ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಶಿಶುಪಾಲವಧ ಪರ್ವ
ಅಧ್ಯಾಯ 38
ಸಾರ
ಶಿಶುಪಾಲನು ಭೀಷ್ಮನು ನಪುಂಸಕನೆಂದು ಹೀಯಾಳಿಸುವುದು (1-40).
02038001 ಶಿಶುಪಾಲ ಉವಾಚ।
02038001a ವಿಭೀಷಿಕಾಭಿರ್ಬಹ್ವೀಭಿರ್ಭೀಷಯನ್ಸರ್ವಪಾರ್ಥಿವಾನ್।
02038001c ನ ವ್ಯಪತ್ರಪಸೇ ಕಸ್ಮಾದ್ವೃದ್ಧಃ ಸನ್ಕುಲಪಾಂಸನಃ।।
ಶಿಶುಪಾಲನು ಹೇಳಿದನು: “ಕುಲಘಾತಕ! ಈ ರೀತಿ ನಿನ್ನ ಹಲವಾರು ಹೆದರಿಕೆಗಳಿಂದ ಸರ್ವ ಪಾರ್ಥಿವರನ್ನೂ ಭಯಪಡಿಸುತ್ತಿರುವ ನಿನಗೆ ನಾಚಿಕೆಯಾದರೂ ಏಕೆ ಆಗುವುದಿಲ್ಲ?
02038002a ಯುಕ್ತಮೇತತ್ತೃತೀಯಾಯಾಂ ಪ್ರಕೃತೌ ವರ್ತತಾ ತ್ವಯಾ।
02038002c ವಕ್ತುಂ ಧರ್ಮಾದಪೇತಾರ್ಥಂ ತ್ವಂ ಹಿ ಸರ್ವಕುರೂತ್ತಮಃ।।
ಸರ್ವಕುರೂತ್ತಮ! ನಪುಂಸಕನಂತೆ ಜೀವಿಸುತ್ತಿರುವ ನಿನಗೆ ಈ ರೀತಿ ಧರ್ಮ ವಿರುದ್ಧ ಮಾತುಗಳನ್ನಾಡುವುದು ನಿಜವಾಗಿಯೂ ಸರಿಯೆನಿಸುತ್ತದೆ.
02038003a ನಾವಿ ನೌರಿವ ಸಂಬದ್ಧಾ ಯಥಾಂಧೋ ವಾಂಧಮನ್ವಿಯಾತ್।
02038003c ತಥಾಭೂತಾ ಹಿ ಕೌರವ್ಯಾ ಭೀಷ್ಮ ಯೇಷಾಂ ತ್ವಮಗ್ರಣೀಃ।।
ಇನ್ನೊಂದು ದಾರಿತಪ್ಪಿದ ದೋಣಿಗೆ ಕಟ್ಟಿದ ದೋಣಿಯಂತೆ, ಕುರುಡನನ್ನು ಹಿಂಬಾಲಿಸುವ ಕುರುಡನಂತೆ ಭೀಷ್ಮ! ಕೌರವರೆಲ್ಲರೂ ನಿನ್ನನ್ನು ತಮ್ಮ ಮುಖಂಡನನ್ನಾಗಿ ಹೊಂದಿದ್ದಾರೆ.
02038004a ಪೂತನಾಘಾತಪೂರ್ವಾಣಿ ಕರ್ಮಾಣ್ಯಸ್ಯ ವಿಶೇಷತಃ।
02038004c ತ್ವಯಾ ಕೀರ್ತಯತಾಸ್ಮಾಕಂ ಭೂಯಃ ಪ್ರಚ್ಯಾವಿತಂ ಮನಃ।।
ಹಿಂದೆ ಇವನು ಪೂತನಿಯನ್ನು ಕೊಂದ ಕೆಲಸವನ್ನು ವಿಶೇಷವಾಗಿ ಹೊಗಳುತ್ತಾ ನೀನು ನಮ್ಮ ಮನಸ್ಸೆಲ್ಲವೂ ಕುಸಿದುಬೀಳುವಂತೆ ಮಾಡಿರುವೆ1.
02038005a ಅವಲಿಪ್ತಸ್ಯ ಮೂರ್ಖಸ್ಯ ಕೇಶವಂ ಸ್ತೋತುಮಿಚ್ಛತಃ।
02038005c ಕಥಂ ಭೀಷ್ಮ ನ ತೇ ಜಿಹ್ವಾ ಶತಧೇಯಂ ವಿದೀರ್ಯತೇ।।
ಅವಲಿಪ್ತ ಮೂರ್ಖ! ಭೀಷ್ಮ! ಕೇಶವನನ್ನು ಸ್ತುತಿಸಲು ಬಯಸುವ ನಿನ್ನ ನಾಲಗೆಯು ಹೇಗೆ ನೂರು ಚೂರುಗಳಾಗಿ ಒಡೆದು ಹೋಗಿಲ್ಲ?
