಿನಗೆ ನಾಚಿಕೆಯಾಗುವುದಿಲ್ಲವೇ?
02042019a ಮನ್ಯಮಾನೋ ಹಿ ಕಃ ಸತ್ಸು ಪುರುಷಃ ಪರಿಕೀರ್ತಯೇತ್।
02042019c ಅನ್ಯಪೂರ್ವಾಂ ಸ್ತ್ರಿಯಂ ಜಾತು ತ್ವದನ್ಯೋ ಮಧುಸೂದನ।।
ಮಧುಸೂದನ! ನಿನ್ನನ್ನು ಹೊರತು ಇನ್ನು ಯಾವ ಗೌರವಾನ್ವಿತ ಪುರುಷನು ತನ್ನ ಸ್ತ್ರೀಯು ತನ್ನ ಮೊದಲು ಇನ್ನೊಬ್ಬನದ್ದಾಗಿದ್ದಳು ಎಂದು ಸತ್ಯಪುರುಷರಲ್ಲಿ ಹೇಳಿಕೊಳ್ಳುತ್ತಾನೆ?
02042020a ಕ್ಷಮ ವಾ ಯದಿ ತೇ ಶ್ರದ್ಧಾ ಮಾ ವಾ ಕೃಷ್ಣ ಮಮ ಕ್ಷಮ।
02042020c ಕ್ರುದ್ಧಾದ್ವಾಪಿ ಪ್ರಸನ್ನಾದ್ವಾ ಕಿಂ ಮೇ ತ್ವತ್ತೋ ಭವಿಷ್ಯತಿ।।
ಕೃಷ್ಣ! ಕ್ಷಮಿಸು ಅಥವಾ ನನ್ನ ಮೇಲೆ ನಂಬಿಕೆಯಿಲ್ಲದಿದ್ದರೆ ಕ್ಷಮಿಸಬೇಡ. ನಿನಗೆ ಸಿಟ್ಟಾದರೂ ಸಂತೋಷವಾದರೂ ನಿನ್ನಿಂದ ನನಗೇನಾಗುವುದಿದೆ?”
02042021a ತಥಾ ಬ್ರುವತ ಏವಾಸ್ಯ ಭಗವಾನ್ಮಧುಸೂದನಃ।
02042021c ವ್ಯಪಾಹರಚ್ಛಿರಃ ಕ್ರುದ್ಧಶ್ಚಕ್ರೇಣಾಮಿತ್ರಕರ್ಷಣಃ।
02042021e ಸ ಪಪಾತ ಮಹಾಬಾಹುರ್ವಜ್ರಾಹತ ಇವಾಚಲಃ।।
ಅವನು ಹೀಗೆ ಮತನಾಡುತ್ತಿದ್ದಾಗಲೇ ಅಮಿತ್ರಕರ್ಶಣ ಭಗವಾನ್ ಮಧುಸೂದನನು ಕೋಪಗೊಂಡು ಚಕ್ರದಿಂದ ಅವನ ಶಿರವನ್ನು ಕತ್ತರಿಸಿದನು. ಆ ಮಹಾಬಾಹುವು ವಜ್ರಹತ ಪರ್ವತದಂತೆ ಕೆಳಗೆ ಬಿದ್ದನು.
02042022a ತತಶ್ಚೇದಿಪತೇರ್ದೇಹಾತ್ತೇಜೋಽಗ್ರ್ಯಂ ದದೃಶುರ್ನೃಪಾಃ।
02042022c ಉತ್ಪತಂತಂ ಮಹಾರಾಜ ಗಗನಾದಿವ ಭಾಸ್ಕರಂ।।
02042023a ತತಃ ಕಮಲಪತ್ರಾಕ್ಷಂ ಕೃಷ್ಣಂ ಲೋಕನಮಸ್ಕೃತಂ।
02042023c ವವಂದೇ ತತ್ತದಾ ತೇಜೋ ವಿವೇಶ ಚ ನರಾಧಿಪ।।
ಮಹಾರಾಜ! ಆಗ ಚೇದಿಪತಿಯ ದೇಹದಿಂದ ಆಕಾಶದಲ್ಲಿ ಮೇಲೇರುತ್ತಿರುವ ಭಾಸ್ಕರನಂತೆ ಗುಹ್ಯ ತೇಜಸ್ಸೊಂದು ಹೊರಬಂದು ಆ ತೇಜಸ್ಸು ಕಮಲಪತ್ರಾಕ್ಷ, ಲೋಕನಮಸ್ಕೃತ, ಕೃಷ್ಣನನ್ನು ವಂದಿಸಿ ಅವನನ್ನು ಪ್ರವೇಶಿಸಿದುದನ್ನು ನೃಪರು ನೋಡಿದರು.
