ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಶಿಶುಪಾಲವಧ ಪರ್ವ
ಅಧ್ಯಾಯ 40
ಸಾರ
ಶಿಶುಪಾಲನಿಗೆ ಕೃಷ್ಣನೇ ವಿಧಿ ವಹಿಸಿದ ಮೃತ್ಯುವೆಂದು ಅವನು ಶಿಶುವಾಗಿದ್ದಾಗಿನ ಚರಿತೆಯನ್ನು ಭೀಷ್ಮನು ಹೇಳಿದ್ದುದು (1-23).
02040001 ಭೀಷ್ಮ ಉವಾಚ।
02040001a ಚೇದಿರಾಜಕುಲೇ ಜಾತಸ್ತ್ರ್ಯಕ್ಷ ಏಷ ಚತುರ್ಭುಜಃ।
02040001c ರಾಸಭಾರಾವಸದೃಶಂ ರುರಾವ ಚ ನನಾದ ಚ।।
ಭೀಷ್ಮನು ಹೇಳಿದನು: “ಚೇದಿರಾಜಕುಲದಲ್ಲಿ ಇವನು ಮೂರು ಕಣ್ಣುಗಳು ಮತ್ತು ನಾಲ್ಕು ಭುಜಗಳುಳ್ಳವನಾಗಿ ಜನಿಸಿದನು. ಮತ್ತು ಅವನು ಕತ್ತೆಯಹಾಗೆ ಚೀರಿಕೊಳ್ಳುತ್ತಿದ್ದನು.
02040002a ತೇನಾಸ್ಯ ಮಾತಾಪಿತರೌ ತ್ರೇಸತುಸ್ತೌ ಸಬಾಂಧವೌ।
02040002c ವೈಕೃತಂ ತಚ್ಚ ತೌ ದೃಷ್ಟ್ವಾ ತ್ಯಾಗಾಯ ಕುರುತಾಂ ಮತಿಂ।।
ಬಾಂಧವರೊಂದಿಗೆ ಅವನ ತಂದೆ-ತಾಯಿಯರು ಅವನನ್ನು ನೋಡಿ ನಡುಗಿದರು ಮತ್ತು ಅವನ ವೈಕೃತವನ್ನು ಕಂಡು ಅವನನ್ನು ತ್ಯಾಗಿಸುವ ಮನಸ್ಸು ಮಾಡಿದರು.
02040003a ತತಃ ಸಭಾರ್ಯಂ ನೃಪತಿಂ ಸಾಮಾತ್ಯಂ ಸಪುರೋಹಿತಂ।
02040003c ಚಿಂತಾಸಮ್ಮೂಢಹೃದಯಂ ವಾಗುವಾಚಾಶರೀರಿಣೀ।।
ಪತ್ನಿ, ಅಮಾತ್ಯರು ಮತ್ತು ಪುರೋಹಿತರೊಂದಿಗೆ ಚಿಂತೆಯಿಂದ ಸಮ್ಮೂಢ ಹೃದಯನಾದ ಆ ನೃಪತಿಗೆ ಒಂದು ಅಶರೀರವಾಣಿಯು ನುಡಿಯಿತು:
02040004a ಏಷ ತೇ ನೃಪತೇ ಪುತ್ರಃ ಶ್ರೀಮಾಂ ಜಾತೋ ಮಹಾಬಲಃ।
02040004c ತಸ್ಮಾದಸ್ಮಾನ್ನ ಭೇತವ್ಯಮವ್ಯಗ್ರಃ ಪಾಹಿ ವೈ ಶಿಶುಂ।।
“ನೃಪತೇ! ನಿನಗೆ ಹುಟ್ಟಿದ ಪುತ್ರನು ಶ್ರೀಮಂತನೂ, ಮಹಾಬಲಿಯೂ ಆಗಿದ್ದಾನೆ. ಆದುದರಿಂದ ಈ ಶಿಶುವನ್ನು ಜಾಗರೂಕತೆಯಿಂದ ಪರಿಪಾಲಿಸು.