02038006a ಯತ್ರ ಕುತ್ಸಾ ಪ್ರಯೋಕ್ತವ್ಯಾ ಭೀಷ್ಮ ಬಾಲತರೈರ್ನರೈಃ।
02038006c ತಮಿಮಂ ಜ್ಞಾನವೃದ್ಧಃ ಸಂಗೋಪಂ ಸಂಸ್ತೋತುಮಿಚ್ಛಸಿ।।
ಭೀಷ್ಮ! ಜ್ಞಾನವೃದ್ಧ ನೀನು ಮೂಢರೂ ಹೀಗಳೆಯುವ ಗೋಪನನ್ನು ಸಂಸ್ತುತಿಸಲು ಇಚ್ಛಿಸುವೆಯಾ!
02038007a ಯದ್ಯನೇನ ಹತಾ ಬಾಲ್ಯೇ ಶಕುನಿಶ್ಚಿತ್ರಮತ್ರ ಕಿಂ।
02038007c ತೌ ವಾಶ್ವವೃಷಭೌ ಭೀಷ್ಮ ಯೌ ನ ಯುದ್ಧವಿಶಾರದೌ।।
ಬಾಲ್ಯದಲ್ಲಿ ಅವನು ಶಕುನಿ2ಯೊಂದನ್ನು ಕೊಂದನೆಂದರೆ ಅದರಲ್ಲಿ ಆಶ್ಚರ್ಯವೇನು? ಭೀಷ್ಮ! ಆ ಅಶ್ವ ವೃಷಭ3ರು ಯುದ್ಧವಿಶಾರದರಾಗಿರಲಿಲ್ಲ.
02038008a ಚೇತನಾರಹಿತಂ ಕಾಷ್ಠಂ ಯದ್ಯನೇನ ನಿಪಾತಿತಂ।
02038008c ಪಾದೇನ ಶಕಟಂ ಭೀಷ್ಮ ತತ್ರ ಕಿಂ ಕೃತಮದ್ಭುತಂ।।
ಭೀಷ್ಮ! ಚೇತನಾರಹಿತ ಕಟ್ಟಿಗೆಯ ಬಂಡಿಯನ್ನು4 ಪಾದದಿಂದ ಒದ್ದು ಬೀಳಿಸಿದನೆಂದರೆ ಅದರಲ್ಲಿ ಯಾವ ರೀತಿಯ ಅದ್ಭುತವನ್ನು ಮಾಡಿದಹಾಗಾಯಿತು?
02038009a ವಲ್ಮೀಕಮಾತ್ರಃ ಸಪ್ತಾಹಂ ಯದ್ಯನೇನ ಧೃತೋಽಚಲಃ।
02038009c ತದಾ ಗೋವರ್ಧನೋ ಭೀಷ್ಮ ನ ತಚ್ಚಿತ್ರಂ ಮತಂ ಮಮ।।
ಭೀಷ್ಮ! ಕೇವಲ ಹುತ್ತದ ಗಾತ್ರದ ಗೋವರ್ಧನ ಪರ್ವತವನ್ನು ಒಂದು ಏಳು ದಿನಗಳ ಪರ್ಯಂತ ಅವನು ಎತ್ತಿ ಹಿಡಿದನೆಂದರೆ ಅದೊಂದು ಪವಾಡವಲ್ಲ ಎನ್ನುವುದು ನನ್ನ ಅಭಿಪ್ರಾಯ.
02038010a ಭುಕ್ತಮೇತೇನ ಬಹ್ವನ್ನಂ ಕ್ರೀಡತಾ ನಗಮೂರ್ಧನಿ।
02038010c ಇತಿ ತೇ ಭೀಷ್ಮ ಶೃಣ್ವಾನಾಃ ಪರಂ ವಿಸ್ಮಯಮಾಗತಾಃ।।
ಭೀಷ್ಮ! ಅವನು ಪರ್ವತದ ಮೇಲೆ ಆಡುತ್ತಿರುವಾಗ ಬಹಳಷ್ಟು ಆಹಾರವನ್ನು ತಿನ್ನನೆಂದು ನಮಗೆ ಹೇಳುವ ನೀನು ನಮ್ಮನ್ನೆಲ್ಲ ಬಹಳ ವಿಸ್ಮಿತರನ್ನಾಗಿ ಮಾಡಿದ್ದೀಯೆ.
02038011a ಯಸ್ಯ ಚಾನೇನ ಧರ್ಮಜ್ಞ ಭುಕ್ತಮನ್ನಂ ಬಲೀಯಸಃ।
02038011c ಸ ಚಾನೇನ ಹತಃ ಕಂಸ ಇತ್ಯೇತನ್ನ ಮಹಾದ್ಭುತಂ।।
ಯಾರ ಅನ್ನವನ್ನು ತಿಂದಿದ್ದನೋ ಅದೇ ಬಲಶಾಲಿ ಕಂಸನನ್ನು ಇವನು ಕೊಂದನೆನ್ನುವುದು ಧರ್ಮಜ್ಞ ನಿನಗೆ ಮಹಾದ್ಭುತವೆಂದು ತೋರುವುದಿಲ್ಲವೇ?