02042024a ತದದ್ಭುತಮಮನ್ಯಂತ ದೃಷ್ಟ್ವಾ ಸರ್ವೇ ಮಹೀಕ್ಷಿತಃ।
02042024c ಯದ್ವಿವೇಶ ಮಹಾಬಾಹುಂ ತತ್ತೇಜಃ ಪುರುಷೋತ್ತಮಂ।।
ಆ ತೇಜಸ್ಸು ಮಹಾಬಾಹು ಪುರುಷೋತ್ತಮನನ್ನು ಪ್ರವೇಶಿಸಿದ ಅದ್ಭುತವನ್ನು ಸರ್ವ ಮಹೀಕ್ಷಿತರೂ ಸಂಪೂರ್ಣವಾಗಿ ನೋಡಿದರು.
02042025a ಅನಭ್ರೇ ಪ್ರವವರ್ಷ ದ್ಯೌಃ ಪಪಾತ ಜ್ವಲಿತಾಶನಿಃ।
02042025c ಕೃಷ್ಣೇನ ನಿಹತೇ ಚೈದ್ಯೇ ಚಚಾಲ ಚ ವಸುಂಧರಾ।।
ಕೃಷ್ಣನು ಚೈದ್ಯನನ್ನು ವಧಿಸುತ್ತಿದ್ದಂತೆ ಮೋಡಗಳಿಲ್ಲದ ಆಕಾಶದಿಂದ ಮಳೆಸುರಿಯಿತು, ಜ್ವಲಿಸುವ ಮಿಂಚುಗಳು ಬಿದ್ದವು ಮತ್ತು ವಸುಂಧರೆಯು ಕಂಪಿಸಿದಳು.
02042026a ತತಃ ಕೇ ಚಿನ್ಮಹೀಪಾಲಾ ನಾಬ್ರುವಂಸ್ತತ್ರ ಕಿಂ ಚನ।
02042026c ಅತೀತವಾಕ್ಪಥೇ ಕಾಲೇ ಪ್ರೇಕ್ಷಮಾಣಾ ಜನಾರ್ದನಂ।।
ಅಲ್ಲಿ ಕೆಲವು ಮಹೀಪಾಲರು ಏನನ್ನೂ ಮಾತನಾಡದೇ ಇದ್ದರು. ಮತ್ತು ಈ ಅತೀತವಾಕ್ಪಥ (ಮೂಕರನ್ನಾಗಿಸುವ) ಕಾಲದಲ್ಲಿ ಜನಾರ್ದನನ್ನು ನೋಡುತ್ತಲೇ ಇದ್ದರು.
02042027a ಹಸ್ತೈರ್ಹಸ್ತಾಗ್ರಮಪರೇ ಪ್ರತ್ಯಪೀಷನ್ನಮರ್ಷಿತಾಃ।
02042027c ಅಪರೇ ದಶನೈರೋಷ್ಠಾನದಶನ್ಕ್ರೋಧಮೂರ್ಚಿತಾಃ।।
ಕೆಲವರು ಅಮರ್ಷಿತರಾಗಿ ಕೈಯಲ್ಲಿ ಕೈಯನ್ನು ತಿಕ್ಕಿದರು. ಇನ್ನು ಕೆಲವರು ಕ್ರೋಧಮೂರ್ಛಿತರಾಗಿ ತುಟಿಗಳನ್ನು ಕಚ್ಚಿದರು.
02042028a ರಹಸ್ತು ಕೇ ಚಿದ್ವಾರ್ಷ್ಣೇಯಂ ಪ್ರಶಶಂಸುರ್ನರಾಧಿಪಾಃ।
02042028c ಕೇ ಚಿದೇವ ತು ಸಮ್ರಬ್ಧಾ ಮಧ್ಯಸ್ಥಾಸ್ತ್ವಪರೇಽಭವನ್।।
ಕೆಲವು ನರಾಧಿಪರು ಗುಟ್ಟಿನಲ್ಲಿಯೇ ವಾರ್ಷ್ಣೇಯನನ್ನು ಪ್ರಶಂಸಿದರು. ಕೆಲವರು ಸಿಟ್ಟಿಗೆದ್ದರೆ ಇನ್ನು ಕೆಲವರು ಮಧ್ಯಸ್ಥರಾಗಿ ಉಳಿದರು.
02042029a ಪ್ರಹೃಷ್ಟಾಃ ಕೇಶವಂ ಜಗ್ಮುಃ ಸಂಸ್ತುವಂತೋ ಮಹರ್ಷಯಃ।
02042029c ಬ್ರಾಹ್ಮಣಾಶ್ಚ ಮಹಾತ್ಮಾನಃ ಪಾರ್ಥಿವಾಶ್ಚ ಮಹಾಬಲಾಃ।।
ಪ್ರಹೃಷ್ಟ ಮಹರ್ಷಿಗಳು, ಮಹಾತ್ಮ ಬ್ರಾಹ್ಮಣರು ಮತ್ತು ಮಹಾಬಲಿ ಪಾರ್ಥಿವರು ಕೇಶವನಿದ್ದಲ್ಲಿಗೆ ಹೋಗಿ ಅವನನ್ನು ಸ್ತುತಿಸಿದರು.
