041 ಭೀಷ್ಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಶಿಶುಪಾಲವಧ ಪರ್ವ

ಅಧ್ಯಾಯ 41

ಸಾರ

ಶಿಶುಪಾಲನು ಪುನಃ ಭೀಷ್ಮನನ್ನು ಹೀಯಾಳಿಸುವುದು (1-23). ಕೃಷ್ಣನು ಶಿಶುಪಾಲನನ್ನು ಅಂತ್ಯಗೊಳಿಸಲಿ ಎಂದು ಭೀಷ್ಮನು ಕೇಳಿಕೊಳ್ಳುವುದು (24-33).

02041001 ಭೀಷ್ಮ ಉವಾಚ।
02041001a ನೈಷಾ ಚೇದಿಪತೇರ್ಬುದ್ಧಿರ್ಯಯಾ ತ್ವಾಹ್ವಯತೇಽಚ್ಯುತಂ।
02041001c ನೂನಮೇಷ ಜಗದ್ಭರ್ತುಃ ಕೃಷ್ಣಸ್ಯೈವ ವಿನಿಶ್ಚಯಃ।।

ಭೀಷ್ಮನು ಹೇಳಿದನು: “ಅಚ್ಯುತನನ್ನು ಕೆರಳಿಸುವ ಇದು ಚೇದಿಪತಿಯ ಅವನ ಬುದ್ಧಿಯಿಂದಲ್ಲ. ನಿಶ್ಚಿತವಾಗಿಯೂ ಇದು ಜಗದ್ಭರ್ತು ಕೃಷ್ಣನ ನಿರ್ಧಾರವೇ ಆಗಿರಬೇಕು.

02041002a ಕೋ ಹಿ ಮಾಂ ಭೀಮಸೇನಾದ್ಯ ಕ್ಷಿತಾವರ್ಹತಿ ಪಾರ್ಥಿವಃ।
02041002c ಕ್ಷೇಪ್ತುಂ ದೈವಪರೀತಾತ್ಮಾ ಯಥೈಷ ಕುಲಪಾಂಸನಃ।।

ಭೀಮಸೇನ! ಈ ಕುಲಪಾಂಸನನನ್ನು ಬಿಟ್ಟು ದೈವಪರಿತಾತ್ಮನಲ್ಲದ ಭೂಮಿಯ ಮೇಲಿರುವ ಬೇರೆ ಯಾವ ಪಾರ್ಥಿವನು ಈ ರೀತಿ ನನ್ನನ್ನು ಹೀಯಾಳಿಸಲು ಸಾಧ್ಯ?

02041003a ಏಷ ಹ್ಯಸ್ಯ ಮಹಾಬಾಹೋ ತೇಜೋಂಶಶ್ಚ ಹರೇರ್ಧ್ರುವಂ।
02041003c ತಮೇವ ಪುನರಾದಾತುಮಿಚ್ಛತ್ಪೃಥುಯಶಾ ಹರಿಃ।।

ಇವನು ಮಹಾಬಾಹು ಹರಿಯ ತೇಜಸ್ಸಿನ ಒಂದು ಅಂಶ ಮತ್ತು ಪೃಥುಯಶ ಹರಿಯು ಅದನ್ನು ಪುನಃ ಹಿಂದೆಗೆದುಕೊಳ್ಳಲು ಬಯಸುತ್ತಾನಿರಬಹುದು.

02041004a ಯೇನೈಷ ಕುರುಶಾರ್ದೂಲ ಶಾರ್ದೂಲ ಇವ ಚೇದಿರಾಟ್।
02041004c ಗರ್ಜತ್ಯತೀವ ದುರ್ಬುದ್ಧಿಃ ಸರ್ವಾನಸ್ಮಾನಚಿಂತಯನ್।।

ಕುರುಶಾರ್ದೂಲ! ಆದುದರಿಂದಲೇ ಈ ದುರ್ಬುದ್ಧಿ ಚೇದಿರಾಜನು ನಮ್ಮೆಲ್ಲರ ಕುರಿತು ಯೋಚಿಸದೇ ಶಾರ್ದೂಲದಂತೆ ಗರ್ಜಿಸುತ್ತಿದ್ದಾನೆ.””