02038012a ನ ತೇ ಶ್ರುತಮಿದಂ ಭೀಷ್ಮ ನೂನಂ ಕಥಯತಾಂ ಸತಾಂ।
02038012c ಯದ್ವಕ್ಷ್ಯೇ ತ್ವಾಮಧರ್ಮಜ್ಞ ವಾಕ್ಯಂ ಕುರುಕುಲಾಧಮ।।
ಕುರುಕುಲಾಧಮ! ಸತ್ಯವಂತರು ಹೇಳುವ ಈ ವಿಷಯಗಳನ್ನು ಅಧರ್ಮಜ್ಞ ನೀನು ಕೇಳಿಲ್ಲ ಎನ್ನುವುದು ನಿಶ್ಚಿತ!
02038013a ಸ್ತ್ರೀಷು ಗೋಷು ನ ಶಸ್ತ್ರಾಣಿ ಪಾತಯೇದ್ಬ್ರಾಹ್ಮಣೇಷು ಚ।
02038013c ಯಸ್ಯ ಚಾನ್ನಾನಿ ಭುಂಜೀತ ಯಶ್ಚ ಸ್ಯಾಚ್ಚರಣಾಗತಃ।।
02038014a ಇತಿ ಸಂತೋಽನುಶಾಸಂತಿ ಸಜ್ಜನಾ ಧರ್ಮಿಣಃ ಸದಾ।
02038014c ಭೀಷ್ಮ ಲೋಕೇ ಹಿ ತತ್ಸರ್ವಂ ವಿತಥಂ ತ್ವಯಿ ದೃಶ್ಯತೇ।।
ಸ್ತ್ರೀಯರ, ಗೋವುಗಳ, ಬ್ರಾಹ್ಮಣರ, ಯಾರ ಅನ್ನವನ್ನು ತಿಂದಿದ್ದೀವೋ ಅವರ ಮೇಲೆ ಮತ್ತು ಶರಣಾಗತರಾದವರ ಮೇಲೆ ಶಸ್ತ್ರಗಳನ್ನು ಪ್ರಯೋಗಿಸಬಾರದು ಎಂದು ಸಂತರು, ಧಾರ್ಮಿಕರು ಮತ್ತು ಸಜ್ಜನರು ಸದಾ ಹೇಳಿದ್ದಾರೆ. ಭೀಷ್ಮ! ನೀನು ಲೋಕದಲ್ಲಿನ ಇವೆಲ್ಲವನೂ ತಿರಸ್ಕರಿಸಿರುವಂತೆ ತೋರುತ್ತಿದೆ.
02038015a ಜ್ಞಾನವೃದ್ಧಂ ಚ ವೃದ್ಧಂ ಚ ಭೂಯಾಂಸಂ ಕೇಶವಂ ಮಮ।
02038015c ಅಜಾನತ ಇವಾಖ್ಯಾಸಿ ಸಂಸ್ತುವನ್ಕುರುಸತ್ತಮ।
02038015e ಗೋಘ್ನಃ ಸ್ತ್ರೀಘ್ನಶ್ಚ ಸನ್ಭೀಷ್ಮ ಕಥಂ ಸಂಸ್ತವಮರ್ಹತಿ।।
ಕುರುಸತ್ತಮ! ನನಗೇನೂ ತಿಳಿದಿಲ್ಲ ಎನ್ನುವ ರೀತಿಯಲ್ಲಿ ನೀನು ಕೇಶವನು ಜ್ಞಾನವೃದ್ಧ, ವೃದ್ಧ ಎಂದು ಸ್ತುತಿಸುತ್ತಿದ್ದೀಯಲ್ಲ! ಭೀಷ್ಮ! ಓರ್ವ ಗೋಹಂತಕ ಮತ್ತು ಸ್ತ್ರೀ ಹಂತಕ5ನು ಹೇಗೆ ಸ್ತುತಿಗೆ ಅರ್ಹನಾಗುತ್ತಾನೆ?
02038016a ಅಸೌ ಮತಿಮತಾಂ ಶ್ರೇಷ್ಠೋ ಯ ಏಷ ಜಗತಃ ಪ್ರಭುಃ।
02038016c ಸಂಭಾವಯತಿ ಯದ್ಯೇವಂ ತ್ವದ್ವಾಕ್ಯಾಚ್ಚ ಜನಾರ್ದನಃ।
02038016e ಏವಮೇತತ್ಸರ್ವಮಿತಿ ಸರ್ವಂ ತದ್ವಿತಥಂ ಧ್ರುವಂ।।
ಇವನು ಮತಿವಂತರಲ್ಲೆಲ್ಲಾ ಶ್ರೇಷ್ಠನು, ಇವನೇ ಜಗತ್ಪ್ರಭು ಎಂಬ ನಿನ್ನ ಈ ಮಾತುಗಳನ್ನು ಜನಾರ್ದನನೂ ಇವೆಲ್ಲವೂ ಸತ್ಯವೆಂದು ತಿಳಿದಿದ್ದಾನೆ. ಆದರೆ ಇವೆಲ್ಲವೂ ಸುಳ್ಳು ಎನ್ನುವುದಂತೂ ನಿಶ್ಚಿತ.