02042030a ಪಾಂಡವಸ್ತ್ವಬ್ರವೀದ್ಭ್ರಾತೄನ್ಸತ್ಕಾರೇಣ ಮಹೀಪತಿಂ।
02042030c ದಮಘೋಷಾತ್ಮಜಂ ವೀರಂ ಸಂಸಾಧಯತ ಮಾ ಚಿರಂ।
02042030e ತಥಾ ಚ ಕೃತವಂತಸ್ತೇ ಭ್ರಾತುರ್ವೈ ಶಾಸನಂ ತದಾ।।
ಪಾಂಡವನು ದಮಘೋಷಾತ್ಮಜ ಆ ವೀರ ಮಹೀಪತಿಯ ಮರಣಕ್ರಿಯೆಗಳನ್ನು ನೆರವೇರಿಸಲು ಹೇಳಿದನು. ಅವನ ಶಾಸನದಂತೆ ಭ್ರಾತೃಗಳು ನಡೆದುಕೊಂಡರು.
02042031a ಚೇದೀನಾಮಾಧಿಪತ್ಯೇ ಚ ಪುತ್ರಮಸ್ಯ ಮಹೀಪತಿಂ।
02042031c ಅಭ್ಯಷಿಂಚತ್ತದಾ ಪಾರ್ಥಃ ಸಹ ತೈರ್ವಸುಧಾಧಿಪೈಃ।।
ಪಾರ್ಥನು ಇತರ ವಸುಧಾಧಿಪರೊಡನೆ ಆ ಮಹೀಪತಿಯ ಪುತ್ರನನ್ನು ಚೇದಿಯ ಅಧಿಪತಿಯನ್ನಾಗಿ ಅಭಿಷೇಕಿಸಿದನು.
02042032a ತತಃ ಸ ಕುರುರಾಜಸ್ಯ ಕ್ರತುಃ ಸರ್ವಸಮೃದ್ಧಿಮಾನ್।
02042032c ಯೂನಾಂ ಪ್ರೀತಿಕರೋ ರಾಜನ್ಸಂಬಭೌ ವಿಪುಲೌಜಸಃ।।
ರಾಜನ್! ನಂತರ ಕುರುರಾಜನ ಸರ್ವಸಮೃದ್ಧ ಕ್ರತುವು ವಿಪುಲ ತೇಜಸ್ಸಿನಿಂದ ನಡೆಯಿತು ಮತ್ತು ಯುವಕರಲ್ಲಿ ಸಂತೋಷವನ್ನು ತಂದಿತು.
02042033a ಶಾಂತವಿಘ್ನಃ ಸುಖಾರಂಭಃ ಪ್ರಭೂತಧನಧಾನ್ಯವಾನ್।
02042033c ಅನ್ನವಾನ್ಬಹುಭಕ್ಷ್ಯಶ್ಚ ಕೇಶವೇನ ಸುರಕ್ಷಿತಃ।।
ಅದರ ವಿಘ್ನವು ಶಾಂತವಾಗಿ, ಸುಖದಿಂದ ಆರಂಭಗೊಂಡು, ಧನಧಾನ್ಯಗಳಿಂದ ಕೂಡಿ, ಅನ್ನ ಮತ್ತು ಬಹುಭಕ್ಷಗಳಿಂದ ಕೂಡಿ, ಕೇಶವನಿಂದ ಸುರಕ್ಷಿತಗೊಂಡಿತು.
02042034a ಸಮಾಪಯಾಮಾಸ ಚ ತಂ ರಾಜಸೂಯಂ ಮಹಾಕ್ರತುಂ।
02042034c ತಂ ತು ಯಜ್ಞಂ ಮಹಾಬಾಹುರಾ ಸಮಾಪ್ತೇರ್ಜನಾರ್ದನಃ।
02042034e ರರಕ್ಷ ಭಗವಾಂ ಶೌರಿಃ ಶಾಂಙ್ರಚಕ್ರಗದಾಧರಃ।।
ಮಹಾಬಾಹು ಜನಾರ್ದನನು ಆ ಮಹಾಕ್ರತು ರಾಜಸೂಯ ಯಜ್ಞವನ್ನು ಸಮಾಪ್ತಗೊಳಿಸಿ, ಶಾಂಙ್ರಚಕ್ರಗದಾಧರ ಶೌರಿಯು ಅವರನ್ನು ರಕ್ಷಿಸಿದನು.