02041005 ವೈಶಂಪಾಯನ ಉವಾಚ।
02041005a ತತೋ ನ ಮಮೃಷೇ ಚೈದ್ಯಸ್ತದ್ಭೀಷ್ಮವಚನಂ ತದಾ।
02041005c ಉವಾಚ ಚೈನಂ ಸಂಕ್ರುದ್ಧಃ ಪುನರ್ಭೀಷ್ಮಮಥೋತ್ತರಂ।।

ವೈಶಂಪಾಯನನು ಹೇಳಿದನು: “ಆಗ ಚೈದ್ಯನು ಭೀಷ್ಮನ ಮಾತುಗಳಿಂದ ತತ್ತರಿಸದೇ ಸಂಕೃದ್ಧನಾಗಿ ಬೀಷ್ಮನಿಗೆ ಪುನಃ ಉತ್ತರಿಸಿದನು:

02041006 ಶಿಶುಪಾಲ ಉವಾಚ।
02041006a ದ್ವಿಷತಾಂ ನೋಽಸ್ತು ಭೀಷ್ಮೈಷ ಪ್ರಭಾವಃ ಕೇಶವಸ್ಯ ಯಃ।
02041006c ಯಸ್ಯ ಸಂಸ್ತವವಕ್ತಾ ತ್ವಂ ಬಂಡಿವತ್ಸತತೋತ್ಥಿತಃ।।

ಶಿಶುಪಾಲನು ಹೇಳಿದನು: “ಭೀಷ್ಮ! ನೀನು ಸ್ತುತಿಸಿದ ಕೇಶವನ ಪ್ರಭಾವವು ನಮ್ಮ ದ್ವೇಷಿಗಳದ್ದಿರಲಿ. ನೀನು ಸತತ ಅವನ ಹೊಗಳುಭಟ್ಟನಾಗಿದ್ದೀಯೆ.

02041007a ಸಂಸ್ತವಾಯ ಮನೋ ಭೀಷ್ಮ ಪರೇಷಾಂ ರಮತೇ ಸದಾ।
02041007c ಯದಿ ಸಂಸ್ತೌಷಿ ರಾಜ್ಞಸ್ತ್ವಮಿಮಂ ಹಿತ್ವಾ ಜನಾರ್ದನಂ।।

ಒಂದುವೇಳೆ ನಿನಗೆ ಸದಾ ಇನ್ನೊಬ್ಬರನ್ನು ಹೊಗಳುವುದರಲ್ಲಿಯೇ ಸಂತೋಷ ದೊರೆಯುತ್ತದೆಯಾದರೆ ಜನಾರ್ದನನನ್ನು ಬಿಟ್ಟು ಬೇರೆ ಯಾರಾದರೂ ನಿಜ ರಾಜರನ್ನು ಹೊಗಳು.

02041008a ದರದಂ ಸ್ತುಹಿ ಬಾಹ್ಲೀಕಮಿಮಂ ಪಾರ್ಥಿವಸತ್ತಮಂ।
02041008c ಜಾಯಮಾನೇನ ಯೇನೇಯಮಭವದ್ದಾರಿತಾ ಮಹೀ।।

ಹುಟ್ಟುತ್ತಲೇ ಮಹಿಯನ್ನು ತನ್ನದಾಗಿಸಿಕೊಂಡ ಈ ಪಾರ್ಥಿವಸತ್ತಮ ದರದ ಬಾಹ್ಲೀಕನನ್ನು ಸ್ತುತಿಸು.

02041009a ವಂಗಾಂಗವಿಷಯಾಧ್ಯಕ್ಷಂ ಸಹಸ್ರಾಕ್ಷಸಮಂ ಬಲೇ।
02041009c ಸ್ತುಹಿ ಕರ್ಣಮಿಮಂ ಭೀಷ್ಮ ಮಹಾಚಾಪವಿಕರ್ಷಣಂ।।

ಭೀಷ್ಮ! ವಂಗಾಂಗದೇಶಗಳ ಅಧ್ಯಕ್ಷ, ಬಲದಲ್ಲಿ ಸಹಸ್ರಾಕ್ಷನ ಸಮ, ಮಹಾಚಾಪವಿಕರ್ಷಣ ಈ ಕರ್ಣನನ್ನು ಸ್ತುತಿಸು.

