ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಶಿಶುಪಾಲವಧ ಪರ್ವ
ಅಧ್ಯಾಯ 39
ಸಾರ
ಶಿಶುಪಾಲನು ಕೃಷ್ಣನನ್ನು ಹೀಯಾಳಿಸುವುದು (1-8). ಭೀಮಸೇನನು ಕೃದ್ಧನಾದುದು, ಭೀಷ್ಮನು ಅವನನ್ನು ತಡೆದದ್ದು (9-20).
02039001 ಶಿಶುಪಾಲ ಉವಾಚ।
02039001a ಸ ಮೇ ಬಹುಮತೋ ರಾಜಾ ಜರಾಸಂಧೋ ಮಹಾಬಲಃ।
02039001c ಯೋಽನೇನ ಯುದ್ಧಂ ನೇಯೇಷ ದಾಸೋಽಯಮಿತಿ ಸಂಯುಗೇ।।
ಶಿಶುಪಾಲನು ಹೇಳಿದನು: “ನೀನು ದಾಸನಿಗಿಂತ ಹೆಚ್ಚಿನವನಲ್ಲ! ಎಂದು ಹೇಳಿ ಇವನೊಂದಿಗೆ ಯುದ್ಧಮಾಡಲು ನಿರಾಕರಿಸಿದ ಮಹಾಬಲಿ ಜರಾಸಂಧನನ್ನು ನಾನು ತುಂಬಾ ಗೌರವಿಸುತ್ತಿದ್ದೆ.
02039002a ಕೇಶವೇನ ಕೃತಂ ಯತ್ತು ಜರಾಸಂಧವಧೇ ತದಾ।
02039002c ಭೀಮಸೇನಾರ್ಜುನಾಭ್ಯಾಂ ಚ ಕಸ್ತತ್ಸಾಧ್ವಿತಿ ಮನ್ಯತೇ।।
ಕೇಶವನಿಂದ, ಮತ್ತು ಭೀಮಸೇನ ಅರ್ಜುನರಿಂದ ಆದ ಜರಾಸಂಧವಧೆಯನ್ನು ಯಾರುತಾನೆ ಒಳ್ಳೆಯದಾಯಿತೆಂದು ಸ್ವೀಕರಿಸುತ್ತಾರೆ?
02039003a ಅದ್ವಾರೇಣ ಪ್ರವಿಷ್ಟೇನ ಚದ್ಮನಾ ಬ್ರಹ್ಮವಾದಿನಾ।
02039003c ದೃಷ್ಟಃ ಪ್ರಭಾವಃ ಕೃಷ್ಣೇನ ಜರಾಸಂಧಸ್ಯ ಧೀಮತಃ।।
ಧೀಮಂತ ಜರಾಸಂಧನು ಬ್ರಹ್ಮವಾದಿಯ ವೇಷದಲ್ಲಿದ್ದ ಕೃಷ್ಣನನ್ನು ಯಾವ ದ್ವಾರದಿಂದ ಪ್ರವೇಶಿಸಿದುದನ್ನೂ ನೋಡಲಿಲ್ಲ.
02039004a ಯೇನ ಧರ್ಮಾತ್ಮನಾತ್ಮಾನಂ ಬ್ರಹ್ಮಣ್ಯಮಭಿಜಾನತಾ।
02039004c ನೈಷಿತಂ ಪಾದ್ಯಮಸ್ಮೈ ತದ್ದಾತುಮಗ್ರೇ ದುರಾತ್ಮನೇ।।
02039005a ಭುಜ್ಯತಾಮಿತಿ ತೇನೋಕ್ತಾಃ ಕೃಷ್ಣಭೀಮಧನಂಜಯಾಃ।
02039005c ಜರಾಸಂಧೇನ ಕೌರವ್ಯ ಕೃಷ್ಣೇನ ವಿಕೃತಂ ಕೃತಂ।।
ಆ ಧರ್ಮಾತ್ಮನು ಇವರು ಬ್ರಾಹ್ಮಣರೆಂದು ತಿಳಿದು ಈ ದುರಾತ್ಮ ಕೃಷ್ಣ, ಭೀಮ, ಧನಂಜಯರಿಗೆ ಮೊದಲು ಪಾದ್ಯವನ್ನು ನೀಡಿ, ನಂತರ ಭೋಜನ ಮಾಡಿ ಎಂದು ಹೇಳಿದನು. ಕೌರವ್ಯ! ಕೃಷ್ಣನು ಜರಾಸಂಧನಿಗೆ ಮೋಸಮಾಡಿದನು.