02042035a ತತಸ್ತ್ವವಭೃಥಸ್ನಾತಂ ಧರ್ಮರಾಜಂ ಯುಧಿಷ್ಠಿರಂ।
02042035c ಸಮಸ್ತಂ ಪಾರ್ಥಿವಂ ಕ್ಷತ್ರಮಭಿಗಮ್ಯೇದಮಬ್ರವೀತ್।।
ಅವಭೃತನಾತ ಧರ್ಮರಾಜ ಯುಧಿಷ್ಠಿರನನ್ನು ಸಮಸ್ತ ಪಾರ್ಥಿವ ಕ್ಷತ್ರಿಯರು ಸಮೀಪಿಸಿ ಹೇಳಿದರು:
02042036a ದಿಷ್ಟ್ಯಾ ವರ್ಧಸಿ ಧರ್ಮಜ್ಞ ಸಾಮ್ರಾಜ್ಯಂ ಪ್ರಾಪ್ತವಾನ್ವಿಭೋ।
02042036c ಆಜಮೀಢಾಜಮೀಢಾನಾಂ ಯಶಃ ಸಂವರ್ಧಿತಂ ತ್ವಯಾ।
02042036e ಕರ್ಮಣೈತೇನ ರಾಜೇಂದ್ರ ಧರ್ಮಶ್ಚ ಸುಮಹಾನ್ಕೃತಃ।।
“ವಿಭೋ! ಧರ್ಮಜ್ಞ! ಅದೃಷ್ಟವಶಾತ್ ನೀನು ಸಾಮ್ರಾಜ್ಯವನ್ನು ಪಡೆದಿದ್ದೀಯೆ. ಆಜಮೀಢ! ನಿನ್ನಿಂದ ಆಜಮೀಢರ ಯಸಸ್ಸು ವೃದ್ಧಿಗೊಂಡಿದೆ. ರಾಜೇಂದ್ರ! ಧರ್ಮಜ್ಞ! ಈ ಕರ್ಮದಿಂದ ನೀನು ಅತ್ಯುನ್ನತ ಧರ್ಮವನ್ನು ಪ್ರತಿಪಾದಿಸಿದ್ದೀಯೆ!
02042037a ಆಪೃಚ್ಛಾಮೋ ನರವ್ಯಾಘ್ರ ಸರ್ವಕಾಮೈಃ ಸುಪೂಜಿತಾಃ।
02042037c ಸ್ವರಾಷ್ಟ್ರಾಣಿ ಗಮಿಷ್ಯಾಮಸ್ತದನುಜ್ಞಾತುಮರ್ಹಸಿ।।
ನರವ್ಯಾಘ್ರ! ನಾವು ಹಿಂದಿರುಗುತ್ತೇವೆ! ನಮಗಿಷ್ಟವಾದ ರೀತಿಯಲ್ಲಿ ನಾವು ಸರ್ವರೂ ಸುಪೂಜಿತರಾಗಿದ್ದೇವೆ. ನಾವು ನಮ್ಮ ರಾಷ್ಟ್ರಗಳಿಗೆ ಹೋಗುತ್ತಿದ್ದೇವೆ. ಅನುಜ್ಞೆಯನ್ನು ನೀಡಬೇಕು.”
02042038a ಶ್ರುತ್ವಾ ತು ವಚನಂ ರಾಜ್ಞಾಂ ಧರ್ಮರಾಜೋ ಯುಧಿಷ್ಠಿರಃ।
02042038c ಯಥಾರ್ಹಂ ಪೂಜ್ಯ ನೃಪತೀನ್ಭ್ರಾತೄನ್ಸರ್ವಾನುವಾಚ ಹ।।
ರಾಜರ ಈ ಮಾತುಗಳನ್ನು ಕೇಳಿದ ಧರ್ಮರಾಜ ಯುಧಿಷ್ಠಿರನು ನೃಪತಿಗಳನ್ನು ಯಥಾರ್ಹವಾಗಿ ಸತ್ಕರಿಸಿ ತನ್ನ ಸಹೋದರರೆಲ್ಲರಿಗೂ ಹೇಳಿದನು:
02042039a ರಾಜಾನಃ ಸರ್ವ ಏವೈತೇ ಪ್ರೀತ್ಯಾಸ್ಮಾನ್ಸಮುಪಾಗತಾಃ।
02042039c ಪ್ರಸ್ಥಿತಾಃ ಸ್ವಾನಿ ರಾಷ್ಟ್ರಾಣಿ ಮಾಮಾಪೃಚ್ಛ್ಯ ಪರಂತಪಾಃ।
02042039e ತೇಽನುವ್ರಜತ ಭದ್ರಂ ವೋ ವಿಷಯಾಂತಂ ನೃಪೋತ್ತಮಾನ್।।
“ಈ ಎಲ್ಲ ರಾಜರೂ ನಮ್ಮಮೇಲಿನ ಪ್ರೀತಿಯಿಂದ ಇಲ್ಲಿಗೆ ಬಂದಿದ್ದಾರೆ. ಈ ಪರಂತಪರು ನನ್ನನ್ನು ಬೀಳ್ಕೊಂಡು ತಮ್ಮ ತಮ್ಮ ರಾಷ್ಟ್ರಗಳಿಗೆ ಹೊರಟಿದ್ದಾರೆ. ನಿಮಗೆ ಮಂಗಳವಾಗಲಿ! ಈ ನೃಪೋತ್ತಮರನ್ನು ನಮ್ಮ ದೇಶದ ಗಡಿಯವರೆಗೆ ಬಿಟ್ಟು ಬನ್ನಿ!”