02041010a ದ್ರೋಣಂ ದ್ರೌಣಿಂ ಚ ಸಾಧು ತ್ವಂ ಪಿತಾಪುತ್ರೌ ಮಹಾರಥೌ।
02041010c ಸ್ತುಹಿ ಸ್ತುತ್ಯಾವಿಮೌ ಭೀಷ್ಮ ಸತತಂ ದ್ವಿಜಸತ್ತಮೌ।।

ಭೀಷ್ಮ! ಮಹಾರಥಿ, ಸತತವೂ ದ್ವಿಜಸತ್ತಮ ಸ್ತುತಿಗಳಿಗರ್ಹ ಪಿತ-ಪುತ್ರ ದ್ರೋಣ-ದ್ರೌಣಿಯರನ್ನು ಸ್ತುತಿಸು.

02041011a ಯಯೋರನ್ಯತರೋ ಭೀಷ್ಮ ಸಂಕ್ರುದ್ಧಃ ಸಚರಾಚರಾಂ।
02041011c ಇಮಾಂ ವಸುಮತೀಂ ಕುರ್ಯಾದಶೇಷಾಮಿತಿ ಮೇ ಮತಿಃ।।

ಭೀಷ್ಮ! ಅವರಲ್ಲಿ ಯಾರೊಬ್ಬರೂ ಸಂಕೃದ್ಧರಾದರೆ ಈ ವಸುಮತಿಯನ್ನು ಸಚರಾಚರಗಳ ಅಶೇಷಮತಿಯನ್ನಾಗಿ ಮಾಡುತ್ತಾರೆ ಎಂದು ನನ್ನ ಅಭಿಪ್ರಾಯ.

02041012a ದ್ರೋಣಸ್ಯ ಹಿ ಸಮಂ ಯುದ್ಧೇ ನ ಪಶ್ಯಾಮಿ ನರಾಧಿಪಂ।
02041012c ಅಶ್ವತ್ಥಾಂನಸ್ತಥಾ ಭೀಷ್ಮ ನ ಚೈತೌ ಸ್ತೋತುಮಿಚ್ಛಸಿ।।

ಭೀಷ್ಮ! ಯುದ್ಧದಲ್ಲಿ ದ್ರೋಣನ ಅಥವಾ ಅಶ್ವತ್ಥಾಮನ ಸರಿಸಮ ನರಾಧಿಪನನ್ನು ಕಾಣಲಾರೆ. ಆದರೂ ನೀನು ಇವರಿಬ್ಬರನ್ನು ಹೊಗಳಲು ಬಯಸುತ್ತಿಲ್ಲವಲ್ಲ!

02041013a ಶಲ್ಯಾದೀನಪಿ ಕಸ್ಮಾತ್ತ್ವಂ ನ ಸ್ತೌಷಿ ವಸುಧಾಧಿಪಾನ್।
02041013c ಸ್ತವಾಯ ಯದಿ ತೇ ಬುದ್ಧಿರ್ವರ್ತತೇ ಭೀಷ್ಮ ಸರ್ವದಾ।।

ಭೀಷ್ಮ! ನಿನ್ನ ಬುದ್ಧಿಯು ಎಲ್ಲರ ಹೊಗಳಿಕೆಯಲ್ಲಿ ನಿರತವಾಗಿದ್ದರೆ ನೀನು ಶಲ್ಯ ಮೊದಲಾದ ವಸುಧಾಧಿಪರನ್ನು ಏಕೆ ಹೊಗಳುತ್ತಿಲ್ಲ?

02041014a ಕಿಂ ಹಿ ಶಕ್ಯಂ ಮಯಾ ಕರ್ತುಂ ಯದ್ವೃದ್ಧಾನಾಂ ತ್ವಯಾ ನೃಪ।
02041014c ಪುರಾ ಕಥಯತಾಂ ನೂನಂ ನ ಶ್ರುತಂ ಧರ್ಮವಾದಿನಾಂ।।

ನೃಪ! ನೀನು ಹಿಂದೆ ಧರ್ಮವಾದಿಗಳು ಹೇಳಿಕೊಟ್ಟವುಗಳನ್ನು ಕೇಳದಿದ್ದರೆ ನಾನು ತಾನೆ ಏನು ಮಾಡಬಲ್ಲೆ?