02040005a ನ ಚೈವೈತಸ್ಯ ಮೃತ್ಯುಸ್ತ್ವಂ ನ ಕಾಲಃ ಪ್ರತ್ಯುಪಸ್ಥಿತಃ।
02040005c ಮೃತ್ಯುರ್ಹಂತಾಸ್ಯ ಶಸ್ತ್ರೇಣ ಸ ಚೋತ್ಪನ್ನೋ ನರಾಧಿಪ।।
ನೀನು ಇವನ ಮೃತ್ಯುವಿಗೆ ಕಾರಣನಲ್ಲ ಮತ್ತು ಇವನ ಮೃತ್ಯುವಿನ ಕಾಲವೂ ಬಂದಿಲ್ಲ. ನರಾಧಿಪ! ಇವನನ್ನು ಶಸ್ತ್ರದಿಂದ ಕೊಲ್ಲುವವನು1 ಈಗಾಗಲೇ ಹುಟ್ಟಿದ್ದಾನೆ.”
02040006a ಸಂಶ್ರುತ್ಯೋದಾಹೃತಂ ವಾಕ್ಯಂ ಭೂತಮಂತರ್ಹಿತಂ ತತಃ।
02040006c ಪುತ್ರಸ್ನೇಹಾಭಿಸಂತಪ್ತಾ ಜನನೀ ವಾಕ್ಯಮಬ್ರವೀತ್।।
ಈ ರೀತಿಯ ಅಂತರ್ಹಿತ ಮಾತುಗಳನ್ನು ಕೇಳಿದ ಅವನ ಜನನಿಯು ಪುತ್ರಸ್ನೇಹದಿಂದ ಸಂತಪ್ತಳಾಗಿ ಹೇಳಿದಳು:
02040007a ಯೇನೇದಮೀರಿತಂ ವಾಕ್ಯಂ ಮಮೈವ ತನಯಂ ಪ್ರತಿ।
02040007c ಪ್ರಾಂಜಲಿಸ್ತಂ ನಮಸ್ಯಾಮಿ ಬ್ರವೀತು ಸ ಪುನರ್ವಚಃ।।
“ನನ್ನ ಮಗನ ಕುರಿತಾಗಿ ಈ ವಾಕ್ಯವನ್ನು ಹೇಳಿದವನಿಗೆ ಕೈಜೋಡಿಸಿ ನಮಸ್ಕರಿಸಿ ಪುನಃ ಹೇಳಲು ಕೇಳಿಕೊಳ್ಳುತ್ತೇನೆ.
02040008a ಶ್ರೋತುಮಿಚ್ಛಾಮಿ ಪುತ್ರಸ್ಯ ಕೋಽಸ್ಯ ಮೃತ್ಯುರ್ಭವಿಷ್ಯತಿ।
02040008c ಅಂತರ್ಹಿತಂ ತತೋ ಭೂತಮುವಾಚೇದಂ ಪುನರ್ವಚಃ।।
ನನ್ನ ಈ ಪುತ್ರನ ಮೃತ್ಯುವು ಯಾರಿಂದ ಆಗುತ್ತದೆ ಎನ್ನುವುದನ್ನು ತಿಳಿಯಲು ಬಯಸುತ್ತೇನೆ.” ಆಗ ಅಂತರ್ಹಿತ ಭೂತವು ಪುನಃ ಹೀಗೆ ಹೇಳಿತು:
02040009a ಯೇನೋತ್ಸಂಗೇ ಗೃಹೀತಸ್ಯ ಭುಜಾವಭ್ಯಧಿಕಾವುಭೌ।
02040009c ಪತಿಷ್ಯತಃ ಕ್ಷಿತಿತಲೇ ಪಂಚಶೀರ್ಷಾವಿವೋರಗೌ।।
02040010a ತೃತೀಯಮೇತದ್ಬಾಲಸ್ಯ ಲಲಾಟಸ್ಥಂ ಚ ಲೋಚನಂ।
02040010c ನಿಮಜ್ಜಿಷ್ಯತಿ ಯಂ ದೃಷ್ಟ್ವಾ ಸೋಽಸ್ಯ ಮೃತ್ಯುರ್ಭವಿಷ್ಯತಿ।।
“ಯಾರು ತನ್ನ ತೊಡೆಯಮೇಲೆ ಇವನನ್ನು ಹಿಡಿದಾಗ ಅವನ ಅಧಿಕ ಎರಡು ಕೈಗಳು ಐದುಹೆಡೆಯ ಸರ್ಪದಂತೆ ಭೂಮಿಯಮೇಲೆ ಬೀಳುತ್ತವೆಯೋ ಮತ್ತು ಈ ಬಾಲಕನ ಹಣೆಯ ಮೇಲಿರುವ ಮೂರನೆಯ ಕಣ್ಣು ಕರಗಿ ಹೋಗುತ್ತದೆಯೋ ಅವನೇ ಇವನ ಮೃತ್ಯುವಾಗುತ್ತಾನೆ.”