02042040a ಭ್ರಾತುರ್ವಚನಮಾಜ್ಞಾಯ ಪಾಂಡವಾ ಧರ್ಮಚಾರಿಣಃ।
02042040c ಯಥಾರ್ಹಂ ನೃಪಮುಖ್ಯಾಂಸ್ತಾನೇಕೈಕಂ ಸಮನುವ್ರಜನ್।।
ಧರ್ಮಚಾರಿ ಪಾಂಡವರು ಅಣ್ಣನ ವಚನವನ್ನು ನಡೆಸಿಕೊಟ್ಟರು ಮತ್ತು ನೃಪತಿಮುಖ್ಯರನ್ನು ಒಬ್ಬೊಬ್ಬರನ್ನಾಗಿ ಯಥಾರ್ಹವಾಗಿ ಕಳುಹಿಸಿಕೊಟ್ಟರು.
02042041a ವಿರಾಟಮನ್ವಯಾತ್ತೂರ್ಣಂ ಧೃಷ್ಟದ್ಯುಮ್ನಃ ಪ್ರತಾಪವಾನ್।
02042041c ಧನಂಜಯೋ ಯಜ್ಞಸೇನಂ ಮಹಾತ್ಮಾನಂ ಮಹಾರಥಃ।।
02042042a ಭೀಷ್ಮಂ ಚ ಧೃತರಾಷ್ಟ್ರಂ ಚ ಭೀಮಸೇನೋ ಮಹಾಬಲಃ।
02042042c ದ್ರೋಣಂ ಚ ಸಸುತಂ ವೀರಂ ಸಹದೇವೋ ಮಹಾರಥಃ।।
02042043a ನಕುಲಃ ಸುಬಲಂ ರಾಜನ್ಸಹಪುತ್ರಂ ಸಮನ್ವಯಾತ್।
02042043c ದ್ರೌಪದೇಯಾಃ ಸಸೌಭದ್ರಾಃ ಪಾರ್ವತೀಯಾನ್ಮಹೀಪತೀನ್।।
ಪ್ರತಾಪಿ ಧೃಷ್ಟದ್ಯುಮ್ನನು ವಿರಾಟನನ್ನು ಕಳುಹಿಸಿಕೊಟ್ಟನು, ಮಹಾರಥಿ ಧನಂಜಯನು ಮಹಾತ್ಮ ಯಜ್ಞಸೇನನನ್ನು, ಮಹಾಬಲಿ ಭೀಮಸೇನನು ಭೀಷ್ಮ ಮತ್ತು ದೃತರಾಷ್ಟ್ರರನ್ನು, ಮಹಾರಥಿ ವೀರ ಸಹದೇವನು ದ್ರೋಣ ಮತ್ತು ಅವನ ಪುತ್ರನನ್ನು, ನಕುಲನು ರಾಜ ಸುಬಲ ಮತ್ತು ಅವನ ಪುತ್ರನೊಂದಿಗೆ ಹೋದನು ಮತ್ತು ದ್ರೌಪದೇಯರು ಸೌಭದ್ರನೊಂದಿಗೆ ಪರ್ವತದ ಮಹೀಪತಿಗಳನ್ನು ಕಳುಹಿಸಿಕೊಟ್ಟರು.
02042044a ಅನ್ವಗಚ್ಛಂಸ್ತಥೈವಾನ್ಯಾನ್ ಕ್ಷತ್ರಿಯಾನ್ ಕ್ಷತ್ರಿಯರ್ಷಭಾಃ।
02042044c ಏವಂ ಸಂಪೂಜಿತಾಸ್ತೇ ವೈ ಜಗ್ಮುರ್ವಿಪ್ರಾಶ್ಚ ಸರ್ವಶಃ।।
ಹೀಗೆ ಕ್ಷತ್ರಿಯರ್ಷಭರು ಅನ್ಯ ಕ್ಷತ್ರಿಯರನ್ನೂ ಅನುಸರಿಸಿ ಹೋದರು. ಸರ್ವ ವಿಪ್ರರೂ ಕೂಡ ಹೀಗೆ ಸಂಪೂಜಿತರಾಗಿ ಹಿಂದಿರುಗಿದರು.