02039006a ಯದ್ಯಯಂ ಜಗತಃ ಕರ್ತಾ ಯಥೈನಂ ಮೂರ್ಖ ಮನ್ಯಸೇ।
02039006c ಕಸ್ಮಾನ್ನ ಬ್ರಾಹ್ಮಣಂ ಸಂಯಗಾತ್ಮಾನಮವಗಚ್ಛತಿ।।
ಮೂರ್ಖನಾದ ನೀನು ತಿಳಿದಂತೆ ಒಂದುವೇಳೆ ಇವನೇನಾದರೂ ಜಗತ್ತಿನ ಕರ್ತುವಾಗಿದ್ದರೆ, ಅವನು ಅಲ್ಲಿಗೆ ತನ್ನನ್ನು ಬ್ರಾಹ್ಮಣನನ್ನಾಗಿಸಿಕೊಂಡು ಏಕೆ ಹೋದನು?
02039007a ಇದಂ ತ್ವಾಶ್ಚರ್ಯಭೂತಂ ಮೇ ಯದಿಮೇ ಪಾಂಡವಾಸ್ತ್ವಯಾ।
02039007c ಅಪಕೃಷ್ಟಾಃ ಸತಾಂ ಮಾರ್ಗಾನ್ಮನ್ಯಂತೇ ತಚ್ಚ ಸಾಧ್ವಿತಿ।।
ನಿನ್ನಿಂದ ಸತ್ಯವಂತರ ಮಾರ್ಗವನ್ನು ಕಳೆದುಕೊಂಡ ಪಾಂಡವರು ಈಗಲೂ ನಿನ್ನನ್ನು ಸಾಧುವೆಂದು ತಿಳಿಯುತ್ತಿದ್ದಾರಲ್ಲ. ಅದೇ ನನಗೆ ಬಹಳ ಆಶ್ಚರ್ಯವೆನಿಸುತ್ತದೆ.
02039008a ಅಥ ವಾ ನೈತದಾಶ್ಚರ್ಯಂ ಯೇಷಾಂ ತ್ವಮಸಿ ಭಾರತ।
02039008c ಸ್ತ್ರೀಸಧರ್ಮಾ ಚ ವೃದ್ಧಶ್ಚ ಸರ್ವಾರ್ಥಾನಾಂ ಪ್ರದರ್ಶಕಃ।।
ಅಥವಾ ಅವರಿಗೆ ಸ್ತ್ರೀಯಂತೆ ನಡೆದುಕೊಳ್ಳುತ್ತಿರುವ ವೃದ್ಧ ಭಾರತ ನೀನು ಸರ್ವವಿಷಯಗಳ ಮಾರ್ಗದರ್ಶಕ ಎನ್ನುವುದು ಬಹುಷಃ ಅಷ್ಟೊಂದು ಆಶ್ಚರ್ಯಕರವಾದದ್ದು ಇಲ್ಲದಿರಬಹುದು.””
02039009 ವೈಶಂಪಾಯನ ಉವಾಚ।
02039009a ತಸ್ಯ ತದ್ವಚನಂ ಶ್ರುತ್ವಾ ರೂಕ್ಷಂ ರೂಕ್ಷಾಕ್ಷರಂ ಬಹು।
02039009c ಚುಕೋಪ ಬಲಿನಾಂ ಶ್ರೇಷ್ಠೋ ಭೀಮಸೇನಃ ಪ್ರತಾಪವಾನ್।।
ವೈಶಂಪಾಯನನು ಹೇಳಿದನು: “ಕಟುಶಬ್ಧಗಳಿಂದ ಕೂಡಿದ ಅವನ ಈ ಸುದೀರ್ಘ ಕಟು ಮಾತುಗಳನ್ನು ಕೇಳಿದ ಬಲಶಾಲಿಗಳಲ್ಲಿ ಶ್ರೇಷ್ಠ ಪ್ರತಾಪಿ ಭೀಮಸೇನನು ಸಿಟ್ಟಿಗೆದ್ದನು.