02041015a ಆತ್ಮನಿಂದಾತ್ಮಪೂಜಾ ಚ ಪರನಿಂದಾ ಪರಸ್ತವಃ।
02041015c ಅನಾಚರಿತಮಾರ್ಯಾಣಾಂ ವೃತ್ತಮೇತಚ್ಚತುರ್ವಿಧಂ।।

ಆರ್ಯನೆನಿಸಿಕೊಂಡವನು ಆತ್ಮನಿಂದೆ, ಆತ್ಮಪೂಜೆ, ಪರನಿಂದನೆ, ಪರಸ್ತುತಿ ಈ ನಾಲ್ಕನ್ನೂ ಮಾಡುವುದಿಲ್ಲ.

02041016a ಯದಸ್ತವ್ಯಮಿಮಂ ಶಶ್ವನ್ಮೋಹಾತ್ಸಂಸ್ತೌಷಿ ಭಕ್ತಿತಃ।
02041016c ಕೇಶವಂ ತಚ್ಚ ತೇ ಭೀಷ್ಮ ನ ಕಶ್ಚಿದನುಮನ್ಯತೇ।।

ಭೀಷ್ಮ! ನಿನ್ನ ಮೋಹದಿಂದಲೋ ಭಕ್ತಿಯಿಂದಲೋ ಈ ಕೇಶವನನ್ನು ಸ್ತುತಿಸುತ್ತೀಯಾದರೆ ಸ್ತುತಿಸು. ಆದರೆ ಬೇರೆ ಯಾರೂ ಇದಕ್ಕೆ ಒಪ್ಪಿಕೊಳ್ಳುವುದಿಲ್ಲ.

02041017a ಕಥಂ ಭೋಜಸ್ಯ ಪುರುಷೇ ವರ್ಗಪಾಲೇ ದುರಾತ್ಮನಿ।
02041017c ಸಮಾವೇಶಯಸೇ ಸರ್ವಂ ಜಗತ್ಕೇವಲಕಾಮ್ಯಯಾ।।

ನಿನ್ನ ವೈಯಕ್ತಿಕ ಬಯಕೆಯಿಂದಾಗಿ ಭೋಜನ ಬಾಗಿಲು ಕಾವಲುಗಾರನಾದ ಈ ದುರಾತ್ಮನಿಗಾಗಿ ನೀನು ಹೇಗೆ ತಾನೆ ಸರ್ವ ಜಗತ್ತನ್ನೂ ಕೇವಲಗೊಳಿಸಬಲ್ಲೆ?

02041018a ಅಥ ವೈಷಾ ನ ತೇ ಭಕ್ತಿಃ ಪಕೃತಿಂ ಯಾತಿ ಭಾರತ।
02041018c ಮಯೈವ ಕಥಿತಂ ಪೂರ್ವಂ ಭೂಲಿಂಗಶಕುನಿರ್ಯಥಾ।।

ಭಾರತ! ಅಥವಾ ಈ ಭಕ್ತಿಯು ನಿನ್ನ ಪ್ರಕೃತಿಯಾಗಿರದಿದ್ದರೆ - ನೀನು ಭೂಲಿಂಗ ಪಕ್ಷಿಯನ್ನು ಹೋಲುತ್ತೀಯೆ ಎಂದು ಮೊದಲೇ ನಿನಗೆ ನಾನು ಹೇಳಿರಲಿಲ್ಲವೇ?

02041019a ಭೂಲಿಂಗಶಕುನಿರ್ನಾಮ ಪಾರ್ಶ್ವೇ ಹಿಮವತಃ ಪರೇ।
02041019c ಭೀಷ್ಮ ತಸ್ಯಾಃ ಸದಾ ವಾಚಃ ಶ್ರೂಯಂತೇಽರ್ಥವಿಗರ್ಹಿತಾಃ।।

ಭೀಷ್ಮ! ಭೂಲಿಂಗ ಎಂಬ ಹೆಸರಿನ ಪಕ್ಷಿಯು ಹಿಮಾಲಯದ ಹತ್ತಿರದಲ್ಲಿರುತ್ತದೆ. ಅದರ ಮಾತುಗಳು ಸದಾ ಅರ್ಥಹೀನವಾಗಿರುತ್ತವೆ ಎಂದು ಕೇಳಿದ್ದೇವೆ.