02042045a ಗತೇಷು ಪಾರ್ಥಿವೇಂದ್ರೇಷು ಸರ್ವೇಷು ಭರತರ್ಷಭ।
02042045c ಯುಧಿಷ್ಠಿರಮುವಾಚೇದಂ ವಾಸುದೇವಃ ಪ್ರತಾಪವಾನ್।।
ಭರತರ್ಷಭ! ಸರ್ವ ಪಾರ್ಥಿವೇಂದ್ರರು ಹೊರಟು ಹೋದ ನಂತರ ಪ್ರತಾಪಿ ವಾಸುದೇವನು ಯುಧಿಷ್ಠಿರನಿಗೆ ಹೇಳಿದನು:
02042046a ಆಪೃಚ್ಛೇ ತ್ವಾಂ ಗಮಿಷ್ಯಾಮಿ ದ್ವಾರಕಾಂ ಕುರುನಂದನ।
02042046c ರಾಜಸೂಯಂ ಕ್ರತುಶ್ರೇಷ್ಠಂ ದಿಷ್ಟ್ಯಾ ತ್ವಂ ಪ್ರಾಪ್ತವಾನಸಿ।।
“ಕುರುನಂದನ! ನಿನ್ನನ್ನು ಬೀಳ್ಕೊಂಡು ನಾನು ದ್ವಾರಕೆಗೆ ಹಿಂದಿರುಗುತ್ತೇನೆ. ಅದೃಷ್ಠವಶಾತ್ ನೀನು ಕ್ರತುಶ್ರೇಷ್ಠ ರಾಜಸೂಯವನ್ನು ಪೂರೈಸಿದ್ದೀಯೆ.”
02042047a ತಮುವಾಚೈವಮುಕ್ತಸ್ತು ಧರ್ಮರಾಣ್ಮಧುಸೂದನಂ।
02042047c ತವ ಪ್ರಸಾದಾದ್ಗೋವಿಂದ ಪ್ರಾಪ್ತವಾನಸ್ಮಿ ವೈ ಕ್ರತುಂ।।
ಈ ಮಾತುಗಳಿಗೆ ಧರ್ಮರಾಜನು ಮಧುಸೂಧನನಿಗೆ ಹೇಳಿದನು: “ಗೋವಿಂದ! ನಿನ್ನ ಪ್ರಸಾದದಿಂದಲೇ ನಾನು ಈ ಕ್ರತುವನ್ನು ಪೂರೈಸಲು ಶಕ್ಯನಾಗಿದ್ದೇನೆ.
02042048a ಸಮಸ್ತಂ ಪಾರ್ಥಿವಂ ಕ್ಷತ್ರಂ ತ್ವತ್ಪ್ರಸಾದಾದ್ವಶಾನುಗಂ।
02042048c ಉಪಾದಾಯ ಬಲಿಂ ಮುಖ್ಯಂ ಮಾಮೇವ ಸಮುಪಸ್ಥಿತಂ।।
ನಿನ್ನ ಅನುಗ್ರಹದಿಂದ ಸಮಸ್ತ ಕ್ಷತ್ರಿಯ ಪಾರ್ಥಿವರೂ ನನ್ನ ವಶದಲ್ಲಿ ಬಂದು, ಕಪ್ಪ ಕಾಣಿಕೆಗಳನ್ನು ತಂದು ನನ್ನನು ಮುಖ್ಯನನ್ನಾಗಿ ಕಂಡಿದ್ದಾರೆ.
02042049a ನ ವಯಂ ತ್ವಾಂ ಋತೇ ವೀರ ರಂಸ್ಯಾಮೇಹ ಕಥಂ ಚನ।
02042049c ಅವಶ್ಯಂ ಚಾಪಿ ಗಂತವ್ಯಾ ತ್ವಯಾ ದ್ವಾರವತೀ ಪುರೀ।।
ವೀರ! ನೀನಿಲ್ಲದೇ ಎಂದೂ ನಾವು ಸಂತೋಷವನ್ನು ಹೊಂದುವುದಿಲ್ಲ. ಆದರೂ ನೀನು ನಿನ್ನ ದ್ವಾರವತೀ ಪುರಿಗೆ ಅವಶ್ಯವಾಗಿಯೂ ಹೋಗಬೇಕು.”