02038017a ನ ಗಾಥಾ ಗಾಥಿನಂ ಶಾಸ್ತಿ ಬಹು ಚೇದಪಿ ಗಾಯತಿ।
02038017c ಪ್ರಕೃತಿಂ ಯಾಂತಿ ಭೂತಾನಿ ಭೂಲಿಂಗಶಕುನಿರ್ಯಥಾ।।
ಎಷ್ಟು ಬಾರಿ ಹಾಡಿದರೂ ಹಾಡು ಹಾಡುಗಾರನನ್ನು ಪ್ರಶಂಸಿಸುವುದಿಲ್ಲ. ಭೂಲಿಂಗ ಪಕ್ಷಿಯಂತೆ ಇರುವವೆಲ್ಲವೂ ಪ್ರಕೃತಿಯನ್ನು ಅನುಸರಿಸುತ್ತವೆ.
02038018a ನೂನಂ ಪ್ರಕೃತಿರೇಷಾ ತೇ ಜಘನ್ಯಾ ನಾತ್ರ ಸಂಶಯಃ।
02038018c ಅತಃ ಪಾಪೀಯಸೀ ಚೈಷಾಂ ಪಾಂಡವಾನಾಮಪೀಷ್ಯತೇ।।
02038019a ಯೇಷಾಮರ್ಚ್ಯತಮಃ ಕೃಷ್ಣಸ್ತ್ವಂ ಚ ಯೇಷಾಂ ಪ್ರದರ್ಶಕಃ।
02038019c ಧರ್ಮವಾಕ್ತ್ವಮಧರ್ಮಜ್ಞಃ ಸತಾಂ ಮಾರ್ಗಾದವಪ್ಲುತಃ।।
ನಿನ್ನ ಸ್ವಭಾವವು ಅತ್ಯಂತ ಕೀಳಾದದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಸತ್ಯದ ದಾರಿತಪ್ಪಿದ, ಅಧರ್ಮಜ್ಞನಾಗಿದ್ದೂ ಧರ್ಮದ ಮಾತನಾಡುವ ನಿನ್ನ ಹೇಳಿಕೆಯಂತೆ ಕೃಷ್ಣನಿಗೆ ಅತ್ಯುನ್ನತ ಗೌರವವನ್ನು ನೀಡಬೇಕು ಎಂದು ತಿಳಿಯುವ ಈ ಪಾಂಡವರೂ ಕೂಡ ಪಾಪಿಗಳಿರಬೇಕು.
02038020a ಕೋ ಹಿ ಧರ್ಮಿಣಮಾತ್ಮಾನಂ ಜಾನಂಜ್ಞಾನವತಾಂ ವರಃ।
02038020c ಕುರ್ಯಾದ್ಯಥಾ ತ್ವಯಾ ಭೀಷ್ಮ ಕೃತಂ ಧರ್ಮಮವೇಕ್ಷತಾ।।
ಜ್ಞಾನವಂತರಲ್ಲಿ ಶ್ರೇಷ್ಠ ಭೀಷ್ಮ! ತಾನು ಧರ್ಮಿಯೆಂದು ತಿಳಿದ ಯಾರುತಾನೆ ಧರ್ಮವನ್ನೇ ಕಡೆಗಣಿಸಿ ನಿನ್ನಂತೆ ನಡೆದುಕೊಳ್ಳುತ್ತಾರೆ?
02038021a ಅನ್ಯಕಾಮಾ ಹಿ ಧರ್ಮಜ್ಞ ಕನ್ಯಕಾ ಪ್ರಾಜ್ಞಮಾನಿನಾ।
02038021c ಅಂಬಾ ನಾಮೇತಿ ಭದ್ರಂ ತೇ ಕಥಂ ಸಾಪಹೃತಾ ತ್ವಯಾ।।
ನೀನೊಬ್ಬ ಪ್ರಾಜ್ಞಮಾನಿ, ಧರ್ಮಜ್ಞ ಎಂದು ತಿಳಿದುಕೊಂಡರೆ ಅನ್ಯನನ್ನು ಕಾಮಿಸುತ್ತಿದ್ದ ಅಂಬಾ ಎಂಬ ಹೆಸರಿನವಳನ್ನು ನೀನು ಏಕೆ ಅಪಹರಿಸಿದೆ? ನಿನಗೆ ಮಂಗಳವಾಗಲಿ!