02041020a ಮಾ ಸಾಹಸಮಿತೀದಂ ಸಾ ಸತತಂ ವಾಶತೇ ಕಿಲ।
02041020c ಸಾಹಸಂ ಚಾತ್ಮನಾತೀವ ಚರಂತೀ ನಾವಬುಧ್ಯತೇ।।

ಅದು ದುಡುಕಬೇಡ ಎಂದು ಸದಾ ಉಪದೇಶನೀಡುತ್ತಿರುತ್ತದೆ. ಆದರೆ ದಡ್ಡತನದಿಂದ ತಾನೇ ದುಡುಕುತ್ತಾ ಜೀವಿಸುತ್ತದೆ.

02041021a ಸಾ ಹಿ ಮಾಂಸಾರ್ಗಲಂ ಭೀಷ್ಮ ಮುಖಾತ್ಸಿಂಹಸ್ಯ ಖಾದತಃ।
02041021c ದಂತಾಂತರವಿಲಗ್ನಂ ಯತ್ತದಾದತ್ತೇಽಲ್ಪಚೇತನಾ।।

ಭೀಷ್ಮ! ಯಾಕೆಂದರೆ ಈ ಅಲ್ಪಚೇತನ ಪಕ್ಷಿಯು ತಿನ್ನುತ್ತಿರುವ ಸಿಂಹದ ಮುಖದಮೇಲೆ ತಗಲಿರುವ ಮತ್ತು ಹಲ್ಲುಗಳ ನಡುವೆ ಸಿಲುಕಿಕೊಂಡಿರುವ ಮಾಂಸದ ತುಂಡುಗಳನ್ನು ತಿನ್ನುತ್ತದೆ.

02041022a ಇಚ್ಛತಃ ಸಾ ಹಿ ಸಿಂಹಸ್ಯ ಭೀಷ್ಮ ಜೀವತ್ಯಸಂಶಯಂ।
02041022c ತದ್ವತ್ತ್ವಮಪ್ಯಧರ್ಮಜ್ಞ ಸದಾ ವಾಚಃ ಪ್ರಭಾಷಸೇ।।

ಭೀಷ್ಮ! ಅದು ಸಿಂಹದ ಇಚ್ಛೆಯಂತೆ ಜೀವಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅದರಂತೆ ನೀನೂ ಕೂಡ ಸದಾ ಅಧರ್ಮಜ್ಞನ ಮಾತುಗಳನ್ನಾಡುತ್ತಿದ್ದೀಯೆ.

02041023a ಇಚ್ಛತಾಂ ಪಾರ್ಥಿವೇಂದ್ರಾಣಾಂ ಭೀಷ್ಮ ಜೀವಸ್ಯಸಂಶಯಂ।
02041023c ಲೋಕವಿದ್ವಿಷ್ಟಕರ್ಮಾ ಹಿ ನಾನ್ಯೋಽಸ್ತಿ ಭವತಾ ಸಮಃ।।

ಭೀಷ್ಮ! ಈ ಪಾರ್ಥಿವೇಂದ್ರರ ಇಚ್ಛೆಯಂತೆ ನೀನು ಜೀವಿಸುತ್ತಿದ್ದೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಜನರಿಗೆ ಇಷ್ಟವಾಗದೇ ಇರುವ ನಿನ್ನಂಥ ಬೇರೆ ಯಾರೂ ಇಲ್ಲ.””