02042050a ಏವಮುಕ್ತಃ ಸ ಧರ್ಮಾತ್ಮಾ ಯುಧಿಷ್ಠಿರಸಹಾಯವಾನ್।
02042050c ಅಭಿಗಮ್ಯಾಬ್ರವೀತ್ಪ್ರೀತಃ ಪೃಥಾಂ ಪೃಥುಯಶಾ ಹರಿಃ।।
ಇದನ್ನು ಕೇಳಿ ಧರ್ಮಾತ್ಮ ಪೃಥುಯಶ ಹರಿಯು ಯುಧಿಷ್ಠಿರನನ್ನೊಡಗೊಂಡು ಪೃಥೆಯಲ್ಲಿಗೆ ಹೋಗಿ ಪ್ರೀತಿಯಿಂದ ಹೇಳಿದನು:
02042051a ಸಾಮ್ರಾಜ್ಯಂ ಸಮನುಪ್ರಾಪ್ತಾಃ ಪುತ್ರಾಸ್ತೇಽದ್ಯ ಪಿತೃಷ್ವಸಃ।
02042051c ಸಿದ್ಧಾರ್ಥಾ ವಸುಮಂತಶ್ಚ ಸಾ ತ್ವಂ ಪ್ರೀತಿಮವಾಪ್ನುಹಿ।।
“ಅತ್ತೆ! ನಿನ್ನ ಮಕ್ಕಳು ಇಂದು ಸಾಮ್ರಾಜ್ಯವನ್ನು ಒಳ್ಳೆಯದಾಗಿ ಪಡೆದು ಸಿದ್ಧಾರ್ಥರೂ ವಸುಮಂತರೂ ಆಗಿದ್ದಾರೆ. ನಿನಗೆ ಸಂತೋಷವಾಗಿರಬಹುದು.
02042052a ಅನುಜ್ಞಾತಸ್ತ್ವಯಾ ಚಾಹಂ ದ್ವಾರಕಾಂ ಗಂತುಮುತ್ಸಹೇ।
02042052c ಸುಭದ್ರಾಂ ದ್ರೌಪದೀಂ ಚೈವ ಸಭಾಜಯತ ಕೇಶವಃ।।
02042053a ನಿಷ್ಕ್ರಂಯಾಂತಃಪುರಾಚ್ಚೈವ ಯುಧಿಷ್ಠಿರಸಹಾಯವಾನ್।
02042053c ಸ್ನಾತಶ್ಚ ಕೃತಜಪ್ಯಶ್ಚ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ।।
02042054a ತತೋ ಮೇಘವರಪ್ರಖ್ಯಂ ಸ್ಯಂದನಂ ವೈ ಸುಕಲ್ಪಿತಂ।
02042054c ಯೋಜಯಿತ್ವಾ ಮಹಾರಾಜ ದಾರುಕಃ ಪ್ರತ್ಯುಪಸ್ಥಿತಃ।।
ನಿನ್ನಿಂದ ಅನುಜ್ಞೆಯನ್ನು ಪಡೆದು ದ್ವಾರಕೆಗೆ ಹೋಗಲು ಉತ್ಸುಕನಾಗಿದ್ದೇನೆ.” ಸುಭದ್ರೆ-ದ್ರೌಪದಿಯರನ್ನೂ ಕೇಶವನು ಭೇಟಿ ಮಾಡಿ, ಯುಧಿಷ್ಠಿರನ ಸಹಿತ ಅಂತಃಪುರವನ್ನು ಬಿಟ್ಟನು. ಮಹಾರಾಜ! ಸ್ನಾನಮುಗಿಸಿ, ಜಪವನ್ನು ಮಾಡಿ, ಬ್ರಾಹ್ಮಣರಿಂದ ಸ್ವಸ್ತಿವಾಚಗಳನ್ನು ಕೇಳಿದ ನಂತರ ಸುಂದರ ಮೋಡದಂತೆ ಕಾಣುತ್ತಿದ್ದ ಸುಕಲ್ಪಿತ ರಥವನ್ನು ದಾರುಕನು ಕಟ್ಟಿ ಕೃಷ್ಣನಿದ್ದಲ್ಲಿಗೆ ಬಂದನು.
02042055a ಉಪಸ್ಥಿತಂ ರಥಂ ದೃಷ್ಟ್ವಾ ತಾರ್ಕ್ಷ್ಯಪ್ರವರಕೇತನಂ।
02042055c ಪ್ರದಕ್ಷಿಣಮುಪಾವೃತ್ಯ ಸಮಾರುಹ್ಯ ಮಹಾಮನಾಃ।
02042055e ಪ್ರಯಯೌ ಪುಂಡರೀಕಾಕ್ಷಸ್ತತೋ ದ್ವಾರವತೀಂ ಪುರೀಂ।।
ತಾರ್ಕ್ಷಪ್ರವರಕೇತನವಾದ ರಥವು ಉಪಸ್ಥಿತವಿದ್ದುದನ್ನು ನೋಡಿ ಮಹಾತ್ಮನು ಪ್ರತಕ್ಷಿಣೆಮಾಡಿ ಮೇಲೇರಿ, ಪುಂಡರೀಕಾಕ್ಷನು ದ್ವಾರವತೀ ಪುರಕ್ಕೆ ಪಯಣಿಸಿದನು.
02042056a ತಂ ಪದ್ಭ್ಯಾಮನುವವ್ರಾಜ ಧರ್ಮರಾಜೋ ಯುಧಿಷ್ಠಿರಃ।
02042056c ಭ್ರಾತೃಭಿಃ ಸಹಿತಃ ಶ್ರೀಮಾನ್ವಾಸುದೇವಂ ಮಹಾಬಲಂ।।
ಧರ್ಮರಾಜ ಯುಧಿಷ್ಠಿರನು ಭ್ರಾತೃಗಳ ಸಹಿತ ಕಾಲ್ನಡುಗೆಯಲ್ಲಿ ಶ್ರೀಮಾನ್ ವಾಸುದೇವ ಮಹಾಬಲಿಯನ್ನು ಹಿಂಬಾಲಿಸಿದನು.