02040011a ತ್ರ್ಯಕ್ಷಂ ಚತುರ್ಭುಜಂ ಶ್ರುತ್ವಾ ತಥಾ ಚ ಸಮುದಾಹೃತಂ।
02040011c ಧರಣ್ಯಾಂ ಪಾರ್ಥಿವಾಃ ಸರ್ವೇ ಅಭ್ಯಗಚ್ಛನ್ ದಿದೃಕ್ಷವಃ।।
ಅವನಿಗೆ ಮೂರು ಕಣ್ಣುಗಳು ಮತ್ತು ನಾಲ್ಕು ಭುಜಗಳಿವೆ ಎಂದು ಕೇಳಿದ ಧರಣಿಯ ಸರ್ವ ಪಾರ್ಥಿವ ಸಮುದಾಯವೂ ಅವನನ್ನು ನೋಡಲು ಬಂದರು.
02040012a ತಾನ್ಪೂಜಯಿತ್ವಾ ಸಂಪ್ರಾಪ್ತಾನ್ಯಥಾರ್ಹಂ ಸ ಮಹೀಪತಿಃ।
02040012c ಏಕೈಕಸ್ಯ ನೃಪಸ್ಯಾಂಕೇ ಪುತ್ರಮಾರೋಪಯತ್ತದಾ।।
02040013a ಏವಂ ರಾಜಸಹಸ್ರಾಣಾಂ ಪೃಥಕ್ತ್ವೇನ ಯಥಾಕ್ರಮಂ।
02040013c ಶಿಶುರಂಕೇ ಸಮಾರೂಢೋ ನ ತತ್ಪ್ರಾಪ ನಿದರ್ಶನಂ।।
ಆಗಮಿಸಿದವರನ್ನು ಮಹೀಪತಿಯು ಯಥಾರ್ಹ ಸ್ವಾಗತಿಸಿ ಒಬ್ಬೊಬ್ಬರ ತೊಡೆಯ ಮೇಲೂ ಪುತ್ರನನ್ನು ಕೂರಿಸಿದನು. ಈ ರೀತಿ ಆಗಮಿಸಿದ ಸಹಸ್ರಾರು ರಾಜರ ತೊಡೆಯಮೇಲೆ ಕೂರಿಸಿದರೂ ಭವಿಷ್ಯವಾಣಿಯು ನಿಜವಾಗಲಿಲ್ಲ.
02040014a ತತಶ್ಚೇದಿಪುರಂ ಪ್ರಾಪ್ತೌ ಸಂಕರ್ಷಣಜನಾರ್ದನೌ।
02040014c ಯಾದವೌ ಯಾದವೀಂ ದ್ರಷ್ಟುಂ ಸ್ವಸಾರಂ ತಾಂ ಪಿತುಸ್ತದಾ।।
ಆಗ ಸಂಕರ್ಷಣ ಜನಾರ್ದನರಿಬ್ಬರು ಯಾದವರೂ ತಮ್ಮ ತಂದೆಯ ತಂಗಿ ಯಾದವಿಯನ್ನು ನೋಡಲು ಚೇದಿಪುರಕ್ಕೆ ಬಂದರು.