02041024 ವೈಶಂಪಾಯನ ಉವಾಚ।
02041024a ತತಶ್ಚೇದಿಪತೇಃ ಶ್ರುತ್ವಾ ಭೀಷ್ಮಃ ಸ ಕಟುಕಂ ವಚಃ।
02041024c ಉವಾಚೇದಂ ವಚೋ ರಾಜಂಶ್ಚೇದಿರಾಜಸ್ಯ ಶೃಣ್ವತಃ।।

ವೈಶಂಪಾಯನನು ಹೇಳಿದನು: “ರಾಜನ್! ಚೇದಿಪತಿಯ ಈ ಕಟುಕ ಮಾತುಗಳನ್ನು ಕೇಳಿದ ಭೀಷ್ಮನು ಚೇದಿರಾಜನಿಗೆ ಕೇಳುವಹಾಗೆ ಈ ಮಾತುಗಳನ್ನಾಡಿದನು:

02041025a ಇಚ್ಛತಾಂ ಕಿಲ ನಾಮಾಹಂ ಜೀವಾಂಯೇಷಾಂ ಮಹೀಕ್ಷಿತಾಂ।
02041025c ಯೋಽಹಂ ನ ಗಣಯಾಂಯೇತಾಂಸ್ತೃಣಾನೀವ ನರಾಧಿಪಾನ್।।

“ಹೌದು! ಈ ನರಾಧಿಪ ಗಣವನ್ನು ತೃಣಸಮಾನವಾಗಿ ಕಾಣುತ್ತಿರುವ ನಾನು ಈ ಮಹೀಕ್ಷಿತರ ಹೆಸರಿನಲ್ಲಿ ಜೀವಿಸುತ್ತಿದ್ದೇನೆ!”

02041026a ಏವಮುಕ್ತೇ ತು ಭೀಷ್ಮೇಣ ತತಃ ಸಂಚುಕ್ರುಧುರ್ನೃಪಾಃ।
02041026c ಕೇ ಚಿಜ್ಜಹೃಷಿರೇ ತತ್ರ ಕೇ ಚಿದ್ಭೀಷ್ಮಂ ಜಗರ್ಹಿರೇ।।

ಭೀಷ್ಮನ ಈ ಮಾತಿಗೆ ನೃಪರಲ್ಲಿ ಕೆಲವರು ಸಂಕೃದ್ಧರಾದರು. ಕೆಲವರು ತತ್ತರಿಸಿದರು ಮತ್ತು ಇನ್ನು ಕೆಲವರು ಭೀಷ್ಮನನ್ನು ನಿಂದಿಸಿದರು.

02041027a ಕೇ ಚಿದೂಚುರ್ಮಹೇಷ್ವಾಸಾಃ ಶ್ರುತ್ವಾ ಭೀಷ್ಮಸ್ಯ ತದ್ವಚಃ।
02041027c ಪಾಪೋಽವಲಿಪ್ತೋ ವೃದ್ಧಶ್ಚ ನಾಯಂ ಭೀಷ್ಮೋಽರ್ಹತಿ ಕ್ಷ್ಮಾಂ।।

ಭೀಷ್ಮನ ಈ ಮಾತುಗಳನ್ನು ಕೇಳಿದ ಇತರ ಮಹೇಷ್ವಾಸರು “ಪಾಪಿ, ಅವಲಿಪ್ತ, ವೃದ್ಧ ಭೀಷ್ಮನು ನಮ್ಮ ಕ್ಷಮೆಗೆ ಅರ್ಹನಲ್ಲ!” ಎಂದು ಕೂಗಿದರು.

02041028a ಹನ್ಯತಾಂ ದುರ್ಮತಿರ್ಭೀಷ್ಮಃ ಪಶುವತ್ಸಾಧ್ವಯಂ ನೃಪೈಃ।
02041028c ಸರ್ವೈಃ ಸಮೇತ್ಯ ಸಂರಬ್ಧೈರ್ದಹ್ಯತಾಂ ವಾ ಕಟಾಗ್ನಿನಾ।।

ನೃಪರೆಲ್ಲರೂ ಸೇರಿ “ಈ ದುರ್ಮತಿ ಭೀಷ್ಮನನ್ನು ಬಲಿಪಶುವಂತೆ ಕೊಂದುಹಾಕೋಣ ಅಥವಾ ಕಟಾಗ್ನಿಯಲ್ಲಿ ಸುಟ್ಟುಹಾಕೋಣ!” ಎಂದು ಹೇಳಿದರು.