02038022a ಯಾಂ ತ್ವಯಾಪಹೃತಾಂ ಭೀಷ್ಮ ಕನ್ಯಾಂ ನೈಷಿತವಾನ್ನೃಪಃ।
02038022c ಭ್ರಾತಾ ವಿಚಿತ್ರವೀರ್ಯಸ್ತೇ ಸತಾಂ ವೃತ್ತಮನುಷ್ಠಿತಃ।।
02038023a ದಾರಯೋರ್ಯಸ್ಯ ಚಾನ್ಯೇನ ಮಿಷತಃ ಪ್ರಾಜ್ಞಮಾನಿನಃ।
02038023c ತವ ಜಾತಾನ್ಯಪತ್ಯಾನಿ ಸಜ್ಜನಾಚರಿತೇ ಪಥಿ।।
ಭೀಷ್ಮ! ನಿನ್ನಿಂದ ಅಪಹೃತಳಾದ ಕನ್ಯೆಯನ್ನು ನಿನ್ನ ಭ್ರಾತ ವಿಚಿತ್ರವೀರ್ಯನು ಸ್ವೀಕರಿಸದೇ ಸತ್ಯವಂತರಹಾಗೆ ನಡೆದುಕೊಂಡನು. ಅವನ ಪತ್ನಿಯರಲ್ಲಿ ಇನೊಬ್ಬ ಪ್ರಾಜ್ಞಮಾನಿಯು ನಿನಗಾಗಿ ಸಂತಾನವನ್ನು ಹುಟ್ಟಿಸಿ ಸಜ್ಜನರು ಆಚರಿಸುವ ದಾರಿಯಲ್ಲಿ ನಡೆದುಕೊಳ್ಳುವಹಾಗೆ ಮಾಡಬೇಕಾಯಿತು.
02038024a ನ ಹಿ ಧರ್ಮೋಽಸ್ತಿ ತೇ ಭೀಷ್ಮ ಬ್ರಹ್ಮಚರ್ಯಮಿದಂ ವೃಥಾ।
02038024c ಯದ್ಧಾರಯಸಿ ಮೋಹಾದ್ವಾ ಕ್ಲೀಬತ್ವಾದ್ವಾ ನ ಸಂಶಯಃ।।
ಮೋಹದಿಂದ ಅಥವಾ ಕ್ಲೀಬತ್ವದಿಂದ ನೀನು ವೃಥಾ ಆಚರಿಸುತ್ತಿರುವ ಈ ಬ್ರಹ್ಮಚರ್ಯವು ನಿನ್ನ ಧರ್ಮವಲ್ಲ ಭೀಷ್ಮ!
02038025a ನ ತ್ವಹಂ ತವ ಧರ್ಮಜ್ಞ ಪಶ್ಯಾಮ್ಯುಪಚಯಂ ಕ್ವ ಚಿತ್।
02038025c ನ ಹಿ ತೇ ಸೇವಿತಾ ವೃದ್ಧಾ ಯ ಏವಂ ಧರ್ಮಮಬ್ರುವನ್।।
02038026a ಇಷ್ಟಂ ದತ್ತಮಧೀತಂ ಚ ಯಜ್ಞಾಶ್ಚ ಬಹುದಕ್ಷಿಣಾಃ।
02038026c ಸರ್ವಮೇತದಪತ್ಯಸ್ಯ ಕಲಾಂ ನಾರ್ಹತಿ ಷೋಡಶೀಂ।।
ನೀನು ಏಳ್ಗೆಯನ್ನು ಕಾಣುತ್ತೀಯೆ ಎಂದು ನನಗೆ ಅನ್ನಿಸುವುದಿಲ್ಲ. ನೀನು ಎಂದೂ ವೃದ್ಧರ ಸೇವೆಯನ್ನು ಮಾಡಲಿಲ್ಲ. ಧರ್ಮದಲ್ಲಿ ಹೇಳಿದ ಪ್ರಕಾರ ದಾನವನ್ನು ನೀಡುವುದು, ಬಹುದಕ್ಷಿಣೆಯುಕ್ತ ಯಜ್ಞ ಇವೆಲ್ಲವೂ ಸಂತಾನದ ಮುಂದೆ ಹದಿನಾರರ ಒಂದಂಶವೂ ಅಲ್ಲ.
02038027a ವ್ರತೋಪವಾಸೈರ್ಬಹುಭಿಃ ಕೃತಂ ಭವತಿ ಭೀಷ್ಮ ಯತ್।
02038027c ಸರ್ವಂ ತದನಪತ್ಯಸ್ಯ ಮೋಘಂ ಭವತಿ ನಿಶ್ಚಯಾತ್।।
ಭೀಷ್ಮ! ಬಹಳಷ್ಟು ವ್ರತ ಉಪವಾಸಗಳನ್ನು ಮಾಡಿದ್ದರೂ ಎಲ್ಲವೂ ಸಂತಾನವಿಲ್ಲವೆಂದರೆ ವ್ಯರ್ಥವಾಗುತ್ತವೆ ಎಂದು ನಿಶ್ಚಯವಾಗಿದೆ.