02040015a ಅಭಿವಾದ್ಯ ಯಥಾನ್ಯಾಯಂ ಯಥಾಜ್ಯೇಷ್ಠಂ ನೃಪಾಂಶ್ಚ ತಾನ್।
02040015c ಕುಶಲಾನಾಮಯಂ ಪೃಷ್ಟ್ವಾ ನಿಷಣ್ಣೌ ರಾಮಕೇಶವೌ।।
ಜೇಷ್ಠರನ್ನೂ ನೃಪತಿಯನ್ನೂ ಯಥಾನ್ಯಾಯ ಅಭಿವಂದಿಸಿ ರಾಮ-ಕೇಶವರು ಕುಶಲಪ್ರಶ್ನೆಗಳನ್ನು ಕೇಳಿ ಕುಳಿತುಕೊಂಡರು.
02040016a ಅಭ್ಯರ್ಚಿತೌ ತದಾ ವೀರೌ ಪ್ರೀತ್ಯಾ ಚಾಭ್ಯಧಿಕಂ ತತಃ।
02040016c ಪುತ್ರಂ ದಾಮೋದರೋತ್ಸಂಗೇ ದೇವೀ ಸಮ್ನ್ಯದಧಾತ್ಸ್ವಯಂ।।
ಇಬ್ಬರು ವೀರರನ್ನೂ ಸ್ವಾಗತಿಸಲಾಯಿತು ಮತ್ತು ಅಧಿಕ ಪ್ರೀತಿಯಿಂದ ದೇವಿಯು ತನ್ನ ಮಗನನ್ನು ಸ್ವಯಂ ದಾಮೋದರನ ತೊಡೆಯ ಮೇಲೆ ಕೂರಿಸಿದಳು.
02040017a ನ್ಯಸ್ತಮಾತ್ರಸ್ಯ ತಸ್ಯಾಂಕೇ ಭುಜಾವಭ್ಯಧಿಕಾವುಭೌ।
02040017c ಪೇತತುಸ್ತಚ್ಚ ನಯನಂ ನಿಮಮಜ್ಜ ಲಲಾಟಜಂ।।
ಅವನ ತೊಡೆಯಮೇಲೆ ಇಟ್ಟಕೂಡಲೇ ಅಧಿಕವಾಗಿದ್ದ ಅವನ ಎರಡು ಕೈಗಳು ಕೆಳಗೆ ಬಿದ್ದವು ಮತ್ತು ಲಲಾಟದಲ್ಲಿದ್ದ ನಯನವೂ ಕರಗಿಹೋಯಿತು.
02040018a ತದ್ದೃಷ್ಟ್ವಾ ವ್ಯಥಿತಾ ತ್ರಸ್ತಾ ವರಂ ಕೃಷ್ಣಮಯಾಚತ।
02040018c ದದಸ್ವ ಮೇ ವರಂ ಕೃಷ್ಣ ಭಯಾರ್ತಾಯಾ ಮಹಾಭುಜ।।
02040019a ತ್ವಂ ಹ್ಯಾರ್ತಾನಾಂ ಸಮಾಶ್ವಾಸೋ ಭೀತಾನಾಮಭಯಂಕರಃ।
02040019c ಪಿತೃಷ್ವಸಾರಂ ಮಾ ಭೈಷೀರಿತ್ಯುವಾಚ ಜನಾರ್ದನಃ।।
02040020a ದದಾನಿ ಕಂ ವರಂ ಕಿಂ ವಾ ಕರವಾಣಿ ಪಿತೃಷ್ವಸಃ।
02040020c ಶಕ್ಯಂ ವಾ ಯದಿ ವಾಶಕ್ಯಂ ಕರಿಷ್ಯಾಮಿ ವಚಸ್ತವ।।