02039010a ತಸ್ಯ ಪದ್ಮಪ್ರತೀಕಾಶೇ ಸ್ವಭಾವಾಯತವಿಸ್ತೃತೇ।
02039010c ಭೂಯಃ ಕ್ರೋಧಾಭಿತಾಂರಾಂತೇ ರಕ್ತೇ ನೇತ್ರೇ ಬಭೂವತುಃ।।
ಪದ್ಮದಂತೆ ಸ್ವಭಾವತಃ ಶಾಂತವಾಗಿದ್ದ ಕಣ್ಣುಗಳು ಕ್ರೋಧದಿಂದ ಕೆಂಪಾದವು ಮತ್ತು ಕಣ್ಣಂಚು ತಾಮ್ರದ ಬಣ್ಣವನ್ನು ತಾಳಿತು.
02039011a ತ್ರಿಶಿಖಾಂ ಭ್ರುಕುಟೀಂ ಚಾಸ್ಯ ದದೃಶುಃ ಸರ್ವಪಾರ್ಥಿವಾಃ।
02039011c ಲಲಾಟಸ್ಥಾಂ ತ್ರಿಕೂಟಸ್ಥಾಂ ಗಂಗಾಂ ತ್ರಿಪಥಗಾಮಿವ।।
ಅವನ ಹಣೆಯ ಹುಬ್ಬುಗಳು ತ್ರಿಕೂಟದಿಂದ ಮೂರು ಭಾಗಗಳಾಗಿ ಹರಿಯುವ ಗಂಗೆಯಂತೆ ಮೂರು ಪದರಗಳಲ್ಲಿ ಬಿಗಿಯಾದುದನ್ನು ಸರ್ವ ಪಾರ್ಥಿವರೂ ನೋಡಿದರು.
02039012a ದಂತಾನ್ಸಂದಶತಸ್ತಸ್ಯ ಕೋಪಾದ್ದದೃಶುರಾನನಂ।
02039012c ಯುಗಾಂತೇ ಸರ್ವಭೂತಾನಿ ಕಾಲಸ್ಯೇವ ದಿಧಕ್ಷತಃ।।
ಅವನು ಯುಗಾಂತದಲ್ಲಿ ಸರ್ವಭೂತಗಳನ್ನೂ ಸುಟ್ಟುಬಿಡುವ ಕಾಲನಂತೆ ಕೋಪದಿಂದ ಹಲ್ಲು ಕಡೆಯುತ್ತಿದ್ದುದನು ನೋಡಿದರು.
02039013a ಉತ್ಪತಂತಂ ತು ವೇಗೇನ ಜಗ್ರಾಹೈನಂ ಮನಸ್ವಿನಂ।
02039013c ಭೀಷ್ಮ ಏವ ಮಹಾಬಾಹುರ್ಮಹಾಸೇನಮಿವೇಶ್ವರಃ।।
ಆದರೆ ವೇಗದಿಂದ ಮೇಲೆದ್ದು ಮುಂದೆಬರುತ್ತಿದ್ದ ಮಹಾಬಾಹು ಭೀಮಸೇನನನ್ನು ಈಶ್ವರ ಭೀಷ್ಮನು ತಡೆಹಿಡಿದನು.
02039014a ತಸ್ಯ ಭೀಮಸ್ಯ ಭೀಷ್ಮೇಣ ವಾರ್ಯಮಾಣಸ್ಯ ಭಾರತ।
02039014c ಗುರುಣಾ ವಿವಿಧೈರ್ವಾಕ್ಯೈಃ ಕ್ರೋಧಃ ಪ್ರಶಮಮಾಗತಃ।।
ಭಾರತ! ಭೀಷ್ಮನು ಭೀಮನನ್ನು ತಡೆಯಲು, ಗುರುವಿನ ವಿವಿಧ ವಾಕ್ಯಗಳಿಂದ ಅವನ ಕ್ರೋಧವು ಪ್ರಶಮನವಾಯಿತು.
02039015a ನಾತಿಚಕ್ರಾಮ ಭೀಷ್ಮಸ್ಯ ಸ ಹಿ ವಾಕ್ಯಮರಿಂದಮಃ।
02039015c ಸಮುದ್ಧೂತೋ ಘನಾಪಾಯೇ ವೇಲಾಮಿವ ಮಹೋದಧಿಃ।।
ಮಳೆಗಾಲದಲ್ಲಿ ಮಹೋದಧಿಯು ಎಷ್ಟೇ ಭರತ ಹೊಂದಿದರೂ ಪ್ರವಾಹರೇಖೆಯನ್ನು ಹೇಗೆ ದಾಟುವುದಿಲ್ಲವೋ ಹಾಗೆ ಆ ಅರಿಂದಮನು ಭೀಷ್ಮನ ವಾಕ್ಯವನ್ನು ಅತಿಕ್ರಮಿಸಲಿಲ್ಲ.