02038028a ಸೋಽನಪತ್ಯಶ್ಚ ವೃದ್ಧಶ್ಚ ಮಿಥ್ಯಾಧರ್ಮಾನುಶಾಸನಾತ್।
02038028c ಹಂಸವತ್ತ್ವಮಪೀದಾನೀಂ ಜ್ಞಾತಿಭ್ಯಃ ಪ್ರಾಪ್ನುಯಾ ವಧಂ।।
ಸುಳ್ಳುಧರ್ಮವನ್ನು ಅನುಸರಿಸುವ ನೀನು ಮಕ್ಕಳಿಲ್ಲದೇ ವೃದ್ಧನಾಗುತ್ತಿದ್ದೀಯೆ. ಹಂಸದಂತೆ ಈಗ ನಿನ್ನ ಬಂಧುಗಳ ಕೈಯಲ್ಲಿಯೇ ಸಾವನ್ನು ಹೊಂದು.
02038029a ಏವಂ ಹಿ ಕಥಯಂತ್ಯನ್ಯೇ ನರಾ ಜ್ಞಾನವಿದಃ ಪುರಾ।
02038029c ಭೀಷ್ಮ ಯತ್ತದಹಂ ಸಮ್ಯಗ್ವಕ್ಷ್ಯಾಮಿ ತವ ಶೃಣ್ವತಃ।।
ಭೀಷ್ಮ! ಜ್ಞಾತಿವಿದ ಜನರು ಹಿಂದೆ ಹೇಳುತ್ತಿದ್ದ ಕಥೆಯನ್ನು ಇದ್ದಹಾಗೆಯೇ ನಿನಗೆ ಹೇಳುತ್ತೇನೆ. ಅದನ್ನು ಕೇಳು.
02038030a ವೃದ್ಧಃ ಕಿಲ ಸಮುದ್ರಾಂತೇ ಕಶ್ಚಿದ್ಧಂಸೋಽಭವತ್ಪುರಾ।
02038030c ಧರ್ಮವಾಗನ್ಯಥಾವೃತ್ತಃ ಪಕ್ಷಿಣಃ ಸೋಽನುಶಾಸ್ತಿ ಹ।।
02038031a ಧರ್ಮಂ ಚರತ ಮಾಧರ್ಮಮಿತಿ ತಸ್ಯ ವಚಃ ಕಿಲ।
02038031c ಪಕ್ಷಿಣಃ ಶುಶ್ರುವುರ್ಭೀಷ್ಮ ಸತತಂ ಧರ್ಮವಾದಿನಃ।।
ಭೀಷ್ಮ! ಹಿಂದೆ ಸಮುದ್ರ ತೀರದಲ್ಲಿ ಧರ್ಮವನ್ನು ಮಾತನಾಡುವ ಆದರೆ ಆಚರಿಸದಿರುವ ವೃದ್ಧ ಹಂಸವೊಂದು ಇರುತ್ತಿತ್ತು. ಅದು ಇತರ ಪಕ್ಷಿಗಳಿಗೆ ಧರ್ಮದಲ್ಲಿ ನಡೆದುಕೋ, ಅಧರ್ಮದಲ್ಲಿ ಬೇಡ ಎಂದು ಧರ್ಮದ ಉಪದೇಶವನ್ನು ನೀಡುತ್ತಿತ್ತು. ಆ ಧರ್ಮವಾದಿಯಿಂದ ಸತತವೂ ಇದನ್ನೇ ಪಕ್ಷಿಗಳು ಕೇಳುತ್ತಿದ್ದವು.
02038032a ಅಥಾಸ್ಯ ಭಕ್ಷ್ಯಮಾಜಹ್ರುಃ ಸಮುದ್ರಜಲಚಾರಿಣಃ।
02038032c ಅಂಡಜಾ ಭೀಷ್ಮ ತಸ್ಯಾನ್ಯೇ ಧರ್ಮಾರ್ಥಮಿತಿ ಶುಶ್ರುಮ।।
ಭೀಷ್ಮ! ಇತರ ಪಕ್ಷಿಗಳು ಅವನಿಗೆ ಆಹಾರ, ಸಮುದ್ರದ ನೀರಿನಲ್ಲಿ ವಾಸಿಸುತ್ತಿದ್ದ ಮೀನುಗಳು ಮೊದಲಾದವುಗಳನ್ನು ಧರ್ಮಾರ್ಥ ತಂದುಕೊಡುತ್ತಿದ್ದವು.