ಇದನ್ನು ನೋಡಿ ವ್ಯಥಿತಳಾಗಿ ನಡುಗಿದ ಅವಳು ಕೃಷ್ಣನಲ್ಲಿ ಬೇಡಿಕೊಂಡಳು: “ಮಹಾಭುಜ ಕೃಷ್ಣ! ಭಯಾರ್ತ ನನಗೆ ವರವನ್ನು ಕೊಡು. ನೀನು ಆರ್ತರ ಸಮಾಶ್ವಾಸ ಮತ್ತು ಭಯಭೀತರ ಅಭಯಂಕರ.” ಆಗ ತನ್ನ ತಂದೆಯ ತಂಗಿಗೆ ಜನಾರ್ದನನು ಉತ್ತರಿಸಿದನು: “ಹೆದರಬೇಡ! ಅತ್ತೆ! ನಾನು ನಿನಗೆ ಯಾವ ವರವನ್ನು ಕೊಡಲಿ? ಏನು ಮಾಡಲಿ? ಅದು ಸಾಧ್ಯವಿರಲಿ ಅಥವಾ ಸಾಧ್ಯವಿಲ್ಲದಿರಲಿ. ನಿನ್ನ ಮಾತಿನಂತೆ ಮಾಡುತ್ತೇನೆ.”
02040021a ಏವಮುಕ್ತಾ ತತಃ ಕೃಷ್ಣಮಬ್ರವೀದ್ಯದುನಂದನಂ।
02040021c ಶಿಶುಪಾಲಸ್ಯಾಪರಾಧಾನ್ ಕ್ಷಮೇಥಾಸ್ತ್ವಂ ಮಹಾಬಲ।।
ಇದಕ್ಕೆ ಅವಳು ಯದುನಂದನ ಕೃಷ್ಣನಿಗೆ ಹೇಳಿದಳು: “ಮಹಾಬಲ! ನೀನು ಶಿಶುಪಾಲನ ಅಪರಾಧಗಳನ್ನು ಕ್ಷಮಿಸು.”
02040022 ಕೃಷ್ಣ ಉವಾಚ।
02040022a ಅಪರಾಧಶತಂ ಕ್ಷಾಮ್ಯಂ ಮಯಾ ಹ್ಯಸ್ಯ ಪಿತೃಷ್ವಸಃ।
02040022c ಪುತ್ರಸ್ಯ ತೇ ವಧಾರ್ಹಾಣಾಂ ಮಾ ತ್ವಂ ಶೋಕೇ ಮನಃ ಕೃಥಾಃ।।
ಕೃಷ್ಣನು ಹೇಳಿದನು: “ಅತ್ತೆ! ವಧಾರ್ಹವಾಗಿದ್ದರೂ ಇವನ ನೂರು ಅಪರಾಧಗಳನ್ನು ಕ್ಷಮಿಸುತ್ತೇನೆ. ಶೋಕಿಸಬೇಡ.””
02040023 ಭೀಷ್ಮ ಉವಾಚ।
02040023a ಏವಮೇಷ ನೃಪಃ ಪಾಪಃ ಶಿಶುಪಾಲಃ ಸುಮಂದಧೀಃ।
02040023c ತ್ವಾಂ ಸಮಾಹ್ವಯತೇ ವೀರ ಗೋವಿಂದವರದರ್ಪಿತಃ।।
ಭೀಷ್ಮನು ಹೇಳಿದನು: “ವೀರ! ಆದುದರಿಂದಲೇ ಗೋವಿಂದವರದರ್ಪಿತ ಈ ಪಾಪಿ ನೃಪ ಮೂಢ ಶಿಶುಪಾಲನು ನಿನ್ನನ್ನು ಕೆರಳಿಸುತ್ತಿದ್ದಾನೆ2.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಶಿಶುಪಾಲವೃತ್ತಾಂತಕಥನೇ ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಶಿಶುಪಾಲವೃತ್ತಾಂತಕಥನ ಎನ್ನುವ ನಲವತ್ತನೆಯ ಅಧ್ಯಾಯವು.