02039016a ಶಿಶುಪಾಲಸ್ತು ಸಂಕ್ರುದ್ಧೇ ಭೀಮಸೇನೇ ನರಾಧಿಪ।
02039016c ನಾಕಂಪತ ತದಾ ವೀರಃ ಪೌರುಷೇ ಸ್ವೇ ವ್ಯವಸ್ಥಿತಃ।।
ನರಾಧಿಪ! ಸಂಕೃದ್ಧ ಭೀಮಸೇನನಿಗೆ ಶಿಶುಪಾಲನು ಹೆದರಲಿಲ್ಲ ಮತ್ತು ಆ ವೀರನು ತನ್ನ ಪೌರುಷದಲ್ಲಿಯೇ ವ್ಯವಸ್ಥಿತನಾಗಿದ್ದನು.
02039017a ಉತ್ಪತಂತಂ ತು ವೇಗೇನ ಪುನಃ ಪುನರರಿಂದಮಃ।
02039017c ನ ಸ ತಂ ಚಿಂತಯಾಮಾಸ ಸಿಂಹಃ ಕ್ಷುದ್ರಮೃಗಂ ಯಥಾ।।
ಆ ಅರಿಂದಮನು ಪುನಃ ಪುನಃ ವೇಗದಿಂದ ಎದ್ದೇಳುತ್ತಿದ್ದರೂ ಒಂದು ಸಿಂಹವು ಕ್ಷುದ್ರಮೃಗವನ್ನು ಹೇಗೋ ಹಾಗೆ ಅವನ ಕುರಿತು ಸ್ವಲ್ಪವೂ ಚಿಂತಿಸಲಿಲ್ಲ.
02039018a ಪ್ರಹಸಂಶ್ಚಾಬ್ರವೀದ್ವಾಕ್ಯಂ ಚೇದಿರಾಜಃ ಪ್ರತಾಪವಾನ್।
02039018c ಭೀಮಸೇನಮತಿಕ್ರುದ್ಧಂ ದೃಷ್ಟ್ವಾ ಭೀಮಪರಾಕ್ರಮಂ।।
ಭೀಮಪರಾಕ್ರಮಿ ಅತಿಕೃದ್ಧ ಭೀಮಸೇನನನ್ನು ನೋಡಿ ಪ್ರತಾಪಿ ಚೇದಿರಾಜನು ಜೋರಾಗಿ ನಗುತ್ತಾ ಹೇಳಿದನು:
02039019a ಮುಂಚೈನಂ ಭೀಷ್ಮ ಪಶ್ಯಂತು ಯಾವದೇನಂ ನರಾಧಿಪಾಃ।
02039019c ಮತ್ಪ್ರತಾಪಾಗ್ನಿನಿರ್ದಗ್ಧಂ ಪತಂಗಮಿವ ವಃನಿನಾ।।
“ಭೀಷ್ಮ! ಅವನನ್ನು ಬರಲು ಬಿಡು. ಅಗ್ನಿಯಲ್ಲಿ ಪತಂಗದಂತೆ ನನ್ನ ಪ್ರತಾಪಾಗ್ನಿಯಲ್ಲಿ ಇವನು ಸುಟ್ಟುಹೋಗುವುದನ್ನು ನರಾಧಿಪರೆಲ್ಲ ನೋಡಲಿ!”
02039020a ತತಶ್ಚೇದಿಪತೇರ್ವಾಕ್ಯಂ ತಶ್ರುತ್ವಾ ಕುರುಸತ್ತಮಃ।
02039020c ಭೀಮಸೇನಮುವಾಚೇದಂ ಭೀಷ್ಮೋ ಮತಿಮತಾಂ ವರಃ।।
ಆಗ ಚೇದಿಪತಿಯ ಈ ಮಾತುಗಳನ್ನು ಕೇಳಿದ ಮತಿವಂತರಲ್ಲಿ ಶ್ರೇಷ್ಠ ಕುರುಸತ್ತಮ ಭೀಷ್ಮನು ಬೀಮಸೇನನಿಗೆ ಈ ಮಾತುಗಳನ್ನಾಡಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಭೀಮಕ್ರೋಧೇ ಏಕೋನಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಭೀಮಕ್ರೋಧ ಎನ್ನುವ ಮೂವತ್ತೊಂಭತ್ತನೆಯ ಅಧ್ಯಾಯವು.