02038033a ತಸ್ಯ ಚೈವ ಸಮಭ್ಯಾಶೇ ನಿಕ್ಷಿಪ್ಯಾಂಡಾನಿ ಸರ್ವಶಃ।
02038033c ಸಮುದ್ರಾಂಭಸ್ಯಮೋದಂತ ಚರಂತೋ ಭೀಷ್ಮ ಪಕ್ಷಿಣಃ।।
ಭೀಷ್ಮ! ಮತ್ತು ಆ ಪಕ್ಷಿಗಳು ಎಲ್ಲವೂ ತಮ್ಮ ಮೊಟ್ಟೆಗಳನ್ನು ಇವನಲ್ಲಿ ಇಟ್ಟು ಸಮುದ್ರದ ನೀರಿನಲ್ಲಿ ವಿನೋದಿಸುತ್ತಿದ್ದವು.
02038034a ತೇಷಾಮಂಡಾನಿ ಸರ್ವೇಷಾಂ ಭಕ್ಷಯಾಮಾಸ ಪಾಪಕೃತ್।
02038034c ಸ ಹಂಸಃ ಸಂಪ್ರಮತ್ತಾನಾಮಪ್ರಮತ್ತಃ ಸ್ವಕರ್ಮಣಿ।।
ಇತರರು ಸಂಪ್ರಮತ್ತರಾಗಿದ್ದಾಗ ತನ್ನ ಕೆಲಸವನ್ನು ನೋಡಿಕೊಳ್ಳುವ ಆ ಪಾಪಕರ್ಮಿ ಹಂಸವು ಅವರ ಎಲ್ಲ ಮೊಟ್ಟೆಗಳನ್ನೂ ತಿಂದು ಹಾಕಿತು.
02038035a ತತಃ ಪ್ರಕ್ಷೀಯಮಾಣೇಷು ತೇಷ್ವಂಡೇಷ್ವಂಡಜೋಽಪರಃ।
02038035c ಅಶಂಕತ ಮಹಾಪ್ರಾಜ್ಞಸ್ತಂ ಕದಾ ಚಿದ್ದದರ್ಶ ಹ।।
ಮೊಟ್ಟೆಗಳ ಸಂಖ್ಯೆಯು ಬಹಳಷ್ಟು ಕಡಿಮೆಯಾಗುತ್ತಿರುವುದನ್ನು ನೋಡಿದ ಕೆಲವು ಬುದ್ಧಿವಂತ ಪಕ್ಷಿಗಳು ಅವನನ್ನು ಶಂಕಿಸಿ ಅವನ ಮೇಲೆ ಕಣ್ಣಿಟ್ಟವು.
02038036a ತತಃ ಸ ಕಥಯಾಮಾಸ ದೃಷ್ಟ್ವಾ ಹಂಸಸ್ಯ ಕಿಲ್ಬಿಷಂ।
02038036c ತೇಷಾಂ ಪರಮದುಃಖಾರ್ತಃ ಸ ಪಕ್ಷೀ ಸರ್ವಪಕ್ಷಿಣಾಂ।।
ಆ ಹಂಸದ ಕೆಟ್ಟಕಾರ್ಯವನ್ನು ನೋಡಿದ ಅವುಗಳು ಪರಮದುಃಖಾರ್ತರಾಗಿ ಇತರ ಸರ್ವ ಪಕ್ಷಿಗಳಿಗೂ ತಿಳಿಸಿದವು.
02038037a ತತಃ ಪ್ರತ್ಯಕ್ಷತೋ ದೃಷ್ಟ್ವಾ ಪಕ್ಷಿಣಸ್ತೇ ಸಮಾಗತಾಃ।
02038037c ನಿಜಘ್ನುಸ್ತಂ ತದಾ ಹಂಸಂ ಮಿಥ್ಯಾವೃತ್ತಂ ಕುರೂದ್ವಹ।।
ಕುರೂದ್ವಹ! ಆ ಎಲ್ಲ ಪಕ್ಷಿಗಳೂ ಒಂದಾಗಿ ಪ್ರತ್ಯಕ್ಷತಃ ಅವನನ್ನು ನೋಡಿ, ಸುಳ್ಳುನಡೆದುಕೊಳ್ಳುತ್ತಿದ್ದ ಆ ಹಂಸವನ್ನು ಕೊಂದುಹಾಕಿದವು.
02038038a ತೇ ತ್ವಾಂ ಹಂಸಸಧರ್ಮಾಣಮಪೀಮೇ ವಸುಧಾಧಿಪಾಃ।
02038038c ನಿಹನ್ಯುರ್ಭೀಷ್ಮ ಸಂಕ್ರುದ್ಧಾಃ ಪಕ್ಷಿಣಸ್ತಮಿವಾಂಡಜಂ।।
ಭೀಷ್ಮ! ಪಕ್ಷಿಗಳು ಆ ಹಂಸವನ್ನು ಕೊಂದಹಾಗೆ ಈ ವಸುಧಾಧಿಪರೂ ಕೂಡ ಸಂಕೃದ್ಧರಾಗಿ ಹಂಸಧರ್ಮದಂತೆ ನಿನ್ನನ್ನು ಕೊಲ್ಲುತ್ತಾರೆ.