02041029a ಇತಿ ತೇಷಾಂ ವಚಃ ಶ್ರುತ್ವಾ ತತಃ ಕುರುಪಿತಾಮಹಃ।
02041029c ಉವಾಚ ಮತಿಮಾನ್ಭೀಷ್ಮಸ್ತಾನೇವ ವಸುಧಾಧಿಪಾನ್।।

ಅವರ ಈ ಕೂಗನ್ನು ಕೇಳಿದ ಕುರುಪಿತಾಮಹ ಮತಿವಂತ ಭೀಷ್ಮನು ಅಲ್ಲಿ ನೆರದಿದ್ದ ವಸುಧಾಧಿಪರಲ್ಲಿ ಹೇಳಿದನು:

02041030a ಉಕ್ತಸ್ಯೋಕ್ತಸ್ಯ ನೇಹಾಂತಮಹಂ ಸಮುಪಲಕ್ಷಯೇ।
02041030c ಯತ್ತು ವಕ್ಷ್ಯಾಮಿ ತತ್ಸರ್ವಂ ಶೃಣುಧ್ವಂ ವಸುಧಾಧಿಪಾಃ।।

“ಇಲ್ಲಿ ಈ ರೀತಿ ಮಾತನಾಡುವುದರಿಂದ ಯಾವ ಅಂತ್ಯವನ್ನೂ ನಾನು ಕಾಣಲಾರೆ. ವಸುಧಾಧಿಪರೇ! ನಾನು ಏನು ಹೇಳಲಿದ್ದೇನೋ ಅದನ್ನು ಕೇಳಿ!

02041031a ಪಶುವದ್ಘಾತನಂ ವಾ ಮೇ ದಹನಂ ವಾ ಕಟಾಗ್ನಿನಾ।
02041031c ಕ್ರಿಯತಾಂ ಮೂರ್ಧ್ನಿ ವೋ ನ್ಯಸ್ತಂ ಮಯೇದಂ ಸಕಲಂ ಪದಂ।।

ಪಶುವಂತೆ ನನ್ನನ್ನು ಕೊಲ್ಲಿ ಅಥವಾ ಕಟಾಗ್ನಿಯಲ್ಲಿ ಸುಡಿ! ಆದರೆ ನಾನು ನಿಮ್ಮೆಲ್ಲರನ್ನೂ ತುಳಿಯುತ್ತೇನೆ.

02041032a ಏಷ ತಿಷ್ಠತಿ ಗೋವಿಂದಃ ಪೂಜಿತೋಽಸ್ಮಾಭಿರಚ್ಯುತಃ।
02041032c ಯಸ್ಯ ವಸ್ತ್ವರತೇ ಬುದ್ಧಿರ್ಮರಣಾಯ ಸ ಮಾಧವಂ।।
02041033a ಕೃಷ್ಣಮಾಹ್ವಯತಾಮದ್ಯ ಯುದ್ಧೇ ಶಾಂಙ್ರಗದಾಧರಂ।
02041033c ಯಾವದಸ್ಯೈವ ದೇವಸ್ಯ ದೇಹಂ ವಿಶತು ಪಾತಿತಃ।।

ಇಲ್ಲಿ ನಿಂತಿದ್ದಾನೆ ನಾವು ಪೂಜಿಸಿದ ಅಚ್ಯುತ ಗೋವಿಂದ! ಯಾರ ಬುದ್ಧಿಯು ಮರಣಕ್ಕೆ ಕಾತರಿಸುತ್ತಿದೆಯೋ ಅವನು ಯುದ್ಧದಲ್ಲಿ ಈ ಶಾಂಙ್ರಗದಾಧರ ದೇವ ಯಾದವ ಮಾಧವ ಕೃಷ್ಣನಿಂದ ಪತನವಾಗಿ ಅವನ ದೇಹವನ್ನು ಪ್ರವೇಶಿಸಲಿ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಭೀಷ್ಮವಾಕ್ಯೇ ಏಕಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಭೀಷ್ಮವಾಕ್ಯ ಎನ್ನುವ ನಲವತ್ತೊಂದನೆಯ ಅಧ್ಯಾಯವು.