02042057a ತತೋ ಮುಹೂರ್ತಂ ಸಂಗೃಹ್ಯ ಸ್ಯಂದನಪ್ರವರಂ ಹರಿಃ।
02042057c ಅಬ್ರವೀತ್ಪುಂಡರೀಕಾಕ್ಷಃ ಕುಂತೀಪುತ್ರಂ ಯುಧಿಷ್ಠಿರಂ।।
ಪುಂಡರೀಕಾಕ್ಷ ಸ್ಯಂದನಪ್ರವರ ಹರಿಯು ಸ್ವಲ್ಪ ಸಮಯ ರಥವನ್ನು ನಿಲ್ಲಿಸಿ ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿದನು:
02042058a ಅಪ್ರಮತ್ತಃ ಸ್ಥಿತೋ ನಿತ್ಯಂ ಪ್ರಜಾಃ ಪಾಹಿ ವಿಶಾಂ ಪತೇ।
02042058c ಪರ್ಜನ್ಯಮಿವ ಭೂತಾನಿ ಮಹಾದ್ರುಮಮಿವಾಂಡಜಾಃ।
02042058e ಬಾಂಧವಾಸ್ತ್ವೋಪಜೀವಂತು ಸಹಸ್ರಾಕ್ಷಮಿವಾಮರಾಃ।।
“ವಿಶಾಂಪತೇ! ಪರ್ಜನ್ಯನು ಭೂತಗಳನ್ನು ಮತ್ತು ಮಹಾದ್ರುಮವು ಪಕ್ಷಿಗಳನ್ನು ಹೇಗೋ ಹಾಗೆ ನಿತ್ಯವೂ ಅಪ್ರಮತ್ತನಾಗಿದ್ದು ಪ್ರಜೆಗಳನ್ನು ಪಾಲಿಸು. ಅಮರರು ಸಹಸ್ರಾಕ್ಷನಲ್ಲಿರುವಂತೆ ನಿನ್ನ ಬಾಂಧವರು ನಿನ್ನೊಂದಿಗೆ ಉಪಜೀವಿಸಲಿ.”
02042059a ಕೃತ್ವಾ ಪರಸ್ಪರೇಣೈವಂ ಸಂವಿದಂ ಕೃಷ್ಣಪಾಂಡವೌ।
02042059c ಅನ್ಯೋನ್ಯಂ ಸಮನುಜ್ಞಾಪ್ಯ ಜಗ್ಮತುಃ ಸ್ವಗೃಹಾನ್ ಪ್ರತಿ।।
ಪರಸ್ಪರರಲ್ಲಿ ಸಂವಿದವನ್ನು ಮಾಡಿಕೊಂಡು ಕೃಷ್ಣಪಾಂಡವರಿಬ್ಬರೂ ಅನ್ಯೋನ್ಯರಿಂದ ಬೀಳ್ಕೊಂಡು ತಮ್ಮ ತಮ್ಮ ಮನೆಗಳ ಕಡೆ ಹೊರಟರು.
02042060a ಗತೇ ದ್ವಾರವತೀಂ ಕೃಷ್ಣೇ ಸಾತ್ವತಪ್ರವರೇ ನೃಪ।
02042060c ಏಕೋ ದುರ್ಯೋಧನೋ ರಾಜಾ ಶಕುನಿಶ್ಚಾಪಿ ಸೌಬಲಃ।
02042060e ತಸ್ಯಾಂ ಸಭಾಯಾಂ ದಿವ್ಯಾಯಾಮೂಷತುಸ್ತೌ ನರರ್ಷಭೌ।।
ನೃಪ! ಸಾತ್ವತಪ್ರವರ ಕೃಷ್ಣನು ದ್ವಾರವತಿಗೆ ಹೋಗಲು ಅವನ ದಿವ್ಯ ಸಭೆಯಲ್ಲಿ ರಾಜಾ ದುರ್ಯೋಧನ ಮತ್ತು ಸೌಬಲ ಶಕುನಿ - ಈ ನರರ್ಷಭರಿಬ್ಬರು ಉಳಿದುಕೊಂಡರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಶಿಶುಪಾಲವಧೇ ದ್ವಾಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಶಿಶುಪಾಲವಧ ಎನ್ನುವ ನಲವತ್ತೆರಡನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-1/18, ಉಪಪರ್ವಗಳು-26/100, ಅಧ್ಯಾಯಗಳು-267/1995, ಶ್ಲೋಕಗಳು-8614/73784