02038039a ಗಾಥಾಮಪ್ಯತ್ರ ಗಾಯಂತಿ ಯೇ ಪುರಾಣವಿದೋ ಜನಾಃ।
02038039c ಭೀಷ್ಮ ಯಾಂ ತಾಂ ಚ ತೇ ಸಮ್ಯಕ್ಕಥಯಿಷ್ಯಾಮಿ ಭಾರತ।।
ಭೀಷ್ಮ! ಭಾರತ! ಪುರಾಣವನ್ನು ತಿಳಿದ ಜನರು ಇದರ ಮೇಲೆ ಒಂದು ಹಾಡನ್ನು ಹಾಡುತ್ತಾರೆ. ಅದನ್ನು ನಿನಗೆ ಇದ್ದಹಾಗೆ ಹೇಳುತ್ತೇನೆ.
02038040a ಅಂತರಾತ್ಮನಿ ವಿನಿಹಿತೇ ರೌಷಿ ಪತ್ರರಥ ವಿತಥಂ।
02038040c ಅಂಡಭಕ್ಷಣಮಶುಚಿ ತೇ ಕರ್ಮ ವಾಚಮತಿಶಯತೇ।।
“ನೀನು ಸುಳ್ಳನ್ನು ಹೇಳುತ್ತಿರುವಾಗ ನಿನ್ನ ಅಂತರಾತ್ಮವು ಇನ್ನೊಂದೆಡೆಗೆ ತಿರುಗಿರುತ್ತದೆ. ಮೊಟ್ಟೆಯನ್ನು ತಿನ್ನುವ ಈ ನಿನ್ನ ಅಪಕೃತ್ಯವು ನೀನು ಮಾತನಾಡುವುದರಕ್ಕಿಂತ ಬೇರೆಯಾಗಿದೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಶಿಶುಪಾಲವಾಕ್ಯೇ ಅಷ್ಟಾತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಶಿಶುಪಾಲವಾಕ್ಯ ಎನ್ನುವ ಮೂವತ್ತೆಂಟನೆಯ ಅಧ್ಯಾಯವು.
-
ಶಿಶುಪಾಲನ ಈ ಮಾತುಗಳಿಂದ ತಿಳಿಯುವುದೇನೆಂದರೆ ಭೀಷ್ಮನು ತುಂಬಿದ ಸಭೆಯಲ್ಲಿ ಶ್ರೀಕೃಷ್ಣನು ತನ್ನ ದೇವತ್ವವನ್ನು ಸೂಚಿಸುವ ಹಲವಾರು ಲೀಲೆಗಳನ್ನು ಉದಾಹರಿಸಿದ್ದ. ಈ ಶ್ಲೋಕಗಳು ನಮಗೆ ದಕ್ಷಿಣ ಭಾರತೀಯ ಕುಂಭಕೋಣ ಸಂಪುಟದಲ್ಲಿ ಕಂಡುಬರುತ್ತವೆ. ಪುಣೆಯ ಈ ಸಂಪುಟದಲ್ಲಿ ಈ ಶ್ಲೋಕಗಳನ್ನು ಸೇರಿಸಿಲ್ಲ. ಈ ಶ್ಲೋಕಗಳನ್ನು ಅರ್ಘ್ಯಾಭಿಹರಣ ಪರ್ವದ ಪರಿಶಿಷ್ಠದಲ್ಲಿ ನೀಡಲಾಗಿದೆ. ↩︎
-
ಕೃಷ್ಣನನ್ನು ಕೊಲ್ಲಲು ಶಕುನಿ (ಬಾಲಕ್ಕಿ) ಪಕ್ಷಿರೂಪದಲ್ಲಿ ಬಂದ ಕಂಸನ ಸಹಾಯಕ ರಾಕ್ಷಸ ↩︎
-
ತನ್ನನು ಕೊಲ್ಲಲು ಕುದುರೆ ಮತ್ತು ಎತ್ತುಗಳ ರೂಪದಲ್ಲಿ ಬಂದಿದ್ದ ಕಂಸನ ಸಹಾಯಕ ರಾಕ್ಷಸರು ↩︎
-
ಮರದ ಬಂಡಿಯ ರೂಪದಲ್ಲಿ ಬಂದು ಕೃಷ್ಣನನ್ನು ಕೊಲ್ಲಲು ಪ್ರಯತ್ನಿಸಿದ ಕಂಸನ ಇನ್ನೊಬ್ಬ ಸಹಾಯಕ ರಾಕ್ಷಸ ↩︎
-
ಪೂತನಿಯನ್ನು ಕೊಂದಿದುರಿಂದ ಕೃಷ್ಣನು ಸ್ತ್ರೀಹಂತಕನಾದರೆ ಹೋರಿಯೊಂದನ್ನು ಕೊಂದಿದ್ದರಿಂದ ಅವನು ಗೋಪಾತಕನಾಗುತ್ತಾನೆ. ↩︎